ಜಂಬುನಾಥ ಕಂಚ್ಯಾಣಿ
ಮಕ್ಕಳ ಸಾಹಿತ್ಯ ರಚಿಸಿದ ಕವಿಗಳ ಹಾದಿಯಲ್ಲಿಯೇ ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಜಂಬುನಾಥ ಕಂಚ್ಯಾಣಿಯವರು.
ಜನನ
[ಬದಲಾಯಿಸಿ]ಜಂಬುನಾಥ ಕಂಚ್ಯಾಣಿಯವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬೇವೂರ ಎಂಬಲ್ಲಿ. ತಂದೆ ಕಂಚ್ಯಾಣಿ ಶರಣಪ್ಪ, ಪ್ರಸಿದ್ಧ ಮಕ್ಕಳ ಸಾಹಿತಿಗಳು. ತಾಯಿ ಬಸವಂತೆವ್ವ.
ಶಿಕ್ಷಣ
[ಬದಲಾಯಿಸಿ]ಪ್ರಾರಂಭಿಕ ಶಿಕ್ಷಣ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ದಿಂಡವಾರ, ಪ್ರೌಢಶಾಲಾ ಶಿಕ್ಷಣ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯಲ್ಲಿ. ವಿಜಯಪುರದ ಕಾಲೇಜಿನಿಂದ ಬಿ.ಎಸ್ಸಿ., ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಹಾಗೂ ಎಂ.ಎ. ರಾಜ್ಯಶಾಸ್ತ್ರ ಪದವಿಗಳು. ಉದ್ಯೋಗಕ್ಕಾಗಿ ಸೇರಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ. ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ಸಾಹಿತ್ಯದ ಅಭಿರುಚಿ ಬೆಳೆದದ್ದು ತಂದೆಯಿಂದಲೇ. ಮನೆಯಲ್ಲಿ ಯಾವಾಗಲೂ ತಂದೆಯವರು ಮಕ್ಕಳಿಗಾಗಿ ಬರೆಯುತ್ತಿದ್ದ ಪದ್ಯಗಳನ್ನು ಓದಿ, ಹಾಡಿ, ಕುಣಿಯುತ್ತಾ ಇವರ ಮನಸ್ಸಿನಲ್ಲಿಯೂ ಕವಿಯ ಭಾವಗಳು, ಹೃದಯದಲ್ಲಿ ಅಂತ:ಸ್ಫೂರ್ತಿ ಬೆಳೆಯತೊಡಗಿತು. ಜೊತೆಗೆ ಶಂಗು ಬಿರಾದಾರ, ಸಿಸು ಸಂಗಮೇಶ ಇವರುಗಳು ಮನೆಗೆ ಬಂದಾಗ ತಂದೆಯವರೊಡನೆ ನಿರ್ಮಿಸುತ್ತಿದ್ದ ಮಕ್ಕಳ ಸಾಹಿತ್ಯ ರಚನೆಯ ವಾತಾವರಣ. ಇವುಗಳಿಂದ ಪ್ರೇರಿತರಾಗಿ ಬರಯತೊಡಗಿ, ಬರೆದ ಹಲವಾರು ಪದ್ಯಗಳು ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಮಕ್ಕಳ ಪದ್ಯಗಳನ್ನು ಬರೆಯುವಲ್ಲಿ ವಿಷಯ ವೈವಿಧ್ಯತೆಗಿಂತ ಆಕರ್ಷಕವಾಗಿ ಬರೆಯುವುದರಲ್ಲಿಯೇ ಮಕ್ಕಳ ಮನಸ್ಸನ್ನು ಗೆಲ್ಲುವಂತಿರಬೇಕು. ಇಣಚಿ, ಚುಕುಬುಕು ರೈಲು, ಬಸವನ ಹುಳು, ಅಮ್ಮ, ರಾಷ್ಟ್ರ ಭಕ್ತಿಯನ್ನು ನಿರೂಪಿಸುವ ವೀರ ಭಗತ್ಸಿಂಗ್, ಪರಿಸರದ ಬಗ್ಗೆ ಎಚ್ಚರಿಸುವ ಬನದಿಂದ ಬಾಳು, ಕನ್ನಡದ ಹಿರಿಮೆ – ಗರಿಮೆಗಳನ್ನು ಸಾರುವ ಭುವನೇಶ್ವರಿ ಹೀಗೆ ಹಲವಾರು ಪದ್ಯಗಳು ಮಕ್ಕಳಿಗೆ ಮುದನೀಡುತ್ತವೆ. ಇವಲ್ಲದೆ ಅಂಬೆಗಾಲಿನ ಹೋರಿ, ಪುಟ್ಟಿಯ ಗುಲಾಬಿ, ಮಲ್ಲಿಗೆ ಮಳೆ, ಬೇಲಿ (ಹನಿಗವನ) ಮುಂತಾದ ಮಕ್ಕಳ ಪದ್ಯಗಳ ಸಂಕಲನಗಳನ್ನು ಪ್ರಕಟಿಸಿದ್ದು ಜೊತೆಗೆ ‘ಬೋನ್ಸಾಯ್’, ವಸಂತಾಗಮನ (ಕಾವ್ಯ) ಮತ್ತು ಭಾವ ಬಿಂಬಗಳು, ಒಡಲ ಕಿಡಿಗಳು, ಚೌಪದಿ ಸಂಕಲನಗಳೂ ಪ್ರಕಟಗೊಂಡಿವೆ.
ಮಕ್ಕಳಿಗಾಗಿ ಹಲವಾರು ರಂಜನೀಯ, ಕೌತುಕಮಯ, ಸಾಹಸ ಪ್ರವೃತ್ತಿಯ ಕಥೆಗಳನ್ನು ಬರೆದಿದ್ದು ‘ಸಾಗರದಲ್ಲಿ ಸಾಹಸ ಯಾತ್ರೆ’, ‘ಕಾಗಿ ಕೂಟ’, ‘ಮಣಿಯುಂಗುರ’ ಮೊದಲಾದ ಕಥಾ ಸಂಕಲನಗಳಲ್ಲಿ ಸೇರಿವೆ. ವಿಜ್ಞಾನ ಶಿಕ್ಷಕರಾಗಿದ್ದು ಹಲವಾರು ವೈಜ್ಞಾನಿಕ ಕಥಾನಕಗಳನ್ನು ಬರೆದಿದ್ದು ಇವು ‘ಅಂತರಿಕ್ಷದಲ್ಲಿ ಪುಟಾಣಿಗಳು’ ಎಂಬ ಕಥಾಸಂಕಲನದಲ್ಲಿ ಸೇರಿದೆ. ಇದರ ಜೊತೆಗೆ ನಮ್ಮ ಜನಪದದಲ್ಲಿ ಹಾಸುಹೊಕ್ಕಾಗಿರುವ ರಂಜನೀಯ ಒಗಟುಗಳ ವಿಷ್ಲೇಣೆಯಿಂದ ಕೂಡಿದ ಪುಸ್ತಕ ‘ಹಸರಗಿಡದ ಮ್ಯಾಲ ಮೊಸರ ಚಲ್ಲೇದ’; ಮಕ್ಕಳ ಸಾಮಾಜಿಕ ಕಾದಂಬರಿ ‘ಮಿಡಿದ ಕರುಳು’, ವ್ಯಕ್ತಿಚಿತ್ರ ಕೃತಿಗಳಾದ ‘ಡೋಹರ ಕಕ್ಕಯ್ಯ’, ‘ಸಂತ ಏಕನಾಥ’ ಮುಂತಾದವುಗಳು. ಇವರ ಸಂಪಾದಿತ ಕೃತಿಗಳು ‘ಹೂವಿನ ಹಂದರ’ (ಸಾಹಿತಿ ಶಂಗು ಬಿರಾದಾರ ಅವರ ೭೫ನೇ ಹುಟ್ಟು ಹಬ್ಬದ ಅಭಿನಂದನ ಕೃತಿ), ‘ಬೆಳ್ಳಿ ಮಹೋತ್ಸವ’ (ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ), ‘ಪಂಚಾಕ್ಷರಿ ಪ್ರಭೆ’, (ಸಂಗೀತ ಶಾಲೆಯ ಬೆಳ್ಳಿ ಹಬ್ಬದ ಸಂಚಿಕೆ), ‘ಮಹಾಂತ’ (ಎಂ.ಎಂ.ಹುಂಡೇಕಾರ ಅಮೃತ ಮಹೋತ್ಸವ ಗೌರವ ಗ್ರಂಥ), ‘ಕವಿ ಕಂಡ ಮಲ್ಲಪ್ಪ’ ‘ಮನಗೂಳಿ ಮಾಣಿಕ್ಯ’, ‘ಬೆಳ್ಳಿ ಬೆಡಗು’ ಮುಂತಾದವುಗಳ ಸಂಪಾದಕರಾಗಿಯೂ ದುಡಿದಿದ್ದಾರೆ.
ಇವರು ಬರೆದ ಪದ್ಯಗಳು ಮತ್ತು ಕಥೆಗಳು ಮಹಾರಾಷ್ಟ್ರ ಸರಕಾರದ ಪಠ್ಯ ಪುಸ್ತಕಗಳಾದ ೨ನೆಯ ತರಗತಿ, ೪ನೆಯ ತರಗತಿ, ೬ನೆಯ ತರಗತಿ ಪುಸ್ತಕಗಳಲ್ಲಿ ಸೇರಿದ್ದರೆ, ಕರ್ನಾಟಕ ಸರಕಾರದ ಪಠ್ಯ ಪುಸ್ತಕಗಳಾದ ೨ ಮತ್ತು ೫, ೬, ೭, ೮ನೆಯ ತರಗತಿಗಳ ಪಠ್ಯಗಳಲ್ಲಿಯೂ ಸೇರಿವೆ. ಜಾನಪದ ಒಗಟುಗಳ ವಿಶ್ಲೇಣೆಯು ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ತರಗತಿಯ ಪಠ್ಯದಲ್ಲಿ ಸೇರ್ಪಡೆಯಾಗಿದೆ. ಹಲವಾರು ಸ್ವರಚಿತ ಮಕ್ಕಳ ಪದ್ಯಗಳು, ಕವನಗಳು ಮತ್ತು ‘ತರಕಾರಿ ಆರೋಗ್ಯಕ್ಕೆ ದಾರಿ’, ‘ಕಂಪ್ಯೂಟರ್ಕಾರ್ಯ’, ‘ಹಳ್ಳಿ ಮಕ್ಕಳ ಹಾಡುಗಳು’ ಮುಂತಾದ ರೂಪಕಗಳು, ‘ಸಾಗರದಲ್ಲೇನಿದೆ’ ‘ಚಿಂತನೆಗಳು’ ಮುಂತಾದ ಪ್ರಬಂಧಗಳು; ಯುಗಾದಿ ಕವಿ ಗೋಷ್ಠಿ ಮುಂತಾದ ಕಾರ್ಯಕ್ರಮಗಳು ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ನಡೆದ ‘ಕಾವ್ಯ ಸ್ವಾದ’, ಬೆಂಗಳೂರಿನ ಮಕ್ಕಳ ಕಮ್ಮಟ, ಧಾರವಾಡದ ಮಕ್ಕಳ ಸಾಹಿತ್ಯ ರಚನಾ ಕಮ್ಮಟ, ವಿಜಾಪುರದ ಮಕ್ಕಳ ನಾಟಕ ರಚನಾ ಕಮ್ಮಟ, ಕುವೆಂಪುರವರ ಜನ್ಮ ಸ್ಥಳವಾದ ಹಿರೇಕೂಡಿಗೆಯಲ್ಲಿ ನಡೆದ ಯುವ ಕವಿಗಳ ಕಾರ್ಯ ಕಮ್ಮಟ, ಮುಲ್ಕಿ (ದಕ್ಷಿಣ.ಕನ್ನಡ) ಯಲ್ಲಿ ನಡೆದ ಮಕ್ಕಳ ಸಾಹಿತ್ಯ ಕಮ್ಮಟ ಮುಂತಾದ ಸಾಹಿತ್ಯ ಕಮ್ಮಟಗಳಲ್ಲದೆ ಪರಿಸರ ಶಿಕ್ಷಣ ಕಾರ್ಯಾಗಾರ, ಶಿಕ್ಷಕರ ತರಬೇತಿ ಕಾರ್ಯಾಗಾರ, ಶಿಕ್ಷಣ ಸಂವಾದ ಕಾರ್ಯಕ್ರಮಗಳು, ನವಸಾಕ್ಷರರ ಸಾಹಿತ್ಯ ರಚನಾ ಕಾರ್ಯಾಗಾರ ಮುಂತಾದವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಪ್ರಶಸ್ತಿ
[ಬದಲಾಯಿಸಿ]ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ‘ಅಂತರಿಕ್ಷದಲ್ಲಿ ಪುಟಾಣಿಗಳು’ ಕೃತಿಗೆ ಚಿಕ್ಕೋಡಿ ತಮ್ಮಣ್ಣಪ್ಪ ಮಕ್ಕಳ ಸಾಹಿತ್ಯ ಪುಸ್ಕಾರ, ಚಿತ್ರದುರ್ಗದಿಂದ ರಾಜ್ಯ ವಿಜ್ಙಾನ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ‘ಮಿಡಿದ ಕರುಳು’ ಕೃತಿಗೆ ಮಕ್ಕಳ ಸಾಹಿತ್ಯ ಸಂಗಮ ಪ್ರಶಸ್ತಿ, ‘ಒಡಲ ಕಿಡಿಗಳು’ ಕೃತಿಗೆ ಸಾಹಿತ್ಯಶ್ರೀ ಪ್ರಶಸ್ತಿ ಅಲ್ಲದೆ ಆರೂಢ ಜ್ಯೋತಿ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ, ಹರ್ಡೇಕರ್ ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ದೊರೆತಿವೆ.
ಉಲ್ಲೇಖಗಳು
[ಬದಲಾಯಿಸಿ]