ವಿಷಯಕ್ಕೆ ಹೋಗು

ಜೊವಾನಿ ಜೆಂಟೀಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೊವಾನಿ ಜೆಂಟೀಲೆ (1875-1944). ಇಟಲಿಯ ತತ್ತ್ವಶಾಸ್ತ್ರಜ್ಞ ಮತ್ತು ರಾಜಕಾರಣಿ.

ಬದುಕು

[ಬದಲಾಯಿಸಿ]

ಈತ ಜನಿಸಿದ್ದು ಕಾಸ್‍ಟೆಲ್‍ವಟ್ರಾನೋ ಎಂಬಲ್ಲಿ, ಪಿಸಾ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಮತ್ತು ತತ್ತ್ವಶಾಸ್ತ್ರವನ್ನು ಅಭ್ಯಾಸ ಮಾಡಿದ. ರೋಮ್ ವಿಶ್ವವಿದ್ಯಾಲಯದಲ್ಲಿ ಈತನಿಗೆ ತತ್ತ್ವಶಾಸ್ತ್ರ ಇತಿಹಾಸದ ಪ್ರಾಧ್ಯಾಪಕ ಹುದ್ದೆ 1917ರಲ್ಲಿ ದೊರಕಿತು. 1903ರಿಂದ 1922ರವರೆಗೆ, ಇಟಲಿಯ ಮತ್ತೊಬ್ಬ ತತ್ತ್ವಶಾಸ್ತ್ರಜ್ಞನಾದ ಬೆನೆಡೆಟೊ ಕ್ರೋಚೆಯೊಂದಿಗೆ (1866-1952) ಕೆಲಸಮಾಡಿ ಲಾ ಕ್ರಿಟಿಕ ಎಂಬ ನಿಯತಕಾಲಿಕವನ್ನು ಸಂಪಾದಿಸಿದ. ತನ್ನದೇ ಆದ ತಾತ್ತ್ವಿಕ ದೃಷ್ಟಿಯನ್ನು ಹೊಂದಿದ್ದರೂ 1924ರವರೆಗೂ ಈತ ಕ್ರೋಚೆಯೊಂದಿಗೆ ಕೆಲಸ ಮಾಡಿದ. ಫ್ಯಾಸಿಸಮ್‍ನ ಬಗ್ಗೆ ಇವರಲ್ಲುಂಟಾದ ಭಿನ್ನಾಭಿಪ್ರಾಯವೇ ಇವರನ್ನು ಬೇರ್ಪಡಿಸಿತು. ಫ್ಯಾಸಿಸ್ಟ್ ಸರ್ಕಾರದಲ್ಲಿ ಈತ ಅಕ್ಟೋಬರ್ 1922ರಿಂದ ಜುಲೈ 1924ರವರೆಗೆ ವಿದ್ಯಾಮಂತ್ರಿಯಾಗಿದ್ದುಕೊಂಡು ಇಟಲಿಯ ಶಿಕ್ಷಣಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ. ರಾಜ್ಯಾಂಗದ ಸುಧಾರಣೆಗಾಗಿಯೇ ರಚನೆಗೊಂಡ ಎರಡು ನಿಯೋಗಗಳ ಅಧ್ಯಕ್ಷನಾಗಿ, ಇಟಲಿ ಫ್ಯಾಸಿಸ್ಟ್ ರಾಜ್ಯವಾಗಲು ಬಹುವಾಗಿ ಶ್ರಮಿಸಿದ. ಅನಂತರ 1926-28ರವರೆಗೆ ಇಟಲಿಯ ಶಿಕ್ಷಣ ವರಿಷ್ಠಮಂಡಳಿಯ ಅಧ್ಯಕ್ಷನಾಗಿಯೂ ಫ್ಯಾಸಿಸ್ಟ್ ಹಿರಿಯ ಮಂಡಳಿಯ ಸದಸ್ಯನಾಗಿಯೂ (1925-29) ಅನೇಕ ಸಂಸ್ಕøತಿ ಸಂಸ್ಥೆಗಳ ಅಧ್ಯಕ್ಷನಾಗಿಯೂ ಈತ ಸೇವೆಸಲ್ಲಿಸಿದನಾದರೂ ಇವನ ರಾಜಕೀಯ ಪ್ರಭಾವ ಕ್ರಮೇಣ ಕುಂದುತ್ತಾ ಬಂತು. 1925ರಿಂದ 1943ರವರೆಗೆ ಈತ ಎನ್‍ಸೈಕ್ಲೊಪಿಡಿಯ ಇಟಾಲಿಯಾನವನ್ನು ಯೋಜಿಸಿ ಸಂಪಾದಿಸಿದ. 1943ರ ಸೆಪ್ಟೆಂಬರ್ 8ರ ಬಳಿಕ ಈಸಾ ಸಾಲೊ ಎಂಬಲ್ಲಿ ಸ್ಥಾಪಿತವಾದ ಫ್ಯಾಸಿಸ್ಟ್ ಸರ್ಕಾರದಲ್ಲಿ ಈತ ಸೇರಿ ಅಕಾಡಮಿಯಾ ಡಿ ಇಟಾಲಿಯ ಎಂಬುದರ ಅಧ್ಯಕ್ಷನಾದ. 1944ರ ಏಪ್ರಿಲ್ 15ರಂದು ಫ್ಯಾಸಿಸ್ಟ್ ವಿರೋಧಿಗಳಿಂದ ಈತ ಫ್ಲಾರೆನ್ಸಿನಲ್ಲಿ ಹತನಾದ.

ಸಾಧನೆ

[ಬದಲಾಯಿಸಿ]

ಈತನದು ಉಚ್ಚಮಟ್ಟದ ಏಕತತ್ತ್ವವಾದ, ಆದರ್ಶವಾದ. ವ್ಯಕ್ತಿನಿಷ್ಟವಾದ ಆಲೋಚನೆಯ ಅಸ್ತಿತ್ವವನ್ನು ಈತ ಒಪ್ಪುತ್ತಿರಲಿಲ್ಲ. ತತ್ತ್ವ ಮತ್ತು ಆಚರಣೆ, ವಿಷಯ ಮತ್ತು ಗುರಿ, ಭೂತ ಮತ್ತು ವರ್ತಮಾನ ಕಾಲ-ಇವುಗಳಲ್ಲಿ ಯಾವ ಭೇದಭಾವವೂ ಇಲ್ಲವೆನ್ನುತ್ತಿದ್ದ. ಮಾನವನ ಮನಸ್ಸು ಶ್ರೇಷ್ಠವಾದದ್ದು; ಅದರ ಶ್ರೇಷ್ಠತೆಯನ್ನು ಎತ್ತಿತೋರಿಸುವುದೇ ಶಿಕ್ಷಣದ ಗುರಿಯಾಗಿರಬೇಕು ಎಂಬುದು ಈತನ ಅಭಿಪ್ರಾಯವಾಗಿತ್ತು. ಶಿಕ್ಷಣದಲ್ಲಿ ತನಗೆ ಇದ್ದ ಆಸಕ್ತಿಯಿಂದಲೂ ಪ್ರಭಾವ ಬೀರುವಂಥ ಶೈಲಿಯ ಬರವಣಿಗೆಯಿಂದಲೂ ಈತ ಶಿಕ್ಷಕರ ಮತ್ತು ಶಿಕ್ಷಣ ಸುಧಾರಕರ ಜನಪ್ರಿಯತೆಯನ್ನು ಗಳಿಸಿದ್ದ. ಕಾಲಕ್ರಮೇಣ ಈತನ ಶಿಷ್ಯರು ತಮ್ಮದೇ ಆದ ಮಾರ್ಗವನ್ನನುಸರಿಸಿದರು. 1920ರಲ್ಲಿ ಈತ ಸ್ಥಾಪಿಸಿದ ಗಿಯಾರ್ನಲೆ ಕ್ರಿಟಿಕೊ ಡೆಲ್ಲಾ ಫಿಲಾಸೊಫಿಯ ಇಟಾಲಿಯಾನ ಎಂಬುದರಲ್ಲಿ ಇವನ ಬಗ್ಗೆ ಅವರ ಅಭಿಪ್ರಾಯಗಳು ಬರಹತ್ತಿದವು.

ಜೊರ್ಡಾನೊ ಬ್ರೂನೊ, ತೊಮಾಸೊ ಕಾಂಪಾನೆಲ್ಲಾ, ಜಿ.ಬಿ.ವಿಕೊ, ವಿನ್‍ಸೆನ್eóÉೂ ಕ್ಯೂಕೊ, ಆಂಟೋನಿಯೊ ರೋಸ್‍ಮಿನಿ, ವಿನ್‍ಸೆನ್eóÉೂ ಜೊಬೆರ್ಟೆ ಮತ್ತು ಸ್ಟಿನೋಜ ಇವರ ಗ್ರಂಥಗಳನ್ನು ಟೀಕೆಯೊಂದಿಗೆ ಜೆಂಟೀಲೆ ಸಂಪಾದಿಸಿದ. ಕಾಂಟನ ಕ್ರಿಟಿಕ್ ಡರ್ ರೈನೆನ್ ವೆರ್‍ನನ್‍ಪ್ಟ್ ಎಂಬ ಗ್ರಂಥವನ್ನು ಈತ ಭಾಷಾಂತರಿಸದ್ದಲ್ಲದೆ ತತ್ತ್ವಶಾಸ್ತ್ರ ಮತ್ತು ಶಿಕ್ಷಣ ಸುಧಾರಣೆಗಳಿಗೆ ಸಂಬಂಧಿಸಿದ ಅನೇಕ ಗ್ರಂಥಗಳನ್ನೂ ಬರೆದ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: