ವಿಷಯಕ್ಕೆ ಹೋಗು

ಗ್ರಹಕುಂಡಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜಾತಕ ಇಂದ ಪುನರ್ನಿರ್ದೇಶಿತ)

ಗ್ರಹಕುಂಡಲಿ - ಭೂಮಂಡಲದಲ್ಲಿ ಸಂಚರಿಸುವ ಗ್ರಹಗಳ ಸ್ಥಾನಗಳನ್ನು ಸುಲಭವಾಗಿ ತಿಳಿಯುವಂತೆ ಬರೆದು ಸೂಚಿಸುವ ವಿಧಾನ. ಕುಂಡಲಿಗೆ ಚಕ್ರವೆಂದು ನಾಮಾಂತರವಿದೆ. ಕುಂಡಲಿಯನ್ನು ಒಂದೊಂದು ದೇಶದವರು ಒಂದೊಂದು ಕ್ರಮದಲ್ಲಿ ಬರೆಯುತ್ತಾರೆ. ಇದರಲ್ಲಿ ಹನ್ನೆರಡು ಮನೆಗಳಿರುತ್ತವೆ. ಇದನ್ನು ಕುಂಡಲಾಕಾರದಲ್ಲಿ ಬರೆಯುತ್ತಿದ್ದುದರಿಂದ ಇದಕ್ಕೆ ಕುಂಡಲಿ ಎಂಬ ಹೆಸರು ಪ್ರಚಲಿತವಾಗಿದೆ.

ಮೀನ ಮೇಷ ವೃಷಭ ಮಿಥುನ
ಕುಂಭ ಕರ್ಕಾಟಕ
ಮಕರ ಸಿಂಹ
ಧನುಸ್ಸು ವೃಶ್ಚಿಕ ತುಲಾ ಕನ್ಯಾ

ದಕ್ಷಿಣ ಭಾರತದಲ್ಲಿ ಇದನ್ನು ಚಚ್ಚೌಕವಾಗಿ ಬರೆಯುತ್ತಾರೆ. ಇದರಲ್ಲಿರುವ ಮನೆಗಳಲ್ಲಿ ಮೇಷಾದಿ ಹನ್ನೆರಡು ರಾಶಿಗಳ ಸ್ಥಾನ ನಿಯತವಾಗಿರುತ್ತದೆ. ಭೂಮಂಡಲದಲ್ಲಿ ಗ್ರಹ ಯಾವ ರಾಶಿವಿಭಾಗದಲ್ಲಿ ಇರುವುದೊ ಅದನ್ನು ತಿಳಿದುಕೊಂಡು ಕುಂಡಲಿಯ ಆ ರಾಶಿಯ ಮನೆಯಲ್ಲಿ ಆ ಗ್ರಹದ ಹೆಸರನ್ನು ಬರೆಯಬೇಕು. ಹೀಗೆ ಸೂರ್ಯ, ಚಂದ್ರ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಈ ಒಂಬತ್ತು ಗ್ರಹಗಳ ಹೆಸರುಗಳೂ ಕುಂಡಲಿಯಲ್ಲಿ ಇರುತ್ತದೆ. ಇದರಿಂದ ಏಕಕಾಲದಲ್ಲಿ ನವಗ್ರಹಗಳು ಯಾವಯಾವ ರಾಶಿಗಳಲ್ಲಿ ಇದೆ ಎಂಬುದು ನಮಗೆ ತಿಳಿಯುತ್ತದೆ. ಜನನ ಲಗ್ನರಾಶಿಯನ್ನೂ ಲೆಕ್ಕಮಾಡಿ ತಿಳಿದು ಅದನ್ನು ಕುಂಡಲಿಯಲ್ಲಿ ಆ ರಾಶಿಯ ಮನೆಯಲ್ಲಿ ಲಗ್ನ ಎಂದು ಗುರ್ತಿಸಬೇಕು. ಹೀಗೆ ಬರೆದು ಸಿದ್ಧಪಡಿಸಿರುವ ಕುಂಡಲಿಯ ಸಹಾಯದಿಂದ ಜಾತಕನಿಗೆ ಗ್ರಹಗಳಿಂದ ಉಂಟಾಗುವ ಫಲಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಜನನಕಾಲ, ವಿವಾಹ, ಮೊದಲಾದ ಶುಭಕಾರ್ಯಗಳನ್ನು ಮಾಡುವ ಕಾಲ ಮತ್ತು ಪ್ರಶ್ನಕಾಲ, ಈ ಕಾಲಗಳಲ್ಲಿ ಕುಂಡಲಿಯನ್ನು ಸಿದ್ಧಪಡಿಸಿ ಅದರ ಸಹಾಯದಿಂದ ಗ್ರಹಫಲವನ್ನು ತಿಳಿಯಬೇಕಾಗುತ್ತದೆ.

ಬರೆಯುವ ವಿಧಾನಗಳು

[ಬದಲಾಯಿಸಿ]

ಕುಂಡಲಿಯನ್ನು ಬರೆಯುವುದರಲ್ಲಿ ಪ್ರಚಲಿತವಾಗಿರುವ ಕೆಲವು ವಿಧಾನಗಳನ್ನು ಈ ಕೆಳಗೆ ಚಿತ್ರರೂಪದಲ್ಲಿ ಕೊಟ್ಟಿದೆ. 1, 2, 4 ನೆಯ ವಿಧಾನಗಳಲ್ಲಿ ಮೇಷಾದಿ 12 ರಾಶಿಗಳಿಗೆ ಗೊತ್ತಾದ ಮನೆಗಳಿವೆ. ಮೂರನೆಯ ವಿಧಾನದಲ್ಲಿ ರಾಶಿಗಳಿಗೆ ನಿಯತವಾದ ಸ್ಥಾನವಿಲ್ಲ. ಎಲ್ಲಮನೆಗಳಲ್ಲೂ ಮೇಷಾದಿ ಹನ್ನೆರಡು ರಾಶಿಗಳು ಬರಬಹುದು. ಇದರಲ್ಲಿ ಲಗ್ನ ಮೊದಲಾದ ಹನ್ನೆರಡು ಸ್ಥಾನಗಳಿಗೆ ನಿಯತಸ್ಥಾನ, ಲಗ್ನಾನುಗುಣವಾಗಿ ರಾಶಿಗಳು ಬದಲಾಗುತ್ತವೆ. ಇಷ್ಟಕಾಲದಲ್ಲಿ ಮೇಷ ಲಗ್ನವಾದರೆ ಲಗ್ನದಲ್ಲಿ ಮೇಷರಾಶಿ ಇದ್ದು, ಸಂಖ್ಯಾಕ್ರಮದಲ್ಲಿ ಉಳಿದ ರಾಶಿಗಳಿರುತ್ತವೆ. ಲಗ್ನ ವೃಷಭವಾದರೆ ಲಗ್ನ ಸ್ಥಾನದಲ್ಲಿ ವೃಷಭ ರಾಶಿ ಇರುತ್ತದೆ. ಹೀಗೆಯೇ ಲಗ್ನಸ್ಥಾನದಲ್ಲಿದ್ದು ಉಳಿದ ರಾಶಿಗಳು ಕ್ರಮವಾಗಿ ಆಯಾ ಸ್ಥಾನಗಳಲ್ಲಿರುತ್ತವೆ. ಬಳಿಕ ಗ್ರಹಗಳನ್ನು ಆಯಾರಾಶಿಗಳಲ್ಲಿ ಬರೆಯಬೇಕು. ಮೊದಲಿನ ಕುಂಡಲಿ ವಿಧಾನದಲ್ಲಿ ರಾಶಿಯ ಗಣನೆ ಪ್ರದಕ್ಷಿಣಾಕಾರದಲ್ಲಿದ್ದರೆ ಉಳಿದ ಮೂರು ವಿಧಾನಗಳಲ್ಲೂ ಅಪ್ರದಕ್ಷಿಣಾಕಾರದಲ್ಲಿರುತ್ತದೆ.

ಕುಂಡಲಿಗಳು

[ಬದಲಾಯಿಸಿ]

ಕುಂಡಲಿಗಳಲ್ಲಿ ರಾಶಿಕುಂಡಲಿ ಭಾವಕುಂಡಲಿ ದ್ರೇಕ್ಕಾಣಕುಂಡಲಿ ಅಂಶಕುಂಡಲಿ ಇವು ಮುಖ್ಯವಾದುವು. ಇದಲ್ಲದೆ ಇನ್ನೂ ಕೆಲವು ಕುಂಡಲಿಗಳುಂಟು. ಗ್ರಹಗಳಿರುವ ರಾಶಿಯನ್ನು ರಾಶಿಕುಂಡಲಿ ತಿಳಿಸುತ್ತದೆ. ಭಾವಕುಂಡಲಿ ತನು ಮೊದಲಾದ ಹನ್ನೆರಡು ಭಾವಗಳಲ್ಲಿ ಗ್ರಹಸ್ಥಿತಿಯನ್ನು ಸೂಚಿಸುತ್ತದೆ. ರಾಶಿ, ಭಾವಕುಂಡಲಿಗಳಲ್ಲಿ ಗ್ರಹಸ್ಥಿತಿ ಬಹುಪಾಲು ಒಂದೇ ವಿಧವಾಗಿದ್ದರೂ ಕೆಲವು ವೇಳೆ ಒಂದೆರಡು ಗ್ರಹಗಳು ಮಾತ್ರ ವ್ಯತ್ಯಾಸವಾಗುತ್ತವೆ. ಗ್ರಹವಿರುವ ದ್ರೇಕ್ಕಾಣವಿಭಾಗವನ್ನು ದ್ರೇಕಾಣ ಕುಂಡಲಿ ತಿಳಿಸುತ್ತದೆ. ಅಂತೆಯೇ ನವಾಂಶಕುಂಡಲಿ ಗ್ರಹವಿರುವ ನವಾಂಶವನ್ನು ಸೂಚಿಸುತ್ತದೆ. ಈ ಕುಂಡಲಿಗಳಿಂದ ಪ್ರತ್ಯೇಕವಾದ ಫಲಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಪಕ್ಷ ಮತ್ತು ಮಾಸಗಳ ಕೊನೆಯ ದಿನದ ಗ್ರಹಸ್ಥಿತಿಯನ್ನು ಕುಂಡಲಿಯ ಮೂಲಕ ಪಂಚಾಂಗಗಳಲ್ಲಿ ಸೂಚಿಸುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: