ವಿಷಯಕ್ಕೆ ಹೋಗು

ಗುಜರಾತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗುಜರಾತ್‌‌ ಇಂದ ಪುನರ್ನಿರ್ದೇಶಿತ)
ಗುಜರಾತ್
Map of India with the location of ಗುಜರಾತ್ highlighted.
Map of India with the location of ಗುಜರಾತ್ highlighted.
ರಾಜಧಾನಿ
 - ಸ್ಥಾನ
ಗಾಂಧಿನಗರ
 - 23.21° N 72.68° E
ಅತಿ ದೊಡ್ಡ ನಗರ ಅಹಮದಾಬಾದ್
ಜನಸಂಖ್ಯೆ (2008)
 - ಸಾಂದ್ರತೆ
56,793,000 (10ನೇ)
 - 258/km²
ವಿಸ್ತೀರ್ಣ
 - ಜಿಲ್ಲೆಗಳು
196,024 km² (7ನೇ)
 - 25
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಮೇ ೧,೧೯೬೦
 - ಓಮ್ ಪ್ರಕಾಶ್ ಕೋಹ್ಲಿ
 - ವಿಜಯ್ ರೂಪಾನಿ
 - Unicameral (182)
ಅಧಿಕೃತ ಭಾಷೆ(ಗಳು) ಗುಜರಾತಿ
Abbreviation (ISO) IN-GJ
ಅಂತರ್ಜಾಲ ತಾಣ: http://www.gujaratindia.com/

ಗುಜರಾತ್ ರಾಜ್ಯದ ಮುದ್ರೆ

ಗುಜರಾತ್ (ગુજરાત - ಗುಜರಾತಿ ಭಾಷೆಯಲ್ಲಿ ) ಭಾರತದ ಪ್ರಮುಖ ಕೈಗಾರಿಕೆಗಳನ್ನೊಳಗೊಂಡ ರಾಜ್ಯ. ಈ ರಾಜ್ಯ ಅರಬ್ಬೀ ಸಮುದ್ರ, ಪಾಕಿಸ್ತಾನದ ಸೀಮೆಗೆ ಸಮೀಪದಲ್ಲಿದೆ. ರಾಜ್ಯದ ರಾಜಧಾನಿ ಗಾಂಧಿನಗರ (ಗುಜರಾತ್). ಅಹ್ಮದಾಬಾದ್ ಗುಜರಾತಿನ ವಾಣಿಜ್ಯ ರಾಜಧಾನಿ. ಅರಬ್ಬೀ ಸಮುದ್ರದ ತೀರದಲ್ಲಿ, ಉ. ಅ. 20° 1’ - 24° 7’ ಮತ್ತು ಪು. ರೇ. 68° 4’ - 74° 4’ ನಡುವೆ ಇದೆ. ಉತ್ತರದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ರಾಜಸ್ಥಾನ, ಪೂರ್ವದಲ್ಲಿ ಮಧ್ಯಪ್ರದೇಶ ಮತ್ತು ದಕ್ಷಿಣದಲ್ಲಿ ಮಹಾರಾಷ್ಟ್ರ ಪಶ್ಚಿಮ, ನೈರುತ್ಯ ಮತ್ತು ದಕ್ಷಿಣದಲ್ಲಿ ಅರಬ್ಬೀ ಸಮುದ್ರ ಮತ್ತು ಖಂಭತ್ ಹಾಗೂ ಕಚ್ ಖಾರಿ ಸುತ್ತುವರೆದಿವೆ. ಈ ರಾಜ್ಯದ ವಿಸ್ತೀರ್ಣ 1,96,024 ಚ.ಕಿಮೀ. ಜನಸಂಖ್ಯೆ 6,03,83,628 (2011).ಗುಜರಾತಿನ ಒಂದು ವೈಶಿಷ್ಟ್ಯವೆಂದರೆ ಅದರ ಕರಾವಳಿ ಭಾರತದ ಬೇರಾವ ರಾಜ್ಯಕ್ಕೂ ಇಷ್ಟು ಉದ್ದವಾದ ಸಮುದ್ರತೀರವಿಲ್ಲ. ಇದು ಗುಜರಾತಿನ ವಾಯುಗುಣ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೆ ಬಹಳ ಹೆಚ್ಚಿನ ಪ್ರಭಾವ ಬೀರಿದೆ. ಭಾರತದ ಒಟ್ಟು ವಿಸ್ತೀರ್ಣದಲ್ಲಿ ಶೇ. 6.1 ರಷ್ಟಿರುವ ಈ ರಾಜ್ಯದ ಜನಸಂಖ್ಯೆ ಭಾರತದ್ದರ ಶೇ.4.8 ರಷ್ಟಿದೆ.

ಭೂಲಕ್ಷಣ

[ಬದಲಾಯಿಸಿ]

ಪ್ರಪಂಚದ ಎಂಟು ಸ್ಥಿರಭಾಗಗಳಲ್ಲಿ ಒಂದಾದ ಭಾರತ ಪರ್ಯಾಯದ್ವೀಪ ಭೂಇತಿಹಾಸದ ಯಾವ ಕಾಲದಲ್ಲೂ ಸಂಪುರ್ಣವಾಗಿ ಸಮುದ್ರಾಕ್ರಮಣಕ್ಕೆ ಒಳಪಟ್ಟಿರಲಿಲ್ಲ. ಜುರಾಸಿಕ್, ಕ್ರಿಟೇಷಸ್ ಮತ್ತು ತೃತೀಯ ಭೂಕಾಲ ಯುಗಗಳಲ್ಲಿ ಗುಜರಾತಿನ ಕೆಲವು ಭಾಗಗಳು ಮಾತ್ರ ಸಮುದ್ರಾಕ್ರಮಣಕ್ಕೆ ಒಳಪಟ್ಟಿದ್ದವು. ಆದ್ದರಿಂದ ಗುಜರಾತಿನ ಭೂಇತಿಹಾಸ ಈ ಕಾಲಗಳ ಶಿಲೆಗಳಿಂದ ಮಾತ್ರ ಪ್ರತಿನಿಧಿತವಾಗಿದೆ. ಇವನ್ನು ಹೀಗೆ ವರ್ಗೀಕರಿಸಬಹುದು. ತೃತೀಯ ಭೂಕಾಲ ಯುಗದ ಶಿಲಾವರ್ಗಗಳು - ಡೆಕ್ಕನ್ ಟ್ರ್ಯಾಪ್; ನರ್ಮದಾ ಕಣಿವೆಯ ಬಾಗ್ ಪದರಗಳು - ಕ್ರಿಟೇಷಸ್ ಅಂತ್ಯಕಾಲ; ಕಚ್ಛ್‌ ಪ್ರದೇಶದ ತೀರ ನಿಕ್ಷೇಪಗಳು - ಜುರಾಸಿಕ್ ಮಧ್ಯಕಾಲ ದಿಂದ ಕ್ರಿಟೇಷಸ್ ಆದಿಯವರೆಗೆ; ಚಾಂಪ್ನರ್ ಶಿಲಾವರ್ಗ - ಆರ್ಷೇಯ ಕಲ್ಪ.

ಚಾಂಪ್ನರ್ ಶಿಲಾವರ್ಗ: ವಡೋದರಕ್ಕೆ ಸುಮಾರು ೬೫ಕಿಮೀ ಪುರ್ವದಲ್ಲಿ ನೈಸ್ ಶಿಲೆಯಿಂದೊಡಗೂಡಿದ ಅತ್ಯಂತ ಪುರಾತನ ಕಾಲದ ಪದರಶಿಲೆಗಳು ಹೊರಕಂಡಿವೆ. ಡಬ್ಲ್ಯು. ಟಿ. ಬ್ಲ್ಯಾನ್ಫೋರ್ಡ ಎಂಬಾತ ಇವನ್ನು ಚಾಂಪ್ನರ್ ಶಿಲಾವರ್ಗ ಎಂದು ಕರೆದು, ಇವು ರಾಜಸ್ತಾನಆರಾವಳಿ ಶಿಲಾವರ್ಗಕ್ಕೆ ಸಮಕಾಲೀನವಾದವುಗಳೆಂದು ಸ್ಥಾಪಿಸಿದ. ಚಾಂಪ್ನರ್ ಶಿಲಾವರ್ಗಕ್ಕೂ ಈಗ ಕರ್ನಾಟಕದಲ್ಲಿರುವ ಮಾದರಿ ಧಾರವಾಡ ಶಿಲಾವರ್ಗಕ್ಕೂ ಬಹಳ ಸಾಮ್ಯವಿರುವುದರಿಂದ, ಇವೆರಡು ಶಿಲಾವರ್ಗಗಳು ಡೆಕ್ಕನ್ ಟ್ರ್ಯಾಪಿನ ಕೆಳಗೆ ಒಂದಾಗಿವೆ ಎಂಬುದರಲ್ಲಿ ಸಂಶಯವಿಲ್ಲ.

ಕಚ್ಛ್‌ ತೀರ ನಿಕ್ಷೇಪಗಳು: ವಿಂಧ್ಯನ್ ಕಾಲದಿಂದಲೂ ಸಮುದ್ರ ನಿಕ್ಷೇಪಗಳನ್ನೇ ಕಾಣದಿದ್ದ ಪರ್ಯಾಯ ದ್ವೀಪಭಾಗ ಜುರಾಸಿಕ್ ಮಧ್ಯಕಾಲದಲ್ಲಿ ಸಮುದ್ರಾಕ್ರಮಣಕ್ಕೆ ಒಳಪಟ್ಟಿತು. ಕಾಠಿಯಾವಾಡದ ಉತ್ತರಭಾಗ ಸಮುದ್ರದ ಅಡಿಯಲ್ಲಿ ಮುಳುಗಿ ಅಲ್ಲಿ ಸುಮಾರು ೧೮೨೯ ಮೀ ದಪ್ಪದ ನಿಕ್ಷೇಪಗಳು ಸಂಚಯನವಾಗಿವೆ. ಇವು ಪೂರ್ವ - ಪಶ್ಚಿಮವಾಗಿ ಹಬ್ಬಿರುವ ಮೂರು ಶೃಂಗಮಡಿಕೆಗಳಾಗಿ ಹೊರಕಂಡಿವೆ. ಈ ಶಿಲಾಪರಂಪರೆಯನ್ನು ಪಚಂ, ಚಾರಿ, ಕಟ್ರೋಲ್ ಮತ್ತು ಉಮಿಯ ಎಂದು ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ. ಇದು ಜುರಾಸಿಕ್ ಯುಗದ ಬಾಕೋನಿಯನ್ ಕಾಲದಿಂದ ಕ್ರಿಟೇಷಸ್ ಯುಗದ ನಿಯೊಕೋಮಿಯನ್ ಅಥವಾ ಅಪ್ಸಿಯನ್ ಕಾಲದವರೆಗಿನ ಶಿಲಾನಿಕ್ಷೇಪಗಳಿಂದ ಕೂಡಿದೆ. ಈ ಶಿಲಾಸಮುದಾಯದ ಮೇಲೆ ಡೆಕ್ಕನ್ ಟ್ರ್ಯಾಪ್ ಅಥವಾ ಇಯೊಸೀನ್ ಯುಗದ ಶಿಲೆಗಳಿವೆ. ಪಚಂ ಶ್ರೇಣಿ ಕಚ್ ಖಾರಿಯಲ್ಲಿರುವ ಪಚಂ ದ್ವೀಪದಲ್ಲಿ ಹೊರಕಂಡಿರುವುದರಿಂದ ಈ ಹೆಸರು ಬಂದಿದೆ. ಈ ಶಿಲೆಗಳ ದಪ್ಪ ಸುಮಾರು ೩೦೫ ಮೀ. ಭೂಜ್‍ಗೆ ಸುಮಾರು ೪೯ ಕಿಮೀ. ವಾಯವ್ಯದಲ್ಲಿ ಚಾರಿ ಎಂಬ ಹಳ್ಳಿಯ ಹತ್ತಿರ ಪಚಂ ಶ್ರೇಣಿಗಿಂತ ಕಿರಿಯ ಶಿಲೆಗಳು ಹೊರಕಂಡಿವೆ. ಆದ್ದರಿಂದ ಇವನ್ನು ಚಾರಿ ಶ್ರೇಣಿ ಎಂದು ಹೆಸರಿಸಲಾಗಿದೆ. ಕಟ್ರೋಲ್ ಶಿಲಾಶ್ರೇಣಿ ಅನೇಕ ವಿಧದ ಮರಳುಶಿಲೆಗಳು ಮತ್ತು ಜೇಡುಶಿಲೆಗಳಿಂದಾಗಿದೆ. ಇವನ್ನು ಆರೋಹಣ ಕ್ರಮದಲ್ಲಿ ಕಂಟ್ಕೋಟ್ ಮರಳು ಶಿಲೆ, ಕಟ್ರೋಲ್ ಶಿಲೆ ಮತ್ತು ಗಾಜನ್ಸಾರ್ ಪದರಗಳಾಗಿ ವಿಂಗಡಿಸಿದೆ. ಇವು ಆರ್ಗೋವಿಯನ್ ಕಾಲದ ಅಂತ್ಯದಿಂದ ಪೋರ್ಟ್ ಲ್ಯಾಂಡಿಯನ್ ಕಾಲದವು. ಕಂಟ್ಕೋಟ್ ಮರಳು ಶಿಲೆ ವಾಗಡ್ ಸುತ್ತಮುತ್ತ ಹೊರಕಂಡಿದೆ. ಇದರಲ್ಲಿ ಎಪಿಮಾಯೈಟಿಸ್ ಟ್ರಾನ್ಸಿಯನ್ಸ್‌, ಪ್ರಾಸ್ಪೊದಿಸ್ಪಿಂಕ್ಟೆಸ್ ವಿರ್ಗುಲಾಯಿಡ್ಸ್‌, ಟಾರ್ಕುಟಿಸ್ಟಿಂಕ್ಟೆಸ್ ಟಾರ್ಕುಟಿಸ್ ಎಂಬ ಅವಶೇಷಗಳಿವೆ. ಕಟ್ರೋಲ್ ಶಿಲಾಪದರದ ಕೆಳ ಮತ್ತು ಮಧ್ಯಭಾಗಗಳಲ್ಲಿ ಒಪ್ಪಲೈಡ್ಸ್‌, ಕಟ್ರೋಲಿಸೆರಾಸ್, ಅಸ್ಟಿಡೊಸೆರಾಸ್, ಸ್ಟ್ರೆಬ್ಲೈಟಿಸ್ ಮತ್ತು ವಾಗೆನಿಯಗಳ ಅವಶೇಷಗಳಿವೆ. ಕಟ್ರೋಲ್ ಶಿಲಾಶ್ರೇಣಿಯ ಮೇಲ್ಭಾಗ ಅವಶೇಷರಹಿತ ವಾಗಿದೆ. ಗಾಜನ್ಸಾರ್ ಪದರಗಳಲ್ಲಿ ಗ್ಲೋಕಿಸೆರಾಸ್ ಮತ್ತು ಪಿಲ್ಲೊಸೆರಾಸ್ಗಳಿವೆ. ಈ ಶಿಲಾಶ್ರೇಣಿಗಿಂತ ಕಿರಿಯ ಶಿಲೆಗಳು ಭೂಜ್‍ಗೆ ವಾಯವ್ಯಕ್ಕೆ ಸುಮಾರು 80 ಕಿಮೀ ದೂರದಲ್ಲಿರುವ ಉಮಿಯ ಎಂಬ ಹಳ್ಳಿಯ ಹತ್ತಿರ ಉತ್ತಮವಾಗಿ ಹೊರಕಂಡಿವೆ. ಇವುಗಳಿಗೆ ಉಮಿಯ ಶ್ರೇಣಿ ಎಂದು ಹೆಸರು. ಇದರ ದಪ್ಪ ಸುಮಾರು 915 ಮೀಟರುಗಳು. ರಾಜನಾಥ್ ಎಂಬವರು ಈ ಶಿಲಾಶ್ರೇಣಿಯನ್ನು ಉಮಿಯ, ಉಕ್ರ ಮತ್ತು ಭೂಜ್ ಎಂದು ಮೂರು ಶಿಲಾಪಾದಗಳಾಗಿ ವಿಂಗಡಿಸಿದ್ದಾರೆ. ಉಮಿಯ ಪಾದದಲ್ಲಿ ಫಾಸಿಲ್ ಮರಳುಶಿಲೆ ಮತ್ತು ಜೇಡುಶಿಲೆಗಳು ಇವೆ. ಇವುಗಳ ಮಧ್ಯದ ಒಂದು ಪದರದಲ್ಲಿ ಟ್ರೈಗೋನಿಯ ಎಂಬ ಲೆಮಲಿಬ್ರ್ಯಾಂಕಿನ ಅವಶೇಷಗಳಿವೆ. ಇವು ಜುರಾಸಿಕ್ ಅಂತ್ಯದಿಂದ ಕ್ರಿಟೇಷಸ್ ಯುಗದ ಆದಿಕಾಲವನ್ನು ಸೂಚಿಸುತ್ತವೆ. ಉಮಿಯಪಾದದ ಮೇಲಿರುವ ಉಕ್ರಪಾದವೂ ಸಾಗರಜನಿತವಾದುದು. ಇದರಲ್ಲಿರುವ ಅಮ್ಮೊನೈಟುಗಳು ಕೂಡ ಇದೇ ಕಾಲವನ್ನು ಸೂಚಿಸುತ್ತವೆ. ಭೂಜ್ಪಾದದಲ್ಲಿ ಝಮಿಯ ಟೀಲೋಫಿಲ್ಲಂ ಮತ್ತು ಪಾಮೊಕ್ಸೈಲಾನ್ ಮುಂತಾದ ಸಸ್ಯಗಳು ಇವೆ. ಈ ಸಸ್ಯಗಳು ಜುರಾಸಿಕ್ ಅಂತ್ಯಕಾಲವನ್ನು ಸೂಚಿಸುತ್ತವೆ. ಆದರೆ ಇವುಗಳ ಕೆಳಗಿನ ಶಿಲೆಗಳು ಕ್ರಿಟೇಷಸ್ ಆದಿಕಾಲದವುಗಳಾದ್ದರಿಂದ ಇವು ಸಹ ಕ್ರಿಟೇಷಸ್ ಆದಿಕಾಲದವೆಂದು ನಿರ್ಧರಿಸಲಾಗಿದೆ.

ಬಾಗ್ ಪದರಗಳು : ನರ್ಮದಾ ನದಿ ಕಣಿವೆಯಲ್ಲಿ ಗ್ವಾಲಿಯರ್ ಹತ್ತಿರವಿರುವ ಬಾಗ್ ಎಂಬ ಪಟ್ಟಣದಿಂದ ಪುರ್ವಪಶ್ಚಿಮವಾಗಿ ಕಾಠಿಯಾವಾಡದವರೆಗೆ ಪರಸ್ಪರ ಬೇರ್ಪಟ್ಟ ನಿಕ್ಷೇಪಗಳು ಅನೇಕ ಕಡೆ ರೂಪುಗೊಂಡಿವೆ. ಚೆರ್ಟ್ ಮತ್ತು ಚಿಪ್ಪುಗಳಿಂದ ಕೂಡಿದ ಅಶುದ್ಧ ಸುಣ್ಣ ಶಿಲೆ, ಬೆಣಚುಶಿಲೆ, ಮತ್ತು ಜೇಡುಶಿಲೆಗಳು ಇಲ್ಲಿನ ಪ್ರಮುಖ ಶಿಲೆಗಳು. ಇವು ಡೆಕ್ಕನ್ ಟ್ರ್ಯಾಪ್ ಶಿಲೆಗಳ ಕೆಳಗಿದ್ದು ಅವು ಶಿಥಿಲೀಕರಿಸಿದ ಮೇಲೆ ಹೊರಕಂಡಿವೆ. ಸಿನಮೇನಿಯನ್ ಕಾಲದಲ್ಲಿ ಟೆತಿಸ್ ಸಾಗರ ನರ್ಮದಾ ನದಿಕಣಿವೆಯನ್ನು ಆಕ್ರಮಿಸಿದಾಗ ಇವು ನಿಕ್ಷೇಪಗೊಂಡವು. ಇವುಗಳಲ್ಲಿ ಫಾಸಿಲುಗಳು ಸುಮಾರು ೧೮-೨೨ಮೀ ನಷ್ಟು ಶಿಲೆಗಳಲ್ಲಿ ಮಾತ್ರ ಇವೆಯಷ್ಟೆ. ಇವನ್ನು ವರ್ಗೀಕರಿಸಲಾಗಿದೆ. ಬಾಗ್ ಪದರಗಳ ವಿಭಾಗ ನಿಮಾರ್ ಮರಳುಶಿಲೆ ಪಶ್ಚಿಮಕ್ಕೆ ಹೋದಹಾಗೆಲ್ಲ ದಪ್ಪವಾಗುತ್ತದೆ. ಇದು ಉತ್ತಮ ಕಟ್ಟಡ ಶಿಲೆ. ಇದನ್ನು ವಡೋದರ ಹತ್ತಿರದ ಸಾಂಘಿರ್ ಎಂಬಲ್ಲಿ ತೆಗೆಯುತ್ತಾರೆ. ಗಂಟು ಜೇಡು ಮಿಶ್ರ ಸುಣ್ಣಶಿಲೆ ಬಹುಗಟ್ಟಿ. ದಿಯೋಲ ಸುಣ್ಣ ಮಿಶ್ರ ಜೇಡು ೩ ಮೀ ದಪ್ಪವಿದ್ದರೂ ಫಾಸಿಲುಗಳು ವಿಶೇಷವಾಗಿವೆ. ಇದರ ಮೇಲೆ ಹವಳದ ಸುಣ್ಣಶಿಲೆ ಇದೆ. ಇದರಲ್ಲಿ ಬ್ರಿಯೊಜೋ಼ವಗಳ ಅವಶೇಷಗಳು ಹೆಚ್ಚಾಗಿವೆ. ಬಾಗ್ ಪದರಗಳಲ್ಲಿರುವ ಫಾಸಿಲುಗಳು ಕ್ರಿಟೇಷಸ್ ಯುಗದ ಸಿನಮೇನಿಯನ್ ಕಾಲದಿಂದ ಸಿನೋನಿಯನ್ ಕಾಲದವರೆಗಿನ ಅವಧಿಯನ್ನು ಸೂಚಿಸುತ್ತವೆ. ಆದರೆ ಈ ಫಾಸಿಲುಗಳು ಸಮೀಪದ ತಿರುಚನಾಪಲ್ಲಿ ಶಿಲಾಸ್ತೋಮಗಳಲ್ಲಿನ ಸಮಕಾಲೀನ ಅವಶೇಷಗಳಿಗಿಂತ ತೀರ ಭಿನ್ನವಾಗಿವೆ; ಬದಲು ಅರೇಬಿಯ ಮತ್ತು ಯುರೋಪಿನ ಕ್ರಿಟೇಷಸ್ ಅವಶೇಷಗಳನ್ನು ಹೋಲುತ್ತವೆ. ಅಂದರೆ ಇವೆರಡು ಪ್ರದೇಶಗಳು ಬೇರೆ ಬೇರೆ ಸಾಗರಗಳ ಆಕ್ರಮಣಕ್ಕೆ ಒಳಪಟ್ಟಿದ್ದುದೇ ಅಲ್ಲದೆ, ಆ ಎರಡು ಸಾಗರಗಳು ಅಗಲವಾದ ಭೂಭಾಗದಿಂದ ಬೇರ್ಪಟ್ಟಿದ್ದುವೆಂದು ಸಹ ಅರಿವಾಗುತ್ತದೆ. ಒಂದು ಟೆತಿಸ್ ಸಾಗರದ ಶಾಖೆ, ಮತ್ತೊಂದು ದಕ್ಷಿಣ ಸಮುದ್ರದ ಶಾಖೆ. ಡೆಕ್ಕನ್ ಟ್ರ್ಯಾಪ್ : ಕ್ರಿಟೇಷಸ್ ಯುಗದ ತರುವಾಯ ಮಹಾ ಭೂ ಪ್ರಳಯವಾಯಿತು. ಆಗ ಮಹತ್ತರ ಬದಲಾವಣೆಗಳಾದವು: ಅಗಾಧ ಪ್ರಮಾಣದ ಭೂ ಚಲನೆಯಾಯಿತು. ಅದುವರೆಗೂ ಅಸ್ಥಿತ್ವದಲ್ಲಿದ್ದ ಗೊಂಡವಾನ ಭೂಭಾಗ ಭಾರತ ಪರ್ಯಾಯದ್ವೀಪ, ಆಸ್ಟ್ರೇಲಿಯ, ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಅಂಟಾರ್ಕ್ಟಿಕ್ ಎಂಬ ಖಂಡಗಳಾಗಿ ಬೇರ್ಪಟ್ಟಿತು. ಬೇರ್ಪಟ್ಟ ಭೂಭಾಗಗಳನ್ನೆಲ್ಲ ಹಿಂದೆಂದೂ ಕಂಡರಿಯದ (ನಿರ್ಜೀವಕಲ್ಪವನ್ನುಳಿದು) ಶಿಲಾರಸದ ಉಗುಳುವಿಕೆ ಆಯಿತು. ಆ ಕಾಲದಲ್ಲಿ ಹೊರಹೊಮ್ಮಿದ ಶಿಲಾರಸದಿಂದ ಡೆಕ್ಕನ್ ಟ್ರ್ಯಾಪ್ ಆಯಿತು. ಈ ಶಿಲಾವರ್ಗ ಗುಜರಾತಿನ ಬಹುಭಾಗವನ್ನು ಆಕ್ರಮಿಸಿದೆ. ಶಿಲಾರಸ ಹೊರಹೊಮ್ಮುವಿಕೆ ಸಾಮಾನ್ಯರೀತಿಯ ಅಗ್ನಿಪರ್ವತದಿಂದಾದುದಲ್ಲ. ನೂರಾರು ಮೀಟರ್ ಅಗಲ, ಅನೇಕ ಕಿಲೋಮೀಟರ್ ಉದ್ದದ ಕವಲಾಗಿದ್ದ ಬಿರುಕುಗಳ ಮೂಲಕ ಹೊರಹೊಮ್ಮುವಿಕೆ. ಇದು ಘನೀಭವಿಸಿರುವ ಬಿರುಕುಗಳು ಈಗಲೂ ಬರೂಚ್‍ನ ಸಮೀಪದ ರಾಜಪಿಪ್ಲ ಬೆಟ್ಟಗಳು, ಕಚ್ ಮತ್ತು ಕಾಠಿಯಾವಾಡ ಮತ್ತಿತರ ಪ್ರದೇಶಗಳಲ್ಲಿವೆ. ಇವುಗಳಿಗೆ ಡೈಕುಗಳೆಂದು ಹೆಸರು. ಸೌರಾಷ್ಟ್ರ ಪ್ರದೇಶದ ಅಮ್ರೋಲಿ ಮತ್ತು ಜಾಸ್ಡನ್ ಸುತ್ತಲಿರುವ ಡೈಕುಗಳು ಹೊರಗಾಮಿಯಾಗಿ ಹಂಚಿವೆ. ಗಿರ್ನಾರ್ ಮತ್ತು ಚೊಗತ್ ಚಮರ್ಡಿಗಳಲ್ಲಿ ನಿರ್ದಿಷ್ಟದ್ವಾರದ ಸಾಮಾನ್ಯ ಅಗ್ನಿಪರ್ವತಗಳಿವೆ. ಪುರ್ವಸೌರಾಷ್ಟ್ರ ಮತ್ತು ನರ್ಮದಾ ಕಣಿವೆಗಳಲ್ಲಿಯೂ ಡೈಕುಗಳ ಸಮೂಹಗಳಿವೆ. ಕಚ್ಚ್‌ ಮತ್ತು ಕಾಠಿಯಾವಾಡ ಪ್ರದೇಶದ ಡೆಕ್ಕನ್ ಟ್ರ್ಯಾಪಿನಲ್ಲಿ ಆಮ್ಲೀಯ, ಮಧ್ಯವರ್ತಿ ಮತ್ತು ಪ್ರತ್ಯಾಮ್ಲೀಯ ಶಿಲಾ ವಿಧಗಳಿವೆ. ಇವೆಲ್ಲ ಶಿಲಾರಸ ಪ್ರಭೇದಗೊಳ್ಳುವಿಕೆಯಿಂದಾದವು. ಗಿರ್ನಾರ್ ಮತ್ತು ಔಷಮ್ ಬೆಟ್ಟಗಳಲ್ಲಿ ಸಾಮಾನ್ಯ ಬೆಸಾಲ್ಟ್‌ ವಿಧವಲ್ಲದೆ ಲಿಂಬರ್ಗೈಟ್, ಆಂಡೆಸೈಟ್, ರೈಯೊಲೈಟ್, ಆಬ್ಸಿಡಿಯಾನ್, ಪಿಚ್ಸ್ಟೋನ್ ಮುಂತಾದ ಜ್ವಾಲಾಮುಖಜ ಶಿಲೆಗಳೂ ಲ್ಯಾಂಪ್ರೋಫೈರ್ ಆಲಿವೀನ್, ಗ್ರ್ಯಾಬ್ರೊ, ಮಾನ್ಜೊನೈಟ್, ನೆಫೆಲೀನ್ ಸಯನೈಟ್, ಗ್ರ್ಯಾನೋಫೈರ್ ಮುಂತಾದ ಮಧ್ಯಾಂತರ ಶಿಲೆಗಳೂ ಇವೆ. ನರ್ಮದಾ ಕಣಿವೆಯಲ್ಲಿ ಡೆಕ್ಕನ್ ಟ್ರ್ಯಾಪ್ ಶಿಲೆ ಬಾಗ್ ಪದರಗಳ ಮೇಲೆ ಅನನುರೂಪವಾಗಿರುವುದನ್ನೂ ಸೂರತ್ ಮತ್ತು ಭಡೋಚ ಪ್ರದೇಶದಲ್ಲಿ ಡೆಕ್ಕನ್ ಟ್ರ್ಯಾಪ್ ಮೇಲೆ ನಮ್ಮುಲಿಟಿಕ್ ಸುಣ್ಣಶಿಲೆ ಅನನುರೂಪತೆಯಿಂದ ನಿಕ್ಷೇಪಗೊಂಡಿರುವುದನ್ನೂ ಬ್ಲ್ಯಾನ್ ಫೋರ್ಡ್ ಗುರುತಿಸಿದ (1879). ಕಚ್ಛ್‌ ಪ್ರದೇಶದಲ್ಲಿ ಡೆಕ್ಕನ್ ಟ್ರ್ಯಾಪ್ ಶಿಲೆ ಜುರಾಸಿಕ್ ಕಾಲದ ತೀರನಿಕ್ಷೇಪಗಳ ಮೇಲೆ ಮತ್ತು ನಮ್ಮುಲಿಟಿಕ್ ಸುಣ್ಣಶಿಲೆಯ ಕೆಳಗಿರುವುದನ್ನೂ ವರದಿ ಮಾಡಿದ. ಆದ್ದರಿಂದ ಟ್ರ್ಯಾಪ್ ಶಿಲೆ ಮಧ್ಯ ಕ್ರಿಟೇಷಸ್ ಕಾಲದಿಂದ ಅಂತ್ಯ ಕ್ರಿಟೇಷಸ್ ಕಾಲದ್ದಾಗಿರಬೇಕೆಂದು ಆತನ ಅಭಿಪ್ರಾಯ. ತೃತೀಯ ಭೂಕಾಲಯುಗದ ನಿಕ್ಷೇಪಗಳು : ಸೂರತ್ , ಭಡೋಚ, ನರ್ಮದಾ ಕಣವೆ ಪ್ರದೇಶಗಳಲ್ಲಿ ಇಯೋಸೀನ್ ಕಾಲದ ನಮ್ಮುಲಿಟಿಕ್ ಸುಣ್ಣಶಿಲೆ ಎರಡು ಕಡೆಗಳಲ್ಲಿ ಹೊರಕಂಡಿದೆ. ಇವೆರಡರ ಮಧ್ಯ ಕಿಮ್ ನದಿಯ ಮೆಕ್ಕಲು ನಿಕ್ಷೇಪವಾಗಿದೆ. ಇವೆರಡರಲ್ಲಿ ಕಿಮ್ ಮತ್ತು ನರ್ಮದಾಗಳ ನಡುವೆ ಇರುವುದು ದೊಡ್ಡದು. ಇದರ ಉದ್ದ 48ಕಿಮೀ. ಅಗಲ ಸು. 19ಕಿಮೀ. ಇನ್ನೊಂದು ತಪತಿ ನದಿಯ ಉತ್ತರಕ್ಕೆ ೧೬ ಕಿಮೀ ವಿಸ್ತರಿಸಿದೆ. ಇದರ ಅಗಲ 24 ಕಿಮೀ. ಇವು ಲಾಕಿ ಮತ್ತು ಕಿರ್ತಾರ್ ಶಿಲಾವರ್ಗಗಳಿಗೆ ಸಮದೂಗುತ್ತವೆ. ಈ ಶಿಲೆಗಳ ಮೇಲೆ ಕಾಕಿ ಬಣ್ಣದ ಜೇಡುಶಿಲೆಗಳಿವೆ. ಇವುಗಳ ಮಧ್ಯೆ ಜೇಡು ಮತ್ತು ಸುಣ್ಣಮಿಶ್ರ ಜೇಡು ಪದರಗಳಿವೆ. ಗುಜರಾತಿನಲ್ಲಿ ಇದೇ ಕಾಲದ ಶಿಲೆಗಳು ಮರಳು ಶಿಲೆ, ನೊರಜುಗಳು ಮತ್ತು ಜೇಡುಶಿಲೆಗಳಿಂದ ಕೂಡಿ 1220 - 1525 ಮೀಟರುಗಳಷ್ಟು ದಪ್ಪ ರೂಪುಗೊಂಡಿವೆ. ಇವು ನಾರಿ ಮತ್ತು ಗಾಜ್ (ಆಲಿಗೋಸೀನ್ ಮತ್ತು ಮಯೋಸೀನ್ ಆದಿಕಾಲ) ಶಿಲಾವರ್ಗಗಳಿಗೆ ಸರಿದೂಗುತ್ತವೆ. ಇವುಗಳಲ್ಲಿ ಪೊರಮಿನಿಫೆರಗಳ ಅವಶೇಷಗಳು ಅಧಿಕವಾಗಿವೆ. ಇವು ತೈಲಭರಿತ ಶಿಲೆಗಳು. ಭೂಜ್, ಅಂಕಲೇಶ್ವರ್ ಮುಂತಾದ ಕಡೆಗಳಲ್ಲಿ ತೈಲಬಾವಿಗಳಿವೆ. ಕ್ಯಾಂಬೆ ಮತ್ತು ರಾಜಪಿಪ್ಲಗಳಲ್ಲಿ ಗುಂಡುಶಿಲೆಗಳಲ್ಲಿರುವ ಜಾಸ್ಪರಿನಿಂದ ಸಾಧಾರಣ ರತ್ನ ಶಿಲೆಗಳನ್ನು ತಯಾರಿಸಲಾಗುತ್ತಿದೆ. ಸೌರಾಷ್ಟ್ರದ ಅತ್ಯಂತ ಪಶ್ಚಿಮಭಾಗದಲ್ಲಿ ಗಾಜ್ ಕಾಲದ ಶಿಲೆಗಳ ಮೇಲೆ ಜಿಪ್ಸಂನಿಂದ ಕೂಡಿದ ಜೇಡು ಮತ್ತು ಪೊರಮಿನಿಫೆರಗಳಿಂದ ಕೂಡಿದ ಸುಣ್ಣಶಿಲೆಗಳಿವೆ. ಇವಕ್ಕೆ ದ್ವಾರಕಾಪದರಗಳೆಂದು ಹೆಸರು. ಇವು ಮಯೋಸೀನ್ ಯುಗದ ಮಧ್ಯ ಮತ್ತು ಅಂತ್ಯಕಾಲದವು. ಕ್ಯಾಂಬೆ ಖಾರಿಯಲ್ಲಿರುವ ಪಿರಾಂನಲ್ಲಿ ಮಧ್ಯಶಿವಾಲಿಕ್ ಕಾಲದ ಶಿಲೆಗಳಿವೆ. ಇವುಗಳಲ್ಲಿ ಸಸ್ತನಿಗಳ ಅವಶೇಷಗಳಿವೆ. ಅಹಮದಾಬಾದಿನ ಸಮೀಪದಲ್ಲಿರುವ ತಗ್ಗುಪ್ರದೇಶದಲ್ಲಿ ನೆರಿತಿಯಂ, ಪೊಟಮೈಡಿಸ್ಗಳ ಅವಶೇಷಗಳಿರುವ ನಿಕ್ಷೇಪಗಳಿವೆ. ಆದ್ದರಿಂದ ಈ ಪ್ರದೇಶ ಪ್ಲೀಸ್ಟೊಸೀನ್ ಕಾಲದಲ್ಲಿ ಸಮುದ್ರ ಅಳಿವೆಯಾಗಿತ್ತೆಂದು ಭಾವಿಸಬಹುದು. ಕಾಠಿಯಾವಾಡ ಪುರ್ವಭಾಗದಲ್ಲಿ ಮಿಲಿಯೊಲೈಟ್ ಪೊರಮಿನಿಫೆರಗಳಿಂದ ಕೂಡಿದ ವರ್ತಮಾನಕಾಲದ ಸುಣ್ಣಶಿಲೆ ಇದೆ. ಇದಕ್ಕೆ ಪೋರ್ಬಂದರ್ ಶಿಲೆ ಎಂದು ಹೆಸರು. ಈ ಪ್ರದೇಶ ಇತ್ತಿಚೇಗೆ ಮೇಲೆದ್ದಿರುವುದರ ಕುರುಹು ಈ ಶಿಲೆ. ರಾಜಪುತಾನ ಮರುಭೂಮಿ ನೈಋತ್ಯದಲ್ಲಿ ಒಂದು ವಿಶಾಲವಾದ ತಗ್ಗುಭೂಮಿಯೊಂದಿಗೆ ಸೇರಿಕೊಳ್ಳುತ್ತದೆ. ಇದಕ್ಕೆ ಕಚ್ಛಿನ ರಣ್ ಪ್ರದೇಶ ಎಂದು ಹೆಸರು. ವರ್ಷದ ಕೆಲವು ದಿವಸಗಳಲ್ಲಿ ಇದು ಕೆಸರು ಪ್ರದೇಶವಾಗಿದ್ದು, ಬೇಸಗೆಯಲ್ಲಿ ಒಣಗಿರುತ್ತದೆ. ಹಿಂದೆ ಇದು ಅರಬ್ಬೀ ಸಮುದ್ರದ ಒಂದು ಕೋವೆಯಾಗಿತ್ತು. ಅನೇಕ ಚಿಕ್ಕ ನದಿಗಳು ಮೆಕ್ಕಲನ್ನು ತಂದು ಇದರಲ್ಲಿ ತುಂಬಿ ಕೋವೆಯನ್ನು ಮುಚ್ಚಿವೆ.

ಮೇಲ್ಮೈಲಕ್ಷಣ

[ಬದಲಾಯಿಸಿ]
Physical map of Gujarat

ಗುಜರಾತ್ ರಾಜ್ಯವನ್ನು ಸ್ಥೂಲವಾಗಿ ಐದು ಭಾಗಗಳಾಗಿ ವಿಂಗಡಿಸಬಹುದು :

  • ತೀರದ ತಗ್ಗುನೆಲ, ರಣ್ ಪ್ರದೇಶ ಮತ್ತು ಒಳನಾಡಿನ ಸರೋವರಗಳು;
  • ಗುಜರಾತಿನ ಮೈದಾನ;
  • ಸೌರಾಷ್ಟ್ರ ಪ್ರಸ್ಥಭೂಮಿ;
  • ಬೆಟ್ಟಗಳಂಚಿನ ಬರಡು ನೆಲಪಟ್ಟಿ;
  • ಬೆಟ್ಟಗಳ ಪ್ರದೇಶ, ತೀರದ ತಗ್ಗುನೆಲ ಸಾಮಾನ್ಯವಾಗಿ ಜವುಗಿನಿಂದ ಕೂಡಿದ್ದು; ಸಮುದ್ರತಳದಿಂದ ಈಚೆಗೆ ಮೇಲೆದ್ದ ಈ ಪ್ರದೇಶದ ಜಲೋತ್ಸಾರಣ ಇನ್ನೂ ಕ್ರಮಬದ್ಧವಾಗಿಲ್ಲ.

ಇಲ್ಲಿಯ ಅನೇಕ ನದಿ ತೊರೆಗಳು ಬಲು ಸಣ್ಣವು. ಕಚ್ಛಿಗೆ ಉತ್ತರದಲ್ಲೂ ಕಚ್ಛಿನ ಮತ್ತು ಗುಜರಾತಿನ ಮುಖ್ಯ ಭೂಮಿಯ ನಡುವೆಯೂ ಇರುವ ರಣ್ಗಳೂ ಕರಾವಳಿಯ ಜವುಗು ನೆಲದಂತೆ ಉದ್ಭವವಾದಂಥವು. ಕಚ್ಛ್‌ ರಣದ ವಿಸ್ತೀರ್ಣ 11,270 ಕಿಮೀ. ಚಿಕ್ಕ ರಣ್ ಕಿರಿದು. ಇದರ ವಿಸ್ತೀರ್ಣ 4,000 ಚ. ಕಿಮೀ ಗಿಂತ ಹೆಚ್ಚಿಲ್ಲ. ಮಳೆಯಿಲ್ಲದಾಗ ಇವೆರಡೂ ಪ್ರದೇಶಗಳೂ ಒಣನೆಲಗಳಾಗಿರುತ್ತವೆ. ಮಳೆಗಾಲದಲ್ಲಿ ಜಲೋತ್ಸಾರಣ ಕ್ರಿಯೆ ಸರಿಯಾಗಿ ನಡೆಯದೆ ಇವು ಜಲಭರಿತವಾಗುತ್ತವೆ. ಕರಾವಳಿಯ ಜವುಗು ನೆಲಕ್ಕೂ ಒಳನಾಡಿನ ಪ್ರಸ್ಥಭೂಮಿ ಮತ್ತು ಪರ್ವತಗಳಿಗೂ ನಡುವೆ ಗುಜರಾತಿನ ಮೈದಾನ ಹಬ್ಬಿದೆ. ಇದು ಸಾಬರ್ಮತೀ, ಮಾಹೀ, ನರ್ಮದಾ, ತಾಪಿ ಮತ್ತು ಅವುಗಳ ಉಪನದಿಗಳಿಂದ ಕೂಡಿದ್ದು. ಮಧ್ಯಭಾರತದ ಎತ್ತರದ ನೆಲದಿಂದ ಥಟ್ಟನೆ ಕೆಳಕ್ಕೆ ಇಳಿಯುವ ನದಿಗಳು ಇಲ್ಲಿ ನಿಧಾನವಾಗಿ, ಅಂಕುಡೊಂಕಾಗಿ, ಅಲ್ಲಲ್ಲಿ ನಿಂತು ಸಾಗುತ್ತವೆ. ನದಿಗಳು ತಂದುಹಾಕಿದ ಮೆಕ್ಕಲು ಮಣ್ಣಿನಿಂದ ಮೈದಾನ ಆವೃತವಾಗಿದೆ. ಇಲ್ಲಿಯ ಮಣ್ಣು ವೈವಿಧ್ಯಮಯ.

ಸೌರಾಷ್ಟ್ರ ಪ್ರಸ್ಥಭೂಮಿ 75 ಮೀ ನಿಂದ 300 ಮೀ ವರೆಗೆ ಎತ್ತರವಾಗಿದೆ. ಪಶ್ಚಿಮ ಭಾರತದ ಬಹುಭಾಗವನ್ನು ಒಮ್ಮೆ ಆವರಿಸಿದ್ದ ಲಾವದ ಉಳಿಕೆಯ ನೆಲವಿದು. ಕವಿಚಿಟ್ಟ ಸಕ್ಕರೆ ಪೊಟ್ಟಣದ ರೀತಿಯಲ್ಲಿ ಪ್ರಸ್ಥಭೂಮಿ ಸ್ವಲ್ಪ ಸ್ವಲ್ಪವಾಗಿ ಮೇಲೇರಿ, ಮಧ್ಯ ಭಾಗದಲ್ಲಿ ಬೆಟ್ಟಗುಡ್ಡಗಳಾಗಿ ಪರಿಣಮಿಸಿದೆ. ಇದರ ಉತ್ತರದಲ್ಲಿ ಮಂಡ ಬೆಟ್ಟಗಳೂ ದಕ್ಷಿಣದಲ್ಲಿ ಗಿರ್ ಬೆಟ್ಟಗಳೂ ಇವೆ. ಇವೆರಡನ್ನೂ ಕೂಡಿಸುವ ಕಿರಿದಾದ ಪ್ರದೇಶ ಈ ಪ್ರಸ್ಥಭೂಮಿಯ ಉಳಿದ ಭಾಗಕ್ಕಿಂತ ಎತ್ತರವಾದ್ದು. ಪ್ರಸ್ಥಭೂಮಿಯ ಒಂದು ಮುಖ್ಯ ವೈಶಿಷ್ಟ್ಯವೆಂದರೆ 60 ಮೀ ವರೆಗೆ ಅಗಲವಾಗಿರುವ, 60 ಕಿಮೀ ವರೆಗಿನ ಉದ್ದದ ಡೈಕುಗಳು. ನದಿಗಳು ಮಧ್ಯದ ಎತ್ತರದ ನೆಲದಲ್ಲಿ ಹುಟ್ಟಿ ಎಲ್ಲ ದಿಕ್ಕುಗಳಲ್ಲೂ ಹರಿಯುತ್ತವೆ. ಮಚ್ಫೂ, ಆಜಿ, ಭಾದರ್, ಶತ್ರುಂಜೀ, ಮತ್ತು ಭಗವಾ ಇಲ್ಲಿಯ ಮುಖ್ಯ ನದಿಗಳು. ಕಚ್ಛಿನ ಪ್ರಸ್ಥಭೂಮಿ ಪ್ರದೇಶ ಪುರ್ವದಿಂದ ಪಶ್ಚಿಮದ ಕಡೆಗೆ ಇಳಿಜಾರಾಗಿದೆ. ಇಲ್ಲಿಯ ನದಿಗಳು ಕಚ್ಛ್‌ ಖಾರಿಯೊಳಕ್ಕೆ ಹರಿಯುತ್ತವೆ.

ಬೆಟ್ಟಗಳ ಸಾನುಪ್ರದೇಶ 75 ಮೀ. - 150 ಮೀ, ಎತ್ತರದ ಕಿರು ಅಗಲದ ನಡುಪಟ್ಟಿ. ನರ್ಮದಾ ತಾಪಿಗಳ ನಡುವೆ ಕಿರಿದಾಗಿರುವ ಈ ಪ್ರದೇಶ ನರ್ಮದೆಯಿಂದ ಉತ್ತರಕ್ಕೆ 25 ಕಿಮೀ. ಮತ್ತು ಇನ್ನೂ ಹೆಚ್ಚಿನ ಅಗಲವಾಗುತ್ತದೆ. ಈ ಇಳಿಜಾರು ನೆಲದ ಪ್ರದೇಶದಲ್ಲಿ ಮಣ್ಣು ಶೇಖರವಾಗಲು ಅವಕಾಶವಿಲ್ಲ. ಇದು ನುರುಜು ಕಲ್ಲಿನಿಂದ ಕೂಡಿದೆ. ಅಲ್ಲಲ್ಲಿ ಮಾತ್ರ ಹುಲ್ಲೂ ಕಾಡೂ ಉಂಟು. ಬೆಟ್ಟಗಳ ಪ್ರದೇಶದಲ್ಲಿ ವಾಸಿಸುವ ಕೆಲವು ಹಿಂದುಳಿದ ಬುಡಕಟ್ಟುಗಳ ಜನ ಇಲ್ಲಿ ಬೆಳೆಯುವ ಸಾವೆ, ರಾಗಿ ಮುಂತಾದ ಧಾನ್ಯ ವಿನಾ ಬೇರೇನೂ ಇಲ್ಲಿ ಬೆಳೆಯುವುದಿಲ್ಲ.

ಗುಜರಾತಿನ ಬೆಟ್ಟಗಳ ಪ್ರದೇಶ ಕಚ್ಛ್‌, ಕಾಠಿಯಾವಾಡ್ಗಳ ಮಧ್ಯಭಾಗಗಳಲ್ಲೂ ರಾಜ್ಯದ ಪೂರ್ವ ಎಲ್ಲೆಯಲ್ಲೂ ಇದೆ. ಇದು 300 ಮೀ.ಗಿಂತ ಎತ್ತರದ ಪ್ರದೇಶ. ಇದು ಬಹುತೇಕ ಶಿಲಾಮಯ; ಹೆಚ್ಚು ಮಳೆ ಬೀಳುವಲ್ಲಿ ಕಾಡುಗಳಿವೆ. ಇದು ದೀರ್ಘಕಾಲದ ಸವೆತಕ್ಕೆ ಒಳಗಾಗಿದೆ. ಕಚ್ಛಿನ ಬೆಟ್ಟಗಳು ಪುರ್ವಪಶ್ಚಿಮವಾಗಿ ಹಬ್ಬಿವೆ. ಇವುಗಳಲ್ಲಿ ಅತ್ಯಂತ ಎತ್ತರವಾದ್ದು ಧಿನೋಧರ್ (388 ಮೀ.) ಇತರ ಬೆಟ್ಟಗಳು ಉಮಿಯ (274 ಮೀ.), ಝುರಾ (316 ಮೀ.), ವರಾದ್ (344 ಮೀ.) ಮತ್ತು ರತ್ನಾಲ್ (349 ಮೀ.). ಕಾಠಿಯಾವಾಡದ ಉನ್ನತ ಪ್ರದೇಶದ ಉತ್ತರ ಭಾಗದಲ್ಲಿ ಮಂಡ ಬೆಟ್ಟಗಳೂ ದಕ್ಷಿಣದಲ್ಲಿ ಗಿರ್ ಶ್ರೇಣಿಯೂ ಇವೆ. ದಕ್ಷಿಣದ ಶ್ರೇಣಿ ಹೆಚ್ಚು ಎತ್ತರ. ಇದರ ಉನ್ನತ ಬೆಟ್ಟ ಸರ್ಕಲ (643 ಮೀ.). ನಂದಿವೇಲ 529 ಮೀ. ಎತ್ತರವಾಗಿದೆ. ಗಿರ್ ಶ್ರೇಣಿ ಅರಣ್ಯಮಯ. ಇಲ್ಲಿ ಸಿಂಹಗಳಿವೆ (ನೋಡಿ- ಗಿರ್ ಅರಣ್ಯ). ಗುಜರಾತಿನ ಅತ್ಯುನ್ನತ ಬೆಟ್ಟ ಗಿರ್ನಾರ್ . ಇದರ ಗರಿಷ್ಠ ಎತ್ತರ 1,117 ಮೀ. (ಗೋರಖ್ ನಾಥ್ ಶಿಖರ). ಇದು ಜುನಾಗಢದ ಬಳಿ ಇದೆ. ಪೋರ್‍ಬಂದರ್‍ಗೆ ಪುರ್ವದಲ್ಲಿರುವ ಬಾರ್ದ, ಅದಕ್ಕೂ ಪುರ್ವದ ಅಲೆಚ್ ಇವು ಇತರ ಬೆಟ್ಟಗಳು.

ಸೂರತ್ ಕೋಟೆ ರಾಜ್ಯದ ಉತ್ತರ, ಈಶಾನ್ಯ ಮತ್ತು ಪುರ್ವ ಗಡಿಗಳನ್ನು ಬಳಸಿರುವ ಶ್ರೇಣಿಗಳು ಉನ್ನತವಾದವು. ಇವು ಗಡಿಯಾಚೆಗಿನ ಶ್ರೇಣಿಗಳ ಅಂಚಿನ ಭಾಗಗಳು. ಸಬರಕಂತಾ, ಪಂಚಮಹಲ, ವಡೋದರ, ಸೂರತ್ ಮತ್ತು ಭಡೋಚ ಜಿಲ್ಲೆಗಳಲ್ಲಿ ಇವು ಚಾಚಿವೆ. ಉತ್ತರದ ಬೆಟ್ಟಗಳು ಆರಾವಳಿಯ ಭಾಗ. ಇವು ಹಿಮ್ಮತ ನಗರದಿಂದ ಉತ್ತರಕ್ಕೆ ಕ್ರಮಕ್ರಮವಾಗಿ ಏರುತ್ತ ನಡೆಯುತ್ತವೆ. ರಾಜ್ಯದಿಂದ ಹೊರಕ್ಕೆ ಅಬು ಶಿಖರದ ಗುಂಪಿನಲ್ಲಿ ಗುರುಶಿಖರ ಅತ್ಯಂತ ಎತ್ತರವಾದ್ದು. ಸಸ್ಯ ರಹಿತವಾದ ಈ ಪ್ರದೇಶದ ಮುಖ್ಯ ಬೆಟ್ಟಗಳು ರತನ್ಮಲ್ ಮತ್ತು ಪಾವಗಢ ಪಶ್ಚಿಮ ಭಾಗದಲ್ಲಿ ಬನಾಸ್ ನದಿಯೂ ಪುರ್ವದಲ್ಲಿ ಸಾಬರ್ಮತಿಯೂ ಹುಟ್ಟುತ್ತವೆ. ಛೋಟಾ ಉದಯಪುರಕ್ಕೆ ದಕ್ಷಿಣಕ್ಕಿರುವ ಶ್ರೇಣಿ ನರ್ಮದಾ ಮತ್ತು ತಾಪಿ ನದಿಗಳ ಉಗಮದ ಪ್ರದೇಶ. ನರ್ಮದೆಯ ಉತ್ತರದ ಪ್ರದೇಶ ವಿಂಧ್ಯಪರ್ವತಗಳ ಭಾಗ. ಅದಕ್ಕೆ ವನಮಾಲಾ ಬೆಟ್ಟಗಳೆಂಬ ಹೆಸರಿದೆ. ನರ್ಮದೆಗೆ ದಕ್ಷಿಣದಲ್ಲಿರುವುದು ಸಾತ್ಪುರ ಬೆಟ್ಟಗಳ ಪಶ್ಚಿಮದ ಚಾಚು. ಇದು ರಾಜಪಿಪ್ಲ ಎನಿಸಿಕೊಂಡಿದೆ. ತಾಪಿಗೆ ದಕ್ಷಿಣದ್ದು ಸಹ್ಯಾದ್ರಿಯ ಅಂಚು. ಇಲ್ಲಿಂದ ಹಲವು ಸಣ್ಣ ನದಿಗಳು ಹರಿದು ಬಂದು ನೆಟ್ಟಗೆ ಸಮುದ್ರ ಸೇರುತ್ತವೆ. ಇವುಗಳ ಪೈಕಿ ಪುರ್ಣಾ,ಅಂಬಿಕಾ, ಪಾರ್ ಮತ್ತು ದಮಣಗಂಗಾ ಮುಖ್ಯವಾದವು.

ಗುಜರಾತಿನ ಸಹಜ ಜಲೋತ್ಸಾರಣ ವ್ಯವಸ್ಥೆ ಏಕಮುಖವಾದ್ದಲ್ಲ. ಕಚ್ಚಿನಲ್ಲಿ ನದಿಗಳು ಮಧ್ಯದ ಎತ್ತರ ಪ್ರದೇಶದಿಂದ ಉತ್ತರಕ್ಕೂ ದಕ್ಷಿಣಕ್ಕೂ ಹರಿಯುತ್ತವೆ. ದಕ್ಷಿಣಕ್ಕೆ ಹರಿಯುವ ನದಿಗಳಲ್ಲಿ ಮುಖ್ಯವಾದವು ಮತೀ, ನಯೀರಾ, ಕನಕಮತೀ ಮತ್ತು ರುಕ್ಮಮತೀ. ಇವಕ್ಕೆ ಉಪನದಿಗಳು ಹೆಚ್ಚಾಗಿಲ್ಲ. ಪ್ರತಿಯೊಂದು ತೊರೆಯೂ ರಣನಲ್ಲೋ ಕಚ್ಛ್‌ ಖಾರಿಯಲ್ಲೋ ಕೊನೆಗೊಳ್ಳುತ್ತದೆ. ನದಿಗಳು ಬೇಸಗೆಯಲ್ಲಿ ಒಣಗಿಹೋಗುತ್ತವೆ; ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಸೌರಾಷ್ಟ್ರದಲ್ಲಿ ಮಧ್ಯದ ದಿಣ್ಣೆನೆಲದಿಂದ ಎಲ್ಲ ದಿಕ್ಕುಗಳಿಗೂ ನದಿಗಳು ಪ್ರವಹಿಸುತ್ತವೆ. ಭಾದರ್ ಅತ್ಯಂತ ಉದ್ದವಾದ ನದಿ (260 ಕಿಮೀ). ಇದು ಪಶ್ಚಿಮಕ್ಕೆ ಹರಿದು ಪೋರ್ಬಂದರಿನ ಬಳಿಯ ನವೀಬಂದರಿನಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಶತ್ರುಂಜೀ, ಮಚ್ಫೂ ಮತ್ತು ಆಜೀ ಇತರ ಮುಖ್ಯ ನದಿಗಳು. ಶತ್ರುಂಜೀ ನದಿ ಗಿರ್ ಶ್ರೇಣಿಯಲ್ಲಿ ಉಗಮಿಸಿ ಪುರ್ವಾಭಿಮುಖವಾಗಿ ಹರಿದು ಸುಲ್ತಾನ್ಪುರದಲ್ಲಿ ಕ್ಯಾಂಬೇ ಖಾರಿಯನ್ನು ಸೇರುತ್ತದೆ. ಮಚ್ಫೂ ಮತ್ತು ಆಜೀ ನದಿಗಳು ಅನುಕ್ರಮವಾಗಿ ಚಿಕ್ಕ ರಣ್ ಮತ್ತು ಕಚ್ಛ್‌ ಖಾರಿಯನ್ನು ಸೇರುತ್ತವೆ. ಇವುಗಳಲ್ಲದೆ ಹಲವಾರು ಸಣ್ಣ ಹೊಳೆಗಳು ಸೌರಾಷ್ಟ್ರದ ಕರಾವಳಿಯಲ್ಲಿ ಹರಿಯುತ್ತವೆ. ಕಚ್ಛ್‌ ಖಾರಿ ಮತ್ತು ಅರಬ್ಬೀ ಸಮುದ್ರದ ಕರಾವಳಿಗಳೇ ಅಲ್ಲದೆ ಕ್ಯಾಂಬೇ ಖಾರಿಯ ಕರಾವಳಿಯಲ್ಲಿ ಕೂಡ ಜಲೋತ್ಸಾರಣ ಸಮರ್ಪಕವಾಗಿಲ್ಲದೆ ನೀರು ನಿಂತು ಜವುಗುಂಟಾಗಿದೆ. ಗುಜರಾತ್ ಮೈದಾನದ ನದಿಗಳು ದೂರದ ಬೆಟ್ಟಗಳಲ್ಲಿ ಹುಟ್ಟಿ ಹರಿದುಬರುತ್ತವೆ. ಬನಾಸ್, ಸರಸ್ವತಿ ಮತ್ತು ರೂಪೆನ್ ನದಿಗಳು ಚಿಕ್ಕ ರಣ್ ಅನ್ನು ಸೇರುತ್ತವೆ. ಉಳಿದವು ಸಮುದ್ರ ಸೇರುವುದು ಕ್ಯಾಂಬೇ ಖಾರಿಯಲ್ಲಿ. ಚಿಕ್ಕ ರಣ್ ಸೇರುವ ನದಿಗಳು ಬೇಸಗೆಯಲ್ಲಿ ಒಣಗಿರುತ್ತವೆ. ಬೆಟ್ಟದಿಂದ ಹೊತ್ತು ತಂದ ಮಣ್ಣನ್ನು ಹೊರಲಾರದೆ ಮೈದಾನದಲ್ಲಿ ಬಿಟ್ಟು ಹೊರಳುತ್ತವೆ. ಇವುಗಳ ಪಾತ್ರಗಳು ಬಲು ವಿಶಾಲ.

ಸಾಬರ್ಮತಿಯ ಉದ್ದ 300 ಕಿಮೀ. ಅಹಮದಾಬಾದಿನಿಂದ ಮುಂದಕ್ಕೆ ನದಿಯ ಪಾತ್ರ ಪದೇ ಪದೇ ಬದಲಾಗುತ್ತಿರುವುದುಂಟು. ಮಾಹೀನದಿ 500 ಕಿಮೀ, ಉದ್ದವಾಗಿದೆ. ಅದು ಗುಜರಾತಿನಲ್ಲಿ 180 ಕಿಮೀ.ಗಿಂತಲೂ ಉದ್ದವಾಗಿ ಹರಿದು ಸಮುದ್ರ ಸೇರುತ್ತದೆ. ಸಾಬರ್ಮತಿ ಮತ್ತು ಮಾಹೀ, ಇವೆರಡೂ ನದಿಗಳ ಉಪನದಿಗಳು ಇವುಗಳ ಎಡ ದಂಡೆಗಳಲ್ಲಿ ಬಂದು ಸೇರುತ್ತವೆ.

ಗುಜರಾತಿನ ಅತ್ಯಂತ ಮುಖ್ಯ ನದಿಗಳು ನರ್ಮದಾ ಮತ್ತು ತಾಪಿ. ಗುಜರಾತಿನಲ್ಲಿ ನರ್ಮದಾ ನದಿ ಹರಿಯುವ ದೂರ 150 ಕಿಮೀ. ಇದು ಭಡೋಚದ ಬಳಿ ಕ್ಯಾಂಬೇ ಖಾರಿಯನ್ನು ಸೇರುತ್ತದೆ. ಓರ್ಸಂಗ್, ಕರ್ಜನ್, ಅಮರಾವತಿ, ಭೂಖಿ ಇವು ನರ್ಮದೆಯ ಮುಖ್ಯ ಉಪನದಿಗಳು. ಸಮುದ್ರ ಸಂಗಮದ ಕಡೆಯಿಂದ ಮೇಲಣ ನೂರು ಕಿಮೀ.ಗಳ ದೂರ ಇದು ಗುಜರಾತಿನ ಅತ್ಯಂತ ಫಲವತ್ತಾದ ಮೈದಾನದ ಮೂಲಕ ಹರಿಯುತ್ತದೆ. ನದೀಪಾತ್ರ ಬದಲಿಸಿದ್ದರ ಪರಿಣಾಮವಾಗಿ, ಇದರಲ್ಲಿ ಕೆಲವು ದ್ವೀಪಗಳು ಸಂಭವಿಸಿವೆ. ಭಡೋಚದಿಂದ ಮೇಲಕ್ಕೆ ಸು. 23 ಕಿಮೀ ದೂರದಲ್ಲಿರುವ ಶುಕ್ಲತೀರ್ಥ, ನದೀಮುಖಜ ಭೂಮಿಯಲ್ಲಿರುವ ಆಲಿಯ ಮುಖ್ಯವಾದವು. ತಾಪೀ ನದಿ ನರ್ಮದೆಗಿಂತ ಚಿಕ್ಕದಾದರೂ ಗುಜರಾತಿನಲ್ಲಿ ಇದರ ಹರಿವಿನ ಉದ್ದ ನರ್ಮದೆಯದಕ್ಕಿಂತ ಹೆಚ್ಚು. ಗುಜರಾತಿನಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಇದರ ಜಲಾನಯನ ಭೂಮಿಯಾದ್ದರಿಂದ ನೀರಾವರಿ ಮತ್ತು ವಿದ್ಯುತ್ತಿನ ದೃಷ್ಟಿಯಲ್ಲಿ ಇದರ ವಿಭವ ಅಧಿಕ. ಪುರ್ವದ ಬೆಟ್ಟಸೀಮೆಯನ್ನು ಕಕ್ರ ಪಾರದ ಬಳಿ ಬಿಟ್ಟು 100 ಕಿಮೀ ದೂರ ಸಾಗಿ ಸೂರತ್ತಿನಿಂದ ಮುಂದೆ ಇದು ಸಮುದ್ರವನ್ನು ಕೂಡಿಕೊಳ್ಳುತ್ತದೆ. ಇದರ ಪಾತ್ರ ನರ್ಮದೆಯದರಷ್ಟು ವಿಶಾಲವಲ್ಲ. ಈ ನದಿಯ ಕೆಳಭಾಗದ ನೆಲ ಹತ್ತಿ ಬೆಳೆಯಬಲ್ಲ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದೆ.

ಒಟ್ಟಿನಲ್ಲಿ ದಕ್ಷಿಣ ಗುಜರಾತಿನ ನದಿಗಳು ಸಮಾನಾಂತರಗಳಲ್ಲಿ ಹರಿದು ಸಮುದ್ರ ಸೇರುತ್ತವೆ. ಸಾತ್ಪುರಾ ಮತ್ತು ಪಶ್ಚಿಮ ಘಟ್ಟಗಳ ಸಣ್ಣ ಚಾಚುಗಳು ಈ ನದಿಗಳು ಪರಸ್ಪರ ಕೂಡದಂತೆ ಪ್ರತ್ಯೇಕಿಸಿವೆ. ನರ್ಮದಾ, ಕಿಂ, ತಾಪಿ, ಪೂರ್ಣಾ, ಅಂಬಿಕಾ, ಪಾರಾ ಮತ್ತು ದಮಣಗಂಗಾ - ಇವು ಮುಖ್ಯ ನದಿಗಳು. ಸಮುದ್ರದ ಭರತದಿಂದಾಗಿ ಇವುಗಳ ಮುಖಭಾಗಗಳಲ್ಲಿ ಉಪ್ಪು ನೀರು ಒಳಗೆ ನುಗ್ಗುತ್ತದೆ. ಆದ್ದರಿಂದ ಈ ನದಿಗಳ ತಳಭಾಗದ ಬಳಿ ಇರುವ ಪಟ್ಟಣಗಳಿಗೆ ಇವುಗಳ ನೀರು ಕುಡಿಯಲು ಉಪಯುಕ್ತವಾಗಿಲ್ಲ. ಕರಾವಳಿಯ ಬಳಿ ನೆಲ ಬಹಳ ತಗ್ಗಾಗಿರುವುದರಿಂದ ಜಲೋತ್ಸಾರಣಕ್ಕೆ ತಡೆಯುಂಟಾಗಿದೆ.

ವಾಯುಗುಣ

[ಬದಲಾಯಿಸಿ]

ಉತ್ತರದಲ್ಲಿ ರಾಜಸ್ತಾನದಿಂದ ದಕ್ಷಿಣದಲ್ಲಿ ಕೊಂಕಣ ಸೀಮೆಯ ವರೆಗೆ ಹಬ್ಬಿರುವ ಗುಜರಾತು ಅತಿ ಹೆಚ್ಚಿನ ಮಳೆ ಪ್ರದೇಶದಿಂದ ಮರುಭೂಮಿಯ ವರೆಗಿನ ನಾನಾ ವಾಯುಗುಣಗಳಿಂದ ಕೂಡಿದ ಭಾಗಗಳನ್ನೊಳಗೊಂಡಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ 2,000 ಮಿಮೀ ಗಳಷ್ಟು ಮಳೆಯಾದರೆ, ಅತ್ಯಂತ ಉತ್ತರದಲ್ಲಿ, ಬನಾಸ್ಕಾಂತ ಜಿಲ್ಲೆಯ ಕೆಲವು ಭಾಗಗಳಲ್ಲಿ, 300 - 400 ಮಿಮೀ ಗಳಿಗಿಂತ ಹೆಚ್ಚು ಮಳೆಯಿಲ್ಲ. ಇಡೀ ರಾಜ್ಯ ಮಾನ್ಸೂನ್ ವಲಯದಲ್ಲಿದೆ. ಜೂನ್ ನಡುಗಾಲದಿಂದ ಅಕ್ಟೋಬರ್ ನಡುಗಾಲದವರೆಗೆ ಮಳೆ - ನೈಋತ್ಯ ಮಾನ್ಸೂನಿನಿಂದ. ಚಳಿಗಾಲದಲ್ಲಿ ಹವೆ ಶುಷ್ಕವಾಗಿಯೂ ಹಿತವಾಗಿಯೂ ಇರುತ್ತದೆ. ಆದರೆ ಉತ್ತರ ಭಾರತದಲ್ಲಿ ಬೀಸುವ ಶೀತಮಾರುತಗಳು ಗುಜರಾತನ್ನೂ ಒಮ್ಮೊಮ್ಮೆ ಪ್ರವೇಶಿಸುವುದುಂಟು. ವರ್ಷದಲ್ಲಿ ಜನವರಿ ಅತ್ಯಂತ ಶೀತಮಾಸ. ನವೆಂಬರಿನ ಮಧ್ಯದಿಂದ ಫೆಬ್ರವರಿಯ ಮಧ್ಯದವರೆಗೆ ಚಳಿಗಾಲ. ಅಲ್ಲಿಂದ ಮುಂದೆ ಉಷ್ಣತೆ ಏರುತ್ತ ಸಾಗಿ, ಮೇ ತಿಂಗಳಲ್ಲಿ ಗರಿಷ್ಠವಾಗುತ್ತದೆ. ನೈಋತ್ಯ ಮಾನ್ಸೂನಿನ ಆಗಮನದಿಂದಾಗಿ ಜೂನ್ ತಿಂಗಳು ಥಟ್ಟನೆ ತಂಪಾಗುತ್ತದೆ. ಆದರೆ ಮುಖ್ಯವಾಗಿ ಕರಾವಳಿಯಲ್ಲಿ ವಾತಾವರಣದ ತೇವದಿಂದಾಗಿ ಹವೆ ಅಷ್ಟೇನೂ ಹಿತಕರವಾಗಿರುವುದಿಲ್ಲ. ಚಳಿಗಾಲವೇ ಹೆಚ್ಚು ಚೈತನ್ಯದಾಯಕ ಕಾಲ. ರಾಜ್ಯದ ಕೆಲವು ಭಾಗಗಳಲ್ಲಿ ಮೇ ತಿಂಗಳಲ್ಲಿ ಉಷ್ಣತೆ 45.0 ಸೆಂ. ಮುಟ್ಟುವುದುಂಟು. ರಾಜ್ಯದ ಬಹುಭಾಗ 35.0 ಮತ್ತು 42.50 ಸೆಂ. ಸಮಶಾಖರೇಖೆಯ ನಡುವೆ ಬರುತ್ತದೆ. ಕಚ್ಛ್‌, ಸೌರಾಷ್ಟ್ರಗಳ ಕರಾವಳಿಯಲ್ಲಿ ಉಷ್ಣತೆ ಕನಿಷ್ಠ. ಇದು ಕಡಲಿನ ಪ್ರಭಾವ. ಸಮುದ್ರದ ಗಾಳಿ ಒಳನಾಡಿನಲ್ಲಿ 30 - 40 ಕಿಮೀವರೆಗೆ ಬೀಸುವುದುಂಟು. ಜನವರಿಯಲ್ಲಿ ಎಲ್ಲೂ ಗರಿಷ್ಠ ಉಷ್ಣತೆ 30.0 ಸೆಂ.ನ್ನು ದಾಟುವುದಿಲ್ಲ. ದಕ್ಷಿಣಕ್ಕೆ ಬಂದಂತೆ ಉಷ್ಣತೆ ಅಧಿಕವಾಗುತ್ತದೆ. ಗುಜರಾತಿನಲ್ಲಿ ಮಳೆಯ ಪರಿಮಾಣ ಒಂದೆಡೆಯಿಂದ ಇನ್ನೊಂದೆಡೆಗೆ ತೀವ್ರವಾಗಿ ವ್ಯತ್ಯಾಸವಾಗುತ್ತದೆ. ದಕ್ಷಿಣದಲ್ಲಿರುವ ಬಲ್ಸಾರ್ ಜಿಲ್ಲೆಯಲ್ಲಿ 2,000 ಮಿಮೀ. ಮಳೆ. ಉತ್ತರಕ್ಕೆ ಹೋದಂತೆ ಇದು ಥಟ್ಟನೆ ಇಳಿಯುತ್ತದೆ. ಕೇವಲ 100 ಕಿಮೀ. ಉತ್ತರದಲ್ಲೆ (ಉದಾ : ಸೂರತ್) ಇದು 1,040 ಮಿಮೀ. ಅಲ್ಲಿಂದ ಮುಂದಕ್ಕೆ ಕ್ರಮಕ್ರಮವಾಗಿ ಕಡಿಮೆಯಾಗುತ್ತದೆ. ಸೌರಾಷ್ಟ್ರದಲ್ಲಿ 500 ಮಿಮೀ.ಗಿಂತ ಕಡಿಮೆ ಮಳೆ. ಗಿರ್ನಾರಿನಲ್ಲಿ ಮಾತ್ರ 700 ಮಿಮೀ. ಮಳೆಯಾಗುತ್ತದೆ. ಅದು ಹಸಿರು ತುಂಬಿದ ಪ್ರದೇಶ. ಕಚ್ಛ್‌ ಅರೆ - ಮರುಭೂಮಿ. ಅಲ್ಲಿ ಬಹುಭಾಗದಲ್ಲಿ 400 ಮಿಮೀ.ಗಿಂತ ಕಡಿಮೆ ಮಳೆಯಾಗುತ್ತದೆ. ಭುಜನಲ್ಲಿ ಕೇವಲ 340 ಮಿಮೀ. ಗುಜರಾತಿನ ಬಯಲುಸೀಮೆಯಲ್ಲಿ ಉತ್ತರಕ್ಕೆ ಹೋದಂತೆ ಮಳೆ ಕಡಿಮೆ. ವಡೋದರದಲ್ಲಿ 910 ಮಿಮೀ. ಅಹಮದಾಬಾದಿನಲ್ಲಿ 730 ಮಿಮೀ. ಭಾವನಗರದಲ್ಲಿ 500 ಮಿಮೀ. ದೀಸದಲ್ಲಿ 60 ಮಿಮೀ. ಎಲ್ಲೆಲ್ಲಿ ಬೆಟ್ಟಗಳಿವೆಯೊ ಅಲ್ಲಿ ನೆರೆಯ ನೆಲದ್ದಕ್ಕಿಂತ ಹೆಚ್ಚು ಮಳೆಯಾಗುತ್ತದೆ. ಬನಾಸ್ಕಂಟಾದಲ್ಲಿ ಆರಾವಳಿ ಮತ್ತು ಅಬು ಶ್ರೇಣಿಗಳ ನೆರೆಯ ಪ್ರದೇಶದಲ್ಲಿ 800 ಮಿಮೀ ಗಿಂತ ಹೆಚ್ಚು ಮಳೆಯಾಗುತ್ತದೆ. ಮಳೆಯ ದೃಷ್ಟಿಯಿಂದ ಗುಜರಾತ್ ರಾಜ್ಯದ ಮುಖ್ಯ ವಲಯಗಳು ಇವು :

  • ವರ್ಷಕ್ಕೆ 1,000 ಮಿಮೀ ಗಿಂತ ಹೆಚ್ಚು ಮಳೆಯಾಗುವ ಪ್ರದೇಶಗಳು - ಬಲ್ಸಾರ್, ಡಾಂಗ್ಸ್‌ ಜಿಲ್ಲೆಗಳು, ರಾಜಪಿಪ್ಲಾ ಬೆಟ್ಟವೂ ಸೇರಿದಂತೆ ಭಡೋಚ ಜಿಲ್ಲೆಯ ಪೂರ್ವಭಾಗ;
  • ವರ್ಷಕ್ಕೆ 800 - 1,000 ಮಿಮೀ ಮಳೆಯಾಗುವ ಪ್ರದೇಶಗಳು - ವಡೋದರ, ಪಂಚಮಹಲ್, ಖೇಡಾ ಜಿಲ್ಲೆಗಳು, ಅಹಮದಾಬಾದಿನ ಒಂದು ಭಾಗ;
  • ವರ್ಷಕ್ಕೆ 400 - 800 ಮಿಮೀ ಮಳೆ ಬೀಳುವ ಪ್ರದೇಶಗಳು - ಸೌರಾಷ್ಟ್ರ, ಅಹಮದಾಬಾದಿನಿಂದ ಉತ್ತರಕ್ಕಿರುವ ಗುಜರಾತಿನ ಭಾಗ;
  • ವರ್ಷಕ್ಕೆ 400 ಮಿಮೀ ಗಿಂತ ಕಡಿಮೆ ಮಳೆಯಾಗುವ ಪ್ರದೇಶಗಳು - ಕಚ್ಛ್‌, ಸಬರಕಂಟಾ ಜಿಲ್ಲೆಯ ಪಶ್ಚಿಮ ಭಾಗ.
ಗುಜರಾತ್ ನಕ್ಷೆ

ಸ್ವಾಭಾವಿಕ ಸಸ್ಯಸಂಪತ್ತು

[ಬದಲಾಯಿಸಿ]
Gir National Park

ಗುಜರಾತಿನ ಸಸ್ಯಸಂಪತ್ತು ಮಳೆಗೆ ಅನುಸಾರವಾಗಿ ವ್ಯತ್ಯಾಸಗೊಳ್ಳುತ್ತದೆ. ಸಾಕಷ್ಟು ಮಳೆಯಾಗಿಯೂ ಕೃಷಿಗೆ ಉಪಯೋಗವಿಲ್ಲದ ಪ್ರದೇಶಗಳಲ್ಲಿ ಕಾಡುಗಳು ಇವೆ. ಗುಜರಾತಿನಲ್ಲಿ ಮೈದಾನಕ್ಕಿಂತ ಬೆಟ್ಟಗಳ ಪ್ರದೇಶದಲ್ಲಿ ಉತ್ತರಕ್ಕಿಂತ ದಕ್ಷಿಣದಲ್ಲಿ ಮಳೆ ಹೆಚ್ಚಾಗಿರುವುದರಿಂದ ರಾಜ್ಯದ ಆಗ್ನೇಯ ಭಾಗದ ಮತ್ತು ಸೌರಾಷ್ಟ್ರದ ಬೆಟ್ಟಗಳಲ್ಲಿ ಕಾಡುಗಳು ಸಾಂದ್ರಿಕರಿಸಿವೆ. ಕಚ್ಛಿನ ಬೆಟ್ಟಗಳು ಉತ್ತರದಲ್ಲಿರುವುದರಿಂದಲೂ ಮಳೆ ಮಾರುತಗಳಿಗೆ ಹೆಚ್ಚಿನ ಅಡಚಣೆ ಒಡ್ಡದಿರುವುದರಿಂದಲೂ ಅಲ್ಲಿ ಕಾಡುಗಳಿಲ್ಲ. ಗುಜರಾತಿನ ಶೇ. 8.99 ಪ್ರದೇಶ ಅರಣ್ಯಗಳಿಂದ ಆವೃತವಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಕಾಡಿನ ಪ್ರದೇಶ ಅಲ್ಪಸ್ವಲ್ಪವಾದರೂ ಇದ್ದೇ ಇರುವುದಾದರೂ ಆರ್ಥಿಕ ದೃಷ್ಟಿಯಿಂದ ಮುಖ್ಯವಾದ ಜಿಲ್ಲೆಗಳು ಇವು : ಡಾಂಗ್ಸ್‌, ಪಂಚಮಹಲ್, ಭಡೋಚ, ಸೂರತ್, ಬಲ್ಸಾರ್, ಜುನಾಗಢ, ಸಬರಕಂಟಾ ಮತ್ತು ಬನಾಸ್ಕಂಟಾ. ದಕ್ಷಿಣದ ಮೂರು ಜಿಲ್ಲೆಗಳಾದ ಡಾಂಗ್ಸ್‌, ಸೂರತ್, ಭಡೋಚಗಳಲ್ಲಿ ರಾಜ್ಯದ ಶೇ. 40 ರಷ್ಟು ಅರಣ್ಯ ಪ್ರದೇಶವಿದೆ. 1,250 ಮಿಮೀ ಗಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ತೇಗ, ಮತ್ತಿ, ಮತ್ತು ದಿಂಡಲು ಮುಖ್ಯ ಮರಗಳು. ಮಳೆ ಕಡಿಮೆಯಾದಂತೆ ತೇಗ ಕಡಿಮೆಯಾಗಿ ಎಲಚಿ, ಮುತ್ತುಗ, ಕಾಚು ಮರಗಳು ಬೆಳೆಯುತ್ತವೆ. ಮಳೆ ಇನ್ನೂ ಕಡಿಮೆಯಾಗಿರುವ ಉತ್ತರ ಭಾಗದಲ್ಲಿ ಕರಿಜಾಲಿ, ಬಿಳಿಗೊಬ್ಬಳಿ, ಚಿಪ್ಪುರಿ, ಎಲಚಿ, ಕಳ್ಳಿ ಜಾತಿಯ ಗಿಡಗಳು ಬೆಳೆಯುತ್ತವೆ. ಹೆಚ್ಚು ಅಥವಾ ಸಾಮಾನ್ಯ ಮಳೆಯ ಪ್ರದೇಶಗಳಲ್ಲಿ ಬಿದಿರು ಒಂದು ಮುಖ್ಯ ಸಸ್ಯ. ಗುಜರಾತಿನಲ್ಲಿ ಬಿದಿರು ಕಾಡುಗಳ ಒಟ್ಟು ವಿಸ್ತೀರ್ಣ 1927.5 ಚ.ಕಿಮೀ ಉತ್ತರಕ್ಕಿಂತ ದಕ್ಷಿಣದಲ್ಲಿ ಬಿದಿರು ಕಾಡುಗಳು ಹೆಚ್ಚು.

ಗುಜರಾತಿನ ಕಾಡುಗಳ ಪ್ರಯೋಜನವನ್ನು ಸಂಪುರ್ಣವಾಗಿ ಪಡೆದಿಲ್ಲ. ಅವನ್ನು ಸರಿಯಾಗಿ ರಕ್ಷಿಸುವ ಕ್ರಮವನ್ನು ಕೈಗೊಂಡಿಲ್ಲ. ಅರಣ್ಯಗಳ ವಿಸ್ತೀರ್ಣ ಕ್ರಮ ಕ್ರಮವಾಗಿ ಕಡಿಮೆಯಾಗುತ್ತಿದೆ. ಗಿರ್ ಅರಣ್ಯ ಕಳೆದ 140 ವರ್ಷಗಳಲ್ಲಿ ಅರ್ಧಕ್ಕೆ ಕುಗ್ಗಿದೆ. ರಾಜ್ಯದ ವಾರ್ಷಿಕ ಸಾಗುವಾನಿ ಉತ್ಪಾದನೆ 36ಲಕ್ಷ ಘ. ಅಡಿ. ಗುಜರಾತಿನ ಬಿದಿರಿನ ವಿಭವ 2 ಲಕ್ಷ ಟನ್ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ 80,000 ಟನ್ ಬಿದಿರು ಡಾಂಗ್ಸ್‌ ಮತ್ತು ರಾಜಪಿಪ್ಲ ಪ್ರದೇಶದಲ್ಲಿದೆ.

A young male Asiatic lion
Male Asiatic lion

ಜನವಸತಿ

[ಬದಲಾಯಿಸಿ]
Garba during Navaratri in Ahmedabad

ಗುಜರಾತಿಗಳು ಹೆಚ್ಚು ಮೈಕಟ್ಟಿನ ಜನರಲ್ಲವಾದರೂ ಸ್ವಭಾವತಃ ಸಜ್ಜನರು, ಸೌಜನ್ಯಶೀಲರು, ಶಾಂತಿಪ್ರಿಯರು, ಧೈರ್ಯ, ಶೌರ್ಯ, ಔದಾರ್ಯ, ದೇಶಭಕ್ತಿ ಮತ್ತು ಅತಿಥಿಸತ್ಕಾರಗಳಿಗಾಗಿ ಹೆಸರಾದವರು. ಉದ್ಯೋಗ ಪ್ರಿಯತೆಯೊಡನೆ ಉಲ್ಲಾ ಪ್ರವೃತ್ತಿಯನ್ನೂ ಹೊಂದಿದವರು. ಸಮುದ್ರದ ಸಾಮೀಪ್ಯ ಮತ್ತು ಆರ್ಥಿಕ ಅನುಕೂಲತೆಗಳಿಗಾಗಿ ಸ್ವಾಭಾವಿಕವಾಗಿಯೇ ಈ ಜನರಲ್ಲೊಂದು ವಿಶೇಷ ಸಾಹಸ ಮತ್ತು ಸಂಚರೋತ್ಸಾಹ ಕಂಡುಬರುತ್ತದೆ 2011ರ ಜನಗಣತಿ ಪ್ರಕಾರ ಈ ರಾಜ್ಯದ 6,03,83,628 ಪ್ರಜೆಗಳಲ್ಲಿ ಪುರಷರು 26,385,577 ಮಂದಿ. ಮಹಿಳೆಯರು 24,285,440 ಮಂದಿ ಇದ್ದಾರೆ. ಚ.ಕಿಮೀ. ಜನಸಾಂದ್ರತೆ 258 ಮಂದಿ. ನಗರವಾಸಿಗಳು ಶೇ 37.4 ಮಂದಿ ಇದ್ದಾರೆ.ಗುಜರಾತ್ ರಾಜ್ಯದಲ್ಲಿ 25 ಜಿಲ್ಲೆಗಳೂ, 242 ಪಟ್ಟಣಗಳೂ 18,539 ಗ್ರಾಮಗಳೂ ಇವೆ.

೨೦೦೧ರಲ್ಲಿದ್ದಂತೆ ಗುಜರಾತಿನಲ್ಲಿರುವ ವಿವಿಧ ಧರ್ಮಾನುಯಾಯಿಗಳು[]
Percent
ಹಿಂದೂ
  
89.09%
ಮುಸ್ಲಿಂ
  
9.06%
ಕ್ರೈಸ್ತ
  
0.5%
ಜೈನ
  
1.03%
ಸಿಖ್
  
0.19%
ಬೌದ್ಧ
  
0.07%
ಇತರ
  
0.05%

ಗುಜರಾತಿನ ಪ್ರಾದೇಶಿಕ ಭಾಷೆ ಗುಜರಾತಿ. ಬಹುಜನರು ಹಿಂದಿಯನ್ನು ಸುಲಭವಾಗಿ ಮಾತನಾಡಬಲ್ಲರು. ಬಲು ದೀರ್ಘವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಇಲ್ಲಿಯ ಜನಜೀವನಕ್ಕೆ ತನ್ನದೇ ಆದ ಮೆರುಗು ಬಂದಿದೆ. ಶ್ರೀಕೃಷ್ಣ, ದಯಾನಂದ ಸರಸ್ವತೀ, ನರಸಿಂಹ ಮೆಹ್ತಾ, ಮಹಾತ್ಮ ಗಾಂಧೀ ಮತ್ತಿತರರ ಜೀವನ ದರ್ಶನ ಸಾಹಿತ್ಯಗಳು ಗುಜರಾತಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿದೆ. ಶ್ರೀಕೃಷ್ಣನ ಮೊಮ್ಮಗನಾದ ಅನಿರುದ್ಧನ ಮಡದಿ ಉಷಾ ಆರಂಭಿಸಿದ ಲಾಸ್ಯ ಪರಂಪರೆ ಇಂದಿಗೂ ಈ ರಾಜ್ಯದ ಹಬ್ಬಹುಣ್ಣಿಮೆಗಳಲ್ಲಿ, ಮುಖ್ಯವಾಗಿ ನವರಾತ್ರಿ ಹಬ್ಬದಲ್ಲಿ, ಗರ್ಭಾ ನೃತ್ಯದಲ್ಲಿ ಉಳಿದುಬಂದಿದೆ.

ಕೃಷಿ ಮತ್ತು ನೀರಾವರಿ

[ಬದಲಾಯಿಸಿ]

ಭಾರತದಲ್ಲಿ ಪ್ರಗತಿಪರ ಬೇಸಾಯಕ್ಕೆ ಹೆಸರಾದ ಪ್ರದೇಶಗಳಲ್ಲಿ ಗುಜರಾತ್ ರಾಜ್ಯವೂ ಒಂದು. ಹತ್ತಿ ಮತ್ತು ನೆಲಗಡಲೆ ಬೆಳೆಗಳಲ್ಲಿ ಇಡಿಯ ರಾಷ್ಟ್ರದಲ್ಲಿ ಈ ರಾಜ್ಯ ಪ್ರಮುಖವಾಗಿದೆ. ಈ ಬೆಳೆಗಳು ರಾಜ್ಯದ ಅನೇಕ ಕೈಗಾರಿಕೆಗಳ ಅಭಿವೃದ್ಧಿಗೂ ತನ್ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೂ ಬುನಾದಿಯಾಗಿ ಪರಿಣಮಿಸಿದೆ. ಒಟ್ಟು 1,95,93,000 ಹೆಕ್ಟೇರ್ ಭೂವಿಸ್ತಾರವುಳ್ಳ ಈ ರಾಜ್ಯದಲ್ಲಿ 35.15 ಲಕ್ಷ ಹೆಕ್ಟೇರ್ (2003) ಭೂಮಿ ಕೃಷಿಗೆ ಉಪಯುಕ್ತವಾದ್ದು. ಅದರಲ್ಲಿ 16,27,000 ಹೆಕ್ಟೇರ್ ಅರಣ್ಯಪ್ರದೇಶ; 5,37,000 ಹೆಕ್ಟೇರ್ ಬೇಸಾಯವಲ್ಲದ ಇತರ ಉದ್ದೇಶಗಳಿಗೆ ಬಳಸಲಾದ ಜಮೀನು; 43,41,000 ಹೆಕ್ಟೇರ್ ಸಾಗುವಳಿ ಮಾಡಲಾಗದ ಬಂಜರು ಭೂಮಿ; 1,11,000 ಹೆಕ್ಟೇರ್ ಹುಲ್ಲುಗಾವಲು; 22,000 ಹೆಕ್ಟೇರ್ ವಿವಿಧ ಗಿಡಮರಗಳುಳ್ಳ ಪ್ರದೇಶ; 5,08,000 ಹೆಕ್ಟೇರ್ ಸಾಗುವಳಿ ಮಾಡಬಹುದಾದ ಪಾಳುಭೂಮಿ; 685 ಹೆಕ್ಟೇರ್ ಉತ್ತು ಬಿತ್ತದೆ ಬಿಟ್ಟ ನಿರ್ಲಕ್ಷಿತ ಭೂಮಿ. ಸುಮಾರು 1,05,00,000 ಹೆಕ್ಟೇರ್ ಭೂಮಿ ಮಾತ್ರವೇ ನೀರಾವರಿಗೆ ಒಳಪಟ್ಟಿದ್ದು. ಶೇ. 90ರಷ್ಟು ಭೂಮಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಈ ರಾಜ್ಯದಲ್ಲಿ ನೀರಾವರಿಯ ವಿಶೇಷ ಸೌಲಭ್ಯಗಳಿಲ್ಲದಿದ್ದರೂ ಬೇಸಾಯಕ್ಕೆ ಬಳಸುವ ಶಾಸ್ತ್ರೀಯ ಪದ್ಧತಿಗಳಿಂದಾಗಿ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಕಾಲಕಾಲಕ್ಕೆ ಹೆಚ್ಚಳವನ್ನೇ ಸಾಧಿಸಲಾಗಿದೆ.ನೆಲಗಡಲೆ ಮತ್ತು ಹತ್ತಿ ಈ ರಾಜ್ಯದ ಎರಡು ಮುಖ್ಯ ಬೆಳೆಗಳು. ಇಡೀ ದೇಶದಲ್ಲಿ ನೆಲಗಡಲೆಯ ಬೆಳೆಗೆ ಒಳಪಟ್ಟ ಭೂಮಿಯ ಶೇ. 25 ಭಾಗವೂ ಹತ್ತಿಯ ಬೆಳೆಗೊಳಪಟ್ಟ ಭೂಮಿಯ ಶೇ. 21 ಭಾಗವೂ ಈ ರಾಜ್ಯದಲ್ಲಿದೆ. ನೆಲಗಡಲೆ ಮತ್ತು ಹತ್ತಿಯ ಇಡೀ ದೇಶದ ವಾರ್ಷಿಕ ಉತ್ಪನ್ನಗಳಲ್ಲಿ ಅನುಕ್ರಮವಾಗಿ ಶೇ. 23 ಮತ್ತು ಶೇ. 29 ಗುಜರಾತಿನಲ್ಲಿ ಬೆಳೆಯುತ್ತವೆ.ಬೇಸಾಯ ಶಿಕ್ಷಣ ಪ್ರಸಾರಕ್ಕಾಗಿ ಜುನಾಗಢ, ಆನಂದ್, ನವಸಾರಗಳಲ್ಲಿ ವ್ಯವಸಾಯದ ಮಹಾವಿದ್ಯಾಲಯಗಳನ್ನು ತೆರೆಯಲಾಗಿದೆ. ಅಹಮದಾಬಾದಿನಲ್ಲಿ 1972 ರಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭವಾಯಿತು. ರಾಜ್ಯದಲ್ಲಿ 13 ಕೃಷಿ ಶಾಲೆಗಳಿವೆ. ಸೂರತ್, ವಡೋದರ, ಆನಂದ್ ಮತ್ತು ಜುನಾಗಢದಲ್ಲಿ ಗ್ರಾಮ ಸೇವಕರ ತರಬೇತು ಕೇಂದ್ರಗಳಿವೆ.ಅರಳೆ, ಗುಜರಾತಿನ ಒಂದು ಮುಖ್ಯ ಉತ್ಪನ್ನ

Sardar Sarovar Project, Gujarat, partially completed (up to E.L.121.92 m)

ಗುಜರಾತಿನಲ್ಲಿ ಬಾವಿ ಕೆರೆಗಳಲ್ಲದೆ ಸುಮಾರು 50 ಮಧ್ಯಮ ಗಾತ್ರದ ನೀರಾವರಿ ಯೋಜನೆಗಳೂ , ದೊಡ್ಡ ಗಾತ್ರದ ನೀರಾವರಿ ಯೋಜನೆಗಳೂ ಉಂಟು. ಯೋಜನೆಗಳಿಂದ ದೊರೆಯುವ ನೀರು ರಾಜ್ಯದ ಒಟ್ಟು ಸಾಗುವಳಿ ಕ್ಷೇತ್ರದ ಶೇ. 11 ಭಾಗವನ್ನು ಮಾತ್ರ ತಣಿಸಬಲ್ಲದು. ರಾಜ್ಯದ ನದಿಗಳಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವ ಪ್ರಯತ್ನಗಳಲ್ಲದೆ, ಸಹಸ್ರಾರು ನೀರಾವರಿ ಬಾವಿಗಳನ್ನು ತೋಡಿಸುವ ಕಾರ್ಯ ನಡೆದಿದೆ. ಜೊತೆಗೆ ಒಣ ಬೇಸಾಯದ ವ್ಯವಸ್ಥಿತ ಕ್ರಮಗಳಿಗಾಗಿಯೂ ವಿಶೇಷ ಗಮನ ಕೊಡುವುದು ಅನಿವಾರ್ಯವೆನಿಸಿದೆ. ಅದಕ್ಕಾಗಿ 1949ರಿಂದ ಜಮೀನಿನಲ್ಲಿ ಸಮಪಾತಳೀ ಒಡ್ಡು ರಚಿಸುವ ಯೋಜನೆಯನ್ನಾರಂಭಿಸಿ ಮೊದಲೆರಡು ದಶಕಗಳಲ್ಲಿಯೇ 22 ಲಕ್ಷ ಎಕರೆಗಳ ಜಮೀನಿನಲ್ಲಿ ಇಂಥ ಒಡ್ಡುಗಳನ್ನು ಹಾಕಲಾಯಿತು. ಖೇಡಾ ಜಿಲ್ಲೆಯ ಕೋಠಿಯಖಾಡ ಒಣ ಬೇಸಾಯದ ಪ್ರಾತ್ಯಕ್ಷಿಕಾ ಕೇಂದ್ರದಲ್ಲಿ ಭೂ ಸಂರಕ್ಷಣೆಯ ವಿವಿಧ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಜುನಾಗಢ, ಮಂಗ್ರೋಲ, ಮುಂದ್ರಾ, ಊನಾ, ಕೋಡಿನಾರ್, ಧಾರಿ, ಮಾಹುವಾ, ಮೊಟೇರಾ, ದೇಹಗಾಮ್, ವಡೋದರ, ನವಸಾರಿ, ಗಾಂಡೇವಿ, ಪಾರ್ದಿ, ಪಾರಿಯಗಳಲ್ಲಿರುವ ಸರ್ಕಾರಿ ಸಸಿದೋಟಗಳಿಂದ ಹೂ - ಹಣ್ಣುಗಳು ಸಸಿಗಳನ್ನು ರೈತರಿಗೆ ಹಂಚಲಾಗುತ್ತದೆ. ಅಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಶೋಧನ ಕೇಂದ್ರಗಳ ಮೂಲಕ ತೋಟಗಾರಿಕೆಯ ಅಭಿವೃದ್ಧಿಯ ಮಾಹಿತಿಯನ್ನು ಪೂರೈಸಲಾಗುತ್ತಿದೆ.

ವಿದ್ಯುತ್ ಉತ್ಪಾದನೆ

[ಬದಲಾಯಿಸಿ]

ಈ ರಾಜ್ಯದಲ್ಲಿರುವ ವಿದ್ಯುದುತ್ಪಾದನ ಕೇಂದ್ರಗಳಿವು:

  1. ಧುವರನ್ ವಿದ್ಯತ್ ಕೇಂದ್ರ ... 254.0
  2. ಧುವರನ್ ವಿದ್ಯುತ್ ಕೇಂದ್ರ ( 2ನೆಯ ಹಂತ) ... 280.0
  3. ಉಗಿಚಕ್ರ ವಿದ್ಯುತ್ ಕೇಂದ್ರ ... 54.0
  4. ಉತ್ರನ್ ವಿದ್ಯುತ್ ಕೇಂದ್ರ ... 67.5
  5. ಶಹಾಪುರ ... 16.0
  6. ಪೋರ್ಬಂದರ್ ... 15.0
  7. ಸಿಕ್ಕಾ ... 16.0
  8. ಕಾಂಡ್ಲಾ ... 16.0
  9. ಭಾವನಗರ ... 16.0
  10. ಸಾಬರ್ಮತಿ ... 217.5
  11. ತಾರಾಪುರ್ ಪರಮಾಣು ವಿದ್ಯುತ್ ಕೇಂದ್ರ ... 190.0
  12. ಉಕಾಯಿ ಜಲವಿದ್ಯುತ್ ಕೇಂದ್ರ ... 300.00

ರಾಜ್ಯದ ನಗರಗಳಲ್ಲದೆ ಸು. 3,500 ಗ್ರಾಮಗಳಿಗೂ 52,000 ನೀರಿನ ಪಂಪ್‍ಸೆಟ್‍ಗಳಿಗೂ ವಿದ್ಯುತ್ ಪುರೈಕೆಯಾಗಿದೆ. ಲಕ್ಷ ಮನೆಗಳಿಗೆ ವಿದ್ಯುತ್ತನ್ನೊದಗಿಸಲಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ಚ್ಛಕ್ತಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. 2005ರಲ್ಲಿ ಒಟ್ಟು 8763 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿತ್ತು.

ಮೀನುಗಾರಿಕೆ

[ಬದಲಾಯಿಸಿ]

ಗುಜರಾತಿಗೆ 1,600 ಕಿಮೀ ಕರಾವಳಿ ಇರುವುದರಿಂದ ಮೀನುಗಾರಿಕೆಯ ಅಭಿವೃದ್ಧಿಗೆ ಇಲ್ಲಿ ಸಾಕಷ್ಟು ಅವಕಾಶವುಂಟು. ಒಳನಾಡಿನಲ್ಲಿರುವ ನಾಲ್ಕು ದೊಡ್ಡ ನದಿಗಳೂ ಕೆರೆ ಕಾಲುವೆಗಳೂ ಇದಕ್ಕೆ ಉಪಯುಕ್ತವಾಗಿವೆ. ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 2 ಲಕ್ಷ ಟನ್ ಮೀನಿನ ಉತ್ಪಾದನೆಯಾಗುತ್ತದೆ. ಇದರ ಅಭಿವೃದ್ಧಿಗಾಗಿ ವೀರಾವಲ, ಪೋರ್ಬಂದರ್, ಬಲಸಾರ್, ಮಧವಾಡ ಮತ್ತು ಅಂಬರ್ಗಾಂವ್ಗಳಲ್ಲಿ ಸೇವಾಕೇಂದ್ರಗಳನ್ನೂ ಅಂಬರ್ಗಾಂವ್, ವೀರಾವಲ ಮತ್ತು ಬಲ್ಸಾರ್ಗಳಲ್ಲಿ ಆಧುನಿಕ ದೋಣಿಗಳ ನಿರ್ಮಾಣ ಕೇಂದ್ರಗಳನ್ನೂ ತೆರೆಯಲಾಗಿದೆ. ವೀರಾವಲ, ಜಾಫರಾಬಾದ್, ಅಂಬರಗಾಂವ್, ಪೋರ್ಬಂದರ್, ಮಂಗ್ರೋಲ್ ಮತ್ತು ಹೀರಾತೋಟ್ ಬಂದರುಗಳಲ್ಲಿ ಈ ಉದ್ಯಮ ದೊಡ್ಡ ಗಾತ್ರದಲ್ಲಿ ನಡೆಯುತ್ತಿದೆ. ಗುಜರಾತಿನಿಂದ ಹೊರದೇಶಗಳಿಗೆ ಸು.1 ಕೋಟಿ ರೂ. ಮೌಲ್ಯದ ಮೀನು ರಫ್ತಾಗುತ್ತದೆ.

ಖನಿಜಗಳು

[ಬದಲಾಯಿಸಿ]

ಗುಜರಾತಿನಲ್ಲಿ ಉಪ್ಪು, ಸುಣ್ಣದಕಲ್ಲು, ಮ್ಯಾಂಗನೀಸ್,ಜಿಪ್ಸಮ್, ಪಿಂಗಾಣಿ ಮಣ್ಣು, ಕ್ಯಾಲ್ಸೈಟ್,ಬಾಕ್ಸೈಟ್, ಪೆಟ್ರೋಲಿಯಂ, ಅಮೂಲ್ಯ ಶಿಲೆ, ಬಣ್ಣಕ್ಕೆ ಬಳಸುವ ಕೆಮ್ಮಣ್ಣು ಅಗೇಟ್ ಶಿಲೆ ಮುಂತಾದ ಖನಿಜಗಳು ವಿಪುಲವಾಗಿ ದೊರೆಯುತ್ತದೆ. ಸೌರಾಷ್ಟ್ರ ಮತ್ತು ಕಚ್ಟ್‌ ಉತ್ತಮ ದರ್ಜೆಯ ಬಾಕ್ಸೈಟ್ ಮತ್ತು ಸುಣ್ಣದ ಕಲ್ಲುಗಳಿಗೆ ಹೆಸರಾಗಿದ್ದರೆ, ವಡೋದರ ಜಿಲ್ಲೆಯ ಛೋಟಾ ಉದಯಪುರದ ಬಳಿ ಪ್ಲುರೈಟ್ ದೊರೆಯುತ್ತದೆ. ವಡೋದರ, ಬನಾಸ್ಕಂಟ, ಭಡೋಚ, ಭಾವನಗರ, ಕಚ್ಛ, ರಾಜಕೋಟೆ ಜಿಲ್ಲೆಗಳಲ್ಲಿ ದೊರೆಯುವ ಬೆಲೆ ಬಾಳುವ ಕಲ್ಲುಗಳು ಗುಜರಾತಿನ ಮುಖ್ಯವಾಗಿ ಖಂಬಾತ್ ಮತ್ತು ಸೂರತಿನ, ಕಲಾವಿದರ ಕೈಗಳಲ್ಲಿ ವಿವಿಧ ಆಕರ್ಷಕ ರೂಪ ತಳೆದು ದೇಶವಿದೇಶಗಳಲ್ಲಿ ವಿಶೇಷ ಬೇಡಿಕೆಗೆ ಪಾತ್ರವಾಗಿದೆ. ಗುಜರಾತಿನ ತೈಲ ಮತ್ತು ಅನಿಲ ಸಂಪತ್ತಿನ ಸರ್ವೇಕ್ಷಣೆ ನಡೆಸಿ ಅದನ್ನು ಹೊರತೆಗೆಯುವ ಕೆಲಸ ನಡೆದಿದೆ. ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ನೇತೃತ್ವದಲ್ಲಿ 530 ಬಾವಿಗಳನ್ನು ತೋಡಲಾಗಿದೆ. ಪ್ರತಿವರ್ಷ 11.275 ಟನ್ ತೈಲ ತೆಗೆಯುವ ಉದ್ದೇಶವಿರಿಸಿಕೊಂಡು ಕಾರ್ಯ ನಡೆದಿದೆ. ಅಂಕಲೇಶ್ವರ, ಕಲೋಲ, ನವಾಗಾಮ್‍ಗಳು ತೈಲೋತ್ಪಾದನೆಯ ಮುಖ್ಯ ಕೇಂದ್ರಗಳು.

ಸಹಕಾರ, ಕೈಗಾರಿಕೆ

[ಬದಲಾಯಿಸಿ]

ಸಹಕಾರೀ ಆಂದೋಲನದಲ್ಲೂ ಈ ರಾಜ್ಯ ಸಾಕಷ್ಟು ಪ್ರಗತಿ ಸಾಧಿಸಿದೆ. ಗ್ರಾಮ ಮಟ್ಟದಲ್ಲಿ 28 ಲಕ್ಷ ಸದಸ್ಯರುಳ್ಳ 9.885 ಪ್ರಾಥಮಿಕ ಸಂಘಗಳುಂಟು. 325 ಸಹಕಾರೀ ಬೇಸಾಯ ಸಂಘಗಳೂ. 58 ಸಂಯುಕ್ತ ಸಹಕಾರೀ ಬೇಸಾಯ ಸಂಘಗಳೂ 450 ನೀರೆತ್ತುವ ಸಹಕಾರೀ ಸಂಘಗಳೂ ಕಾರ್ಯನಿರತವಾಗಿವೆ. ಇವಲ್ಲದೆ ವರ್ಷಕ್ಕೆ ಸರಾಸರಿ 1,000-1.250 ದಶಲಕ್ಷ ಟನ್ ಕಬ್ಬಿನಿಂದ ಸಕ್ಕರೆ ತಯಾರಿಸುವ 11 ಸಹಕಾರಿ ಸಕ್ಕರೆ ಕಾರ್ಖಾನೆಗಳುಂಟು. 63 ಪ್ರಾಥಮಿಕ ಮೀನುಗಾರಿಕೆ ಸಂಘಗಳೂ 14 ಒಣ ಮೀನುಗಳ ಮಾರಾಟ ಸಂಘಗಳೂ 8 ತಾಜಾ ಮೀನುಗಳ ಮಾರಾಟ ಸಂಘಗಳೂ ಇವೆ. ಹಾಲಿನ ಉತ್ಪಾದನೆ, ಪುರೈಕೆ, ಗೃಹ ನಿರ್ಮಾಣ ಮತ್ತು ವಸತಿ ವ್ಯವಸ್ಥೆಗಳಿಗಾಗಿ ಈ ರಾಜ್ಯದಲ್ಲಿ ಆಗಿರುವ ಸಹಕಾರೀ ಸಂಘಟನೆ ವಿಶಿಷ್ಟವಾದ್ದು. 2.88.399 ಸದಸ್ಯರುಳ್ಳ 1.552 ಹಾಲುಪುರೈಕೆಯ ಸಹಕಾರೀ ಸಂಘಗಳೂ 1.43.522 ಸದಸ್ಯರುಳ್ಳ 4.215 ಗೃಹನಿರ್ಮಾಣ ಸಂಘಗಳೂ ಈ ರಾಜ್ಯದಲ್ಲಿವೆ. 166 ನೇಕಾರರ ಸಂಘಗಳೂ 779 ಇತರ ಕೈಗಾರಿಕೆಗಳ ಸಂಘಗಳೂ 959 ಗ್ರಾಹಕರ ಸಂಘಗಳೂ, 89 ವ್ಯವಸಾಯೇತರ ಸಂಘಗಳೂ ರಾಜ್ಯದಲ್ಲಿವೆ.

Surat is one of the fastest growing cities in the world.
Shown here is the Tata Nano, the world's least expensive car.[] Sanand, Gujarat is home to Tata Nano.
Inside view of Crystal Mall, Rajkot

ಇಲ್ಲಿ 14.123 ಸಣ್ಣ ಕೈಗಾರಿಕೆಗಳಿವೆ. ಗೃಹ-ಗುಡಿ ಕೈಗಾರಿಕೆಗಳು ಮಾತ್ರವಲ್ಲದೆ ದೊಡ್ಡ ಮತ್ತು ಮಧ್ಯಮ ಗಾತ್ರಗಳ ಕೈಗಾರಿಕೆಗಳಲ್ಲೂ ರಾಜ್ಯ ಮುಂದುವರಿದಿದೆ.

ಅಹಮದಾಬಾದ್ ಸೂರತ್, ವಡೋದರ, ಖೇಡಾ, ಭಾವನಗರ, ಸುರೇಂದ್ರ ನಗರ, ರಾಜಕೋಟೆ, ಜಾಮ್ನಗರಗಳಲ್ಲಿ ಕಾರ್ಖಾನೆಗಳು ಹೆಚ್ಚಾಗಿ ಬೆಳೆದಿವೆಯಾದರೂ ಇತರ ಕಡೆಗಳಲ್ಲೂ ಕೆಲವು ಕೈಗಾರಿಕೆಗಳುಂಟು. ಜವಳಿ ಕೈಗಾರಿಕೆ ಅತ್ಯಂತ ಮುಖ್ಯವಾದ್ದು. ಎಂಜಿಯರಿಂಗ್, ರಸಾಯನವಸ್ತು. ಔಷಧಗಳು, ಸಿಮೆಂಟ್, ಕುಂಭ, ಗಾಜು, ಗೊಬ್ಬರ, ಕಾಗದ ಇವು ಇತರ ಕೈಗಾರಿಕೆಗಳು. ವಡೋದರÀದಲ್ಲಿ ಪೆಟ್ರೋಲಿಯಂ ಪರಿಷ್ಕರಣ ಕೇಂದ್ರವಿದೆ. ಭಾರತದ ಔದ್ಯೋಗಿಕ ನಕ್ಷೆಯಲ್ಲಿ ಈ ರಾಜ್ಯಕ್ಕೊಂದು ಮಹತ್ತ್ವದ ಸ್ಥಾನ ಪ್ರಾಪ್ತವಾಗಿದೆ. 2002ರ ಅಂತ್ಯದಲ್ಲಿ 19,696 ಕಾರ್ಯನಿರತ ಕೈಗಾರಿಕಾ ಘಟಕಗಳಿದ್ದವು. ಸೆಪ್ಟೆಂಬರ್ 2003ರಲ್ಲಿ 2.83 ಲಕ್ಷ ಸಣ್ಣ ಕೈಗಾರಿಕೆಗಳಿದ್ದವು. ಸರಾಸರಿ 8.40 ಲಕ್ಷ ಮಂದಿಗೆ ಉದ್ಯೋಗಾವಕಾಶವಿತ್ತು.

ಪಂಚಾಯತಿ ರಾಜ್ಯ

[ಬದಲಾಯಿಸಿ]
Gandhinagar, the capital of Gujarat State. The picture shown above is of the Legislative Assembly and seat of Gujarat government.

ಈ ರಾಜ್ಯದಲ್ಲಿ 11.928 ಗ್ರಾಮ ಪಂಚಾಯತಿಗಳೂ 56 ಪಟ್ಟಣ ಪಂಚಾಯತಿಗಳೂ 182 ತಾಲ್ಲೂಕು ಪಂಚಾಯತಿಗಳೂ 17 ಜಿಲ್ಲಾ ಪಂಚಾಯತಿಗಳೂ (ಗಾಂಧೀನಗರ ಮತ್ತು ಡಾಂಗ್ಸ ಜಿಲ್ಲೆಗಳ ಹೊರತಾಗಿ) ಇವೆ. ಗಿರಿಜನರ ಜೀವನಾಭಿವೃದ್ಧಿಗಾಗಿ 53 ವಿಶೇಷ ಅಭಿವೃದ್ದಿ ಘಟಕಗಳನ್ನು ರಾಜ್ಯದಲ್ಲಿ ರಚಿಸಲಾಗಿದೆ. ತಮ್ಮ ಸೇವಾ ಸಿಬ್ಬಂದಿಯನ್ನು ತಾವೇ ಆಯ್ದುಕೊಳ್ಳುವ ಅಧಿಕಾರವನ್ನಲ್ಲದೆ ಆಯಾ ಪ್ರದೇಶಗಳ ಅಭಿವೃದ್ಧಿಗಾಗಿ ನೂರಕ್ಕೆ ನೂರರಷ್ಟು ಭೂಕಂದಾಯವನ್ನು ಬಳಸಿಕೊಳ್ಳುವ ಸವಲತ್ತನ್ನೂ ಈ ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಲಾಗಿದೆ.

ಸಮಾಜ ಕಲ್ಯಾಣ

[ಬದಲಾಯಿಸಿ]
Swarnim Sankul 2, a Government of Gujarat Office

ಹಿಂದುಳಿದ ಜನಗಳ ಕಲ್ಯಾಣ ದೃಷ್ಟಿಯಿಂದ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 120 ಲಕ್ಷ ಜನ ಹಿಂದುಳಿದ ಸಮಾಜಕ್ಕೆ ಸೇರಿದ್ದು ಅವರಲ್ಲಿ ಸುಮಾರು 36 ಲಕ್ಷ ಜನ ಪರಿಶಿಷ್ಟ ಜಾತಿಯವರೂ 75 ಲಕ್ಷ ಜನ ಪರಿಶಿಷ್ಟ ಜನಾಂಗದವರೂ 4 ಲಕ್ಷ ಜನ ಅಲೆಮಾರಿ ಜನಾಂಗಕ್ಕೆ ಸೇರಿದವರೂ, 4 ಲಕ್ಷ ಜನ ಇತರರೂ ಇದ್ದಾರೆ. ಈ ಜನರ ಶಿಕ್ಷಣ ಆರ್ಥಿಕ ಅಭಿವೃದ್ದಿ. ಆರೋಗ್ಯ ವಸತಿಸೌಕರ್ಯ ಇತ್ಯಾದಿ ಕಾರ್ಯಯೋಜನೆಗಳ ಮೂಲಕ ಸಮಾಜಕಲ್ಯಾಣದ ಪ್ರಯತ್ನಗಳು ನಡೆದಿದೆ. ಹಿಂದುಳಿದ ಜನರ ಮಕ್ಕಳಿಗೆ ಉಚಿತವಾದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ದೊರೆಯುತ್ತದೆ. ಬಾಲಕಿಯರ ಹೆಚ್ಚಿನ ಶಿಕ್ಷಣಕ್ಕಾಗಿ 117 ಆಶ್ರಮ ಶಾಲೆಗಳನ್ನು ತೆರೆಯಲಾಗಿದೆ. ಸರ್ಕಾರಿ ಭೂಮಿಯ ವಿತರಣೆ, ಭೂಸುಧಾರಣೆ ಬೇಸಾಯದ ಸಲಕರಣೆಗಳ ಪುರೈಕೆ ಕೈಗಾರಿಕೆಗಳಲ್ಲಿ ತರಬೇತು ಮತ್ತು ಆರ್ಥಿಕ ನೆರವುಗಳ ಮೂಲಕ ಹಿಂದುಳಿದ ಜನಾಂಗಗಳ ಜನ ಮುಂದುವರಿಯುವಂತೆ ಯತ್ನಿಸಲಾಗುವುದು. ಅವರ ಶಾರೀರಿಕ ದುಡಿಮೆಗೆ ತಕ್ಕ ಫಲ ಸಿಗಬೇಕೆಂಬ ದೃಷ್ಟಿಯಿಂದ ಈ ಜನಾಂಗಗಳ ಜನರುಳ್ಳ ಸಹಕಾರಿ ಸಂಘಗಳ ರಚನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಹಮದಾಬಾದ್ ಸೂರತ್, ರಾಜಕೋಟೆ, ಡಾಹೋದ ವಡೋದರ, ಸುರೇಂದ್ರನಗರ, ಜುನಾಗಢ, ಪೋರ್ಬಂದರ್, ಫಾನ್ಸಾ, ಮೆಹೆಸಾನಾ, ಮಾಂಡವಿ ಮತ್ತು ಭಾವನಗರಗಳಲ್ಲಿರುವ ಅಂಗವಿಕಲರ ಮತ್ತು ಕುರುಡ ಕಿವುಡ-ಮೂಕರ ಶಿಕ್ಷಣ ಸಂಸ್ಥೆಗಳು ಸಮಾಜಕಲ್ಯಾಣ ಕಾರ್ಯಕ್ರಮದಲ್ಲಿ ಮಹತ್ತ್ವದ ಪಾತ್ರವಹಿಸುತ್ತವೆ.

ಆರೋಗ್ಯ

[ಬದಲಾಯಿಸಿ]

ಈ ರಾಜ್ಯದ ನಗರಗಳಲ್ಲದೆ ಗ್ರಾಮಾಂತರ ಪ್ರದೇಶದ ಜನರ ಆರೋಗ್ಯ ರಕ್ಷಣೆಗಾಗಿ 60-80 ಸಾವಿರ ಜನಕ್ಕೊಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ತೆರೆಯಲಾಗಿದೆ. ಒಟ್ಟು 251 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ರಾಜ್ಯದಲ್ಲಿವೆ.ಅಹಮದಾಬಾದ್, ವಡೋದರ, ಜಾಮ್ನಗರ ಮತ್ತು ಸೂರತ್ಗಳಲ್ಲಿ ವೈದ್ಯಕೀಯ ಕಾಲೇಜುಗಳೂ ಜಾಮ್ನಗರದಲ್ಲಿ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯವೂ ಇವೆ. ಜಾಮ್ನಗರದಲ್ಲಿರುವ ಸೂರ್ಯಕಿರಣ ಚಿಕಿತ್ಸಾಕೇಂದ್ರ ರಾಷ್ಟ್ರದಲ್ಲಿಯೇ ಅನನ್ಯಸದೃಶವಾದ್ದು.

ಶಿಕ್ಷಣ

[ಬದಲಾಯಿಸಿ]
Indian Institute of Management, Ahmedabad
The Gujarat National Law University, Gandhinagar
Campus at Dhirubhai Ambani Institute of Information and Communication Technology, Gandhinagar

ಈ ರಾಜ್ಯದಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ 1961ರಲ್ಲಿ ಸ್ವೀಕೃತವಾಗಿ 1964ರಿಂದ ಜಾರಿಗೆ ಬಂತು. ರಾಜ್ಯದ ಒಟ್ಟು 21,900 ಪ್ರಾಥಮಿಕ ಶಾಲೆಗಳಲ್ಲಿ 86,000 ಶಿಕ್ಷಕರು ದುಡಿಯುತ್ತಿದ್ದಾರೆ. 2,150 ಮಾಧ್ಯಮಿಕ ಶಾಲೆಗಳೂ 134 ವಿವಿಧೋದ್ದೇಶ ಶಾಲೆಗಳೂ 270 ಉಚ್ಚ ಶಿಕ್ಷಣ ಶಾಲೆಗಳೂ ಇವೆ. ಬೆಳಕಿಯರ ಶಿಕ್ಷಣ ಪ್ರಸಾರಕ್ಕಾಗಿ ಮಾಧ್ಯಮಿಕ ಹಂತದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಲಿ ಮಾಧ್ಯಮಿಕ ಶಿಕ್ಷಣ ರೂಪರೇಷೆಗಳನ್ನು ಹಾಕುವುದಲ್ಲದೆ ವಿದ್ಯಾರ್ಥಿಗಳ ಪರೀಕ್ಷೆಗಳ ಏರ್ಪಾಡು ಮಾಡುತ್ತದೆ. ಈ ರಾಜ್ಯದಲ್ಲಿ 13 ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಅಹಮದಾಬಾದಿನಲ್ಲಿ ಗಾಂಧಿಯವರು ಸ್ಥಾಪಿಸಿದ ಗುಜರಾತ್ ವಿದ್ಯಾಪೀಠವೂ ಒಂದು. ಗುಜರಾತ್‍ನಲ್ಲಿ 4 ಕೃಷಿ ವಿಶ್ವವಿದ್ಯಾಲಯಗಳಿವೆ. ರಾಜ್ಯದಲ್ಲಿರುವ ಕಾಲೇಜುಗಳ ಸಂಖ್ಯೆ 255 ವಡೋದರ ನಗರದಲ್ಲಿರುವ ಕೇಂದ್ರ ವಾಚನಾಲಯವಲ್ಲದೆ ರಾಜಕೋಟೆ. ಜಾಮ್ನಗರ ಸುರೇಂದ್ರನಗರ. ಜುನಾಗಢ, ಭಾವನಗರ, ಮತ್ತು ಭುಜ್ಗಳಲ್ಲಿರುವ ಸರ್ಕಾರಿ ಜಿಲ್ಲಾ ವಾಚನಾಲಯಗಳೂ ಇನ್ನಿತರ ಸಾರ್ವಜನಿಕ ವಾಚನಾಲಯಗಳೂ ಜನರಿಗೆ ವಾಚನ ಸೌಕರ್ಯ ಒದಗಿಸುತ್ತವೆ. ಈ ರಾಜ್ಯದಲ್ಲಿ ಒಟ್ಟು 34 ನಗರ ವಾಚನಾಲಯಗಳೂ 235 ಪಟ್ಟಣ ವಾಚನಾಲಯಗಳೂ, 40 ಮಹಿಳಾ ವಾಚನಾಲಯಗಳೂ 34 ಬಾಲ ವಾಚನಾಲಯಗಳೂ 4,027 ಗ್ರಾಮ ವಾಚನಾಲಯಗಳು ರಾಜಪಿಪ್ಲಾ ಮತ್ತು ತ್ರಾಪಜಗಳಲ್ಲಿ ಎರಡು ಸರ್ಕಾರಿ ಸಂಚಾರಿ ವಾಚನಾಲಯಗಳೂ ಇವೆ. ಗುಜರಾತ್ ವಾಚನಾಲಯ ಸಮಿತಿ ಮತ್ತು ಗುಜರಾತ್ ವಾಚನಾಲಯ ಸಹಕಾರಿ ಸಂಘಗಳು ಸರ್ಕಾರದ ಸಹಾಯದಿಂದ ರಾಜ್ಯದ ವಾಚನಾಲಯಗಳು ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿವೆ. ರಾಜ್ಯದಲ್ಲಿ ಒಟ್ಟು 46 ದಿನಪತ್ರಿಕೆಗಳೂ 132 ವಾರಪತ್ರಿಕೆಗಳೂ 70 ಪಕ್ಷಪತ್ರಿಕೆಗಳೂ 241 ಮಾಸಪತ್ರಿಕೆಗಳು 22 ತ್ರೈಮಾಸಿಕಗಳೂ ಪ್ರಕಟವಾಗುತ್ತಿದ್ದುವು.

ಸಾರಿಗೆ ಸಂಪರ್ಕ

[ಬದಲಾಯಿಸಿ]
Ahmedabad Airport
Ahmedabad Railway Station

ಈ ರಾಜ್ಯದಲ್ಲಿ ವಿವಿಧ ಮಾರ್ಗಗಳ ಸೌಕರ್ಯ ಸಾಕಷ್ಟಿದೆ. ರಾಷ್ಟ್ರೀಯ ಮತ್ತು ರಾಜ್ಯದ ಹೆದ್ದಾರಿಗಳನ್ನೊಳಗೊಂಡು 2002-03ರ ಅಂತ್ಯದಲ್ಲಿ ನಗರ ಪಾಲಿಕೆ ರಸ್ತೆಗಳನ್ನು ಬಿಟ್ಟು ಒಟ್ಟು 74,075 ಕಿಮೀ ರಸ್ತೆಯಿದ್ದು ಇದರಲ್ಲಿ 70,743 ಕಿಮೀ ಉತ್ತಮ ರಸ್ತೆಯಿತ್ತು. ರಾಜ್ಯದಲ್ಲಿ 1,134 ಕಿಮೀ ಬ್ರಾಡ್ ಗೇಜ್, 3,381 ಕಿಮೀ ಮೀಟರ್ ಗೇಜ್, 1,141 ಕಿಮೀ ನ್ಯಾರೋ ಗೇಜ್ ರೈಲುಮಾರ್ಗಗಳಿವೆ. ಅಹಮದಾಬಾದ್-ಗಾಂಧಿನಗರಗಳಲ್ಲಿ ಮೆಟ್ರೋ ರೈಲಿನ ಯೋಚನೆಗಳು 2011ರಿಂದ ಪ್ರಾರಂಭವಾಗಿದೆ. ಇಡೀ ದೇಶದ 21 ಮಧ್ಯಮ ಮತ್ತು 150 ಸಣ್ಣ ಬಂದರುಗಳು ಇದೊಂದೇ ರಾಜ್ಯದಲ್ಲಿವೆ. ಕಾಂಡ್ಲಾ ದೊಡ್ಡ ಬಂದರು. ಓಖಾ, ಭಾವನಗರ, ಖೇಡಿ ಸಿಕ್ಕ ವಿರಾವಲ್, ನವಲಾಖಿ, ಪೋರ್ಬಂದರ್, ಭಡೋಚ್, ಸೂರತ್, ಜಾಖಾನ್, ಮುಂದ್ರ ಪುಂಧರ, ದ್ವಾರಕಾ, ಮುಂಗ್ರೋಳ್, ಮಾಧವಾಡ, ಜವಾಬಂದರ್, ರಾಜ್ಪಾರಾ, ಜಾಫರಾಬಾದ್, ರಜುಲಾ, ಮಹುವಾ. ತಲಾಜ, ಘೋಘಾ, ಭಗ್ಡವಾ, ವಾನ್ಸಿ, ವೋರ್ಸಿ, ಬಿಲಿವೋರಾ, ಬಲ್ಸಾರ್, ಉಮರ್ಸಾದಿ, ಕೋಲಾಕ್, ಮರೋಳಿ ಉಮರ್ಗಾಂವ್-ಇವು ಇತರ ಬಂದರುಗಳು. ಅಹಮದಾಬಾದ್, ಭಾವನಗರ, ರಾಜಕೋಟೆ, ಪೋರ್ಬಂದರ್, ಜಾಮ್ನಗರ ಕೇಶೋದ್, ಭುಚ್, ಸೂರತ್, ವಡೋದರ, ಮತ್ತು ಕಾಂಡ್ಲಾಗಳಲ್ಲಿ ವಿಮಾನ ನಿಲ್ದಾಣಗಳಿವೆ. ದೆಹಲಿ ಮುಂಬಯಿಗಳೊಂದಿಗೆ ನೇರ ವಾಯುಸಂಪರ್ಕವೇರ್ಪಟ್ಟಿದೆ.

ಮುಖ್ಯ ಸ್ಥಳಗಳು

[ಬದಲಾಯಿಸಿ]
The docks of ancient Lothal as they are today.
Ancient sophisticated water reservoir at Dholavira

1411ರಲ್ಲಿ ಸುಲ್ತಾನ್ ಅಹಮ್ಮದ್ ಷಹ ಕಟ್ಟಿಸಿದ ಅಹಮದಾಬಾದ್ ಪಶ್ಚಿಮ ಭಾರತದ ಎರಡನೆಯ ಅತಿ ದೊಡ್ಡ ನಗರ. ಇದು ಬಟ್ಟೆಯ ಉತ್ಪಾದನೆಯ ದೃಷ್ಟಿಯಿಂದ ಭಾರತದ ಮ್ಯಾಂಚೆಸ್ಟರ್ ಎನಿಸಿಕೊಂಡಿದೆ. 1615ರಲ್ಲಿ ಈ ನಗರವನ್ನು ಕಣ್ಣಾರೆ ಕಂಡ ಥಾಮಸ್ ರೋ ಈ ನಗರ ಲಂಡನ್ನಿನಷ್ಟು ದೊಡ್ಡದೆಂದೂ ಹಿಂದೂಸ್ತಾನದಲ್ಲೇ ಅಲ್ಲದೆ ಜಗತ್ತಿನಲ್ಲೆ ಸುಂದರ ನಗರಗಳಲ್ಲೊಂದೆನಿಸಿದೆಯೆಂದೂ ಅಭಿಪ್ರಾಯ ಪಟ್ಟಿದ್ದ. ಇಲ್ಲಿರುವ ಹಿಂದು ಮತ್ತು ಜೈನಮಂದಿರಗಳ ಶಿಲ್ಪಕಲಾ ವೈಭವವನ್ನು ಮೆರೆಸುವ ಮಸೀದಿ ಮತ್ತು ಸ್ಮಾರಕಗಳೂ ನೋಡುವಂತಿವೆ. ಗಾಂಧಿಯವರು ಸ್ಥಾಪಿಸಿದ ಸಾಬರಮತಿ ಆಶ್ರಮ ಬಳಿಯಲ್ಲೇ ಇದೆ. ಬಾಲವನ, ಪ್ರಾಣಿಸಂಗ್ರಹಾಲಯ, ಮತ್ಸ್ಯಾಲಯಗಳಿಂದ ಕೂಡಿದ ಕಂಕರಿಯಾ ಸರೋವರ ಸುಂದರವಾಗಿದೆ. ಇಲ್ಲಿಯ ಜುಮ್ಮಾ ಮಸೀದಿ ಶಹಾ ಅಲಮ್ ಸ್ಮಾರಕ, ಮೊಹಮ್ಮದ್ ಬೇಗ್ದಾ ಮತ್ತು ಗಾಂಜ ಬಕ್ಷರ ಸ್ಮಾರಕಗಳು ಪ್ರೇಕ್ಷಣೀಯ, ಅಹಮದಾಬಾದಿನಿಂದ 80 ಕಿಮೀ ಅಂತರದಲ್ಲಿ ಇರುವ ಲೋಥಾಲ್‍ನಲ್ಲಿ ದೊರೆತ ಅವಶೇಷಗಳು ಗುಜರಾತಿನ ನಾಗರಿಕತೆ ಹರಪ್ಪ ನಾಗರಿಕತೆಯಷ್ಟು ಹಿಂದಿನದಿರಬಹುದೆಂದು ಸೂಚಿಸುತ್ತವೆ. ಈ ಬೆಟ್ಟವನ್ನು ಅಗೆದು ತೆಗೆದ ಸುಯೋಜಿತ ನಗರರಚನೆ ಮತ್ತು ಬಂದರಿನ ವ್ಯವಸ್ಥೆ ಅಖಿಲಭಾರತ ಮಹತ್ತ್ವ ಪಡೆದಿವೆ. ಅಹಮದಾಬಾದಿನಿಂದ 106 ಕಿಮೀ ದೂರದಲ್ಲಿರುವ ಮೊಧೇರದ ಸೂರ್ಯಮಂದಿರ ಸೋಳಂಕಿ ದೊರೆ 1026-27 ರಲ್ಲಿ ಕಟ್ಟಿಸಿದ್ದು. ಇದರ ಶಿಲ್ಪ ಒರಿಸ್ಸದ ಕೊನಾರ್ಕದ ಪ್ರಖ್ಯಾತ ಸೂರ್ಯಮಂದಿರವನ್ನು ಹೋಲುತ್ತದೆ. ಜುನಾಗಢದ ಬಳಿಯ ಗಿರ್ನಾರದಲ್ಲಿ ಜೈನಮಂದಿರಗಳಿವೆ. ಸಿಂಹಗಳಿಂದಾಗಿ ಗಿರ್ ಅರಣ್ಯ ಪ್ರಸಿದ್ಧವಾದ್ದು. ಸೌರಾಷ್ಟ್ರದಲ್ಲಿ ಕೃಷ್ಣಲೀಲೆಯ ಕೇಂದ್ರಗಳಾಗಿದ್ದ ದ್ವಾರಕಾ ಮತ್ತು ವೀರಾವಲಗಳಲ್ಲಿ ಸುಂದರವಾದ ಮಂದಿರಗಳಿವೆ. ಸೋಮನಾಥ ದೇವಾಲಯವು ಸೌರಾಷ್ಟ್ರದ ಆಕರ್ಷಣೆಗಳಲ್ಲೊಂದು. ಗಾಂಧಿಯವರ ಜನ್ಮ ಸ್ಥಳವಾದ ಪೋರ್ಬಂದರ್ ತನ್ನ ಹಳೆಯ ಮತ್ತು ಹೊಸ ನಾಗರಿಕತೆಗಳ ಕುರುಹುಗಳಿಗಾಗಿ ಹೆಸರಾಗಿದೆ. ಪಾಲಿಟಾಣಾ ಜೈನಮಂದಿರಗಳ ನಗರ. ಉತ್ತರ ಗುಜರಾತಿನಲ್ಲಿ ಪಾಟಣ ಮತ್ತು ಸಿದ್ಧಪುರಗಳು ಸಹಸ್ರಲಿಂಗ ದೇವಾಲಯ ಮತ್ತು ರುದ್ರ ಮಹಲುಗಳಿಗಾಗಿ ಪ್ರಸಿದ್ಧವಾದಂಥವು. ವಡೋದರ, ಸೂರತ್, ಜಾಮ್ನಗರ, ಭಾವನಗರ, ಖಂಬಾತ್, ರಾಜಕೋಟೆ, ಜುನಾಗಢ ಮುಂತಾದ ನಗರಗಳು ತಮ್ಮ ಐತಿಹಾಸಿಕ ಪರಂಪರೆಯಿಂದಲೂ ಆಧುನಿಕ ಸಾಧನೆಗಳಿಂದಲೂ ಮಹತ್ತ್ವದ ನಗರಗಳೆನಿಸಿವೆ. ಗಾಂಧೀನಗರ ಆಧುನಿಕ ರೀತಿಯಲ್ಲಿ ನಿರ್ಮಿತವಾದ ರಾಜಧಾನಿ, ನಲ್ ಸರೋವರ ಪಕ್ಷಿಧಾಮ.

The Somnath temple, known as "the Shrine Eternal", having been destroyed six times and rebuilt six times.

ಗುಜರಾತಿನ ಜಿಲ್ಲೆಗಳು

[ಬದಲಾಯಿಸಿ]

ಗುಜರಾತಿನಲ್ಲಿ ೨೫ ಜಿಲ್ಲೆಗಳಿವೆ. ಇವು:

ಅಹ್ಮದಾಬಾದ್ | ಅಮ್ರೇಲಿ | ಅಣಂದ್ | ಬನಸ್ಕಾಂತ | ಭರೂಚ್ | ಭಾವನಗರ | ದಾಹೋಡ್ | ಡಾಂಗ್ಸ್ | ಗಾಂಧಿನಗರ | ಜಾಮ್ ನಗರ | ಜುನಾಗಡ್ | ಖೇಡಾ | ಕಛ್ | ಮೆಹಸಾನಾ | ನರ್ಮದಾ | ನವ್ಸಾರಿ | ಪಂಚಮಹಲ್ | ಪಾಟನ್ | ಪೋರ್ ಬಂದರ್ | ರಾಜ್ ಕೋಟ್ | ಸಬರ್ಕಾಂತ | ಸೂರತ್ | ಸುರೇಂದ್ರನಗರ | ವಡೋದರಾ | ವಲ್ಸಾಡ್

೨೦೧೪-ಮುಖ್ಯ ಮಂತ್ರಿ ಆಯ್ಕೆ

[ಬದಲಾಯಿಸಿ]

ಗುಜರಾತ್ ಸರ್ಕಾರದ ಹಿರಿಯ ಸಚಿವೆ ಆನಂದಿ ಬೆನ್ ಪಟೇಲ್ ಅವರು ೨೧-೫-೨೦೧೪,/21/05/2014 ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ೨೨-೫-೨೦೧೪/ 22/05/2014 ಗುರುವಾರ ಗುಜರಾತ್-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ನಂತರ ,ಅವರ ಉತ್ತರಾಧಕಾರಿಯಾಗಿ ಆಯ್ಕೆಯಾಗಿದ್ದಾರೆ.ಮುಖ್ಯ ಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದ್ದರಿಂದ ಅವರ ನಂತರ ಆನಂದಿ ಬೆನ್ ಪಟೇಲ್ ಮುಖ್ಯ ಮಂತ್ರಿಯಾಗಿ ಆಯ್ಕಯಾದರು.

ಮುಖ್ಯ ಲೇಖನ

[ಬದಲಾಯಿಸಿ]

ಗುಜರಾತು ಸರ್ಕಾರ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
Government
Development
Other
  • Gujarat ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • Map of Gujarat by MapsofIndia.com

ಉಲ್ಲೇಖಗಳು

[ಬದಲಾಯಿಸಿ]
  1. Religious landscape of Gujarat
  2. Robyn Meredith (16 April 2007). "The Next People's Car". Forbes. Archived from the original on 18 ಜನವರಿ 2012. Retrieved 17 January 2011.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗುಜರಾತ್&oldid=1240386" ಇಂದ ಪಡೆಯಲ್ಪಟ್ಟಿದೆ