ವಿಷಯಕ್ಕೆ ಹೋಗು

ಕಾಸಿನ ಸರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[]

ಕಾಸಿನ ಸರ

[ಬದಲಾಯಿಸಿ]

ನಾಣ್ಯಗಳನ್ನು ಮಾಲೆಗಳಲ್ಲಿ ಪೋಣಿಸಿ ಸರ ಮಾಡಿ ಕತ್ತಿಗೆ ಹಾಕಿಕೊಳ್ಳುವ ಆಭರಣವೇ ಕಾಸಿನ ಸರ. ಚಿನ್ನ, ಬೆಳ್ಳಿ, ತಾಮ್ರ, ಕಂಚು ಹೀಗೆ ಬಗೆ-ಬಗೆಯ ನಾಣ್ಯಗಳ ಸರವನ್ನು ಪುರುಷರು, ಮಹಿಳೆಯರು ತೊಡುತ್ತಾರೆ. ಮದುವೆಗಳಲ್ಲಿ ವಧು ಚಿನ್ನದ ಕಾಸಿನ ಸರ ತೊಡುವುದು ಸಂಪ್ರದಾಯ. ಹಿಂದೆ ಚಾಲ್ತಿಯಲ್ಲಿದ್ದ ಐದು, ಹತ್ತು, ಇಪ್ಪತೈದು, ಐವತ್ತು ಪೈಸೆಯ ನಾಣ್ಯಗಳನ್ನು ವಿವಿಧ ಆಕಾರಗಳಲ್ಲಿ ಧರಿಸುವುದರಿಂದ ಮಾಲೆಗಳು ವಿಶಿಷ್ಟವಾಗಿ ಕಾಣಿಸುತ್ತದೆ. ಹಿಂದೆ ಬಳಕೆಯಲ್ಲಿದ್ದ ನಾಣ್ಯಗಳು ಇಂದು ಕಾಸಿನ ಸರಗಳ ಮೂಲಕ ಹೊಸ ರೂಪವನ್ನು ಪಡೆದಿದೆ. ಕಾಸಿನ ಸರವನ್ನು ಸಾಮಾನ್ಯವಾಗಿ ಸೀರೆ, ಚೂಡಿದಾರ, ಲಂಗ-ದಾವಣಿ, ಶಾರ್ಟ್, ಗೌನ್, ಪ್ಯಾಂಟ್‍ಗಳ ಜೊತೆಗೆ ತೊಡುತ್ತಾರೆ. ಪೂಜೆ, ಮದುವೆ, ಹಬ್ಬ, ಆಫೀಸ್, ಕಾಲೇಜು, ಶಾಪಿಂಗ್ ಮುಂತಾದ ಕಡೆಗಳಲ್ಲಿ ಧರಿಸಿಕೊಂಡು ಹೋಗುತ್ತಾರೆ. ಬಣ್ಣ ಬಣ್ಣದ ದಾರಗಳಿಂದ ಈ ನಾಣ್ಯಗಳನ್ನು ಪೋಣಿಸಿ ಉಟ್ಟ ಉಡುಪಿಗೆ ಒಪ್ಪುವಂತೆ ಅಲಂಕಾರ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ನಾಣ್ಯಗಳ ಸುತ್ತಲೂ ಮಣಿ, ಮುತ್ತು, ಕನ್ನಡಿ, ಹಾಗೂ ಕಲ್ಲುಗಳನ್ನು ಅಂಟಿಸಿ ಪುಷ್ಪ, ಸೂರ್ಯ, ಚಂದ್ರ, ನಕ್ಷತ್ರದಂತಹ ರೂಪ ನೀಡಬಹುದು. ನಾಣ್ಯಗಳನ್ನು ವೃತ್ತಾಕಾರಕ್ಕೆ ಮಾತ್ರ ಸೀಮಿತವಾಗಿಸದೆ, ಚೊಕ್ಕ, ಪಂಚಕೋನಾಕೃತಿ, ಷಟ್ಕೋನ, ಅಷ್ಟಭುಜ, ಹೃದಯಾಕಾರ, ಮನೆಯ ಚಿತ್ರ, ರಾಶಿ ಚಿಹ್ನೆ, ಹಾವು, ಮಿಂಚಿನ ಆಕೃತಿ, ಬಲೂನ್ ಮುಂತಾದ ಆಕಾರಗಳಲ್ಲೂ ತಯಾರಿಸುತ್ತಾರೆ. ಇಂತಹ ಭಿನ್ನವಾದ ಆಕೃತಿಯ ಕಾಸಿನ ಸರಗಳು ಅಂಗಡಿ, ಮಳಿಗೆ ಹಾಗೂ ಆನ್ ಲೈನ್‍ಗಳಲ್ಲಿ ದೊರಕುತ್ತದೆ. ಸಾಂಪ್ರದಾಯಿಕ ಚಿನ್ನ ಹಾಗೂ ಬೆಳ್ಳಿಯ ಕಾಸಿನ ಸರಗಳು ಆಧುನಿಕತೆಯ ರೂಪ ಹೊಂದಿ ಮಹಿಳೆಯರ ಮನಸ್ಸಿಗೆ ಒಪ್ಪುವಂತೆ ವಿನೂತನವಾಗಿ ಮಾರುಕಟ್ಟೆಯಲ್ಲಿ ದಾಳಿ ಇಟ್ಟಿವೆ. ಹೊಸ ಮಾದರಿ, ಹೊಸ ಆಕೃತಿ, ಹೊಸ ವಿನ್ಯಾಸದಲ್ಲಿ ಮಾರ್ಪಾಡು ಹೊಂದಿ, ವಿಭಿನ್ನ ಮಾದರಿಯಲ್ಲಿ ಮಹಿಳೆಯರ ಮನ ಗೆದ್ದಿದೆ. ಧಾರ್ಮಿಕ ಶಾಸ್ತ್ರ, ನಂಬಿಕೆಗಳು, ಪದ್ಧತಿಗಳು, ಸಂಸ್ಕಾರ, ಸಂಸ್ಕøತಿಗಳ ಪ್ರಭಾವ ಕೆಲವು ಆಭರಣಗಳಿಗೆ ವಿಶೇಷ ಮಹತ್ವವನ್ನು ನೀಡುತ್ತದೆ. ಆಧುನಿಕತೆಗೆ ಒಗ್ಗಿಕೊಂಡಂತೆ ಹಳೆಯ ಕಾಲದ ಅಪೂರ್ವ ಆಭರಣಗಳನ್ನು ಧರಿಸುವವರೂ, ತಯಾರಿಸುವವರೂ, ವಿರಳವಾಗುತ್ತಿದ್ದಾರೆ. ಸರ್ಕಾರದ ಇತ್ತೀಚಿನ ಧೋರಣೆಯಿಂದಾಗಿ ಅಕ್ಕಸಾಲಿಗರ ಉದ್ಯಮಕ್ಕೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಆಭರಣಗಳ ವಿಷಯ ಅವರವರ ಮನೋಧರ್ಮಕ್ಕೆ ಸಂಬಂಧ ಪಟ್ಟದ್ದಾದ್ದರಿಂದ ಜನ ಹೊಸ ಮಾದರಿಯ ಒಡವೆಗಳನ್ನು ಬಯಸುತ್ತಿದ್ದಾರೆ. ಆದ್ದರಿಂದ ನವೀನ ರೀತಿಯ ಒಡವೆಗಳು ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದೆ.

ಉಲ್ಲೇಖಗಳು

[ಬದಲಾಯಿಸಿ]



  1. http://m.vijayakarnataka.com
  2. http://www.udyavani.com Archived 2017-12-22 ವೇಬ್ಯಾಕ್ ಮೆಷಿನ್ ನಲ್ಲಿ.