ವಿಷಯಕ್ಕೆ ಹೋಗು

ಚಂಡೀದಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾನೂರ್‌ನಲ್ಲಿ ಚಂಡೀದಾಸ ಭಿಟಾಗೆ ದಾರಿ

ಬಂಗಾಳೀ ಸಾಹಿತ್ಯದಲ್ಲಿ ಕೃಷ್ಣಭಕ್ತಿಯ ರಸವನ್ನು ಹರಿಸಿದ ಅಮರಕವಿಗಳಲ್ಲಿ ಚಂಡೀದಾಸನ ಹೆಸರು ಮೊದಲಿಗೆ ಬರುತ್ತದೆ. ಈತನ ಕಾಲ ಸುಮಾರು 15ನೆಯ ಶತಮಾನ. ಕವೀಂದ್ರ ರವೀಂದ್ರನಾಥ ಠಾಕೂರರು ಈತನಿಂದ ತಮ್ಮ ಕಾವ್ಯರಚನೆಗೆ ಒದಗಿದ ಸ್ಫೂರ್ತಿಯನ್ನು ನೆನೆದಿದ್ದಾರೆ.

ಚಂಡೀದಾಸನೆಂಬ ವಿಭಿನ್ನ ವ್ಯಕ್ತಿಗಳು

[ಬದಲಾಯಿಸಿ]

ಹಾಗೆ ನೋಡಿದರೆ ಬಂಗಾಳಿಯಲ್ಲಿ ಚಂಡೀದಾಸ ಎಂಬ ಹೆಸರಿನ ಮೂವರು ಕವಿಗಳನ್ನು ಗುರುತಿಸಬಹುದು.[] ಅವರಲ್ಲಿ ಒಬ್ಬ ಅನಂತ ಬಡು ಚಂಡೀದಾಸ (ಸುಮಾರು ಹದಿನಾಲ್ಕನೆಯ ಶತಮಾನ). ಶ್ರೀಕೃಷ್ಣ ಚೈತನ್ಯರಿಗಿಂತ ಈತ ಸ್ವಲ್ಪ ಹಿಂದಿನವ. ಮೈಥಿಲೀ ಕವಿ ದಾರ್ಶನಿಕ ವಿಷ್ಣುಸ್ವಾಮಿ ಈತನಿಗೆ ಪರಿಚಿತನೆಂದು ತೋರುತ್ತದೆ. ಬಂಗಾಳಿಯ ಚರ್ಯಾ ಪದಗಳನ್ನು ಬಿಟ್ಟರೆ ಉಳಿದ ಈತನ ಕೃತಿಗಳ ಭಾಷೆ ಪುರಾತನ ಬಂಗಾಳಿ. ಶ್ರೀಕೃಷ್ಣಸಂಕೀರ್ತನ, ಶ್ರೀಕೃಷ್ಣಭಕ್ತಿ ಈತನ ಇಪ್ಪತ್ತನಾಲ್ಕು ಪದಗಳ ವಸ್ತು. ಎರಡನೆಯವನೇ ದ್ವಿಜ ಚಂಡೀದಾಸ. ಈತ ಚೈತನ್ಯರ ಅನಂತರ ಬಂದವ ಇಲ್ಲವೆ ಅವರ ಕಿರಿಯ ಸಮಕಾಲೀನ. ರಾಧಾಕೃಷ್ಣರ ಪ್ರೇಮವೇ ಈತನ ಪದಗಳ ಮುಖ್ಯವಸ್ತು. ಮಧ್ಯಕಾಲೀನ ಬಂಗಾಳದ ಪ್ರಸಿದ್ಧ ಕವಿಗಳಲ್ಲಿ ಈತನ ಹೆಸರು ಪ್ರಮುಖ ಸ್ಥಾನ ಪಡೆದಿದೆ.

ಮೂರನೆಯ ಚಂಡೀದಾಸ ಶಾಕ್ತಪಂಥದ ಭಾವುಕ ಕವಿ, ದಾಸಕವಿ. ಪ್ರಚಲಿತ ಪ್ರತೀತಿಯೊಂದರ ಪ್ರಕಾರ ಈತನ ತಂದೆ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ಹಳ್ಳಿಯೊಂದರ ಚಂಡೀಮಾತೆಯ ಪೂಜಾರಿ. ಬೆಳೆಬೆಳೆಯುತ್ತ ಆವೇಶ ಬಂದವನಂತೆ, ಭಾವೋನ್ಮತ್ತನಂತೆ ವರ್ತಿಸುತ್ತಿದ್ದ. ಲೋಕ ಇವನನ್ನು ಹುಚ್ಚನೆಂದು ಭಾವಿಸಿತ್ತು.

ಒಮ್ಮೆ ಈತ ನದಿಯ ಪಕ್ಕದಲ್ಲಿ ಅಡ್ಡಾಡುತ್ತಿದ್ದಾಗ, ಬಟ್ಟೆಯೊಗೆಯುತ್ತಿದ್ದ ರಾಮೀ (ತಾರಾ) ಎಂಬ ಅಗಸರ ಹೆಣ್ಣೊಬ್ಬಳಲ್ಲಿ ಅನುರಕ್ತನಾದ. ಪರಿಣಾಮವಾಗಿ ಈತನಿಗೆ ಜಾತಿಯಿಂದ ಬಹಿಷ್ಕಾರವಾದದ್ದಲ್ಲದೆ ಅರ್ಚಕ ಹುದ್ದೆಯೂ ತಪ್ಪಿತು. ಆ ಬಾಂಧವ್ಯವನ್ನು ತ್ಯಜಿಸಿ ಮತ್ತೆ ಸಮಾಜ ಪ್ರವೇಶ ಮಾಡುವ ಬಯಕೆ ಚಂಡೀದಾಸನಿಗೆ ಆಗಲಿಲ್ಲ. ಲೋಕದ ಮಲ ತೊಳೆದು ಮಡಿ ಮಾಡಿಕೊಡುತ್ತಿದ್ದ ಆ ರಾಮಿ ಚಂಡೀದಾಸನಿಗೆ ತಾರಾ ಮಾತೆಯಂತೆ, ಜಗನ್ಮಾತೆ ಚಂಡಿಯಂತೆ ಕಂಡಳು. ಅವನೂರಿನ ಪಂಡಿತರಿಗಿಂತ ಆಕೆ ಎಷ್ಟೋ ಪಾಲು ಮಡಿವಂತೆಯಾಗಿ, ಪಾವನೆಯಾಗಿ ತೋರಿದಳು. ಭಾವಾವೇಶದಿಂದ ಚಂಡೀಮಾತೆಯನ್ನು ಆಶುಗೀತೆಗಳಿಂದ ಸ್ತೋತ್ರಗೈಯುತ್ತ ಬೀದಿ ಬೀದಿ ಅಲೆಯುತ್ತಿದ್ದ ಈ ಸಾಮಾನ್ಯ ಜನತಾಕವಿ ದೀನ ಚಂಡೀದಾಸನಾದ, ದಾಸಕವಿಯಾದ. ಈತನ ಪ್ರಸಿದ್ಧಿ ಸಮಾಜದ ಎಲ್ಲ ಸ್ತರಗಳಿಗೂ ವಿಸ್ತರಿಸಿತು. ಗೌಡ ದೇಶದ ರಾಣಿ ಈತನ ಭಕ್ತಿಗೀತೆಗಳಿಂದ ಆಕೃಷ್ಟಳಾಗಿ ಈತನ ಬೆನ್ನು ಹತ್ತಿದ್ದಳು. ರಾಣಿಯ ಮನವೊಲಿಸಿಕೊಳ್ಳಲಾರದ ರಾಜ ಈತನಿಗೆ ಹೇಳಬಾರದ ಕಿರುಕುಳವಿತ್ತ. ಕೊನೆಗೆ ಆನೆಯ ಕಾಲಿಗೆ ಕಟ್ಟಿಸಿ, ಎಳೆಸಿ ಕೊಲ್ಲಿಸಿದ.

ಹೀಗೆ ಮೂರು ಜನ ಚಂಡೀದಾಸರೂ ಬೇರೆಬೇರೆ ಕಾಲದಲ್ಲಿದ್ದರೂ ಅವರ ರಾಧಾಕೃಷ್ಣಪ್ರೇಮ, ಶ್ರೀಕೃಷ್ಣನಾಮಸಂಕೀರ್ತನ, ಶ್ರೀಚಂಡೀಮಾತಾಗೀತೆಗಳು, ಸಾಮಾನ್ಯತಃ ದೈವಭಕ್ತಿಪ್ರೇರಕಗಳಾಗಿದ್ದುದರಿಂದ, ಜನಸಾಮಾನ್ಯರಲ್ಲಿ ಸಮಾನ ಪ್ರೀತ್ಯಾದರಗಳನ್ನು ಗಳಿಸಿಕೊಂಡು ಅವರ ನಾಲಗೆಯಲ್ಲಿ ನಲಿಯುತ್ತ ಉಳಿದು ಬಂದುವು. ಇಂದು ಚಂಡೀದಾಸಕೃತವೆಂದು ಪ್ರಸಿದ್ಧವಾಗಿರುವ ಒಂದು ಸಾವಿರದ ಎರಡು ನೂರು ಪದಗಳಲ್ಲೂ ಈ ಮೂರು ಭಕ್ತಿ ಸ್ರೋತಸ್ಸುಗಳೂ ಒಂದಾಗಿ ಪ್ರವಹಿಸುವುದನ್ನು ಕಾಣಬಹುದು. ಹಾಗಾಗಿ ಇವೆಲ್ಲ ಒಂದೇ ಆಗಿದ್ದು ಒಬ್ಬ ಚಂಡೀದಾಸನ ಕೃತಿಗಳಾಗಿವೆ.[][]

ಶ್ರೀಕೃಷ್ಣಕೀರ್ತನ

[ಬದಲಾಯಿಸಿ]

ಸಂಸ್ಕೃತದಲ್ಲಿ ಜಯದೇವ ಕವಿ ರಚಿಸಿದ ಗೀತ ಗೋವಿಂದ ಬಂಗಾಳೀ ಸಾಹಿತ್ಯದಲ್ಲಿ ಹೊಸದೊಂದು ಕಾವ್ಯಪರಂಪರೆಯೇ ಹುಟ್ಟಲು ಕಾರಣವಾಯಿತೆನ್ನಬಹುದು. ರಾಧೆ-ಮಾಧವರ ಪ್ರಣಯ ಶೃಂಗಾರ ರಸದ ಪರಾಕಾಷ್ಠೆಯ ಪ್ರತೀಕವಷ್ಟೇ ಅಲ್ಲ; ಭಕ್ತನಿಗೆ ಭಗವಂತನಲ್ಲಿರುವ ಮಧುರ ಭಕ್ತಿಯ ಪರಮೋಚ್ಚ ಪ್ರತೀಕವೂ ಹೌದೆನ್ನುವ ವೈಷ್ಣವ ಕವಿಸಂಪ್ರದಾಯ ಬಂಗಾಳಿಯಲ್ಲಿ ರೂಢಮೂಲವಾಗಲು ಚಂಡೀದಾಸ ರಚಿಸಿದ ಶ್ರೀಕೃಷ್ಣಕೀರ್ತನ ಮುಂತಾದ ಗೇಯ ಕೃತಿಗಳೂ, ಹಾಡುಗಳೂ ಬಹುಮಟ್ಟಿಗೆ ಕಾರಣವಾದವು. ಶ್ರೀಕೃಷ್ಣಕೀರ್ತನವು, ಹೆಸರೇ ಸೂಚಿಸುವಂತೆ, ಕೃಷ್ಣ ಮತ್ತು ಅವನ ಸ್ನೇಹಿತೆಯಾದ ರಾಧೆಯ ಕಥೆಯನ್ನು ಹೇಳುತ್ತದೆ.[] ಇವನ ಹಾಡುಗಳನ್ನು ಭಣಿತಗಳೆಂದು ಕರೆಯುವ ವಾಡಿಕೆ ಇದೆ. ಈ ಕೃತಿಗಳಲ್ಲಿ ಕಥಾಭಾಗ ಕಡಿಮೆ; ನಾಟಕೀಯವಾಗಿ ಮೂರೇ ಪಾತ್ರಗಳು-ರಾಧೆ, ಕೃಷ್ಣ, ಮುದುಕಿ. ಸುಂದರವಾದ ದೇಸೀ ಛಂದಸ್ಸಿನ ತಾಳಲಯಬದ್ಧ ಹಾಡುಗಳ ಮೂಲಕ ಅವು ಪ್ರೇಮೋನ್ಮಾದದ ವಿವಿಧ ಅವಸ್ಥೆಗಳನ್ನು ಸೂಚಿಸುತ್ತವೆ. ಇಲ್ಲಿ ಪೌರಾಣಿಕವಾದ ಪ್ರತಿಪಾದನೆಯ ಸ್ಥಾನದಲ್ಲಿ ನಿತ್ಯ ಜನಜೀವನದ ಛಾಯೆ ತಾನೇತಾನಾಗಿ ಮರೆಯುತ್ತದೆ. ಕೃಷ್ಣ ಪರನಾರಿಯಾದ ರಾಧೆಯನ್ನು ವಶೀಕರಿಸಿಕೊಳ್ಳಲು ಬೆಸ್ತನಾಗುತ್ತಾನೆ. ಸುಂಕದ ಅಧಿಕಾರಿಯಾಗುತ್ತಾನೆ, ವೇಷಾಂತರಗಳನ್ನು ತಳೆಯುತ್ತಾನೆ, ಕಡೆಗೆ ವಿರಹದಿಂದ ವಿಹ್ವಲೆಯಾದ ರಾಧೆಯ ಕರುಣಾಜನಕ ಚಿತ್ರ ಬರುತ್ತದೆ.

ಚಂಡೀದಾಸ ದಕ್ಷಿಣಾಪಥಕ್ಕೆ ಬಂದಾಗ ವಿಜಯನಗರದ ರಾಜಾಸ್ಥಾನಕ್ಕೂ ಭೇಟಿಯಿತ್ತು ರಮಾನಂದರಾಯನನ್ನು ಭಕ್ತಿಪಂಥಕ್ಕೆ ತಿರುಗಿಸಿದನೆಂದೂ ಒಂದು ಐತಿಹ್ಯವಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Devnath, Samaresh. "Baḍu Chandidas". Banglapedia. Retrieved 10 November 2023.
  2. Sen, Prof. Dinesh Chandra. History of Bengali Language And Literature. pp. 44, 45, 46, 47, 48.
  3. Ray, Lila. Bengali Literature. p. 11.
  4. Bhowmik, Dulal (2012). "Srikrishnakirtan". In Islam, Sirajul; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚಂಡೀದಾಸ&oldid=1300455" ಇಂದ ಪಡೆಯಲ್ಪಟ್ಟಿದೆ