ವಿಷಯಕ್ಕೆ ಹೋಗು

ಗೂಢ ಸೇವಾ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೂಢ ಸೇವಾ ವ್ಯವಸ್ಥೆ ಎನ್ನುವುದು ಖೋಟಾ ನೋಟು ಅಥವಾ ನಾಣ್ಯ ತಯಾರಿಕೆಗಳ ಪತ್ತೆ, ಪ್ರತಿರೋಧ, ಸರ್ಕಾರದ ಉನ್ನತಾಧಿಕಾರಿಗಳ ಸುರಕ್ಷೆ, ಕಾನೂನು ಉಲ್ಲಂಘನೆ ಮತ್ತು ಭ್ರಷ್ಟಾಚಾರ ಮುಂತಾದವುಗಳ ತನಿಖೆ–ಈ ಕಾರ್ಯಗಳಿಗಾಗಿ ರಚಿತವಾದ ವಿಶೇಷದಳ, ಸೇವಾವ್ಯವಸ್ಥೆ (ಸೀಕ್ರೆಟ್ ಸರ್ವಿಸ್).[][][]

ಕರ್ತವ್ಯಗಳು ಮತ್ತು ಅಗತ್ಯತೆ

[ಬದಲಾಯಿಸಿ]

ಸಾರ್ವಜನಿಕರ ವಿತ್ತ ಹಾಗೂ ಜೀವಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಕರ್ತವ್ಯ. ಇದರ ಅಂಗವಾಗಿ ಕಾನೂನು ಮತ್ತು ಶಾಂತಿಪಾಲನೆಯ ಕರ್ತವ್ಯವನ್ನು ನಿರ್ವಹಿಸಲು ಸರ್ಕಾರ ವ್ಯವಸ್ಥೆ ಹುಟ್ಟಿದಾಗಿನಿಂದಲೂ ಒಂದಲ್ಲ ಒಂದು ರೀತಿಯ ಪಡೆ ನಿರ್ಮಿತವಾಗಿದೆ. ಪ್ರತಿಯೊಂದು ದೇಶದಲ್ಲೂ ಆಂತರಿಕ ರಕ್ಷಣೆಗಾಗಿ ಮತ್ತು ಕಾನೂನು ಭಂಗವಾಗದಂತೆ ನೋಡಿಕೊಳ್ಳಲು, ಕಾನೂನು ಭಂಗ ಮಾಡಿದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ನಿರ್ವಹಿಸಲು ಪೊಲೀಸ್ ಪಡೆಗಳು ರಚಿತವಾಗಿವೆ. ಇವು ಕೆಲವು ವೇಳೆಗಳಲ್ಲಿ ಯಾರಿಗೂ ತಿಳಿಯದಂತೆ ತಮ್ಮ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಅಪರಾಧ ಶೋಧನೆ ಮಾಡಲು ಮತ್ತು ಅಪರಾಧಿ ವ್ಯಕ್ತಿಗಳ ಮೇಲೆ ಗಮನ ಇಡಲು ಇವು ಗುಪ್ತರೀತಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ. ಒಂದು ದೇಶದ ಇಡೀ ಪೊಲೀಸ್ ಪಡೆ ಗುಪ್ತವಾಗಿರಲು ಸಾಧ್ಯವಿಲ್ಲವಾದ್ದರಿಂದ ಇಂಥ ಕಾರ್ಯಾಚರಣೆಗಾಗಿಯೇ ವಿಶೇಷ ಪಡೆಗಳನ್ನು ನಿರ್ಮಿಸಲಾಗುತ್ತದೆ. ಇವು ಗೂಢ ಸೇನಾದಳ, ಗುಪ್ತ ಪೊಲೀಸ್ ಪಡೆ ಅಥವಾ ಗೂಢ ಸೇವಾವ್ಯವಸ್ಥೆಗಳು.

ಈ ವ್ಯವಸ್ಥೆಗಳು ಎಲ್ಲ ಸಮಾಜಗಳಲ್ಲೂ, ರಾಜ್ಯಗಳಲ್ಲೂ, ಎಲ್ಲ ಬಗೆಯ ಸರ್ಕಾರಗಳಲ್ಲೂ ಅವಶ್ಯವೆನಿಸುತ್ತವೆ. ಪ್ರಜಾಪ್ರಭುತ್ವದಲ್ಲಿ ಇಂಥ ಗೂಢ ಕಾರ್ಯಾಚರಣೆ ನ್ಯಾಯಸಮ್ಮತವೇ? ಎಂಬ ಪ್ರಶ್ನೆ ಏಳುತ್ತದೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಗುಪ್ತ ಕಾರ್ಯಾಚರಣೆಗೆ ಎಡೆ ಇರುವುದಿಲ್ಲ. ಅಪರಾಧಿಗೂ ಬಹಿರಂಗ ವಿಚಾರಣೆಯ ಕಾನೂನಿನನ್ವಯ ವಿಚಾರಣೆಯ ಮೂಲ ಹಕ್ಕು ಇದೆ. ಹೀಗಿರುವಲ್ಲಿ ಗುಪ್ತ ತನಿಖೆಯೇ ಮುಂತಾದವು ಪ್ರಜಾಪ್ರಭುತ್ವದಲ್ಲಿ ನಾಗರಿಕನ ಹಕ್ಕಿನ ವಿಪರ್ಯಾಸವಾಗುವುದೆಂದು ಹಲವರು ವಾದಿಸುತ್ತಾರೆ. ಆದರೆ ಸರ್ವಾಧಿಕಾರಿಗಳು ಮಾತ್ರವೇ ಅಲ್ಲದೆ ಪ್ರಜಾಪ್ರಭುತ್ವ ಸರ್ಕಾರಗಳೂ ಗೂಢದಳಗಳ, ಸೇವಾವ್ಯವಸ್ಥೆಯ ಸಹಾಯ ಪಡೆಯಲೇಬೇಕಾಗುತ್ತದೆ. ಆದ್ದರಿಂದಲೇ ಇಂದು ಅಮೆರಿಕ, ಇಂಗ್ಲೆಂಡ್, ಭಾರತ ಮುಂತಾದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೂ ಕಾಣಬಹುದು. ಅವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗಿದೆಯಾದರೂ ಸಾಮಾನ್ಯವಾಗಿ ಅವುಗಳ ಕರ್ತವ್ಯಗಳು ಎಲ್ಲ ಕಡೆಗೂ ಒಂದೇ ಆಗಿವೆ.

ಗೂಢ ಸೇವಾವ್ಯವಸ್ಥೆಗಳು ವಿಶೇಷ ಪಡೆಗಳೆನಿಸಿಕೊಳ್ಳುವುದರಿಂದ ಅವಕ್ಕೆ ವಿಶೇಷ ಅಧಿಕಾರಗಳನ್ನು ಕೊಡುವುದು ಸಹಜ. ದೇಶದ ಸಾದಾ ಪೊಲೀಸ್ ಪಡೆಗಿಂತ ಗೂಢ ದಳಗಳಿಗೆ ವಿಶೇಷ ಅಧಿಕಾರಗಳಿವೆ. ತನಿಖೆ ಮಾಡುವುದು, ಅಪರಾಧಿಗಳನ್ನು ಪತ್ತೆ ಹಚ್ಚುವುದು, ಅಪರಾಧಿ ಎಂಬ ಅನುಮಾನದ ಮೇಲೆ ಯಾವುದಾದರೂ ವ್ಯಕ್ತಿಯ ಬಗ್ಗೆ ತನಿಖೆ ಮಾಡಿ ಅವನ ಅಪರಾಧವನ್ನು ನಿರ್ಣಯಿಸುವುದು ಮುಂತಾದವು ಅವುಗಳ ಕಾರ್ಯಗಳು. ಈ ಕಾರ್ಯನಿರ್ವಹಣೆಯಲ್ಲಿ ಅವು ಸರ್ಕಾರದ ಕಾರ್ಯಾಂಗಕ್ಕೆ ಜವಾಬ್ದಾರವಾಗಿರುತ್ತವೆ. ಇತ್ತೀಚೆಗೆ ಗೂಢ ದಳದವರ ಸೇವೆಯನ್ನು ದೇಶದ ಗಣ್ಯವ್ಯಕ್ತಿಗಳು, ಅತ್ಯುಚ್ಛ ಸ್ಥಾನದಲ್ಲಿರುವ ವ್ಯಕ್ತಿಗಳು ಹಾಗೂ ಅವರ ಪರಿವಾರದವರ ರಕ್ಷಣೆಯಲ್ಲೂ ಬಳಸಲಾಗುತ್ತಿದೆ. ರಾಷ್ಟ್ರಾಧ್ಯಕ್ಷರ, ಪ್ರಧಾನ ಮಂತ್ರಿಯ ಮತ್ತು ಅನ್ಯ ದೇಶಗಳ ಗಣ್ಯವ್ಯಕ್ತಿಗಳ ರಕ್ಷಣೆಯ ಹೊಣೆ ಗೂಢ ದಳದ್ದಾಗಿದೆ. ಗೂಢದಳದವರು ಇಂಥ ಗಣ್ಯ ವ್ಯಕ್ತಿಗಳ ಪರಿವಾರದವರಂತೆಯೇ ಸಾದಾ ಉಡುಪಿನಲ್ಲಿದ್ದು ಯಾರಿಗೂ ತಿಳಿಯದಂತೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿರುತ್ತಾರೆ. ಇವರ ಹೊಣೆ ಗುರುತರವಾದ್ದು. ಗೂಢದಳದವರನ್ನು ವಿಶೇಷ ರೀತಿಯ ಅಪರಾಧಗಳ ಶೋಧನೆಯಲ್ಲೂ ಉಪಯೋಗಿಸಲಾಗುವುದು. ಬ್ಯಾಂಕ್ ದರೋಡೆಗಳು, ಗಣ್ಯವ್ಯಕ್ತಿಗಳ ಕೊಲೆ, ಖೋಟಾನೋಟು ಹಾಗೂ ನಾಣ್ಯಗಳ ತಯಾರಿಕೆ, ವಂಚನೆ ಮುಂತಾದ ಪ್ರಕರಣಗಳಲ್ಲಿ ಪತ್ತೆಯ ಕಾರ್ಯವನ್ನು ಈ ಸೇವೆ ನಿರ್ವಹಿಸುತ್ತದೆ. ಇಂಗ್ಲೆಂಡಿನಲ್ಲಿ ಸ್ಕಾಟ್ಲೆಂಡ್ ಯಾರ್ಡ್,[] ಅಮೆರಿಕದಲ್ಲಿ ರಹಸ್ಯ ಪಡೆ, ಭಾರತದಲ್ಲಿ ಕೇಂದ್ರ ತನಿಖಾ ಮಂಡಲಿ[][] ಮುಂತಾದವು ಇಂಥ ಕಾರ್ಯ ನಿರ್ವಹಿಸುತ್ತವೆ. ಗೂಢದಳದ ಕಾರ್ಯವ್ಯಾಪ್ತಿ ಕೇವಲ ಪತ್ತೆ ಹಚ್ಚುವುದೇ ಆಗಿರದೆ ಕೊಲೆ, ದರೋಡೆ ಮುಂತಾದ ಅಪರಾಧಗಳು ಜರುಗುವುದನ್ನು ತಪ್ಪಿಸುವುದೂ ಆಗಿದೆ. ಈ ದಿಶೆಯಲ್ಲಿ ಅವರು ಸಂಶಯಗ್ರಸ್ತ ವ್ಯಕ್ತಿಗಳ ಚಲನವಲನಗಳ ಮೇಲೆ ಯಾವಾಗಲೂ ಕಣ್ಣಿರಿಸಿರುತ್ತಾರೆ. ಗಣ್ಯವ್ಯಕ್ತಿಗಳು ಪ್ರವಾಸದಲ್ಲಿ ತೊಡಗಿದಾಗ, ಅವರು ಸಾರ್ವಜನಿಕ ಸಭೆಗಳೇ ಮುಂತಾದವುಗಳಲ್ಲಿ ಭಾಗವಹಿಸುವಾಗ, ಅವರಿಗಿಂತ ಮುನ್ನವೇ ಗೂಢಸೇನಾ ದಳದವರು ಯಾರಿಗೂ ತಿಳಿಯದಂತೆ ಕಾರ್ಯಾಚರಣೆಯಲ್ಲಿ ತೊಡಗಿರುತ್ತಾರೆ. ಉದಾಹರಣೆಗೆ ಇಂದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಗೂಢಸೇನಾ ಪಡೆಗೆ ಮೂರು ಪ್ರಮುಖ ಕರ್ತವ್ಯಗಳನ್ನು ವಹಿಸಿಕೊಡಲಾಗಿದೆ:

  • ಮೊದಲನೆಯದಾಗಿ ಅಮೆರಿಕದ ಅಧ್ಯಕ್ಷರ, ಅವರ ಕುಟುಂಬ ವರ್ಗದವರ, ನಿಯೋಜಿತ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ರಕ್ಷಣೆ.
  • ಎರಡನೆಯದಾಗಿ, ಅಮೆರಿಕದ ನೋಟುಗಳು, ನಾಣ್ಯಗಳು ಮತ್ತು ಇತರ ಮುಖ್ಯ ದಸ್ತಾವೇಜುಗಳನ್ನು ಕುರಿತ ಕಾನೂನು ಉಲ್ಲಂಘಿಸುವವರನ್ನು ಪತ್ತೆಹಚ್ಚಿ ವ್ಯವಹಾರ ಸಂಸ್ಥೆಗಳ ಕಾನೂನುಗಳ ಉಲ್ಲಂಘನೆ ಮಾಡುವವರನ್ನು ಪತ್ತೆಹಚ್ಚಿ ದಸ್ತಗಿರಿ ಮಾಡುವುದು.

ಈ ಕಾರ್ಯವ್ಯಾಪ್ತಿಯನ್ನು ಪರಿಶೀಲಿಸಿದಾಗ ಗೂಢಸೇನಾ ದಳದ ಪ್ರಾಮುಖ್ಯ ಮತ್ತು ಅವಶ್ಯಕತೆ ಪ್ರಜಾಪ್ರಭುತ್ವದಲ್ಲಿಯೂ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಕೆಲವು ಉದಾಹರಣೆಗಳು

[ಬದಲಾಯಿಸಿ]

ಗೂಢ ಸೇನಾದಳಗಳು ಎಷ್ಟೇ ಅವಶ್ಯವೆನಿಸಿದರೂ ಅವುಗಳ ಅಪಾಯಕಾರಿ ಪರಿಣಾಮಗಳನ್ನು ಕಡೆಗಣಿಸಲು ಬರುವುದಿಲ್ಲ. ಸದುದ್ದೇಶದಿಂದ ಸ್ಥಾಪಿತವಾಗುವ ಇಂಥ ಗುಪ್ತ ಪಡೆಗಳು ತಮ್ಮನ್ನು ನಿರ್ಮಿಸಿದ ಸರ್ಕಾರದ ಅಧಿಕಾರವನ್ನೇ ನಿರ್ಲಕ್ಷಿಸಿ ಪ್ರಭುತ್ವಕ್ಕೆ ಮಾರಕವಾಗಬಹುದು. ಇಂಥ ಪ್ರಸಂಗಗಳು ಅನೇಕ. ಉದಾಹರಣೆಗೆ, ಜರ್ಮನಿಯಲ್ಲಿ ಹೆನ್ರಿಚ್ ಹಿಮ್ಲರನ ನಾಯಕತ್ವದಲ್ಲಿ ರಚಿತವಾಗಿದ್ದ ನಾಟ್ಸಿ ಗುಪ್ತ ಪೊಲೀಸ್ ಪಡೆ (1933-36) ಜರ್ಮನ್ ಸರ್ಕಾರದ ಎಲ್ಲ ಶಾಖೆಗಳಲ್ಲೂ ಕೈವಾಡ ಹೊಂದಿ, ಹಿಟ್ಲರಿನಿಗಿಂತ ಹಿಮ್ಲರನೇ ಜರ್ಮನಿಯ ನಿಜವಾದ ಯಜಮಾನನಾಗಿದ್ದ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರುಗಿದ ಅನೇಕ ಅನ್ಯಾಯ ಅತ್ಯಾಚಾರಗಳಿಗೆ ಈ ಗುಪ್ತ ಪೊಲೀಸ್ ಪಡೆ (ಗೆಸ್ತಪೊ) ಕಾರಣ. ರಷ್ಯದ 1917ರ ಕ್ರಾಂತಿಯ ಅನಂತರ ಆ ದೇಶದಲ್ಲೂ ಗೂಢ ಸೇನಾದಳವನ್ನು (ಚೇಕಾ) ರಚಿಸಲಾಯಿತು. ದೇಶದ ವಿದ್ರೋಹಕಾರಿ ಚಟುವಟಿಕೆಗಳನ್ನು ಪತ್ತೆಹಚ್ಚುವುದು, ಸೆರೆಮನೆಗಳ ಮತ್ತು ಅಪರಾಧಿಗಳ ಶ್ರಮ ಶಿಬಿರಗಳ ಉಸ್ತುವಾರಿ, ರಾಜಕೀಯ ಅಪರಾಧಿಗಳ ಸುಧಾರಣೆ ಮುಂತಾದವು ಈ ಪಡೆಯ ಪ್ರಮುಖ ಕರ್ತವ್ಯಗಳು. ಲಾವ್ರೆಂತಿ ಬೆರಿಯ ಈ ಪಡೆಯ ಮುಖ್ಯಸ್ಥನಾಗಿದ್ದ. 1953ರಲ್ಲಿ ಆತನ ಪತನದ ಅನಂತರ ಈ ಗುಪ್ತ ಪಡೆಯನ್ನು ಪುನಃ ಸುಧಾರಿಸಲಾಯಿತು. ಅದು ನಂತರ ರಾಷ್ಟ್ರದ ಭದ್ರತಾ ಸಮಿತಿಯ ಉಸ್ತುವಾರಿಯಲ್ಲಿತ್ತು. ಕೆ.ಜಿ.ಬಿ. ಎಂದು ಇದನ್ನು ಕರೆಯಲಾಯಿತು. ಇಟಲಿಯಲ್ಲೂ ಮುಸೋಲಿನಿ ಗುಪ್ತ ಪಡೆಯ ಸಹಾಯದಿಂದಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ. ನಿರಂಕುಶಾಡಳಿತವಿರುವ ಕಡೆಯಲ್ಲೆಲ್ಲ ಗೂಢದಳಗಳನ್ನು ಸರ್ವಾಧಿಕಾರಿಯ ಸ್ಥಾನಭದ್ರತೆಗಾಗಿ ಉಪಯೋಗಿಸಲಾಗಿದೆ. ಪ್ರಜಾಪ್ರಭುತ್ವಗಳಲ್ಲೂ ಗುಪ್ತ ಪೊಲೀಸ್ ವ್ಯವಸ್ಥೆ ಅವಶ್ಯವೆನಿಸಿದರೂ ಅದನ್ನು ಸರಿಯಾದ ನಿಯಂತ್ರಣದಲ್ಲಿಡಬೇಕು. ಇಲ್ಲವಾದರೆ ಅವು ಪ್ರಜಾಪ್ರಭುತ್ವಕ್ಕೆ ಗಂಡಾಂತರವನ್ನೊಡ್ಡುವ ಸಂಭವವಿರುತ್ತದೆ. ಈ ವ್ಯವಸ್ಥೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗದಂತೆ ನೋಡಿಕೊಳ್ಳುವುದು ಬಹಳ ಅವಶ್ಯ.

ಉಲ್ಲೇಖಗಳು

[ಬದಲಾಯಿಸಿ]
  1. Resse, Shawn (April 16, 2012). "The U.S. Secret Service: An Examination and Analysis of Its Evolving Missions" (PDF). Congressional Research Service. Archived (PDF) from the original on April 18, 2012. Retrieved April 18, 2012.
  2. "Secret Service Fast Facts". CNN. May 3, 2019. Archived from the original on May 31, 2019. Retrieved June 3, 2019.
  3. "SECRET SERVICE: ALL ABOUT US ELITE FORCE". NDTV.
  4. The Editors of Encyclopaedia Britannica. "Scotland Yard". Encyclopedia Britannica, 17 Feb. 2025, https://www.britannica.com/topic/Scotland-Yard. Accessed 20 February 2025.
  5. "Official website of Central Bureau of Investigation (CBI)". cbi.gov.in.
  6. "CBI & its Roles". Central Bureau of Investigation India. n.d. Archived from the original on 2020-01-17.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: