ವಿಷಯಕ್ಕೆ ಹೋಗು

ಘಿಯಾಸ್-ಉದ್-ದೀನ್ ಖಲ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಘೀಯತ್ ಷಾ ಊಟ ಮಾಡುತ್ತಿರುವುದು (ನಿಮತ್‍ನಾಮಾ-ಇ-ನಾಸಿರುದ್ದೀನ್-ಷಾಹಿ ಇಂದ)

ಘಿಯಾಸ್-ಉದ್-ದೀನ್ ಖಲ್ಜಿ (ಆಳ್ವಿಕೆ: 1469-1500[]) ಮಾಳವದ ಖಲ್ಜಿ ಸುಲ್ತಾನ ಸಂತತಿಯ ಸ್ಥಾಪಕನಾದ ಮಹಮದನ ಹಿರಿಯ ಮಗ, ಆ ವಂಶದ ಎರಡನೆಯ ಸುಲ್ತಾನ.[]

ಆಳ್ವಿಕೆ

[ಬದಲಾಯಿಸಿ]

ತಂದೆ ಸತ್ತ ಎರಡು ದಿನಗಳ ಅನಂತರ (1469 ಜೂನ್ 3 ರಂದು) ಸಿಂಹಾಸನವನ್ನೇರಿದ.[] ಸುಲ್ತಾನನಾದ ಕೂಡಲೇ ಒಂದು ಹೇಳಿಕೆಯಿತ್ತು ತನ್ನ ರಾಜ್ಯದ ನೆರೆಹೊರೆಯವರೊಡನೆ ಶಾಂತಿ ಮತ್ತು ಸ್ನೇಹದಿಂದಿರುವುದೇ ತನ್ನ ದೃಢ ಧ್ಯೇಯವೆಂದೂ, ಪ್ರಾಪಂಚಿಕ ಸುಖವನ್ನು ಅನುಭವಿಸುವುದೇ ತನ್ನ ಜೀವನದ ಗುರಿಯೆಂದೂ ಸಾರಿದ. ಶಾಂತಿ ನೀತಿಯನ್ನು ಈತ ಎಷ್ಟರಮಟ್ಟಿಗೆ ಪಾಲಿಸಿದನೆಂದರೆ, ಒಂದು ಸಲ ಬಹಲೂಲ್ ಲೋದಿ ಪಾಲಂಪುರದ ಮೇಲೆ ಆಕ್ರಮಣ ನಡೆಸಿದಾಗ ಘಿಯಾಸ್-ಉದ್-ದೀನ್ ಅದನ್ನು ತಡೆಗಟ್ಟಲು ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಅವನ ಮಂತ್ರಿಗಳು ಅವನಿಗೆ ಸುಲ್ತಾನನ ಕರ್ತವ್ಯಗಳನ್ನು ಮನವರಿಕೆ ಮಾಡಿಕೊಡಬೇಕಾಯಿತು. ಆಗಲೂ ಆತ ಸ್ವತಃ ಸೈನ್ಯದ ನಾಯಕತ್ವ ವಹಿಸದೆ, ತನ್ನ ಸೈನ್ಯಾಧಿಕಾರಿಗಳನ್ನು ಯುದ್ಧಕ್ಕೆ ಕಳುಹಿಸಿಕೊಟ್ಟ.

ತನ್ನ ತಂದೆಯಂತೆ ಇವನೂ ತೀವ್ರ ಮತಾಭಿಮಾನವುಳ್ಳವನಾಗಿದ್ದ. ಈ ವಿಚಾರದಲ್ಲಿ ತಂದೆಯನ್ನೂ ಮೀರಿಸಿದ್ದ. ಒಂದು ಸಾರಿ ಗುಜರಾತಿನ ಸುಲ್ತಾನ ಮಹಮದ್ ಬೇಗಾರ ಚಂಪಾನೇರ್ ಕೋಟೆಯನ್ನು ಮುತ್ತಿದಾಗ, ಅಲ್ಲಿಯ ಜನ ಘಿಯಾಸ್-ಉದ್-ದೀನನ ಸಹಾಯವನ್ನು ಕೋರಿದರು. ಆಗ ಈತ ಸ್ವಧರ್ಮೀಯನಾದ ಬೇಗಾರನನ್ನು ಎದುರಿಸಿ ಹೋರಾಡುವುದೂ, ಕಾಫಿರರಿಗೆ ಸಹಾಯ ಮಾಡುವುದೂ ತನ್ನ ಧರ್ಮಕ್ಕೆ ವಿರುದ್ಧವೆಂದು ಹೇಳಿ ಅವರಿಗೆ ಸಹಾಯ ಮಾಡಲಿಲ್ಲ. ಹೀಗೆ ಈತ ಮಾಳವದ ಸುಲ್ತಾನರು ಹಿಂದಿನಿಂದ ಅನುಸರಿಸುತ್ತಿದ್ದ ನೀತಿಯನ್ನು ಬದಲಾಯಿಸಿ, ಅದುವರೆಗೂ ಅಭೇದ್ಯವಾಗಿದ್ದ ಚಂಪಾನೇರ್ ಕೋಟೆ ಗುಜರಾತಿನ ಸುಲ್ತಾನನ ವಶವಾಗಲು ಅವಕಾಶ ಮಾಡಿಕೊಟ್ಟ.

ಈತ ಶಾಂತಿಪ್ರಿಯನೆಂದು ಹೇಳಿಕೊಂಡರೂ ಚಿತ್ತೂರಿನ ಮೇಲೆ ಎರಡು ಸಾರಿ ದಂಡೆತ್ತಿ ಹೋದನೆಂದೂ, ಆದರೆ ಎರಡು ಬಾರಿಯೂ ಸೋತನೆಂದೂ ಹೇಳಲಾಗಿದೆ.

ಘಿಯಾಸ್-ಉದ್-ದೀನ್ ತನ್ನ ಆಳ್ವಿಕೆಯ ಪ್ರಾರಂಭದಲ್ಲಿಯೇ ಆಡಳಿತ ಸೂತ್ರವನ್ನು ಮಗನಾದ ನಾಸಿರ್-ಉದ್-ದೀನನಿಗೆ ವಹಿಸಿಕೊಟ್ಟು[] ತನ್ನ ಕಾಲವನ್ನೆಲ್ಲ ಜನಾನಾದಲ್ಲಿಯೇ ಕಳೆದ. ಈತ ವಿಷಯಲೋಲುಪನಾದರೂ ಧಾರ್ಮಿಕ ಶ್ರದ್ಧೆಯುಳ್ಳವನಾಗಿದ್ದ. ದೈನಂದಿನ ಪ್ರಾರ್ಥನೆಯನ್ನು ತಪ್ಪಿಸುತ್ತಿರಲಿಲ್ಲ. ಮದ್ಯವೇ ಮುಂತಾದ ನಿಷಿದ್ಧ ಪಾನೀಯಗಳನ್ನೂ, ಆಹಾರಗಳನ್ನೂ ತೆಗೆದುಕೊಳ್ಳುತ್ತಿರಲಿಲ್ಲ.[] ಇಷ್ಟಾದರೂ ಈತ ಪೆದ್ದ ದೊರೆಯೆಂದೇ ಹೇಳಲಾಗಿದೆ. ಇವನು ತನ್ನ ದಡ್ಡತನವನ್ನು ಅನೇಕ ಬಾರಿ ತೋರಿಸಿ, ಮೋಸಗಾರರ ಕೈಗೊಂಬೆಯಾದ.

ಘಿಯಾಸ್-ಉದ್-ದೀನನ ಆಳ್ವಿಕೆಯ ಕೊನೆಯ ದಿನಗಳು ಸುಖಮಯವಾಗಿರಲಿಲ್ಲ. ಸುಲ್ತಾನ್ ಪದವಿಗಾಗಿ ಅವನ ಮಕ್ಕಳಾದ ನಾಸಿರ್-ಉದ್-ದೀನ್ ಮತ್ತು ಅಲಾ-ಉದ್-ದೀನ್ ಹೋರಾಟ ನಡೆಸಿದರು. ಈ ಕಲಹದಲ್ಲಿ ಘಿಯಾಸ್-ಉದ್-ದೀನನ ಪ್ರಿಯ ರಾಣಿ ಕುರ್ಷಿದ್ ಅಲ್ಲಾ-ಉದ್-ದೀನನಿಗೆ ಬೆಂಬಲವಿತ್ತಳು. ನಾಸಿರ್-ಉದ್-ದೀನ್ ಅಲಾ-ಉದ್-ದೀನನನ್ನು ಕೊಂದು ಕುರ್ಷಿದಾಳನ್ನು ಬಂಧಿಸಿ, 1500 ರ ಅಕ್ಟೋಬರ್ 22ರಂದು ಮಾಳವದ ಸುಲ್ತಾನನಾದ. ಇದರಿಂದ ಘಿಯಾಸ್-ಉದ್-ದೀನನಿಗೆ ಯಾವ ತೊಂದರೆಯೂ ಆಗದಿದ್ದರೂ ಇವನು ಆ ಮಾನಸಿಕ ಯಾತನೆಯನ್ನು ತಡೆಯಲಾರದೆ 1501 ರ ಫೆಬ್ರವರಿ 28 ರಂದು ಮರಣ ಹೊಂದಿದ. ಸಿಂಹಾಸನಕ್ಕಾಗಿ ಹೋರಾಟ ನಡೆದ ಅನಂತರ ಸ್ವಲ್ಪ ಕಾಲದಲ್ಲೇ ಇವನು ತೀರಿಕೊಂಡಿದ್ದರಿಂದ ನಾಸಿರ್-ಉದ್-ದೀನನೇ ಇವನಿಗೆ ವಿಷ ಕೊಟ್ಟು ಸಾಯಿಸಿದನೆಂದು ಭಾವಿಸಿದ್ದರು.[]

ಉಲ್ಲೇಖಗಳು

[ಬದಲಾಯಿಸಿ]
  1. John Andrew Allan and Henry Herbert Dodwell, The Cambridge Shorter History of India (Cambridge: Cambridge University Press, 1936) p. 307
  2. Day, Upendra Nath (1965). Medieval Malwa, A Political and Cultural History, 1401-1562. New Delhi: Munshi Ram Manohar Lal.
  3. Singh, Nagendra Kr; Singh, Nagendra Kumar (2000). International Encyclopaedia of Islamic Dynasties. New Delhi: Anmol Publications. ISBN 978-8126104031.
  4. Firishta, Mahomed Kasim (1829). History of the Rise of the Mahometan Power in India, till the year A.D. 1612, Volume IV. Translated by Briggs, John. London: Longman, Rees, Orme, Brown and Green. pp. 236–239.
  5. Ghosh, Suresh Chandra (2001). History of Education in India. Delhi: Low Price Publications. p. 81. ISBN 978-8175361935.
  6. Allan, John Andrew; Dodwell, Henry Herbert (1936). The Cambridge Shorter History of India. Cambridge: Cambridge University Press. p. 307.