ವಿಷಯಕ್ಕೆ ಹೋಗು

ಗಾಲ್ಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಲ್ಫ್

[ಬದಲಾಯಿಸಿ]

ಚೆಂಡನ್ನು ದಾಂಡಿನಿಂದ ಹೊಡೆದು ಬದ್ದು ತುಂಬಿಸುವ ಒಂದು ಹೊರಾಂಗಣ ಕ್ರೀಡೆ. ಈಗ ಬಹುಜನಪ್ರಿಯವೂ ಅಂತಾರಾಷ್ಟ್ರೀಯವೂ ಎನಿಸಿದೆ. ಅದರ ಮೈದಾನ ಇಷ್ಟೇ ವಿಸ್ತಾರದ್ದಾಗಿರಬೇಕೆಂಬ ನಿಯಮವಿಲ್ಲ. ಆದರೆ ಅದು ಸಾಕಷ್ಟು ದೊಡ್ಡದಾಗಿರಬೇಕು. ಮೈದಾನದಲ್ಲಿನ ಗುಳಿಗಳ ಸಂಖ್ಯೆ 9ರಿಂದ 18ರ ವರೆಗೂ ಇರಬಹುದು. 18 ಇರುವದೇ ಈಗಿನ ವಾಡಿಕೆ. ಉದಾಹರಣೆಗೆ ಅಮೆರಿಕದ ಶಿಷ್ಟ ಮೈದಾನದ ಸುತ್ತು 5400 ಮೀ.ಯಿದ್ದು ನಡುವೆ 18 ಗುಳಿಗಳಿವೆ. ಈ ಗುಳಿಗಳ ನಡುವೆ ಇಂತಿಷ್ಟೇ ಅಂತರವಿರಬೇಕೆಂಬ ನಿಯಮವೇನಿಲ್ಲ. ಮೈದಾನ ಮಟ್ಟಸವಾಗಿರ ಬೇಕಾದುದೂ ಇಲ್ಲ. ಉಬ್ಬು ತಗ್ಗು ಅಂಕುಡೊಂಕುಗಳಿರುವ ನೈಸರ್ಗಿಕ ಮೈದಾನವೇ ಗಾಲ್ಫಿಗೆ ಹೇಳಿಮಾಡಿಸಿದ ಅಖಾಡ. ಚೆಂಡು ಗಡಸಾಗಿರುತ್ತದೆ. ಅದನ್ನು ದಾಂಡಿನಿಂದ ಹೊಡೆಯುತ್ತ ಒಂದೊದಾಗಿ ಬದ್ದನ್ನು ತುಂಬಿಸುತ್ತ ಹೋಗಬೇಕು. ಯಾರು ಕಡಿಮೆ ಹೊಡೆತದಲ್ಲಿ ಬದ್ದುಗಳೆಲ್ಲವನ್ನೂ ತುಂಬಿಸುತ್ತಾರೋ ಅವರು ಗೆದ್ದಂತೆ. ಆಟಗಾರರು ಒಂದೇ ದಾಂಡನ್ನು ಬಳಸುವುದಿಲ್ಲ. ಚೆಂಡು ಬಿದ್ದಿರುವ ಜಾಗ, ಅದಕ್ಕೂ ಬದ್ದಿಗೂ ಇರುವ ಅಂತರ, ನಡುವಣ ನೆಲದ ಅಂಕುಡೊಂಕುಗಳನ್ನು ಗಮನಿಸಿ ಹೊಡೆತಕ್ಕೆ ಯೋಗ್ಯವಾದ ದಾಂಡನ್ನು ಬಳಸುತ್ತಾರೆ. ಈ ದಾಂಡುಗಳ ಮತ್ತು ಚೆಂಡಿನ ವಿಷಯ ಮುಂದೆ ಬಂದಿದೆ.

ಇತಿಹಾಸ

[ಬದಲಾಯಿಸಿ]

ಗಾಲ್ಫ್ ಎಂದು ಆರಂಭವಾಯಿತು ಎಂಬುದನ್ನು ಸರಿಯಾಗಿ ಹೇಳಲು ಸಾಧ್ಯವಾಗದು. ಈ ಆಟ ಸ್ಕಾಟ್ಲೆಂಡಿನಲ್ಲಿ ಆರಂಭವಾಯಿತೆಂದು ಹೇಳಲಾಗುತ್ತಿದ್ದರೂ ಶತಮಾನಗಳ ಹಿಂದೆಯೇ ಇತರ ದೇಶಗಳಲ್ಲಿ ಈ ಆಟ ಆಡಲಾಗುತ್ತಿತ್ತು ಎನ್ನಲು ಪುರಾವೆಗಳಿವೆ. ರೋಮ್ ಸಾಮ್ರಾಜ್ಯದ ಆರಂಭ ದಿನಗಳಲ್ಲಿ ಪ್ಯಾಗಾನಿಕಾ ಎಂಬ ಆಟ ಬಳಕೆಯಲ್ಲಿತ್ತು. ಹಕ್ಕಿಯ ಪುಕ್ಕಗಳನ್ನು ತುಂಬಿದ್ದ ಚರ್ಮದ ಚೆಂಡನ್ನು ಬಾಗಿರುವ ಉದ್ದದ ಕೋಲೊಂದರಿಂದ ಹೊಡೆವ ಆಟ ಅದು. ರೋಮನ್ ಸೈನಿಕರು ತಾವು ಹೋದಲ್ಲೆಲ್ಲ ಈ ಆಟ ಆಡುತ್ತಿದ್ದರು. ಹೀಗೆ ಸ್ಕಾಟ್ಲೆಂಡಿಗೆ ಈ ಆಟ ಬಂದಿರಬಹುದು.

ಗಾಲ್ಫ್ ಬಗ್ಗೆ ಸ್ಕಾಟ್ಲೆಂಡಿನಲ್ಲಿ ನಿಗದಿಯಾಗಿ ಕೇಳಬಂದುದು 1457ರಲ್ಲಿ. ಬಿಲ್ಲು ವಿದ್ಯೆಯ ಬಗ್ಗೆ ಜನತೆಯಲ್ಲಿ ಆಸಕ್ತಿ ಕುಗ್ಗುತ್ತಿದ್ದುದನ್ನು ಪಾರ್ಲಿಮೆಂಟ್ ಗಮನಿಸಿ ರಾಜ್ಯದ ಶ್ರೀಮಂತರು ವರ್ಷಕ್ಕೆ ನಾಲ್ಕು ಬಾರಿ ಸಭೆ ಸೇರಿ, ಫುಟ್ ಬಾಲ್ ಹಾಗೂ ಗಾಲ್ಫ್ ಆಟಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಗೊತ್ತುಪಡಿಸಿತು. ಇದೇ ರೀತಿಯ ಶಾಸನಗಳನ್ನು 1471 ಹಾಗೂ 1491ರಲ್ಲೂ ಮಾಡಲಾಯಿತು. 1491ರಲ್ಲಿ ಫುಟ್ಬಾಲ್ ಹಾಗೂ ಗಾಲ್ಫ್ ಆಟಗಳಿಗೆ ನೇರ ಬಹಿಷ್ಕಾರ ವಿಧಿಸಲಾಯಿತು.ಗಾಲ್ಫ್ ಆಟಕ್ಕೆ ಬಹಿಷ್ಕಾರ ವಿಧಿಸಿದ ನಾಲ್ಕನೆಯ ಜೇಮ್ಸ್ ಕೆಲವರ್ಷಗಳ ಅನಂತರ ತಾನೇ ಗಾಲ್ಫ್ ಆಡತೊಡಗಿದನೆಂದು ಹೇಳಲಾಗಿದೆ. ಮೇರಿ ಸ್ಟೂವರ್ಟ್ ತನ್ನ ಪತಿಯ ಕೊಲೆಯಾದ ಕೆಲದಿನಗಳ ಮೇಲೆ ಗಾಲ್ಫ್ ಆಡುತ್ತಿದ್ದಳೆಂಬ ವರದಿಗಳಿವೆ. ಹೀಗೆ ರಾಜರುಗಳ ಪ್ರೋತ್ಸಾಹದಿಂದ ಬೆಳೆದ ಗಾಲ್ಫ್ ಆಟ ಹೆಚ್ಚು ಪ್ರಚಾರ ಪಡೆಯಲು 18ನೆಯ ಶತಮಾನದಲ್ಲಿ ಹುಟ್ಟಿಕೊಂಡ ಗಾಲ್ಫ್ ಕ್ಲಬ್ಗಳು ನೆರವಾದುವು

ಖ್ಯಾತ ರಾಯಲ್ ಬ್ಲ್ಯಾಕ್ಹೀತ್ ಕ್ಲಬ್ 1608ರಲ್ಲೇ ಇತ್ತೆಂದು ಹೇಳಲಾಗಿದ್ದರೂ ಈ ಕ್ಲಬ್ ಅಸ್ತಿತ್ವಕ್ಕೆ ಬಂದುದು 1787 ಎನ್ನಬಹುದು. ಈ ಮುನ್ನ ಕೆಲವು ಕ್ಲಬ್ಗಳು ಇದ್ದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ವಿಶ್ವದ ಪ್ರಧಾನ ಕ್ಲಬ್ ಆದ ರಾಯಲ್ ಅಂಡ್ ಏನ್ಷಂಟ್ ಕ್ಲಬ್ ಭವನವನ್ನು 1840ರಲ್ಲಿ ಕಟ್ಟಲಾಯಿತು. ಇಂಗ್ಲೆಂಡಿನ ರಾಜರ ಹಾಗೂ ಆತನ ಹತ್ತಿರ ಸಂಬಂಧಿಗಳ ಪೋಷಣೆ ಪಡೆದಿದ್ದ ಈ ಕ್ಲಬ್ ಇಂದು ಗಾಲ್ಫ್ ಆಟದ ಬಗ್ಗೆ ನಿರ್ಣಾಯಕ ಸಂಸ್ಥೆ ಎನಿಸಿದೆ. ನಿಯಮಗಳನ್ನು ರೂಪಿಸುವ ಹಾಗೂ ತಿದ್ದುಪಡಿ ಮಾಡುವ ಅಧಿಕಾರ ಈ ಕ್ಲಬ್ಗೆ ಇದೆ. ಇದರ ತೀರ್ಮಾನಗಳನ್ನು ಅಮೆರಿಕ ಸಂಯುಕ್ತಸಂಸ್ಥಾನಗಳನ್ನು ಬಿಟ್ಟು ವಿಶ್ವದ ಉಳಿದೆಲ್ಲ ಎಡೆಗಳಲ್ಲೂ ಸ್ವೀಕರಿಸಲಾಗುತ್ತದೆ. 1951ರಲ್ಲಿ ರಾಯಲ್ ಅಂಡ್ ಏನ್ಷಂಟ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಾಲ್ಫ್ ಸಂಸ್ಥೆಗಳು ಒಂದು ಕಡೆ ಕಲೆತು ಆಟಕ್ಕೆ ವಿಶ್ವದಾದ್ಯಂತ ಒಂದೇ ರೀತಿಯ ನಿಯಮಗಳನ್ನು ಇಟ್ಟುಕೊಳ್ಳಲು ಒಪ್ಪಿಕೊಂಡವು. ಅನಂತರ ಚೆಂಡಿನ ಪ್ರಮಾಣ ಒಂದನ್ನು ಬಿಟ್ಟು (ಅಮೆರಿಕದ ಚೆಂಡಿನ ವ್ಯಾಸ 4.27 ಸೆಂಮೀ ಇಂಗ್ಲೆಂಡಿನ ಚೆಂಡಿನ ವ್ಯಾಸ 3.75 ಸೆಂಮೀ) ಉಳಿದೆಲ್ಲ ಅಂಶಗಳಲ್ಲೂ ಇವೆರಡು ಸಂಸ್ಥೆಗಳ ನಿಯಮಗಳಲ್ಲೂ ಸಾಮರಸ್ಯವಿದೆ.

ಬ್ರಿಟಷ್ ಓಪನ್ ಅಂಡ್ ಅಮೆಚೂರು ಚಾಂಪಿಯನ್ಷಿಪ್ ಹಾಗೂ ಇಂಗ್ಲೆಂಡಿನ ವಾಕರ್ ಕಪ್ ಪಂದ್ಯಗಳು ರಾಯಲ್ ಅಂಡ್ ಏನ್ಷೆಂಟ್ ಕ್ಲಬ್ನ ಆಧಿಕಾರ ವ್ಯಾಪ್ತಿಗೆ ಒಳಗಾಗಿರುತ್ತವೆ.

ಅಮೆರಿಕದಲ್ಲಿ 1779ರಿಂದ ಗಾಲ್ಫ್ ಆಡಲಾಗುತ್ತಿದೆಯಾದರೂ ಮುಂದೆ ಒಂದು ಶತಮಾನಕಾಲ ಈ ಆಟ ಅಷ್ಟು ಪ್ರಚಾರ ಪಡೆದಿರಲಿಲ್ಲ. 1887ರಿಂದ ಈಚೆಗೆ ಈ ಆಟವನ್ನು ಅಮೆರಿಕದಲ್ಲಿ ನಿಯತ ರೂಪದಲ್ಲಿ ಆಡಲಾಗುತ್ತಿದೆ. ಸ್ಕಾಟ್ಲೆಂಡಿನ ರಾಬರ್ಟ್ ಲಾಕ್ ಹಾರ್ಟ್ ಎಂಬಾತ ಕೆಲವು ಗಾಲ್ಫ್ ಚೆಂಡುಗಳನ್ನೂ ದಾಂಡುಗಳನ್ನೂ ತಂದು ಅಮೆರಿಕದಲ್ಲಿ ತನ್ನ ಮಿತ್ರರರಿಗೆ ಹಾಗೂ ನೆರೆಯವರಿಗೆ ಕೊಟ್ಟು ಗಾಲ್ಫ್ ಆಟದಲ್ಲಿ ಆಸಕ್ತಿ ಕುದುರಿಸಿದನೆನ್ನಲಾಗಿದೆ. 1888ರಲ್ಲಿ ಈತನಿಗೆ ನೆರೆಯವನಾದ ರೀಡನಿಗೂ ಗಾಲ್ಫ್ ಪಂದ್ಯ ನಡೆಯಿತು. ಅನಂತರ ಸೇಂಟ್ ಆಂಡ್ರೂಸ್ ಕ್ಲಬ್ ಸ್ಥಾಪಿತವಾಯಿತು. 1897ರಲ್ಲಿ ಕ್ಲಬ್ನ ನಿವೇಶನವನ್ನು ನ್ಯೂಯಾರ್ಕ್ ನಗರದ ಮೌಂಟ್ ಹೋಪ್ಗೆ ವರ್ಗಾಯಿಸಲಾಯಿತು.

ಮುಂದೆ 5 ವರ್ಷಗಳಲ್ಲಿ ಸುಮಾರು 20 ಕ್ಲಬ್ಗಳು ಹುಟ್ಟಿಕೊಂಡುವು. 1900ರ ವೇಳೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಾದ್ಯಂತ ಬೇಸಗೆಯಲ್ಲಿ ಈ ಆಟ ಆಡಲಾಗುತ್ತಿತ್ತು. 1920ರ ವೇಳೆಗೆ ಅಮೆರಿಕದಲ್ಲಿ 2,800 ಗಾಲ್ಫ್ ಮೈದಾನಗಳು ಇದ್ದುವು. 1894ರ ಡಿಸೆಂಬರ್ 22ರಂದು ಐದು ಪ್ರಮುಖ ಕ್ಲಬ್ಗಳ ಪ್ರತಿನಿಧಿಗಳು ಸಭೆ ಸೇರಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಾಲ್ಫ್ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಇಂದು ಈ ವಿಭಾಗದಲ್ಲಿ ಗಾಲ್ಫ್ ಬಗ್ಗೆ ಆಡಳಿತ ನಡೆಸುತ್ತಿದೆ. ಮಹಿಳೆಯರೂ ಉತ್ತಮ ಸಂಖ್ಯೆಯಲ್ಲಿ ಈ ಆಟ ಆಡುತ್ತಿದ್ದಾರೆ.

ಗಾಲ್ಫ್ ಆಟದ ವಿವರಣೆ

[ಬದಲಾಯಿಸಿ]

ಗಾಲ್ಫ್ ಚೆಂಡನ್ನು ತುಂಬಿಸುವ ಬದ್ದು ಅಥವಾ ಕುಳಿ ಇರುವ ಸ್ಥಳದಲ್ಲಿ ಮಟ್ಟಸವಾದ ಒಂದು ಚದರವಿರುತ್ತದೆ. ಈ ಚದರದ ಮಧ್ಯೆ ನಾಲ್ಕೂವರೆ ಅಂಗುಲ ವ್ಯಾಸದ ಗುಳಿ ಇರುತ್ತದೆ. ಯಾವ ಗುಳಿಯ ಅನಂತರ ಯಾವ ಗುಳಿ ತುಂಬಿಸಬೇಕೆಂಬುದನ್ನು ಮೊದಲೇ ಗೊತ್ತುಮಾಡಲಾಗಿರುತ್ತದೆ. ಸರಪಳಿಯ ಕೊಂಡಿಗಳಂತೆ ಒಂದು ಗುಳಿಯಿಂದ ಇನ್ನೊಂದು ಗುಳಿಗೆ ಚೆಂಡು ತುಂಬಿಸಲಾಗುತ್ತದೆ. ಒಂದು ಪಂದ್ಯದಲ್ಲಿ ಒಂದು ಗುಳಿಯನ್ನು ಒಮ್ಮೆ ಮಾತ್ರ ತುಂಬಬೇಕು. ಗಾಲ್ಫ್ ಆಟದಲ್ಲಿ ಇಬ್ಬರ ನಡುವೆ ಇಲ್ಲವೆ ಎರಡು ಟೀಮುಗಳ ನಡುವೆ ಸ್ಪರ್ಧೆ ಇರುತ್ತದೆ. ಗುಳಿಯ ಚದರದ ಹೊರಗೆ ಚೆಂಡು ಹೊಡೆಯಲು ಒಂದು ಗುಪ್ಪೆ ಇರುತ್ತದೆ. ಒಂದು ಮರದ ತುಂಡು ಇಲ್ಲವೇ ಮರಳಿನ ಗುಪ್ಪೆ ಚೆಂಡನ್ನು ಸುತ್ತಲ ಪ್ರದೇಶದಿಂದ ಸ್ವಲ್ಪ ಎತ್ತರದಲ್ಲಿ ಇಡಲು ಸಹಾಯಕವಾಗಿರುತ್ತದೆ. ಪ್ರತಿ ಗುಳಿ ತುಂಬುವ ಮೊದಲು ಆಟಗಾರ ಹಲವಾರು ವಿಧದಲ್ಲಿ ಬೇರೆ ಬೇರೆ ಮಾದರಿಯ ದಾಂಡುಗಳನ್ನು ಬಳಸುತ್ತಾನೆ.

ಪಂದ್ಯಗಳಲ್ಲಿ ಎರಡು ಬಗೆ. ಒಂದು ಮ್ಯಾಚ್ ಪ್ಲೇ. ಇದರಲ್ಲಿ ಒಂದೊಂದು ಗುಳಿ ತುಂಬಿಸುವುದೂ ಒಂದೊಂದು ಸ್ಪರ್ಧೆ. ಎದುರಾಳಿಗಿಂತ ಹೆಚ್ಚು ಗುಳಿ ತುಂಬಿಸುವವರು ಗೆಲ್ಲುತ್ತಾರೆ. ಇನ್ನೊಂದು ಸ್ಟ್ರೋಕ್ ಪ್ಲೇ. ಒಬ್ಬ ಆಟಗಾರ ಎಷ್ಟು ಹೊಡೆತಗಳಲ್ಲಿ ಒಂದು ಸುತ್ತು ಗುಳಿತುಂಬಿಸಿ ಮುಗಿಸುತ್ತಾನೆ ಎಂಬುದು ಮುಖ್ಯ. ಕಡಿಮೆ ಹೊಡೆತಗಳಲ್ಲಿ ಸುತ್ತು ಮುಗಿಸುವಾತ ಇದರಲ್ಲಿ ವಿಜಯಿ. ಈ ಎರಡು ಬಗೆಯ ಆಟಗಳೂ ಪ್ರಚಲಿತವಿದೆ. ಸಾಮಾನ್ಯವಾಗಿ ಅಮೆಚೂರ್ ಸ್ಪರ್ಧೆಗಳಲ್ಲಿ ಮ್ಯಾಚ್ ಪ್ಲೇ ವಿಧಾನವನ್ನೂ ಪ್ರೊಫೆಷನಲ್ ಇಲ್ಲವೇ ಓಪನ್ ಸ್ಪರ್ಧೆಗಳಲ್ಲಿ ಸ್ಟ್ರೋಕ್ ಪ್ಲೇ ವಿಧಾನವನ್ನೂ ಬಳಸಲಾಗುತ್ತದೆ. ಪ್ರೊಫೆಷನಲ್ ವಾರ್ಷಿಕ ಚಾಂಪಿಯನ್ ಷಿಪ್ಸನಲ್ಲಿ ಮಾತ್ರ ಮ್ಯಾಚ್ ಪ್ಲೇ ವಿಧಾನದ ಬಳಕೆ ಇದೆ. ಮಹಿಳೆಯರಿಗಾಗಿ ನಡೆವ ಕರ್ಟಿಸ್ ಕಪ್, ಹಾಗೂ ಪುರುಷರಿಗಾಗಿ ನಡೆವ ರೈಡರ್ ಕಪ್ ಹಾಗೂ ವಾಕರ್ ಕಪ್ ಸ್ಪರ್ಧೆಗಳು ವಿಶ್ವಚಾಂಪಿಯನ್ಷಿಪ್ಗಳು.

ನಿಯಮಗಳು

[ಬದಲಾಯಿಸಿ]

ಮ್ಯಾಚ್ ಪ್ಲೇ ಮತ್ತು ಸ್ಟ್ರೋಕ್ ಪ್ಲೇಗಳಿಗೆ ಪ್ರತ್ಯೇಕವಾದ ನಿಯಮಗಳಿವೆ. ಮ್ಯಾಚ್ ಪ್ಲೇನಲ್ಲಿ ಹೆಚ್ಚು ಬದ್ದು ತುಂಬಿಸಿದವರು ಗೆಲ್ಲುತ್ತಾರೆ. ಅಂದರೆ ಇರುವ 18ರಲ್ಲಿ 10 ಬದ್ದು ತುಂಬಿಸಿದವನು ಗೆದ್ದಂತೆ. ಅತಿ ಕಡಿಮೆ ಹೊಡೆತದಿಂದ ಚೆಂಡನ್ನು ಬದ್ದಿಗೆ ತುಂಬಿಸಿದರೆ ಹಾಗೆ ತುಂಬಿಸಿದವನು ಆ ಬದ್ದನ್ನು ಗೆದ್ದಂತಾಗುತ್ತದೆ. ಹಾಗೆ ಮಾಡಿದವನಿಗೆ ಆಟವನ್ನು ಮುಂದುವರಿಸುವ ಗೌರವ ಸಲ್ಲುತ್ತದೆ.

ಇಬ್ಬರೂ ಸಮನಾದ ಹೊಡೆತ ಗಳಿಂದ ಬದ್ದು ತುಂಬಿದಲ್ಲಿ ಗೆದ್ದ ಬದ್ದನ್ನು ಇಬ್ಬರಲ್ಲೂ ಸಮನಾಗಿ ಹಂಚುತ್ತಾರೆ. ಇಬ್ಬರಲ್ಲಿ ಯಾರು ಮೊದಲು ಬದ್ದು ತುಂಬುತ್ತಾರೋ ಅವರಿಗೆ ಆಟ ಮುಂದುವರಿಸುವ ಆಧಿಕಾರ ಬರುತ್ತದೆ. ಸ್ಟ್ರೋಕ್ ಪ್ಲೇನಲ್ಲಿ ಹದಿನೆಂಟು ಬದ್ದುಗಳ ಒಂದು ಸುತ್ತನ್ನು ಯಾರು ಅತಿ ಕಡಿಮೆ ಹೊಡೆತಗಳಲ್ಲಿ ತುಂಬಿ ಮುಗಿಸುತ್ತಾರೋ ಅವರು ಗೆದ್ದಂತೆ. ಯಾರು ಯಾವ ಬದ್ದನ್ನು ಎಷ್ಟು ಹೊಡೆತಗಳಲ್ಲಿ ತುಂಬಿಸಿದರು ಎಂಬುದನ್ನು ಗುರುತು ಮಾಡಿ ಕೊಳ್ಳಲಾಗುತ್ತದೆ.

ಗಾಲ್ಫ್ ಆಟವನ್ನು ಇಬ್ಬರು, ಮೂರು ಜನ, ನಾಲ್ವರು ಒಟ್ಟಿಗೆ ಆಡಬಹುದು. ಇಬ್ಬಿಬ್ಬರ, ಮೂವರು ಮೂವರ ಟೀಮು ಮಾಡಿಕೊಂಡೂ ಆಡಬಹುದು.

ಗಾಲ್ಫ್ ಚೆಂಡು

[ಬದಲಾಯಿಸಿ]

ರೋಮನ್ನರ ಕಾಲದ ಚೆಂಡಿಗೆ ಹೊರಗಡೆ ಚರ್ಮದ ಹೊದಿಕೆ ಇತ್ತು. ಅದರ ಒಳಗೆ ಹಕ್ಕಿಗಳ ರೆಕ್ಕೆಪುಕ್ಕಗಳನ್ನು ಒತ್ತಿ ತುಂಬಿರುತ್ತಿದ್ದರು. 1884ರಲ್ಲಿ ಒಬ್ಬ ವ್ಯಾಪಾರಿ 2,456 ಇಂಥ ಚೆಂಡುಗಳನ್ನು ತಯಾರಿಸಿದನೆನ್ನಲಾಗಿದೆ. ಈ ಬಗೆಯ ಚೆಂಡು ಹೆಚ್ಚು ಬಾಳಿಕೆ ಬರುತ್ತಿರಲಿಲ್ಲ. ಒಂದೆರಡು ಆಟಗಳಲ್ಲೇ ಒಡೆದು ಹೋಗುತ್ತಿತ್ತು. ಅನಂತರ ಗಟಪರ್ಚದಲ್ಲಿ (ಲೇಟೆಕ್ಸ) ಚೆಂಡನ್ನು ತಯಾರಿಸತೊಡಗಿದರು. ರಾಬರ್ಟ್ ಎ. ಪ್ಯಾಟರ್ಸನ್ ಎಂಬಾತ 1845ರಲ್ಲಿ ಇಂಥ ಒಂದು ಚೆಂಡನ್ನು ರೂಪಿಸಿದನೆನ್ನಲಾಗಿದೆ. ಇದರಿಂದ ಆಟದಲ್ಲಿ ದೊಡ್ಡ ಕ್ರಾಂತಿಯೇ ಆದಂತಾಯಿತು. ಈ ಚೆಂಡು ಪುಕ್ಕದ ಚೆಂಡಿಗಿಂತ ಗಡಸು. ಬೇಗ ಒಡೆಯುವಂಥ ದಲ್ಲ. ಆಮೇಲೆ 1898ರಲ್ಲಿ ರಬ್ಬರ್ ಚೆಂಡು ಬಳಕೆಗೆ ಬಂತು. ಇದನ್ನು ರೂಪಿಸಿದವನು ಕಾಬರ್ನ್ ಹ್ಯಾಸ್ಕೆಲ್ ಎಂಬಾತ. ಈತ ಸ್ವತಃ ಗಾಲ್ಫ್ ಆಟಗಾರನಾಗಿದ್ದು ಗುಟ್ರಿಚ್ ಕಂಪನಿಯವರ ಸಹಾಯದಿಂದ ಈ ಹೊಸ ಚೆಂಡನ್ನು ಬಳಕೆಗೆ ತಂದ. ರಬ್ಬರಿನ ಸಣ್ಣ ಗುಂಡೊಂದರ ಸುತ್ತ ಗಟ್ಟಿಯಾಗಿರುವ ರಬ್ಬರ್ ದಾರವನ್ನು ಸುತ್ತುತ್ತ ಹೋಗಿ ಚೆಂಡಿನ ಆಕೃತಿ ಬಂದಮೇಲೆ ಅದನ್ನು ಗಟ್ಟಿಮಾಡುವುದು ಈ ಚೆಂಡು ತಯಾರಿಕೆಯ ವಿಧಾನ. ಇದನ್ನೇ ಈಗ ಸುಧಾರಿಸಿ ಬಳಸಲಾಗುತ್ತಿದೆ. ಚೆಂಡಿನ ವೇಗ ಸೆಕೆಂಡಿಗೆ 250' ಗಿಂತ ಹೆಚ್ಚಿರಬಾರದು ಎಂಬ ನಿಯಮ ಅಮೆರಿಕದಲ್ಲಿ ಪ್ರಚಲಿತವಿದೆ.

ಗಾಲ್ಫ್ ಮೈದಾನ

[ಬದಲಾಯಿಸಿ]

ವಿಶಾಲವಾಗಿದ್ದು ಎಷ್ಟು ಅಂಕುಡೊಂಕುಗಳ ಅಡಚಣೆಗಳು ಇದ್ದರೂ ಅಷ್ಟೂ ಅಷ್ಟು ಉತ್ತಮ. ನಡುವಿನ ಅಡಚಣೆಗಳನ್ನು ನಿವಾರಿಸಿಕೊಂಡು ಚೆಂಡು ಹೊಡೆಯುವುದು ಜಾಣತನ. ಸಹಜವಾದ ಅಡಚಣೆಗಳು ಇಲ್ಲದ ಕಡೆ ಕೃತಕವಾದುದನ್ನು ಒಡ್ಡಾಲಾಗುತ್ತದೆ. ಸರಿಯಾದ ಮೈದಾನದಲ್ಲಿ 18 ಗುಳಿಗಳಿರುತ್ತವೆ. 18 ಅಲ್ಲದೆ 9 ಮಾತ್ರ ಇದ್ದಲ್ಲಿ ಎರಡು ಸುತ್ತು ಆಡಬೇಕಾಗುತ್ತದೆ. ಸ್ಕಾಟ್ಲೆಂಡಿನ ಗೆನ್ ಈಗಲ್ಸ, ಇಂಗ್ಲೆಂಡಿನ ಓಕೆಂಗ್, ಅಮೆರಿಕದ ಪೈನ್ವ್ಯಾಲಿ, ಕೆನಡದ ಜ್ಯಾಸ್ಪರ್ ಪಾರ್ಕ್, ಆಸ್ಟ್ರೇಲಿಯದ ರಾಯಲ್ ಮೆಲ್ಬೋರ್ನ್-ಈ ಮೊದಲಾದವು ಬಹು ಪ್ರಶಸ್ತವಾದ ಗಾಲ್್ಫ ಮೈದಾನಗಳು. ದಾಂಡುಗಳು: ಸಾಮಾನ್ಯವಾಗಿ ಸರಿಯಾದ ಆಟಗಾರನ ಬತ್ತಳಿಕೆಯಲ್ಲಿ 3 ಇಲ್ಲವೆ 4 ಮರದ ದಾಂಡುಗಳು 9 ಇಲ್ಲವೆ 10 ಕಬ್ಬಿಣದ ದಾಂಡುಗಳು ಇರುತ್ತವೆ. ಏನೇ ಆದರೂ ಒಂದು ಸುತ್ತಿನ ಆಟದಲ್ಲಿ 14ಕ್ಕಿಂತ ಹೆಚ್ಚು ದಾಂಡುಗಳ ಅಗತ್ಯ ಕಾಣದು. ಈ ದಾಂಡುಗಳ ಉದ್ದ, ಬಳುಕು, ತೂಕ, ಆಕಾರ, ತಲೆಯ ಬಾಗು-ಈ ಮೊದಲಾದವುಗಳಲ್ಲಿ ಖಚಿತವಾದ ವ್ಯತ್ಯಾಸವಿರುತ್ತದೆ. ಗುರುತಿಗೆಂದು ಒಂದೊಂದು ದಾಂಡಿಗೂ ಒಂದೊಂದು ನಂಬರನ್ನು ಹೆಸರನ್ನು ಕೊಟ್ಟಿರುತ್ತಾರೆ. ಉದಾಹರಣೆಗೆ ಮರದವಲ್ಲಿ 1ನೆಯ ದಾಂಡಿಗೆ ಡ್ರೈವರ್ ಎಂದೂ ಮೂರನೆಯದಕ್ಕೆ ಸ್ಪೂನ್ ಎಂದೂ ಹೆಸರಿದೆ. ಇದೇ ರೀತಿ ಲೋಹದಲ್ಲಿ ಒಂದನೆಯದಕ್ಕೆ ಕ್ಲೀಕ್ ಎಂದೂ ಐದನೆಯದಕ್ಕೆ ಮ್ಯಾಷಿ ಎಂದೂ ಒಂಬತ್ತನೆಯದಕ್ಕೆ ನಿಬ್ಲಿಕ್ ಎಂದೂ ಹೆಸರು.

ದಾಂಡಿನ ಅಂಗಭಾಗಗಳ ಹೆಸರುಗಳನ್ನೂ ಯಾವ ದಾಂಡು ಎಂಥ ಹೊಡೆತಕ್ಕೆ ಯೋಗ್ಯ ಎಂಬ ವಿವರಗಳನ್ನೂ ಚಿತ್ರಗಳಲ್ಲಿ ತೋರಿಸಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಾಲ್ಫ್&oldid=877703" ಇಂದ ಪಡೆಯಲ್ಪಟ್ಟಿದೆ