ವಿಷಯಕ್ಕೆ ಹೋಗು

ಗೂರ್ಖರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೂರ್ಖರು ಎಂಬ ಪದವನ್ನು ನೇಪಾಲದ ರಾಜಮನೆತನಕ್ಕೆ ನಿರ್ದಿಷ್ಟಾರ್ಥದಲ್ಲೂ ನೇಪಾಲದ ನಿವಾಸಿಗಳಿಗೆ ವ್ಯಾಪಕಾರ್ಥದಲ್ಲೂ, ಬಳಸಲಾಗುತ್ತಿದೆ. ಅಲ್ಲಿಯ ರಾಜಮನೆತನದವರು ಭಾರತದ ಚಿತ್ತೂರಿನ ರಜಪುತ ದೊರೆಯ ವಂಶಕ್ಕೆ ಸೇರಿದವರೆಂದು ನಂಬಲಾಗಿದೆ. 1303ರಲ್ಲಿ ಅಲ್ಲಾವುದ್ದೀನ ಈ ಕೋಟೆಯನ್ನು ಭೇದಿಸಿದಾಗ ಈ ದೊರೆ ತಾಯ್ನಾಡನ್ನು ತೊರೆದು ಉತ್ತರಕ್ಕೆ ಓಡಿ ಹೋದ. ಗೂರ್ಖ ಎಂಬ ಸಣ್ಣ ರಾಜ್ಯ ಇದ್ದದ್ದು ಸಪ್ತ ಗಂಡಕಿ ಪ್ರದೇಶದಲ್ಲಿ. ನೇಪಾಲದಲ್ಲಿ ಗೂರ್ಖ ಎಂಬ ಜಿಲ್ಲೆಯಿದೆ. ಅದರ ಮುಖ್ಯಸ್ಥಳದ ಹೆಸರೂ ಗೂರ್ಖ. ಈ ಹೆಸರು ಗೋರಖನಾಥ ಎಂಬ ಗುರುವಿನ ನಾಮಪ್ರತೀಕವಾಗಿ ಬಂದಿದ್ದೆಂದು ತಿಳಿದುಬರುತ್ತದೆ. ಗೂರ್ಖರು ಈ ಗುರುವನ್ನು ತಮ್ಮ ಕುಲದ ಗುರುವೆಂದು ಭಾವಿಸಿದ್ದಾರೆ. ಇಲ್ಲಿ ಪ್ರಸಿದ್ಧ ಭವಾನಿ ದೇವಾಲಯವಿದೆ. ಈ ಪ್ರದೇಶವನ್ನು 1559ರಲ್ಲಿ ಆಕ್ರಮಿಸಿಕೊಂಡು ಆಳಲು ತೊಡಗಿದ ದೊರೆಯ ವಂಶದವರು ತಮ್ಮ ಪ್ರಜೆಗಳನ್ನು ಗೂರ್ಖಾಲಿ ಎಂದು ಕರೆದರು. ಕ್ರಮೆಣ ಇಡೀ ನೇಪಾಲ ಈ ರಾಜರ ಅಧೀನಕ್ಕೆ ಬಂತು.

ಗೂರ್ಖರ ಪ್ರಾಬಲ್ಯ

[ಬದಲಾಯಿಸಿ]
Monument to the Gurkha Soldier in Horse Guards Avenue, outside the Ministry of Defence, City of Westminster, ಲಂಡನ್.

1768ರ ಹೊತ್ತಿಗೆ ಗೂರ್ಖರು ಸುತ್ತಮುತ್ತಲ ಸ್ಥಳೀಯ ಗುಡ್ಡಗಾಡು ಜನರನ್ನು ಸೋಲಿಸಿ ಇಡೀ ನೇಪಾಲವನ್ನೇ ಒಂದು ಆಡಳಿತದ ಅಡಿಗೆ ತಂದರು. 1790ರಲ್ಲಿ ಗೂರ್ಖರು ಟಿಬೆಟ್ಟಿನ ಮೇಲೆ ಆಕ್ರಮಣ ಮಾಡಿದರು. ಆದರೆ 1791ರ ಚೀನೀ ಧಾಳಿಯಿಂದಾಗಿ ಇವರೊಂದಿಗೆ ಒಂದು ಒಪ್ಪಂದಕ್ಕೆ ಬರಬೇಕಾಯಿತು. ಬ್ರಿಟಿಷರು 1814ರಲ್ಲಿ ಗೂರ್ಖರೊಂದಿಗೆ ಯುದ್ಧ ಮಾಡಿದರು. 1816ರ ಒಪ್ಪಂದದಂತೆ ಕಾಠ್ಮಂಡುವಿನಲ್ಲಿ ಬ್ರಿಟಿಷ್ ಪ್ರತಿನಿಧಿ ಇರುವುದಕ್ಕೆ ಗೂರ್ಖರು ಒಪ್ಪಿಕೊಂಡರು. ಆಗಿನಿಂದ ಭಾರತದಲ್ಲಿ ಬ್ರಿಟಿಷರ ಸೈನ್ಯದಲ್ಲಿ ಗೂರ್ಖರು ಸೇರಲು ಪ್ರಾರಂಭವಾಯಿತು. ಇವರು ಒಳ್ಳೆಯ ಯೋಧರೆಂದು ಪ್ರಖ್ಯಾತರಾಗಿದ್ದಾರೆ. ಭಾರತದಲ್ಲಿ 1857ರಲ್ಲಿ ನಡೆದ ಬಂಡಾಯವನ್ನು ಅಡಗಿಸಲು ಇವರು ನೆರವಾದರು. 1900ರಲ್ಲಿ ನಡೆದ ಚೀನೀ ದಂಡಯಾತ್ರೆಯಲ್ಲಿ ಪಾಲ್ಗೊಂಡರು. ಒಂದನೆಯ ಮಹಾಯುದ್ಧದಲ್ಲಿ 10,000 ಜನ ಗೂರ್ಖ ಸೈನಿಕರು ಭಾರತದ ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಎರಡನೆಯ ಮಹಾಯುದ್ಧದಲ್ಲಿ ವಿಶ್ವದ ಅನೇಕ ಭಾಗಗಳಲ್ಲಿ ಇವರು ಹೋರಾಡಿದರು. 1947ರ ಅನಂತರ ಬ್ರಿಟಿಷ್ ಭಾರತದ ಸೈನ್ಯದಲ್ಲಿದ್ದ ಗೂರ್ಖರ ಹತ್ತು ತುಕಡಿಗಳಲ್ಲಿ ನಾಲ್ಕು ತುಕಡಿಗಳು ಬ್ರಿಟಿಷ್ ಸೈನ್ಯಕ್ಕೂ ಉಳಿದ ಆರು ತುಕಡಿಗಳು ಭಾರತ ಸೈನ್ಯಕ್ಕೂ ಸೇರಿದುವು. ಸ್ವತಂತ್ರ ಭಾರತದ ಸೈನ್ಯದಲ್ಲಿ ಇವರ ಸೇವೆ ಅಮೂಲ್ಯವಾದದ್ದು.

ಜನಾಂಗ

[ಬದಲಾಯಿಸಿ]

ಗೂರ್ಖರೆಲ್ಲ ಭಾರತೀಯ ಮೂಲದವರಲ್ಲ. ಭಾರತದ ರಜಪುತ ವಂಶದವರು ಅಲ್ಲಿ ನೆಲೆಸಿದ ಅನಂತರ ಅಲ್ಲಿಯ ಮೂಲನಿವಾಸಿಗಳೊಂದಿಗೆ ಬೆರೆತರು. ಗೂರ್ಖರು ಆರ್ಯ-ಮಂಗೋಲ್ ಜನಾಂಗದ ಲಕ್ಷಣಗಳನ್ನು ಪಡೆದಿದ್ದಾರೆ. ಇವರ ಕುಳ್ಳಾದ ಪುಷ್ಟ ದೇಹ, ಚಪ್ಪಟೆಯಾದ ಮುಖ, ಪೀತವರ್ಣ - ಇವು ಮಂಗೋಲ್ ಲಕ್ಷಣಗಳು. ಗೂರ್ಖರು ಪ್ರಧಾನವಾಗಿ ಹಿಂದೂಧರ್ಮಕ್ಕೆ ಸೇರಿದವರಾದರೂ ಇವರಲ್ಲಿ ಬೌದ್ಧರೂ ಸಾಕಷ್ಟಿದ್ದಾರೆ. ಹಿಂದೂಗಳಾದವರಲ್ಲಿ ವರ್ಣಾಶ್ರಮ ಪದ್ಧತಿಯಿದೆ. ಚಂಡಿ, ದೇವಿ, ದುರ್ಗಿ ಪುಜೆಗಳು ಅಲ್ಲಿ ಹೆಚ್ಚು ಜನಪ್ರಿಯ. ಇವರು ಹಿಂದೂಗಳ ದಸರೆಯನ್ನೂ ಇತರ ಮುಖ್ಯ ಹಬ್ಬಗಳನ್ನೂ ಆಚರಿಸುತ್ತಾರೆ.

ಸಾಮಾಜಿಕ

[ಬದಲಾಯಿಸಿ]

ಇವರ ಸಾಮಾಜಿಕ ಪದ್ಧತಿ ಬಹುತೇಕ ಭಾರತೀಯರ ಪದ್ಧತಿಯನ್ನೇ ಹೋಲುತ್ತದೆಯಾದರೂ ಇವರಲ್ಲಿ ಕೆಲವೊಂದು ವೈಶಿಷ್ಟ್ಯಗಳಿವೆ. ಮಗು ಹುಟ್ಟಿದಾಗ ಹನ್ನೊಂದು ದಿನಗಳ ಕಾಲ ಇವರು ಸಮಾರಂಭವನ್ನಾಚರಿಸುತ್ತಾರೆ. ಅಷ್ಟು ದಿನಗಳ ಕಾಲ ಮಗುವಿನ ತಂದೆ ತನ್ನ ಹತ್ತಿರದ ಸಂಬಂಧಿಗಳನ್ನು ಬಿಟ್ಟು ಇತರರೊಂದಿಗೆ ಊಟ ಮಾಡಕೂಡದು. ಹನ್ನೊಂದನೆಯ ದಿನ ವೈದಿಕರಿಂದ ಇವನು ಪರಿಶುದ್ಧನಾಗುತ್ತಾನೆ. ವಿಧವೆ ಮದುವೆ ಮಾಡಿಕೊಳ್ಳುವಂತಿಲ್ಲ. ಆದರೆ ಪರ ಪುರುಷನ ಕುಟುಂಬದೊಡನೆ ಸೇರಿಕೊಂಡರೆ ಅದನ್ನು ಕೀಳೆಂದು ಪರಿಗಣಿಸುವುದಿಲ್ಲ. ದಂಪತಿಗಳು ಪರಸ್ಪರ ಸಮ್ಮತಿಸಿದರೆ ವಿವಾಹ ವಿಚ್ಛೇದ ಪಡೆಯಬಹುದು. ಅನಂತರ ಇವರು ನ್ಯಾಯಬದ್ಧವಾಗಿ ವಿವಾಹ ಮಾಡಿಕೊಳ್ಳಲೂಬಹುದು. ಇವರಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಉಳಿದೆಲ್ಲರೂ ಮಾಂಸ ತಿನ್ನುತ್ತಾರೆ.

A khukuri, the signature weapon of the Gurkhas

ಗೂರ್ಖರು ಬೇಟೆ ಮತ್ತು ಆಟಗಳಲ್ಲಿ ನಿಷ್ಣಾತರು. ಜೂಜಾಡುವುದು ಒಂದು ಪ್ರಧಾನ ಹವ್ಯಾಸ. ಇವರಲ್ಲಿ ಪ್ರತಿಯೊಬ್ಬರೂ ಕುರ್ಕಿ ಎಂಬ ಡೊಂಕಾದ ಚಾಕನ್ನು ಇಟ್ಟುಕೊಂಡಿರುತ್ತಾರೆ. ಇದು ಸುಮಾರು 50 ಸೆಂ.ಮೀ ಉದ್ದವಾಗಿರುತ್ತದೆ. ಇವರು ಧೈರ್ಯ ಸಾಹಸ ಪ್ರಾಮಾಣಿಕತೆಗಳಿಗೆ ಹೆಸರಾಗಿದ್ದಾರೆ. ಸ್ವತಂತ್ರ ಮನೋವೃತ್ತಿ, ಸ್ವಾವಲಂಬಿ ಪ್ರವೃತ್ತಿ, ಆತ್ಮ ಗೌರವ - ಇವು ಇವರಿಗೆ ರಕ್ತಗತವಾಗಿ ಬಂದಿರುವ ಗುಣಗಳು. ನೇಪಾಲದಲ್ಲಿ ಮೂರು ಮುಖ್ಯ ಭಾಷಾ ಕುಟುಂಬಗಳಿಗೆ ಸೇರಿದ ಸುಮಾರು 20 ಭಾಷೆಗಳಿವೆ. ಅವುಗಳಲ್ಲಿ ನೇಪಾಲ (ಗೂರ್ಖಾಲಿ) ಮುಖ್ಯ ಭಾಷೆ. ಇದರ ಮೇಲೆ ಹೆಚ್ಚಾಗಿ ಸಂಸ್ಕೃತದ ಪ್ರಭಾವವಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೂರ್ಖರು&oldid=1063645" ಇಂದ ಪಡೆಯಲ್ಪಟ್ಟಿದೆ