ವಿಷಯಕ್ಕೆ ಹೋಗು

ಗುಪ್ತ ಸಂಘ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲಿಸ್ ಡಾನ್‍ಲೆವಿಯವರ "ಯೇಲ್ ಕಾಲೇಜಿನಲ್ಲಿನ ಗುಪ್ತ ಸಂಘ ಕಟ್ಟಡಗಳು" ಸು. ೧೮೮೦. ಸೈ ಅಪ್ಸಿಲಾನ್, ಸ್ಕಲ್ ಆಂಡ್ ಬೋನ್ಸ್, ಡೆಲ್ಟಾ ಕ್ಯಾಪಾ ಎಪ್ಸಿಲಾನ್ ಮತ್ತು ಸ್ಕ್ರೋಲ್ ಆಂಡ್ ಕೀ ಗಳನ್ನು ಚಿತ್ರಿಸಲಾಗಿದೆ.

ಹೆಸರೇ ತಿಳಿಸುವಂತೆ, ಗುಪ್ತ ಸಂಘ ಎಂದರೆ ಉದ್ದೇಶಿತ ಕಾರ್ಯಸಾಧನೆಗಾಗಿ ಗುಟ್ಟಾಗಿ ಕೆಲಸ ಮಾಡುವ ಸಂಘ (ಸೀಕ್ರೆಟ್ ಸೊಸೈಟಿ). ಇಂಥ ಸಂಸ್ಥೆಗಳು ಎಲ್ಲಿರುತ್ತವೆ, ಹೇಗೆ ಕೆಲಸ ಮಾಡುತ್ತವೆ, ಇವುಗಳ ಸದಸ್ಯರಾರು, ಎಷ್ಟು ಮಂದಿ ಇದ್ದಾರೆ, ಏನು ಕೆಲಸ ಮಾಡುತ್ತಿದ್ದಾರೆ- ಮುಂತಾದ ಎಲ್ಲ ವಿಷಯಗಳೂ ಆದಷ್ಟು ಗೋಪ್ಯವಾಗಿರುತ್ತವೆ. ಸದಸ್ಯತ್ವದ ಆರಂಭ ದೀಕ್ಷೆ, ಮುಂದಿನ ಕಾರ್ಯಾಚರಣೆ, ಕೈಗೊಳ್ಳಬೇಕಾದ ಶಪಥಗಳು, ಗುರುತಿನ ಸಂಜ್ಞೆಗಳು- ಇವು ಒಂದೊಂದು ಸಂಸ್ಥೆಗೂ ಒಂದೊಂದು ಬಗೆಯಲ್ಲಿರುತ್ತವೆ. ಬಳಗದ ಭಾಷೆ, ಉಡುವ ತೊಡುವ ಪರಿಕರಗಳು ಸಹ ವಿಶಿಷ್ಟವಾಗಿದ್ದು ಗೋಪ್ಯ ಪಾಲನೆಗೆ ನೆರವಾಗುತ್ತವೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕಾಲೇಜು ಸೌಭ್ರಾತೃ ಸಂಘಗಳು, ಕುಕ್ಲುಕ್ಸ್ ಕ್ಲ್ಯಾನ್, ಅಂತರರಾಷ್ಟ್ರೀಯ ಸೌಭ್ರಾತೃ ಸಂಘಗಳು (ಫ್ರೀ ಮೇಸನ್ರಿ)- ಇವು ಪ್ರಸಿದ್ಧವಾದ ಕೆಲವು ಗುಪ್ತಸಂಘಗಳು. ಇತಿಹಾಸಕಾರ ಜೇಸನ್ ರಿಡ್ಲಿ ಫ್ರೀಮೇಸನ್ರಿಯನ್ನು "ವಿಶ್ವದ ಅತ್ಯಂತ ಪ್ರಬಲವಾದ ಗುಪ್ತ ಸಂಘ" ಎಂದು ಹೇಳುತ್ತಾರೆ.[] ಓಪಸ್ ಡೇಯ್ (ಲ್ಯಾಟಿನ್‍ನಲ್ಲಿ ಇದರರ್ಥ "ದೇವರ ಕೆಲಸ") ಸಂಘಟನೆಯನ್ನು ಕ್ಯಾಥೊಲಿಕ್ ಚರ್ಚ್‌ನ ಒಂದು ಗುಪ್ತಸಂಘವೆಂದು ವಿವರಿಸಲಾಗುತ್ತದೆ.[][][]

ಕೆಲವು ಗುಪ್ತ ಸಂಘಗಳು

[ಬದಲಾಯಿಸಿ]

ತಮ್ಮದೇ ಆದ ನಿಯಮಾವಳಿಗಳನ್ನು ಹೊಂದಿದ್ದ ಪ್ರಾಚೀನ ಧಾರ್ಮಿಕ ಗುಪ್ತ ಸಂಘಗಳು ಪೂರ್ವ ಹಾಗೂ ಪಶ್ಚಿಮ ರಾಷ್ಟ್ರಗಳಲ್ಲಿ ಬಹುಸಂಖ್ಯೆಯಲ್ಲಿದ್ದವೆನ್ನಲು ಚಾರಿತ್ರಿಕ ದಾಖಲೆಗಳಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳು ಅನೂಚಾನವಾಗಿ ನಡೆದು ಬಂದ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬರಲು ಕೆಲಸ ಮಾಡಿದರೆ, ಮತ್ತೆ ಕೆಲವು ಸಂಸ್ಥೆಗಳು ಇತರ ಪ್ರಬಲ ಸಂಘಗಳ ತುಳಿತ, ಬಹಿಷ್ಕಾರಗಳನ್ನು ತಪ್ಪಿಸಿಕೊಳ್ಳಲು ದುಡಿಯುತ್ತಿದ್ದುವು. ಆ ಕ್ರೈಸ್ತ ನಂಬಿಕೆಗಳನ್ನು ಹೊಂದಿದ್ದ ರೋಮ್ ಚಕ್ರಾಧಿಪತ್ಯದಲ್ಲಿ ಕ್ರೈಸ್ತರೂ, ಮಧ್ಯಯುಗದ ಯುರೋಪಿನಲ್ಲಿ ಕ್ರೈಸ್ತ ಮತ ವಿರೋಧಿಗಳು ಗುಪ್ತವಾಗಿಯೇ ತಮ್ಮ ಕೆಲಸಗಳನ್ನು ನಿರ್ವಹಿಸಬೇಕಾಗಿತ್ತು. ಆರ್ಥಿಕ ವ್ಯವಹಾರಗಳಲ್ಲಿ ತೊಡಗಿದ ಮಧ್ಯಯುಗೀನ ಶ್ರೇಣಿಗಳೂ (ಗಿಲ್ಡ್ಸ್) ಅಷ್ಟೆ. ಚರಿತ್ರೆಗಳನ್ನು ಅವಲೋಕಿಸಿದರೆ ಕಾಲಕಾಲಕ್ಕೆ ಅನೇಕ ಕ್ರಾಂತಿಕಾರಿ ಗುಂಪುಗಳು ಗುಪ್ತವಾಗಿದ್ದುಕೊಂಡು ತಮ್ಮ ಗುರಿಸಾಧನೆಗಾಗಿ ಕೆಲಸ ಮಾಡಿರುವುದನ್ನು ಗುರುತಿಸಬಹುದು. 19ನೆಯ ಶತಮಾನದಲ್ಲಿ ಯೂರೋಪಿನಲ್ಲಿ ಉದಾರವಾದಿಗಳನ್ನೂ, ರಾಷ್ಟ್ರೀಯವಾದಿಗಳನ್ನೂ, ಪ್ರಜಾಪ್ರಭುತ್ವವಾದಿಗಳನ್ನೂ ದಮನ ಮಾಡಿದಾಗ ಅನೇಕ ಗುಪ್ತಸಂಘಗಳು ಹುಟ್ಟಿಕೊಂಡವು. ಇಟಲಿ, ಫ್ರಾನ್ಸ್, ಮತ್ತು ಸ್ಪೇನುಗಳಲ್ಲಿ ತಲೆಯೆತ್ತಿದ ಕಾರ್ಬೋನಾರಿ, ನೇಪಲ್ಸ್‌ನಲ್ಲಿ ಹುಟ್ಟಿ ರಾಜಕೀಯ ಉತ್ಕ್ರಾಂತಿಗಳನ್ನೆಸಗಿದ ಕಮೋರ[]-ಇವನ್ನು ಇಲ್ಲಿ ನೆನೆಯಬಹುದು. ಫೆನಿಯನ್, ಐರಿಷ್ ರಿಪಬ್ಲಿಕನ್ ಬ್ರದರ್‌ಹುಡ್ ಮತ್ತು ಡಿಸೆಂಬರಿಸ್‌ಟ್ಸ್-ಇವು ಇತರ ಉದಾಹರಣೆಗಳು. ಸಿಸಿಲಿಯಲ್ಲಿ ಮೊದಲಿಗೆ ರೂಪುಗೊಂಡ ಮಾಫಿಯಾ ಎಂಬ ಗುಪ್ತಸಂಸ್ಥೆಯೊಂದು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಇತರ ಕಡೆಗಳಲ್ಲಿ ದರೋಡೆ, ಮಾದಕ ಪದಾರ್ಥ ಸಾಗಣೆ ಮೊದಲಾದ ಹೀನಕೃತ್ಯಗಳಲ್ಲಿ ತೊಡಗಿತ್ತೆಂದು ಹೇಳಲಾಗಿದೆ. ಐರ‍್ಲೆಂಡಿನಲ್ಲಿ ಮಾಲಿ ಮಾಗೈರರ ಸಂಘ ರಾಜಕೀಯ ಕ್ರಾಂತಿಗಾಗಿ ಬುಡಮೇಲು ಕಾರ್ಯಾಚರಣೆಗಳನ್ನು ಎಸಗುತ್ತಿತ್ತೆಂದು ತಿಳಿದು ಬರುತ್ತದೆ. ಇದರ ಸದಸ್ಯರು ಸ್ತ್ರೀವೇಷಧಾರಿಗಳಾಗಿದ್ದುದು ಈ ಸಂಘದ ಒಂದು ವೈಶಿಷ್ಟ್ಯ.

ದೇಶದ ಹಿತವನ್ನೇ ಗಮನದಲ್ಲಿಟ್ಟುಕೊಂಡು ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘಗಳು ಅಮೆರಿಕದಲ್ಲಿವೆ. ಭಾರತದಲ್ಲಿ ಸ್ವಾತಂತ್ರ್ಯ ಗಳಿಕೆಗಾಗಿ ಹೆಣಗಿದ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಅರೆಗುಪ್ತ ಸಂಘಕ್ಕೆ ಒಂದು ನಿದರ್ಶನ. ಈಚೆಗೆ ಪ್ರಬಲಿಸಿರುವ ನಕ್ಸಲೀಯ ಚಟುವಟಿಕೆಗಳು, ನಾಗಾಲ್ಯಾಂಡಿನ ಗುಪ್ತ ನಾಗಾ ಕಾರ್ಯಕ್ರಮಗಳು, ಬ್ಲಾಕ್ ಡಿಸೆಂಬರ್ ಕಾರ್ಯಕಲಾಪಗಳು, ಗುಪ್ತಸಂಘಗಳಿಂದಲೇ ನಡೆಯುತ್ತಿವೆ. ಅಮೆರಿಕಾದಲ್ಲಿ ಕುಕ್ಲುಕ್ಸ್ ಕ್ಲ್ಯಾನ್ ಸಂಘ ಮೊದಲಿಗೆ ಪಕ್ಕಾ ಗುಪ್ತ ಸಂಘವಾಗಿತ್ತು.[] ಎರಡನೆಯ ಮಹಾಯುದ್ಧವಾದ ಮೇಲೆ ಅದರ ಕೆಲವು ಉದ್ದೇಶಗಳು ಪ್ರಕಟವಾದವು.[]

ಹೆಚ್ಚು ಹೆಚ್ಚು ಸಂಕೀರ್ಣವಾದ ಉದ್ದೇಶಗಳನ್ನುಳ್ಳ ಗುಪ್ತ ಸಂಘಗಳು ತಮ್ಮ ಗುರಿ ಸಾಧನೆಗಾಗಿ ಕಟ್ಟುನಿಟ್ಟಾದ ನಿಬಂಧನೆಗಳನ್ನು ರೂಪಿಸಿಕೊಂಡಿವೆ. ಸಂಘದ ಸದಸ್ಯರಿಗೆ ಕ್ರಮಕ್ರಮವಾಗಿ, ಹಂತಹಂತವಾಗಿ ಬಿಗಿಯಾಗುತ್ತ ಹೋಗುತ್ತದೆ. ಎಲ್ಲ ಸದಸ್ಯರೂ ತಮಗೆ ನಿರ್ವಹಿಸಿದಷ್ಟು ಕೆಲಸಗಳನ್ನು ಮಾಡಿಬಿಡುತ್ತಾರೆ. ಆದರೆ ಸಂಘದ ಅಂತಿಮ ಗುರಿ ಮಾತ್ರ ಮೇಲಿನ ಕೆಲವರಿಗಷ್ಟೆ ತಿಳಿದಿರುತ್ತದೆ. ಎಷ್ಟೋ ಸಂಘಗಳಲ್ಲಿನ ನಾಯಕರು ಯಾರು ಎಂಬುದು ಸದಸ್ಯರಿಗೆ ತಿಳಿದಿರುವುದಿಲ್ಲ. ಇಂಥ ಕಡೆಗಳಲ್ಲೆಲ್ಲ ನಿಯಮಾವಳಿಗಳನ್ನು ಬರೆದಿಡುವ ಪದ್ಧತಿ ಇರುವುದಿಲ್ಲ. ಕಾಲಕಾಲಕ್ಕೆ ಬಾಯಿಂದ ಬಾಯಿಗೆ ಆಜ್ಞೆಗಳು ರವಾನೆಯಾಗುತ್ತವೆ. ವರದಿಗಳೂ ಅಷ್ಟೆ. ಕಿವಿಯಿಂದ ಕಿವಿಗೆ ಒಯ್ಯಲ್ಪಡುತ್ತವೆ. ದೀಕ್ಷೆ ತೆಗೆದುಕೊಳ್ಳುವಾಗ ಸದಸ್ಯರು ಇಟ್ಟ ಆಣೆಗಳನ್ನು ಯಾವ ಕಾರಣಕ್ಕೆ ಆಗಲಿ ಮೀರುವಂತಿಲ್ಲ. ಹಾಗೆ ಮಾಡಿದ ಸದಸ್ಯರನ್ನು ಸಂಘದಿಂದ ಉಚ್ಚಾಟನೆಗೊಳಿಸುವುದಲ್ಲದೆ ಕಠಿಣ ಶಿಕ್ಷೆಗೂ ಗುರಿ ಮಾಡುವುದುಂಟು.

ನಿರಂಕುಶಾಧಿಕಾರ ಪ್ರಬಲವಾಗಿರುವ- ಉದಾಹರಣೆಗೆ ನಾಟ್ಜಿ ಮತ್ತು ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ- ಎಲ್ಲ ಅಭಿಪ್ರಾಯಗಳಿಗೂ ಮನ್ನಣೆ ಇರುವುದಿಲ್ಲವಾಗಿ ಅಂಥ ಕಡೆ ಗುಪ್ತ ಸಂಘಗಳು ಹುಟ್ಟಿ ಬೆಳೆಯುವ ಸಾಧ್ಯತೆ ಹೆಚ್ಚು.

ಹುಂಗ್ ಸಂಘ

[ಬದಲಾಯಿಸಿ]

ಕ್ರಿಸ್ತಶಕ ಸು. ನಾಲ್ಕನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿರಬಹುದಾದ ಇಲ್ಲವೆ ಆ ಕಾಲದಲ್ಲಿ ಪ್ರಬಲಿಸಿತು ಎನ್ನಲಾದ ಹುಂಗ್ ಸಂಘದ (ಮುಕ್ಕೂಟ ಸಂಘ) ವಿವರಗಳು ಸ್ವಾರಸ್ಯವಾಗಿವೆ. ಅಮಿತಾಭ ಬುದ್ಧನ ಪರಂಪರೆಯನ್ನು ಬೆಳೆಸಲು ಈ ಸಂಘವನ್ನು ಚೀನದಲ್ಲಿ ಪ್ರಾರಂಭಿಸಿದವ ಇಯಾನ್ ಇಲ್ಲವೆ ಹುವೈ-ಇನ್ ಎಂಬಾತ. ಅಲ್ಲಿಂದ ಈ ಸಂಘ ಸುಮಾರು 1500 ವರ್ಷಗಳು ಸಜೀವವಾಗಿದ್ದು ಬೇಕಾದಷ್ಟು ಕೆಲಸ ಮಾಡಿತು ಎಂದು ಹೇಳಲಾಗಿದೆ. ಜೀವ ಅಧೋಲೋಕದಿಂದ ಸ್ವರ್ಗಕ್ಕೆ ಪ್ರಯಾಣ ಮಾಡಿ ದೇವನಗರವನ್ನು ಪ್ರವೇಶಿಸುವುದನ್ನು ಈ ಸಂಘದ ಆಚರಣೆಗಳು ಸಂಕೇತಿಸುತ್ತವೆ ಎಂದೂ, ಅನುಭಾವಿಯಾದ ಮನುಷ್ಯ ಪರಮಪುರುಷನೊಂದಿಗೆ ಐಕ್ಯವಾಗುವುದನ್ನು ಸೂಚಿಸುತ್ತವೆ ಎಂದೂ ಹೇಳಲಾಗಿದೆ.

ಈ ಸಂಘದ ವಿಧಿಗಳಲ್ಲಿ ಮೊದಲನೆಯದು ಆಶ್ರಯ ಪ್ರವೇಶಕ್ಕೆ ಸಂಬಂಧಿಸಿದ್ದು. ಆ ಮಧ್ಯಾಹ್ನ ಸದಸ್ಯರಿಗೆ ಸಂಘದ ಚರಿತ್ರೆಯನ್ನು ತಿಳಿಸಲಾಗುತ್ತಿತ್ತು. ತನಗೆ ಸಹಾಯ ಮಾಡಿದ ಸಂನ್ಯಾಸಿಗಳನ್ನು ಕೃತಘ್ನವಾದ ದೊರೆ ನಿಷ್ಕರುಣೆಯಿಂದ ಕೊಲ್ಲಿಸುವುದು- ಆಗ ಅಳಿದುಳಿದ ಐವರು ಸಂನ್ಯಾಸಿಗಳು ಸಂಘವೊಂದನ್ನು ಸ್ಥಾಪಿಸುವುದು-ಈ ಮುಂತಾದ ಅಂಶಗಳನ್ನು ಸದಸ್ಯರು ಆಗ ತಿಳಿಯುತ್ತಿದ್ದರು. ಅನಂತರ ಸದಸ್ಯರಿಗೆ ಪೂರ್ಣ ಬಿಳಿಯ ಉಡುಪನ್ನು ಕೊಡಲಾಗುತ್ತಿತ್ತು. ಅದು ದುಃಖ ಮತ್ತು ಮರಣ ಸೂಚಕ. ಅನಂತರ ಅವರ ಬಲತೋಳು, ಎದೆ, ಮೊಣಕಾಲುಗಳ ಮೇಲಿನ ಬಟ್ಟೆಗಳನ್ನು ಓಸರಿಸಿ ಬೆತ್ತಲೆ ಮಾಡಲಾಗುತ್ತಿತ್ತು. ಆಮೇಲೆ ಅವರಿಗೆ ವಿಶಿಷ್ಟವಾದ ಹುಲ್ಲಿನ ಪಾದರಕ್ಷೆಗಳನ್ನು ಕೊಡಲಾಗುತ್ತಿತ್ತು. ಇದಾದ ಒಡನೆಯೆ ಸದಸ್ಯರಿಗೆ ದೀಕ್ಷೆ ನೀಡಲಾಗುತ್ತಿತ್ತು. ಅನಂತರ ಸದಸ್ಯರು ಮೂರು ಬಾಗಿಲುಗಳನ್ನು ದಾಟಿ ಒಳಕೋಣೆಗೆ ಹೋಗಿ ಅಲ್ಲಿ ಸಿದ್ಧವಾಗಿದ್ದ ಮದ್ಯದ ಬಟ್ಟಲಿಗೆ ತಮ್ಮ ರಕ್ತವನ್ನು ಸೇರಿಸಿ ಆ ಮಿಶ್ರಣವನ್ನು ತೀರ್ಥದಂತೆ ಎಲ್ಲರೂ ಕುಡಿಯಲೇ ಬೇಕಾಗಿತ್ತು. ಪುರುಷರಂತೆ ಸ್ತ್ರೀಯರಿಗೂ ಈ ಸಂಘದಲ್ಲಿ ಸದಸ್ಯತ್ವ ಇತ್ತು. ಕೊನೆಯದಾಗಿ ಧಾರ್ಮಿಕ ಧ್ವನಿಯುಳ್ಳ ಪ್ರಶ್ನೋತ್ತರ ಮಾಲಿಕೆಯೊಂದನ್ನು ಸದಸ್ಯರಿಗೆ ಒಪ್ಪಿಸಲಾಗುತ್ತಿತ್ತು.

ಉದಾಹರಣೆಗಾಗಿ ಈ ಸಂಘದ ವಿವರಗಳನ್ನಿಲ್ಲಿ ಕೊಡಲಾಗಿದೆ. ಅನೇಕ ಇತರ ಸಂಘಗಳಲ್ಲೂ ಇಂಥವೇ ಆದ ನಿಯಮಾವಳಿಗಳಿರುವುದನ್ನು ಗಮನಿಸಲಾಗಿದೆ. ಮುಖ್ಯವಾಗಿ ಇಲ್ಲಿನ ನಿಯಮಗಳಲ್ಲಿನ ಸಾಮ್ಯ ಆಶ್ಚರ್ಯಗೊಳಿಸುವಂಥದು.

ಮಾನವಶಾಸ್ತ್ರಜ್ಞರು ಹಾಗೂ ಸಮಾಜಶಾಸ್ತ್ರಜ್ಞರು ಆಸ್ಟ್ರೇಲಿಯ ಮತ್ತು ಆಫ್ರಿಕಗಳ ಅನೇಕ ಆದಿವಾಸಿ ಬುಡಕಟ್ಟುಗಳಲ್ಲಿ, ಅಮೆರಿಕಾದ ರೆಡ್ ಇಂಡಿಯನರಲ್ಲಿ ಇದ್ದ ಗುಪ್ತಸಂಘಗಳ ವಿಷಯವಾಗಿ ಹೆಚ್ಚಿನ ಅಧ್ಯಯನ ಮಾಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Jasper Ridley (2011). The Freemasons: A History of the World's Most Powerful Secret Society. Arcade. ISBN 978-1-61145-010-1. see also Jeffers, H. Paul. Freemasons: A History and Exploration of the World's Oldest Secret Society. (Citadel Press, 2005).
  2. Walsh, Michael. OPUS DEI: An Investigation into the Secret Society Struggling for Power within the Roman Catholic Church.
  3. Secret Society: Opus Dei - Catholicism's Secret Sect.
  4. Their Kingdom Come: Inside the Secret World of Opus Dei.
  5. Behan, The Camorra, pp. 9–10
  6. Du Bois 1935, pp. 679–680.
  7. von Busack, Richard. "Superman Versus the KKK". MetroActive. Archived from the original on May 11, 2015. Retrieved February 27, 2016.


ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: