ವಿಷಯಕ್ಕೆ ಹೋಗು

ಗಜಾಂಕುಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಜಾಂಕುಶ- ಈತ ಒಬ್ಬ ಕವಿ ಹಾಗೂ ದಂಡನಾಯಕ. ಪಂಪ ಕವಿಯ ಸಮಕಾಲಿನ ನೆನ್ನಲಾಗಿದೆ. ಕನ್ನಡದಲ್ಲಿ ಈತ ಕಾವ್ಯಗಳನ್ನು ರಚಿಸಿದಂತೆ ತಿಳಿದು ಬಂದಿದ್ದರೂ ಇದುವರೆಗೆ ಯಾವುದೂ ದೊರಿತಿಲ್ಲ. ಮಲ್ಲಿಕಾರ್ಜುನ (ಸು.1245) ತನ್ನ ಸೂಕ್ತಿಸುಧಾರ್ಣವದಲ್ಲಿ ಈತನ ಗ್ರಂಥಗಳಿಂದ ಪದ್ಯಗಳನ್ನು ಉದ್ಧರಿಸಿರುವುದಾಗಿ ಹೇಳಿದ್ದಾನೆ. ನಯನಸೇನ (1112) ಧರ್ಮಾಮೃತದಲ್ಲಿ 'ಗಜಾಂಕುಶ ನೊಳ್ಪುವೆತ್ತು ರಂಜಿಸುವ ಪದರ್ಥದೃಷ್ಟಿ ಎಂದು ಸ್ತುತಿಸಿದ್ದಾನೆ. ದುರ್ಗಸಿಂಹ (ಸು.1025) 'ತ್ರಿಜಗನ್ನುತ ವಾಗ್ವಿಭವದಿನಜಂಗೆ ನೂರ್ಮಡಿಯೆನಿಪ್ಪ ಪೆಂಪಂ ತಳೆದಂ, ವಿಜಿತಾರಿ ದಂಡನಾಯಕ ಗಜಾಂಕುಶಂ ಕುಶಲ ವಾಂಛಿತ ಪ್ರಿಯಶೌರ್ಯಂ' ಎಂದು ಹೇಳಿದ್ದಾನೆ. ರುದ್ರಭಟ್ಟ, ಆಂಡಯ್ಯ, ಕೇಶಿರಾಜ, ಆಚಣ್ಣ, ನಾಗರಾಜ, ಮಧುರ-ಮೊದಲಾದ ಕವಿಗಳು ಈತನನ್ನು ಸ್ತುತಿಸಿದ್ದಾರೆ. ಈತನಿಗೆ ಗಜಗ ಎಂಬ ಹೆಸರೂ ಇದ್ದಂತೆ ತಿಳಿದುಬರುತ್ತದೆ.[][]

ಎಫಿಗ್ರಾಫಿಯ ಇಂಡಿಕದ ನಾಲ್ಕನೆಯ ಸಂಪುಟದ 58ನೆಯ ಸಾಲೋಟಗಿಯ ಶಾಸನದಂತೆ ಗಜಾಂಕುಶ ರಾಷ್ಟ್ರಕೂಟ ರಾಜನಾದ ಮೂರನೆಯ ಕೃಷ್ಣರಾಜನಲ್ಲಿ (939-968) ಮಂತ್ರಿಯಾಗಿಯೂ ಸಂಧಿವಿಗ್ರಿಹಿಯಾಗಿಯೂ ಇದ್ದಾತ. ಮಾಹಿಷ ವಿಷಯದ ಕಾಂಚನ ಮುದುವೊ¿ಲ್ ಎಂಬ ಹಳ್ಳಿಯ ನಿವಾಸಿ. ಈ ಶಾಸನದಲ್ಲಿ ಬರುವ ನಾರಾಯಣೋಭಿದಾನ ನಾರಾಯಣ ಇವಾಪರಃ ವಿಖ್ಯಾತೋ ಭುವಿ ವಿದ್ಯಾವಾನ್ ಯೋ ಗಜಾಂಕುಶ ಸಂಜ್ಞಯಾ-ಎಂಬುದರಿಂದ ಸಾಕ್ಷಾತ್ ನಾರಾಯಣನೋ ಎಂಬಂತೆ ಪ್ರಸಿದ್ಧನಾಗಿ, ವಿದ್ಯಾವಂತನಾಗಿದ್ದ ನಾರಾಯಣನೇ ಗಜಾಂಕುಶ ಎಂಬ ಹೆಸರುನ್ನುಳ್ಳವ. ಈತ ರಾಜವಿದ್ಯೆಗಳಲ್ಲಿ ಪಾರಗನೂ ಕವಿಮುಖ್ಯನೂ ಆಗಿದ್ದ. ಈ ಶಾಸನದ ಕಾಲ ಸು. 945 ಆದುದರಿಂದ ಕವಿಯ ಕಾಲ ಸು. 940 ಆಗಿರಬಹುದೆಂದು ಡಿ. ಎಲ್. ನರಸಿಂಹಾಚಾರ್ಯರು ನಿರ್ಣಯಿಸಿರುತ್ತಾರೆ. ಪಾರ್ಶ್ವನೆಂಬ ಜೈನಕವಿ ಬರೆದ ಕೊಲ್ಹಾಪುರದ ಸಾಮಂತರಾಜರ ಚರಿತೆ ಎಂಬ ಗ್ರಂಥದಲ್ಲಿ ಬರುವ ಎರಡು ಪದ್ಯಗಳಿಂದ ಗಜಾಂಕುಶ ತನ್ನ ಸ್ವಾಮಿಗಾಗಿ ಯುದ್ಧದಲ್ಲಿ ಮಡಿದು ಕೀರ್ತಿಕಾಯನಾದನೆಂದು ಗೊತ್ತಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. E.P. Rice – pp 111
  2. "History of the Kannada Literature -III". Dr. Jyotsna Kamat. Retrieved 2008-05-01.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಗಜಾಂಕುಶ&oldid=878563" ಇಂದ ಪಡೆಯಲ್ಪಟ್ಟಿದೆ