ಡಿ. ಸಿ. ಪಾವಟೆ
D C Pavate | |
---|---|
Born | Mamadapur, Belgaum District | ೨ ಆಗಸ್ಟ್ ೧೮೯೯
Died | 17 January 1978 |
ದಾನಪ್ಪ ಚಿಂತಪ್ಪ ಪಾವಟೆ ಅವರು ಡಿ. ಸಿ. ಪಾವಟೆ (ಆಗಸ್ಟ್ ೨, ೧೮೯೯ - ಜನವರಿ ೧೭, ೧೯೭೯) ಎಂಬ ಹೆಸರಿನಿಂದ ದಕ್ಷ ಆಡಳಿತಗಾರರಾಗಿ, ಶಿಕ್ಷಣತಜ್ಞರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದವರಾಗಿ, ಪಂಜಾಬ್ನ ರಾಜ್ಯಪಾಲರಾಗಿ ಹೀಗೆ ವಿವಿಧ ರೀತಿಯಲ್ಲಿ ನಾಡಿನಲ್ಲಿ ಪ್ರಖ್ಯಾತರಾಗಿದ್ದಾರೆ.
ಜೀವನ
[ಬದಲಾಯಿಸಿ]ದಾನಪ್ಪ ಚಿಂತಪ್ಪ ಪಾವಟೆಯವರು ಆಗಸ್ಟ್ ೨, ೧೮೯೯ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪುರದಲ್ಲಿ ಜನಿಸಿದರು. ಅವರ ತಂದೆ ಚಿಂತಪ್ಪ ಪಾವಟೆಯವರು.
ಪಾವಟೆಯವರ ಪ್ರಾರಂಭಿಕ ಶಿಕ್ಷಣ ಗೋಕಾಕ ಮತ್ತು ಕೊಲ್ಲಾಫುರದಲ್ಲಿ ನಡೆಯಿತು. ೧೯೨೩ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಗಣಿತದ ಪ್ರಥಮದರ್ಜೆ ಆನರ್ಸ್ ಪದವಿ ಪಡೆದ ಪಾವಟೆಯವರು ಲಿಂಗರಾಜ ಟ್ರಸ್ಟ್ ನೀಡಿದ ಬೆಂಬಲದಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಿಡ್ನಿ ಸಸೆಕ್ಸ್ ಕಾಲೇಜು ಸೇರಿ ಗಣಿತಶಾಸ್ತ್ರ]ದ ಟ್ರೈಪ್ರಾಸ್ ಭಾಗ ೧ ಮತ್ತು ೨ ರಲ್ಲಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣತೆ ಸಾಧಿಸಿದರು. ೧೯೨೭ರಲ್ಲಿ ರಾಂಗ್ಲರ್ ಗೌರವಕ್ಕೆ ಪಾತ್ರರಾಗಿ ಕಾಲೇಜಿನ ಸಂಶೋಧನ ವಿದ್ಯಾರ್ಥಿವೇತನವನ್ನು ಪಡೆದು ಸಂಶೋಧನೆಯನ್ನೂ ಪೂರ್ಣಗೊಳಿಸಿ ೧೯೨೮ರಲ್ಲಿ ಭಾರತಕ್ಕೆ ಹಿಂದಿರುಗಿದರು.
ಶಿಕ್ಷಣ ತಜ್ಞರಾಗಿ
[ಬದಲಾಯಿಸಿ]ಬನಾರಸ್ ಹಿಂದು ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ೧೯೨೮-೩೦ ಅವಧಿಯಲ್ಲಿ ಸೇವೆ ಸಲ್ಲಿಸಿದರು.ಡೆಪ್ಯೂಟಿ ಚೆನ್ನಬಸಪ್ಪನವರ ಒತ್ತಾಸೆಯ ಮೇರೆಗೆ ೧೯೩೦ರಲ್ಲಿ ಮುಂಬಯಿ ವಿದ್ಯಾ ಇಲಾಖೆ ಸೇರಿ ಶಿಕ್ಷಣ ಖಾತೆಯ ಹಲವಾರು ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ ೧೯೪೭ರಲ್ಲಿ ಇಲಾಖೆಯ ನಿರ್ದೇಶಕರಾದರು. ಈ ಅವಧಿಯಲ್ಲಿ ಅವರು ಮುಂಬಯಿ ಪ್ರಾಂತ್ಯದ ಶಿಕ್ಷಣ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು.
ನಿವೃತ್ತಿಯ ನಂತರ ಪಾವಟೆಯವರು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡರು. ಕುಲಪತಿಗಳಾಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿಯ ವಿಶ್ವವಿದ್ಯಾಲಯವನ್ನಾಗಿಸಬೇಕೆಂಬುದನ್ನು ಬಿಟ್ಟು ಬೇರೇನನ್ನೂ ಯೋಚಿಸದೆ ಸದಾ ವಿಶ್ವವಿದ್ಯಾಲಯದ ಉನ್ನತಿಗಾಗಿ ದುಡಿದರು. ವಿದ್ಯಾರ್ಥಿಗಳಿಗೆ ಉಚ್ಚಮಟ್ಟದ ಶಿಕ್ಷಣ ದೊರೆಯಬೇಕು, ಕನ್ನಡನಾಡಿನ ವಿದ್ಯಾರ್ಥಿಗಳು ಆದರ್ಶ ವಿದ್ಯಾರ್ಥಿಗಳಾಗಬೇಕು, ವಿಶ್ವವಿದ್ಯಾಲಯದ ಹೆಸರು ಹೇಳುವಂತಾಗಬೇಕು, ಕನ್ನಡನಾಡಿಗೆ ಕೀರ್ತಿ ತರಬೇಕು ಎಂಬ ಆಶಯಗಳನ್ನೂ ಹೊಂದಿದ್ದಷ್ಟೇ ಅಲ್ಲದೆ ವಿಶ್ವವಿದ್ಯಾಲಯದಲ್ಲಿ ನೆಲೆಸುವ ಪ್ರಾಧ್ಯಾಪಕರು, ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕೆಂಬ ಸಹೃದಯತೆಯಿಂದ ಅವರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿದರು.
ಕುಲಪತಿಗಳಾಗಿ
[ಬದಲಾಯಿಸಿ]ಹಲವಾರು ಮಂದಿ ಶಿಕ್ಷಣವೇತ್ತರ ಅಹರ್ನಿಶಿ ದುಡಿತದ ಫಲವಾಗಿ ರೂಪಗೊಂಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆರ್.ಎ. ಜಾಗೀರದಾರ, ಹುಲಕೋಟಿ ಇವರ ನಂತರ ಕುಲಪತಿಗಳಾಗಿ ಆಯ್ಕೆಯಾಗಿ ೧೯೫೪ರ ವರ್ಷದಲ್ಲಿ ಬಂದ ಡಿ. ಸಿ. ಪಾವಟೆಯವರು ಒಟ್ಟು ೧೪ ವರ್ಷಗಳ ಕಾಲ ಆಡಳಿತ ನಡೆಸಿ ೩೫೦ಎಕರೆ ವಿಸ್ತೀರ್ಣದ ಛೋಟಮಹಾಬಳೇಶ್ವರ ಗುಡ್ಡದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯವು ಕಂಗೊಳಿಸುವಂತೆ ಮಾಡಿದರು.
ಎಲ್ಲಾ ವಿಭಾಗದ ಕಟ್ಟಡದ ನಿರ್ಮಾಣದ ಜೊತೆಗೆ ಆಯಾಯ ವಿಭಾಗಗಳಿಗೆ ಸಮರ್ಥರಾದ ವಿದ್ವಾಂಸರನ್ನೂ ಆಯ್ಕೆಮಾಡಿಕೊಂಡರು. ಗ್ರಂಥಭಂಡಾರವನ್ನೂ ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಿದರು. ಭಾರತದಲ್ಲೇ ಅತ್ಯಂತ ಪ್ರಗತಿಪರ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿತು. ಶೈಕ್ಷಣಿಕವಾಗಿ ಸುಧಾರಣೆ ತರಲು ಯೂರೋಪ್, ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳನ್ನೂ ಸಂದರ್ಶಿಸಿದರು. ಜಿನೀವಾದಲ್ಲಿ ನಡೆದ ಕಾಮನ್ ವೆಲ್ತ್ ವಿಶ್ವವಿದ್ಯಾಲಯ ಸಮ್ಮೇಳನಕ್ಕೆ ಭಾರತೀಯ ನಿಯೋಗದ ನಾಯಕರಾಗಿದ್ದರು. 1955-56ರಲ್ಲಿ ಅಧಿಕೃತ ಭಾಷಾ ಸಮಿತಿಯ ಸದಸ್ಯರಾಗಿ, ಭಾರತ ಸರಕಾರದ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು.
ರಾಜ್ಯಪಾಲರಾಗಿ
[ಬದಲಾಯಿಸಿ]೧೯೬೭ರಲ್ಲಿ ಅವರನ್ನು ಪಂಜಾಬಿನ ರಾಜ್ಯಪಾಲರನ್ನಾಗಿ ನೇಮಿಸಿಲಾಯಿತು. ಲಚ್ಮಣ್ ಸಿಂಗ್ ಗಿಲ್ ರ ಸರ್ಕಾರ ಪತನವಾದಾಗ ೬ ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ಹೇರಲಾಯಿತು. ೧೯೬೯ರಲ್ಲಿ ಗುರ್ನಾಂ ಸಿಂಗ್ ರ ಸರ್ಕಾರ ಕೇವಲ ೧ ವರ್ಷ ನಡೆಯಿತು.ರಾಜಕೀಯ ಅಸ್ಥಿರತೆ ಮತ್ತು ಆಡಳಿತ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಯ ಕಾರಣ ನೀಡಿ, ಬಜೆಟ್ ಮಂಡನೆಗೆ ಒಂದು ದಿನ ಮುಂಚೆ ಪಾವಟೆ ಸರ್ಕಾರವನ್ನು ವಜಾಗೊಳಿಸಲು ರಾಷ್ಟ್ರಪತಿ ವಿ ವಿ ಗಿರಿ ಯವರಿಗೆ ಶಿಫಾರಸ್ಸು ಗೈದರು. ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆಯ ಮಧ್ಯೆ ೧೯೭೧ರಲ್ಲಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಾಗ ನಿಷ್ಪಕ್ಷಪಾತವಾಗಿ ನಡೆದುಕೊಂಡ ಪಾವಟೆಯವರ ಕ್ರಮ ಮೆಚ್ಚುಗೆಗೆ ಪಾತ್ರವಾಯಿತು. ೯ ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ನಡೆಸಿದ ಪಾವಟೆ, ೧೯೭೨ರಲ್ಲಿ ಗ್ಯಾನಿ ಜೈಲ್ ಸಿಂಗ್ ರ ಸರ್ಕಾರಕ್ಕೆ ಪ್ರಮಾಣ ವಚನ ಬೋಧಿಸಿದರು. ೧೯೭೩ರಲ್ಲಿ ಅವಧಿ ಪೂರ್ಣಗೊಂಡ ನಂತರ ಬೆಂಗಳೂರಿಗೆ ಮರಳಿದರು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಡಿ. ಸಿ. ಪಾವಟೆಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ ಗುರುತಿಸಿ ಭಾರತ ಸರ್ಕಾರವು ೧೯೬೭ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.[೧]
೧೯೯೯ರಿಂದ ಕೇಂಬ್ರಿಡ್ಜ್ ನಲ್ಲಿ ಸಿಡ್ನಿ ಸಸೆಕ್ಸ್ ಕಾಲೇಜಿನಲ್ಲಿ ಡಿ. ಸಿ. ಪಾವಟೆಯವರ ಸ್ಮರಣಾರ್ಥ ಕರ್ನಾಟಕದ ಪ್ರತಿಭಾವಂತ ಪದವೀಧರರಿಗೆ ೪ ತಿಂಗಳ ಪ್ರವಾಸ-ಪ್ರತಿಭಾವೇತನ ನೀಡಲಾಗುತ್ತದೆ.[೨]
ಗ್ರಂಥ ಕರ್ತರಾಗಿ
[ಬದಲಾಯಿಸಿ]ಡಿ. ಸಿ. ಪಾವಟೆಯವರು ‘ಎಲಿಮೆಂಟ್ಸ್ ಆಫ್ ಕ್ಯಾಲುಕುಲಸ್’ ಎಂಬ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥವನ್ನು ರಚಿಸಿದ್ದಾರೆ. "ರಾಜ್ಯಪಾಲನಾಗಿ ನನ್ನ ಅನುಭವಗಳು"[೩] ಮತ್ತು "ಶಿಕ್ಷಣ ಆಡಳಿತಗಾರನಾಗಿ ನನ್ನ ಅನುಭವಗಳು"[೪] ಎಂಬ ಎರಡು ಕೃತಿಗಳನ್ನು ರಚಿಸಿದರು. ಈ ಎರಡು ಗ್ರಂಥಗಳು ಕೇವಲ ಆತ್ಮಚರಿತ್ರೆಯಾಗಿಲ್ಲದೆ ಸ್ವಾತಂತ್ರ್ಯಾ ನಂತರದ ಭಾರತೀಯ ರಾಜಕೀಯ ಮತ್ತು ಶೈಕ್ಷಣಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವಂತದ್ದೆನಿಸಿವೆ.
ವಿದಾಯ
[ಬದಲಾಯಿಸಿ]ದೀರ್ಘಾವಧಿ ಸಾರ್ವಜನಿಕ ಸೇವೆಯ ನಂತರ ಬೆಂಗಳೂರಿನಲ್ಲಿ ನೆಲೆಗೊಂಡು ಸಂತೃಪ್ತ ಜೀವನ ನಡೆಸಿದ ಡಿ. ಸಿ. ಪಾವಟೆಯವರು ಬೆಂಗಳೂರಿನ ಬಸವ ಸಮಿತಿಯ ಸಲಹೆಗಾರರಾಗಿ ದುಡಿದರು. ವಿಧಾನ ಸೌಧದ ಬಳಿ ಬಸವ ಭವನ ನಿರ್ಮಿಸಲು ಶ್ರಮಿಸಿದರು. ೧೯೭೯ರ ಜನವರಿ ೧೭ರಂದು ಬದುಕಿಗೆ ವಿದಾಯ ಹೇಳಿದರು. ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿದ ಮಹತ್ತರ ಕೊಡುಗೆಯ ನೆನಪಿಗಾಗಿ ಇವರ ಕುಟುಂಬವರ್ಗದವರು, ಇವರ ಹುಟ್ಟೂರಾದ ಮಮದಾಪುರದಲ್ಲಿ ಇವರ ತಂದೆ ಚಿಂತಪ್ಪ ಪಾವಟೆಯವರ ಹೆಸರಿನಲ್ಲಿ ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿ, ಇವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Dr. D. C. Pavate Memorial Fellowship to Cambridge Archived 4 March 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- Karnataka University Archived 24 March 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- D. C. Pavate College Archived 14 August 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- 15°26′26″N 74°59′07″E / 15.440583°N 74.985362°E Pavate statue
- Karnatak Science College Archived 25 January 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Padma_Bhushan_Awards_(1960%E2%80%9369)#1967
- ↑ http://www.cam.ac.uk/news/pavate-fellowship-deadline-extended
- ↑ https://books.google.de/books?id=SdMtAAAAMAAJ&q=inauthor:%22Dadappa+Chintappa+Pavate%22&dq=inauthor:%22Dadappa+Chintappa+Pavate%22&hl=de&sa=X&ei=yymZVICDMsWMuATl_YHoCQ&ved=0CCIQ6AEwAA
- ↑ https://books.google.de/books?id=JlgKAAAAMAAJ&q=inauthor:%22Dadappa+Chintappa+Pavate%22&dq=inauthor:%22Dadappa+Chintappa+Pavate%22&hl=de&sa=X&ei=yymZVICDMsWMuATl_YHoCQ&ved=0CCkQ6AEwAQ