ಗೇರುಸೊಪ್ಪೆ
ಗೋಚರ
ಗೇರುಸೊಪ್ಪೆ | |
---|---|
ಹಳ್ಳಿ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಪ್ರಾಂತ್ಯ | ಕೆನರಾ |
ಜಿಲ್ಲೆ | ಉತ್ತರ ಕನ್ನಡ |
ತಾಲೂಕು | ಹೊನ್ನಾವರ |
Elevation | ೪೮ m (೧೫೭ ft) |
ಭಾಷೆ | |
• ಅಧಿಕೃತ | ಕನ್ನಡ |
• Other Languages | ಕೊಂಕಣಿ, ಮರಾಠಿ |
Time zone | UTC+5:30 (IST) |
ಪಿನ್ ಕೋಡ್ | 581384 |
Vehicle registration | KA-47 |
ಗೇರುಸೊಪ್ಪೆಗೇರುಸೊಪ್ಪೆ ಜಲಪಾತಕ್ಕೂ ಹೊನ್ನಾವರಕ್ಕೂ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಒಂದು ಹಳ್ಳಿ. ಶರಾವತಿಯ ಎಡದಂಡೆಯ ಮೇಲೆ, ತೆಂಗಿನ ತೋಪುಗಳ ಮಧ್ಯೆ, ಜಲಪಾತದಿಂದ 29 ಕಿಮೀ ದೂರದಲ್ಲೂ ಹೊನ್ನಾವರದಿಂದ 28 ಕಿಮೀ ದೂರದಲ್ಲೂ ಇದೆ.
ಇತಿಹಾಸ
[ಬದಲಾಯಿಸಿ]- ಈ ಪರಿಸರದಲ್ಲಿ ಗೇರು ಬೀಜದ ಗಿಡಗಳು ಹೇರಳವಾಗಿರುವುದರಿಂದ ಇದಕ್ಕೆ ಗೇರುಸೊಪ್ಪೆ ಎಂಬ ಹೆಸರು ಬಂದಿರಬೇಕೆಂದು ಹೇಳಲಾಗಿದೆ. ಹೊನ್ನಾವರ ಸರೋವರದ ದಕ್ಷಿಣ ಹಾಗೂ ಉತ್ತರ ಭಾಗಗಳನ್ನು ಒಳಗೊಂಡ ಒಂದು ಜಿಲ್ಲೆ ಗೇರುಸೊಪ್ಪೆ- ಎಂದು 1801ರಲ್ಲಿ ಇಲ್ಲಿ ಪ್ರವಾಸ ಮಾಡಿದ ಹ್ಯಾಮಿಲ್ಟನ್ ಬುಚನಾನ್ ಹೇಳುತ್ತಾನೆ. ಇದೇ ಹೆಸರನ್ನು ಹೊತ್ತ ನಗರ ಸರೋವರದ ದಕ್ಷಿಣ ತುದಿಯಲ್ಲಿತ್ತು; ಈಗ ಅದು ಪಾಳು ಬಿದ್ದಿದೆಯೆಂದೂ ಈ ಗೇರುಸೊಪ್ಪೆ ನಗರ ಮತ್ತು ಕರಾವಳಿಯ ಮೇಲುನಾಡಿನ ಗೇರುಸೊಪ್ಪೆ ಕೋಟೆ ಬೇರೆ ಬೇರೆ ಎಂಬುದನ್ನು ಗಮನಿಸಬೇಕು ಎಂದೂ ಆತ ತಿಳಿಸುತ್ತಾನೆ.
- ಇಕ್ಕೇರಿಯ ನಾಯಕರ ಕಾಲದಲ್ಲಿ ಘಟ್ಟದ ಕೆಳಗಿನ ಸೀಮೆ ಭಟ್ಕಳ, ಶಿರಾಳ, ಚಂದವಾರ, ಗೇರುಸೊಪ್ಪೆ ಮತ್ತು ಮಿರ್ಜಿ ಜಿಲ್ಲೆಗಳೆಂದು ವಿಭಾಗಿಸಲ್ಪಟ್ಟು ಪ್ರತಿಯೊಂದು ಜಿಲ್ಲೆಯೂ ಕರಾವಳಿಯಿಂದ ಹಿಡಿದು ಅರಬ್ಬಿ ಸಮುದ್ರದ ವರೆಗೆ ವ್ಯಾಪಿಸಿತ್ತು. ಸುಮಾರು ನಾನೂರು ವರ್ಷ ಗಳ ಹಿಂದೆ ಈ ಹಳ್ಳಿ ಗೇರುಸೊಪ್ಪೆ ರಾಜ್ಯದ ಭವ್ಯ ರಾಜಧಾನಿಯಾಗಿತ್ತು. ಅದನ್ನು ನಗಿರೆ, ಭಿಲ್ಲಾಕೀಪುರ ಮತ್ತು ಕ್ಷೇಮಪುರ ಎಂದೂ ಕರೆಯುತ್ತಿದ್ದರು. ಗೇರುಸೊಪ್ಪೆ ರಾಜ್ಯವನ್ನು ನಗಿರಾ ರಾಜ್ಯ ಎಂದು ಕರೆಯುತ್ತಿದ್ದರು.
- ಶರಾವತಿಯ ಒಂದು ದಂಡೆಯಲ್ಲಿರುವ ಗ್ರಾಮವನ್ನು ಗೇರುಸೊಪ್ಪೆ ಎಂದು ಕರೆದರೆ ಆ ಬದಿಯ ಹಳ್ಳಿಯನ್ನು ನಗಿರೆ ಬಸ್ತಿಕೇರಿ ಎಂದು ಕರೆಯುತ್ತಿದ್ದರು. ಅಲ್ಲಿ ಜೈನರ ಬಸದಿಗಳು ಇರುವುದರಿಂದಲೇ ಅದು ಆ ಹೆಸರನ್ನು ಪಡೆಯಿತು. ನಗಿರೆ ಬಸ್ತಿಕೇರಿ ನಾನೂರು ವರ್ಷಗಳ ಹಿಂದೆ ವೈಭವ ದಿಂದ ಮೆರೆದ ಪಟ್ಟಣವಾಗಿತ್ತು. ಅಲ್ಲಿಯ ರಾಜರು ಕಟ್ಟಿಸಿದ ಜೈನಬಸದಿಗಳು, ದೇವಾಲಯಗಳನ್ನು ಇಂದೂ ನೋಡಬಹುದು.
- ಇತಿಹಾಸದಲ್ಲಿ ಖ್ಯಾತಿ ಪಡೆದ ಸಾಳುವ ಮನೆತನಕ್ಕೆ ಸೇರಿದ ಎರಡು ಪ್ರಮುಖ ಶಾಖೆಗಳು ಹಾಡುವಳ್ಳಿ ಅಥವಾ ಸಂಗೀತಪುರ ಮತ್ತು ಗೇರುಸೊಪ್ಪೆಗಳಿಂದ ಆಳುತ್ತಿದ್ದುವು. ಅವು ಅಕ್ಕಪಕ್ಕದ ರಾಜ್ಯಗಳಾದರೂ ಅಲ್ಲಿಯ ರಾಜರು ಸಂಬಂಧಿಕರಾದರೂ ಅವರು ಆಗಾಗ್ಗೆ ಯುದ್ಧದಲ್ಲಿ ತೊಡಗುತ್ತಿದ್ದರು. ಕರ್ನಾಟಕದ ಇತರ ಪಾಳೆಯಗಾರರಂತೆ ಗೇರುಸೊಪ್ಪೆಯ ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಅವರ ರಕ್ಷಣೆಯಲ್ಲಿ ರಾಜ್ಯಭಾರ ಮಾಡುತ್ತಿದ್ದರು.
- ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಸ್ವಲ್ಪ ಭಾಗಗಳನ್ನು ಒಳಗೊಂಡ ಗೇರುಸೊಪ್ಪೆ ರಾಜ್ಯದ ಅರಸರು ಸಾಳುವ ವಂಶಕ್ಕೆ ಸೇರಿದವರು. ಅಲ್ಲಿಯ ರಾಜರ ಇತಿಹಾಸ 1398ರಿಂದ ಈಚೆಗೆ ಸಿಗುತ್ತದೆ. ರಾಜ ಹಯಿವರಸನೆಂಬುವನು 1398ರಲ್ಲಿ ಗೇರುಸೊಪ್ಪೆ ರಾಜ್ಯವ ನ್ನಾಳುತ್ತಿದ್ದುದು ಕಂಡುಬರುತ್ತದೆ. ಜೈನಧರ್ಮವನ್ನು ಅವಲಂಬಿಸಿದ ಈ ರಾಜರ ಪೈಕಿ ಪ್ರಮುಖರಾದವರು ಭೈರವದೇವ, ಇಮ್ಮಡಿ ಭೈರವದೇವ, ದೇವರಾಯ (ಸಾಳ್ವದೇವ) ಮತ್ತು ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ.
- ಭೈರವದೇವ (1438-62) ಪರಮ ಧಾರ್ಮಿಕನೂ ಉದಾರಿಯೂ ಆದ ದೊರೆ. ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿ, ಗೇರುಸೊಪ್ಪೆ, ಹೊನ್ನಾವರ, ಚಂದ್ರಗುತ್ತಿಗಳ ಬಸದಿಗಳಿಗೆ ಅಪಾರ ದಾನ ಮಾಡಿದ. ಮೂಡುಬಿದಿರೆಯ ಬಸದಿಯಲ್ಲಿಯ ಸಾವಿರ ಕಂಬದ ಭೈರಾದೇವಿ ಮಂಟಪ ರೂಪಿತವಾದ್ದು ಬಹುಶಃ ಈತನ ಕಾಲದಲ್ಲೇ. ಈತನ ರಾಣಿ ನಾಗಲೆ ಆ ಬಸದಿಯ ಮಾನಸ್ತಂಭವನ್ನು ಮಾಡಿಸಿದಳು. ವಿಜಯನಗರದ ಸಾಮಂತ ರಾಜನಾದರೂ ಅದರ ವಿರುದ್ಧ ಬಂಡಾಯವನ್ನು ಹೂಡಿದ.
- ಸುಮಾರು 30 ವರ್ಷಗಳ ಕಾಲ ರಾಜ್ಯವಾಳಿದ ಭೈರವದೇವನ ಕಾಲದಲ್ಲಿ ಸಾಹಿತ್ಯ ಧರ್ಮಗಳಿಗೆ ಹೆಚ್ಚಿನ ಪ್ರೋತ್ಸಾಹವಿತ್ತು. ಇವನ ಅನಂತರ ಗೇರುಸೊಪ್ಪೆಯ ಸಿಂಹಾಸನಕ್ಕಾಗಿ ಅಂತಃಕಲಹ ಉಂಟಾಗಿ ರಾಜ್ಯ ಒಡೆದು ಇಬ್ಭಾಗವಾಯಿತು. ಗೇರುಸೊಪ್ಪೆಯ ಮತ್ತೊಬ್ಬ ಪ್ರಮುಖರಾಜ ದೇವರಾಯ. ಈತ 1481ರಲ್ಲಿ ಗೋವೆಯಲ್ಲಿದ್ದ ಆದಿಲಷಹನ ಸೇನಾನಿಯನ್ನು ಯುದ್ಧದಲ್ಲಿ ಸೋಲಿಸಿ, ಕರಾವಳಿಯಲ್ಲಿ ಸುಲ್ತಾನ ಮುಂದುವರಿಯದಂತೆ ಮಾಡಿದ.
- ಮಹಾರಾಜಾಧಿರಾಜ ಮತ್ತು ಪರಮೇಶ್ವರ ಎಂಬ ಬಿರುದುಗಳನ್ನು ಪಡೆದ ದೇವರಾಯ 1492ರಲ್ಲಿ ವಿಜಯನಗರದ ಸಾಮ್ರಾಟ ವಿರೂಪಾಕ್ಷರಾಯನ ಸೇನೆಯ ವಿರುದ್ಧ ಯುದ್ಧಮಾಡಿದ. ಆದರೆ ಯುದ್ಧದಲ್ಲಿ ಜಯಶೀಲನಾಗದೆ, ಅವನೊಡನೆ ಒಪ್ಪಂದ ಮಾಡಿಕೊಂಡ. ಅವನ ಅನಂತರ ಪಟ್ಟಕ್ಕೆ ಬಂದ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧಮಾಡಿದ. ಮಡಗೋವೆಯ ಬಳಿ ನಡೆದ ಭೀಕರ ಯುದ್ಧದಲ್ಲಿ ಗೇರುಸೊಪ್ಪೆಯ ಸೈನಿಕರು ಧೈರ್ಯದಿಂದ ಹೋರಾಡಿದರಾದರೂ ಕೊನೆಯಲ್ಲಿ ಸೋಲಬೇಕಾಯಿತು.
- 1540 ರಿಂದ 1570 ರವರೆಗೆ ಸಂಗೀತಪುರದಲ್ಲಿ ಆಳುತ್ತಿದ್ದ ಚೆನ್ನಭೈರಾದೇವಿಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ. ಆದ್ದರಿಂದ ಇಮ್ಮಡಿ ದೇವರಸನ ಅನಂತರ ಗೇರುಸೊಪ್ಪೆ ಸಂಗೀತಪುರದ ರಾಣಿಯ ವಶಕ್ಕೆ ಬಂದಿರಬೇಕು. ಇವಳ ಆಳ್ವಿಕೆಯ ಕಾಲದಲ್ಲಿ ಗೇರುಸೊಪ್ಪೆಯ ಖ್ಯಾತಿ ಹೊರದೇಶಗಳಿಗೆ ಹರಡಿತು. ಎರಡು ರಾಜ್ಯಗಳ ರಾಣಿಯಾಗಿ ಪೋರ್ಚುಗೀಸರ ವಿರುದ್ಧ, ಕೆಳದಿಯ ನಾಯಕರ ವಿರುದ್ಧ ಯುದ್ಧಮಾಡಿದ ವಿಷಯ ಹಲವಾರು ಮೂಲಗಳಿಂದ ತಿಳಿದುಬರುತ್ತದೆ.
- ಕರಿಮೆಣಸಿನ ರಾಣಿಯೆಂದು ಪೋರ್ಚುಗೀಸರಿಗೆ ಪರಿಚಿತಳಾದ ಚೆನ್ನಭೈರಾದೇವಿ ಮಲೆನಾಡಿನಲ್ಲಿ ಬೆಳೆಯುತ್ತಿದ್ದ ಮೆಣಸನ್ನು ಕೊಳ್ಳುವ ಬಗ್ಗೆ ಪೋರ್ಚುಗೀಸರೊಡನೆ ಒಪ್ಪಂದ ಮಾಡಿಕೊಂಡಿದ್ದಳು. ಅಲ್ಲದೆ ಪೋರ್ಚುಗೀಸರ, ಕೆಳದಿಯ ನಾಯಕರ ವಿರೋಧಿಯಾಗಿದ್ದ ಆದಿಲ್ಷಾನ ಸ್ನೇಹ ಹೊಂದಿದ್ದಳು. ಗೇರುಸೊಪ್ಪೆಯ ಮೇಲೆ ಕಣ್ಣಿಟ್ಟ ಇಕ್ಕೇರಿಯ ಹಿರಿಯ ವೆಂಕಟಪ್ಪನಾಯಕ ಆ ರಾಜ್ಯದ ಮೇಲೆ ದಂಡೆತ್ತಿಹೋಗಿ, ರಾಣಿ ಚೆನ್ನಭೈರಾದೇವಿಯನ್ನು ಯುದ್ಧದಲ್ಲಿ ಸೋಲಿಸಿ ಗೇರುಸೊಪ್ಪೆಯನ್ನು ಸಂಪುರ್ಣವಾಗಿ ಧ್ವಂಸಮಾಡಿದ.
- ಈ ವಿಜಯದ ಪರಿಣಾಮವಾಗಿ ಹೊನ್ನಾವರ, ಬಾರ್ಕಲೂರು, ಭಟ್ಕಳ ಬಂದರುಗಳು ಕೆಳದಿ ಸಂಸ್ಥಾನಕ್ಕೆ ಸೇರಿಹೋದುವು. ರಾಣಿ ಮಾಡುತ್ತಿದ್ದ ಮೆಣಸಿನ ವ್ಯಾಪಾರವೆಲ್ಲ ವೆಂಕಟಪ್ಪನ ಅಧೀನವಾಯಿತು. ಗೇರುಸೊಪ್ಪೆ ಕೆಳದಿ ರಾಜ್ಯದಲ್ಲಿ ಐಕ್ಯವಾಯಿತು. ಸುಮಾರು 200 ವರ್ಷಗಳ ಕಾಲ ವೈಭವದಿಂದ ಮೆರೆದ ಗೇರುಸೊಪ್ಪೆಯ ರಾಜರು ಸಾಹಿತ್ಯ, ಧರ್ಮ ಮತ್ತು ಕಲೆಗೆ ವಿಶೇಷವಾದ ಪ್ರೋತ್ಸಾಹ ನೀಡಿದ್ದಕ್ಕೆ ಸಾಕ್ಷಿಯಾಗಿ ಬಸದಿ, ದೇವಾಲಯಗಳು ಅಲ್ಲಿ ಕಂಡುಬರುತ್ತವೆ.
- ಗೇರುಸೊಪ್ಪೆಯಲ್ಲಿರುವ ಸುಂದರ ಚತುರ್ಮುಖ ಬಸದಿ ಅಲ್ಲಿಯ ರಾಜರ ಕೊಡುಗೆ. ರಾಣಿ ಭೈರಾದೇವಿ ಈ ಬಸದಿಯನ್ನು ಕಟ್ಟಿಸಿದಳು. ನಾಲ್ಕು ಬಾಗಿಲುಗಳಿದ್ದು, ಗರ್ಭಗುಡಿ ಮಧ್ಯದಲ್ಲಿದ್ದು, ನಾಲ್ವರು ತೀರ್ಥಂಕರರನ್ನು ಪಡೆದಿರುವ ಇಂಥ ಬಸದಿ ಅಪರೂಪ. ಇದಲ್ಲದೆ, ಅಲ್ಲಿಯ ಜ್ವಾಲಾಮಾಲಿನಿ ದೇವಾಲಯ, ನೇಮಿನಾಥ ಬಸದಿ, ಅನೇಕ ವೀರಗಲ್ಲುಗಳು ಮತ್ತು ಶಾಸನಗಳು ಅಲ್ಲಿಯ ರಾಜರುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತವೆ.
Wikimedia Commons has media related to Gerusoppa.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- Commons category link is on Wikidata
- ಉತ್ತರ ಕನ್ನಡ ಜಿಲ್ಲೆ
- ಕರ್ನಾಟಕದ ಇತಿಹಾಸ