ತೌಫಿಲ್ ಗೋಟ್ಯಾ

ತೌಫಿಲ್ ಗೋಟ್ಯಾ (1811-72) ಒಬ್ಬ ಫ್ರೆಂಚ್ ಕವಿ, ಕಾದಂಬರಿಕಾರ, ವಿಮರ್ಶಕ, ಪ್ರವಾಸ ಲೇಖಕ.
ಜೀವನ, ಸಾಧನೆಗಳು
[ಬದಲಾಯಿಸಿ]ತಾರ್‌ಬೆಸ್ಸಿನಲ್ಲಿ ಹುಟ್ಟಿದ ಈತ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ತಾಳಿದ್ದ. ಸರ್ಕಾರಿ ಅಧಿಕಾರಿಯಾಗಿದ್ದ ಜೀನ್ ಪಿಯೇರ್ ಗೋಟ್ಯಾ ಈತನ ತಂದೆ.[೧] ಚಿತ್ರಕಲೆಯನ್ನು ಆಳವಾಗಿ ಅಭ್ಯಸಿಸಿ ಪರಿಣತಿ ಪಡೆದರೂ ಸ್ವಲ್ಪಕಾಲದ ಅನಂತರ ಅದನ್ನು ಬಿಟ್ಟು ಲೇಖನವೃತ್ತಿಯನ್ನು ಅವಲಂಬಿಸಿದ. ಫ್ರಾನ್ಸಿನಲ್ಲಿ ರೊಮ್ಯಾಂಟಿಕ್ ಪಂಥ ಗರಿಗೆದರಿ ಹಾರುತ್ತಿದ್ದ ಕಾಲದಲ್ಲಿ ಈತ ಬಹು ಬೇಗ ಅದರ ಪ್ರಭಾವಕ್ಕೆ ಒಳಗಾಗಿ ಹ್ಯೂಗೋ, ನೆರ್ವಲ್ ಮುಂತಾದವರ ಜೊತೆ ಸೇರಿದ. ಸ್ವತಃ ರೊಮ್ಯಾಂಟಿಕ್ ಪಂಥದ ಅನುಯಾಯಿಯಾದರೂ ಸಾಹಿತ್ಯದಲ್ಲಿ ರೂಪಕ್ಕೆ (ಫಾರಂ) ಹೆಚ್ಚು ಪ್ರಾಧಾನ್ಯವಿರಬೇಕು, ಕವಿ ತನ್ನ ಕೃತಿಯನ್ನು ತಿದ್ದಿ ಹಸನುಗೊಳಿಸಿ, ನುಣುಪಾಗಿಸಬೇಕು ಎಂದು ವಾದಿಸಿದ. ರೊಮ್ಯಾಂಟಿಕ್ ಮತ್ತು ಕ್ಲಾಸಿಕಲ್ ತತ್ತ್ವಗಳೆರಡನ್ನೂ ಸಮನ್ವಯಗೊಳಿಸ ಹೊರಟು ಹೊಸ ವಿಚಾರ ಪರಂಪರೆಯನ್ನೇ ಪ್ರತಿಪಾದಿಸಿದ. ಕಲೆಗಾಗಿ ಕಲೆ ಎಂಬ ಚಳವಳಿಯನ್ನು ಫ್ರಾನ್ಸಿನಲ್ಲಿ ಬಿತ್ತಿದವ ಈತನೇ.[೨] ತನ್ನ ಕೃತಿಗಳಿಂದಾಗಿ ಅನಂತರ ಬಂದ ಫಾರ್ಮಲಿಸ್ಟ್ ಪಂಥದವರಿಗೂ ಸ್ಫೂರ್ತಿ ನೀಡಿದ.
ಗೋಟ್ಯಾ ಮೊದಲು ಬೆಳಕಿಗೆ ಬಂದದ್ದು ತನ್ನ ಎರಡು ಕವನ ಸಂಗ್ರಹಗಳ ಮೂಲಕ. ಈ ಸಂಗ್ರಹಗಳಲ್ಲಿ ಇಂಗ್ಲಿಷ್ ಕವಿ ಬೈರನ್ನನ ಪ್ರಚಂಡ ರೊಮ್ಯಾಂಟಿಕ್ ಕಾವ್ಯಶೈಲಿಯನ್ನು ಅನುಸರಿಸಿದ ಕವನಗಳಿವೆ. 1835ರಲ್ಲಿ ಬರೆದ ಮ್ಯಾಡಮ್ವಾಸಲ್ ಮೋಪಿನ್ ಎಂಬ ಕಾದಂಬರಿ ಈತನ ಹೆಸರು ಯೂರೋಪಿನಲ್ಲಿ ಮನೆಮಾತಾಗುವಂತೆ ಮಾಡಿತು. ಇಂದಿಗೂ ಲಕ್ಷಾಂತರ ಜನ ಈ ಕಾದಂಬರಿಯನ್ನು ಓದುತ್ತಿದ್ದಾರೆ. ವಿಷಯಲಾಂಪಟ್ಯದ ವಿವರವಾದ ವಿಶ್ಲೇಷಣೆ ಇದೆ ಎಂಬುದೂ ಈ ಕಾದಂಬರಿಯ ಜನಪ್ರಿಯತೆಗೆ ಇರಬಹುದಾದ ಒಂದು ಕಾರಣ. ಈ ಗ್ರಂಥದ ಮುನ್ನುಡಿ ಕಲೆಗಾಗಿ ಕಲೆ ಎನ್ನುವ ಪಂಥದವರ ಘೋಷಣೆಯಂತಿದೆ. ಇದರಲ್ಲಿ ಗೋಟ್ಯಾ ಪತ್ರಿಕೋದ್ಯಮಿ ಲೇಖಕರ ಮೌಢ್ಯವನ್ನೂ, ನಿಯೋಕ್ಲಾಸಿಕಲ್ ಕಲಾತತ್ತ್ವಗಳ ಜಡತ್ವವನ್ನೂ, ಮಧ್ಯಮ ವರ್ಗದವರ ಹುಸಿ ನೀತಿ-ನೇಮಗಳ ಠಕ್ಕುಗಾರಿಕೆಯನ್ನೂ ನಿರ್ದಾಕ್ಷಿಣ್ಯವಾಗಿ ಹಂಗಿಸಿದ್ದಾನೆ. ಕೆಲಸಗಾರನ ಅನನ್ಯ ಸ್ವಾತಂತ್ರ್ಯವನ್ನು ಸಮರ್ಥಿಸುವ ಈ ಮುನ್ನುಡಿ ಸಾಹಿತ್ಯ ವಿಮರ್ಶೆಯಲ್ಲಿ ಒಂದು ಮಹತ್ತ್ವದ ಕೃತಿ ಎನ್ನುವುದುಂಟು. ಪತ್ರಿಕೋದ್ಯೋಗಿ ಲೇಖಕರನ್ನು ಖಂಡಿಸಿದ ಗೋಟ್ಯಾ ಸ್ವತಃ ಪತ್ರಿಕೋದ್ಯಮದ ವ್ಯವಸಾಯದಿಂದಲೇ ಬದುಕಬೇಕಾಗಿ ಬಂತು. ಸಂಪಾದಕನಾಗಿ, ನಾಟಕ ಮತ್ತು ಕಲಾ ವಿಮರ್ಶಕನಾಗಿ, ಲಘು ಪ್ರವಾಸ ಕಥನಗಳನ್ನೂ, ಸಾಮಯಿಕವಾದ ನೂರಾರು ಲೇಖನಗಳನ್ನೂ ಗೀಚಿ ಸಂಸಾರ ನಡೆಸಬೇಕಾಯಿತು. ಹೀಗೆ ಬಹು ಕಷ್ಟಕೋಟಲೆಗೆ ಸಿಕ್ಕಿದ ಈತನ ಜೀವನದಲ್ಲಿ ಚಾರ್ಲೆಟಾ ಗ್ರಿಸಿ ಎಂಬ ನಟಿಯನ್ನು ಪ್ರೀತಿಸುತ್ತಿದ್ದ ಕಾಲವೇ ಅತ್ಯಂತ ಸುಖಕರ ಘಳಿಗೆಗಳಾದುವು.
ತನ್ನ ೧೮೪೮ರ ಪ್ರಬಂಧ ಲಾ ರಿಪಬ್ಲಿಕ್ ಡೆ ಲಾವನೀರ್‌ನಲ್ಲಿ, ಇವನು ಹೊಸ ಗಣರಾಜ್ಯದ ಆಗಮನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮುಂದಣ ಪ್ರಗತಿಯನ್ನು ಕೊಂಡಾಡಿದ್ದಾನೆ.[೩] ಗೋಟ್ಯಾ ಯಾವುದೇ ಸ್ಥಾಪಿತ ಧರ್ಮವನ್ನು ಅಭ್ಯಸಿಸುತ್ತಿರಲಿಲ್ಲ.[೪]
ಗೊಟ್ಯಾಗೆ ನಿಜವಾದ ಖ್ಯಾತಿ ದೊರಕಿದ್ದು ಈತ ಬರೆದ ಕಾವ್ಯದಿಂದ. ಈತನಿಗಿಂತ ಉನ್ನತ ಮಟ್ಟದ ಕವಿ ಎನಿಸಿಕೊಂಡ ಷಾರ್ಲ ಬೋಡ್‍ಲಾರ್ ಈತನನ್ನು ಬಹಳವಾಗಿ ಪ್ರಶಂಸಿಸಿ ತನ್ನ ಮಾರ್ಗದರ್ಶಕನೆಂದು ಗೌರವಿಸಿದ್ದಾನೆ. ಗೋಟ್ಯಾನ ಕವನಗಳು ಕಿಂಚಿತ್ತೂ ಊನವಿಲ್ಲದ ಮುತ್ತಿನಂಥ ಉತ್ಕೃಷ್ಟ ರಚನೆಗಳು. ಎನಾಮೆಲ್ಸ್ ಅಂಡ್ ಕೇಮಿಯೋಸ್ (1852) ಎನ್ನುವ ಕವನಗುಚ್ಛದಲ್ಲಿ ಈತನ ಮಹತ್ತ್ವಪೂರ್ಣ ಕವನಗಳೆಲ್ಲವೂ ಇವೆ. ಮ್ಯಾಡ್‌ಮ್ವಾಸಲ್ ಮೋಪಿನ್ ಗ್ರಂಥದ ಮುನ್ನುಡಿಯಲ್ಲಿ ಘೋಷಿಸಿದ ಕಲಾತತ್ತ್ವಗಳನ್ನು ಗೋಟ್ಯಾ ತನ್ನ ಕವನಗಳಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ್ದಾನೆ. ಇಲ್ಲಿ ಭಾವಕ್ಕಾಗಲೀ ವಿಚಾರಗಳಿಗಾಗಲೀ ಎಡೆಯಿಲ್ಲ. ಎಚ್ಚರಿಕೆಯಿಂದ ಉಜ್ಜಿ ಉಜ್ಜಿ ಹೊಳಪಿಸಿದ ಮಾತಿನ ಚೂಪುಗಾರಿಕೆ, ವರ್ಣನೆಗಳ ಸಮೃದ್ಧಿ, ಅಭಿವ್ಯಕ್ತಿಯ ಕಲಾವಂತಿಕೆ-ಇವಕ್ಕೆ ಹೆಚ್ಚು ಪ್ರಾಧಾನ್ಯ. ಚಿತ್ರಕಲೆ, ಕಾವ್ಯಗಳೆಲ್ಲವನ್ನೂ ಕರಗತ ಮಾಡಿಕೊಂಡಿದ್ದರಿಂದ ಗೋಟ್ಯಾ ಅವೆಲ್ಲವನ್ನೂ ಇಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದಾನೆ. ಸಿಂಫನಿ ಇನ್ ಹ್ವೆಟ್ ಮೇಜರ್ ಎಂಬುದು ಒಂದು ಅಪೂರ್ಣ ಕವನ. ಕಲೆ ಎನ್ನುವ ಇನ್ನೊಂದು ಕವನದಲ್ಲಿ ತನ್ನ ಎಲ್ಲ ತತ್ತ್ವಗಳನ್ನೂ ಕವಿ ನವುರಾಗಿ ಅಡಗಿಸಿದ್ದಾನೆ. ಕೈಗೆ ಎಟುಕದೆ ನುಣುಚಿಕೊಂಡು ಹೋಗುವ ಪ್ರಕಾರಗಳನ್ನೂ ಹಿಡಿದು ಬಗ್ಗಿಸಲಾಗದ ಕಾವ್ಯ ಸಾಮಗ್ರಿಗಳನ್ನೂ ಪಳಗಿಸಿ ಅವುಗಳೊಂದಿಗೆ ಕಸರತ್ತು ಮಾಡುವುದರಲ್ಲೇ ಕವಿ ತನ್ನ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾನೆ ಎಂಬ ಟೀಕೆಗೆ ಪಕ್ಕಾಗಿರುವ ಈತ ಈ ಕವನದಲ್ಲಿ ಬಲು ಕ್ಲಿಷ್ಟ ಪದ್ಯರೂಪವೊಂದನ್ನು ಎಷ್ಟೊಂದು ಸುಲಲಿತವಾಗಿ ನಿರ್ವಹಿಸಿ ತನ್ನ ಸೂತ್ರಗಳನ್ನು ಉದಾಹರಿಸಿದ್ದಾನೆ ಎಂಬುದನ್ನು ನೋಡಬಹುದು.
ಕಲೆಗೆ, ಹೊರಗಿನ ಏನೊಂದು ಉಪಾಧಿಯೂ ಬೇಕಿಲ್ಲ-ಅದು ತನ್ನನ್ನು ತಾನೇ ಸಮರ್ಥಿಸಿಕೊಳ್ಳುವಂಥದು. ಮಾನವ ನಿರ್ಮಿತಿಗಳಲ್ಲಿ ಅದು ಬಹುಕಾಲ ಬೆಲೆಬಾಳುವಂಥದು ... ನಗರವೊಂದು ನಾಶವಾಗಿ ಹೋದ ಮೇಲೂ ಅದರ ನಡುವಣ ಶಿಲ್ಪಾಕೃತಿ ನಿಂತೇ ಇರುತ್ತದೆ. ... ದೇವಾಧಿದೇವತೆಗಳೆಲ್ಲ ಸತ್ತರೂ ಕಂಚಿನಾಕೃತಿಗಿಂತ ಕಾವ್ಯ ಹೆಚ್ಚು ಕಾಲ ಬದುಕಿರಬಲ್ಲದು- ಗೋಟ್ಯಾನ ಈ ಮಾತುಗಳು ಆತ ಪ್ರಾರಂಭಿಸಿದ ಚಳವಳಿಯ ಬೀಜಮಂತ್ರ ಎಂಬುದಾಗಿ ವಿಮರ್ಶಕರ ಅಭಿಮತ.
ಉಲ್ಲೇಖಗಳು
[ಬದಲಾಯಿಸಿ]- ↑ See : "Cimetières de France et d'ailleurs – La descendance de Théophile Gautier", landrucimetieres.fr
- ↑ G Brereton, A Short History of French Literature (Penguin 1954) p. 288
- ↑ Spencer, Michael Clifford (1969). The Art Criticism of Theophile Gautier. Librairie Droz. p. 44.
- ↑ Gautier (1912), p. 5.
ಗ್ರಂಥಸೂಚಿ
[ಬದಲಾಯಿಸಿ]- Gautier, Théophile; F.C. de Sumichrast, trans., ed., introduction (1912), The Romances of Théophile Gautier, Volume Five, Boston: Little, Brown & Company.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Gautier's Love of Cats
- Works by ತೌಫಿಲ್ ಗೋಟ್ಯಾ at Project Gutenberg
- Works by Pierre Jules Théophile Gautier at Faded Page (Canada)
- Works by or about ತೌಫಿಲ್ ಗೋಟ್ಯಾ at Internet Archive
