ವಿಷಯಕ್ಕೆ ಹೋಗು

ಗಂಜೀಫಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಜೀಫಾ ಎಲೆಯಲ್ಲಿ ದಶಾವತಾರದ ಚಿತ್ರಣ

ಗಂಜೀಫಾ - ಇದು ಇಸ್ಪೀಟ್ ಆಟವನ್ನು ಹೋಲುವಭಾರತದ ಒಂದು ಪ್ರಾಚೀನ ಆಟ. ೮-೧೦ ಶತಮಾನಗಳ ಹಿಂದೆ ಭಾರತದಲ್ಲಿ ಅಸ್ತಿತ್ವದಲ್ಲಿತ್ತು. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದುದಾಗಿದೆ.

೩ರಿಂದ ೩.೫ ಇಂಚು ವ್ಯಾಸವುಳ್ಳ ವೃತ್ತಾಕಾರದ ಎಲೆಗಳನ್ನು(ಕಾರ್ಡ್) ಇದಕ್ಕೆ ಉಪಯೋಗಿಸಲಾಗುತ್ತದೆ. ಒಂದು ಬದಿಯಲ್ಲಿ ಸಾಂಕೇತಿಕವಾಗಿ ಬರೆದ ಒಂದು ಚಿತ್ರವಿರುತ್ತಿತ್ತು. ಇನ್ನೊಂದು ಬದಿ ಖಾಲಿ. ಇದರಲ್ಲಿ ೯೬ - ೩೬೦ ಎಲೆಗಳನ್ನು ಬಳಸಿ ಆಡುವ ವಿವಿಧ ರೀತಿಯ ಆಟಗಳಿರುತ್ತಿದ್ದವು. ಆಟದ ಪದ್ಧತಿಗೆ ಹೊಂದಿಕೊಂಡು ಅದರ ಮೇಲೆ ಚಿತ್ರಗಳಿರುತ್ತವೆ. ಪೌರಾಣಿಕ ವ್ಯಕ್ತಿಗಳು, ಸಾಮಾಜಿಕ, ಹೆಣ್ಣು, ಹೂ, ಪ್ರಾಣಿಗಳು ಮುಂತಾದ ಚಿತ್ರಗಳನ್ನು ಚಿತ್ರಿಸಲಾಗಿರುತ್ತಿತ್ತು. ದಂತದಿಂದ ಮಾಡಿದ ಎಲೆಗಳನ್ನು ಆಟಕ್ಕೆ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮೊಗಲ್ ಚಕ್ರವರ್ತಿ ಬಾಬರ್ ೧೫೨೭ ರಲ್ಲಿ ದಂತದ ಎಲೆಗಳನ್ನು ಬಹುಮಾನವಾಗಿ ಕೊಟ್ಟನೆಂದು ಇತಿಹಾಸದಲ್ಲಿ ಉಲ್ಲೇಖವಿದೆ. ಮೊಗಲ್ ದೊರೆಗಳು ಗಂಜಿಫಾ ಎಂಬ ಎಲೆಗಳ ಆಟವನ್ನು ಜನಪ್ರಿಯಗೊಳಿಸಿದ್ದರು.

ಪರ್ಷಿಯಾದ ಗಂಜೀಫಾ ಎಲೆಗಳು

ಗಂಜೀಫಾ ಕಲಾವಿದರೆಂದೇ ಖ್ಯಾತರಾಗಿರುವ ರಘುಪತಿ ಭಟ್ ಎಂಬುವವರು ಶ್ರೀರಂಗಪಟ್ಟಣದಲ್ಲಿ ಇಂಥ ಎಲೆಗಳ ಸಂಗ್ರಹಾಲಯ ತೆರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ರಘುಪತಿ ಭಟ್ ಅವರು ಯುರೋಪಿನ ಕೆಲವು ದೇಶಗಳಲ್ಲಿ ಗಂಜೀಫಾ ಕಲಾ ಪ್ರದರ್ಶನವನ್ನು ನಡೆಸಿದ್ದಾರೆ.

ಗಂಜೀಫು- ಇಸ್ಪೀಟಿನಂಥ ಒಂದು ಆಟ. ಇದಕ್ಕೆ ಛದ್ ಎಂಬ ಇನ್ನೊಂದು ಹೆಸರೂ ಇದೆ. ಬಾಬರ್ ನಾಮ, ಐನೆ ಅಕ್ಬರಿ, ಕಾಬೂನೆ ಇಸ್ಲಾಮ್, ಗಿರಿಧರ ಕೃತ ಗಂಜೀಫ್ ಲೇಖನ, ಶ್ರೀತತ್ತ್ವನಿಧಿ ಇತ್ಯಾದಿ ಗ್ರಂಥಗಳಲ್ಲಿ ಇದರ ವರ್ಣನೆಯಿದೆ. ಆಟದ ಪ್ರಕಾರ ಮತ್ತು ವಿವರಣೆಗಳಲ್ಲಿ ಒಂದು ಗ್ರಂಥಕ್ಕೂ ಇನ್ನೊಂದು ಗ್ರಂಥಕ್ಕೂ ವ್ಯತ್ಯಾಸವಿದೆ. 96 ಎಲೆಗಳನ್ನು ಉಪಯೋಗಿಸಿಕೊಂಡು ಆಡುವ ಆಟಗಳಲ್ಲಿ ಚಂಗ್, ಬರಾತ್, ಕಿಮಾಸ್, ಪಮ್‍ಶೇರ್ ಇತ್ಯಾದಿಯಾಗಿ ಎಂಟು ಪ್ರಕಾರಗಳಿವೆ. ಶ್ರೀ ತತ್ತ್ವನಿಧಿ ಗ್ರಂಥದ 9ನೆಯ ನಿಧಿಯಾದ ಕೌತುಕ ನಿಧಿಯಲ್ಲಿ ಇದರ ಉಲ್ಲೇಖವಿದ್ದು ಚಾಮುಂಡೇಶ್ವರಿ, ಜಗನ್ಮೋಹನ, ನವೀನ ದಶಾವತಾರ, ನವಗ್ರಹ, ಪಂಚಪಾಂಡವ, ಅಸ್ಟೈಶ್ವರ್ಯ, ಕಲ್ಯಾಣ, ಅಷ್ಟಸಿದ್ಧಿ ಮುಂತಾಗಿ ಗಂಜೀಫಿನ ಹದಿಮೂರು ಪ್ರಕಾಗಳ ಉಲ್ಲೇಖವಿದ್ದು ಪ್ರಾರಂಭದಲ್ಲಿ ಬರುವ ಸಾಮ್ರಾಜ್ಯ ಪೇಟಿಕಾ ಗಂಜೀಫಿನ ವಿಭಾಗದಲ್ಲಿ ಚಾಮುಂಡೇಶ್ವರಿ, ಜಗನ್ಮೋಹನಿ, ದಶಾವತಾರ, ಅಸ್ಟೈಶ್ವರ್ಯ, ಕಲ್ಯಾಣ, ಅಷ್ಟಸಿದ್ಧಿ. ಸಾರ ಸಂಗ್ರಹ ಎಂಬ ಏಳು ಪ್ರಕಾರಗಳನ್ನೂ ಆಡುವ ಕ್ರಮಗಳನ್ನು ವಿವರಿಸಲಾಗಿದೆ.

ಸಾಮ್ರಾಜ್ಯ ಪೇಟಿಕಾ ಗಂಜೀಫಿನ ನಿರ್ಮಾಣಕ್ರಮವನ್ನು ಸಂಸ್ಕøತ ಶ್ಲೋಕದಲ್ಲಿ ಕೊಟ್ಟು ಅದರ ವಿವರಗಳನ್ನು ಕನ್ನಡದಲ್ಲಿ ಹೇಳಿದೆ. ಆ ವಿವರ ಈ ರೀತಿ ಇದೆ.

ಆಟಕ್ಕೆ ಒಟ್ಟು 636 ಎಲೆಗಳು ಬೇಕು. ಇದರಲ್ಲಿ ಬಾಜು 30 ಮತ್ತು ದರ 18 ಮೇರೆಗೆ 540 ಎಲೆಗಳು (ವಿವರ ಮುಂದೆ ನೀಡಿದೆ) ಮತ್ತು ಚಕ್ರವರ್ತಿ ಎಲೆ 64, ಗಿಣಿ ಎಲೆ 11, ಹಂಸ ಎಲೆ 7, ನವಿಲು ಎಲೆ 7, ಚೇಟಿಕಾ ಸ್ತ್ರೀಯರ ಎಲೆ 7-ಈ ರೀತಿ ಒಟ್ಟು 96 ಎಲೆಗಳಿರುತ್ತವೆ. ಅಂದರೆ 30(18=540+64+11+7+7+7=636. ಬಾಜು 30 ಮತ್ತು ದರ 18ರ ಎಲೆಗಳ ವಿವರ ಈ ರೀತಿ ಇದೆ ಬಾಜು 30 ಎಂದರೆ ಚಾಮುಂಡೇಶ್ವರಿ, ವಿಷ್ಣು, ಈಶ್ವರ, ವಿನಾಯಕ ಇತ್ಯಾದಿ 30 ದೇವತೆಗಳ ಹೆಸರಿನಲ್ಲಿರುವಂಥವು. ಈ ಒಂದೊಂದು ಬಾಜುವಿನಲ್ಲೂ ತಲಾ 18 ದರ ಎಲೆಗಳಿರುತ್ತವೆ. ಪ್ರತಿ ಹದಿನೆಂಟು ಎಲೆಗಳಲ್ಲಿ 6 ಹುಕುಮಿ ಎಲೆಗಳು. 12 ಖರ್ಚಿ ಎಲೆಗಳು. ಚಾಮುಂಡೇಶ್ವರಿ ಬಾಜುವಿನ ಹುಕುಮಿ ಎಲೆಗಳ ವಿವರ ಹೀಗಿದೆ: ಮೊದಲ ಎಲೆಯಲ್ಲಿ ಚಾಮುಂಡೇಶ್ವರಿ, ಎರಡನೆಯ ಎಲೆಯಲ್ಲಿ ಸಿಂಹದ ಮೇಲೆ ಕುಳಿತಿರುವ ರಾಣಿ, ಮೂರನೆಯ ಎಲೆಯಲ್ಲಿ ರಥಾರೂಢನಾದ ಮಂತ್ರಿ. ನಾಲ್ಕನೆಯ ಎಲೆಯಲ್ಲಿ ಅಶ್ವಾರೂಢನಾದ ಸೇನಾಪತಿ, ಐದನೆಯ ಎಲೆಯಲ್ಲಿ ಚೌಕಿನ ಮೇಲೆ ಕುಳಿತ ಪದಾತಿ, ಆರನೆಯ ಎಲೆಯಲ್ಲಿ ಬುರುಜಿನ ಮೇಲೆ ಧ್ವಜಹಿಡಿದು ಕುಳಿತಿರುವ ದೇವತೆ-ಇವರ ಚಿತ್ರಗಳು ಅದೇ ಬಾಜುವಿನ ಉಳಿದ ಖರ್ಚಿ ಎಲೆ 12ರಲ್ಲೂ ಚಾಮುಂಡೇಶ್ವರಿ ಚಿತ್ರವಿದ್ದು ಅದರ ಕೆಳಗೆ ಮೇಷ, ವೃಷಭ, ಮಿಥುನ, ಕರ್ಕಾಟಕ ಇತ್ಯಾದಿ 12 ರಾಶಿಗಳ ಲಾಂಛನವನ್ನು ಎಲೆಗೊಂದರಂತೆ ಚಿತ್ರಿಸಲಾಗಿರುತ್ತದೆ. ಉಳಿದ 29 ಬಾಜುಗಳಿಗೆ ವಿಷ್ಣು ಈಶ್ವರ, ವಿಘ್ನೇಶ್ವರ ಇತ್ಯಾದಿ 29 ದೇವತೆಗಳ ಚಿತ್ರವಿದ್ದು ಇಲ್ಲಿಯೂ ಪ್ರತಿಯೊಂದಕ್ಕೂ 6 ಹುಕುಮಿ ಎಲೆ 12 ಖರ್ಚಿ ಎಲೆಗಳಿರುತ್ತವೆ. ಇಲ್ಲಿಯ ವೈಶಿಷ್ಟ್ಯವೆಂದರೆ ಆಯಾಯಾದೇವತೆಗಳು ಆನೆಯ ಮೇಲೆ ಕುಳಿತಿರುವಂತೆ ಚಿತ್ರಿತವಾಗಿರುತ್ತದೆ. ಅವರವರ ರಾಣಿಯರು ಪಲ್ಲಕ್ಕಿಯಲ್ಲೂ ಮಂತ್ರಿಗಳು ರಥದಮೇಲೂ ಸೇನಾಪತಿಗಳು ಕುದುರೆಯ ಮೇಲೂ ಪದಾತಿಗಳೂ ಚೌಕಿಯಮೇಲೂ ಧ್ವಜವನ್ನು ಹಿಡಿದಿರುವ ದೇವತೆಗಳು ಕೋಟೆ ಬುರುಜಿನ ಮೇಲೂ ಇರುತ್ತಾರೆ. ಖರ್ಚಿ ಎಲೆಗಳಲ್ಲಿ ಆಯಾ ಪ್ರಧಾನದೇವತೆಗಳು ಅವುಗಳ ಅಡಿ ಎಲೆಗೊಂದರಂತೆ ಮೇಷಾದಿಗಳು ಚಿತ್ರಿತವಾಗಿರುತ್ತವೆ.

ಉಳಿದ 96 ಎಲೆಗಳ ವಿಷಯ ಹೀಗಿದೆ: ಸುಲಭವಾಗಿ ಗುರುತಿಸಲು ಈ ಎಲೆಗಳ ಅಂಚಿನಲ್ಲಿ ಚಿಹ್ನೆಯೊಂದನ್ನು ತೋರಿಸಲಾಗಿರುತ್ತದೆ. 64 ಚಕ್ರವರ್ತಿ ಎಲೆಗಳಿಗೆ ರಾಜರಾಜೇಶ್ವರಿ, ಕಾಳಿ, ಲಕ್ಷ್ಮೀ, ಸರಸ್ವತಿ, ಬ್ರಾಹ್ಮೀ, ವೈಷ್ಣವಿ, ಇಂದ್ರಾಣಿ, ದಂಡಿನಿ, ಮಂತ್ರಿಣಿ, ಯೋಗನಿದ್ರಾ, ಬಾಲಾ, ಭುವನೇಶ್ವರ ಇತ್ಯಾದಿ 64 ದೇವತೆಗಳ ಲಾಂಛನವಿರುತ್ತದೆ. ಉಳಿದವು ಗಿಣಿ ಎಲೆ 11, ಹಂಸ ಎಲೆ 7, ನವಿಲು ಎಲೆ 7, ಚೇಟಿಕಾಸ್ತ್ರೀಯರ ಎಲೆ 7. ಈ ರೀತಿಯಾಗಿ ರಚಿಸಿದ 636 ಎಲೆಗಳನ್ನು ಇಟ್ಟುಕೊಂಡು 3,4,6, ಜನರು ಕುಳಿತು ಆಡಬಹುದು. ಸಾಮ್ರಾಜ್ಯಪೇಟಿಕಾ ಗಂಜೀಫಿನಲ್ಲಿ ಹಗಲು ಮತ್ತು ರಾತ್ರಿ ಎರಡರ ಆಟದಲ್ಲೂ ಚಾಮುಂಡೇಶ್ವರಿಯೇ ಅಧಿದೇವತೆಯಾಗಿರುತ್ತಾಳೆ. ಆದ್ದರಿಂದ ಆ ಎಲೆ ಇರುವವನೇ ಆಟವನ್ನು ಪ್ರಾರಂಭಿಸುತ್ತಾನೆ.

ಹೆಚ್ಚು ಬಳಕೆಯಿರುವ ದಶಾವತಾರೀ ಗಂಜೀಫು ಆಟದ ವಿವರ ಈ ರೀತಿಯಿದೆ: ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ ಬುದ್ಧ ಮತ್ತು ಕಲ್ಕಿ-ಈ ಹತ್ತು ಅವತಾರಗಳಿಗೆ ಪ್ರತಿಯೊಂದಕ್ಕೂ, ರಾಜಾ, ವಜೀರ್ ಮತ್ತು ಎಕ್ಕಾದಿಂದ ಹತ್ತು ಈ ಪ್ರಕಾರ 12 ಎಲೆಗಳನ್ನು ಸೇರಿಸಿ ಒಟ್ಟು 120 ಎಲೆಗಳನ್ನು ಉಪಯೋಗಿಸುತ್ತಾರೆ. ಮೂರು ಜನ ಆಟಗಾರರು ಸರತಿಯಂತೆ ಎಲೆಗಳನ್ನು ಹಂಚಿಕೊಳ್ಳುತ್ತಾರೆ, ಹಗಲಿನಲ್ಲಿ ಆಟ ಪ್ರಾರಂಭಿಸಿದರೆ ಯಾರ ಕೈಯಲ್ಲಿ ರಾಮ-ರಾಜಾ ಎಲೆ ಬಂದಿರುತ್ತದೋ ಅವನು ಆಟವನ್ನು ಮೊದಲು ಪ್ರಾರಂಭಿಸುತ್ತಾನೆ. ಆತನಿಗೆ ಸುಕ್ರ್ಯಾ ಎಂದು ಹೆಸರು. ಆತ ಪ್ರಥಮವಾಗಿ ರಾಮ-ರಾಜಾ ಮತ್ತು ಅದೇ ವರ್ಗದ ಇನ್ನೊಂದು ಕಡಿಮೆ ಬೆಲೆಯ (ಹಲ್ಕಾ) ಎಲೆಯನ್ನು ಇಳಿಸುತ್ತಾನೆ. ಉಳಿದ ಆಟಗಾರರು ತಮ್ಮ ಕೈಯಲ್ಲಿದ್ದ ಎರಡೆರಡು ಹಲ್ಕಾ ಎಲೆಗಳನ್ನು ಮೊದಲಿನ ಎಲೆಯ ಮೇಲೆ ಇಳಿಸುತ್ತಾರೆ. ಈ ಪ್ರಕಾರ ಬಿದ್ದ ಆರು ಎಲೆಗಳನ್ನು ಸುಕ್ರ್ಯಾ ಹೊಂದುತ್ತಾನೆ. ಇದೇ ರೀತಿ ತನ್ನಲ್ಲಿ ಹುಕುಮಿ ಎಲೆಗಳಿರುವವರೆಗೂ ಆಡಿ ಅನೇಕ ಎಲೆಗಳನ್ನು ಪಡೆಯುತ್ತಾನೆ. ಒಬ್ಬನ ಆಟ (ಡಾವ್) ಮುಗಿದ ಅನಂತರ ಇನ್ನೊಬ್ಬ ಆಟಗಾರ ತನ್ನಲ್ಲಿರುವ ಹುಕುಮಿ ಎಲೆಗಳಿಂದ ಆಟ ಆರಂಭಿಸಿ ಉಳಿದವರಿಂದ ಎಲೆಗಳನ್ನು ಪಡೆಯುತ್ತಾ ಹೋಗುತ್ತಾನೆ. ಕೊನೆಯಲ್ಲಿ ಹೆಚ್ಚಿನ ಎಲೆಗಳನ್ನು ಯಾರು ಪಡೆಯುತ್ತಾರೊ ಅವರು ಗೆದ್ದಹಾಗೆ. ಗಂಜೀಫು ಆಟಗಳ ವಿಧಾನ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಭಾರತದಲ್ಲಿ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಈ ಆಟ ಈಗ ತುಂಬ ವಿರಳವಾಗಿದೆ. ಇದರ ಮಾದರಿ ಎಲೆಗಳನ್ನು ಮೈಸೂರಿನಲ್ಲಿನ ಜಗನ್ಮೋಹನ ಅರಮನೆಯ ಕಲಾಶಾಲೆಯಲ್ಲೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಸ್ತುಸಂಗ್ರಹಾಲಯದಲ್ಲೂ ಕಾಣಬಹುದು. ಗಂಜೀಫು ಶೈಲಿಯಲ್ಲಿ ಚಿತ್ರಗಳನ್ನು ರಚಿಸುವ ಕರ್ನಾಟಕದ ರಘುಪತಿ ಭಟ್ ಅವರಿಗೆ 'ಸಿದ್ಧಹಸ್ತಶಿಲ್ಪಿ ಪ್ರಶಸ್ತಿ ದೊರೆತ ಮೇಲೆ ಗಂಜೀಫು ಶೈಲಿಯೂ ಚಿತ್ರಕಲಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ವಿದೇಶ ಪ್ರವಾಸಿಗರು ಕರ್ನಾಟಕದಲ್ಲಿ ಕೊಳ್ಳುವ ಸ್ಮರಣಿಕೆಗಳಲ್ಲಿ ಗಂಜೀಫು ಎಲೆಗಳು ಸೇರಿವೆ. *


ಲಕ್ಷ್ಮಣವಾಲಿಯ ಹೆಂಡತಿಯಾದ ತಾರಾಳನ್ನು ಭೇಟಿಯಾಗುತ್ತಿರುವ ರಾಮಾಯಣ ಕಾಲದ ಪೌರಾಣಿಕ ಚಿತ್ರವನ್ನು ಹೊಂದಿರುವ ಗಂಜೀಫಾ ಎಲೆ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಗಂಜೀಫಾ&oldid=1272516" ಇಂದ ಪಡೆಯಲ್ಪಟ್ಟಿದೆ