ವಿಷಯಕ್ಕೆ ಹೋಗು

ಚಂದ್ರಕವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂದ್ರಕವಿ ಎನ್ನುವವನು ವಿಜಯನಗರದ ಅರಸ ಪ್ರೌಢದೇವರಾಯನ (1419-1446) ಆಸ್ಥಾನದಲ್ಲಿದ್ದ ಕವಿ.[] ಈತನಿಗೆ ಚಂದ್ರಶೇಖರ ಎಂಬ ಹೆಸರೂ ಇದೆ.

ಕವಿಯ ಕಾಲ ಕ್ರಿ.ಶ. ಸು. 1430. ವೀರಶೈವ ಮತಕ್ಕೆ ಸೇರಿದವ. ಈತ ಅಷ್ಟಭಾಷೆಗಳಲ್ಲಿ ಪ್ರವೀಣನಾಗಿದ್ದನೆಂದು ತಿಳಿದುಬರುತ್ತದೆ. ತನ್ನ ಗ್ರಂಥಗಳ ಆರಂಭದಲ್ಲಿ ಆಶ್ರಯದಾತನಾದ ಪ್ರೌಢದೇವರಾಯನನ್ನೂ, ಮಹಾಪ್ರಧಾನನಾದ ಗುರುರಾಯನನ್ನೂ ಸ್ತುತಿಸಿದ್ದಾನೆ. ತನ್ನನ್ನು ವಚಸ್ಸುಧಾಸಾಗರ, ಕವೀಶ್ವರ ಎಂದು ಸಂಬೋಧಿಸಿಕೊಂಡಿದ್ದಾನೆ.

ಕೃತಿಗಳು

[ಬದಲಾಯಿಸಿ]

ಈತ ಪಂಪಾ ವಿರೂಪಾಕ್ಷಾಸ್ಥಾನ ವರ್ಣನೆ, ಗುರುಮೂರ್ತಿಶಂಕರ ಶತಕ ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ಇವು ಗಾತ್ರದಲ್ಲಿ ಕಿರಿದಾದರೂ ಕವಿತಾಪ್ರೌಢಿಮೆಯಲ್ಲಿ ಹಿರಿದಾಗಿವೆ.

ಪಂಪಾ ವಿರೂಪಾಕ್ಷಸ್ಥಾನವರ್ಣನೆ

[ಬದಲಾಯಿಸಿ]

ಪಂಪಾ ವಿರೂಪಾಕ್ಷಾಸ್ಥಾನವರ್ಣನೆ ಒಂದು ಚಂಪೂಕಾವ್ಯ. ಹಂಪೆಯ ವಿರೂಪಾಕ್ಷನ ಆಸ್ಥಾನವನ್ನು ವರ್ಣಿಸುತ್ತದೆ. ಇದರಲ್ಲಿ 61 ಪದ್ಯಗಳೂ, 34 ವಚನಗಳೂ ಇವೆ. ಕಾವ್ಯಾರಂಭದಲ್ಲಿ ಹಂಪೆಯ ವಿರೂಪಾಕ್ಷ, ಸಿದ್ಧಿವಿನಾಯಕ, ವಾಗ್ದೇವಿಯರ ಪ್ರಾರ್ಥನೆಯಾದ ಬಳಿಕ ಪ್ರೌಢದೇವರಾಯ ಮತ್ತು ಗುರುರಾಯರ ಸುತ್ತಿ ಇದೆ. ಕವಿ ಇದನ್ನು ಗುರುರಾಯನ ಆಣತಿಯಂತೆ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ಈ ಚಿಕ್ಕ ಕಾವ್ಯದಲ್ಲಿ ಈಶ್ವರನ ಆಸ್ಥಾನ ವರ್ಣನೆ ವಿಷಯವಾದರೂ ಅಷ್ಟಾದಶ ವರ್ಣನೆಯಿದ್ದು ಉಪಮೆ, ಉತ್ಪ್ರೇಕ್ಷೆ, ರೂಪಕ, ಅತಿಶಯೋಕ್ತಿ ಮೊದಲಾದ ಅಲಂಕಾರಗಳಿಂದ ಕೂಡಿ ಮನೋಹರವಾಗಿದೆ. ಕಥಾವಸ್ತುವೇ ಇಲ್ಲದೆ ಕೇವಲ ವರ್ಣನಾತ್ಮಕವಾಗಿರುವ ಈ ಕೃತಿಯನ್ನು ರಚಿಸಿರುವ ಈ ಕವಿ ನಿಜಕ್ಕೂ ಚತುರನೇ ಸರಿ.

ಗುರುಮೂರ್ತಿಶಂಕರಶತಕ

[ಬದಲಾಯಿಸಿ]

ಈತನ ಮತ್ತೊಂದು ಕೃತಿ ಗುರುಮೂರ್ತಿಶಂಕರಶತಕ ವೃತ್ತಗಳಲ್ಲಿದೆ. ಸಚಿವೇಂದ್ರನಾದ ಗುರುರಾಯನ ಆಜ್ಞಾನುಸಾರ ಭಕ್ತಿ ವಿರಕ್ತಿ ಮುಕ್ತಿಗಳಿಗೆ ಬೀಜವಾಗುವಂತೆ ಇದನ್ನು ರಚಿಸಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. ಕಾವ್ಯಾರಂಭದಲ್ಲಿ ಶಿವಸ್ತುತಿ ಇದೆ. ಈ ಶತಕದ ಪ್ರತಿವೃತ್ತವೂ ಗುರುಮೂರ್ತಿಶಂಕರ ಎಂದು ಮುಗಿಯುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Kotraiah in Sinopoli (2003), p. 131


ಗ್ರಂಥಸೂಚಿ

[ಬದಲಾಯಿಸಿ]
  • Sinopoli, Carla M. (2003) [2003]. The Political Economy of Craft Production: Crafting Empire in South India c. 1350-1650. New Delhi: Cambridge University Press. ISBN 0-521-82613-6.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: