ವಿಷಯಕ್ಕೆ ಹೋಗು

ಖಂಡಾವರಣ ವಲಯ ಮತ್ತು ಇಳುಕಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಂಡಾವರಣ ವಲಯ ಎನ್ನುವುದು ಭೂಖಂಡದ ಸುತ್ತ ಅಗಲವಾಗಿಯೂ ತುಸು ಇಳಿಜಾರಾಗಿಯೂ ಹೆಚ್ಚು ಕಡಿಮೆ ಉತ್ತಳ ನೀರಿನಲ್ಲಿ (shallow water) ಸಮುದ್ರದೊಳಗೆ ಚಾಚಿಕೊಂಡಿರುವ ನೆಲದ ಅಂಚು (ಕಾಂಟಿನೆಂಟಲ್ ಶೆಲ್ಫ್). ಈ ವಲಯದ ಅಂಚಿನಲ್ಲಿ ಇಳಿಜಾರು ತೀವ್ರವಾಗಿ ಏರಲು ಆರಂಭವಾಗುವುದು. ಇಂಥ ಅಂಚಿನಿಂದ ತೊಡಗಿ ಸಮುದ್ರದ ಮಹಾ ಆಳಗಳವರೆಗೆ ಹರಡಿರುವ ನೆಲ ಇಳುಕಲು (ಸ್ಲೋಪ್).[][] ಖಂಡಾವರಣ ವಲಯ ಮತ್ತು ಇಳುಕಲಿಗೆ ಒಟ್ಟಾಗಿ ಖಂಡವೇದಿಕೆ (ಕಾಂಟಿನೆಂಟಲ್ ಟೆರೇಸ್) ಎಂದು ಹೆಸರು. ಆದ್ದರಿಂದ ಖಂಡ ವೇದಿಕೆ ಎಂಬುದು ಕಡಲ ಕಿನಾರೆ ಅಂಚಿನಿಂದ ತೊಡಗಿ ಕಡಲೊಳಗೆ ಸುಮಾರು 2.5 ಮೈಲಿ (4 ಕಿ.ಮೀ.) ಆಳದವರೆಗೂ ಮುಳುಗಿರುವ ಪ್ರದೇಶ. ಖಂಡಾವರಣ ವಲಯದ ವ್ಯಾಪ್ತಿ ಜಲಗೋಳದ ಸುಮಾರು 8.3%. ಇದು ಸಾಮಾನ್ಯವಾಗಿ ಕರಾವಳಿಗೆ ಸಮಾಂತರವಾಗಿರುವುದಾದರೂ ಕೆಲವೆಡೆಗಳಲ್ಲಿ ಕರಾವಳಿಯಿಂದ ದೂರಸರಿದು ಹೋದಂತಿರುವುದೂ ಉಂಟು. ಖಂಡಗಳ ಸ್ಥಾನಪಲ್ಲಟದಿಂದ ನೆಲದ ಅಂಚಿನ ಪ್ರದೇಶ ನೀರಿನಲ್ಲಿ ಮುಳುಗಿಹೋದುದರಿಂದಲೂ, ನದಿಗಳು ತಮ್ಮಲ್ಲಿ ಒಯ್ದು ತಂದ ಶಿಲಾ ಕಳಪೆ ಸಮುದ್ರ ತಳವನ್ನು ಮುಚ್ಚಿಕೊಂಡಿರುವುದರಿಂದಲೂ ಖಂಡಾವರಣ ವಲಯಗಳು ನಿರ್ಮಾಣವಾದವು. ಈ ಭಾಗದಲ್ಲಿ ಸಮುದ್ರದ ಅಲೆಗಳೂ ಕಾರ್ಯವೆಸಗುವವು. ಆದ್ದರಿಂದ ಖಂಡಾವರಣ ವಲಯದಲ್ಲಿ ಏರುತಗ್ಗುಗಳೂ ಹಳ್ಳದಿನ್ನೆಗಳೂ ಉಂಟಾಗುತ್ತವೆ. ಕೆಲವು ಖಂಡಾವರಣಗಳ ಹೊರಭಾಗದಲ್ಲಿ ಆಳ ಕಡಿಮೆ ಇರುವ ತಟಗಳು ಇವೆ. ಖಂಡಾವರಣವಲಯ ಖನಿಜ ಸಂಪತ್ತಿನ, ಮುಖ್ಯವಾಗಿ ಕಲ್ಲೆಣ್ಣೆಯ ನೆಲೆಯಾಗಿದೆ ಎಂದು ಗೊತ್ತು ಹಚ್ಚಿರುವರು. ಈಗಾಗಲೇ ಉತ್ತರ ಅಮೆರಿಕದ ಕ್ಯಾಲಿಫೋರ್ನಿಯ ಮತ್ತು ಟೆಕ್ಸಾಸುಗಳ ಈ ವಲಯಭಾಗದಲ್ಲಿ ಕಲ್ಲೆಣ್ಣೆಯನ್ನು ಹೊರತೆಗೆಯಲಾಗುತ್ತಿದೆ. ಬಹುಶಃ ಭವಿಷ್ಯದ ಕಲ್ಲೆಣ್ಣೆ ಉತ್ಪನ್ನದ ಹೆಚ್ಚಿನ ಅಂಶ ಖಂಡಾವರಣವಲಯದಿಂದಲೇ ದೊರಕಬಹುದೆಂದು ಊಹೆ.

ಟಿಪ್ಪಣಿಗಳು

[ಬದಲಾಯಿಸಿ]
  1. Encyclopædia Britannica.
  2. Jackson 1997, "Continental slope".


ಉಲ್ಲೇಖಗಳು

[ಬದಲಾಯಿಸಿ]
  • Jackson, Julia A., ed. (1997). Glossary of geology (Fourth ed.). Alexandria, Virginia: American Geological Institute. ISBN 0922152349.
  • "shelf break – geology". Encyclopædia Britannica.