ವಿಷಯಕ್ಕೆ ಹೋಗು

ಗಾಜಿನ ಕೆಲಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಕೃತಿಯಲ್ಲಿ ಹಲವಾರು ನೈಸರ್ಗಿಕ ವಿದ್ಯಮಾನಗಳ ಪರಿಮಾಣವಾಗಿ ಗಾಜಿನ ತುಣುಕುಗಳು ದೊರೆಯಬಹುದಾದರೂ ಸಾರಭೂತವಾಗಿ ಗಾಜು ಮನುಷ್ಯಕ್ರಿಯೆಯಿಂದ ಉತ್ಪನ್ನವಾಗುವ ಒಂದು ವಸ್ತು.

ಇತಿಹಾಸ

[ಬದಲಾಯಿಸಿ]

ಇದರ ಬಳಕೆ ಸುಮಾರು ನಾಲ್ಕು ಸಾವಿರ ವರ್ಷಗಳಿಂದಲೂ ಇರುವುದಾಗಿ ದಾಖಲೆ ಉಂಟು. ಆದಿವಾಸಿಗಳು ಪ್ರಕೃತಿಯಲ್ಲಿ ದೊರೆತ ಜ್ವಾಲಾಮುಖಿಜ ಗಾಜಿನ ಚೂರುಗಳನ್ನು ತಮ್ಮ ಆಯುಧಗಳ ಅಲಗಿಗೆ ಸಿಕ್ಕಿಸುತ್ತಿದ್ದುದು ಅಪರೂಪವಾಗಿರಲಿಲ್ಲ. ನೀಲಿ ಬಣ್ಣದ ಗಾಜಿನ ತುಂಡೊಂದು ಕ್ರಿ.ಪೂ.2000ರಲ್ಲಿ ಎರಿಡು ಎಂಬಲ್ಲಿಯೂ,[] ಹಸಿರು ಗಾಜಿನಿಂದ ತಯಾರಾದ ಮಣಿಗಳು ಕ್ರಿ.ಪೂ. 2500ರಲ್ಲಿ ಈಜಿಪ್ಟಿನಲ್ಲಿಯೂ, ಹಸಿರು ಗಾಜಿನ ಕಡ್ಡಿಯೊಂದು ಕ್ರಿ.ಪೂ. 2600ರಲ್ಲಿ ಬ್ಯಾಬಿಲೋನಿಯದ ಈಶನುನ್ನದಲ್ಲಿಯೂ ದೊರೆತುದಕ್ಕೆ ಆಧಾರಗಳಿವೆ. ಸಿರಿಯದ ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಬೇಲೂಸ್ ಎಂಬ ನದಿ ನಿಕ್ಷೇಪಿಸಿದ ಮರಳಿನ ರಾಶಿಯಲ್ಲಿ ಸಂಭವಿಸಿದ ಒಂದು ಆಕಸ್ಮಿಕ ಘಟನೆಯಿಂದ ಗಾಜು ತಯಾರು ಮಾಡುವ ರೀತಿಯನ್ನು ಫೀನೀಶಿಯನ್ನರು ಪತ್ತೆ ಹಚ್ಚಿದರು. ಈ ಜನ ಈಜಿಪ್ಟಿನಿಂದ ವಾಷಿಂಗ್ ಸೋಡ ಕೊಂಡುಕೊಳ್ಳುತ್ತಿದ್ದರು. ಒಂದು ಸಲ ಬೆಲೂಸ್ ನದಿ ತೀರದಲ್ಲಿ ವಾಷಿಂಗ್ ಸೋಡವನ್ನು ಹೊತ್ತುಕೊಂಡು ಒಂದು ಹಡಗು ಬಂತು. ನಾವಿಕರು ಮರಳದಂಡೆಯ ಮೇಲೆ ಅಡುಗೆ ಮಾಡಲು ಯೋಚಿಸಿದರು. ಒಲೆ ಹೂಡಲು ಕಲ್ಲು ದೊರೆಯದಿದ್ದಾಗ ವಾಷಿಂಗ್ ಸೋಡದ ಹೆಂಟೆಗಳನ್ನೇ ಕಲ್ಲುಗಳಂತೆ ಬಳಸಿದರು. ಒಲೆ ಉರಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪಾರದರ್ಶಕ ದ್ರವದ ಪ್ರವಾಹ ಹರಿಯುವುದು ಅವರಿಗೆ ಕಾಣಿಸಿತು. ಸೋಡ ಮತ್ತು ಮರಳಿಗೆ ಬೆಂಕಿಯ ಕಾವು ಬಡಿದಾಗ ಈ ರೀತಿಯ ದ್ರವ ಉಂಟಾಗುತ್ತಿತ್ತು. ಈ ಪ್ರವಾಹವೇ ದ್ರವರೂಪದ ಗಾಜು ಎಂದು ಅವರು ತಿಳಿದರು.[] ಹೀಗೆ ಅಕಸ್ಮಾತ್ತಾಗಿ ಪ್ರಾಪ್ತವಾದ ಗಾಜಿನ ತಯಾರಿಕೆಯ ಈ ವಿಧಾನವನ್ನು ಫೀನೀಶಿಯನ್ನರು ಅಭಿವೃದ್ಧಿಪಡಿಸಿ ಗಾಜಿನ ಸಾಮಾನುಗಳನ್ನು ತಯಾರಿಸಲು ಪ್ರಾರಂಭಿಸಿದರು. ಗಾಜಿನ ಸಂಶೋಧನೆಯ ಬಗ್ಗೆ ಪ್ರಚಲಿತವಿರುವ ಇನ್ನೊಂದು ದಂತಕಥೆ ಹೀಗಿದೆ. ಇಸ್ರೇಲಿನ ಹುಡುಗರು ಒಮ್ಮೆ ಒಂದು ಕಾಡಿಗೆ ಬೆಂಕಿ ಹಚ್ಚಿದರು. ಬೆಂಕಿಯ ಕಾವಿಗೆ ಕಾಡಿನಲ್ಲಿದ್ದ ಮರಳು ಮತ್ತು ಪೆಟ್ಲುಪ್ಪು ಕರಗಿ ಬೆಟ್ಟಗಳಿಂದ ಇವುಗಳ ದ್ರವ ಪ್ರವಾಹ ಹರಿಯಿತು. ಇದೇ ಗಾಜಿನ ಪ್ರಥಮಾವಿಷ್ಕಾರ. ಒಟ್ಟಿನಲ್ಲಿ ಫೀನೀಶಿಯನ್ನರೂ, ಇಸ್ರೇಲಿಗಳೂ ಗಾಜನ್ನು ಪತ್ತೆ ಮಾಡಿದರು ಎನ್ನಬಹುದು. ಆದರೆ ಇವರಿಗಿಂತ ಮೊದಲೇ ಪುರಾತನ ಈಜಿಪ್ಷಿಯನ್ನರು ಗಾಜಿನ ತಯಾರಿಕೆಯನ್ನು ಅರಿತಿದ್ದರು ಎಂಬುದಕ್ಕೆ ಅಲ್ಲಿಂದ ದೊರೆತ ಗಾಜಿನ ಸಾಮಾನುಗಳು ಆಧಾರವಾಗಿವೆ. ಪುರಾತನ ಈಜಿಪ್ಟಿನಲ್ಲಿ ಗಂಡಸರು ಹೆಂಗಸರು ಗಾಜಿನ ಮಣಿಗಳ ಸರಗಳನ್ನು ಬಳಸುತ್ತಿದ್ದರು.

ಕ್ರಿಸ್ತನ ಕಾಲಕ್ಕಿಂತ ಮುಂಚೆ ಕೊಳವಿಯನ್ನು ಊದಿ ಗಾಜಿನ ಭರಣಿಗಳನ್ನು ತಯಾರಿಸುತ್ತಿದ್ದರು. ಗಾಜಿನ ಪಾತ್ರೆಗಳನ್ನು ತಯಾರಿಸಲು ಪುರಾತನ ಈಜಿಪ್ಷಿಯನ್ನರು ಮೊದಲು ಒಂದು ಲೋಹದ ಕಡ್ಡಿಗೆ ಸಿಲಿಕದ ಅಂಟು ಹಿಟ್ಟನ್ನು ಪಾತ್ರೆಯ ಆಕಾರ ಮಾಡಿ ಮೆತ್ತುತ್ತಿದ್ದರು. ಇದು ಒಣಗಿದ ಬಳಿಕ ಕಡ್ಡಿಯನ್ನು ಕರಗಿದ ಗಾಜಿನಲ್ಲಿ ಅದ್ದುತ್ತಿದ್ದರು. ಸಿಲಿಕದ ಹಿಟ್ಟಿನ ಮೇಲೆ ಕುಳಿತ ಗಾಜಿನ ದ್ರವ ಒಣಗಿದ ತರುವಾಯ ಒಳಗಿದ್ದ ಸಿಲಿಕದ ಹಿಟ್ಟನ್ನು ಅಗೆದು ತೆಗೆದು ಹಾಕುತ್ತಿದ್ದರು. ಅಮೆನ್‍ಹೊಟೆಪ್-2 ಈಜಿಪ್ಟ್ ದೇಶವನ್ನು ಆಳುತ್ತಿದ್ದ ಸಮಯದಲ್ಲಿ ಮೊದಲು ಗಾಜಿನ ಪಾತ್ರೆಗಳ ತಯಾರಿಕೆ ಆರಂಭವಾಯಿತು ಎನ್ನಬಹುದು. ಕ್ರಿ.ಪೂ. ಎಂಟನೆಯ ಶತಮಾನದಿಂದ ಆರನೆಯ ಶತಮಾನದವರೆಗಿನ ಕಾಲದಲ್ಲಿ ತಯಾರಾಗಿದ್ದ ಗಾಜಿನ ವಸ್ತುಗಳು ಮೆಸೊಪೊಟೇಮಿಯದಲ್ಲಿ ಸಿಕ್ಕಿವೆ. ಕ್ರಿ.ಪೂ. 6ನೆಯ ಶತಮಾನದಿಂದ ಗ್ರೀಕರು ನೆಲೆಸಿದ್ದ ಏಜಿಯನ್ ಗ್ರೀಸ್, ಇಟಲಿ ಮತ್ತು ಸಿಸಿಲಿಯಲ್ಲಿ ಹೆಚ್ಚು ಗಾಜು ದೊರೆತಿವೆ. ಈಜಿಪ್ಟಿನ ಭೂಮಿಯಲ್ಲಿ ಹಿಂದೆ ಸಿಕ್ಕಿದ ಪರಿಮಾಣಕ್ಕಿಂತ ಹೆಚ್ಚು ಗಾಜು ಈ ಸ್ಥಳದಲ್ಲಿ ಸಿಕ್ಕಿದೆ. ಈ ಗಾಜಿನ ಪಾತ್ರೆಗಳಲ್ಲಿದ್ದ ಕಲೆ, ಅವುಗಳ ಬಣ್ಣ ಮತ್ತು ರಚನೆ ಈಜಿಪ್ಷಿಯನ್ನರ ಕಲೆಗಿಂತ ಭಿನ್ನವಾಗಿದ್ದವು. ಕಾನ್‌ಸ್ಟಾಂಟಿನೋಪಲಿನ ಅವನತಿಯ ಸಮಯದಲ್ಲಿ ವೆನಿಸ್ ಮುಂತಾದ ಕಡೆಗಳಲ್ಲಿ ಗಾಜಿನ ಕೈಗಾರಿಕೆ ಹರಡಿ ಸುಮಾರು 8000 ಜನರಿಗೆ ಉದ್ಯೋಗ ದೊರೆತಿತ್ತು. 1870ರಲ್ಲಿ ಬೊಹೀಮಿಯದಲ್ಲಿ 30,000 ಜನ ಗಾಜಿನ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಗಾಜಿನ ವಸ್ತುಗಳೆಂದರೆ ತಕ್ಷಶಿಲೆಯ ದಿಬ್ಬಗಳಲ್ಲಿ ದೊರೆತವವು.[] ಇವು ಕ್ರಿ.ಪೂ. ಐದನೆಯ ಶತಮಾನದ್ದವೆಂದು ಗುರುತಿಸಲಾಗಿದೆ. ಆದರೆ ಭಾರತದಲ್ಲಿ ಅದಕ್ಕೂ ಮೊದಲೇ ಗಾಜಿನ ಉಪಯೋಗವಿತ್ತು ಎನ್ನುವುದಕ್ಕೆ ವಿಫುಲ ಉಲ್ಲೇಖಗಳು ಶತಪಥ ಬ್ರಾಹ್ಮಣದಲ್ಲಿ ಇವೆ.

ಬಹಳ ಪುರಾತನ ಕಾಲದಿಂದಲೂ ವಿವಿಧ ರೀತಿಯ ಪಾತ್ರೆಗಳನ್ನು ತಯಾರಿಸಲು ಗಾಜನ್ನು ಬಳಸುತ್ತಿದ್ದರು. ಬಣ್ಣದ ಗಾಜಿನ ಕಡ್ಡಿಗಳ ತಯಾರಿಕೆಯಲ್ಲೂ, ವಿವಿಧ ಹೂಗಳನ್ನು ಪಾತ್ರೆಗಳಲ್ಲಿ ಚಿತ್ರಿಸುವ ಕಲೆಯಲ್ಲೂ ಈಜಿಪ್ಟಿನ ಅಲೆಗ್ಸಾಂಡ್ರಿಯ ಅಗ್ರಸ್ಥಾನ ಪಡೆದಿತ್ತು.[] ಕರಗಿದ ಗಾಜನ್ನು ಅಚ್ಚುಗಳಲ್ಲಿ ಹಾಕಿ ಗಾಜಿನ ಭರಣಿಗಳನ್ನು ತಯಾರಿಸುತ್ತಿದ್ದರು. ಯಂತ್ರಗಳಿಂದ ಈ ಆಕರ್ಷಕ ಭರಣಿಗಳಿಗೆ ಹೊಳಪನ್ನು ಸಹ ಕೊಡುತ್ತಿದ್ದರು. ಊದುವುದರ ಮೂಲಕವೂ, ಅಚ್ಚುಹಾಕಿಯೂ ಗಾಜಿನ ಸಾಮಾನುಗಳನ್ನು ತಯಾರಿಸುತ್ತಿದ್ದರು. ಸಿರಿಯ ದೇಶದ ಗಾಜಿನ ಕೆಲಸದವರು ಮೊದಲು ಗಾಜನ್ನು ಊದುವುದರ ಮೂಲಕ ಪಾತ್ರೆಗಳನ್ನು ತಯಾರಿಸುತ್ತಿದ್ದರು. ಇವರು ಇಟಲಿಗೆ ಹೋಗಿ ನೆಲೆಸಿದುದರಿಂದ ಆ ದೇಶ ಗಾಜಿನ ಉತ್ಪತ್ತಿಯಲ್ಲಿ ಹೆಸರು ಪಡೆಯಿತು. ಗಾಜಿನ ಲೋಟಗಳ ಮೇಲೆ ಸುಂದರ ಆಕೃತಿಗಳನ್ನು ಚಿತ್ರಿಸುವುದು ಕೆತ್ತನೆಯ ಕೆಲಸ ಮಾಡುವುದು ಇಟಲಿಯಲ್ಲಿ ಅಭಿವೃದ್ಧಿ ಹೊಂದಿದವು. ಕ್ರಮೇಣ ಈ ಗಾಜಿನ ಬಳ್ಳಿಗಳಿಂದ ಅಲಂಕೃತವಾಗಿದ್ದ ಗಾಜುಗಳಿಗೆ ಮತ್ತು ಅದರಲ್ಲಿದ್ದ ಅದ್ಭುತ ಕೆತ್ತನೆಯ ಕೆಲಸ ಇವು ಈ ದೇಶದ ಹೆಸರನ್ನು ಎತ್ತಿ ಹಿಡಿದಿದ್ದುವು. ಮೂರು ಮತ್ತು ನಾಲ್ಕನೆಯ ಶತಮಾನಗಳಲ್ಲಿ ಗಾಜಿನ ಮೇಲೆ ಈ ರೀತಿಯ ಕಲಾಕೌಶಲಗಳು ಕಂಗೊಳಿಸುತ್ತಿದ್ದುವು. ಈಜಿಪ್ಟಿನ ಅಮೆನ್‍ಹೊಟೆಪ್-4 ಆಳುತ್ತಿದ್ದ ಕಾಲದಲ್ಲಿ ಟೆಲ್-ಎಲ್-ಅಮಾರ್ಣ ಎಂಬ ಸ್ಥಳದಲ್ಲಿ ಅಗೆದಾಗ ಗಾಜಿನ ಕಾರ್ಖಾನೆಯೊಂದರ ಅವಶೇಷ ಕಂಡುಬಂತು.[] ಗಾಜಿನ ಕೊಳವೆ ಮತ್ತು ಚೂರುಗಳನ್ನು ಈ ಸ್ಥಳದಲ್ಲಿ ಕಂಡರು.

ರೋಮನ್ನರ ಕಾಲದ ತರುವಾಯ ಈಜಿಪ್ಟಿನಲ್ಲಿ ಗಾಜನ್ನು ತಯಾರಿಸುವ ಕಲೆ ನವೀನ ಹಾದಿಯನ್ನು ಹಿಡಿಯಿತು. ಚಿಮಟದಿಂದ ಗಾಜುಗಳ ಮೇಲೆ ಮುದ್ರೆ ಒತ್ತುತ್ತಿದ್ದರು. ಕರಗಿದ ಗಾಜನ್ನು ಸಾಚೆಯಲ್ಲಿ (ಮೋಲ್ಡ್) ಹಾಕಿ ನಾಣ್ಯದಂಥ ಒತ್ತುಗಳನ್ನು ತಯಾರಿಸುತ್ತಿದ್ದರು. ಹೊಳಪುಳ್ಳ ಮತ್ತು ಮಿರುಗುವ ಬಣ್ಣಗಳಿಂದ ಗಾಜುಗಳಿಗೆ ಬಣ್ಣ ಬಳಿಯುವ ಕಲೆಯನ್ನು ಮೊದಲು ಕಂಡುಹಿಡಿದವರು ಈಜಿಪ್ಟಿನವರು; ಉದಾಹರಣೆಗೆ ಬೆಳ್ಳಿಯ ಬಣ್ಣವನ್ನು ಗಾಜಿಗೆ ಹಚ್ಚಿ ಅನಂತರ ಆಮ್ಲಜನಕವಿಲ್ಲದ ಆವರಣದಲ್ಲಿ ಕಾಯಿಸುವುದು. ಆಗ ಈ ಬಣ್ಣ ತಿಳಿ ಹಳದಿಯ ಅಥವಾ ಬೂದು ಬಣ್ಣದ ಪೊರೆಯನ್ನು ಗಾಜಿನಲ್ಲಿ ಉಂಟುಮಾಡುತ್ತದೆ. ಗಾಜಿನ ಬೋಗುಣಿ ಮತ್ತು ಸೀಸೆಗಳ ಮೇಲೆ ಈ ಕಲೆಯನ್ನು ಪ್ರದರ್ಶಿಸುತ್ತಿದ್ದರು.

ಭಾರತದಲ್ಲಿ ಗಾಜಿನ ಕೆಲಸ

[ಬದಲಾಯಿಸಿ]

ಬರೋಡದಲ್ಲಿ ಸ್ಥಾಪಿತವಾದ (1944) ಅಲೆಂಬಿಕ್ ಗಾಜಿನ ಕಾರ್ಖಾನೆಯೇ ಆಧುನಿಕ ಅರ್ಥದಲ್ಲಿ ಭಾರತದಲ್ಲಿ ಸ್ಥಾಪಿತವಾದ ಮೊದಲ ಕಾರ್ಖಾನೆ. ಮುಂದೆ 1948ರಲ್ಲಿ ಈ ಕಾರ್ಖಾನೆ ಸ್ವಯಂಚಾಲಕ ಯಂತ್ರಗಳನ್ನು ಬಳಸಲು ತೊಡಗಿತು. 1972ರ ವೇಳೆಗೆ ಭಾರತದಲ್ಲಿ ಮೂವತ್ತೊಂಬತ್ತು ಗಾಜಿನ ಕಾರ್ಖಾನೆಗಳಿದ್ದವು. 1964-65ರಲ್ಲಿ ಭಾರತದಿಂದ ಸುಮಾರು 27 ಲಕ್ಷ ರೂಪಾಯಿಗಳ ಗಾಜಿನ ಪಾತ್ರೆಗಳನ್ನು ಹೊರಗಿನ ದೇಶಗಳಿಗೆ ರಫ್ತುಮಾಡಿದರು. ಗಾಜಿನ ಪಾತ್ರೆಗಳ ಉತ್ಪತ್ತಿ 1952ರಲ್ಲಿ ಸುಮಾರು 50,000 ಮೆಟ್ರಿಕ್ ಟನ್ನುಗಳಿದ್ದು 1965ರಲ್ಲಿ ಅದು 1,55,000 ಮೆಟ್ರಿಕ್ ಟನ್ನುಗಳಿಗೆ ಏರಿತ್ತು. ಭಾರತದಲ್ಲಿ ತಯಾರಾದ ಗಾಜಿನ ಸೀಸೆಗಳನ್ನು ಶ್ರೀಲಂಕಾ, ಪರ್ಷಿಯ, ಸೌದಿ ಅರೇಬಿಯಾ, ಬರ್ಮ, ಪಾಕಿಸ್ತಾನ, ಥಾಯ್‌ಲೆಂಡ್, ಪೂರ್ವ ಆಫ್ರಿಕಾ, ಕುವೈತ್ ಮತ್ತು ನೇಪಾಳಗಳಿಗೆ ರಫ್ತು ಮಾಡುತ್ತಾರೆ.

ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರಿಕೆಯ ಅನುಸಾರ ಉತ್ಪತ್ತಿ ಮಾಡಲು ನಿರ್ಧರಿಸಿದ್ದ ಅಂದಾಜು ಹೀಗಿದೆ:

            ಬಗೆ	                             ಪರಿಮಾಣ ಮೆಟ್ರಿಕ್ ಟನ್ನುಗಳಲ್ಲಿ	ಶೇಕಡಾ
ಔಷಧ ವಸ್ತುಗಳ ಉಪಯೋಗದ ಸೀಸೆ ಮತ್ತು ಸಣ್ಣ ಸೀಸೆಗಳು	   1,50,000	        42.9
ಹಾಲಿನ ಸೀಸೆಗಳು	                                     40,000	        11.4
ತಂಪಾದ ಪಾನೀಯ ಸೀಸೆಗಳು	                             40,000	        11.4
ಬೀರ್ ಮತ್ತು ಮದ್ಯದ ಸೀಸೆಗಳು 	                     40,000	        11.4
ಎಕ್ಸೈಜ್ ಸೀಸೆಗಳು 	                                     30,000	         8.6
ಇತರ ಸೀಸೆಗಳು(ಶಾಯಿ, ಸುಗಂಧ ಎಣ್ಣೆ ಇತ್ಯಾದಿ)	             50,000	        14.3

ಕರ್ನಾಟಕದಲ್ಲಿ ಎರಡು ಗಾಜಿನ ಕಾರ್ಖಾನೆಗಳಿವೆ. ಬೆಂಗಳೂರು ಜಿಲ್ಲೆಯಲ್ಲಿರುವ ವೈಟ್‌ಫೀಲ್ಡಿನ ಅಲೆಂಬಿಕ್ ಗಾಜಿನ ಕಾರ್ಖಾನೆ (ಸ್ಥಾಪನೆ 1966) ಸ್ವಯಂಚಾಲಕ ಯಂತ್ರಗಳಿಂದ ನಡೆಯುತ್ತದೆ. ಇದು ದಕ್ಷಿಣ ಭಾರತದಲ್ಲೇ ಮೊದಲನೆಯದು. ಈ ಕಾರ್ಖಾನೆಯಲ್ಲಿ ಪ್ರತಿ ದಿವಸ 55 ಟನ್ ಗಾಜಿನ ಸಾಮಾನುಗಳು ಉತ್ಪತ್ತಿಯಾಗುತ್ತವೆ. ಉತ್ಪತ್ತಿ ಮಟ್ಟವನ್ನು 130 ಟನ್ನುಗಳಿಗೆ ಏರಿಸುವ ಉದ್ದೇಶ ಉಂಟು. ಇದರ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 24,000 ಟನ್ನುಗಳು. ವಾರ್ಷಿಕ ಮಾರಾಟ ಮೌಲ್ಯ ಸುಮಾರು ರೂ.1,20,000. ಪ್ರಯೋಗಶಾಲೆಯಲ್ಲಿ ಪರೀಕ್ಷೆ ಮಾಡಿದ ಉತ್ತಮ ಗುಣದ ಗಾಜುಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸುತ್ತಾರೆ.

ಗಾಜಿನ ತಯಾರಿಕೆ

[ಬದಲಾಯಿಸಿ]

ಒಟ್ಟು ಗಾಜಿನ ಉತ್ಪತ್ತಿಯಲ್ಲಿ 95% ಭಾಗ ಸಾಮಾನ್ಯ ಗುಣದ ಗಾಜಿರುತ್ತದೆ. ಉಳಿದದ್ದು ವಿಶೇಷ ಗಾಜುಗಳು. ಗಾಜನ್ನು ತಯಾರಿಸಲು ಬಳಸುವ ಕಚ್ಚಾ ಪದಾರ್ಥಗಳ ಪ್ರಮಾಣ ಹೀಗಿರುತ್ತದೆ: ಸಿಲಿಕ (ಮರಳು) 75%, ಸುಣ್ಣ 10%, ಸೋಡ 15%. ಗಾಜಿನ ಹಾಳೆಯನ್ನು ತಯಾರಿಸುವಾಗ ಸುಣ್ಣದ ಅಂಶದಲ್ಲಿ ನಾಲ್ಕು ಭಾಗ ತೆಗೆದು ಆ ಸ್ಥಳದಲ್ಲಿ ಮ್ಯಾಗ್ನೀಶಿಯವನ್ನು ಬಳಸುತ್ತಾರೆ. ಸೀಸೆಯ ಗಾಜು ಮಾಡುವಾಗ 2% ಭಾಗ ಅಲ್ಯುಮಿನವನ್ನು ಬಳಸುತ್ತಾರೆ. ವಾಣಿಜ್ಯ ಗಾತ್ರದಲ್ಲಿ ಗಾಜನ್ನು ತಯಾರಿಸುವಾಗ ಗೋಣಿಚೀಲದಲ್ಲಿ ಶೇಖರಿಸಿರುವ ಕಚ್ಚಾ ಪದಾರ್ಥಗಳನ್ನು ತೂಕ ಮಾಡಿ ಒಲೆಗೆ ಅಥವಾ ಕುಲುಮೆಗೆ ಹಾಕಲು ಕಳಿಸುತ್ತಾರೆ. ದೊಡ್ಡ ಕಾರ್ಖಾನೆಗಳಲ್ಲಿ ತೂಕ ಮಾಡುವ ಕೆಲಸ ಸ್ವಯಂಚಾಲಕ ಯಂತ್ರಗಳಿಂದ ನಡೆಯುತ್ತದೆ. ಕಾಂಕ್ರೀಟ್ ಮಿಶ್ರಣವನ್ನು ಮಾಡುವಂಥ ಯಂತ್ರದಲ್ಲಿ ಕಚ್ಚಾಪದಾರ್ಥಗಳ ಮಿಶ್ರಣವನ್ನು ಮಾಡುತ್ತಾರೆ. ಹೀಗೆ ತಯಾರಾದ ಮಿಶ್ರಣವನ್ನು ಸಾಲು ಬಕೆಟ್ಟುಗಳಲ್ಲಿ ತುಂಬಿ ಸಾಗುಪಟ್ಟಿ ಟ್ರಾಲಿಗಳ ಮುಖಾಂತರ ಅಥಮಾ ಸಣ್ಣ ರೈಲುಗಳಿಂದ ಅಥವಾ ಕೊಳವೆಗಳ ಮೂಲಕ ಒತ್ತಡದ ವಾಯುವನ್ನು ಉಪಯೋಗಿಸಿ ನೂಕುತ್ತಾರೆ. ಈ ಕಚ್ಚಾ ಪದಾರ್ಥಗಳ ಮಿಶ್ರಣ ಹೋಗುವಾಗ ಅಲ್ಲಾಡಿ ಬೀಳಬಹುದು. ಇದನ್ನು ತಪ್ಪಿಸಲು ಈ ಮಿಶ್ರಣವನ್ನು ಅದುಮಿ ಇಟ್ಟಿಗೆಯಂತೆ ಮಾಡಿ ಅನಂತರ ರವಾನಿಸುತ್ತಾರೆ. ಯಾವ ರೀತಿಯ ಗಾಜನ್ನು ತಯಾರಿಸುತ್ತಾರೋ ಅದರ ಗಾಜಿನ ತುಂಡುಗಳನ್ನು ಈ ಮಿಶ್ರಣದಲ್ಲಿ ಬೆರೆಸಿರುವುದು ಪದ್ಧತಿ. ಇದರಿಂದ ಅನುಕೂಲತೆಯೂ ಉಂಟು. ಹಿಂದಿನ ತಯಾರಿಕೆಯಿಂದ ಬಂದ ಈ ವ್ಯರ್ಥವಾದ ಗಾಜಿನ ತುಂಡುಗಳಿಗೆ ಕಲೆಟ್ (cullet) ಎಂದು ಹೆಸರು.[] ಇದನ್ನು ಸಣ್ಣ ಚೂರುಮಾಡಿ ಬಳಸುತ್ತಾರೆ. ನವೀನ ಯಂತ್ರೋಪಕರಣಗಳಲ್ಲಿ ಸೂತ್ರಕ್ಕೆ ಅನುಸಾರವಾಗಿ, ಮರಳು ಅಥವಾ ಬೆಣಚುಕಲ್ಲಿನ ಪುಡಿ, ಸೋಡಿಯಂ ಕಾರ್ಬೊನೇಟ್ ಮತ್ತು ಇತರ ವಸ್ತುಗಳನ್ನು ಬೆರೆಸಿ ಮಿಶ್ರಣ ಮಾಡುವರು. ಸಾಗುಪಟ್ಟಿಗಳ ಮೇಲೆ ಚಲಿಸುವ ಬಕೆಟ್ಟುಗಳಲ್ಲಿ ಈ ಮಿಶ್ರಣವನ್ನು ಯಂತ್ರಕ್ಕೆ ಸಾಮಾನು ಒದಗಿಸುವ ಸಲಕರಣೆಗೆ ತಲುಪಿಸುವರು. ಇಲ್ಲಿಂದ ಈ ಮಿಶ್ರಣವನ್ನು ಒಂದೇ ಸಮನಾಗಿ ಉರಿಯುತ್ತಿರುವ ಒಲೆಯಲ್ಲಿ ಸುರಿಯುವರು. ಸುಮರು 14800 ಸೆಂ. ಉಷ್ಣತೆಯಲ್ಲಿ ಕರಗಿದ ಗಾಜು ಶುದ್ಧಗೊಳಿಸುವ ಕೊಠಡಿಗೆ ನಿಧಾನವಾಗಿ ಒಂದೇ ಪ್ರವಾಹದಲ್ಲಿ ಹೋಗುತ್ತದೆ. ಕೊಳೆಯನ್ನು ಈ ಕೊಠಡಿಯಲ್ಲಿ ತೆಗೆದು ಶುದ್ಧ ಗಾಜನ್ನು ದುಂಡನೆಯ ರಂಧ್ರದ ಮೂಲಕ ಹೊರ ನೂಕುತ್ತಾರೆ. ನಿಧಾನವಾಗಿ ಹರಿಯುವ ಈ ಮಂದ ಗಾಜನ್ನು ಬೇಕಾದ ಗಾತ್ರಕ್ಕೆ ಕತ್ತರಿಸಿ ಮುದ್ದೆ ಮಾಡುವರು. ಕೆಂಪಗೆ ಕಾದಿರುವ ಮುದ್ದೆಗಾಜು ನಕ್ಷತ್ರದಂತೆ ಪ್ರಕಾಶಿಸುತ್ತ ಅಚ್ಚುಗಳಿಗೆ ಬಿದ್ದು ಅವುಗಳಲ್ಲಿರುವ ಆಕಾರಗಳನ್ನು ಪಡೆಯುವುದು. ಗಾಜಿನ ಆಕಾರವನ್ನು ಪೂರ್ಣಮಾಡುವ ಅಚ್ಚು, ಅದು ಹಿಡಿದುಕೊಂಡು ಕೆಲವೇ ಸೆಕೆಂಡುಗಳಲ್ಲಿ ಒತ್ತಡದ ವಾಯುವನ್ನು ಊದುವುದರ ಮೂಲಕ, ಸೀಸೆಗೆ ಸರಿಯಾದ ಆಕಾರವನ್ನು ಕೊಡುತ್ತದೆ. ಕಬ್ಬಿಣದ ಅಚ್ಚುಗಳ ಬಾಯಿ ತೆರೆದಾಗ ಸೀಸೆಯ ಸಮೂಹ ಹೊರಗೆ ಬೀಳುತ್ತದೆ. ಪ್ರತಿಯೊಂದು ಸೀಸೆಯೂ ಆಕಾರ ಮತ್ತು ಗಾತ್ರದಲ್ಲಿ ಒಂದೇ ರೀತಿ ಇರುವುದು. ಹೊಳೆಯುವ ಸೀಸೆ ಅಥವಾ ಜಾಡಿಗಳು ಕಾವಿನಿಂದ ಹದಮಾಡುವ ಒಲೆಗಳುಳ್ಳ ಸುರಂಗದಲ್ಲಿ ಸಾಗುಪಟ್ಟಿಯ ಮೂಲಕ ಹಾದು ಹೋಗಿ ನಿಧಾನವಾಗಿ ತಣ್ಣಗಾಗುತ್ತದೆ. ತರಬೇತಾಗಿರುವ ವೀಕ್ಷಕರು ಈ ಸುರಂಗದ ಇನ್ನೊಂದು ಭಾಗದಲ್ಲಿ ಸೀಸೆಗಳನ್ನು ಪರೀಕ್ಷಿಸುವರು. ಅವುಗಳಲ್ಲಿ ದೋಷ ಕಂಡುಬಂದರೆ ಅಂಥವನ್ನು ಬೇಡದ ಗಾಜು ಎಂದು ಪರಿಗಣಿಸಿ ಮುಂದಿನ ಒಬ್ಬೆಯಲ್ಲಿ ಬಳಸುವರು. ಆಗ ತಾನೆ ತಯಾರಾದ ಗಾಜಿನ ಸೀಸೆಗಳನ್ನು ಮಾರಾಟಕ್ಕೆ ರವಾನಿಸುವ ಮೊದಲು ಪ್ರಯೋಗಶಾಲೆಯಲ್ಲಿ ಬೆಳಕಿನ ಕಿರಣಗಳಿಗೆ ಒಡ್ಡಿ ಪರೀಕ್ಷಿಸುತ್ತಾರೆ. ಸೀಸೆಯಲ್ಲಿ ಯಾವ ಬಣ್ಣವೂ ಕಾಣಿಸದಿದ್ದರೆ ಅದು ತೇರ್ಗಡೆ ಹೊಂದುತ್ತದೆ. ಅದರಲ್ಲಿ ಹಳದಿ ಬಣ್ಣ ಕಂಡಲ್ಲಿ ಆ ಸೀಸೆಯನ್ನು ತೆಗೆದುಹಾಕಿ ಕಲೆಟ್ ಆಗಿ ಬಳಸುತ್ತಾರೆ. ಸುಮರು 50 ಪೌಂಡ್ ತೂಕದ ಒತ್ತಡವನ್ನು ಯಂತ್ರದ ಮುಖಾಂತರ ಸೀಸೆಯ ಮೇಲೆ ಹೇರಲಾಗುವುದು. ಸೀಸೆಯ ಸಾಮರ್ಥ್ಯ ಸರಿಯಾಗಿದ್ದರೆ ಅಗ ಏನೂ ಆಗುವುದಿಲ್ಲ ಇಲ್ಲದಿದ್ದರೆ ಅದು ಒಡೆದು ಹೋಗುತ್ತದೆ. ಸೀಸೆಗಳಿಗೆ ಕಾವು ಕೊಟ್ಟ ತತ್‌ಕ್ಷಣ ತಣ್ಣಗೆ ಮಾಡಿದರೆ ಅದನ್ನು ಅವು ತಾಳಿಕೊಳ್ಳುತ್ತವೆಯೇ ಎಂಬುದನ್ನು ಪರೀಕ್ಷಿಸಲು ಬಿಸಿನೀರು ಮತ್ತು ತಣ್ಣಗಿರುವ ನೀರಿನ ತೊಟ್ಟಿಗಳಲ್ಲಿ ಸೀಸೆಗಳನ್ನು ಮುಳಗಿಸಿ ನೋಡುತ್ತಾರೆ. ಉತ್ತಮ ಗುಣದ ಸೀಸೆಯ ಮೇಲೆ ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ. ಸೀಸೆ ಸರಿಯಾಗಿಲ್ಲದಿದ್ದರೆ ಒಡೆದು ಹೋಗುತ್ತದೆ.

ವಿವಿಧ ಗಾಜುಗಳು

[ಬದಲಾಯಿಸಿ]

ಗಾಜಿನ ಸುರುಳಿ (ರೋಲ್ಡ್ ಗ್ಲಾಸ್)

[ಬದಲಾಯಿಸಿ]

ಪ್ರಾರಂಭದಲ್ಲಿ ಹಾಳೆಗಾಜು (ಷೀಟ್ ಗ್ಲಾಸ್) ಮತ್ತು ತಟ್ಟೆ ಗಾಜುಗಳಲ್ಲಿ (ಪ್ಲೇಟ್ ಗ್ಲಾಸ್) ಬಹಳ ವ್ಯತ್ಯಾಸವಿತ್ತು. ಊದುವುದರ ಮುಖಾಂತರ ಒಂದನ್ನು ತಯಾರಿಸುತ್ತಿದ್ದರು. ಇನ್ನೊಂದನ್ನು ಅಚ್ಚಿಗೆ ಹಾಕಿ ಸುರುಳಿ ಸುತ್ತುತ್ತಿದ್ದರು. ತಟ್ಟೆ ಗಾಜಿನ ಭಾಗಗಳಿಗೆ ಕಡೆಗೆ ಮೆರಗು ಕೊಡುತ್ತಿದ್ದರು. ಈಗ ಮುಂಚಿನ ಹಾಗೆ ಈ ವಿಂಗಡಣೆ ಸರಳವಾಗಿಲ್ಲ. 1688ರಲ್ಲಿ ಮೊದಲು ತಟ್ಟೆ ಗಾಜನ್ನು ತಯಾರಿಸಿದರು.[] ಕರಗಿದ ಗಾಜನ್ನು ಇಳಿಜಾರು ಮೇಜಿನ ಮೇಲೆ ಎರಕ ಹೊಯ್ಯುತ್ತಿದ್ದರು. ಇದರಲ್ಲಿ ಎರಡು ಸುರುಳಿ ಗಾಜು ಸಿಗುತ್ತಿತ್ತು.

ಹೊಳಪಿನ ಗಾಜು

[ಬದಲಾಯಿಸಿ]

ಆರ್ಗ್ಯಾನಿಕ್ ಗಂಧಕದ ಮಿಶ್ರಣಗಳಾದ ಚಿನ್ನ, ಪ್ಲಾಟಿನಮ್ ಮತ್ತು ಇತರ ಪ್ರಮುಖ ಲೋಹಗಳನ್ನು ಲ್ಯಾವೆಂಡರ್ ಸುಗಂಧ ಎಣ್ಣೆಯಲ್ಲಿ ತೆಗೆದುಕೊಂಡು ಗಾಜಿಗೆ ಬಳಿದರೆ ಹೊಳಪುಗಾಜು ದೊರೆಯುತ್ತದೆ.

ಅಲಂಕೃತ ಗಾಜು

[ಬದಲಾಯಿಸಿ]

ಚಿನ್ನ, ಬೆಳ್ಳಿ ಮತ್ತು ತಾಮ್ರಗಳನ್ನು ಹೊಂದಿರುವ ಕೆಲವು ಗಾಜುಗಳು ಬೆಳಕಿಗೆ ಸೂಕ್ಷ್ಮವಾಗಿರುತ್ತವೆ. ಇವನ್ನು ಅತಿ ತೀಕ್ಷ್ಣವಾದ ಅತಿನೇರಿಳೆ ಕಿರಣಗಳಿಗೆ (ಅಲ್ಟ್ರಾವಯೊಲೆಟ್ ರೇಸ್) ಒಡ್ಡಿದರೆ ಯಾವ ಬದಲಾವಣೆಯೂ ಗಾಜಿನಲ್ಲಿ ಕಂಡುಬರುವುದಿಲ್ಲ. ಆದರೆ ಈ ಗಾಜನ್ನು ಮೃದುವಾಗಿ ಮಾಡಲು ಕಾಯಿಸಿದಾಗ ಅದು ಹಳದಿ ಅಥವಾ ಕೆಂಪುಬಣ್ಣಕ್ಕೆ ತಿರುಗುತ್ತದೆ.

ಸಂರಕ್ಷಕ ಗಾಜು

[ಬದಲಾಯಿಸಿ]

ಗಾಜು ಮುರಿದಾಗ ಅಥವಾ ಒಡೆದಾಗ ಜನರಿಗೆ ಅದು ಸಿಡಿದು ಉಂಟಾಗುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಎರಡು ಗಾಜಿನ ಹಾಳೆಗಳ ಮಧ್ಯದಲ್ಲಿ ಮೆದುವಾದ ಹಾಳೆಯೊಂದನ್ನು ಇಟ್ಟು ತೆಳುಪದರದ ಗಾಜನ್ನು ತಯಾರಿಸುತ್ತಾರೆ. ಹಾಗಾಗಿ ಗಾಜು ಮುರಿದಾಗ ಅಪಾಯವಾಗುವುದಿಲ್ಲ. ಗಾಜಿನ ಹಾಳೆಗಳನ್ನು ಅವು ಮೃದುವಾಗುವ ಅವಧಿಕ ಸ್ಥಿತಿವರೆಗೆ ಕಾಯಿಸಿ ಬಳಿಕ ಒಂದೇ ಸಮನಾಗಿ ವಾಯುವಿನಿಂದ ಬೇಗ ತಣ್ಣಗೆ ಮಾಡಲಾಗುವುದು. ಇಂಥ ಗಾಜನ್ನು ಕಾರು, ಮೋಟಾರು ವಾಹನ ಮುಂತಾದವುಗಳಲ್ಲಿ ಬಳಸುತ್ತಾರೆ.

ಗಾಜಿನ ದಾರ

[ಬದಲಾಯಿಸಿ]

ಬಿಗಿಯಾಗಿರುವ ಗಾಜನ್ನು ಎಳೆದು ದಾರದಂತೆ ಮಾಡಿ ಅದನ್ನು ಗಾಜಿನ ಪಾತ್ರೆಗಳ ಮೇಲೆ ಆಭರಣದಂತೆ ತೊಡಿಸುವುದನ್ನು ಮೊದಲು ಗಾಜಿನ ಚರಿತ್ರೆ ಆರಂಭವಾದಾಗಿನಿಂದಲೂ ಕಾಣಬಹುದು.

ರಂಗಿನ ಗಾಜು

[ಬದಲಾಯಿಸಿ]

ಸಾವಿರಾರು ವರ್ಷಗಳ ಹಿಂದೆ ಚರ್ಚುಗಳ ಕಿಟಕಿಯ ಗಾಜುಗಳನ್ನು ರಂಗಿನಿಂದ ಚಿತ್ರಿಸುತ್ತಿದ್ದರು. ಗಾಜಿನ ಕೆಲಸಗಾರ ಕೊಳವೆಯೊಂದನ್ನು ಕರಗಿರುವ ಗಾಜಿನಲ್ಲಿ ಅದ್ದಿ ತುದಿಯಲ್ಲಿ ಮೃದುವಾದ ಮುದ್ದೆ ತೆಗೆದುಕೊಳ್ಳುತ್ತಾನೆ. ಕೊಳವೆಯ ಇನ್ನೊಂದು ಅಂಚಿನಿಂದ ಗಾಜನ್ನು ಊದಿ ದೊಡ್ಡ ಟೊಳ್ಳಾದ ಗಾಜಿನ ಚೆಂಡನ್ನು ಮಾಡಿ ಅದನ್ನು ತೂಗಾಡಿಸಿ ಕೊಳವೆಯ ಆಕಾರವನ್ನು ಮಾಡುತ್ತಾನೆ. ಇದು ತಣ್ಣಗಾಗಿ ಸ್ವಲ್ಪ ಗಟ್ಟಿಯಾದ ಮೇಲೆ ಅಂಚುಗಳನ್ನು ಕತ್ತರಿಸುತ್ತಾನೆ. ಅನಂತರ ಇದನ್ನು ಕಾಯಿಸಿ ಮೃದುಮಾಡಿ ಗಾಜಿನ ಹಾಳೆಯಾಗಿ ಬಿಚ್ಚುತ್ತಾನೆ. ಈ ರೀತಿಯಲ್ಲಿ 3' ಉದ್ದ ಮತ್ತು 2' ಅಗಲದ ಗಾಜಿನ ಹಾಳೆಗಳನ್ನು ಪಡೆದು ಅವುಗಳ ಮೇಲೆ ಆಕೃತಿ ಚಿತ್ರಗಳನ್ನು ಬರೆದು ಕಿಟಕಿಗಳಲ್ಲಿ ಉಪಯೋಗಿಸುತ್ತಿದ್ದರು.

ಗಾಜಿನ ಉಪಯೋಗಗಳು

[ಬದಲಾಯಿಸಿ]

ಗಾಜಿನ ಸೀಸೆಗಳಲ್ಲಿ ಮಾತ್ರೆ, ಪುಡಿ, ದ್ರವ, ಮುಲಾಮು ಈ ರೀತಿ ಯಾವ ವಸ್ತುವನ್ನು ಬೇಕಾದರೂ ತುಂಬಬಹುದು. ಹಾಲು, ಹಣ್ಣು, ತರಕಾರಿ ಮತ್ತು ಆಹಾರ ವಸ್ತುಗಳನ್ನು ಗಾಜಿನ ಪಾತ್ರೆಗಳಲ್ಲಿ ಶೇಖರಿಸಿಟ್ಟರೆ ಅವು ಅಂದವಾಗಿ ಕಾಣುತ್ತವೆ. ಸುಗಂಧ ಎಣ್ಣೆಗಳನ್ನು, ಔಷಧಿಗಳನ್ನು, ತಂಪಾದ ಪಾನೀಯಗಳನ್ನು, ಬಿಯರ್, ಮದ್ಯ ಮುಂತಾದವುಗಳನ್ನು ಗಾಜಿನ ವಿವಿಧ ಆಕಾರದ ಮತ್ತು ಆಕರ್ಷಿಸುವ ಸೀಸೆಗಳಲ್ಲಿ ತುಂಬಿ ಮಾರಾಟ ಮಾಡುತ್ತಾರೆ.[][][೧೦] ಗಾಜನ್ನು ಕಿಟಕಿಗಳಲ್ಲಿ, ಬಾಗಿಲುಗಳಲ್ಲಿ ಮತ್ತು ಹೆಂಚುಗಳಲ್ಲಿ ಉಪಯೋಗಿಸುತ್ತಾರೆ. ಅತಿಸಾಮರ್ಥ್ಯವಿರುವ ಗಾಜು ಉಕ್ಕನ್ನು ಹೋಲುತ್ತದೆ. ಆದ್ದರಿಂದ ಇದನ್ನು ದೊಡ್ಡ ಸುತ್ತಿಗೆಯಂತೆ ಬಳಸಬಹುದು. ಹೆಚ್ಚು ಬಳುಕುವ ಮತ್ತು ಮೃದುವಾದ ಗಾಜನ್ನು ಲಾಡಿಯಂತೆ ಗಂಟುಹಾಕಬಹುದು. ಪುಟಿತತೆ ಇರುವ ಗಾಜನ್ನು ಹಗ್ಗದ ರೂಪದಲ್ಲಿ ಮತ್ತು ಸ್ಪ್ರಿಂಗಿನ ಹಾಗೆ ಬಳಸಬಹುದು. ಕಾರಿನ ಟಯರುಗಳಲ್ಲಿ ಗಾಜನ್ನು ಉಪಯೋಗಿಸುವುದರಿಂದ ಅವು ಹೆಚ್ಚು ಬಾಳಿಕೆ ಬರುತ್ತವೆ. ರಾಸಾಯನಿಕ ವಸ್ತುಗಳಿಂದ ಹೆಚ್ಚು ಸಾಮರ್ಥ್ಯ ಪಡೆದ ಗಾಜು 50,000 ಪೌಂಡಿನ ಒತ್ತಡ ತಡೆಯಬಲ್ಲುದು. ಆದ್ದರಿಂದ ಇದನ್ನು ಲೋಹ ಮತ್ತು ಉಕ್ಕಿನ ಸ್ಥಳಗಳಲ್ಲಿ ಉಪಯೋಗಿಸುತ್ತಾರೆ.

ಬ್ರಿಟನಿನಲ್ಲಿ ಒಡೆದ ಗಾಜಿನ ಸೀಸೆಗಳ ರಾಶಿ ಜನರಿಗೆ ದೊಡ್ಡ ತೊಂದರೆಯಾಗಿತ್ತು. ಈ ಸೀಸೆಗಳನ್ನು ಚೆನ್ನಾಗಿ ಪುಡಿಮಾಡಲು ಹ್ಯಾಂಪ್‌ಶೈರ್ ಕಾರ್ಖಾನೆ ಒಂದು ಹೊಸ ಯಂತ್ರವನ್ನು ಕಂಡುಹಿಡಿಯಿತು. ಈ ಯಂತ್ರ ಮದ್ಯದ ಸೀಸೆಗಳನ್ನು 15 ಸೆಕೆಂಡುಗಳಲ್ಲಿ ಮತ್ತು ಬೀರ್ ಸೀಸೆಗಳನ್ನು 3 ಸೆಕೆಂಡುಗಳಲ್ಲಿ ಪುಡಿ ಮಾಡುತ್ತದೆ. ಈ ಪುಡಿಯನ್ನು ರಸ್ತೆಮಾಡುವ ಉದ್ಯೋಗದವರಿಗೆ ಮಾರುವರು. ಅವರು ಇದನ್ನು ಬಳಸಿ ಗಾಜಿನ ಕಲ್ಲರಗು ರಸ್ತೆಯನ್ನು ತಯಾರಿಸುತ್ತಾರೆ. ಇಂಥ ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳು ಜಾರುವುದಿಲ್ಲ. ಈಗಾಗಲೇ ಇಂಥ ರಸ್ತೆಗಳು ಡೆನ್ಮಾರ್ಕ್, ನ್ಯೂಯಾರ್ಕ್, ಇಟಲಿ, ಜರ್ಮನಿ ಮತ್ತು ಜಪಾನಿನಲ್ಲಿ ಇವೆ.

ಉಲ್ಲೇಖಗಳು

[ಬದಲಾಯಿಸಿ]
  1. Garner, Harry, "An Early Piece of Glass from Eridu", Iraq, vol. 18, no. 2, 1956, pp. 147–49, 1956 doi:10.2307/4199608
  2. Agricola, Georgius, De re metallica, translated by Herbert Clark Hoover and Lou Henry Hoover, Dover Publishing. De Re Metallica Trans. by Hoover Online Version Page 586. Retrieved September 12, 2007
  3. Ghosh, Amalananda (1990). An Encyclopaedia of Indian Archaeology. BRILL. ISBN 90-04-09262-5.
  4. Toner, J. P. (2009) Popular culture in ancient Rome. ISBN 0-7456-4310-8. p. 19
  5. Grundon (2007), pp. 90–91
  6. "Glass, Common Wastes & Materials". US EPA. Retrieved 22 April 2012.
  7. Encyclopædia Britannica 11th edition (1911)
  8. "Glass Applications – Glass Alliance Europe". Glassallianceeurope.eu. Retrieved 2020-03-01.
  9. Hynes, Michael; Jonson, Bo (1997). "Lead, glass and the environment". Chemical Society Reviews. 26 (2): 145. doi:10.1039/CS9972600133.
  10. "Cut glass | decorative arts". Encyclopedia Britannica.


ಗ್ರಂಥಸೂಚಿ

[ಬದಲಾಯಿಸಿ]
  • Grundon, Imogen (2007). The Rash Adventurer, A Life of John Pendlebury. London: Libri.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: