ಜಾರ್ಜ್ ವಾಲ್ಡ್
ಜಾರ್ಜ್ ವಾಲ್ಡ್ | |
---|---|
Born | ಜಾರ್ಜ್ ವಾಲ್ಡ್ ೧೮ ನವೆಂಬರ್ ೧೯೦೬ ನ್ಯೂಯಾರ್ಕ್ |
Nationality | ಅಮೇರಿಕನ್ |
ಅಮೇರಿಕದ ಜೀವರಸಾಯನವಿಜ್ಞಾನಿಯಾಗಿದ್ದ ಜಾರ್ಜ್ ವಾಲ್ಡ್ ಅವರು 1906ರ ನವೆಂಬರ್ 18ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.
ಜೀವನ
[ಬದಲಾಯಿಸಿ]ಈತನ ತಂದೆ ತಾಯಿಯರು ಅಮೆರಿಕಕ್ಕೆ ವಲಸೆ ಬಂದವರು. ಪ್ರಾಥಮಿಕ ವಿದ್ಯಾಭ್ಯಾಸ ಬ್ರೂಕ್ಲಿನ್‌ನಲ್ಲಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಬಿ.ಎಸ್ಸಿ. ಪದವಿ ಪಡೆದರು (1927). ಕೊಲಂಬಿಯ ವಿಶ್ವವಿದ್ಯಾಲಯದಿಂದ ಪ್ರಾಣಿವಿಜ್ಞಾನದಲ್ಲಿ ಪಿಎಚ್.ಡಿ. (1932) ಪಡೆದು, ಮುಂದೆ ಜರ್ಮನಿಯಲ್ಲಿ ಆಟ್ಟೊ ವಾರ್‌ಬರ್ಗ್ (1883-1970) ಎಂಬ ಜೀವರಸಾಯನವಿಜ್ಞಾನಿಯ ಪ್ರಯೋಗಶಾಲೆಯಲ್ಲಿ ಸಂಶೋಧನೆಯಲ್ಲಿ ನಿರತರಾದರು. ಅಲ್ಲಿಯೇ ಈತ ಮಾನವನೇತ್ರದ ಅಕ್ಷಿಪಟಲದಲ್ಲಿ ಜೀವಸತ್ತ್ವ ‘ಎ’ ಇದೆಯೆಂದು ಗುರುತಿಸಿದ್ದು. ಆಗತಾನೆ ಜ್ಯೂರಿಚ್‌ನ ಪಾಲ್ ಕರ‍್ರೆರ್ (1889-1971) ಎಂಬಾತನ ಪ್ರಯೋಗಶಾಲೆಯಲ್ಲಿ ಜೀವಸತ್ತ್ವ ‘ಎ’ಯ ಶೋಧವಾಗಿತ್ತು. ಆದ್ದರಿಂದ ಈತ ತನ್ನ ಸಂಶೋಧನೆಯನ್ನು ಮುಂದುವರಿಸಲು ಜ್ಯೂರಿಚ್ ಸೇರಿದ. ಮಾನವನ ದೃಷ್ಟಿದೋಷಗಳಿಗೆ ಜೀವಸತ್ತ್ವ ‘ಎ’ಯ ಕೊರತೆ ಕಾರಣವೆಂಬುದು ಈತನ ಪ್ರಮುಖ ಸಂಶೋಧನೆ.
ವಾಲ್ಡ್‌ರವರು 1930 ರಲ್ಲಿ ದೃಷ್ಟಿಯ ರಾಸಾಯನಿಕ ಪ್ರಕ್ರಿಯೆಗಳ ಬಗ್ಗೆ ಸಂಶೋಧನೆ ನಡೆಸಿದರು. ಇಂತಹ ರಾಸಾಯನಿಕ ಪ್ರಕ್ರಿಯೆಗಳಿಗೆ ರೋಡಾಪ್ಸಿನ್ (rhodopsin) ಎಂಬ ವರ್ಣದ್ರವ್ಯ (pigment) ಪದಾರ್ಥ ಮುಖ್ಯ ಕಾರಣವಾಗಿದೆ. ಅದು ಮಾನವನ ಕಣ್ಣಿನಲ್ಲಿರುವ ಅಕ್ಷಿಪಟದಲ್ಲಿ (ರೆಟಿನಾ) ಇರುತ್ತದೆ. ಆ ಪದಾರ್ಥ ಎ-ಜೀವಸತ್ವದ (vitamin A) ಆಲ್ಡಿಹೈಡ್ ಆಗಿರುವ ಅಕ್ಷಿಪಟದ ಸರಳುಗಳಲ್ಲಿರುವ (retinal rods) ಹಳದಿ ಬಣ್ಣದ ಕರೋಟೆನಾಯಿಡ್ ಸಂಯುಕ್ತದ (carotenoid) ಜೊತೆ ಸಂಯೋಜಿತವಾಗಿರುವ ವರ್ಣರಹಿತ ಪ್ರೋಟೀನ್ ಒಪ್ಸಿನ್ನನ್ನು (opsin) ಹೊಂದಿದೆ ಎಂಬುದಾಗಿ ವಾಲ್ಡ್‌ರವರು 1933ರಲ್ಲಿ ಕಂಡುಹಿಡಿದರು (ಅಕ್ಷಿಪಟದ ಸರಳು ಎಂದರೆ ಮಂದಬೆಳಕನ್ನು ಗ್ರಹಿಸಲು ಅಕ್ಷಿಪಟಲಕ್ಕೆ ಸಹಾಯಕವಾಗುವ ಸರಳಿನಾಕಾರದ ನರಕೋಶವಾಗಿದೆ). ಮಾನವನ ಕಣ್ಣಿನ ಮೇಲೆ ಬೆಳಕು ಬಿದ್ದಾಗ, ರೋಡೋಪ್ಸಿನ್ ಅಣುಗಳು ಕರೋಟೆನಾಯಿಡ್ ಮತ್ತು ಒಪ್ಸಿನ್ ಸಂಯುಕ್ತಗಳಾಗಿ ಒಡೆಯುತ್ತವೆ. ಕತ್ತಲಿದ್ದಾಗ ಆ ಸಂಯುಕ್ತಗಳು ಸಂಯೋಜನೆಗೆ ಒಳಗಾಗಿ ಮತ್ತೆ ರೋಡೋಪ್ಸಿನ್‍ಗಳಾಗಿ ಪರಿವರ್ತನೆಯಾಗಿ ರೆಟಿನಾ ಸರಳುಗಳಲ್ಲಿ ಶೇಖರವಾಗುತ್ತದೆ ಎಂಬುದಾಗಿ ಅವರು ಕಂಡುಹಿಡಿದರು.[೧]
ನಂತರ ವಾಲ್ಡ್‌ರವರು ರೆಟಿನಾದ ನರಗಳು ಮತ್ತು ದ್ಯುತಿನರಗಳಲ್ಲಿನ ವಿದ್ಯುತ್-ಚಟುವಟಿಕೆಯ ಮೇಲೆ ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳು ಹೇಗೆ ಪ್ರಭಾವ ಬೀರುತ್ತವೆ ಎಂಬ ವಿಷಯದ ಬಗ್ಗೆ ಪ್ರಯೋಗಗಳನ್ನು ನಡೆಸಿದರು. ಸುಮಾರು 1950ರಲ್ಲಿ ಅವರು ಕೆಂಪು ಮತ್ತು ಹಳದಿ-ಹಸಿರು ಬಣ್ಣಗಳನ್ನು ಪತ್ತೆಹಚ್ಚುವ ಅಕ್ಷಿಪಟದಲ್ಲಿರುವ ವರ್ಣದ್ರವ್ಯವನ್ನು ಕಂಡುಹಿಡಿದರು. ಕೆಲವು ವರುಷಗಳ ನಂತರ ನೀಲಿ ಬಣ್ಣವನ್ನು ಪತ್ತೆಹಚ್ಚುವ ಅಕ್ಷಿಪಟದಲ್ಲಿರುವ ವರ್ಣದ್ರವ್ಯವನ್ನೂ ಅವರು ಕಂಡುಹಿಡಿದರು. ಆ ಎಲ್ಲ ಮೂರು ಮೂಲಭೂತ ವರ್ಣದ್ರವ್ಯಗಳೂ ಎ-ಜೀವಸತ್ವಕ್ಕೆ ಸಂಬಂಧಪಟ್ಟಿದ್ದಾಗಿದೆ. ಆ ಮೂರರಲ್ಲಿ ಯಾವ ಒಂದು ಅಥವಾ ಇನ್ನೂ ಹೆಚ್ಚಿನ ವರ್ಣದ್ರವ್ಯದ ಕೊರತೆಯಿದ್ದರೂ ಅದರ ಪರಿಣಾಮ ವರ್ಣ-ಕುರುಡಿಗೆ (colour blindness) ದಾರಿಯಾಗುತ್ತದೆ ಎಂಬುದಾಗಿ ಅವರು 1960ರಲ್ಲಿ ಕಂಡುಹಿಡಿದರು. ವಾಲ್ಡ್‌ರವರಿಗೆ 1967ರ ಶರೀರವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಸ್ವೀಡನ್ನಿನ ಶರೀರವಿಜ್ಞಾನಿ ರಾಗ್ನರ್ ಗ್ರಾನಿಟ್ (1900-1991) ಮತ್ತು ಹಾಲ್ಡನ್ ಹಾರ್ಟ್‌ಲೈನ್‍ರವರ (1903-1983) ಜೊತೆ ನೀಡಲಾಯಿತು.
ದೇಶ ವಿದೇಶಗಳಿಂದ, ಹಲವು ವಿಶ್ವವಿದ್ಯಾಲಯಗಳಿಂದ ಪ್ರಾಪ್ತವಾದ ಗೌರವ ಡಾಕ್ಟೊರೇಟ್‌ಗಳ ಸಂಖ್ಯೆ ಅಪಾರ. ನೊಬೆಲ್ ಪ್ರಶಸ್ತಿ (1967), ಲಾಸ್ಕರ್ ಪ್ರಶಸ್ತಿ ಮುಂತಾದವು ಲಭ್ಯವಾದವು. ಈತನ ಪತ್ನಿ ರೂಥ್ ಹಬ್ಬರ್ಡ್ ಕೂಡ ಪತಿಯ ಸಂಶೋಧನೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗಿಯಾಗಿದ್ದಳು.
ಜಾರ್ಜ್ ವಾಲ್ಡ್‌ರವರು 1997ರ ಏಪ್ರಿಲ್ 12ರಂದು ನಿಧನರಾದರು.[೨]
ಉಲ್ಲೇಖಗಳು
[ಬದಲಾಯಿಸಿ]
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಜಾರ್ಜ್ ವಾಲ್ಡ್ on Nobelprize.org
- John E. Dowling, "George Wald, 1906–1997: A Biographical Memoir" in Biographical Memoirs, Washington, D.C.: The National Academy Press (National Academy of Sciences), Volume 78, 298:317.
- A remembrance by his son Elijah
- Papers of George Wald : an inventory
Two of George Wald's speeches can be read on-line: