ಗಂದಿಗ
ಗಂದಿಗ ಎಂದರೆ ಔಷಧ ಸಾಮಗ್ರಿಗಳನ್ನು ಅಂಗಡಿಯಲ್ಲಿಟ್ಟುಕೊಂಡು ಮಾರುವ ಕಸಬುದಾರ (ಅಪಾತಿಕರಿ).
ಗಂದಿಗನ ಉಗಮ
[ಬದಲಾಯಿಸಿ]ಭಾರತದಲ್ಲಿ ಈ ಕಸಬು ಬಹುಶಃ ಸುಮಾರು 200-300 ವರ್ಷಗಳಿಂದೀಚೆಗೆ ಹುಟ್ಟಿಕೊಂಡಿತೆಂದು ಕಾಣುತ್ತದೆ. ಇದಕ್ಕೆ ಪೂರ್ವದಲ್ಲಿ ಔಷಧ ಸಾಮಾಗ್ರಿಗಳ ಮಾರಾಟವೇ ಇರಲಿಲ್ಲ. ಮೊದಲಿನಿಂದಲೂ ಔಷಧಸಾಮಗ್ರಿಗಳನ್ನು ಮುಖ್ಯವಾಗಿ ಗಿಡಮೂಲಿಕೆಗಳನ್ನು, ವೈದ್ಯನೇ ಹುಡುಕಿ ತರಬೇಕಾಗಿತ್ತು. ಅದಕ್ಕೆ ಬೇಕಾದ ಪರಿಚಯಜ್ಞಾನ, ಕಾಲದೇಶ ವರ್ತಮಾನಗಳ ಅರಿವು, ಸಂಗ್ರಹಿಸಿ ಇಡಲು ಅನುಸರಿಸಬೇಕಾದ ವಿಧಗಳ ತಿಳಿವಳಿಕೆ-ಇವೆಲ್ಲ ಸಿದ್ಧಿಸಿರುವ ವೈದ್ಯ ಮಾತ್ರ ಈ ಕೆಲಸ ಮಾಡಬಹುದಾಗಿದ್ದು ಒಂದು ಔಷಧಿಯನ್ನು ತಯಾರು ಮಾಡಬೇಕಾಗಿ ಬಂದಾಗ ಮಾತ್ರ ಅದಕ್ಕೆ ಬೇಕಾದ ಸಾಮಗ್ರಿಗಳ ಶೇಖರಣೆಗೆ ವೈದ್ಯನೇ ತೊಡಗುತ್ತಿದ್ದ. ಅನೇಕ ವೇಳೆ ಶೇಖರಿಸಿಟ್ಟಿದ್ದ ಸಾಮಗ್ರಿಗಳು ದಿನಕಳೆದಂತೆ ಅನುಪಯುಕ್ತವಾಗಬಹುದಾದ್ದರಿಂದ ಅನಿವಾರ್ಯವಾದ ಹೊರತು ಹಾಗೆ ಸಾಮಗ್ರಿಗಳನ್ನು ಶೇಖರಿಸಿಕೊಟ್ಟುಕೊಳ್ಳವುದಕ್ಕೆ ಆತ ಹೋಗುತ್ತಿರಲಿಲ್ಲವೆಂದು ತೋರುತ್ತದೆ. ಕಾಲಕ್ರಮದಲ್ಲಿ ಬೇರೆ ಕಾರ್ಯಗೌರವದಿಂದಲೋ, ದೊಡ್ಡಸ್ತಿಕೆಯಿಂದಲೋ, ಸೋಮಾರಿತನದಿಂದಲೋ ವೈದ್ಯನಾದವ ಔಷಧಸಾಮಗ್ರಿಗಳ ಶೇಖರಣೆಗೆ ಬೇರೆಯವರನ್ನು ನೇಮಿಸಿಕೊಳ್ಳಲು ಪ್ರಾರಂಬಿಸಿದನೆಂದೂ ಕಾಣುತ್ತದೆ. ಇದರಿಂದ ಅನೇಕ ಗಿಡಮೂಲಿಕೆಗಳ ಔಷಧಸಾಮಾಗ್ರಿಗಳ ಬಗ್ಗೆ ವೈದ್ಯನಿಗಿದ್ದ ಸ್ವಂತ ಮಾಹಿತಿ ಕಡಿಮೆಯಾಯಿತಾದರೂ ಸಂಗ್ರಹಣೆಯ ಜವಾಬ್ದಾರಿ ತಪ್ಪಿತಾಗಿ ಮನಸ್ಸಿನ ಚಿಂತೆ ದೂರವಾಯಿತು. ಹೀಗಾಗಿ ಬೇರೆಯವರು-ವಿಶೇಷವಾಗಿ ವನಚಾರಿಗಳು ಔಷಧ ಸಾಮಗ್ರಿಗಳ ಪರಿಚಯವನ್ನು ಮಾಡಿಕೊಳ್ಳಬೇಕಾಗಿ ಬಂತು. ಅವುಗಳು ದೊರಕುವ ಸ್ಥಳ, ಸಂಗ್ರಹಿಸಬೇಕಾದ ಮೂಲಿಕೆಯ ಭಾಗ-ಮುಂತಾದ ಅವಶ್ಯಕತೆಗಳನ್ನು ಅವರು ಕ್ರಮೇಣ ರೂಢಿಸಿಕೊಂಡು ಔಷಧಸಾಮಗ್ರಿಗಳನ್ನು ಒದಗಿಸತೊಡಗಿದರು. ಕೊನೆಗೆ ಔಷಧಸಾಮಗ್ರಿಗಳನ್ನು ಸಂಗ್ರಹಿಸುವವ ಮತ್ತು ಉಪಯೋಗಿಸುವ ವೈದ್ಯ ಇವರಿಬ್ಬರ ಮಧ್ಯವರ್ತಿಯಾಗಿ ವ್ಯಾಪಾರವೇ ಮುಖ್ಯವಾದ ಇಂದಿನ ಗಂದಿಗ ಹುಟ್ಟಿಕೊಂಡನೆಂದು ತರ್ಕಿಸಬಹುದು. ಈ ಕಾಲಕ್ಕೆ ಅಂದರೆ ಸುಮಾರು 1700-1800ರಲ್ಲಿ ಪಾಶ್ಚಾತ್ಯ ವೈದ್ಯವೂ ಭಾರತಕ್ಕೆ ಕಾಲಿಟ್ಟು ಅದಕ್ಕೆ ವಿಶಿಷ್ಟವಾದ ಔಷಧಸಾಮಗ್ರಿಗಳ ಮಾರಾಟಕ್ಕೇ ಪ್ರತ್ಯೇಕವಾದ ಅಂಗಡಿಗಳು ಪ್ರಾರಂಭವಾದುವು. ಹಾಗೆಯೇ ಭಾರತೀಯ ಔಷಧ ಸಾಮಗ್ರಿಗಳ ಮಾರಾಟಕ್ಕೂ ಅಂಗಡಿಗಳು ಪ್ರಾರಂಭವಾದುವು. ಸಾಮಾನ್ಯವಾಗಿ ಭಾರತೀಯ ಔಷಧಿ, ಔಷಧಿಗಳನ್ನು ಸಂಗ್ರಹಿಸಿಟ್ಟುಕೊಂಡು ಮಾರುವವನನ್ನು ಇಂದಿಗೂ ಗಂದಿಗನೆನ್ನುತ್ತಾರೆ.
ಜಗತ್ತಿನಲ್ಲಿ ಅಪಾತಿಕರಿಗಳು
[ಬದಲಾಯಿಸಿ]ಗಂದಿಗನಿಗೆ ಇಂಗ್ಲಿಷಿನಲ್ಲಿ ಅಪಾತಿಕರಿ ಎಂದು ಕರೆಯುವುದು ಭಾಗಶಃ ಸರಿ. ಗ್ರೀಕ್ ಮೂಲದಲ್ಲಿ ಇದಕ್ಕೆ ಸಂಗ್ರಹಕಾರ ಎನ್ನುವ ಅರ್ಥವಿದೆ. ಮಧ್ಯಯುಗದಲ್ಲಿ ಈ ಹೆಸರನ್ನು ಔಷಧಿಗಳನ್ನು ತಯಾರುಮಾಡಿ ಮಾರುವ, ಸ್ವತಃ ವೈದ್ಯರಲ್ಲದ ಅಂಗಡಿಕಾರರಿಗೆ ಅನ್ವಯಿಸಲಾಯಿತು. ಯೂರೋಪ್, ಅಮೆರಿಕ ಮತ್ತು ಸ್ಕಾಟ್ಲೆಂಡಿನಲ್ಲಿ ಇಂದಿಗೂ ಇದಕ್ಕೆ ಈ ಅರ್ಥವೇ ಇದೆ. ಆದರೆ ಇಂಗ್ಲೆಂಡಿನಲ್ಲಿ ವಿಶಿಷ್ಟ ತಜ್ಞತೆ ಇಲ್ಲದ ಸಾಮಾನ್ಯ ವೈದ್ಯನಿಗೆ ಈ ಹೆಸರಿದೆ. ಹದಿನಾರನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಕಾಯಚಿಕಿತ್ಸೆಕರೆಂದೂ, ಶಸ್ತ್ರವೈದ್ಯರೆಂದೂ ವೈದ್ಯವಿಂಗಡಣೆ ನಡೆದು 1518ರಲ್ಲಿ ಮತ್ತು 1540ರಲ್ಲಿ ಈ ಎರಡು ರೀತಿಯ ವೈದ್ಯರುಗಳ ಎರಡು ಸಂಘಗಳು ಸರ್ಕಾರದಿಂದ ಮತ್ತು ರಾಜನಿಂದ ಮಾನ್ಯತೆ ಪಡೆದವು. ಈ ಎರಡೂ ಸಂಘಗಳು ಸೇರದ ಬೇರೆ ವೈದ್ಯರುಗಳಿಗೆ ಈ ಸಂಘಗಳ ಸದಸ್ಯವೈದ್ಯರುಗಳಿಂದ ಕ್ರಮೇಣ ಬಹುವಾಗಿ ಕಿರುಕುಳವುಂಟಾಗಿ 1543ರಲ್ಲಿ ಇವೆರಲ್ಲ ಸಂಘಟಿತರಾಗಿ ಸರ್ಕಾರದಿಂದ ರಕ್ಷಣೆ ಪಡೆದದ್ದಲ್ಲದೆ ರಾಜನಿಂದಲೂ ಮನ್ನಣೆ ಪಡೆದರು. ಬಹುವಾಗಿ ಈ ರೀತಿಯ ವೈದ್ಯರು ತಾವೇ ಔಷಧಿಗಳನ್ನು ತಯಾರು ಮಾಡಿಯೂ ಮಾರುತ್ತಲೂ ಇದ್ದುದರಿಂದ ಇವರುಗಳಿಗೆ ಅಪಾತಿಕರಿಗಳೆಂದು ಹೆಸರಾಯಿತು. ಇದು ಬಹುಶಃ ಪ್ರಾರಂಭದಲ್ಲಿ ಭಾರತದಲ್ಲಿ ಇದ್ದ ಸ್ಥಿತಿ. ಅಪಾತಿಕರಿಗಳ ಸಂಘಕ್ಕೆ ಸದಸ್ಯರಾಗಬೇಕಾದರೆ ಇರಬೇಕಾದ ಅರ್ಹತೆಗಳನ್ನು 1815ರಲ್ಲಿ ನಿಷ್ಕರ್ಷಿಸಲಾಯಿತು. ಸಂಘದವರು ವ್ಯಕ್ತಿಯ ವೈದ್ಯಜ್ಞಾನಪರೀಕ್ಷೆ ನಡೆಸಿ ತೇರ್ಗಡೆಯಾದವರನ್ನು ಮಾತ್ರ ಸದಸ್ಯರಾಗಿ ತೆಗೆದುಕೊಳ್ಳುವಂತೆಯೂ, ಈ ಪರೀಕ್ಷೆ ಇಂಗ್ಲೆಂಡಿನ ಜನರಲ್ ಮೆಡಿಕಲ್ ಕೌನ್ಸಿಲಿನ ಉಸ್ತುವಾರಿಗೆ ಒಳಪಟ್ಟಿರುವಂತೆಯೂ ಏರ್ಪಡಾಗಿ ಇಂದು ಅಪಾತಿಕರಿ ಸೊಸೈಟಿಯ ಸದಸ್ಯ-ಅಪಾತಿಕರಿ-ಅಂದರೆ ಸಾಮಾನ್ಯ ವೈದ್ಯ ಎಂದಾಗಿದೆ.
ಅಪಾತಿಕರಿ ಅಂಗಡಿಗಳು ತಾವು ತಯಾರಿಸಿದ ಘಟಕಾಂಶಗಳು ಮತ್ತು ಔಷಧಿಗಳನ್ನು ಇತರ ವೈದ್ಯರಿಗೆ ಸಗಟು ರೂಪದಲ್ಲಿ ಮಾರುತ್ತಿದ್ದರು, ಜೊತೆಗೆ ಅವುಗಳನ್ನು ರೋಗಿಗಳಿಗೂ ತಯಾರಿಸಿ ಕೊಡುತ್ತಿದ್ದರು.[೧] ೧೭ನೇ ಶತಮಾನದ ಇಂಗ್ಲೆಂಡಿನಲ್ಲಿ, ಅಪಾತಿಕರಿಗಳು ಔಷಧಿಯಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದ ತಂಬಾಕಿನ ವ್ಯಾಪಾರವನ್ನೂ ನಿಯಂತ್ರಿಸುತ್ತಿದ್ದರು.[೨]
ಇಂಗ್ಲೆಂಡಿನಲ್ಲಿ, ಅಪಾತಿಕರಿಗಳು ವರ್ಷಿಪ್‍ಫ಼ುಲ್ ಸೊಸೈಟಿ ಆಫ಼್ ಅಪಾತಿಕರೀಸ್ ಎಂಬ ತಮ್ಮ ಸ್ವಂತದ ಲಿವರಿ ಕಂಪನಿಗೆ ಅರ್ಹರಾಗಿದ್ದರು. ಇದರ ಸ್ಥಾಪನೆ ೧೬೧೭ರಲ್ಲಿ ಆಯಿತು.[೩][೪]
ಕೆಮಿಸ್ಟ್, ಡ್ರಗಿಸ್ಟ್ ಮತ್ತು ಗಂದಿಗ ನಡುವಿನ ವ್ಯತ್ಯಾಸಗಳು
[ಬದಲಾಯಿಸಿ]ವೈದ್ಯರಲ್ಲದೆ ವೈದ್ಯರ ಅಪ್ಪಣೆಯಂತೆ ತಯಾರುಮಾಡಿದ ಔಷಧಗಳನ್ನೊ ಔಷಧ ಸಾಮಗ್ರಿಗಳನ್ನೋ ಮಾರುವ ಅಂಗಡಿಕಾರರನ್ನು ಈಗ ವಿಶ್ವಾದ್ಯಂತ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಎಂದು ಕರೆಯಲಾಗಿದೆ. ಇವರು ಸಾಮಾನ್ಯವಾಗಿ ಪಾಶ್ಚಾತ್ಯ ಔಷಧಿ ಮತ್ತು ಔಷಧಸಾಮಗ್ರಿಗಳನ್ನು ಮಾತ್ರ ಮಾರುತ್ತಾರೆ. ಇವನ್ನು ಮಾರಬೇಕಾದ ಸರ್ಕಾರದ ಅನುಜ್ಞೆ ಅಗತ್ಯವಾದುದರಿಂದ ಗಂದಿಗರು ಇವನ್ನು ಮಾರುವಂತಿಲ್ಲ. ಕೆಮಿಸ್ಟ್ ಮತ್ತು ಡ್ರಗಿಸ್ಟ್‌ಗಳು ವೈದ್ಯರ ಆದೇಶದಂತೆ ಔಷಧಿಗಳನ್ನು ತಯಾರು ಮಾಡಿಕೊಂಡುವಂತೆ ಗಂದಿಗರು ಮಾಡುವುದಿಲ್ಲ. ಔಷಧ ತಯಾರಿಕೆ ದೇಶೀಯ ವೈದ್ಯದಲ್ಲಿ ಇಂದಿಗೂ ವೈದ್ಯನಿಂದಲೇ ಜರುಗಬೇಕಾದ ಕಾರ್ಯವಾಗಿದೆಯಾಗಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಮಾತ್ರ ಗಂದಿಗ ಮಾರುತ್ತಾನೆ. ಈಚೆಗೆ, ಅಂದರೆ ಸುಮಾರು 50-60 ವರ್ಷಗಳಿಂದ ತಯಾರಾದ ದೇಶೀಯ ಔಷಧಿಗಳೂ ಪಾಶ್ಚಾತ್ಯ ದೇಶಗಳಲ್ಲಿನಂತೆಯೇ ಇಲ್ಲೂ ಮಾರುಕಟ್ಟೆಗೆ ಬಂದಿದೆ. ಇವನ್ನು ಗಂದಿಗನು ಮಾರಬಹುದಾದರೂ ಸಾಮಾನ್ಯವಾಗಿ ಸರ್ಕಾರಿ ಅನುಜ್ಞೆ ಪಡೆದ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟೇ ಇವುಗಳನ್ನು ಮಾರುತ್ತಾನೆ.
ಉಲ್ಲೇಖಗಳು
[ಬದಲಾಯಿಸಿ]- ↑ Woolf, J.S. (2009). "Women's business: 17th-century female pharmacists". Chemical Heritage Magazine. 27 (3): 20–25. Archived from the original on 23 ಮಾರ್ಚ್ 2018. Retrieved 22 March 2018.
- ↑ Gately, I. (2001). Tobacco: A cultural history of how an exotic plant seduced civilization. New York: Grove Press. p. 51. ISBN 978-0802139603. Retrieved 13 December 2016.
- ↑ Barrett, C.R.B. (1905). The history of the society of apothecaries of London. London: E. Stock.
I shall endeavour to trace the history of the Worshipful Society of Apothecaries of London, from its incorporation as a separate body on December 6, 1617, down to the present day.
- ↑ Copeman, W.S. (1967). "The worshipful society of apothecaries of London--1617-1967". Br Med J. 4 (5578): 540–541. doi:10.1136/bmj.4.5578.540. PMC 1749172. PMID 4863972.
ಹೊರಗಿನ ಕೊಂಡಿಗಳು
[ಬದಲಾಯಿಸಿ]- "On Keeping Shop: A Guidebook for Preparing Orders" is a book, in Arabic, from 1260 that extensively discusses the art of being an apothecary