ವಿಷಯಕ್ಕೆ ಹೋಗು

ಕ್ಲೋನಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಯಿ ಜೀವಿಯ ಅನುವಂಶಿಕ ಗುಣಗಳೆಲ್ಲವನ್ನು ಅದೇ ರೀತಿ ಪಡೆದಿರುವ ಮರಿ ಜೀವಿ-ಕ್ಲೋನ್. ಸಸ್ಯ ಅಥವಾ ಪ್ರಾಣಿಯ ಕೋಶಗಳಿಂದ ಕ್ಲೋನನ್ನು ಪಡೆಯುವ ಪ್ರಕ್ರಿಯೆ - ಕ್ಲೋನಿಂಗ್ (ತದ್ರೂಪಿ ಸೃಷ್ಟಿ). ಮೈಟಾಸಿಸ್ ಕೋಶ ವಿಭಜನೆಯಿಂದ ಉಂಟಾಗುವ ಮರಿಕೋಶಗಳು ನೂರಕ್ಕೆ ನೂರು ತಾಯಿ ಕೋಶವನ್ನು ಹೋಲುತ್ತವೆ. ಹಾಗೆಯೇ ಏಕಕೋಶ ಜೀವಿಗಳಲ್ಲಿ ಸಂತಾನೋತ್ಪತ್ತಿ ನಡೆಯುವುದೂ ಮೈಟಾಸಿಸ್ ನಿಂದ. ಆದುದರಿಂದ ಈ ರೀತಿ ಉಂಟಾದ ಎಲ್ಲ ಮರಿಕೋಶಗಳೂ ಒಂದು ಇನ್ನೊಂದರ ಪಡಿಯಚ್ಚು; ತದ್ರೂಪಿಯೇ ಆಗಿದೆ. ಗುಲಾಬಿ, ದಾಸವಾಳಗಳನ್ನು ಗೆಲ್ಲುಗಳಿಂದಲೂ ಶುಂಠಿ, ಬಾಳೆಗಳನ್ನು ಗಡ್ಡೆಗಳಿಂದಲೂ ಪ್ರತ್ಯುತ್ಪಾದಿಸಿದಾಗ ದೊರೆಯುವ ಹೊಸ ಗಿಡಗಳು ಕ್ಲೋನ್ ಗಳೇ. ಆದುದರಿಂದ ಅನೇಕ ಸಸ್ಯಗಳಲ್ಲಿ ಕ್ಲೋನಿಂಗ್ ಒಂದು ಸ್ವಾಭಾವಿಕ ಪ್ರತ್ಯುತ್ಪಾದನಾ ಕ್ರಿಯೆಯೇ ಆಗಿದೆ. ಆದರೆ ವಿಕಾಸಗೊಂಡ ಪ್ರಾಣಿಗಳಲ್ಲಿ ಹಾಗಲ್ಲ. ಒಂದು ವೇಳೆ ನಮ್ಮ ಸಾಕುಪ್ರಾಣಿಗಳಲ್ಲೋ ಅಥವಾ ಮಾನವರಲ್ಲೋ ಹೀಗಿರುತ್ತಿದ್ದರೆ ತುಂಡಾದ ಕೈ ಕಾಲುಗಳು ಹೊಸ ಜೀವಿಗಳಾಗಿ ಬೆಳೆಯುತ್ತಿದ್ದವು. ಮಾತ್ರವಲ್ಲ ಹೀಗೆ ಬೆಳೆದ ಜೀವಿಗಳು ತದ್ರೂಪಿಗಳಾಗುತ್ತಿದ್ದವು. ೧೯೯೭ರಲ್ಲಿ ಮೊದಲ ಬಾರಿಗೆ ಪ್ರಾಣಿಯೊಂದರಲ್ಲಿ ಕ್ಲೋನಿಂಗ್ ಅನ್ನು ಸಾಧಿಸಲಾಯಿತು - ಸ್ಕಾಟ್ ಲಂಡ್ ನ ಎಡಿನ್ ಬರ ಸಮೀಪದ ರೋಸ್ ಲಿನ್ ಇನ್ ಸ್ಟಿಟ್ಯೂಟ್ ನಲ್ಲಿ ಇಯಾನ್ ವಿಲ್ ಮುಟ್ ಎಂಬ ವಿಜ್ಞಾನಿಯ ತಂಡ ಕುರಿಯೊಂದರ ಕೋಶದಿಂದ ಕ್ಲೋನ್ ಅನ್ನು ಕೃತಕವಾಗಿ ಪಡೆದವು. ಮಾನವ ನಿರ್ಮಿತ ಈ ತದ್ರೂಪಿ ಕುರಿ ಮರಿಯನ್ನು 'ಡಾಲಿ' ಎಂದು ಕರೆದರು.

ಕುರಿಯ ಕ್ಲೋನಿಂಗ್ ನಲ್ಲಿ ನಡೆಸಿದ ಪ್ರಯೋಗದ ಹಂತಗಳು ಹೀಗಿವೆ :

[ಬದಲಾಯಿಸಿ]

ಹೆಣ್ಣು ಕುರಿಯೊಂದರ ಅಂಡದಿಂದ ನ್ಯೂಕ್ಲಿಯಸ್ಸನ್ನು ಹೊರ ತೆಗೆಯುವುದು, ಆರಿಸಿದ ಮತ್ತೊಂದು ಹೆಣ್ಣು ಕುರಿಯ ಕೆಚ್ಚಲಿನ ಜೀವಕೋಶದ ನ್ಯೂಕ್ಲಿಯಸ್ಸನ್ನು ಅಂಡದೊಳಕ್ಕೆ ಸ್ಥಾಪಿಸುವುದು, ಹೀಗೆ ಸಂಕರಗೊಂಡ ಕೋಶವನ್ನು ಪೋಷಣ ಮಾಧ್ಯಮದಲ್ಲಿಟ್ಟು ಭ್ರೂಣವಾಗುವಂತೆ ವಿಭಜನೆಗೆ ಅವಕಾಶ ಮಾಡುವುದು, ಸರಿಯಾದ ಹಂತಕ್ಕೆ ಬೆಳೆದಾಗ ಭ್ರೂಣವನ್ನು ಹೆಣ್ಣು ಕುರಿಯ ಗರ್ಭದಲ್ಲಿ ಇರಿಸುವುದು, ಗರ್ಭಾವಧಿಯ ಅನಂತರ ಹೆಣ್ಣು ಕುರಿಮರಿಯ ಜನನಕ್ಕೆ ಅನುವು ಮಾಡುವುದು - ಇವು ವಿಲ್ ಮುಟ್ ಅನುಸರಿಸಿದ ವಿಧಾನದ ಮುಖ್ಯ ಹಂತಗಳು. ವಿಲ್ ಮುಟ್ ಸಾಧನೆಯ ಅನಂತರ ಇತರ ಹಲವು ಪ್ರಾಣಿಗಳ ಕ್ಲೋನ್ ಗಳನ್ನು ಪಡೆದಿದ್ದಾರೆ. ಮನುಷ್ಯನ ಕ್ಲೋನ್ ನನ್ನು ಪಡೆಯುವ ಸಾಧ್ಯತೆ ಕೂಡ ನಿಚ್ಚಳವಾಗಿದೆ. ಕಾಡುಬೆಕ್ಕುಗಳ ಮರಿಗಳನ್ನು ಕ್ಲೋನಿಂಗ್ ನಿಂದ ಪಡೆದು ಹಾಗೆ ಪಡೆದ ಬೆಕ್ಕುಗಳು ಸಹಜವಾಗಿ ಮರಿಗಳನ್ನು ಪಡೆಯುವಂತೆ ಮಾಡಿದ ಪ್ರಯೋಗವನ್ನು ನ್ಯೂ ಆರ್ಲಿಯಾನ್ಸ್ ಅಮೆರಿಕನಲ್ಲಿರುವ ಆಡುಬಾನ್ ಸೆಂಟರಿನಲ್ಲಿ ನಡೆಸಿದ್ದಾರೆ. ವಿನಾಶಕ್ಕೆ ಒಳಗಾಗುತ್ತಿರುವ ಪ್ರಾಣಿ ಜಾತಿಗಳನ್ನು ರಕ್ಷಿಸಲು ಈ ಕ್ರಮನವನ್ನು ಕೈಗೊಂಡಿದ್ದಾರೆ.