ವಿಷಯಕ್ಕೆ ಹೋಗು

ಗುಡ್ನಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರಕನ್ನಡ ಜಿಲ್ಲೆಸಿರ್ಸಿ ತಾಲ್ಲೂಕಿನಲ್ಲಿ ಬನವಾಸಿಯ ವಾಯವ್ಯಕ್ಕೆ ಸು. 8 ಕಿಮೀ ದೂರದಲ್ಲಿರುವ ಗ್ರಾಮ. ಕದಂಬರ ಕಾಲದಲ್ಲಿ ಇದು ಬನವಾಸಿ ರಾಜಧಾನಿಯ ಭಾಗವಾಗಿದ್ದಂತೆ ತೋರುತ್ತದೆ.

ಇತಿಹಾಸ

[ಬದಲಾಯಿಸಿ]

ಇಲ್ಲಿಯ ವೀರಭದ್ರ ದೇವಾಲಯದ ಬಳಿ ಸು. 6 ಮೀ ಎತ್ತರದ ಭಗ್ನವಾದ ಒಂದು ಶಾಸನ ಕಂಬವಿದೆ. ಕಂಬದ ಮೇಲ್ಭಾಗ ಒಡೆದು ಹೋಗಿರುವುದರಿಂದ ಇಡೀ ಕಂಬದ ಉದ್ದ ಎಷ್ಟಿತ್ತೆಂದು ಹೇಳಲಾಗದು. ಕಂಬದ ನಾಲ್ಕೂ ಮುಖಗಳಲ್ಲಿ ಶಾಸನವೊಂದನ್ನು ಕೆತ್ತಿದೆ. ಇದು ಕದಂಬ ರವಿವರ್ಮನ (ಸು.485-519) ಶಾಸನ. ಇದರಿಂದ ಕದಂಬ ಮಯೂರಶರ್ಮನ ತಂದೆ ಬಂಧುಷೇಣ, ತಾತ ವೀರಶರ್ಮ ಎಂಬ ಹೊಸ ವಿಷಯಗಳು ತಿಳಿದುಬಂದಿವೆ. ಶಾಸನದಲ್ಲಿ ರವಿವರ್ಮ ಮನ್ಮಥನಿಗಾಗಿ ಆಲಯವೊಂದನ್ನು ಕಟ್ಟಿಸಿದನೆಂದು ಹೇಳಿದೆ. ಜಿನಾಲಯವೆಂದು ಓದಿದಲ್ಲಿ ಆಲಯ ಬಾಹುಬಲಿಯದೆಂದು, ಬಾಹುಬಲಿಯ ಕಲ್ಪನೆ ಮತ್ತು ಒಂದು ದೇವಾಲಯ 6ನೆಯ ಶತಮಾನದಲ್ಲಿಯೇ ಇತ್ತು ಎಂದು ಧೃಢವಾಗುತ್ತದೆ. ಪ್ರಸ್ತುತ ಶಾಸನದಲ್ಲಿ ಗುಡ್ನಾಪುರವನ್ನು ಗುಡ್ಡತಟಾಕ ಎಂದು ಕರೆಯಲಾಗಿದೆ. ಈಗಲೂ ಗುಡ್ನಾಪುರಕ್ಕೆ ಹೊಂದಿದಂತೆ ಆ ಭಾಗದಲ್ಲಿಯ ವಿಸ್ತಾರವಾದ ದೊಡ್ಡಕೆರೆಯನ್ನು ಶಾಸನೋಲ್ಲೇಖಿತ ಗುಡ್ಡತಟಾಕವೆಂದು ಗುರುತಿಸಬಹುದು.

ಈ ಶಾಸನದಲ್ಲಿ ಗಮನಾರ್ಹವಾದ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಶಾಸನ ಹತ್ತಿರದಲ್ಲಿ ಅರಸರ ಅರಮನೆಯಿದ್ದು ಅದರ ಬದಿಯಲ್ಲಿ ನಾಟ್ಯಶಾಲೆಯಿರುವ ವಿಷಯ, ಕಲ್ಲಿಲ್ಲಿ ಎಂಬ ಗ್ರಾಮದಲ್ಲಿ ಪದ್ಮಾವತಿ ಚೈತ್ಯಾಲಯವಿರುವ ವಿಷಯ, ಪದ್ಮಾವತಿ ಪಾರ್ಶ್ವನಾಥ ತೀರ್ಥಂಕರ ಯಕ್ಷಿ ವಿಷಯ (ಇದುವರೆಗೆ ತಿಳಿದಮಟ್ಟಿಗೆ ಈ ಪದ್ಮಾವತಿ ಯಕ್ಷಿಯ ಪ್ರತ್ಯೇಕ ಚೈತ್ಯಾಲಯ ಅತ್ಯಂತ ಪ್ರಾಚೀನವಾದದ್ದು ಇದೊಂದೆ) ದಾಖಲಾಗಿದೆ. ಈ ಶಾಸನದಲ್ಲಿ 1-10ರವರೆಗಿನ ಸಂಖ್ಯೆಗಳು ಉಲ್ಲೇಖಗೊಂಡಿವೆ.

ಈ ನೆಲೆಯ ಅಂಚಿನಲ್ಲಿದ್ದ ಒಂದು ಬಂಡೆಯ ಮೇಲೆ ಕುತೂಹಲಕರವಾದ ರೇಖಾಚಿತ್ರಗಳಿವೆ. ಅವು ವಜ್ರ, ನಾಲ್ಕು ಸಮಬಾಹು ಚತುರ್ಭುಜವುಳ್ಳ ಒಂದು ಆಯಾತಾ ಕೃತಿ, ಕೊನೆಯಿಲ್ಲದ ನಾಲ್ಕು ಗಂಟಿನಾಕೃತಿ, ಅಕ್ಕಪಕ್ಕದಲ್ಲಿ ಚಕ್ರಗಳು. ನಾಲ್ಕು ಗಂಟಿನಾಕೃತಿ ಚಿತ್ರ ಮೊಹೆಂಜೋದಾರೊದಲ್ಲಿಯ ಹರಪ್ಪ ನಾಗರಿಕತೆಯ ಎರಡು ತಾಮ್ರದ ಬಿಲ್ಲೆಗಳ ಮೇಲೂ ಇದೆ. ಪ್ರಾಯಶಃ ಶ್ರೀವತ್ಸ ಚಿಹ್ನೆ ಸೂಕ್ಷ್ಮ ಸಂಕೇತವೆಂದು ಕಾಣುತ್ತದೆ.

ಉತ್ಖನನ

[ಬದಲಾಯಿಸಿ]

ಅಂತಃಪುರದ ಸಹಿತ ಅರಮನೆ, ನಾಟ್ಯಶಾಲೆ, ಮನ್ಮಥ ದೇವಾಲಯ/ಜಿನಾಲಯ ಮುಂತಾದವುಗಳ ಶಾಸನದ ಉಲ್ಲೇಖಗಳನ್ನು ಗಮನಿಸಿ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯ ಬೆಂಗಳೂರು ವಿಭಾಗ ಶಾಸನವಿದ್ದ ನೆಲೆಯಲ್ಲಿ 1994-96ರಲ್ಲಿ ಉತ್ಖನನ ನಡೆಸಿತು. ಸ್ವಾರಸ್ಯವೆಂದರೆ ಶಾಸನದಲ್ಲಿ ಉಲ್ಲೇಖಗೊಂಡಿರುವಂತೆ ವ್ಯವಸ್ಥಿತವಾಗಿ ಇಟ್ಟಿಗೆಯಿಂದ ನಿರ್ಮಿಸಿದ ಪ್ರದಕ್ಷಿಣಾಪಥ, ಸಭಾಮಂಟಪ ಮತ್ತು ಗರ್ಭಗೃಹವುಳ್ಳ ಮನ್ಮಥ ಆಲಯ, ಅರಮನೆ ಮತ್ತು ನಾಟ್ಯಶಾಲೆ ಮುಂತಾದ ಅಪರೂಪದ ವಾಸ್ತುಶಿಲ್ಪ ವಿಶೇಷಗಳು ಹಾಗೂ ಇತಿಹಾಸ ಕಾಲದ ಲೌಕಿಕ ಕಟ್ಟಡಗಳಿದ್ದುದ್ದು.

ಇಲ್ಲಿ ಕೆಲವು ಅಪೂರ್ವ ವಿಗ್ರಹಗಳು ದೊರೆತಿವೆ. ಕೆರೆಯ ಸಮೀಪದಲ್ಲಿ ಕೆಸರಿನಲ್ಲಿ ಹುದುಗಿಹೋಗಿದ್ದ ಸು. 12ನೆಯ ಶತಮಾನದ ಒಂದು ಜಿನವಿಗ್ರಹ ಮತ್ತು ಪ್ರಾಯಶಃ ಕುಳಿತ ಭಂಗಿಯಲ್ಲಿಯ ಯಕ್ಷ-ಯಕ್ಷಿಯರ ಚೆಲುವಾದ ಶಿಲಾಮೂರ್ತಿಗಳಿವೆ. ಜಿನಮೂರ್ತಿ ಸಿದ್ಧಾಸನದಲ್ಲಿದೆ. ಆದರೆ ಅದರ ಶಿರ ಮತ್ತು ಬಾಹುಗಳು ಒಡೆದು ಹೋಗಿವೆ. ಯಕ್ಷ ವಿಗ್ರಹ ಕುಸುರಿನ ಕೆತ್ತನೆಯುಳ್ಳ ಕಿರೀಟ ಹಾಗೂ ಹಾರಗಳನ್ನು ಧರಿಸಿದೆ. ಇದರಂತೆಯೇ ಯಕ್ಷಿ ವಿಗ್ರಹವೂ ಇವಲ್ಲದೆ ಊರೊಳಗೆ ಸು. 2ನೆಯ ಶತಮಾನದ ಕುಬ್ಜ ಯಕ್ಷ ಶಿಲಾಮೂರ್ತಿಯಿದೆ. ಕುಬ್ಜವಿಗ್ರಹ ಸ್ಥೂಲವಾದ ದುಂಡುಶರೀರದ ಪುರುಷನದು. ಉಬ್ಬಿದ ಹೊಟ್ಟೆ, ಕುತ್ತಿಗೆ ಕಾಣಿಸದೆ ದೇಹಕ್ಕೆ ಅಂಟಿದಂತಿರುವ ಶಿರ, ಹೊಟ್ಟೆ ಮೊಣಕಾಲವರೆಗೂ ಜೋತು ಬಿದ್ದಂತಿದ್ದು, ಕಾಲುಗಳು ಪ್ರತ್ಯೇಕವಾಗಿ ಕಾಣಿಸದಿರುವುದು, ಮೇಲಕ್ಕೆತ್ತಿ ಕಟ್ಟಿದ ಗುಂಗುರುಕೂದಲು, ಕಚ್ಚೆ ಹಾಕಿ ಧೋತರ ಉಟ್ಟು ಹಲವು ಎಳೆಗಳ ಹಾರದಿಂದ ಅಲಂಕೃತವಾಗಿದೆ. ಈ ವಿಗ್ರಹಗಳು ಕಲ್ಯಾಣ ಚಾಳುಕ್ಯ ಕಾಲದ ಶಿಲ್ಪಗಳನ್ನು ಹೋಲುತ್ತವೆ. ಇದೇ ಗ್ರಾಮದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಿದ ರತಿಮನ್ಮಥರ ವಿಗ್ರಹ ವೀರಭದ್ರ ದೇವಾಲಯದಲ್ಲಿ ದೊರೆತಿದ್ದು, ಮನ್ಮಥನ ಕೈಯಲ್ಲಿ ಕಬ್ಬಿನ ಜಲ್ಲೆ, ರತಿಯ ಕೈಯಲ್ಲಿ ಕಮಲದ ದಂಟು ಕಾಣಿಸುತ್ತದೆ. ಇದು ಸು. 11-12ನೆಯ ಶತಮಾನದ ವಿಗ್ರಹ.