ಕವಿತಾ ಕೃಷ್ಣಮೂರ್ತಿ
ಕವಿತಾ ಕೃಷ್ಣಮೂರ್ತಿ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | ಶಾರದಾ |
ಅಡ್ಡಹೆಸರು | ಕವಿತಾ ಕೃಷ್ಣಮೂರ್ತಿ ಕವಿತಾ ಸುಬ್ರಮಣ್ಯಮ್ |
ಜನನ | [೧] | ಜನವರಿ ೨೫, ೧೯೫೮
ಮೂಲಸ್ಥಳ | ದೆಹಲಿ, ಭಾರತ[೨] |
ಸಂಗೀತ ಶೈಲಿ | ಹಿನ್ನೆಲೆ ಗಾಯನ, ಫ್ಯೂಶನ್, ಪಾಪ್ |
ವೃತ್ತಿ | ಹಿನ್ನೆಲೆ ಗಾಯಕಿ |
ಸಕ್ರಿಯ ವರ್ಷಗಳು | 1971- present |
ಕವಿತಾ ಕೃಷ್ಣಮೂರ್ತಿ ದೇಶ ಕಂಡ ಪ್ರತಿಭಾವಂತ ಗಾಯಕಿಯರಲ್ಲಿ ಅಗ್ರರು. ಹಿಂದಿ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಆಂಗ್ಲ, ಮಲಯಾಳಂ, ಒಡಿಯಾ, ಮರಾಠಿ, ನೇಪಾಳಿ, ಅಸ್ಸಾಮಿ, ಗುಜರಾತಿ, ಬಂಗಾಳಿ, ಉರ್ದು, ಕೊಂಕಣಿ ಮುಂತಾದ ಭಾರತೀಯ ಭಾಷೆಗಳಲ್ಲಿ ಅವರು ಸುಮಾರು ೨೫೦೦೦ ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ. ಸಿನಿಮಾ ಹಾಡುಗಳೇ ಅಲ್ಲದೇ ಭಕ್ತಿಗೀತೆ, ಭಾವಗೀತೆ, ಗಝಲ್, ರವೀಂದ್ರ ಸಂಗೀತ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಶೈಲಿಯಲ್ಲಿ ಕವಿತಾ ಪರಿಣತಿ ಹೊಂದಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಕವಿತಾ ಅವರ ಹುಟ್ಟು ಹೆಸರು ಶಾರದಾ. ಹುಟ್ಟಿದ್ದು ೧೯೫೮ರ ಜನವರಿ ೨೫, ದೆಹಲಿಯಲ್ಲಿ. ತಂದೆ ಟಿ. ಕೆ. ಕೃಷ್ಣಮೂರ್ತಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರು. ತಮಿಳು ಕುಟುಂಬದಲ್ಲಿ ಹುಟ್ಟಿದ್ದರೂ, ಕವಿತಾ ಬೆಳೆದದ್ದು ಬಂಗಾಳಿ ಕುಟುಂಬದ ಪರಿಸರದಲ್ಲಿ. ಕವಿತಾ ಅವರ ಬಂಗಾಳಿ ಚಿಕ್ಕಮ್ಮ ಪ್ರೊತಿಮಾ ಭಟ್ಟಾಚಾರ್ಯ ಕವಿತಾರನ್ನು ರವೀಂದ್ರ ಸಂಗೀತಕ್ಕೆ ಸೇರಿಸಿದರು. ಅಲ್ಲಿ, ಸುರ್ಮಾ ಬಸು ಅವರ ಬಳಿ ಕವಿತಾ ಸಂಗೀತ ಕಲಿತರು. ಮುಂದುವರೆದು ಬಲರಾಮ್ ಪುರಿ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿತರು. ದಕ್ಷಿಣ ಭಾರತೀಯರಾದ್ದರಿಂದ ಕರ್ನಾಟಕ ಸಂಗೀತದ ಅರಿವೂ ಇದ್ದಿತು. ಈ ಎಲ್ಲ ಕಲಿಕೆಗಳೂ ಮುಂದೆ ಕವಿತಾ ಅವರನ್ನು 'ಶಾಸ್ತ್ರೀಯ ಜ್ಞಾನವುಳ್ಳ ಗಾಯಕಿ' ಎಂದು ಹೆಸರು ಪಡೆಯುವಂತೆ ಮಾಡಿದವು.
ವೃತ್ತಿ ಜೀವನ
[ಬದಲಾಯಿಸಿ]ಶಾಲಾ ದಿನಗಳಲ್ಲೇ ಹಾಡುಗಾರಿಕೆಗೆ ಚಿನ್ನದ ಪದಕ ಗೆದ್ದಿದ್ದ ಕವಿತಾ ತಮ್ಮ ಚಿಕ್ಕಮ್ಮನ ಸಲಹೆಯಂತೆ ಕಾಲೇಜು ಶಿಕ್ಷಣಕ್ಕೆಂದು ಮುಂಬೈನ ಸಂತ ಕ್ಷೇವಿಯರ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದ ಕವಿತಾ ಅವರನ್ನು ಹೇಮಂತ್ ಕುಮಾರ್ ಅವರ ಮಗಳು ರಾನು ಮುಖರ್ಜಿ ಗುರುತಿಸಿ ತಮ್ಮ ತಂದೆಯ ಬಳಿ ಕರೆದೊಯ್ದರು. ಕವಿತಾ ಅವರ ಸಂಗೀತ ಕೇಳಿ ಹೇಮಂತ್ ಕುಮಾರರು ತಮ್ಮ ಗುಂಪಿನ ಗಾಯಕಿಯನ್ನಾಗಿ ಸೇರಿಸಿಕೊಂಡರು. ಹೇಮಂತ್ ಕುಮಾರರ ಜೊತೆ ವೇದಿಕೆಗಳಲ್ಲಿ ಹಾಡುತಿದ್ದ ಕವಿತಾ, ಒಮ್ಮೆ ಮನ್ನಾ ಡೆ ಅವರ ಗಮನ ಸೆಳೆದು ಅವರು ಜಾಹೀರಾತುಗಳಲ್ಲಿ ಹಾಡುವ ಅವಕಾಶ ಕೊಡಿಸಿದರು. ಆ ವೇಳೆಗಾಗಲೇ ಶಾರದಾ ಹೆಸರಿನ ಖ್ಯಾತ ಗಾಯಕಿ ಇದ್ದುದರಿಂದ ಕವಿತಾ ಎಂದು ಹೊಸ ಹೆಸರು ಇಡಲಾಯಿತು. ಜಂಡುಬಾಮ್, ಉಜಾಲ, ವಾಷಿಂಗ್ ಪೌಡರ್ ನಿರ್ಮ ಮುಂತಾದ ಜಾಹಿರಾತು ಹಾಡುಗಳು ದೇಶಾದ್ಯಂತ ಜನಪ್ರಿಯವಾಗುತ್ತಿದ್ದ ಹಾಗೇ ಜಯಾ ಚಕ್ರವರ್ತಿ ಅವರ ಮೂಲಕ ಲಕ್ಷ್ಮಿಕಾಂತ್-ಪ್ಯಾರೇಲಾಲ್ ಅವರ ಅಂಗಳವನ್ನು ಕವಿತಾ ಸೇರಿದರು.
ಹಿನ್ನೆಲೆ ಗಾಯಕಿಯಾಗಿ: ಕವಿತಾ ಪೂರ್ಣಪ್ರಮಾಣದ ಗಾಯಕಿಯಾಗುವ ಮೊದಲು ಟ್ರ್ಯಾಕ್ ಸಿಂಗರ್ ಆಗಿ ಕೆಲಸ ಮಾಡಿದರು. ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಮುಂತಾದ ಹೆಸರಾಂತ ಗಾಯಕಿಯರಿಗೆಂದು ಟ್ರ್ಯಾಕ್ ಹಾಡುತ್ತಿದ್ದರು. ಈ ಹಿಂದೆಯೇ ಬಂಗಾಳಿ ಚಿತ್ರದಲ್ಲಿ ಲತಾ ಅವರ ಹಾಡೊಂದರಲ್ಲಿ ಸಹಗಾಯಕಿಯಾಗಿಯೂ ಹಾಡಿದ್ದರು. ಹೀಗಿದ್ದ ಕವಿತಾ ಪೂರ್ಣಪ್ರಮಾಣದಲ್ಲಿ ಗಾಯಕಿ ಆಗಿ ತಮ್ಮ ಮೊದಲ ಹಾಡನ್ನು ಹಾಡಿದ್ದು ಕನ್ನಡ ಭಾಷೆಯಲ್ಲಿ. ೧೯೭೮ ರಲ್ಲಿ ಬಿಡುಗಡೆಯಾದ ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ಕವಿತಾ ಅವರಿಗೆ ಮೊದಲ ಅವಕಾಶ ಕೊಟ್ಟವರು ಗಿರೀಶ್ ಕಾರ್ನಾಡ್ ಅವರು. ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ.. ಎಂದು ಆರಂಭವಾಗುವ ಆ ಹಾಡನ್ನು ಬರೆದದ್ದು ಚಂದ್ರಶೇಖರ ಕಂಬಾರ. ಸಂಗೀತ ನೀಡಿದವರು ಭಾಸ್ಕರ್ ಚಂದಾವರ್ಕರ್. ಮುಂಬೈನ ಸ್ಟುಡಿಯೋವೊಂದರಲ್ಲಿ ಈ ಹಾಡನ್ನು ಮುದ್ರಿಸಿಕೊಂಡ ಮೇಲೆ ಗಿರೀಶ್ ಕಾರ್ನಾಡರು "ಚೆನ್ನಾಗಿ ಬಂದಿದೆ, ಮುಂದೆ ಒಳ್ಳೆಯ ಭವಿಷ್ಯ ನಿನಗಿದೆ" ಎಂದಿದ್ದರು. ಆ ಮಾತು ನಿಜವಾಗಲು ಹೆಚ್ಚು ಕಾಲವೇನು ಬೇಕಾಗಲಿಲ್ಲ.
೧೯೮೦ರಲ್ಲಿ ಬಂದ ಮಾಂಗ್ ಭರೋ ಸಜನಾ ಹಿಂದಿ ಚಿತ್ರಕ್ಕೆಂದು ಕವಿತಾರಿಂದ ಹಾಡು ಹಾಡಿಸಿದ್ದರೂ ಚಿತ್ರದಲ್ಲಿ ಆ ಹಾಡನ್ನು ಕೈಬಿಡಲಾಗಿತ್ತು. ಮುಂದೆ ೧೯೮೫ರಲ್ಲಿ ಬಂದ ಪ್ಯಾರ್ ಝುಕ್ತಾ ನಹಿ ಚಿತ್ರದಲ್ಲಿನ ತುಂಸೆ ಮಿಲ್ಕರ್ ಹಾಡು ಹಿಂದಿ ಸಿನಿರಸಿಕರ ಮೆಚ್ಚುಗೆ ಪಡೆಯಿತು. ಕವಿತಾ ಅಲ್ಲಿಂದ ಬಾಲಿವುಡ್ ನ ಆದ್ಯತೆಯ ಗಾಯಕಿಯಾಗಿ ಸ್ಥಾನ ಪಡೆದರು.
ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಆಶಾ ಭೋಸ್ಲೆಗಾಗಿ ಕವಿತಾ ಹಾಡಿದ ಟ್ರ್ಯಾಕ್ ಹಾಡು "ಹವಾ ಹವಾಯಿ". ಆದರೆ ಕವಿತಾ ಹಾಡಿದ ರೀತಿಗೇ ಲಕ್ಷ್ಮಿಕಾಂತ್-ಪ್ಯಾರೇಲಾಲ್ ಇದೇ ಅಂತಿಮ, ಮತ್ತೆ ಯಾರೂ ಹಾಡುವುದು ಬೇಡ ಎಂದು ನಿರ್ಧರಿಸಿ ಕವಿತಾ ಧ್ವನಿಯಲ್ಲೇ ಹಾಡನ್ನು ಉಳಿಸಿಕೊಂಡರು. ಮುಂದಿನದೆಲ್ಲ ಈಗ ಇತಿಹಾಸವೇ ಸರಿ. ಭಾರತ ಚಿತ್ರರಂಗದ ಸರಿಸುಮಾರು ಎಲ್ಲಾ ಸಂಗೀತ ನಿರ್ದೇಶಕರೊಡನೆ ಕವಿತಾ ಕೆಲಸ ಮಾಡಿದ್ದಾರೆ. ಎಲ್ಲಾ ಭಾಷೆಯಲ್ಲೂ ಹಿಟ್ ಹಾಡುಗಳನ್ನೂ, ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿದ್ದಾರೆ. ಲಕ್ಷ್ಮಿಕಾಂತ್-ಪ್ಯಾರೇಲಾಲ್, ಎ.ಆರ್.ರೆಹಮಾನ್, ಆರ್. ಡಿ. ಬರ್ಮನ್, ಸಾಧು ಕೋಕಿಲ, ಹಂಸಲೇಖ, ಗುರು ಕಿರಣ್ ಮೊದಲಾದವರ ಸಂಯೋಜನೆಯಲ್ಲಿ ಕವಿತಾ ಹಾಡಿದ ಹಾಡುಗಳು ಸದಾ ಹಸಿರು.
೧೯೯೦ರ ದಶಕ ಹಿಂದಿ ಸಿನಿಮಾ ಹೊಸ ಹೊಸ ಪ್ರತಿಭೆಗಳನ್ನು ಕಂಡ ಕಾಲ. ತಮ್ಮದೇ ಛಾಪು ಮೂಡಿಸಿದ ಅನುರಾಧ ಪೊಡ್ವಾಲ್, ಅಲ್ಕಾ ಯಾಗ್ನಿಕ್, ಸಾಧನಾ ಸರಿಗಮ್ ಮುಂತಾದ ಹೊಸ ಪ್ರತಿಭಾವಂತ ಧ್ವನಿಗಳ ಮಧ್ಯೆ ಮರೆಯಲಾಗದ ಇನ್ನೊಂದು ಹೆಸರೇ ಕವಿತಾ ಕೃಷ್ಣಮೂರ್ತಿ. ಹಿಂದಿಯಲ್ಲಿ ಸಾಮಾನ್ಯವಾಗಿ ಕವಿತಾ ಜೊತೆ ಹಾಡುತ್ತಿದ್ದ ಗಾಯಕರಲ್ಲಿ ಉದಿತ್ ನಾರಾಯಣ್ ಮತ್ತು ಕುಮಾರ್ ಸಾನು ಪ್ರಮುಖರು. ಅವರಲ್ಲದೆ ಶಾನ್, ಅಭಿಜಿತ್ ಭಟ್ಟಾಚಾರ್ಯ, ಸೋನು ನಿಗಮ್ ಮುಂತಾದವರೊಂದಿಗೂ ಹಿಟ್ ಹಾಡುಗಳನ್ನು ಹಾಡಿದ್ದಾರೆ.
ಕನ್ನಡದ ನಂಟು
[ಬದಲಾಯಿಸಿ]ಕವಿತಾ ಕೃಷ್ಣಮೂರ್ತಿ ಮೊದಲು ಹಾಡಿದ ಹಾಡೇ ಕನ್ನಡದ್ದು. ಒಂದಾನೊಂದು ಕಾಲದಲ್ಲಿ ಚಿತ್ರದ ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ.. ಹಾಡು ಜನಪ್ರಿಯವಾಗಿತ್ತು. ೧೯೭೮ರಲ್ಲಿ ಆ ಹಾಡು ಹಾಡಿದ ಮೇಲೆ ಹಿಂದಿ ಚಿತ್ರಗಳಲ್ಲಿ ಕವಿತಾ ಇನ್ನಿಲ್ಲದಂತೆ ಸಕ್ರಿಯರಾದರು. ಅವರು ಮತ್ತೆ ಕನ್ನಡಕ್ಕೆ ಹಾಡಿದ್ದೇ ೨೦೦೦ನೇ ವರ್ಷದಲ್ಲಿ ಬಿಡುಗಡೆಯಾದ ಸುದೀಪ್ ನಟನೆಯ ಚಿತ್ರ ಸ್ಪರ್ಶ. ಆ ಚಿತ್ರದಲ್ಲಿ ನಾದಬ್ರಹ್ಮ ಹಂಸಲೇಖ ಅವರ ಜೊತೆ ಕವಿತಾ ಮೊದಲ ಬಾರಿ ಕೆಲಸ ಮಾಡಿದರು. ಬರೆಯದ ಮೌನದ ಕವಿತೆ ಹಾಡು ಸೂಪರ್ ಹಿಟ್ ಆಗಿ ಕವಿತಾ ಅವರ ಹೆಸರು ಕನ್ನಡದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂತು. ಇಲ್ಲಿಂದ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ[೩]. ಸಾಧು ಕೋಕಿಲ ಸಂಯೋಜಿಸಿದ H2o ಚಿತ್ರದ ಹೂವೇ ಹೂವೇ ಹಾಡಂತೂ ಕವಿತಾ ಅವರ ಹೆಸರನ್ನು ಕರ್ನಾಟಕದಲ್ಲಿ ಮನೆಮಾತಾಗಿಸಿತು. ಇಂದಿಗೂ ಈ ಹಾಡು ಜನಪ್ರಿಯ ಹಾಡಾಗಿ ರಿಂಗಣಿಸುತ್ತದೆ.
ಕವಿತಾ ಕೃಷ್ಣಮೂರ್ತಿ ಹಾಡಿದ ಜನಪ್ರಿಯ ಕನ್ನಡ ಹಾಡುಗಳು:
- ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ (ಒಂದಾನೊಂದು ಕಾಲದಲ್ಲಿ)
- ಬರೆಯದ ಮೌನದ ಕವಿತೆ (ಸ್ಪರ್ಶ)
- ಹೃದಯದ ಒಳಗೆ ಹೃದಯವಿದೆ (ಕರಿಯ)
- ಬಾ ಎಂದು ಅಂದಾಗ (ನಮ್ಮ ಬಸವ)
- ಪ್ರೇಮಬಾಣ ಹೂಡು ಜಾಣ (ಶ್ರೀರಾಮ್)
- ಓ ಮಲ್ಲೆ ಓ ದುಂಬಿ (ನಾಗದೇವತೆ)
- ಹೂವೇ ಹೂವೇ (H2O)
- ಎಂದೋ ಕಂಡ ಕನಸು (ಲಂಕೇಶ್ ಪತ್ರಿಕೆ)
- ನನ್ನ ಬೆಳದಿಂಗಳು ನೀನು (ಜೋಕ್ ಫಾಲ್ಸ್)
- ಕೋಗಿಲೆ ಕುಹೂ ಹಾಡುವೆ ಈ ದಿನ (ಬದ್ರಿ)
- ಕಾವೇರಿ ಕಾವೇರಿ (ರಾಜಾಹುಲಿ)
ಮುಂತಾದವು.
ಪ್ರಶಸ್ತಿ-ಪುರಸ್ಕಾರಗಳು
[ಬದಲಾಯಿಸಿ]ಕವಿತಾ ಅವರ ಸಾಧನೆಗೆ ಅಸಂಖ್ಯಾತ ಪುರಸ್ಕಾರಗಳು ಲಭಿಸಿವೆ. ರಾಷ್ಟ್ರೀಯ ಪುರಸ್ಕಾರ
- 2005 – ಪದ್ಮಶ್ರೀ – ದೇಶದ ನಾಲ್ಕನೇ ಅತ್ಯುನ್ನತ ಗೌರವ.
- ಫಿಲಂಫೇರ್ ಪ್ರಶಸ್ತಿಗಳು
- 2003 – ಅತ್ಯುತ್ತಮ ಗಾಯಕಿ(ಶ್ರೇಯಾ ಘೋಷಾಲ್ ಜೊತೆ ಹಂಚಿಕೊಂಡಿದ್ದು) – "ಡೋಲಾರೆ ಡೋಲ" - ದೇವದಾಸ್
- 1997 – ಅತ್ಯುತ್ತಮ ಹಿನ್ನೆಲೆ ಗಾಯಕಿ – "ಆಜ್ ಮೆ ಊಪರ್" - ಖಾಮೋಶಿ
- 1996 – ಅತ್ಯುತ್ತಮ ಹಿನ್ನೆಲೆ ಗಾಯಕಿ – "ಮೇರಾ ಪಿಯಾ ಘರ್ ಆಯ" - ಯರಾನ
- 1995 – ಅತ್ಯುತ್ತಮ ಹಿನ್ನೆಲೆ ಗಾಯಕಿ – "ಪ್ಯಾರ್ ಹುವಾ ಚುಪ್ಕೆ ಸೆ" - 1942:ಎ ಲವ್ ಸ್ಟೋರಿ.[೪]
ಇವುಗಳ ಜೊತೆ ಹಲವಾರು ಗೌರವ ಪುರಸ್ಕಾರಗಳನ್ನು ಕವಿತಾ ಪಡೆದಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]1999ರ ನವೆಂಬರ್ 11 ರಂದು ಕವಿತಾ ಖ್ಯಾತ ವಯೊಲಿನ್ ವಾದಕ ಡಾ. ಎಲ್. ಸುಬ್ರಮಣ್ಯಮ್ ಅವರನ್ನು ಬೆಂಗಳೂರಿನಲ್ಲಿ ಮದುವೆಯಾಗಿದ್ದಾರೆ. ಕಳೆದ ಎರಡು ದಶಕಗಳಿಂದಲೂ ಬೆಂಗಳೂರೇ ಕವಿತಾ ಅವರ ಮನೆಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Kavita Krishnamurti - IMDb
- ↑ Mathur, Abhimanyu (19 November 2015). "Kavita Krishnamurthy: I have a long and deep connection with Delhi". ದಿ ಟೈಮ್ಸ್ ಆಫ್ ಇಂಡಿಯಾ. Retrieved 29 April 2016.
- ↑ "'ಒಂದಾನೊಂದು ಕಾಲದಲ್ಲಿ' ಕವಿತಾ ಕೃಷ್ಣಮೂರ್ತಿ". Chiloka.com.
- ↑ https://news.google.com/newspapers?id=jUAhAAAAIBAJ&sjid=rnsFAAAAIBAJ&pg=2472,5030101&dq=kavita+krishnamurthy+rahman&hl=en