ಕಲೈಡೊಸ್ಕೋಪ್
ಕಲೈಡೊಸ್ಕೋಪ್ವಿಧವಿಧವಾದ ನಯನಮನೋಹರ ರೂಪಾಕೃತಿಗಳನ್ನು ನೀಡುವ ಒಂದು ದೃಗುಪಕರಣ, ವಿವಿಧ ಚಿತ್ರದರ್ಶಕ. ಬಹುರೂಪದರ್ಶಕವೆಂದೂ ಕರೆಯುವುದುಂಟು. ಸರ್ ಡೇವಿಡ್ ಬ್ರ್ಯೂಸ್ಟರ್ ಎಂಬಾತ ಇದನ್ನು ರೂಪಿಸಿ ಅದರ ಮೇಲಿನ ಏಕಸ್ವವನ್ನು (೧೮೧೭) ಪಡೆದ. ಉಪಕರಣದ ತತ್ತ್ವವಿಷ್ಟು: ಇದರ ತಳಭಾಗದ ಅರೆಯಲ್ಲಿಟ್ಟಿರುವ ಬಣ್ಣಬಣ್ಣದ ಗಾಜಿನ ಚೂರುಗಳು ಒಳಪಕ್ಕದಲ್ಲಿ ಅಳವಡಿಸಿರುವ ಕನ್ನಡಿಗಳ ಮೂಲಕ ಪ್ರತಿಫಲನ ಹೊಂದಿ ಸಮಾಂಗಾಕೃತಿಗಳು (ಸಿಮೆಟ್ರಿಕಲ್ ಫಿಗರ್ಸ್) ಕಾಣುತ್ತವೆ. ಕೊಳವೆಯಾಕಾರದಲ್ಲಿರುವ ಈ ಉಪಕರಣವನ್ನು ಅದರ ಲಂಬಾಕ್ಷದ ಸುತ್ತ ತಿರುಗಿಸಿದಂತೆಲ್ಲ ಬಗೆಬಗೆಯ ಆಕೃತಿಗಳು ಕಾಣಬರುತ್ತವೆ. ಮೊದಮೊದಲು ಒಂದು ಜೊತೆ ಸಮತಲ ಕನ್ನಡಿಗಳನ್ನು ಅವು ಒಂದಕ್ಕೊಂದು ನಿರ್ದಿಷ್ಟ ಕೋನದಲ್ಲಿರುವಂತೆ (೩೬೦ ಡಿಗ್ರಿಯ ಅಪವರ್ತನಗಳು) ಓರೆಯಾಗಿಟ್ಟು, ಬಣ್ಣಬಣ್ಣದ ಗಾಜಿನ ಚೂರುಗಳನ್ನು ಉಪಯೋಗಿಸಿ ವಿಚಿತ್ರಾಕೃತಿಗಳನ್ನು ತರಿಸುವುದಿತ್ತು. ಕಿರ್ಚೆರ್, ಹ್ಯಾರಿಸ್, ವುಡ್, ಬ್ರ್ಯಾಡ್ಲಿ ಮತ್ತಿತರರು ರೂಪಿಸಿದ ಬಹುದರ್ಪಣ ಪ್ರತಿಫಲನದ ತತ್ತ್ವವೇ ಈ ಕಲೈಡೊಸ್ಕೋಪಿನ ತತ್ತ್ವವೆಂದು ಬಗೆದು ಈ ಉಪಕರಣವನ್ನು ಅಲ್ಲಗೆಳೆಯಲಾಯಿತಾದರೂ ಇದರಲ್ಲಿ ಉಂಟಾಗುವ ಬಲು ಸುಂದರವಾದ ಸಮಾಂಗಾಕೃತಿಗಳಿಗೆ ಕಾರಣವೇನು ಎಂಬುದರ ಬಗ್ಗೆ ಯಾರೂ ಒಂದು ನಿರ್ದಿಷ್ಟ ಕಾರಣ ಕೊಡಲಿಲ್ಲ. ಪ್ರತಿಬಿಂಬಗಳು ಮತ್ತಷ್ಟೂ ಸುಂದರವಾಗಿ ಕಾಣಬರಲು ಮೂರು ಸಮತಲ ಕನ್ನಡಿಗಳನ್ನು ಬಳಸಿ ಈ ಉಪಕರಣವನ್ನು ತಯಾರಿಸುವುದು ರೂಢಿ. ಬಹು ಪಾಶ್ವಿರ್ೕಯ ಪ್ರತಿಫಲನದಿಂದಾಗಿ ವಿವಿಧ ವಿಚಿತ್ರ ಹಾಗೂ ಸುಂದರ ಆಕೃತಿಗಳು ಮೂಡುತ್ತವೆ.
ಉಪಕರಣದ ವಿವರಗಳಿವು : ಒಂದೇ ಗಾತ್ರವಿಳ್ಳ, ಆಯಾಕಾರದ ಮೂರು ಸಮತಲ ಕನ್ನಡಿಗಳನ್ನು ಒಂದಕ್ಕೊಂದು ೬೦ ಡಿಗ್ರಿ ಕೋನದಷ್ಟು ಓರೆಯಾಗಿರುವಂತೆ (ತ್ರಿಕೋನಾಕಾರ) ಅಳವಡಿಸಿರುತ್ತಾರೆ. ಒಂದೊಂದು ಕನ್ನಡಿಯ ಎರಡೂ ಅಂಚುಗಳು ಮತ್ತೊಂದರ ಆಯಾ ಕಡೆಯ ಅಂಚುಗಳಿಗೆ ಹೊಂದಿಕೊಂಡು ಸೇರಿಕೊಂಡಿರುತ್ತವೆ. ಈ ರಚನೆಯ ಒಂದುಪಕ್ಕದಲ್ಲಿ ಒಂದು ದುಂಡನೆಯ ಮತ್ತು ಮಧ್ಯೆ ರಂಧ್ರವಿರುವ ಪಾರಕ ಗಾಜಿನ ಬಿಲ್ಲೆ ಇರುತ್ತದೆ. ಮತ್ತೊಂದು ಪಕ್ಕದಲ್ಲಿ ಎರಡು ದುಂಡನೆಯ ಗಾಜಿನ ಬಿಲ್ಲೆಗಳಿದ್ದು-ಒಂದು ಪಾರಕ, ಮತ್ತೊಂದು ಅಪಾರಕ-ಇವುಗಳ ನಡುವೆ ಇರುವ ಜಾಗದಲ್ಲಿ ಚಿಕ್ಕಚಿಕ್ಕ ಗಾಜಿನ ಚೂರುಗಳಿರುತ್ತವೆ. ಇವಿಷ್ಟನ್ನೂ ಒಂದು ದುಂಡನೆಯ ರಟ್ಟಿನ ಅಥವಾ ಲೋಹದ ಕೊಳವೆಯಲ್ಲಿ ಅಳವಡಿಸಲಾಗುವುದು. ಕೆಲವು ತಯಾರಕರು ಲೋಹದಿಂದ ಮಾಡಿದ ಮೂರು ಕನ್ನಡಿಗಳನ್ನು ೬೦ಡಿಗ್ರಿ ಕೋನದಲ್ಲಿಟ್ಟು ಉಪಕರಣವನ್ನು ರಚಿಸುತ್ತಾರೆ. ಕೇವಲ ಪಾರದರ್ಶಕ ಗಾಜಿನ ಬಿಲ್ಲೆಯಿರುವ ಕಡೆಯಿಂದ ಕಣ್ಣಿನಿಂದ ನೋಡುವುದು ಸಾಧ್ಯ. ಕೊಳವೆಯನ್ನು ಅದರ ಲಂಬಾಕ್ಷದ ಸುತ್ತ ತಿರುಗಿಸಿದರೆ ಸಮಾಂಗಾಕೃತಿಗಳ ಸುಂದರ ನೋಟ ಕಾಣಸಿಗುತ್ತದೆ. ಇವು ಮೂಡಿಬರುವುದು ಹೀಗೆ: ಕಣ್ಣಿನ ಎದುರು ಇರುವ ಕನ್ನಡಿಗಳ ಅಂಚುಗಳಿಂದಾಗಿ ಗೋಚರವಲಯ ಸೀಮಿತಗೊಳ್ಳುತ್ತದೆ. ಕೊಳವೆಯ ಒಂದು ತುದಿಯಿಂದ ಸ್ವಲ್ಪ ದೂರದಲ್ಲಿ ವಸ್ತುವಿದ್ದು ಕನ್ನಡಿಯ ಸಮತಲದ ನೇರಕ್ಕೆ ಸರಿಯಾಗಿ ಕಣ್ಣು ಇರದಿದ್ದ ಪಕ್ಷಕ್ಕೆ ವಸ್ತು ಮತ್ತು ಅದರ ಪ್ರತಿಬಿಂಬ ಕನ್ನಡಿಯ ಅಂಚುಗಳಿಂದಾದ ಬೇರೆ ಬೇರೆ ಗೆರೆಗಳಿಂದ ಮುಚ್ಚಿದಂತೆ ಕಾಣುತ್ತದೆ. ಇದರಿಂದಾಗಿ ಪ್ರತಿಬಿಂಬ ಪೂರ್ಣ ಸಮಾಂಗವಾಗಿರದು. ಕನ್ನಡಿಯ ಹೊರ ಅಂಚಿನ ಬಳಿ ಒಂದು ರೇಖಾಚಿತ್ರವನ್ನು ಅಥವಾ ಕನ್ನಡಿಗಳು ಕೂಡುವ ಕೋನಸ್ಥಾನದಲ್ಲಿ ಒಂದು ಘನಾಕೃತಿಯನ್ನು ಇಟ್ಟು ಮತ್ತೊಂದು ತುದಿಯಿಂದ ಯಾವ ನೇರದಲ್ಲಿ ನೋಡಿದರೂ ಸಮಾಂಗ ನಮೂನೆ ಕಾಣುತ್ತದೆ. ಒಂದು ವೇಳೆ ಕನ್ನಡಿಗಳು ಛೇದಿಸುವ ರೇಖೆಯ ನೇರದಲ್ಲಿ ದೃಷ್ಟಿ ಇದ್ದು, ವಸ್ತು ಕನ್ನಡಿಗಳ ಅಂಚಿನ ಹೊರಗಿದ್ದರೂ ಸಮಾಂಗ ನಮೂನೆ ದೊರೆಯುತ್ತದೆ. ಸಾಮಾನ್ಯವಾಗಿ ಕನ್ನಡಿಗಳು ಅಳವಡಿಕೆಯಾಗಿರುವ ತ್ರಿಕೋನಾಕಾರದ ರಚನೆಯ ಒಂದು ತುದಿಯ ಕೇಂದ್ರ ಭಾಗದಲ್ಲಿ ಕಣ್ಣು ಇರುವಂತೆ ಮತ್ತು ಮತ್ತೊಂದು ತುದಿಗೆ ಹತ್ತಿರವಿರುವಂತೆ ವಸ್ತುಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಕಾಣಬರುವ ನಮೂನೆಗಳು ನಿರ್ದಿಷ್ಟವಾಗಿರದಿದ್ದರೂ ನೋಡುವವನಿಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಸಮಾಂಗವಾಗಿರುತ್ತವೆ. ಬ್ರ್ಯೂಸ್ಟರ್ ತನ್ನ ಕಲೈಡೊಸ್ಕೋಪಿನಲ್ಲಿ ಕಡಿಮೆ ಸಂಗಮದೂರದ ಉಬ್ಬು ಮಸೂರವೊಂದನ್ನು ಜಾರುಮಾದರಿಯ ಹೊರಕೊಳವೆಗೆ ಅಳವಡಿಸಿ ವಸ್ತುವಿನ ಪ್ರತಿಬಿಂಬ ಕನ್ನಡಿಯ ತಳದ ಮೇಲೆ ಬೀಳುವಂತೆ ವ್ಯವಸ್ಥೆ ಮಾಡಿದ್ದ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Brewster Kaleidoscope Society – international organization for kaleidoscope enthusiasts
- Kaleidoscope Mirror Designs Archived 2010-04-20 ವೇಬ್ಯಾಕ್ ಮೆಷಿನ್ ನಲ್ಲಿ.
- Kaleidoscope artists and classes
- Kaleidoscope Resource (non-profit) Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- Kaleidoscope Builders' Knowledge Base Archived 2011-06-29 at archive.ph Error: unknown archive URL
- Shockwave Flash Kaleidoscope (move mouse around it)
- [೧] - most recent issue of The New Kaleidoscope Review.