ವಿಷಯಕ್ಕೆ ಹೋಗು

ಚರಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದು ನಿಂತ ಪೈರು ಹಾಗೂ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುವುದನ್ನು ಚರಗ ಎನ್ನುತ್ತಾರೆ.

ಚರಗ ಚೆಲ್ಲುವ ಆಚರಣೆ

[ಬದಲಾಯಿಸಿ]

ರೈತರು ತಾವು ಬೆಳೆದ ಬೆಳೆಗೆ ಸಂತೃಪ್ತಿ ಪಡಿಸಲು ಚರಗವನ್ನು ಚೆಲ್ಲುತ್ತಾರೆ. ದೇಶದ ಬೆನ್ನೆಲುಬಾದ ರೈತ ತನಗೆ ಎಷ್ಟೇ ಕಷ್ಟ ಬಂದರೂ ಕೆಲ ಸಂಪ್ರದಾಯಗಳನ್ನು ಇಂದಿಗೂ ತಪ್ಪದೇ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ.

ಇಲ್ಲಿ ರೈತರು ಹೊಲದಲ್ಲಿಯೇ ಅಡುಗೆಯನ್ನು ಮಾಡುತ್ತಾರೆ. ಅನ್ನ, ಸಾರು, ಹುಗ್ಗಿ, ಬದನೆಕಾಯಿ ಪಲ್ಯ ಇತ್ಯಾದಿಯನ್ನು ಮಾಡಿ ಹೊಲದ ತುಂಬ ಚೆಲ್ಲುತ್ತಾ ಭೂಮಿತಾಯಿಯನ್ನು ಶಾಂತಿ ಅಥವಾ ಸಂತೃಪ್ತಿಗೊಳಿಸಿ ಬೆಳೆಯನ್ನು ಅಥವಾ ಫಸಲನ್ನು ಹೆಚ್ಚಿಗೆ ನೀಡಲೆಂದು ಬೇಡಿಕೊಳ್ಳುತ್ತಾರೆ. ಕೆಲವರು ಮನೆಯಲ್ಲಿ ಅಡುಗೆಯನ್ನು ಮಾಡಿಕೊಂಡು ಬಂಡಿಯಲ್ಲಿ ತೆರಳುತ್ತಾರೆ. ಇನ್ನೊಂದು ವಿಶೇಷವೆಂದರೆ ಚರಗ ಚೆಲ್ಲುವಾಗ ಯಾರೊಬ್ಬರು ಮಾತನಾಡುವಂತಿಲ್ಲ. ಹೊಲಿಗ್ಯಾ ಹೊಲಿಗ್ಯಾ...ಎಂದು ಗದ್ದೆ ತುಂಬಾ ಚರಗವನ್ನು ಚೆಲ್ಲಿ ರೈತರು ಗದ್ದೆಯಲ್ಲಿ ಊಟ ಮಾಡಿ ಮನೆಗೆ ತೆರಳುತ್ತಾರೆ. ಚರಗಕ್ಕೆ ಕೆಲವರು ಸೀಮಂತ ಮಾಡುವುದು ಎಂದು ಕರೆಯುವರು. ರೈತನ ಬಂಧು ಬಳಗ ಎಲ್ಲರೂ ಚರಗದ ಆಚರಣೆಯಲ್ಲಿ ಪಾಲ್ಗೊಂಡು ಹೊಲದಲ್ಲಿ ಎಲ್ಲರೂ ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ.

ಜನಪದರ ಹಾಡು

[ಬದಲಾಯಿಸಿ]

ಚರಗ ಸಂಭ್ರಮಾಚರಣೆಯಲ್ಲಿ ಜನಪದರು ಈ ರೀತಿಯ ಹಾಡುಗಳನ್ನು ಸೊಗಸಾಗಿ ಹಾಡುತ್ತಾರೆ.

"ಎಳ್ಳ ಅಮವಾಸ್ಯೆ ಬಂದಿತೆವ್ವ

ಹೊಲಕ ಹೋಗುದಕ ಮತ್ತು

ಚರಗ ಚೆಲ್ಲುದಕ ಮುತ್ತೈದೆರೆಲ್ಲಾರು

ಕೂಡುದಕ ಮತ್ತು ಭೂಮಿತಾಯಿ ಪೂಜೆ ಮಾಡುದಕ


ಎಳ್ಳ ಅಮಾಸಿಗೇ ಎಣಿಗಡುಬು

ಕರಿದೇವ ಎಣಗಾಯೀ

ಎಳ್ಳಚ್ಚಿದ ರೊಟ್ಟಿ ತುಂಬೇವ ಕೆರಸ್ಯಾಗ

ಏರಿ ಹೊಲಕ ಎಲ್ಲರೂ ಚರಗ ಚೆಲ್ಲೇವ"


ಅಲ್ಲದೆ ಹೆಂಗಳೆಯರು ಪ್ರಾರ್ಥಿಸುತ್ತ ಈ ರೀತಿ ಆಶಿಸುತ್ತಾರೆ.


"ಹೊಲದಾನ ಕಾಳಮ್ಮ ಹೊರಗ ಹೋಗಲಿ ಬ್ಯಾಡ

ಸೀರಿ ತಂದೀನಿ ಉಡಲಾಕ| ನಾ ನಿನಗ

ದಂಡಿ ತಂದೀನಿ ಉಡಲಾಕ | ನಾ ನಿನಗ

ದಂಡಿ ತಂದೀನಿ ಮುಡಿಲಾಕ


ಹಸಿರುಟ್ಟ ಭೂತಾಯಿ

ಕೆಸರಲ್ಲೇ ಇರುವೋಳೆ

ಕಪ್ಪು ಮಣ್ಣಲ್ಲಿ ಕಾಣೋಳೆ

ಕಪ್ಪು ಮಣ್ಣಲ್ಲಿ ಕಾಣೋಳೆ ಭೂತಾಯಿ

ಸಾಲ ಹ್ಯಾಳೋ ಸಾವಿರ ಮಕ್ಕಳನ


ಉಲ್ಲೇಖ

[ಬದಲಾಯಿಸಿ]

೧. ಹೈದರಾಬಾದ್ ಕರ್ನಾಟಕದ ಕೃಷಿ ಆಚರಣೆಗಳು, ಡಾ. ತಾರಿಹಳ್ಳಿ ಹನುಮಂತಪ್ಪ, ಪ್ರಸರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.


"https://kn.wikipedia.org/w/index.php?title=ಚರಗ&oldid=1152338" ಇಂದ ಪಡೆಯಲ್ಪಟ್ಟಿದೆ