ವಿಷಯಕ್ಕೆ ಹೋಗು

ಕಾರ್ಮಿಕ ಬಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಮಿಕ ಬಲ ಎಂದರೆ ಉದ್ಯೋಗದಲ್ಲಿರುವ ಕಾರ್ಮಿಕರ ಸಮೂಹ. ಸಾಮಾನ್ಯವಾಗಿ ಒಂದು ಒಂಟಿ ಕಂಪನಿ ಅಥವಾ ಕೈಗಾರಿಕೆಗಾಗಿ ಕೆಲಸ ಮಾಡುತ್ತಿರುವವರನ್ನು ವರ್ಣಿಸಲು ಈ ಪದವನ್ನು ಬಳಸಲಾಗುತ್ತದೆ, ಆದರೆ ಇದು ನಗರ, ರಾಜ್ಯ ಅಥವಾ ದೇಶದಂತಹ ಭೌಗೋಳಿಕ ಪ್ರದೇಶಕ್ಕೂ ಅನ್ವಯಿಸಬಹುದು. ಒಂದು ಕಂಪನಿಯೊಳಗೆ, ಅದರ ಮೌಲ್ಯವನ್ನು ಅದರ "ಕಾರ್ಯದಲ್ಲಿ ತೊಡಗಿರುವ ಕಾರ್ಮಿಕ ಬಲ" ಎಂದು ವರ್ಗೀಕರಿಸಬಹುದು. ಒಂದು ದೇಶದ ಕಾರ್ಮಿಕ ಬಲವು ಉದ್ಯೋಗಿ ಮತ್ತು ನಿರುದ್ಯೋಗಿ ಇಬ್ಬರನ್ನೂ ಒಳಗೊಳ್ಳುತ್ತದೆ. ಕಾರ್ಮಿಕ ಬಲ ಭಾಗವಹಿಕೆ ಪ್ರಮಾಣ (ಎಲ್ಎಫ಼್‍ಪಿಆರ್) ಎಂದರೆ ಕಾರ್ಮಿಕ ಬಲ ಮತ್ತು ಅವರ ಕೂಟದ ಒಟ್ಟಾರೆ ಗಾತ್ರದ (ಅದೇ ವಯೋಮಿತಿಯ ರಾಷ್ಟ್ರೀಯ ಜನಸಂಖ್ಯೆ) ನಡುವಿನ ಅನುಪಾತ. ಈ ಪದವು ಸಾಮಾನ್ಯವಾಗಿ ಉದ್ಯೋಗದಾತರು ಅಥವಾ ಆಡಳಿತ ಮಂಡಳಿಯನ್ನು ಒಳಗೊಳ್ಳುವುದಿಲ್ಲ, ಮತ್ತು ದೈಹಿಕ ಶ್ರಮದಲ್ಲಿ ನಿರತರಾಗಿರುವವರನ್ನು ಸೂಚಿಸಬಹುದು. ಇದು ಕೆಲಸಕ್ಕೆ ಲಭ್ಯವಿರುವ ಎಲ್ಲರೂ ಎಂಬ ಅರ್ಥವನ್ನೂ ಕೊಡಬಹುದು.

ಔಪಚಾರಿಕ ದುಡಿಮೆ ಎಂದರೆ ವ್ಯವಸ್ಥೆಯುಳ್ಳ ಮತ್ತು ಔಪಚಾರಿಕ ರೀತಿಯಲ್ಲಿ ಪಾವತಿಸಲ್ಪಡುವ ಉದ್ಯೋಗದ ಯಾವುದೇ ಪ್ರಕಾರ.[] ಅರ್ಥವ್ಯವಸ್ಥೆಯ ಅನೌಪಚಾರಿಕ ವಲಯಕ್ಕೆ ಭಿನ್ನವಾಗಿ, ಒಂದು ದೇಶದಲ್ಲಿನ ಔಪಚಾರಿಕ ಕಾರ್ಮಿಕವರ್ಗವು ಆ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನಕ್ಕೆ ಕೊಡುಗೆ ನೀಡುತ್ತದೆ. ಅನೌಪಚಾರಿಕ ದುಡಿಮೆ ಎಂದರೆ ಕಾನೂನು ಅಥವಾ ಆಚರಣೆಯಲ್ಲಿ ಔಪಚಾರಿಕ ವ್ಯವಸ್ಥೆ ಎನಿಸಿಕೊಳ್ಳುವಷ್ಟು ಇರದ ದುಡಿಮೆ. ಅದು ಪಾವತಿಸಲ್ಪಡುವ ಅಥವಾ ಪಾವತಿಸಲ್ಪಡದಿರುವ ದುಡಿಮೆ ಆಗಿರಬಹುದು ಮತ್ತು ಅದು ಯಾವಾಗಲೂ ಅವ್ಯವಸ್ಥಿತ ಮತ್ತು ಅನಿಯಂತ್ರಿತವಿರುತ್ತದೆ. ಔಪಚಾರಿಕ ಉದ್ಯೋಗವು ಅನೌಪಚಾರಿಕ ಉದ್ಯೋಗಕ್ಕಿಂತ ಹೆಚ್ಚು ವಿಶ್ವಾಸಾರ್ಹವಾಗಿರುತ್ತದೆ. ಸಾಮಾನ್ಯವಾಗಿ, ಮೊದಲಿನದು ಗಂಡಸರು ಮತ್ತು ಹೆಂಗಸರು ಇಬ್ಬರಿಗೂ ಹೆಚ್ಚಿನ ಆದಾಯ ಮತ್ತು ಹೆಚ್ಚು ಲಾಭಗಳು ಹಾಗೂ ಭದ್ರತೆಗಳನ್ನು ನೀಡುತ್ತದೆ.

ಅನೌಪಚಾರಿಕ ಕಾರ್ಮಿಕರ ಕೊಡುಗೆ ಅಗಾಧವಾಗಿದೆ. ಅನೌಪಚಾರಿಕ ಕಾರ್ಮಿಕವರ್ಗವು ಜಾಗತಿಕವಾಗಿ ವಿಸ್ತರಿಸುತ್ತಿದೆ, ಹೆಚ್ಚು ಗಮನಾರ್ಹವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ. ಜಾಕ್ ಚಾರ್ಮ್ಸ್ ನಡೆಸಿದ ಒಂದು ಅಧ್ಯಯನದ ಪ್ರಕಾರ, 2000ನೇ ಇಸವಿಯಲ್ಲಿ ಲ್ಯಾಟಿನ್ ಅಮೇರಿಕಾದಲ್ಲಿ ಅನೌಪಚಾರಿಕ ಕಾರ್ಮಿಕವರ್ಗವು ಕೃಷಿಯೇತರ ಉದ್ಯೋಗದ 57%ನಷ್ಟು, ನಗರ ಉದ್ಯೋಗದ 40%ನಷ್ಟು, ಹೊಸ ಕೆಲಸಗಳ 83%ನಷ್ಟು ರಚಿಸಿತ್ತು. ಅದೇ ವರ್ಷದಲ್ಲಿ, ಅನೌಪಚಾರಿಕ ಕಾರ್ಮಿಕವರ್ಗವು ಆಫ಼್ರಿಕಾದಲ್ಲಿ, ಕೃಷಿಯೇತರ ಉದ್ಯೋಗದ 78%ನಷ್ಟು, ನಗರ ಉದ್ಯೋಗದ 61%ನಷ್ಟು, ಮತ್ತು ಹೊಸ ಕೆಲಸಗಳ 93%ನಷ್ಟು ರಚಿಸಿತು. ವಿಶೇಷವಾಗಿ ಒಂದು ಆರ್ಥಿಕ ಬಿಕ್ಕಟ್ಟಿನ ನಂತರ, ಕಾರ್ಮಿಕರು ಔಪಚಾರಿಕ ವಲಯದಿಂದ ಅನೌಪಚಾರಿಕ ವಲಯಕ್ಕೆ ಸ್ಥಳಾಂತರವಾಗುವ ಪ್ರವೃತ್ತಿ ಹೊಂದಿರುತ್ತಾರೆ. ೧೯೯೭ರಲ್ಲಿ ಆರಂಭವಾದ ಏಷ್ಯನ್ ಆರ್ಥಿಕ ಬಿಕ್ಕಟ್ಟಿನ ನಂತರ ಈ ಪ್ರವೃತ್ತಿಯನ್ನು ಕಾಣಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Seager, Joni. 2008. The Penguin Atlas of Women in the World. 4th ed. New York: Penguin Books. Part 5