ವಿಷಯಕ್ಕೆ ಹೋಗು

ತ್ರಿಶಂಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ರಿಶಂಕು ಒಬ್ಬ ಅರಸನಾಗಿದ್ದನು. ಸೂರ್ಯವಂಶದ ಇಕ್ಷ್ವಾಕು ರಾಜಸಂತತಿಯಲ್ಲಿ ಜನಿಸಿದವ. ಈತನ ಇನ್ನೊಂದು ಹೆಸರು ಸತ್ಯವ್ರತ. ಹೆಂಡತಿ ಸತ್ಯವ್ರತೆ. ಈತನ ಮಗನೇ ಸತ್ಯಸಂಧರಲ್ಲಿ ಅಗ್ರೇಸರನೆಂದು ಪ್ರಖ್ಯಾತಿಗೊಂಡ ಹರಿಶ್ಚಂದ್ರ. ಒಮ್ಮೆ ಸತ್ಯವ್ರತ ಮದುವೆಯಾದ ಹುಡುಗಿಯೊಬ್ಬಳನ್ನು ಅಪಹರಿಸಿದ. ಈ ದೂರು ರಾಜನ ಕಿವಿಗೆ ಬಿತ್ತು ಕೋಪಗೊಂಡ ರಾಜ ಮಗನಿಗೆ ಶ್ವಪಾಕರೊಂದಿಗೆ (ನಾಯಿಮಾಂಸ ಬೇಯಿಸುವವರ ಹತ್ತಿರ) ವಾಸಮಾಡು ಎಂದು ಶಾಪವಿತ್ತ. ಅದರಂತೆ ಸತ್ಯವ್ರತ ಶ್ವಪಾಕರೊಂದಿಗೆ ವಾಸಮಾಡತೊಡಗಿದ. ಈ ಅಧರ್ಮದ ಫಲವಾಗಿ ಇಂದ್ರ ಹನ್ನೆರಡು ವರ್ಷ ಮಳೆ ಸುರಿಸಲಿಲ್ಲ. ದೇಶದಲ್ಲೆಲ್ಲ ಕ್ಷಾಮ ಆವರಿಸಿತು. ಅತ್ತ ವಿಶ್ವಾಮಿತ್ರ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಸಮುದ್ರತೀರದಲ್ಲಿ ತಪಸ್ಸನ್ನು ಅಚರಿಸತೊಡಗಿದ. ಆ ಕ್ಷಾಮಕಾಮದಲ್ಲಿ ವಿಶ್ವಾಮಿತ್ರನ ಕುಟುಂಬದವರು ಜೀವಿಸುವುದಕ್ಕೆ ದಾರಿಗಾಣದೆ ಹಿಂಸೆಪಡುತ್ತಿರುವುದನ್ನು ಕಂಡ ಸತ್ಯವ್ರತ ಆ ಕುಟುಂಬವನ್ನು ಸಂರಕ್ಷಿಸುವ ಭಾರ ಹೊತ್ತ. ಹೀಗಿರಲು ಒಂದು ದಿನ ಎಲ್ಲಿಯೂ ಮಾಂಸ ದೊರಕದೆ ಹೋಗಲು ಹಸಿವಿನಿಂದ ಕಂಗಾಲಾದ ಸತ್ಯವ್ರತ ವಸಿಷ್ಠನ ಆಕಳೊಂದನ್ನು ಅಪಹರಿಸಿ ಅದನ್ನು ಕೊಂದು ಅದರ ಮಾಂಸವನ್ನು ಪ್ರೋಕ್ಷಣಾದಿ ಸಂಸ್ಕಾರಮಾಡದೆ ತಾನೂ ತಿಂದು ವಿಶ್ವಾಮಿತ್ರನ ಕುಟುಂಬದವರಿಗೂ ಊಟ ಮಾಡಿಸಿದ. ಈ ಸಮಾಚಾರವನ್ನು ತಿಳಿದ ವಸಿಷ್ಠ ಕೋಪಗೊಂಡು "ನೀನು ತಂದೆಗೆ ದುಃಖವನ್ನುಂಟು ಮಾಡಿರುವೆ; ಗುರುವಿನ ಹಸುವನ್ನು ಕೊಂದಿರುವೆ, ಪರರ ವಸ್ತುವನ್ನು ಉಪಯೋಗಿಸಿರುವೆ. ಈ ರೀತಿಯಾಗಿ ಮೂರು ಶಂಕು (ಪಾಪ) ಗಳನ್ನು ಮಾಡಿದುದರಿಂದ ಪತಿತನಾದೆ, ನಿನ್ನನ್ನು ಜನ ತ್ರಿಶಂಕು ಎಂದು ಕರೆಯಲಿ" ಎಂದು ಶಾಪವಿತ್ತ. ಅಂದಿನಿಂದ ಸತ್ಯವ್ರತ ತ್ರಿಶಂಕುವಾದ. ಮುಂದೆ ತಪಸ್ಸನ್ನು ಮುಗಿಸಿಕೊಂಡು ಬಂದ ವಿಶ್ವಾಮಿತ್ರ ತನ್ನ ಸಂಸಾರವನ್ನು ಕ್ಷಾಮಕಾಲದಲ್ಲಿ ಕಾಪಾಡಿದ ತ್ರಿಶಂಕುವನ್ನು ಸುಪ್ರೀತನಾಗಿ ಆತನನ್ನು ಆತನ ತಂದೆಯ ರಾಜ್ಯದಲ್ಲಿ ಪ್ರತಿಷ್ಠಿಸಿದ.

ಯಾಗಮಾಡಿ ಸಶರೀರನಾಗಿ ಸ್ವರ್ಗಕ್ಕೆ ಹೋಗಬೇಕೆಂದು ಅಭಿಲಾಷೆಯಿಂದ ತ್ರಿಶಂಕು ಯಜ್ಞಮಾಡಬೇಕೆಂದು ಉದ್ದೇಶಿಸಿ ತನ್ನ ಕುಲಗುರುವಾದ ವಸಿಷ್ಠನ ಬಳಿಗೆ ಹೋದ. ತನ್ನ ಬಯಕೆ ಅಸಾಧ್ಯವಾದುದೆಂದು ವಸಿಷ್ಠನಿಂದ ತಿಳಿದು ಆತನನ್ನು ಧಿಕ್ಕರಿಸಿ ಆತನ ಮಕ್ಕಳ ಬಳಿಗೆ ಬಂದು ತನ್ನ ಬಯಕೆಯನ್ನು ನಿವೇದಿಸಿಕೊಂಡ. ಅವರಿಂದಲೂ ತಿರಸ್ಕøತನಾದ ತ್ರಿಶಂಕು ವಿಶ್ವಾಮಿತ್ರನ ಬಳಿಗೆ ಬಂದು ತನ್ನ ಸಮಾಚಾರವನ್ನೆಲ್ಲ ತಿಳಿಸಿದ. ಮೊದಲು ವಿಶ್ವಾಮಿತ್ರ ಅದು ಸಾಧ್ಯವಿಲ್ಲವೆಂದು ಹೇಳಿದರೂ ವಸಿಷ್ಠನ ಮೇಲಿನ ಸೇಡಿನಿಂದಾಗಿ ತ್ರಿಶಂಕುವಿನ ಅಭಿಪ್ರಾಯ ದೇವತೆಗಳನ್ನು ಆಮಂತ್ರಿಸಿದಾಗ ಅವರು ಬಾರದಿರಲು ರೋಷಗೊಂಡ ವಿಶ್ವಾಮಿತ್ರ ತನ್ನ ತಪೋಬಲವನ್ನು ಧಾರೆ ಎರೆದು ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿದ. ತ್ರಿಶಂಕು ಸಶರೀರಿಯಾಗಿ ಸವರ್ಗವನ್ನು ಪ್ರವೇಶಿಸುವುದನ್ನು ಕಂಡ ಇಂದ್ರ ನಿನಗೆ ಸ್ವರ್ಗದಲ್ಲಿ ಸ್ಥಾನವಿಲ್ಲ ತಲೆಕೆಳಗಾಗಿ ಭೂಮಿಯ ಕಡೆಗೆ ಬೀಳುತ್ತಿದ್ದ ತ್ರಿಶಂಕುವನ್ನು ಅಲ್ಲಿಯೇ ನಿಲ್ಲಿಸಿ ವಿಶ್ವಾಮಿತ್ರ ತ್ರಿಶಂಕುವಿಗಾಗಿ ಮತ್ತೊಂದು ಸ್ವರ್ಗವನ್ನು ನಿರ್ಮಿಸತೊಡಗಿದ. ಅಗ ಇಂದ್ರಾದಿಗಳು ಹೆದರಿ ವಿಶ್ವಾಮಿತ್ರನ ಬಳಿಗೆ ಬಂದು ಮೊರೆಯಿಡಲು ತನ್ನ ಪ್ರತಿಜ್ಞೆಗೆ ಭಂಗತರಬಾರದೆಂದು ಹೇಳಿ, ಆಕಾಶದಲ್ಲಿ ಧ್ರುವ ನಕ್ಷತ್ರವಿರುವವರೆಗೆ ತ್ರಿಶಂಕು ಸಶರೀರಿಯಾಗಿ ಅಲ್ಲಿಯೇ ನಿಲ್ಲಲಿ, ಇದಕ್ಕೆ ಎಲ್ಲರೂ ಒಪ್ಪಬೇಕೆಂದುವಿಶ್ವಾಮಿತ್ರ ಇಂದ್ರಾದಿಗಳನ್ನು ಕೇಳಿ ಕೊಂಡ. ಅಂದಿನಿಂದ ತ್ರಿಶಂಕು ಯಜ್ಞಪುರುಷ ಸಂಚರಿಸುವ ಮಾರ್ಗಕ್ಕೆ ಹೊರಭಾಗದಲ್ಲಿ ನಿಂತ. ಆತನ ಸುತ್ತಲೂ ನಕ್ಷತ್ರಗಳು ಸಂಚರಿಸತೊಡಗಿದವು. ಅಂದಿನಿಂದ ಆಕಾಶದಲ್ಲಿ ಅಗ್ನಿಪಥದ ಹೊರಗೆ ತ್ರಿಶಂಕು ನಕ್ಷತ್ರ ಪುಂಜ ಭಾಗಿದ ತಲೆಯೊಡನೆ ಉಜ್ಜ್ವಲವಾಗಿ ಹೊಳೆಯುತ್ತಿದೆ. ಆಧುನಿಕ ಖಗೋಳಶಾಸ್ತ್ರದಲ್ಲಿ ಈ ನಕ್ಷತ್ರಪುಂಜಕ್ಕೆ ಕ್ರಕ್ಸ್ ಎಂಬ ಹೆಸರಿದೆ.[]

ತ್ರಿಶಂಕುವಿನ ಕಥೆ ಪ್ರಾಚೀನವಾದ ವಾಯು, ಬ್ರಹ್ಮಾಂಡ, ಬ್ರಹ್ಮಪುರಾಣಗಳು ಹಾಗೂ ಹರಿವಂಶದಲ್ಲಿ ವಿಸ್ತಾರವಾಗಿಯೂ ಲಿಂಗ, ಶಿವಪುರಾಣಗಳಲ್ಲಿ ಸಂಕ್ಷೇಪವಾಗಿಯೂ ಬರುತ್ತದೆ. ಅಲ್ಲದೆ ಭಾರತ ಭಾಗವತ, ದೇವಿಭಾಗವತ ಮತ್ತು ವಾಲ್ಮೀಕಿ ರಾಮಾಯಣ ಮೊದಲಾದ ಈಚಿನ ಪುರಾಣಗಳಲ್ಲಿಯೂ ಈ ವೃತ್ತಾಂತ ಬಂದಿರುವುದು ಗಮನಾರ್ಹ. ತ್ರಿಶಂಕು ಚಂಡಾಲನಾಗಿ ಶಾಪ ಪಡೆದು ಸತ್ಯಧರ್ಮಗಳಿಂದ ಹೋರಾಡಿದ ಕಥೆ ಪ್ರಾಚೀನ ಪುರಾಣಗಳಲ್ಲಿ ನಿರೂಪಿತವಾಗಿದ್ದರೆ, ಅವನು ವಿಶ್ವಾಮಿತ್ರನ ನೇತೃತ್ವದಲ್ಲಿ ಯಾಗ ನಡೆಸಿ ಸಶರೀರನಾಗಿ ಸ್ವರ್ಗಕ್ಕೆ ಹೋದ ಕಥೆ ರಾಮಾಯಣಾದಿಗಳಲ್ಲಿ ವಿಸ್ತಾರವಾಗಿ ವರ್ಣಿತವಾಗಿದೆ. ತ್ರಿಶಂಕು ಮಹಾಬಲಶಾಲಿ, ಧರ್ಮಿಷ್ಠ, ವದಾನ್ಯ ಎಂದರೆ ಉದಾರಶೀಲ, ಸ್ವತಃ ಧರ್ಮಾತ್ಮನಾದ ರಾಜ. ಆದರೂ ವಿಧಿ ಅವನನ್ನು ಕಾಡಿತು. ಶಾಪದಿಂದ ಚಂಡಾಲನಾಗಿ ಜೀವಿಸುತ್ತಿದ್ದರೂ ವಿಶ್ವಾಮಿತ್ರನ ಹೆಂಡತಿ ಮಗನನ್ನು ಕ್ಷಾಮಕಾಲದಲ್ಲಿ ಕಷ್ಟಪಟ್ಟು ಧರ್ಮದಿಂದ ಕಾಪಾಡಿದ ಧೀರ, ಅವನು. ಇದೇ ಕಾರಣ ಅವನಲ್ಲಿ ವಿಶ್ವಾಮಿತ್ರನಿಗೆ ಅಪಾರ ಒಲವು, ಸಶರೀರನಾಗಿ ಸ್ವರ್ಗಕ್ಕೇರುವ ಅವನ ಆಸೆ ಮಹತ್ತರವಾದುದು. ದೈವಶಕ್ತಿಯನ್ನು ಮೀರಿಸಿದ ಪೌರುಷಕ್ಕೆ ಇಲ್ಲಿ ಪ್ರಯತ್ನ ನಡೆದಿದೆ. ಪೌರುಷವೇ ಪರಮ ರೂಪಾದಂತೆ ಇರುವ ವಿಶ್ವಾಮಿತ್ರ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ. ಅವನನ್ನು ಇಂದ್ರನು ಅಲ್ಲಿಂದ ತಳ್ಳಿದರೆ ತ್ರಿಂಶಕುವನ್ನು ಅಂತರಿಕ್ಷದಲ್ಲೇ ನಿಲ್ಲಿಸಿ ಅವನಿಗಾಗಿ ಪ್ರತಿಸೃಷ್ಟಿಯನ್ನೇ ಮಾಡುತ್ತಾನೆ. ಅನ್ಯಮಿಂದ್ರಂ ಕರಿಷ್ಯಾಮಿ, ಲೋಕೋವಾಸ್ತಾದನಿಂದ್ರಕಃ (ಇನ್ನೊಬ್ಬ ಇಂದ್ರನನ್ನು ಸೃಷ್ಟಿಸುತ್ತೇನೆ, ಅಥವಾ ಲೋಕಗಳಿಗೆ ಇಂದ್ರನೇ ಬೇಡ) ಎನ್ನುವ ಕೆಚ್ಚು ವಿಶ್ವಾಮಿತ್ರನದು.

ಉಲ್ಲೇಖಗಳು

[ಬದಲಾಯಿಸಿ]
  1. "Crux - Trishanku". Space Yuga. 10 Feb 2010. Archived from the original on 30 January 2012. Retrieved 15 June 2011. {{cite web}}: Cite has empty unknown parameter: |coauthors= (help); Unknown parameter |deadurl= ignored (help)


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: