ವಿಷಯಕ್ಕೆ ಹೋಗು

ಟೀಯೆರ್ - ಡೆಲ್ - ಫುಯೇಗೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಕ್ಷಿಣ ಅಮೇರಿಕದ ತುದಿಗೆ ಇರುವ ಟೀಯೆರ್ - ಡೆಲ್ - ಫುಯೇಗೋ ದ್ವೀಪಸಮೂಹ

ಟೀಯೆರ್ - ಡೆಲ್ - ಫುಯೇಗೋ ಇದು ದಕ್ಷಿಣ ಅಮೆರಿಕದ ದಕ್ಷಿಣ ತುದಿಯಿಂದ ಆಚೆಗೆ ಇರುವ ದ್ವೀಪಸಮೂಹ. ಮಜೆಲನ್ ಜಲಸಂಧಿಗೆ ದಕ್ಷಿಣದಲ್ಲಿ, ದ.ಅ.52° 27'-55° 59' ಮತ್ತು ಪ.ರೇ. 63° 43'-74° 44' ನಡುವೆ ಇದೆ. ಮಜೆಲನ್ ಜಲಸಂಧಿ ಈ ದ್ವೀಪಸ್ತೋಮವನ್ನು ಮೂಲ ಭೂಖಂಡದಿಂದ ಪ್ರತ್ಯೇಕಿಸಿದೆ. ಈ ದ್ವೀಪಸ್ತೋಮಕ್ಕೂ ದಕ್ಷಿಣ ಧ್ರುವದ ದ್ವೀಪಸ್ತೋಮಗಳಿಗೂ ನಡುವೆ ಡ್ರೇಕ್ ಜಲಸಂಧಿಯಿದೆ. ಸ್ತೋಮದ ಪ್ರಮುಖ ದ್ವೀಪವಾದ ಈಸ್ ಲ ಗ್ರಾಂಡೀ ಡೇ ಟೇಯೆರ ಡೆಲ್ ಫೂಯೇಗೋ ತ್ರಿಕೋನಾಕಾರವಾಗಿದೆ. ಈ ದ್ವೀಪಸ್ತೋಮದ ಪಶ್ಚಿಮ ಮತ್ತು ದಕ್ಷಿಣ ಭಾಗ ಚಿಲಿಗೆ ಸೇರಿದ್ದು. ಮಜೆಲನಸ್ ಪ್ರಾಂತ್ಯದ ಟೀಯೆರ-ಡೆಲ್-ಫೂಯೋಗೋ ಡಿಪಾರ್ಟ್‍ಮೆಂಟ್ (ಆಡಳಿತ ವಿಭಾಗ) ಆಗಿದೆ. ಪೂರ್ವಭಾಗ ಆರ್ಜೆಂಟೀನ ರಾಷ್ಟ್ರಕ್ಕೆ ಸೇರಿದ್ದು, ಟೀಯೆರ-ಡೆಲ್-ಫೂಯೋಗೋ ಪ್ರಾಂತ್ಯವಾಗಿದೆ. 1881ರ ಒಪ್ಪಂದವೊಂದರ ಪ್ರಕಾರ ಚಿಲಿ ಮತ್ತು ಆರ್ಜೆಂಟೀನ ಭಾಗಗಳ ನಡುವಣ ಎಲ್ಲೆ ಪ.ರೇ. 68° 36' 38" ನೇರಕ್ಕೆ ಹರಿಯುತ್ತದೆ. ಕಿರುದ್ವೀಪಗಳ ಪೈಕಿ ಲಾಸ್ ಏಸ್ತಾದೋಸ್ ಮೊದಲಾದ ಪೂರ್ವ ಭಾಗದ ದ್ವೀಪಗಳು ಆರ್ಜೆಂಟೀನಕ್ಕೆ ಸೇರಿವೆ. ಹೋಸ್ಟೇ, ನ್ಯಾವರೀನೋ, ವಲಸ್ಟನ್, ಡ್ಯೇಗೋ ರಾಮೀರೆಸ್ ಮೊದಲಾದ ಪಶ್ಚಿಮ ದ್ವೀಪಗಳು ಚಿಲಿಗೆ ಸೇರಿವೆ. ಈ ಸ್ತೋಮಕ್ಕೆ ಸೇರಿದ ಕೆಲವು ದ್ವೀಪಗಳ ಒಡೆತನದ ಬಗ್ಗೆ ಎರಡೂ ದೇಶಗಳ ನಡುವೆ ವಿವಾದವುಂಟು. ದ್ವೀಪಸ್ತೋಮದ ವಿಸ್ತೀರ್ಣ 73,643 ಚ. ಕಿಮೀ. ಚಿಲಿ ಭಾಗದ ಜನಸಂಖ್ಯೆ 6,100(1960) ; ಆರ್ಜೆಂಟೀನ ಭಾಗದ್ದು 7,955.

ಭೌತ ಲಕ್ಷಣ

[ಬದಲಾಯಿಸಿ]

ಈಸ್ ಲ ಗ್ರಾಂಡೀಗೆ ಉತ್ತರದಲ್ಲಿ ತೃತೀಯ ಭೂಯುಗದಷ್ಟು, ಅಗ್ನಿಪರ್ವತಗಳ ಮುರುಕಲುಗುಪ್ಪೆಗಳು ಹರಡಿವೆ. ಹಿಮದ ಸರೋವರಗಳಿವೆ. ಇನೂಟೀಲ್ ಕೊಲ್ಲಿಯ ಉತ್ತರ ಭಾಗ ಫಲವತ್ತಾದ ಭೂಮಿ. ಉತ್ತರ ಭಾಗದ ನದಿಗಳು ಈ ಬಯಲಲ್ಲಿ ಹರಿಯುತ್ತವೆ. ಈ ಪ್ರಮುಖ ದ್ವೀಪದ ಅಟ್ಲಾಂಟಿಕ್ ಹಾಗೂ ಮಜೆಲನ್ ಜಲಸಂಧಿಯ ತೀರಗಳೂ ತೀರ ತಗ್ಗು. ಇಲ್ಲಿಯ ಹಲವು ಶಿಖರಗಳು 7,000'ಗಿಂತ ಹೆಚ್ಚು ಎತ್ತರ. ಪರ್ವತಗಳಲ್ಲಿ ನೀರ್ಗಲ್ಲ ನದಿಗಳಿವೆ. ಅತ್ಯಂತ ಎತ್ತರವಾದ ಶಿಖರಗಳು ಸೆರ್ಮಿಯೆಂಡೊ (7,333') ಹಾಗೂ ಡಾರ್ವಿನ್ (7,005'). ಮಜೆಲನ್ ಜಲಸಂಧಿಯ ಪಶ್ಚಿಮದ ಅಂಚಿನಲ್ಲಿ ಕಡಿದಾದ ಪ್ರಪಾತಗಳೂ ಕಡಲ ಚಾಚುಗಳೂ ಇವೆ. ಹಾರ್ನ್ ಭೂಶಿರವೇ ದಕ್ಷಿಣ ಅಮೇರಿಕದ ತುತ್ತುತುದಿಯೆಂದು ಪರಿಗಣಿಸಲಾಗಿದೆ. ಆದರೆ ಅದಕ್ಕೆ ನೈಋತ್ಯದಲ್ಲಿ 60 ಮೈ. ದೂರದಲ್ಲಿ ಡ್ಯೇಗೋ ರಾಮೀರೆeóï ದ್ವೀಪಸ್ತೋಮವಿದೆ.

ವಾಯುಗುಣ

[ಬದಲಾಯಿಸಿ]

ಚಳಿಗಾಲದಲ್ಲಿ ಚಳಿ ಅಧಿಕ. ಬೇಸಗೆಯಲ್ಲಿ ಬಿಸಿಲ ತಾಪವಿಲ್ಲ. ಜುಲೈ ಸರಾಸರಿ ಉಷ್ಣತೆ 11° ಸೆ. (52° ಫ್ಯಾ.). ಪಶ್ಚಿಮ ಹಾಗೂ ಪೂರ್ವ ಭಾಗಗಳಲ್ಲಿ ಮಳೆಯಲ್ಲಿ ಅಂತರವುಂಟು. ಡೆಸೋಲೇಷಸ್ ದ್ವೀಪದ ಬಾಯೀಯ ಫಿಲಿಕ್ಸ್ ಬಳಿ ವಾರ್ಷಿಕ ಸರಾಸರಿ ಮಳೆ 200", ಆರ್ಜೆಂಟೀನಕ್ಕೆ ಸೇರಿದ ರೀಯೊ ಗ್ರಾಂಡ್ ಬಳಿ ಕೇವಲ 20". ಸಸ್ಯಗಳು ಮತ್ತು ಪ್ರಾಣಿಗಳು : ಮಳೆ ಹೆಚ್ಚಾಗಿರುವ ದಕ್ಷಿಣ ಹಾಗೂ ಪಶ್ಚಿಮ ಪ್ರದೇಶಗಳಲ್ಲಿ ಪಾಚಿ ಮತ್ತು ಗಿಡ್ಡಮರಗಳೂ ಫಲವತ್ತಾದ ದಡೆಗಳಲ್ಲಿ ಹಾಗೂ ಇನೂಟಿಲ್ ಕೊಲ್ಲಿಯ ಭಾಗದಲ್ಲಿ ಬೀಜ್ ಮರಗಳೂ ಉತ್ತರದಲ್ಲಿ ಹುಲ್ಲುಗಾಡೂ ಇವೆ. ಭೂಭಾಗದಲ್ಲಿ ಗ್ವಾನಾಕೊ, ಟುಕು-ಟುಕು ಮೊದಲಾದ ತುಪ್ಪುಳು ಪ್ರಾಣಿಗಳೂ ಕಡಲಲ್ಲಿ ವಿವಿಧ ಮೀನುಗಳೂ ಸೀಲ್, ನೀರು ನಾಯಿ (ಓಟರ್) ಮೊದಲಾದ ಜಲಚರ ಪ್ರಾಣಿಗಳೂ ಕಡಲ ಪಕ್ಷಿಗಳೂ ಉಂಟು.

ಇತಿಹಾಸ

[ಬದಲಾಯಿಸಿ]

1520ರಲ್ಲಿ ಫರ್ಡಿನ್ಯಾಂಡ್ ಮಜಿಲನ್ ಈ ದ್ವಿಪಸ್ತೋಮವನ್ನು ಕಂಡುಹಿಡಿದ. ಅವನ ಹಡಗು ಹೊಕ್ಕ ಜಲಸಂಧಿಗೆ ಮಜೆಲನ್ ಜಲಸಂಧಿ ಎಂಬ ಹೆಸರು ಬಂತು. ಈ ಭಾಗವನ್ನು ಅವನು ಬೆಂಕಿಯ ನಾಡು ಎಂದು ಕರೆದ. 1578ರಲ್ಲಿ ಫ್ರಾನ್ಸಿಸ್ ಡ್ರೇಕ್ ಈ ಪ್ರದೇಶದಲ್ಲಿ ಸಂಚರಿಸಿದ. ಜಾಕ್ವೆಸ್‍ಲೆ ಮೇರ್ ಮತ್ತು ವಿಲೆಂ ಷೌಟೆನ್ ಎಂಬ ಡಚ್ ನಾವಿಕರು ದಕ್ಷಿಣ ಭೂಶಿರಕ್ಕೆ ಬಂದು ಅದಕ್ಕೆ ಹಾರ್ನ್ ಭೂಶಿರವೆಂಬ ಹೆಸರಿಟ್ಟರು (1616). ಈ ದ್ವೀಪಸ್ತೋಮದ ಸುತ್ತ ಮೊದಲು ಯಾನ ಮಾಡಿದವರು ಗಾರ್ಸೀಯ ಮತ್ತು ಗೊಂಜಾಲೊ ಸಹೋದರರು. ಇವರ ತರುವಾಯ 19ನೆಯ ಶತಮಾನದ ವರೆಗೆ ಈ ದ್ವೀಪಗಳ ಬಗ್ಗೆ ವ್ಯವಸ್ಥಿತ ಪರಿಶೋಧನೆಗಳು ನಡೆಯಲಿಲ್ಲ. 1826 ಹಾಗೂ 1836ರ ನಡುವೆ ಇಂಗ್ಲೆಂಡಿನ ರಾಬರ್ಟ್ ಫಿಟ್ಜೆರಾಯ್ ಮತ್ತು ಫಿಲಿಪ್ ಪಾರ್ಕರ್ ಕಿಂಗ್ ದೀರ್ಘ ಸರ್ವೇಕ್ಷಣೆ ನಡೆಸಿದರು. ಅವರ ಬೀಗಲ್ ನಾವೆಯಲ್ಲಿ ಯಾನ ಮಾಡಿದವರಲ್ಲಿ ಆಗ ಯುವಕನಾಗಿದ್ದ ಚಾಲ್ರ್ಸ್ ಡಾರ್ವಿನನೂ ಇದ್ದ. ಈ ಸರ್ವೇಕ್ಷಣೆಯಲ್ಲಿ ಅನೇಕ ಸ್ಥಳಗಳಿಗೂ ಪ್ರದೇಶಗಳಿಗೂ ಕೊಟ್ಟ ಹೆಸರುಗಳೇ ಈಗಲೂ ಇವೆ. ಚಿಲಿ ದೇಶ ವಿವರವಾದ ನೌಕಾ-ಪರಿಶೋಧನೆಗಳನ್ನು ನಡೆಸಿದರೂ ಕಡಲಪಟಗಳು ಕಿಂಗ್ ಮತ್ತು ಫಿಟ್ಜೆರಾಯ್ ಇವರ ಮೂಲ ಸರ್ವೇಕ್ಷಣೆಯನ್ನೇ ಆಧರಿಸಿವೆ. 1880ರ ದಶಕದಲ್ಲಿ ಕುರಿಸಾಕಣೆಗಾಗಿ ಯೂರೋಪಿನ ಜನರೂ ಚಿಲಿ ಹಾಗೂ ಆರ್ಜೆಂಟೀನ ದೇಶದವರೂ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಸಿದರು. 1890ರ ದಶಕದಲ್ಲಿ ಸುವರ್ಣಾನ್ವೇಷಕರ ನೂಕುನುಗ್ಗುಲು ಸಂಭವಿಸಿತು. ಇವುಗಳ ಫಲವಾಗಿ ಈ ದ್ವಿಪಸ್ತೋಮ ರಾಜಕೀಯವಾಗಿ ಚಿಲಿ ಮತ್ತು ಆರ್ಜೆಂಟೀನಗಳ ನಡುವೆ ವಿಭಾಗವಾಯಿತು. ಮಜೆಲನ್ ಜಲಸಂಧಿಯ ಅಂಚಿನ ಪೊರ್ವೆನಿರ್ ಎಂಬುದು ಚಿಲಿ ಭಾಗದ ಪ್ರಮುಖ ನಗರವಾಯಿತು ; ಬೀಗಲ್ ನಾಲೆಯ ಅಂಚಿನ ಊಸ್ವೇಯ ಎಂಬುದು ಆರ್ಜೆಂಟಿನ ಭಾಗದ ಆಡಳಿತ ಕೇಂದ್ರವಾಯಿತು. 19ನೆಯ ಶತಮಾನದಲ್ಲಿ ಪಾದ್ರಿಗಳು ಕ್ರೈಸ್ತಮತವನ್ನು ಹರಡಿದರು. ಚಿಲಿ 1929ರಲ್ಲಿ ಮತ್ತು ಆರ್ಜೆಂಟೀನ 1955ರಲ್ಲಿ ತಮಗೆ ಸೇರಿದ ದ್ವೀಪ ಭಾಗಗಳಿಗೆ ಈಗಿನ ಆಡಳಿತ ವಿಭಾಗಗಳ ಸ್ಥಾನಮಾನ ನೀಡಿದುವು.

ಟೀಯೆರ-ಡೆಲ್-ಫೂಯೇಗೋ ದ್ವೀಪದ ಆದಿವಾಸಿಗಳು ಓನ ಹಾಗೂ ಯಹಗಾನ್ ಇಂಡಿಯನರು. ಓನ ಬಣದವರ ವಾಸ ಈಸ್ ಲ ಗ್ರಾಂಡೀ ದ್ವೀಪದ ಉತ್ತರಭಾಗದ ಅರಣ್ಯಗಳಲ್ಲಿ ; ಗ್ವಾನಾಕೊ ಮೊದಲಾದ ತುಪ್ಪುಳು ಪ್ರಾಣಿಗಳ ಬೇಟೆಯೆ ಇವರ ಕಸಬು. ಯಹಗಾನ್ ಬಣದವರ ವಾಸಬೀಗಲ್ ನಾಲೆಯ ಅಂಚು ಹಾಗೂ ಕಿರುದ್ವೀಪಗಳಲ್ಲಿ; ಅವರ ಜೀವನೋಪಾಯ ಚಿಪ್ಪುಮೀನು, ಸೀಲ್, ನೀರುನಾಯಿ ಮೊದಲಾದ ಕಡಲಪ್ರಾಣಿಗಳ ಬೀಟಿಯಿಂದ. ಅಲಕಲುಫ್ ಬಣದ ಒಂದು ತಂಡು ಮಜೆಲನ್ ಜಲಸಂಧಿಯ ಪಶ್ಚಿಮದಿಂದ ವಾಯವ್ಯ ನಾಲೆಗಳ ಕಡೆ ಹೋಗಿ ನೆಲೆಸಿತು. ಯೂರೋಪ್ ಜನರ ವಲಸೆ ಹಾಗೂ ಅವರು ತಂದು ಹರಡಿದ ರೋಗರುಜಿನಗಳಿಂದ ಆದಿವಾಸಿಗಳು ಬಹುತೇಕ ನಾಶಹೊಂದಿದರು. ಈಗ ಉಳಿದುಕೊಂಡಿರುವವರ ಸಂಖ್ಯೆ ತೀರ ಕಡಿಮೆ. ಪ್ರಮುಖ ದ್ವೀಪದಲ್ಲಿ ಜನಸಾಂದ್ರತೆ ಉಳಿದೆಡೆಗಳಲ್ಲಿರುವುದಕ್ಕಿಂತ ಅಧಿಕ. ಕುರಿ ಸಾಕುವ ಜನ ನವರಿನೊ ದ್ವೀಪದಲ್ಲಿದ್ದಾರೆ.

ಆರ್ಥಿಕತೆ

[ಬದಲಾಯಿಸಿ]

ಕುರಿಸಾಕಣೆ, ಪೆಟ್ರೋಲ್, ಗಣಿಗಾರಿಕೆ ಇಲ್ಲಿಯ ಪ್ರಮುಖ ಆರ್ಥಿಕ ಮೂಲಗಳು. ಉತ್ತರ ಭಾಗದಲ್ಲಿ ಬೃಹತ್ ಕುರಿಸಾಕಣೆ ಕ್ಷೇತ್ರಗಳಿವೆ. ಕೆಲವು ಕ್ಷೇತ್ರಗಳಿಗೆ ಸಾವಿರಾರು ಎಕರೆ ಹುಲ್ಲುಗಾವಲುಗಳಿವೆ; ಲಕ್ಷಾಂತರ ಕುರಿಗಳನ್ನು ಸಾಕುತ್ತಾರೆ. 1938 ಮತ್ತು 1957ರಲ್ಲಿ ಈ ಭೂಮಿಗಳ ಕೆಲವು ಗೇಣಿ ಕರಾರುಗಳು ಮುಕ್ತಾಯವಾದುವು. ಭೂಮಿಯನ್ನು ವಿಭಜಿಸಿ ಜನರನ್ನು ಹೆಚ್ಚಾಗಿ ನೆಲೆಗೊಳಿಸುವ ವ್ಯವಸ್ಥೆಯಾಯಿತು. ಚಿಲಿ ಭಾಗದಲ್ಲಿ 1945ರಲ್ಲಿ ಪೆಟ್ರೋಲ್ ಸಿಕ್ಕಿತು. ಬೀಗಲ್ ನಾಲೆಯ ಹಾಗೂ ಮಜೆಲನ್ ಸಂಧಿಯ ಅಂಚಿನ ಅರಣ್ಯಗಳಲ್ಲಿ ಮರಗಳನ್ನು ಕಡಿದು ದಿಮ್ಮಿಗಳನ್ನು ಸಾಗಿಸುತ್ತಾರೆ. ಊಸ್ವೇಯ ಮತ್ತು ಪೊರ್ವೆನಿರ್ ನಗರಗಳಲ್ಲಿ ಮೀನು ಸಂವೇಷ್ಟನ ಉದ್ಯಮವಿದೆ. ದ್ವೀಪಗಳ ಕೆಲವು ಭಾಗಗಳಲ್ಲಿ ತುಪ್ಪುಳು ಸಂಗ್ರಹಕ್ಕಾಗಿ ತುಪ್ಪುಳು ಪ್ರಾಣಿಗಳ ಬೇಟೆಯಾಡುತ್ತಾರೆ. ಕುರಿಮಾಂಸ ಡಬ್ಬೀಕರಣ ಕಾರ್ಖಾನೆಗಳು ರೀಯೋಗ್ರಂಡಿ ನಗರದಲ್ಲಿವೆ.

ಸಾರಿಗೆ ಮತ್ತು ಸಂಪರ್ಕ

[ಬದಲಾಯಿಸಿ]

ದ್ವೀಪಸ್ತೋಮದಲ್ಲಿ ರಸ್ತೆ ವ್ಯವಸ್ಥೆ ಸಮರ್ಪಕವಾಗಿಲ್ಲ. ರೈಲುಮಾರ್ಗಗಳಿಲ್ಲ. ಚಿಲಿ ಮತ್ತು ಆರ್ಜೆಂಟೀನ ಭಾಗಗಳಿಗೆ ರೀಯೊ ಗಲೆಗೋಸ್ ಹಾಗೂ ಪುಂಟ ಅರೆನಾಸ್ ನಗರಗಳಿಂದ ವಿಮಾನಗಳು ಹಾರಾಡುತ್ತವೆ. ಈ ದ್ವೀಪಸ್ತೋಮದಲ್ಲಿ ಜಲಮಾರ್ಗಗಳೂ ಮುಖ್ಯವಾಗಿವೆ. ಪೋರ್ವೆನಿರ್ ನಿಂದ ಪುಂಟ ಅರೆನಾಸ್ ರೇವಿಗೆ ವೇಳಾಬದ್ಧವಾಗಿ ಹಡಗುಗಳು ಸಂಚರಿಸುತ್ತವೆ. ನವರಿನೋ ಮತ್ತು ಊಸ್ವೇಯ ರೇವೂಗಳಿಗೆ ಸಾರಿಗೆ ಹಡಗುಗಳು ಬರುತ್ತವೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: