ಚಂದಿಮರಸ
ಚಂದಿಮರಸ ಎನ್ನುವವನು ಒಬ್ಬ ವಚನಕಾರ.[೧][೨] ಗುಲ್ಬರ್ಗ ಜಿಲ್ಲೆಯ ಕೆಂಭಾವಿಯಲ್ಲಿ ಅರಸನಾಗಿದ್ದ.
ಜೀವನ
[ಬದಲಾಯಿಸಿ]ಕಾಲ ಸು. 1020.
ಜೇಡರ ದಾಸಿಮಯ್ಯನಿಗಿಂತ ಹಿಂದೆ ಇದ್ದಿರಬೇಕೆಂದು ಡಿ.ಎಲ್. ನರಸಿಂಹಾಚಾರ್ಯರ ಅಭಿಪ್ರಾಯ. ಈತ ಬ್ರಾಹ್ಮಣರ ಚಾಡಿ ಮಾತುಗಳನ್ನು ಕೇಳಿ ಭೋಗಣ್ಣನೆಂಬ ಶರಣನನ್ನು ಊರಿನಿಂದ ಓಡಿಸಿದನೆಂದೂ, ಆತನ ಹಿಂದೆಯೇ ಆ ಊರಿನ ಲಿಂಗಗಳೆಲ್ಲ ಹಾರಿಹೋಗಲು ರಾಜ ಆ ಶರಣನನ್ನು ಹಿಂದಕ್ಕೆ ಕರೆಸಿ ತಾನು ವೀರಶೈವ ಧರ್ಮವನ್ನು ಸ್ವೀಕರಿಸಿ, ರಾಜ್ಯಕೋಶಗಳನ್ನು ತೊರೆದು, ಕೃಷ್ಣಾ ನದೀ ತೀರದ ಚಿಮ್ಮಲಿಗೆಯಲ್ಲಿ ವಾಸಿಸುತ್ತಿದ್ದ ನಿಜಗುಣನಿಂದ ದೀಕ್ಷೆ ಪಡೆದು ತಾನೂ ಗುರುವಿನಂತೆ ವಚನಕಾರನಾಗಿ ಧರ್ಮ ಪ್ರಸಾರ ಕೈಗೊಂಡು ಚಿಮ್ಮಲಿಗೆಯಲ್ಲಿಯೇ ಸಮಾಧಿಸ್ಥನಾದನೆಂದೂ ಪ್ರತೀತಿ. ಚಿಮ್ಮಲಿಗೆಯಲ್ಲಿ ಈತನ ಹೆಸರಿನ ಒಂದು ಗುಡಿ ಇಂದಿಗೂ ಇದೆ. ಘನಲಿಂಗ ಈತನನ್ನು ಮಹಾತ್ಮನೆಂದು ತನ್ನ ವಚನಗಳಲ್ಲಿ ಹಾಡಿದ್ದಾನೆ.
ಈತನ ಅಂಕಿತ ಸಿಮ್ಮಲಿಗೆಯ ಚೆನ್ನರಾಮ ಎಂದಿದೆ. ಈಗ ದೊರೆತಿರುವ ಒಂದು ಪ್ರತಿಯಲ್ಲಿ ಈ ಅಂಕಿತ ಚಂದಿಮರಸನಿಗೆ ಸೇರಿದ್ದೆಂದೂ, ಯಲಹಂಕ ನಾಡಪ್ರಭು ಮುಮ್ಮಡಿ ಕೆಂಪಯ್ಯಗೌಡರ (1661) ಕಾಲದಲ್ಲಿ ಬರೆದದ್ದೆಂದು ಹೇಳಲಾದ ಇನ್ನೊಂದು ಪ್ರತಿಯಲ್ಲಿ ಈ ಅಂಕಿತ ಚಿಮ್ಮಲಿಗೆಯ ಚಂದಯ್ಯನಿಗೆ ಸೇರಿದ್ದೆಂದೂ ಹೇಳಲಾಗಿದೆ. ಈತನ ವಚನಗಳು ಶ್ರೇಷ್ಠತರವಾದುವೆಂದೂ, ಈತನ ವಚನಗಳನ್ನು ಉದಾಹರಿಸದ ಯಾವ ವಚನ ಸಂಗ್ರಹಕಾರನೂ ಇಲ್ಲವೆಂದೂ ಹಳಕಟ್ಟಿಯವರ ಅಭಿಪ್ರಾಯ.
ವಚನಗಳು
[ಬದಲಾಯಿಸಿ]ಈತನ 15 ವಚನಗಳು ದೊರೆತಿವೆ. ಅವುಗಳಲ್ಲಿ ಎರಡು ಹೀಗಿವೆ.
ಸಂಸಾರವೆಂಬತ್ತೆಗೆ ನಿರ್ಬುದ್ಧಿ ಸೊಸೆಯೊಬ್ಬಳು;
ಅಟ್ಟುಂಡೆನೆಂದು ಒಲೆಯ ಬೂದಿಯ ತೋಡುವ ತನಕ
ಒಳಗೊಂದು ಕಿಡಿಯಿರ್ದು ಕೈಬೆಂದು ಮೞುಗುವಂತಾಯಿತ್ತಲ್ಲಾ ಎನಗೆ;
ನಿಸ್ಸಂಗತಿಯ ಒಡಲೊಲೆಯ ಬೂದಿಯ ಕೆದೞು ವನಕ
ಒಳಗೊಂದು ಸುಜ್ಞಾನವೆಂಬ ಕಿಡಿಯಿರ್ದು ಎನ್ನ ಮನಬೆಂದು ಹೃದಯದಲ್ಲಿ ಮಱುಗುತ್ತಿದ್ದೇನೆ.
ಇದಕ್ಕೆ ಸೀತಾಳಮಂತ್ರ ಉಂಟೆ ಅಯ್ಯ. ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ನಿಜಗುಣಶರಣೆಂಬುದೆ ಮಂತ್ರ.
ಇಂದುವಿನ ಬೆಳಗಿನಿಂದ ಇಂದುವನು, ಭಾನುವಿನ ಬೆಳಗಿನಿಂದ ಭಾನುವನು,
ದೀಪದ ಬೆಳಗಿನಿಂದ ದೀಪವನು ಕಾಂಬಂತೆ ತನ್ನ ಬೆಳಗಿನಿಂದ ತನ್ನನೆ ಕಂಡುನಿಂದ ನಿಲವು ತಾನೆ ಸಿಮ್ಮಲಿಗೆಯ ಚೆನ್ನರಾಮ.
ಉಲ್ಲೇಖಗಳು
[ಬದಲಾಯಿಸಿ]