ವಿಷಯಕ್ಕೆ ಹೋಗು

ಗೋವಿಂದ ಪೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಜೇಶ್ವರ ಗೋವಿಂದ ಪೈ
ಎಂ. ಗೋವಿಂದ ಪೈ
ಜನನ(೧೮೮೩-೦೩-೨೩)೨೩ ಮಾರ್ಚ್ ೧೮೮೩
ಮಂಜೇಶ್ವರ‌ , ಕಾಸರಗೋಡು ಜಿಲ್ಲೆ
ಮರಣSeptember 6, 1963(1963-09-06) (aged 80)
ವೃತ್ತಿಸಾಹಿತಿ
ರಾಷ್ಟ್ರೀಯತೆಭಾರತೀಯ
ವಿಷಯಕನ್ನಡ ಸಾಹಿತ್ಯ
ಬಾಳ ಸಂಗಾತಿಕೃಷ್ಣಾ ಬಾಯಿ
ಗೋವಿಂದ ಪೈಯವರ ಕೈ ಬರಹದಲ್ಲಿ "ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ" ಕವಿತೆ ಗಿಳಿವಿಂಡು ಕವನ ಸಂಕಲನದಲ್ಲಿದೆ

ಎಂ.ಗೋವಿಂದ ಪೈ ( ಮಾರ್ಚ್ ೨೩, ೧೮೮೩ಸೆಪ್ಟೆಂಬರ್ ೬, ೧೯೬೩) ಕರ್ನಾಟಕದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ.[] ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳಿಸಿದರು. ಗೋವಿಂದ ಪೈಗಳು ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರ ವನ್ನು ಜೊತೆಗೂಡಿಸಿಕೊಂಡಿದ್ದರು.

ಮಂಜೇಶ್ವರ ಗೋವಿಂದ ಪೈ ಶಿಲ್ಪ.

ಎಂ ಗೋವಿಂದ ಪೈ ಮತ್ತು ಶಿಕ್ಷಣದ ಬಾಲ್ಯ

  • ಎಂ. ಗೋವಿಂದ ಪೈ ಅವರು ಮಂಗಳೂರಿನ ಸಾಹುಕಾರ ತಿಮ್ಮಪ್ಪ ಪೈಗಳು ಮತ್ತು ತಾಯಿ ದೇವಕಿಯಮ್ಮರ ಮಗ. ತಾಯಿಯ ತೌರುಮನೆ ಮಂಜೇಶ್ವರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ ೨೩, ೧೮೮೩ ರಂದು ಜನಿಸಿ ದರು.[][] ಅವರ ತಂದೆ ತುಂಬ ಸ್ಥಿತಿವಂತರು ತಿಮ್ಮಪ್ಪ ಪೈ ಅವರ ಹಿರಿಯ ಮಗ. ಇವರಿಗೆ ಮೂವರು ತಮ್ಮಂದಿರು ಮತ್ತು ಮೂವರು ಸಹೋದರಿಯರಿರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಎಂ. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರುನಲ್ಲಿಯೇ ಆಯಿತು. ಪದವಿ ಪೂರ್ವದ ವಿದ್ಯಾಭ್ಯಾಸ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ನಡೆಯಿತು. ಅವರ ಒಡನಾಡಿಗಳಲ್ಲಿ ಎಂ. ಎನ್. ಕಾಮತ್ ಒಬ್ಬರು. ಅವರಿಗೆ ಪಾಠ ಕಲಿಸಿದ ಗುರುವರ್ಯರಲ್ಲಿ ಪಂಜೆ ಮಂಗೇಶರಾಯರೂ ಒಬ್ಬರು. ಬಿ.ಎ ಪದವಿ ಶಿಕ್ಷಣಕ್ಕಾಗಿ 1903-1906ರವರೆಗೆ ಮದರಾಸುವಿನ( ಈಗಿನ ಚೆನ್ನೈಗೆ) ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಾಯಿತು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು. ತಂದೆಯ ಮರಣದಿಂದಾಗಿ ಬಿ.ಎ ಪದವಿ ಪರೀಕ್ಷೆಯ ಮಧ್ಯದಲ್ಲಿಯೇ ಅವರು ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ವಹಿಸಬೇಕಾಯಿತು. ಬಿ.ಎ ಪದವಿ ಪಡೆಯಲಾಗದಿದ್ದರೂ ಇಂಗ್ಲಿಷ್ ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದುದರಿಂದ ಚಿನ್ನದ ಪದಕನ್ನು ಗಳಿಸಿದರು. ಅವರ ವ್ಯಾಸಂಗ ಅರ್ಧಕ್ಕೆ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ ಸಾಗಿತು. ಅವರು ತಮ್ಮ ತಾಯಿಯ ಊರಾದ ಮಂಜೇಶ್ವರದಲ್ಲಿ ಹುಟ್ಟಿದರು. ಆಕೆಯ ಮೂಲಕ ತಮಗೆ ದತ್ತವಾದ ಆಸ್ತಿಯನ್ನು ನೋಡಿಕೊಂಡು ಅಲ್ಲಿಯೇ ನೆಲೆಸಿದ್ದರಿಂದ ಅವರನ್ನು ಮಂಜೇಶ್ವರದ ಗೋವಿಂದ ಪೈ ಎಂದೇ ಕರೆಯುವುದು ರೂಢಿಯಾಯಿತು.
  • ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು.[] ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ ಸುವರ್ಣ ಪದಕ ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.[]
  • ಇವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿಲಿಟ್ ಪದವಿ ನೀಡಲು ಮುಂದಾಗಿತ್ತು ಅದನ್ನು ಪೈಗಳು ನಯವಾಗಿ ತಿರಸ್ಕರಿಸಿದರು.

ಸಾಹಿತ್ಯ

  • ತಂದೆಯವರ ಮರಣದ ನಂತರ ಹಿರಿಯ ಮಗನಾದ ಇವರ ಮೇಲೆ ಮನೆತನದ ಎಲ್ಲ ಜವಾಬ್ದಾರಿ ಬಿತ್ತು. ಬಿ.ಎ ಪದವಿ ಪೂರ್ಣಗೊಳಿಸಲಿಲ್ಲ. ಮನೆಯಲ್ಲಿಯೇ ಅಮೂಲ್ಯ ಗ್ರಂಥಗಳನ್ನು ತರಿಸಿ ಓದಿದರು. ಕಾಲೇಜಿನಲ್ಲಿದ್ದಾಗ ಲ್ಯಾಟಿನ್ , ಫ್ರೆಂಚ್, ಸಂಸ್ಕ್ಕತ, ಪಾಳಿ, ಬಂಗಾಲಿ, ಭಾಷೆಗಳ ನ್ನು ಅಭ್ಯಸಿಸಿದ್ದರು. ಮನೆಯಲ್ಲಿ ಇನ್ನೂ ಹಲವು ಭಾಷೆಗಳನ್ನು ಅಭ್ಯಸಿಸಿ ಬಹುಭಾಷಾ ಪ್ರವೀಣರಾಗಿದ್ದರು. ಇವರ ಗ್ರಂಥಾಲಯದಲ್ಲಿ ೪೩ ಭಾಷೆಗಳ ಸಾವಿರಾರು ಗ್ರಂಥ ಸಂಗ್ರಹವಿತ್ತು. ಇವರ ಮಾತೃಭಾಷೆ ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ.
  • ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳ ಮತ್ತು ತಮಿಳು ಆಜು ಬಾಜು ಭಾಷೆಗಳಾಗಿದ್ದವು. ಮರಾಠಿ ಗುಜರಾತಿ ಜರ್ಮನ್ ಗ್ರೀಕ್ ಮೊದಲಾದವು ಆಸಕ್ತ ಭಾಷೆಗಳಾಗಿದ್ದವು. ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು ೨೫ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಕೊಂಡಿದ್ದರು. ಗೋವಿಂದ ಪೈಯವರು ನಂತರ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರು ಗಳಿಸಿದರು.
  • ಗೋವಿಂದ ಪೈಗಳು 'ಗಿಳಿವಿಂಡು', 'ನಂದಾದೀಪ' ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. 'ತಾಯಿ‘, 'ಕಾಯಾಯ್ ಕೊಮಾಜಿ' ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
  • ಅವರ ‘ಕನ್ನಡದ ಮೊರೆ’ ಎಂಬ ಪ್ರಬಂಧ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧರೂಪದಲ್ಲಿ ಅವರ 'ಆತ್ಮಕಥನ' ಮೂಡಿಬಂದಿದೆ. ಲೇಖಕನ ಕಷ್ಟನಿಷ್ಟುರಗಳನ್ನು ವರ್ಣಿಸುವ ‘ಬರಹಗಾರನ ಹಣೆಬರಹ’.

ತಮ್ಮ ಗುರುಗಳಾದ ಪಂಜೆಯವರಲ್ಲಿದ್ದ ಪೂಜ್ಯಭಾವದ ಪ್ರತೀಕದಂತಿರುವ 'ಕನಸಾದ ನನಸು', ಒಡನಾಡಿಗಳಾದ ಎಂ.ಎನ್. ಕಾಮತ್, ಕಿಲ್ಲೆ ಅವರ ಸ್ನೇಹದ ಬಗ್ಗೆ ಬರೆದಿರುವ ಅವರ ಬರಹಗಳು, ಎಂ.ಆರ್. ಶ್ರೀನಿವಾಸಮೂರ್ತಿಗಳಿಗೆ ನೆನಪು, ಬೇಂದ್ರೆಯವರಿಗೆ ಐವತ್ತು ದಾಟಿದ್ದಕ್ಕೆ ಸಲ್ಲಿಸಿದ ಹರಕೆ ಇವು ಅವರ ಇನ್ನಿತರ ಪ್ರಬಂಧಗಳಾಗಿವೆ.

  • ಅವರು ಮೂಲತಃ ಕವಿ. ಇನ್ನೂ ಎಂಟನೆಯ ತರಗತಿಯಲ್ಲಿರುವಾಗಲೇ ಬರೆದ ಮೂರು ಕವನಗಳು ಬಹುಮಾನ ಗಳಿಸಿದ್ದವು, ಮತ್ತು “ಸುವಾಸಿನಿ” ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಅವರ ಸಾಹಿತ್ಯ ಯಾತ್ರೆಯ ಪೂರ್ವಾರ್ಧವು ಬಹಳ ಸಮೃದ್ಧ ಮತ್ತು ಬಹುಮುಖಿ. ಕಾವ್ಯ, ನಾಟಕ, ಅನುವಾದ ವಿಮರ್ಶೆಗಳ ಬೆಳಸು ಬಹು ಹುಲುಸಾಗಿದ್ದವು. ಇನ್ನು ಛಂದಸ್ಸಿನ ವಿಷಯದಲ್ಲೂ ಅವರು ಪ್ರಗತಿಪರರು. ಶತಮಾನದ ಹಿಂದೆಯೇ ಕವನದಲ್ಲಿ ಪ್ರಾಸವನ್ನು ಕೈ ಬಿಟ್ಟಿದ್ದರು.
  • ಅನುಕೂಲೆಯಾದ ಮಡದಿ ನೆಮ್ಮದಿಯ ಸಂಸಾರ ಮತ್ತು ನಿರಂತರ ಆದಾಯದಿಂದ ಗೃಹಸೌಖ್ಯವಿದ್ದ ಆ ಕಾಲದಲ್ಲಿ ಗಿಳಿವಿಂಡು, ನಂದಾದೀಪ, ಹೃದಯರಂಗ ಕವನ ಸಂಕಲನಗಳು ಹೊರಬಂದವು. ಏಸುವಿನ ಕೊನೆಯ ದಿನಗಳ ಬಗ್ಗೆ ಗೊಲ್ಗೋಥಾ ಬುದ್ಧನ, ಕೃಷ್ಣನ ಹಾಗೂ ಗಾಂಧೀಜಿ ಯವರ ಕೊನೆಯ ದಿನಗಳ ಕುರಿತು ಬರೆದ ವೈಶಾಖಿ, ಪ್ರಭಾಸ ಹಾಗೂ ದೆಹಲಿ ಖಂಡಕಾವ್ಯಗಳು ನಂತರ ಪ್ರಕಟವಾಗಿವೆ.
  • ವೈಶಾಖಿ, ಪ್ರಾಕೃತದ ಆಳವಾದ ಅಧ್ಯಯನದ ಫಲ ಗೋಲ್ಗೋಥಾ ಖಂಡ ಕಾವ್ಯಕ್ಕೆ ಗ್ರೀಕ್ ಮೂಲ ಸಾಮಗ್ರಿಯ ಅವಲೋಕನ ಕಾರಣ, ಹೆಬ್ಬೆರಳು ಚಿತ್ರಭಾನು ನಾಟಕಗಳು, ಅಲ್ಲದೆ ‘ ನೋ’ ಎಂಬ ಜಪಾನಿ ನಾಟಕಕಾರನ ಎಂಟು ಕೃತಿಗಳ ಅನುವಾದ ಜೊತೆಗೆ ಸಂಶೋಧನೆ ಮತ್ತು ವಿಮರ್ಶೆ ಮೊದಲಾದವು ಬೆಳಕು ಕಂಡವು. ಅವುಗಳಲ್ಲಿ ಸೃಜನಶೀಲ ಕೃತಿಗಳ ಸಂಖ್ಯೆಯೇ ಅಧಿಕ. ಇವರ ಸಾಂಸಾರಿಕ ಜೀವನ ಸುಖದ ಅವಧಿ ಬಹು ಕಡಿಮೆ. ಹುಟ್ಟಿದ ಒಂದು ಹೆಣ್ಣು ಮಗು ಬೇಗನೆ ತೀರಿ ಹೋಯಿತು. 1927 ರಲ್ಲಿ ಇವರ ಹೆಂಡತಿ ಕೃಷ್ಣಾಬಾಯಿ ಮರಣ ಹೊಂದಿದರು.
  • ಆಗ ಪೈಯವರಿಗೆ 44 ವಯಸ್ಸು. ಅವರು ಮರು ಮದುವೆಯಾಗದೆ ವಾನ ಪ್ರಸ್ಥಾಶ್ರಮ ಸ್ವೀಕರಿಸಿದರು. ಅವರ ಜೀವನದಲ್ಲಿ ಅದು ಹೊಸ ತಿರುವು ನೀಡಿತು. ತಮಗಾದ ಅನಾನುಕೂಲವನ್ನು ಅವರು ತಮ್ಮ ಸಾಹಿತ್ಯ ಸೇವೆಗೆ ಪೂರಕವಾಗಿಸಿ ಕೊಂಡರು. ಅವರ ಬಹುತೇಕ ಸಂಶೋಧನ ಕೃತಿಗಳು ಈ ಅವಧಿಯಲ್ಲಿಯೇ ಹೊರ ಬಂದವು. ಕಾಲಮಾನದ ದೃಷ್ಟಿಯಿಂದ ಸೃಜನ, ಅವರ ಪೂರ್ವಾರ್ಧ ಜೀವನದ ಕೃಷಿ, ಸಂಶೋಧನ ಉತ್ತರಾರ್ಧ ಜೀವನದ ಕೃಷಿ.
  • ಇನ್ನು ನುಡಿಯಮೆಲಿನ ಅವರ ಅಭಿಮಾನವನ್ನು ಒಂದೆರಡು ಮಾತುಗಳಲ್ಲಿಯೇ ಹೇಳಿ ಮುಗಿಸಬಹುದು. ಅವರ ಮಾತೃಭಾಷೆ ಕೊಂಕಣಿಯಾದರೂ ಅವರ ಕೈಂಕರ್ಯವೆಲ್ಲ ಕನ್ನಡಕ್ಕೆ ಮೀಸಲಾಗಿತ್ತು. ಈ ಬಗ್ಗೆ ಅವರೇ ಹೇಳಿಕೊಂಡಿರುವ ಮಾತುಗಳು ಮನನೀಯವಾಗಿದೆ. “ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ, ಕನ್ನಡ ಸಾಕು ತಾಯಿ…. ಆದರೆ ತಾಯಿಯ ಮೊಲೆಯಲ್ಲಿಹಾಲಿಲ್ಲ. ಕೊಂಕಣಿಯಲ್ಲಿ ಸಾಹಿತ್ಯವಿಲ್ಲ. ಆಕೆ ಆ ಬಗ್ಗೆ ನನ್ನನ್ನು ಕನ್ನಡದ ಮೊರೆಯಲ್ಲಿ ಹಾಕಿದಳು. ಈ ದಾಯಿಯಾದರೆ ಪಯಸ್ವಿನಿ. ಅಷ್ಟು ಕಾಲದಿಂದ ಎಷ್ಟೋ ಕವಿಗಳನ್ನು ಊಡಿಸಿಯೂ ಮತ್ತೂ ಬತ್ತದ, ದೇವರ ದ್ಯೆಯಿಂದ ಸರ್ವದಾ ಬತ್ತಬಾರದ ಸದಾಸ್ನುಹಿ. ತನ್ನ ಮೊಲೆಯನ್ನು ಆಕೆ ತಾಯಿಗೂ ಮಿಕ್ಕ ಅಳ್ತಿಯಿಂದ ನನಗೆ ಉಣಿಸಿದಳು. ಆಕೆಯ ಅಕ್ಕರೆಯ ಸಾಲವನ್ನೂ ಏಳೇಳು ಜನ್ಮಕ್ಕೂ ತೆತ್ತು ತೀರಿಸಲಾರೆ”. ಆಯಾ ಜನರ ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕೆಂಬ ತತ್ವವನ್ನು ಒಪ್ಪಿದ್ದ ಪೈ ಅವರು “ತನ್ನ ತಾಯ್ನುಡಿಯಿಂದ ದುಡಿದ ಬಿಜ್ಜೆಯೇ ಬಿಜ್ಜೆ! ಹೆರರ ನಾಲಗೆಯೆಂಜಲೆನ್ನಗಂ ಸವಿಯೋ?” ಎಂದು ಎಚ್ಚರಿಸಿರುವರು. ಎಮ್. ಗೋವಿಂದ ಪೈ ಅವರು ತಮ್ಮ ಕಾವ್ಯ ಪ್ರತಿಭೆಯನ್ನು ಯಾವ ಪಂಥ ಇಲ್ಲವೇ ಪ್ರಚಾರಕ್ಕೂ ಒತ್ತೆ ಇಟ್ಟವರಲ್ಲ.

ಸಂಶೋಧನೆ

  • ಉದ್ರಿಕ್ತ ಭಾವನೆಗಳ ನೆಲೆಯಲ್ಲಿ ನಡೆಯುವ ಕಾವ್ಯ ಕ್ರಿಯೆಗಿಂತ ಅನ್ವೇಷಣ ಪ್ರಜ್ಞೆಯ ನೆಲೆಯಲ್ಲಿ ನಡೆಯುವ ಸಂಶೋಧನೆಯು ಅವರಿಗೆ ಆವಶ್ಯಕವೆನಿಸಿತು ಮತ್ತು ಅನಿವಾರ್ಯವೂ ಆಯಿತು. ಅದರ ಪರಿಣಾಮವಾಗಿ ಪೈ ಎಂದರೆ ಸಂಶೋಧನೆ, ಸಂಶೋಧನೆ ಎಂದರೆ ಪೈ ಎನ್ನುವಂತಾ ಯಿತು. ಸಂಶೋಧನೆಯು ಅವರ ಪ್ರಧಾನ ಸಾಹಿತ್ಯ ಕೃಷಿಯಾಯಿತು. ಬಹುಭಾಷಾ ಪಾಂಡಿತ್ಯ ಮತ್ತು ಸಾಹಿತ್ಯದ ಅಧ್ಯಯನವು ಅವರ ಜ್ಞಾನದ ಆಳ ಅಗಲಗಳನ್ನು ಹೆಚ್ಚಿಸಿದವು.
  • ಯಾವುದೇ ವಿಷಯವಾದರೂ ಅನುವಾದವನ್ನು ಆಶ್ರಯಿಸದೆ ಮೂಲ ಕೃತಿಯನ್ನೇ ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಗಳಿಸಿದ್ದರು. ಇದರಿಂದಲಾಗಿ ಅವರ ಸಂಶೋಧನೆ ತಳಸ್ಪರ್ಶಿಯಾಗಿರುತಿತ್ತು. ಸಂಶೋಧನೆಯ ಮೂಲ ಪರಿಕರಗಳೆಂದರೆ ಶಾಸ್ತ್ರೀಯ ಅಡಿಪಾಯ ಮತ್ತು ಕಲಾತ್ಮಕ ದೃಷ್ಟಿಕೋನ. ಯಾವುದೇ ಶಾಸ್ತ್ರಕ್ಕಿರುವಂತೆ ನಿಗದಿತ ಚೌಕಟ್ಟು ಆಂತರಿಕ ಮತ್ತು ಬಾಹ್ಯ ಸಾಕ್ಷ್ಯಾಧಾರಗಳ ಸಂಗ್ರಹಣೆ, ಪರಿಗಣನೆ ತುಲನೆಮತ್ತು ವಿಶ್ಲೇಷಣೆ ಅಂತಿಮ ನಿರ್ಣಯದಲ್ಲಿ ಕಲಾತ್ಮಕ ಅನ್ವಯತೆಯಿಂದ ಪ್ರಾಯೋಗಿಕ ಮೌಲ್ಯವು ಸಿದ್ಧವಾದಾಗ ಮಾತ್ರ ಸಂಶೋಧನೆ ಸಫಲವಾಗು ತ್ತದೆ. ಅವರು ಹಚ್ಚಿದ ಜ್ಞಾನ ದೀವಿಗೆಯು ಸದಾ ಬೆಳಕು ಬೀರುವಂತೆ ಗೋವಿಂದ ಪೈ ಪ್ರತಿಷ್ಠಾನ ಈಗಲೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.
  • ಸಂಶೋಧಕ ಪೈ ಅವರ ಹಿರಿಯ ಗುಣ ಸತ್ಯ ಪ್ರಿಯತೆ, ಬೌದ್ಧಿಕ ಪ್ರಮಾಣಿಕತೆ ಮತ್ತು ವಸ್ತು ನಿಷ್ಠತೆ. ಸತ್ಯದ ಎಳೆ ಹಿಡಿದು ಎಷ್ಟೇ ವಾದ ಮಾಡಿದರೂ, ತಮ್ಮ ನಿರ್ಧಾರ ಸರಿ ಅಲ್ಲ ಎಂದು ಮನವರಿಕೆಯಾದಾಗ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವ ಗುಣ ಅವರದಾಗಿತ್ತು. ಸಂಶೋಧನಾ ಫಲಿತವು ಎಂದೂ ನಿತ್ಯ ಸತ್ಯವಲ್ಲ, ಹೊಸ ಪ್ರಮಾಣಗಳು ದೊರೆತಾಗ ಹಳೆಯ ಅಭಿಪ್ರಾಯವನ್ನು ಬದಲಿಸಿಕೊಳ್ಳುವ ಅಗತ್ಯದ ಆಶಯ ಅವರದ್ದಾಗಿತ್ತು.
  • ಅವರ ಅನೇಕ ನಿರ್ಧಾರಗಳು ಕಾಲಾನುಕ್ರಮದಲ್ಲಿ ನಿಲ್ಲದೆ ಇರಬಹುದು ಆದರೆ ಸಂಶೋಧನಾ ವಿಧಾನದ ನಿಖರತೆ ಮತ್ತು ನಿರ್ಧಾರಗಳ ಅಧಿಕೃತತೆಯು ಮಾತ್ರ ಸುಸ್ಥಿರ ಕವಿ ಕಾವ್ಯಗಳ ಕಾಲ ನಿರ್ಣಯದಲ್ಲಿ ಅವರು ವಿದೇಶಿ ವಿದ್ವಾಂಸರು ಅನುಸರಿಸುತ್ತಿದ್ದ ಪದ್ದತಿಯನ್ನು ವಿರೋಧಿಸಿದರು.

ಕ್ರೈಸ್ತ ಪಂಚಾಂಗವನ್ನು ಅನುಕರಿಸಿ ಶಾಸನಗಳ ಕಾಲ ನಿರ್ಣಯ ಮಾಡಲು ನಿರಾಕರಿಸಿದರು.

  • ಅದರ ಬದಲಾಗಿ ಭಾರತೀಯ ಪಂಚಾಂಗಗಳ ಆಧಾರದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅದೇ ವಿಧಾನದಿಂದ ಗೌತಮ ಬುದ್ದ, ಮಹಾವೀರ, ಬ್ರಹ್ಮ, ಶಿವ, ಕುಮಾರವ್ಯಾಸ ಮೊದಲಾದವರ ಕಾಲನಿರ್ಣಯ ಮಾಡಿದರು. ಪ್ರಸಿದ್ಧ ಕವಿಗಳಾದ ಪಂಪ, ರನ್ನ, ನಾಗಚಂದ್ರ, ಲಕ್ಷ್ಮೀಶ, ರತ್ನಾಕರ ವರ್ಣಿ ಮತ್ತು ಪಾರ್ತಿಸುಬ್ಬ ಇವರ ಕಾಲದೇಶಗಳ ನಿರ್ಣಯಕ್ಕೆ ವ್ಯಾಪಕ ಸಂಶೋಧನೆ ಮಾಡಿರುವರು. ಅದರಿಂದ ಅವರ ಕಾಲ ಅಂದಿನವರೆಗೆ ಅಂಗೀಕೃತವಾಗಿದ್ದ ಕಾಲಕ್ಕಿಂತ ಬಹು ಹಿಂದೆ ಹೋಗಿರುವುದು ಗಣನೀಯ.
  • ಅವರು ಸಂಶೋಧನೆಗೆ ಆರಿಸಿದ ವಿಷಯಗಳು ಅನೇಕ. ಧರ್ಮಗಳು, ದೇವಾಲಯಗಳು, ರಾಜವಂಶಗಳು, ಶಾಸನಗಳು ಪುರಾತನ ಕವಿಗಳು ಹೀಗೆ ಎಲ್ಲದರಲ್ಲೂ ಅವರ ಸಂಶೋಧನಾತ್ಮಕ ಕೊಡುಗೆ ಇದೆ. ಸಾಹಿತ್ಯ ಸಂಶೋಧನೆಯ ಜೊತೆ ಜೊತೆಗೆ ಹೊಸ ಪದಗಳ ಸೃಷ್ಠಿಗೂ ಅವರು ಪ್ರಾಮುಖ್ಯತೆ ಕೊಟ್ಟಿದ್ದರು. ಭಾಷೆ ಬೆಳೆಯಬೇಕಾದರೆ ಶಬ್ದಸಂಗ್ರಹವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನುವುದು ಅವರ ಅಚಲ ನಂಬಿಕೆಯಾಗಿತ್ತು.
  • “ ಹೊಸ ಭಾವನೆಗಳು ಹುಟ್ಟುತಿದ್ದಂತೆ ಅವುಗಳನ್ನು ಯಥಾವತ್ತಾಗಿ ಮೂಡಿಸಲು ಹಳೆಯ ಶಬ್ದಸಂಗ್ರಹ ಸಾಲದು" ಎಂಬ ಅವರ ಮಾತು ಆಧುನಿಕ ಮನೋಭಾವದ ಸಂಕೇತ. ತಮ್ಮ ಅನಿಸಿಕೆಯನ್ನು ಮಾತಿನಲ್ಲಿ ಮಾತ್ರವಲ್ಲದೆ ಕೃತಿಯಲ್ಲಿಯೂ ತೋರಿಸಿದರು. ” ಇಸು” ಪ್ರತ್ಯಯ ಬಳಸಿ ಪಾನಿಸು, ಕೋಲಾಹಲಿಸು’ ಪದಗಳನ್ನು ಸೃಷ್ಠಿಸಿದರು. ಕನ್ನಡದಲ್ಲಿ ಪಾರಿಭಾಷಿಕ ಪದಗಳ ಕೊರತೆಯನ್ನು ನೀಗಿಸಲು ಅವರ ಮಾತನ್ನು ಪರಿಶೀಲಿಸಬೇಕಾಗಿದೆ. ಪ್ರಾಚೀನ ಗ್ರೀಕ್‌ ಪ್ರಹಸನದಲ್ಲಿ ಕೆಲವು ಕನ್ನಡ ಪದ ಗಳು ಇರುವುದನ್ನು ಮೊಟ್ಟ ಮೊದಲು ಗುರುತಿಸಿದ ವಿದ್ವಾಂಸರು ಅವರು. *ಅದರಲ್ಲಿ ಬರುವ ಹಬ್ಬ ತೆರಿಗೆ, ಸಂರಕ್ಷಿಸು, ಎತ್ತು ಒಸೆ ಮೊದಲಾದ ಪದಗಳು ಕನ್ನಡ ಮೂಲದ ಪದಗಳೆಂಬುದು ಅವರ ಊಹೆ. ಈ ಗ್ರೀಕ್‌ ಪ್ರಹಸನವು ಕ್ರಿ. ಪೂರ್ವ ಆವಧಿಯದು. ಆದ್ದರಿಂದ ಕನ್ನಡ ಕ್ರಿ. ಪೂರ್ವ ಒಂದನೆಯ ಶತಮಾದಲ್ಲಿಯೇ ಇದ್ದಿತು ಎಂಬುದ ಅವರ ವಾದ. ಇಂದಿಗೆ ಅವರ ಈ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ಕನ್ನಡದ ಪ್ರಾಚೀನತೆಯನ್ನು ನಿರ್ಧರಿಸುವಲ್ಲಿಯೂ ಕನ್ನಡಕ್ಕೆ ಕ್ಲಾಸಿಕಲ್‌ ಪಟ್ಟ ದೊರಕುವಲ್ಲಿಯೂ ಇದು ಬಹುಮುಖ್ಯ ಆಧಾರ ಎನ್ನಬಹುದು.
  • ಆದರೆ ಸಂಶೋಧನೆ ಗೋವಿಂದ ಪೈಗಳ ಬರೆವಣಿಗೆಯ ಅತಿ ಮುಖ್ಯ ಭಾಗ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಹಾಗು ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ ಹಾಗು ವೀರಶೈವ ಧರ್ಮಗಳ ಬಗೆಗೆ ಮೌಲಿಕ ಸಂಶೋಧನೆ ಮಾಡಿ, ಅನೇಕ ಲೇಖನಗಳನ್ನು ಬರೆದಿದ್ದಾರೆ. ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮುಂತಾದ ಕೆಲವು ಲೇಖನಗಳನ್ನು ಇಲ್ಲಿ ಹೆಸರಿಸಬಹುದು.
  • ಯೇಸುವಿನ ಕಡೆಯ ದಿನವನ್ನು ಕುರಿತು ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ಅವರ ಸಂಶೋಧನೆಯ ಅಗಾಧತೆಯನ್ನು ಕಾಣಬಹುದಾಗಿದೆ. ‘ಗೊಲ್ಗೊಥಾ’ದ ವಸ್ತುವನ್ನು ಸಂಗ್ರಹಿಸುವಲ್ಲಿ ಮೂಲ ಆಕರಗಳನ್ನು ಎಷ್ಟು ನಿಷ್ಠೆ ಯಿಂದ ವ್ಯಾಸಂಗ ಮಾಡಿರುವರೆನ್ನುವುದನ್ನು, ‘’ವೈಶಾಖಿ’ಗೆ ಸಂಬಂಧಿಸಿದ ಪಾಳಿಭಾಷೆಯ ಗ್ರಂಥಗಳನ್ನೇ ಅವಲಂಬಿಸಿರುವರೆಂಬುದನ್ನೂ ಅವರು ಕೊಟ್ಟಿರುವ ಟಿಪ್ಪಣಿಗಳಿಂದ ತಿಳಿಯಬಹುದು.ಗೋವಿಂದ ಪೈ ಸಂಶೋಧನ ಸಂಪುಟ 1995ರ ವರ್ಷದಲ್ಲಿ ಪ್ರಕಟವಾಗಿದೆ. ಗೋವಿಂದ ಪೈಗಳ ಪತ್ರಗಳನ್ನು ಜಿ.ಪಿ.ರಾಜರತ್ನಂರವರು ‘ ಮಂಜೇಶ್ವರ ಗೋವಿಂದ ಪೈಗಳ ಪತ್ರಗಳು’ ಎನ್ನುವ ಪುಸ್ತಕರೂಪದಲ್ಲಿ ಹೊರತಂದಿದ್ದಾರೆ.

ನಾಡ ಭಕ್ತಿಗೀತೆಗಳು

  • ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಮೊದಲ್ಗೊಂಡು, ಕನ್ನಡನಾಡಿನ ಸುತ್ತಲೂ ಬಳ್ಳಿಯಂತೆ ಹಬ್ಬಿ, ಕಡೆಗೆ ಭಾರತಾಂಬೆಯ ಅಡಿದಾವರೆಗಳಲ್ಲಿ ಪುಷ್ಪವಾಗಿ ಸಮರ್ಪಣೆಗೊಂಡಿದೆ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲ ಸಾಲುಗಳು.
  • “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂಬ ಅವರ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದೆ. "ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು ಭಕ್ತಿಯಿಂದ ನಮಿಸುತ್ತಾ ‘ಭಾರತ ಯಶೋಗಾನವೆನ್ನೆದೆಯ ತಾನ’ “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ತಾಯಿ ಭಾರತಾಂಬೆಗೆ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ.

ಹಲವು/ಬಹುಭಾಷಾ ಪಾಂಡಿತ್ಯ

ಗೋವಿಂದ ಪೈಗಳು ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯನ್, ಗ್ರೀಕ್, ಲ್ಯಾಟಿನ್, ಜಪಾನಿ, ಇಟಾಲಿಯನ್ ,ಸ್ಪಾ ನಿಷ್ ,ಪ್ರಾಕೃತ, ಹಿಂದಿ ಹಾಗೂ ಗುಜರಾತಿ, ಪಾಂಡಿತ್ಯವನ್ನು ಪಡೆದಿದ್ದರು.

ಕೃತಿಗಳು

ಕವನ ಸಂಕಲನಗಳು

  1. ಗಿಳಿವಿಂಡು
  2. ನಂದದೀಪ
  3. ಹೃದಯ ರಂಗ
  4. ವಿಟಂಕ
  5. ಇಂಗಡಲು (ಆಯ್ದ ಕವನಗಳು)

ಖಂಡಕಾವ್ಯಗಳು

  1. ಗೊಲ್ಗೊಥಾ
  2. ವೈಶಾಖಿ

ನಾಟಕಗಳು

  1. ಹೆಬ್ಬೆರಳು
  2. ಚಿತ್ರಭಾನು ಅಥವಾ ೧೯೪೨
  3. ತಾಯಿ
  4. ಜಪಾನಿನ 'ನೋ' ನಾಟಕಗಳು
    1. ಕುಮಸಾಕಾ
    2. ಕಾಯೊಮ್ ಕೋಮಾಚಿ
    3. ಸೊತೋಬಾ ಕೊಮಾಚಿ
    4. ಹಾಗೊರೋವೊ
    5. ತ್ಸುನೆಮಾಸ
    6. ಸೊಮಾಗೆಮಂಜಿ
    7. ಚೊರಿಯೊ
    8. ಶೋಜೊ

ಪ್ರಬಂಧ ಸಂಕಲನ

  1. ಕನ್ನಡದ ಮೊರೆ (ಆತ್ಮಕಥನಗಳು, ಭಾಷಣಗಳು ಮತ್ತು ಲೇಖನಗಳು)

ಗದ್ಯಾನುವಾದ

  1. ಶ್ರೀಕೃಷ್ಣಚರಿತ್ರ (ಬಂಗಾಳಿಯ ನವೀನಚಂದ್ರ ಸೇನರ ಕೃತಿ )

ಇತರೆ ಕೃತಿಗಳು

  1. ಮೂರು ಉಪನ್ಯಾಸಗಳು
  2. ಗೋವಿಂದ ಪೈ ಅವರ ಕೆಲವು ಪತ್ರಗಳು
  3. ಗೀತಾಂಜಲಿ

ಗೌರವ/ಪುರಸ್ಕಾರ

ಗೋವಿಂದ ಪೈಯವರ ಹೆಸರಿನ ಸಂಸ್ಥೆಗಳು

  1. ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ.
  2. ಗಿಳಿವಿಂಡು ಮಂಜೇಶ್ವರ
  3. ಗೋವಿಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೇಶ್ವರ

ವಿದಾಯ

೧೯೬೩ಸೆಪ್ಟೆಂಬರ್ ೦೬ ರಂದು ಗೋವಿಂದ ಪೈಯವರು ನಿಧನರಾದರು.

ಹೆಚ್ಚಿಗೆ ಓದಲು

ಗೋವಿಂದ ಪೈ ಯವರ ಮನೆ ಈಗಿನ‌ ಸ್ವರೂಪ
ಗೋವಿಂದ ಪೈ ಯವರ ಮನೆಯ ೩೦ ವರ್ಷಗಳ ಹಿಂದಿನ ಸ್ವರೂಪ

ಉಲ್ಲೇಖಗಳು

  1. ವೆಂಕಟ ಮಾಧವರಾವ್ ಇನಾಂದಾರ್: "ಗೋವಿಂದ ಪೈ"
  2. ೨.೦ ೨.೧ ಉಲ್ಲೇಖ ದೋಷ: Invalid <ref> tag; no text was provided for refs named ಭಟ್ ಭಟ್ 1993
  3. [http: //bavivekrai. wordpress. com/ 2012/ 01/ 19/m-govinda-paia-kannada-scholar-poet-an-indian-image-of-universal-religion/ "M.Govinda Pai:A Kannada Scholar-Poet ,an Indian Image of Universal Religion"]. {{cite news}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  4. "Rashtrakavi M. Govind Pai".

ಬಾಹ್ಯ ಸಂಪರ್ಕಗಳು