ಕೊಡಗಿನ ಗೌಡರು
ಗೌಡರು ಎಂದರೆ ಭೂಮಿಗೆ ಒಡೆಯ ಎಂದರ್ಥ. ಕರ್ನಾಟಕ ರಾಜ್ಯದ ನೈಋತ್ಯ ದಿಕ್ಕಿನಲ್ಲಿರುವ ಕೊಡಗು ಜಿಲ್ಲೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಬಂಟವಾಳ ತಾಲ್ಲೂಕಿನಲ್ಲಿ ಅರೆಭಾಷೆ ಗೌಡರು ವಾಸಿಸುತ್ತಾರೆ.[೧] ಗೌಡರು ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಇದ್ದರೆಂದು ಚರಿತ್ರೆಗಳಿಂದ ತಿಳಿಯುತ್ತದೆ. ದಕ್ಶಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಗೌಡರಲ್ಲಿ ಕೆಲವರು ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಮತ್ತು ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಇವರು ಕೊಡಗಿಗೆ ಬಂದು ನೆಲೆಸಿದರು. ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷೆ ಗೌಡ ಜನಾಂಗದವರು ಹಿಂದು ಸಂಸ್ಕ್ರತಿಯ ಪರಂಪರೆಯಲ್ಲಿ ವಿಶಾಲವಾದ ಕೊಡುಗೆಯನ್ನು, ಜಾನಪದ ಸೋಬಾನೆ ಕಂಪಿನ ಮೂಲಕ ಕರ್ನಾಟಕ ಜಾನಪದ ಸಾಹಿತ್ಯ ರಂಗಕ್ಕೆ ನೀಡಿದೆ. ಮಲೆನಾಡಿನ ಸಂಸ್ಕ್ರತಿ ವೈಭವವನ್ನು ಹೊಂದಿದ ಅರೆಭಾಷೆಯನ್ನಾಡುವ ಕೊಡಗು ಗೌಡ ಜನಾಂಗದವರು ತಮ್ಮದೇ ಆದ ಆಚರಣೆಗಳನ್ನು ಹೊಂದಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.[೨]
ಹರಿಸೇವೆ
[ಬದಲಾಯಿಸಿ]ಗೌಡರ ಕುಲದೇವರಾದ ಶ್ರೀ ಲಕ್ಶ್ಮಿ ಸಹಿತ ವೆಂಕಟರಮಣ ಸ್ವಾಮಿಯ ಹರಿಸೇವೆಯನ್ನು ಆಚರಿಸುತ್ತಾರೆ. ಕೊಡಗು ಜಿಲ್ಲೆಯ ಗೌಡ ಜನಾಂಗದವರು ಹಿಂದಿನಿಂದಲೂ ಈ ಹರಿಸೇವೆಯನ್ನು ಆಚರಿಸುತ್ತಾ ಬಂದಿದ್ದಾರೆ. ಗೌಡ ಜನಾಂಗದ ಪ್ರತೀ ಕುಟುಂಬಕ್ಕೂ ಐನ್‍ಮನೆ(ಮೂಲ ಮನೆ) ಎಂಬುದು ಇರುತ್ತದೆ. ಐನ್‍ಮನೆಯ ಬಾಡೆಯಲ್ಲಿ ದೇವರ ದೀಪವನ್ನು ಹಾಗು ಶ್ರೀ ವೆಂಕತರಮಣ ದೇವರ ಭಾವ ಚಿತ್ರವನ್ನು ಇಟ್ಟು ಬೆಳಿಗ್ಗೆ ಮತ್ತು ಸಂಜೆ ಪೂಜಿಸುತ್ತಾರೆ. ಕುಟುಂಬದ ಹರಿಕೆ ಹಣವನ್ನು ಮುಡುಪುನಲ್ಲಿಟ್ಟು(ಭಂಡಾರ ಪೆಟ್ಟಿಗೆ) ಬೀಗಮುದ್ರಿಸಿ ಐನ್ ಮನೆಯ ಉಪ್ಪರಿಗೆ(ಅಟ್ಟ)ಯಲ್ಲಿ ಯಾರ ಕೈಗೂ ಎಟುಕದಂತೆ ನೇತು ಹಾಕುತ್ತಾರೆ. ಇದಕ್ಕೆ ಕಾರಣ ಮುಡಿಪಿಗೆ ಮೈಲಿಗೆ ಆಗಬಾರದು, ಸೂತಕದವರು ಮುಟ್ಟಬಾರದು ಎಂಬ ಉದ್ದೇಶ. ಸದ್ರಿ 'ಮುಡುಪು ಹಣಕ್ಕೆ' ಪೂಜೆ ಸಲ್ಲಿಸಿ ದೇವರನ್ನು ಆರಾಧಿಸುವುದನ್ನು 'ಹರಿಸೇವೆ' ಎಂದು ತಿಳಿಯಲಾಗಿದೆ. ಹರಿಸೇವೆಗಳಲ್ಲಿ 'ಹರಿಸೇವೆ' ಮತ್ತು 'ಘನ ಹರಿಸೇವೆ' ಎಂದು ೨ ವಿಧ. ಹಾಗೆಯೇ 'ಮಣೆ ಹರಿಸೇವೆ' ಮತ್ತು 'ಪಾನಕ ಹರಿಸೇವೆ' ಎಂದು ಇನ್ನು ಎರಡು ವಿಧಗಳಿವೆ. ಇದನ್ನು ಶ್ರೀ ಸ್ವಾಮಿಯವರ ದಿನವಾದ ಶನಿವಾರ ಮತ್ತು ಬುಧವಾರದಂದು ಆಚರಿಸಲಾಗುತ್ತದೆ.
ಗೌಡರ ಹಬ್ಬಗಳು
[ಬದಲಾಯಿಸಿ]ಯುಗಾದಿ
[ಬದಲಾಯಿಸಿ]ಯುಗಾದಿ ಹಬ್ಬವು ಹಿಂದುಗಳಲ್ಲಿ ವರ್ಷದ ಮೊದಲನೆಯ ದಿನದ ಹಬ್ಬ. ಗೌಡರು ಯುಗಾದಿ ಹಬ್ಬವನ್ನು ಬಹು ಸಂಭ್ರಮದಿಂದ ಆಚರಿಸುತ್ತಾರೆ.
ಬಿಶು ಸಂಕ್ರಮಣ
[ಬದಲಾಯಿಸಿ]ಬಿಶು ಸಂಕ್ರಮಣದ ದಿನದಂದು ಕುಟುಂಬದವರೆಲ್ಲ ಸೇರಿ ಪೂಜೆ ಮಾಡಿ, ನಂತರ ನೇಗಿಲು, ನೊಗ, ಎತ್ತುಗಳನ್ನು ಗದ್ದೆಗೆ ಕೊಂಡು ಹೋಗಿ ಅಲ್ಲಿ ಪೂಜೆ ಮಾಡಿ ಹೊಲವನ್ನು ಉಳಲು ಪ್ರಾರಂಭಿಸುವರು.
ಗುರುಕಾರಣರಿಗೆ ಕೊಡುವುದು
[ಬದಲಾಯಿಸಿ]ಸತ್ತವರ ನೆನಪಿನಲ್ಲಿ ಕಾರ್ತಿಕ ತಿಂಗಳಲ್ಲಿ ಗುರುಕಾರಣರಿಗೆ ಕೊಡುವ ಪದ್ದತಿ ಇದೆ. ಇದರಲ್ಲಿ ಕೊಟುಂಬದವರೆಲ್ಲ ಐನ್‍ಮನೆಯಲ್ಲಿ ಸೇರಿ ಸತ್ತವರ ನೆನೆಪಿಗೆ ಎಡೆಯನ್ನು ಹಾಕುತ್ತಾರೆ.
ಕೈಲ್‌ಪೊಳ್ದ್
[ಬದಲಾಯಿಸಿ]ಇದು ಕೊಡಗಿನಲ್ಲಿ ಮಾತ್ರ ಆಚರಿಸುವ ಹಬ್ಬವಾಗಿದೆ. ಕೈಲ್‌ಪೊಳ್ದ್ ಎಂದರೆ ವ್ಯವಸಾಯ ಉಪಕರಣಗಳ ಆಯುಧಪೂಜೆ ಮತ್ತು ವಿಶ್ರಾಂತಿಯ ದಿನ.
ಕಾವೇರಿ ಸಂಕ್ರಮಣ
[ಬದಲಾಯಿಸಿ]ಶ್ರೀ ಮೂಲ ಕಾವೇರಮ್ಮನ ಪವಿತ್ರ ತೀರ್ಥೋದ್ಭವವು ತುಲಾ ಸಂಕ್ರಮಣದಂದು ಅಕ್ಟೋಬರ್ ತಿಂಗಳ ೧೬/೧೭ರಂದು ಬರುವುದು. ಅದನ್ನು ಕೊಡಗಿನಾದ್ಯಂತ ಹಬ್ಬವೆಂದು ಆಚರಿಸುವರು.
ದೀಪಾವಳಿ ಹಬ್ಬ
[ಬದಲಾಯಿಸಿ]ಈ ಹಬ್ಬವನ್ನು ಸಾಧಾರಣವಾಗಿ ಕೊಡಗಿನ ಕೆಲವು ಭಾಗಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಚರಿಸುತ್ತಾರೆ. ಈ ಹಬ್ಬವು ಕಾವೇರಿ ಜಾತ್ರೆ "ತೀರ್ಥೋದ್ಭವ" ಕಳೆದು ಪ್ರಥಮವಾಗಿ ಬರುವ ಅಮವಾಸ್ಯೆ ದಿನ ಪ್ರಾರಂಭವಾಗುತ್ತದೆ, ಅಂದರೆ ಬೊಂತಲ್(ತುಲಾ) ತಿಂಗಳಲ್ಲಿ ಈ ಹಬ್ಬ ಬರುವುದು.
ಹುತ್ತರಿ ಹಬ್ಬ
[ಬದಲಾಯಿಸಿ]ಹುತ್ತರಿ ಹಬ್ಬ ಕೊಡಗಿನಲ್ಲಿ ಆಚರಿಸುವ ಸಂಭ್ರಮದ ಹಬ್ಬ. ಇದು ಹೊಸ ಭತ್ತವನ್ನು ಮನೆಗೆ ತೆಗೆದುಕೊಂಡು ಬರುವ ಸಮಯದಲ್ಲಿ ಆಚರಿಸುವ ಹಬ್ಬ. ಹುತ್ತರಿ ಹಬ್ಬ ಕಳೆದ ನಂತರವೇ ಭತ್ತದ ಬೆಳೆ ಕೊಯಿದು ಮನೆಗೆ ತರುವರು ಮತ್ತು ಹೊಸ ಅಕ್ಕಿ ಊಟ ಮಾಡುವರು.
ಕಿಡ್ಡಾಸ ಹಬ್ಬ
[ಬದಲಾಯಿಸಿ]ಒಕ್ಕಲು ಆದನಂತರ ಭತ್ತವನ್ನು ಪೂಜಿಸುವ ಹಬ್ಬವನ್ನು ಕಿಡ್ಡಾಸ ಹಬ್ಬವೆಂದು ಹೇಳುವರು. ಇದನ್ನು ತುಳು ತಿಂಗಳ ಪೊನ್ನಿ(ಫೆಬ್ರವರಿ) ತಿಂಗಳಲ್ಲಿ ಮೂರು ದಿನಗಳ ಕಾಲ ಆಚರಿಸುವರು.
ಗೌಡರ ಪದ್ದತಿಗಳು
[ಬದಲಾಯಿಸಿ]ಹೆರಿಗೆ
[ಬದಲಾಯಿಸಿ]ಒಂದು ಕುಟುಂಬದಲ್ಲಿ ಒಬ್ಬ ಸ್ತ್ರೀ ಹೆರಿಗೆಯಾದರೆ ಆ ಕುಟುಂಬಕ್ಕೆ ಹದಿನಾರು ದಿನ ಸೂತಕವಿರುತ್ತದೆ, ಆ ಸೂತಕದ ದಿನಗಳಲ್ಲಿ ಆ ಕುಟುಂಬಸ್ತರು ದೇವಸ್ಥಾನ ಹಾಗು ಪವಿತ್ರ ಸ್ಥಳಗಳಿಗೆ ಹೋಗಕೂಡದು. ಗೌಡರ ಪದ್ದತಿಯಂತೆ ಚೊಚ್ಚಲ ಬಾಣಂತನವು ಹೆಣ್ಣಿನ ತವರುಮನೆಯಲ್ಲಿಯೇ ಮಾಡತಕ್ಕದ್ದು. ಹೆರಿಗೆಯಾದ ಐದು ಅಥವ ಏಳನೇ ದಿನಕ್ಕೆ ಮಡಿವಾಳಗಿತ್ತಿ ಬಂದು ತಾಯಿ ಮಗುವನ್ನು ಸ್ನಾನ ಮಾಡಿಸಿ ಶುದ್ಧಿ ಕ್ರಿಯೆಯನ್ನು ಮಾಡುತ್ತಾಳೆ. ಇದಕ್ಕೆ "ಆಮ" ಎಂದು ಕರೆಯುತ್ತಾರೆ. ದೇವಸ್ಥಾನದಿಂದ ತಂದ ಪುಣ್ಯಾರ್ಚನೆಯನ್ನು ಮಾವಿನ ಎಲೆಗಳಿಂದ ಮುಡಿಪಿಗೂ, ಮನೆ ಮತ್ತು ಕುಟುಂಬದವರ ಮನೆಯಗಳಿಗೂ ಚಿಮುಕಿಸುತ್ತಾರೆ.
ಮಗುವನ್ನು ತೊಟ್ಟಿಲಲ್ಲಿ ಇಡುವ ಕ್ರಮ
[ಬದಲಾಯಿಸಿ]ಹದಿನಾರನೆಯ ದಿನ ಮಗುವಿಗೆ ಅನ್ನ ಕೊಡುವ ಶಾಸ್ತ್ರಮಾಡಿ ಮಗುವಿಗೆ ಹೆಸರು ಹಾಕಿ ತೊಟ್ಟಿಲಿಗೆ ಹಾಕುವರು, ನಂತರ ನೆಲ್ಲಕ್ಕಿಯಡಿಯಲ್ಲಿ ಕುಳಿತು ಅನ್ನ ಕೊಡುವ ಕ್ರಮ. ಅನ್ನವನ್ನು ಮೊಸರಿನೊಂದಿಗೆ ನುಣ್ಣಗೆ ಅರೆದು ಒಂದು ಮಣ್ಣಿನ ಚಟ್ಟೆ(ಪಾತ್ರೆ)ಯಲ್ಲಿ ಇಟ್ಟು ಕೊಂಡಿರುತ್ತಾರೆ. ಮೊದಲು ಅಜ್ಜಿ ಮಗುವಿನ ಬಾಯಿಗೆ ಅನ್ನ ಹಾಕಿ "ಹುಗ್ಗೆ ಉಂಡ್, ಹುಗ್ಗೆ ಬೇರುಂಡ್ ನೊರು ವರ್ಷ ಆರೋಗ್ಯವಂತನಾ(ಳಾ)ಗಿ ಬಾಳ್" ಮಗುವೆ ಎಂದು ತೃಪ್ತಿಯಿಂದಲೂ ತುಂಬು ಹರ್ಷದಿಂದಲೂ ಹರಸುತ್ತಾರೆ. ಅಂದು ಮಗುವನ್ನು ಸ್ನಾನಮಾಡಿಸಿ ಧೂಪ-ದೀಪಗಳಿಂದ ತೊಟ್ಟಿಲನ್ನು ಶುದ್ದಿಮಾಡಿ ನೆಲ್ಲಕ್ಕಿ ಅಡಿಯಲ್ಲಿ ಇರಿಸುವರು. ಮಗುವಿಗೆ ಪಂಚಾಂಗದಲ್ಲಿ ಬಂದ ನಾಮ ನಕ್ಶತ್ರದ ಹೆಸರನ್ನು ನಿಶ್ಚಯಿಸಿಕೊಂಡ ನಂತರ ಮಗುವನ್ನು ಪೂರ್ವಕ್ಕೆ ತಲೆಮಾಡಿ ತೊಟ್ಟಿಲಲ್ಲಿ ಮಲಗಿಸಿ ಹೆಸರಿಡುವರು.
ಋತುಶಾಂತಿ
[ಬದಲಾಯಿಸಿ]ಪ್ರಥಮತಃ ರಜಸ್ವಾಲೆಯಾದ ಹೆಣ್ಣು ಮಗಳು ಆ ದಿನ ಯಾವುದಾದರೊಂದು ಫಲದಮರದ ಅಡಿಯಲ್ಲಿ ಹೋಗಿ ಕುಳಿತುಕೊಳ್ಳುವುದು ವಾಡಿಕೆ. ರಜಸ್ವಾಲೆಯಾಗಿರುವಳೆಂದು ತಿಳಿದ ಹೆಣ್ಣು ಮಗಳನ್ನು ಮನೆಯ ಅಂಗಳಕ್ಕೆ ಕರೆ ತಂದು ಮನೆಯ, ನೆರೆಯ ಹೆಂಗಸರೆಲ್ಲ ಮುತ್ತೈದೆಯರು ಋತುವಾದ ಹುಡುಗಿಯನ್ನು ಪೂರ್ವಾಬಿ ಮುಖವಾಗಿ ಒಂದು ಮಣೆಯಲ್ಲಿ ಕುಳ್ಳಿರಿಸುತ್ತಾರೆ. ನಂತರ ಐದು ಚೆಂಬುಗಳಲ್ಲಿ ನೀರು, ಮಾವಿನ ಎಲೆ ಮತ್ತು ಎಣ್ಣೆ ಚರಕಿನಲ್ಲಿ ಎಣ್ಣೆ, ಗರಿಕೆಹುಲ್ಲು ಇಡಬೇಕು. ನಂತರ ಮುತ್ತೈದೆಯರು, ಅತ್ತಿಗೆ ನಾದಿನಿಯರು ಎಣ್ಣೆ ಚರಕಿನಿಂದ ಎಣ್ಣೆಯನ್ನು ಗರಿಕೆಯಿಂದ ತೆಗೆದುಕೊಂಡು ತಲೆಗೂ ಕಾಲಿಗೂ ಹಚ್ಚಿ ಶಾಸ್ತ್ರ ಮಾಡುತ್ತಾರೆ. ಒಂದು ತಂಬಿಗೆಯಿಂದ ನೀರನ್ನು ಅವಳ ತಲೆಯ ಮೇಲಿಂದ ಹುಯ್ಯುತ್ತಾರೆ. ಅದೇ ರೀತಿ ಐದರಿಂದ ಏಳು ಹೆಂಗಸರು ನೀರು ಹಾಕಿದ ನಂತರ ಅವಳಿಗೆ ಬೇರೆ ಮಡಿ ಬಟ್ಟೆ ಉಡಲು ಕೊಡುತ್ತಾರೆ ಮತ್ತು ಅವಳನ್ನು ಹೊರಮನೆಯಲ್ಲಿ ಅಥವಾ ಕೊಟ್ಟಿಗೆಯಲ್ಲಿ ಕೂರಿಸುತ್ತಾರೆ. ರಜಸ್ವಲೆಯಾದ ಮೂರನೆ ದಿವಸ ಮಡಿವಾಳಗಿತ್ತಿಯನ್ನು ಕರೆಸಿ ಶಾಸ್ತ್ರೋಕ್ತವಾಗಿ ಕೆಲವು ಕಾರ್ಯಕ್ರಮಗಳನ್ನು ಜರುಗಿಸುವರು. ಋತುವಾದ ಹದಿನಾರನೆಯ ದಿವಸ ಋತುಶಾಂತಿ ಲಗ್ನವನ್ನು ಆಚರಿಸುವರು.
ವಿವಾಹ ಪದ್ದತಿಗಳು
[ಬದಲಾಯಿಸಿ]ಹಿಂದಿನ ಕಾಲದಲ್ಲಿ ಸಂದ್ಯಾದೀಪ ಬೆಳಗುವ ಸಮಯದಲ್ಲಿ ಕನ್ಯೆಯ ಮನೆಗೆ ಪ್ರವೇಶಿಸುವುದು ಹಿರಿಯರ ಪದ್ದತಿ. ಗೊತ್ತುಪಡಿಸಿದ ಶುಭ ದಿನದಂದು ಹುಡುಗನು ಹುಡುಗಿಯ ಮನೆಗೆ ಹಿತಚಿಂತಕನೊಡನೆ ಅಥವಾ ಕುಟುಂಬದ ಗೆಳೆಯರೊಡನೆ ಹೋಗಿ ಹುಡುಗನು ಹುಡುಗಿಯನ್ನು, ಹುಡುಗಿಯು ಹುಡುಗನನ್ನು ನೋಡಿಕೊಳ್ಳುವರು. ಹುಡುಗಿಯನ್ನು ನೋಡಿದ ನಂತರ ಉಬಯ ಕಡೆಯವರಿಗೆ ಒಪ್ಪಿಗೆಯಾದಲ್ಲಿ ಹುಡುಗನ ಮನೆಗೆ ಐದರಿಂದ ಏಳು ಜನ ಮುತ್ತೈದೆಯರೊಂದಿಗೆ ಕೂಡಿ ಹೋಗುವ ಪದ್ದತಿ ಇದೆ. ಹುಡುಗನ ಮನೆ, ಆಸ್ತಿ, ಅಂತಸ್ತು ನೋಡಿ ಒಪ್ಪಿಗೆಯಾದಲ್ಲಿ ಹುಡುಗ ಮತ್ತು ಹುಡುಗಿಯ ಜಾತಕ ಹೋಲಿಸಿ ದೇವಸ್ಥಾನದಲ್ಲಿ ಹೂ ತೆಗಿಸಲಾಗುತ್ತದೆ. ಎಲ್ಲವೂ ಸರಿ ಕಂಡು ಬಂದಲ್ಲಿ ಒಪ್ಪಿ ವೀಳ್ಯ ಶಾಸ್ತ್ರದ ಕ್ರಮಕ್ಕೆ ದಿನ ನಿಶ್ಚೈಸಿ ಬರುವರು.
ವೀಳ್ಯ ಶಾಸ್ತ್ರದ ಕ್ರಮ
[ಬದಲಾಯಿಸಿ]ನಿಶ್ಚೈಸಿದ ಸಮಯಕ್ಕೆ ಸರಿಯಾಗಿ ಕನ್ಯೆಯ ಭಾಗದ ಮುಖ್ಯಸ್ತರು ಮನೆಯ ದೇವರ ದೀಪ ಹಚ್ಚುವ(ನೆಲ್ಲಕ್ಕಿ) ಕೋಣೆಯ ಇದಿರು ಭಾಗದಲ್ಲಿ ನಾಲ್ಕು ಛಾಪೆ ಹಾಕಿ, ಅದರ ಮೇಲೆ ಎರಡು ಮಣೆ ಇಟ್ಟು, ಒಂದು ಮಣೆಯ ಮೇಲೆ ನಂದಾ ದೀಪ ಹಚ್ಚಿಟ್ಟು ಅದರ ಪಕ್ಕದಲ್ಲಿ ಕಂಚಿನ ಬಟ್ಟಲಲ್ಲಿ ಐದು ಎಲೆ ಒಂದು ಅಡಿಕೆ ಸ್ವಲ್ಪ ಅಕ್ಕಿ ಹಾಕಿ ಇಡುವರು. ದೀಪದ ಇನ್ನೊಂದು ಬದಿಯಲ್ಲಿ ಇರುವ ಇನ್ನೊಂದು ಮಣೆಯಲ್ಲಿ ಒಂದು ಕಂಚಿನ ಚೊಂಬಿನಲ್ಲಿ ನೀರು ಮತ್ತು ಹರಿವಾಣದಲ್ಲಿ ಐದು ಎಲೆ ಒಂದು ಅಡಿಕೆ ಸ್ವಲ್ಪ ಬೆಳ್ತಿ ಅಕ್ಕಿ ಹಾಕುವರು. ಊದುಕಡ್ಡಿ ಹಚ್ಚಿ ಇಡುವರು. ಆ ಮೇಲೆ ಒಂದು ಚೊಂಬು ನೀರು ಸಭೆಗೆ ಕೊಟ್ಟು, ವೀಳ್ಯ ಶಾಸ್ತ್ರದ ಕ್ರಮಕ್ಕೆ ಸಿದ್ದರಾಗುತ್ತಾರೆ. ಊರವರು ನೆಂಟರು ಸರ್ವರೂ ಶುಭ ಕಾರ್ಯವನ್ನು ಸಾಂಗವಾಗಿ ನೆರವೇರಿಸಿಕೊಡಿರೆಂದು ಮನೆಯ ಯಜಮಾನರು ಕೇಳಿ ಮುಗಿಸುವರು. ನಂತರ ವೀಳ್ಯೆಯನ್ನು ಏಳರಿಂದ ಒಂಬತ್ತು ಬಾರಿ ಬಳಸುವ ಕ್ರಮವಿದೆ (ವೀಳ್ಯ ಬಳಸುವಾಗ ಮೂರು ಮೂರು ಬಾರಿ ಅಡಿಕೆ ಮತ್ತು ವೀಳ್ಯವನ್ನು ಬಳಸುವುದು). ಪ್ರತಿ ವೀಳ್ಯ ಕಟ್ಟುವಾಗಲೂ ಹತ್ತು ಕುಟುಂಬ ಹದಿನೆಂಟು ಗೋತ್ರದ ಒಕ್ಕಣೆ ಹೇಳಿ ವೀಳ್ಯ ಕಟ್ಟುವುದು ಸಂಪ್ರದಾಯ, ಕ್ರಮದಂತೆ ವೀಳ್ಯಶಾಸ್ತ್ರವನ್ನು ಮಾಡಿ ಮುಗಿಸುವರು. ವೀಳ್ಯ ಶಾಸ್ತ್ರದ ನಂತರ ಐದು ಎಲೆ, ಒಂದು ಅಡಿಕೆ ಹುಡುಗನಿಗೂ ಹಾಗೂ ಹುಡುಗಿಗೂ ಕೊಡಬೇಕು.
ಮದುವೆ
[ಬದಲಾಯಿಸಿ]ಮೊದಲು ಊರಿನವರನ್ನು ಕರೆಸಿ ಚಪ್ಪರ ಹಾಕಿ ಮೇಲ್ಕಟ್ಟು ಕಟ್ಟುವರು. ಯಾವುದೇ ಸಮಾರಂಭಕ್ಕೆ ಮೊದಲು ಗಣಪತಿಗೆ ಪೂಜೆಸಲ್ಲಿಸಿ ಶುರು ಮಾಡುವುದು ವಾಡಿಕೆ. ಮೊದಲಿಗೆ ಒಲೆ ಪೂಜೆಯನ್ನು ಐದರಿಂದ ಏಳು ಜನ ಮುತ್ತೈದೆಯರು ಸೇರಿ ಮಾಡುತ್ತಾರೆ. ಇದು ಮದುವೆಗೆ ಶುಭ ಮುನ್ನುಡಿಯನ್ನಿಡುತ್ತಾರೆ. ಮೊದಲನೆಯದಾಗಿ ಎಣ್ಣೆ ಅರಿಶಿಣವನ್ನು ಮುತ್ತೈದೆಯರು ಸೋಬಾನೆ ಹಾಡುತ್ತಾ ಗರಿಕೆ ಹುಲ್ಲಿನ ಕುಡಿಯೊಂದಿಗೆ ಐದು ಎಲೆ ಒಂದು ಅಡಿಕೆಯನ್ನು ಇಟ್ಟು ದೀಪಕ್ಕೆ ಅಕ್ಕಿ ಹಾಕಿ ಎಣ್ಣೆ ಅರಿಶಿಣಾ ಮೈಗೆ ಹಚ್ಚಿದ ನಂತರ ಐದು, ಏಳು ಅಥವಾ ಒಂಬತ್ತು ಜನ ಮುತ್ತೈದೆಯರು ನೆಲ್ಲಕ್ಕಿ ಅಡಿಯಲ್ಲಿ ಹಾಗೆಯೇ ಚಪ್ಪರದ ಮೇಲ್ಕಟ್ಟಿನ ಅಡಿಯಲ್ಲಿಯೂ ಈ ಶಾಸ್ತ್ರವನ್ನು ಮಾಡುವರು. ನಂತರ ಮುತ್ತೈದೆಯರು ವರ/ ವಧುವಿಗೆ ಸ್ನಾನ ಮಾಡಿಸಿ ವರನಿಗೆ ಜೋಡಿ ಪಂಚೆಯನ್ನು ಕಚ್ಚೆ ಹಾಕಿ ಉಡಿಸಿ, ಬಳಿಕ ಶರಟು(ಅಂಗಿ) ಮೇಲೆ ಬಿಳಿ ಕೋಟು ಅಡ್ಡ ಶಾಲು, ತಲೆಗೆ ಪೇಟ(ರುಮಾಲು)ಸುತ್ತಿ ಪೇಟದ ಮೇಲೆ ಮುಸುಕಿನ ವಸ್ತ್ರ, ಕೈಗೆ ಉಂಗುರ, ಕುತ್ತಿಗೆಗೆ ಚಿನ್ನದ ಸರ, ಕೈಗೆ ಕಡಗವನ್ನು ಹಾಕುವರು. ಹೆಣ್ಣಿಗಾದರೆ ಅವಳಿಗೆ ಬೇಕಾದ ಶೃಂಗಾರ ಸಾಧನಗಳನ್ನು ಉಪಯೋಗಿಸುವರು. ಅಡೋಳಿಯು ಕೂಡ ಬಿಳಿ ಕೋಟು ಬಿಳಿ ಅಂಗಿ ಹಾಕಿ ವರನಿಗೆ/ವಧುವಿಗೆ ಬಿಳಿ ಕೊಡೆಯನ್ನು ಹಿಡಿದಿರಬೇಕು. ನಂತರ ತೆಓಗಿನ ಮರದ ಕೆಳಗೆ ಪೂರ್ವಾಭಿ ಮುಖವಾಗಿ ಗಂಗೆ ಪೂಜೆ ನೆರವೇರಿಸಿ ಬರುತ್ತಾರೆ. ತದನಂತರ ಚಪ್ಪರದ ಮುಂಭಾಗಕ್ಕೆ ಬಂದಾಗ ಮುತ್ತೈದೆಯರು ಐದು, ಏಳು ಅಥವಾ ಒಂಬತ್ತರಂತೆ ಆರತಿ ಮಾಡಿ ವರ/ವಧುವಿನ ಕಾಲು ತೊಳೆಯುವ ಕ್ರಮವಿದೆ. ಸ್ನಾನ ಮಾಡಿ ಬರುವ ಮುಂಚೆ ಹುಡುಗ/ಹುಡುಗಿಯ ಸೋದರ ಭಾವ ಅಥವಾ ಸಂಭಂದಿಕರು ನೆಲ್ಲಕ್ಕಿ ಅಡಿಯಲ್ಲಿ ಹಸೆ ಬರೆಯುವರು, ನಂತರ ಮುತ್ತೈದೆಯರಾದ ಐದು ಜನ ಅಕ್ಕಿಯಿಂದ ಕೆಳಗೆ ಹಸೆ ಬರೆದು ಐದು ಎಲೆ ಒಂದು ಅಡಿಕೆ ಇಟ್ಟು ಚಾಪೆ ಹಾಕಿ ಅದರ ಮೇಲೆ ಮಡಿ ವಸ್ತ್ರ ಹಾಕಿ ಕುಳಿತುಕೊಳ್ಳುವರು. ವಧು/ವರ ಬಂದು ನನಗೆ ನನ್ನ ಆಸ್ಥಾನ ಬಿಟ್ಟುಕೊಡಿ ಎಂದು ಹೇಳಿದ ಮೇಲೆ ಕುಳಿತವರಿಗೆ ಪಚ್ಚೆಯಲ್ಲಿ ಹೊದರಿ, ಕಾಯಿ, ಬಾಳೆಹಣ್ಣುಗಳನ್ನು ಕೊಟ್ಟು ಏಳಿಸುವರು.
ಕುಲದೇವರಿಗೆ ಹರಿಕೆ ಹಣ ಕಟ್ಟುವುದು
[ಬದಲಾಯಿಸಿ]ವರ/ವಧುವನ್ನು ನಿಲ್ಲಿಸಿ ಒಂದು ಸಣ್ಣ ಪಚ್ಚೆಯಲ್ಲಿ ಹೊದರಿ, ಬಾಳೆಹಣ್ಣು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ೨ ಓಟೆ ಗುತ್ತಿ, ೨ ಕೋಲು, ಮಾವಿನೆ ಎಲೆ, ಒಳ್ಳೆಮೆಣಸು, ೨೫ ಪೈಸೆಯ ಒಂದು ನಾಣ್ಯ ಶೇಖರಿಸಿಟ್ಟುಕೊಂಡು "ಹತ್ತು ಕುಟುಂಬ ಹದಿನೆಂಟು ಗೋತ್ರ ಕುಲಸ್ಥರ ಸಭೆಯಲ್ಲಿ ನೆಲ್ಲಕ್ಕಿ ಅಡಿಯಲ್ಲಿ ಕುಲದೇವರಿಗೆ ಹರಿಕೆ ಹಣ ಕಟ್ಟುವಂತವೇ" ಎಂದು ಮೂರು ಬಾರಿ ಕೂಗಿ ಹೇಳಿ ವರನ/ವಧುವಿನ ಕೈಯಿಂದ ಒಂದು ಒಟೆ ಗುತ್ತಿಗೆ, ೨೫ ಪೈಸೆ ನಾಣ್ಯವನ್ನು ಇನ್ನೊಂದಕ್ಕೆ ಒಳ್ಳೆಮೆಣಸನ್ನು ತುಂಬಿ ಅದಕ್ಕೆ ಮಾವಿನ ಎಲೆಯಿಂದ ಮುಚ್ಚಿ ಕೋಲಿನಿಂದ ಜಡಿದು ತೆಂಗಿನ ಕಾಯಿಯನ್ನು ಒಡೆದು ನೀರು ಹಾಕಿ ಶುದ್ಧ ಮಾಡಿ ತೆಂಗಿನ ಒಡೆಗಳನ್ನು ಅಂಗಾತ ಇಟ್ಟು ಬಾಳೆಹಣ್ಣು ಗಂಧದ ದೂಪ ಕೊಟ್ಟು ಹರಿಕೆ ಹಣ ಕಟ್ಟಿದ ಓಟೆ ಗುತ್ತಿಗೆಯನ್ನು ಮನೆ ಯಜಮಾನರಲ್ಲಿ ಕೊಡುವರು. ಅವರು ಅದನ್ನು ಅಟ್ಟದಲ್ಲಿ ಮುಡಿಪು ಕಟ್ಟಿರುವ ಸ್ಥಳದಲ್ಲಿ ಇಟ್ಟು ಬರುವರು. ನಂತರ ಒಕ್ಕಣೆ(ಹತ್ತು ಕುಟುಂಬ ಹದಿನೆಂಟು ಗೋತ್ರ) ಹೇಳಿ ವಧು-ವರರನ್ನು ಕೂರಿಸಿ ಹಾಲು ತುಪ್ಪದ ಶಾಸ್ತ್ರ, ಮದರಂಗಿ ಶಾಸ್ತ್ರ, ಮಾಡಿ ಮುಗಿಸುವರು. ನಂತರ ರಾತ್ರಿ ಪೆಟ್ಟಿಗೆ ತುಂಬಿಸುವ ಕ್ರಮವಿದೆ. ನಂತರ ಸೆರಗಿಗೆ ಹಣ ಕಟ್ಟುವ ಕ್ರಮ ಅಂದರೆ ವರ/ವಧುವಿನ ಮುಸುಕಿನ ವಸ್ತ್ರದ ತುದಿಗೆ ಬೆಳ್ಳಿ ರುಪಾಯಿಯನ್ನು ಸೋದರ ಮಾವ, ತಂದೆ ಮತ್ತು ತಾಯಿ ಕಟ್ಟುವುದು. ನಂತರ ವರ ವಧುವಿನ ಮನೆಗೆ ದಿಬ್ಬಣ ಹೋಗುವರು, ಆದರೆ ಈಗಿನ ಎಲ್ಲಾ ಮದುವೆಗಳು ಮಂಟಪಗಳಲ್ಲಿ ನದೆಯುವುದರಿಂದ ಮದುವೆ ಮಂಟಪಕ್ಕೆ ಉಭಯ ಕಡೆಯವರು ಬಂದು, ಬೆಳಗ್ಗಿನ ಜಾವ ಧಾರೆ ಕಾರ್ಯಕ್ರಮ ನೆರವೇರುವುದು. ನಂತರ ಮಾಂಗಲ್ಯ(ತಾಳಿ) ಕಟ್ಟುತ್ತಾರೆ, ಇದಕ್ಕೆ ಮೊದಲು ಹತ್ತು ಹಲವು ಶಾಸ್ತ್ರಗಳು ಇವೆ. ನಂತರ ಅಕ್ಕಿ ಶಾಸ್ತ್ರವಿದ್ದು ವಧು-ವರರ ಬಂಧುಗಳು, ನೆಂಟರು ವಧು-ವರರಿಗೆ ಶುಭಕೋರಿ ಆಶೀರ್ವಧಿಸುವರು. ಇದಾದ ನಂತರ ಊಟೋಪಚಾರ ಮುಗಿದ ಮೇಲೆ ಹೆಣ್ಣು ಇಳಿಸಿ ಕೊಡುವ ಕ್ರಮವಿದೆ. ಇದಾದ ನಂತರ ಗೊತ್ತು ಮಾಡಿದ ಸಮಯದಲ್ಲಿ ಆರತಿ ಮುಖಾಂತರ ವಧುವನ್ನು ವರನ ಮನೆಗೆ ತುಂಬಿಸಿಕೊಳ್ಳುತ್ತಾರೆ. ವರನ ಮನೆಯಲ್ಲಿ ನಾಗೋಳಿ ಶಾಸ್ತ್ರವನ್ನು ಮಾಡುತ್ತಾರೆ. ನಾಗೋಳಿ ಶಾಸ್ತ್ರವೆಂದರೆ ಮೊದಲು ವಧುವು ವರನ ಜೊತೆಗೂಡಿ ಕುಕ್ಕೆಯಲ್ಲಿ ಗೋವಿನ ಸೆಗಣಿ ಗೊಬ್ಬರವನ್ನು ತುಂಬಿಸಿ ಇದರೊಂದಿಗೆ ಮಾವಿನ ಮರದ ಗೆಲ್ಲನ್ನು ತೆಗೆದುಕೊಂಡು ಗದ್ದೆಗೆ ಹೋಗಿ ಅಲ್ಲಿ ಕುಕ್ಕೆಯಲ್ಲಿರುವುದನ್ನು ಹಾಕಿದ ನಂತರ ಹಿಂತಿರುಗಿ ಮನೆಗೆ ಬರುವಾಗ ವಧುವು ಬಿಂದಿಗೆಯಲ್ಲಿ ನೀರು ತರುವರು. ನೀರು ತರುವಾಗ ಬಾಗಿಲು ತಡೆಯುವ ಕ್ರಮವಿದೆ. ಈ ನೀರಿನಿಂದ ಧಾರೆಗೆ ಮುಂಚೆ ವಧುವಿಗೆ ಕಟ್ಟಿದ್ದ ಮಡಿಲಕ್ಕಿಯಲ್ಲಿ ಪಾಯಸ ಮಾಡಿ ಮೊದಲು ವರನಿಗೆ ಬಡಿಸಿ ನಂತರ ವಧುವು ಬಡಿಸೆಕೊಂಡು ಅವರಿಬ್ಬರು ಊಟ ಮಾಡುತ್ತಾರೆ, ಅವರ ಜೊತೆಗೆ ಅಲ್ಲಿ ಉಪಸ್ಥಿತರಿರುವರೆಲ್ಲರು ಊಟ ಮಾಡುತ್ತಾರೆ. ಇದಾದ ನಂತರ ವಿವಾಹವಾದ ಮೂರು, ಐದು ಅಥವಾ ಎಂಟನೇ ದಿನಕ್ಕೆ ಮದುಮಗಳು ತನ್ನ ಗಂಡನ ಮನೆಯಿಂದ ತವರು ಮನೆಗೆ ತುಪ್ಪ ತೆಗೆದುಕೊಂಡು ಹೋಗುವ ಕ್ರಮವಿದೆ. ಇಲ್ಲಿಗೆ ಮದುವೆ ಸಮಾರಂಭದ ಎಲ್ಲಾ ಪದ್ದತಿಗಳು ಮುಕ್ತಾಯಗೊಳ್ಳುತ್ತದೆ.
ಅಂತ್ಯಕ್ರಿಯೆ
[ಬದಲಾಯಿಸಿ]ಕುಟುಂಬದಲ್ಲಿ ಯಾರಾದರು ಸಾವನಪ್ಪಿದ್ದಲ್ಲಿ ತೆಂಗಿನ ಕಾಇಯನ್ನು ಒಡೆದು ಅದರ ನೀರನ್ನು ಅವರಿಗೆ ಕುಡಿಸುವರು. ನಂತರ ಅವರನ್ನು ಸ್ನಾನ ಮಾಡಿಸಿ ಐನ್‍ಮನೆಯ ಕೈಯಾಲೆಯಲ್ಲಿ ಮಲಗಿಸುವರು. ಶವದ ಬಲ ಬದಿಯಲ್ಲಿ ಕೂಸ್‍ಲಕ್ಕಿ ಮತ್ತು ಎಡ ಬದಿಯಲ್ಲಿ ಕೂಸಲು ಬತ್ತ ಇಡುವರು.
ಬಾಯಿಗೆ ನೀರು ಕೊಡುವುದು
[ಬದಲಾಯಿಸಿ]ಪ್ರತಿಯೊಬ್ಬರು ಶವದ ತಲೆಗೆ ೩ ಸುತ್ತು ತಂದು ೩ ಬಾರಿ ಬಾಯಿಗೆ ನೀರುಕೊಡುವರು. ನಂತರ ಬಿದಿರಿನಿಂದ ಚಟ್ಟವನ್ನು ತಯಾರಿಸಿ ಶವವನ್ನು ಅದರಲ್ಲಿ ಮಲಗಿಸಿ ಸುಡ್ಗುಳಿ(ರಂಗಭೂಮಿ)ಗೆ ತಗೊಂಡು ಹೂಗಿ ಅಲ್ಲಿ ಸುಡುವರು.
ಶುದ್ಧ
[ಬದಲಾಯಿಸಿ]ಮಾರನೇ ದಿನ ಶುದ್ಧ ಕಾರ್ಯ ನೆರವೇರುತ್ತದೆ. ಇದರಲ್ಲಿ ಮನೆಯ ಗಂಡು ಮಕ್ಕಳು ತಲೆ ಕೂದಲು ತೆಗಿಸುತ್ತಾರೆ. ನಂತರ ಸ್ನಾನ ಮಾಡಿ ಸ್ಮಶಾನಕ್ಕೆ ಹೋಗಿ ಬರುವರು. ತಿಥಿ: ವ್ಯಕ್ತಿ ಸತ್ತ ೧೧ನೇ ದಿನಕ್ಕೆ ತಿಥಿ ಕಾರ್ಯ ಮಾಡುತ್ತಾರೆ. ಮುಂಜಾನೆ ಕೋಳಿ ಕೂಗುವ ಹೊತ್ತಿಗೆ ಎದ್ದು ಸತ್ತವರ ಹೆಸರಿನಲ್ಲಿ ಎಡೆ ಇಡುತ್ತಾರೆ. ೧೬ನೇ ದಿನ ಐನ್‍ಮನೆಯಲ್ಲಿ ಕೊಲೆಗಳಿಗೆ ಕೊಡುವುದು. ೪೮ನೇ ದಿನ ಕಾವೇರಿ ನದಿಯಲ್ಲಿ ಪಿಂಡ ಹಾಕುವುದು.
ಉಲ್ಲೆಖನಗಳು
[ಬದಲಾಯಿಸಿ]