ವಿಷಯಕ್ಕೆ ಹೋಗು

ದೃಕ್ ದೂರದರ್ಶಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಿಜ಼ೋನಾದಲ್ಲಿನ ಮೌಂಟ್ ಗ್ರಹಾಮ್ ಅಂತರರಾಷ್ಟ್ರೀಯ ವೀಕ್ಷಣಾಲಯದಲ್ಲಿರುವ ಲಾರ್ಜ್ ಬೈನಾಕ್ಯುಲರ್ ಟೆಲಿಸ್ಕೋಪ್ ಬೆಳಕನ್ನು ಶೇಖರಿಸಲು ಎರಡು ವಕ್ರ ಕನ್ನಡಿಗಳನ್ನು ಬಳಸುತ್ತದೆ

ದೃಕ್ ದೂರದರ್ಶಕ ಎನ್ನುವುದು ದೂರದ ವಸ್ತುವಿನ ಬಿಂಬವನ್ನು (image) ಲಂಬಿಸಿ ರೂಪಿಸಲು ಬಳಸುವ ಉಪಕರಣ (ಆಪ್ಟಿಕಲ್ ಟೆಲಿಸ್ಕೋಪ್). ಇಂಥ ಒಂದು ದೂರದರ್ಶಕ, ನಮ್ಮ ಬರಿಕಣ್ಣುಗಳು ಸಂಗ್ರಹಿಸುವುದಕ್ಕಿಂತ ಅದೆಷ್ಟೊ ಹೆಚ್ಚಿನ ಮೊತ್ತದ ಬೆಳಕನ್ನು ಕಲೆಹಾಕಿ, ಕಣ್ಣುಗಳು ನೋಡಿ ತಿಳಿಯಬಹುದಾದಷ್ಟು ಇಲ್ಲವೇ ಫೋಟೋ ತೆಗೆಯಲು ಅನುಕೂಲವಾಗುವಷ್ಟು ಇಲ್ಲವೇ ಬೇರೆ ಯಾವುದೋ ವಿಧದಲ್ಲಿ ಅಳತೆ ಮಾಡಲು ಸಾಧ್ಯವಾಗುವಷ್ಟು, ಕಿರಿಯ ಜಾಗಕ್ಕೆ ಕೇಂದ್ರೀಕರಿಸುತ್ತವೆ.

ಬಗೆಗಳು

[ಬದಲಾಯಿಸಿ]

ದೃಕ್ ಟೆಲಿಸ್ಕೋಪುಗಳಲ್ಲಿ ಮೂಲಭೂತವಾಗಿ ಎರಡು ಪ್ರರೂಪಗಳಿವೆ (ಟೈಪ್ಸ್):

  • ರಿಫ್ರೇಕ್ಷಣ (ರಿಫ್ರ್ಯಾಕ್ಟಿಂಗ್) ಪ್ರರೂಪ ಅಂದರೆ ಲೆನ್ಸ್  ಪ್ರರೂಪದ ಟೆಲಿಸ್ಕೋಪ್. ರಿಫ್ರೇಕ್ಷಣ ಟೆಲಿಸ್ಕೋಪಿನಲ್ಲಿ ಪೀನಮಸೂರ (ಕಾನ್ವೆಕ್ಸ್ ಲೆನ್ಸ್) ಪ್ರಧಾನ ಭಾಗ. ಒಂದು ನಕ್ಷತ್ರದಿಂದ ಮಸೂರದ ಎದುರುಮುಖದ ಮೇಲೆ ಪಾತವಾಗುವ ಬೆಳಕಿನ ಕಿರಣ ರಿಫ್ರೇಕ್ಷಣಗೊಂಡು ಹಿಂದಿನ ಮುಖದ ಮೂಲಕ ಹೊರಸಾಗುತ್ತದೆ. ಇಂಥ ಎಲ್ಲ ಕಿರಣಗಳೂ ಒಂದು ನಿರ್ದಿಷ್ಟ ಬಿಂದುವಿನಲ್ಲಿ ಸಂಗಮಿಸುತ್ತವೆ. ಈ ಬಿಂದುವಿಗೆ ಮಸೂರದ ನಾಭಿ (ಫೋಕಸ್) ಎಂದು ಹೆಸರು. ಹೀಗೆ ನಾಭಿಯಲ್ಲಿ ಕೇಂದ್ರೀಕೃತವಾದ ಬೆಳಕನ್ನು ಇನ್ನೊಂದು ಕಿರಿಯ ಮಸೂರದ ಮೂಲಕ ವೀಕ್ಷಕ ಪರೀಕ್ಷಿಸುತ್ತಾನೆ. ಈ ನೇತ್ರಮಸೂರ (ಐ ಪೀಸ್) ನಾಭಿಯಲ್ಲಿರುವ ಬೆಳಕಿನ ಬಿಂಬವನ್ನು ಲಂಬಿಸುವುದರಿಂದ ವೀಕ್ಷಕನಿಗೆ ಆಕಾಶಕಾಯದ ನೋಟ ಒದಗುವುದು.
  • ಪ್ರತಿಫಲನ (ರಿಫ್ಲೆಕ್ಟಿಂಗ್) ಪ್ರರೂಪ ಅಂದರೆ ಕನ್ನಡಿ ಪ್ರರೂಪದ ಟೆಲಿಸ್ಕೋಪ್. ಪ್ರತಿಫಲನ ಟೆಲಿಸ್ಕೋಪ್ ಕಾರ್ಯನಿರ್ವಹಿಸುವ ರೀತಿ ಬೇರೆ. ವಕ್ರತಲವಿರುವ ಕನ್ನಡಿ ಇಲ್ಲಿನ ಪ್ರಧಾನ ಭಾಗ. ಇದಕ್ಕೆ ಪರವಲಯ ಆಕಾರ ಉಂಟು. ಈ ಪರವಲಯದ ಒಳಭಾಗ ಪ್ರತಿಫಲಿಸುವ ಕನ್ನಡಿ (ಇದೊಂದು ನಿಮ್ನ ಕನ್ನಡಿ-ಕಾನ್‌ಕೇವ್ ಮಿರರ್). ಉದ್ದವಾದ ಕೊಳವೆಯ ತಲದಲ್ಲಿ ಈ ಕನ್ನಡಿಯನ್ನು ಅಳವಡಿಸಿರುತ್ತಾರೆ. ಕೊಳವೆಯ ಮೂಲಕ ಬರುವ ನಕ್ಷತ್ರದ ಬೆಳಕಿನ ಕಿರಣಗಳು ನಿಮ್ನಕನ್ನಡಿಯ ಮೇಲೆ ಪಾತವಾದಾಗ ಅವು ಪ್ರತಿಫಲಿಸಲ್ಪಟ್ಟು ಕನ್ನಡಿಯ ಎದುರು (ಅಂದರೆ ಬೆಳಕು ಬಂದಿರುವ ಕಡೆ) ಒಂದು ಬಿಂದುವಿನಲ್ಲಿ ಸಂಗಮಿಸುತ್ತವೆ. ಸಂಗಮ ಬಿಂದು ಪರವಲಯದ ನಾಭಿ. ಈ ನಾಭಿಯಲ್ಲಿ ರೂಪುಗೊಳ್ಳುವ ನಕ್ಷತ್ರದ ಬಿಂಬವನ್ನು ನೇರವಾಗಿ ನೋಡುವುದು ಸಾಧ್ಯವಾಗದು. ಆದ್ದರಿಂದ ಇದಕ್ಕೆ ಬೇಕಾದ ಅಳವಡಿಕೆಯನ್ನು ಮಾಡಿಕೊಂಡು ನೇತ್ರ ಮಸೂರದ ನೆರವಿನಿಂದ ಆ ಬಿಂಬವನ್ನು ಲಂಬಿಸಿ ನೋಡಬಹುದು. (ಇಂಥ ಅಳವಡಿಕೆಯ ವಿಧಾನವನ್ನು ಅನುಸರಿಸಿ ಎರಡು ವಿಧದ ಟೆಲಿಸ್ಕೋಪುಗಳಿವೆ.)

ಇತಿಹಾಸ

[ಬದಲಾಯಿಸಿ]

೧೬೦೮ರಲ್ಲಿ ನೆದರ್ಲೆಂಡ್ಸ್‌ನಲ್ಲಿ, ರಿಫ್ರೇಕ್ಷಣ ದೃಕ್ ದೂರದರ್ಶಕವನ್ನು ವಿವರಿಸುವ ಮೊದಲ ದಸ್ತಾವೇಜುಗಳು ಕಾಣಿಸಿಕೊಂಡವು. ಇದು ಒಂದು ಪೇಟೆಂಟ್ ರೂಪದಲ್ಲಿತ್ತು. ಇದಕ್ಕೆ ಕನ್ನಡಕ ತಯಾರಕ ಹ್ಯಾನ್ಸ್ ಲಿಪರ್‌ಶೇ ಅರ್ಜಿ ಸಲ್ಲಿಸಿದ್ದರು. ಕೆಲವು ವಾರಗಳ ನಂತರ ಜೇಕಬ್ ಮೆಟಿಯಸ್ ಇದೇ ಹಕ್ಕು ಸಾಧಿಸಿದರು. ನಂತರ ಒಬ್ಬ ಮೂರನೇ ಅಜ್ಞಾತ ಅರ್ಜೀದಾರನು ತನಗೂ ಈ ಕಲೆ ತಿಳಿದಿದೆಯೆಂದು ಸಾಧಿಸಿದನು.[]

ಈ ಆವಿಷ್ಕಾರದ ವಾರ್ತೆ ವೇಗವಾಗಿ ಹರಡಿತು ಮತ್ತು ಈ ಸಾಧನದ ಬಗ್ಗೆ ಕೇಳಿದ ಗೆಲಿಲಿಯೋ ಗೆಲಿಲಿ ಒಂದು ವರ್ಷದೊಳಗೆ ತನ್ನದೇ ಸ್ವಂತ ಸುಧಾರಿತ ವಿನ್ಯಾಸಗಳನ್ನು ತಯಾರಿಸುತ್ತಿದ್ದನು ಮತ್ತು ದೂರದರ್ಶಕವನ್ನು ಬಳಸಿ ಖಗೋಳ ಫಲಿತಾಂಶಗಳನ್ನು ಪ್ರಕಟಿಸಿದವರಲ್ಲಿ ಮೊದಲಿಗನಾಗಿದ್ದನು.[] ಗೆಲಿಲಿಯೋನ ದೂರದರ್ಶಕವು ಪೀನ ವಸ್ತು ಮಸೂರ ಮತ್ತು ನಿಮ್ನ ನೇತ್ರಮಸೂರವನ್ನು ಬಳಸಿತ್ತು. ಜೊಹಾನಸ್ ಕೆಪ್ಲರ್ ಈ ವಿನ್ಯಾಸಕ್ಕೆ ಸುಧಾರಣೆಯನ್ನು ಪ್ರಸ್ತಾಪಿಸಿದನು.[] ಇದು ಪೀನ ನೇತ್ರಮಸೂರವನ್ನು ಬಳಸುತ್ತಿತ್ತು.

ನ್ಯೂಟನ್ ೧೬೬೮ರಲ್ಲಿ ಮೊದಲ ಕಾರ್ಯರೂಪದ ಪ್ರತಿಫಲನ ದೂರದರ್ಶಕವನ್ನು ನಿರ್ಮಿಸಿದನು.[]

ಪ್ರಸಿದ್ಧ ಬೃಹದ್ಗಾತ್ರದ ದೃಕ್ ದೂರದರ್ಶಕಗಳು

[ಬದಲಾಯಿಸಿ]

ಯಾವುದೇ ಟೆಲಿಸ್ಕೋಪಿನ ಲಂಬನ ಸಾಮರ್ಥ್ಯ, ಆದ್ದರಿಂದ ಉಪಯುಕ್ತತೆ, ಅಂತಿಮವಾಗಿ ಅದರ ಮಸೂರದ ಇಲ್ಲವೇ ಕನ್ನಡಿಯ ಗಾತ್ರವನ್ನು ಅವಲಂಬಿಸಿದೆ. ಬೃಹದ್ಗಾತ್ರದ ಮಸೂರದ ರಚನೆ ತಾಂತ್ರಿಕವಾಗಿ ಜಟಿಲ. ಇನ್ನು ಅದನ್ನು ಯುಕ್ತ ಸ್ಥಾನದಲ್ಲಿ ಅಳವಡಿಸಿ ಉಪಯೋಗಿಸುವುದು ಬಲು ಸೂಕ್ಷ್ಮಕ್ರಿಯೆ. ಕನ್ನಡಿಯ ರಚನೆಯಾಗಲೀ ಅಳವಡಿಕೆಯಾಗಲೀ ಇಂಥ ತೊಂದರೆಗಳನ್ನು ಎದುರೊಡ್ಡುವುದಿಲ್ಲ. ಹೀಗಾಗಿ ಬೃಹದ್ಗಾತ್ರದ ಟೆಲಿಸ್ಕೋಪುಗಳೆಲ್ಲವೂ ಪ್ರತಿಫಲನ ಪ್ರರೂಪದವೇ. ಇವುಗಳಲ್ಲಿ ಹೆಸರಿಸಬೇಕಾದವು ಮೌಂಟ್ ಪಲೋಮರಿನ 200-ಇಂಚ್ ಹೇಲ್ ಟೆಲಿಸ್ಕೋಪ್, ಮೌಂಟ್ ಹ್ಯಾಮಿಲ್ಟನ್ನಿನ ಲಿಕ್ ವೀಕ್ಷಣಾಲಯದಲ್ಲಿರುವ 120-ಇಂಚ್ ಟೆಲಿಸ್ಕೋಪ್ ಮತ್ತು ಮೌಂಟ್ ವಿಲ್ಸನ್ನಿನಲ್ಲಿರುವ 100-ಇಂಚ್ ಹೂಕರ್ ಟೆಲಿಸ್ಕೋಪ್. ರಿಫ್ರೇಕ್ಷಣ ಪ್ರರೂಪದ ಟೆಲಿಸ್ಕೋಪುಗಳಲ್ಲಿ ಅತ್ಯಂತ ದೊಡ್ಡದು ಯರ್ಕ್ಸ್ ವೀಕ್ಷಣಾಲಯದಲ್ಲಿರುವ 40-ಇಂಚ್ ಮಸೂರ. (ಟೆಲಿಸ್ಕೋಪಿನ ಗಾತ್ರ ಎನ್ನುವಾಗ ಅದರ ಕನ್ನಡಿಯು ಅಥವಾ ಮಸೂರದ ವ್ಯಾಸವನ್ನು ಉಲ್ಲೇಖಿಸುವುದು ವಾಡಿಕೆ.)

ದೂರದರ್ಶಕದ ಉಪಯೋಗಗಳು

[ಬದಲಾಯಿಸಿ]

ಖಗೋಳ ವೀಕ್ಷಕನಿಗೆ ಟೆಲಿಸ್ಕೋಪಿನ ಉಪಯೋಗ ನಾಲ್ಕು ಬಗೆಯದು.

  1. ಮೊದಲನೆಯದು, ಗುರಿ ಹಿಡಿಯುವಿಕೆಯಲ್ಲಿ ನಿಖರತೆ. ಅಂದರೆ ಯಾವ ದಿಕ್ಕಿಗೆ ಬೇಕೋ ಅದಕ್ಕೆ ಮಾತ್ರ ನಿಷ್ಕೃಷ್ಟವಾಗಿ ಟೆಲಿಸ್ಕೋಪನ್ನು ಗುರಿ ಹಿಡಿಯಬಹುದು ಮತ್ತು ಗುರಿ ಹಿಡಿದಿರುವ ದಿಕ್ಕನ್ನು ನಿಷ್ಕೃಷ್ಟವಾಗಿ ಅಳತೆ ಮಾಡಿ ತಿಳಿಯಬಹುದು.
  2. ಎರಡನೆಯದು, ಲಂಬನ ಸಾಮರ್ಥ್ಯ (ಮ್ಯಾಗ್ನಿಫೈಯಿಂಗ್ ಪವರ್). ದೂರದ ಮತ್ತು ಚಿಕ್ಕದಾದ ಕಾಯಗಳನ್ನು ಟೆಲಿಸ್ಕೋಪ್ ದೊಡ್ಡದಾಗಿ ಹಿಗ್ಗಿಸಿ ವೀಕ್ಷಣೆಗೆ ಅನುಕೂಲವಾಗುವಂತೆ ವಿಕ್ಷೇಪಿಸುತ್ತದೆ.
  3. ಮೂರನೆಯದು, ಬೆಳಕನ್ನು ಸಂಗ್ರಹಿಸುವ ಸಾಮರ್ಥ್ಯ. ಮಸಕಾದ ಒಂದು ಕಾಯದಿಂದ ಪಾತವಾಗುವ ಬೆಳಕಿನ ಕ್ಷೀಣ ಅಲೆಗಳೆಲ್ಲವನ್ನು ಟೆಲಿಸ್ಕೋಪ್ ಒಂದುಗೂಡಿಸಿ ಕೇಂದ್ರೀಕರಿಸುವುದರಿಂದ ವೀಕ್ಷಕನಿಗೆ ಆ ಕಾಯವನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ.
  4. ನಾಲ್ಕನೆಯದು, ಟೆಲಿಸ್ಕೋಪಿನ ವಿಘಟನ ಸಾಮರ್ಥ್ಯ (ರಿಸಾಲ್ವಿಂಗ್ ಪವರ್). ದೂರದ ನಕ್ಷತ್ರಗಳು ಬರಿಗಣ್ಣಿಗೆ ಒಂದರ ಒತ್ತಿಗೆ ಇನ್ನೊಂದು ಇರುವಂತೆ ಅಖಂಡವಾಗಿ ತೋರಬಹುದು. ನಕ್ಷತ್ರಗಳ ಪ್ರತ್ಯೇಕತ್ವ ಬರಿಗಣ್ಣಿಗೆ ಸ್ಪಷ್ಟವಾಗುವುದಿಲ್ಲ. ಇಂಥಲ್ಲಿ ಒಂದೊಂದು ಬಿಡಿನಕ್ಷತ್ರವನ್ನು ನಿರ್ದಿಷ್ಟವಾಗಿ ತೋರಿಸುವ ಸಾಮರ್ಥ್ಯ ಟೆಲಿಸ್ಕೋಪಿಗಿದೆ.

ಇವೆಲ್ಲ ಉಪಯೋಗಗಳನ್ನೂ ಲಕ್ಷಿಸಿ ಟೆಲಿಸ್ಕೋಪಿನ ಒಂದೊಂದು ಬಿಡಿಭಾಗವನ್ನೂ ಪರಿಷ್ಕರಿಸಿ ಅತ್ಯಧಿಕ ಉಪಯುಕ್ತತೆಯನ್ನು ಪಡೆಯುವುದು ಸಾಧ್ಯ.

ವೀಕ್ಷಣೆಗೆ ದೂರದರ್ಶಕಗಳಲ್ಲಿ ಮಾರ್ಪಾಡುಗಳು

[ಬದಲಾಯಿಸಿ]

ಟೆಲಿಸ್ಕೋಪುಗಳ ಗಾತ್ರ ದೊಡ್ಡದಾದಂತೆ ಅವನ್ನು ದೃಗ್ವೀಕ್ಷಣೆಗೆ ಉಪಯೋಗಿಸುವುದು ಕಷ್ಟವಾಗುತ್ತದೆ. ಅನೇಕ ವೇಳೆ ಕಣ್ಣು ನಿರಪೇಕ್ಷ ಚಿತ್ರವನ್ನು ಕೊಡಲು ವಿಫಲವಾಗುವುದೂ ಒಂದು ಕಾರಣ. ಇಂಥಲ್ಲಿ ಟೆಲಿಸ್ಕೋಪುಗಳಿಗೆ ಫೋಟೋಗ್ರಾಫ್ ತಂತ್ರಗಳನ್ನು ಅಳವಡಿಸಿ ಆಕಾಶದ ಬೇಕಾದ ವಲಯದ ಅಥವಾ ಕಾಯದ ಫೋಟೋಗ್ರಾಫ್ ಪಡೆಯುವ ಏರ್ಪಾಡು ಸಹ ಉಂಟು. ಒಂದು ನಿರ್ದಿಷ್ಟ ಕಾಯದೆಡೆಗೆ ಬಹುಕಾಲ ಟೆಲಿಸ್ಕೋಪ್ ಗುರಿ ಹಿಡಿದುಕೊಂಡೇ ಇರಬೇಕಾದರೆ ಅಂಥ ಟೆಲಿಸ್ಕೋಪಿಗೆ ಭೂಮ್ಯಾವರ್ತನೆಯನ್ನು ರದ್ದುಗೊಳಿಸುವ ಪ್ರತ್ಯಾವರ್ತನೆಯನ್ನು ನೀಡಬೇಕಾಗುತ್ತದೆ. ಈ ಏರ್ಪಾಡು ಕೂಡ ಉಂಟು. ಇಂಥ ಒಂದು ಟೆಲಿಸ್ಕೋಪ್ ಒಂದು ನಿರ್ದಿಷ್ಟ ಕಾಯವನ್ನು ಅದು ಮೂಡಿ ಮುಳುಗುವವರೆಗೂ ಅನುಸರಿಸಿ ಅದರ ಫೋಟೋವರದಿಯನ್ನು ಸಲ್ಲಿಸಬಲ್ಲದು.

ಟೆಲಿಸ್ಕೋಪುಗಳಿಗೆ ಫೋಟೋಮೀಟರುಗಳನ್ನು ಲಗತ್ತಿಸಿ ನಕ್ಷತ್ರದಿಂದ ಪಾತವಾಗುವ ಬೆಳಕಿನ ತೀವ್ರತೆಯನ್ನು (ಇಂಟೆನ್ಸಿಟಿ) ಅಳತೆಮಾಡುವುದು ಸಾಧ್ಯ. ಫೋಟೋಮೀಟರ್ ಎಂಬುದು ತತ್ತ್ವಶಃ ಒಂದು ದ್ಯುತಿವೈದ್ಯುತಕೋಶ (ಫೋಟೋ-ಎಲೆಕ್ಟ್ರಿಕ್ ಸೆಲ್). ನಕ್ಷತ್ರದಿಂದ ಬಂದ ಬೆಳಕಿನ ಕಿರಣ ಈ ಕೋಶದ ಮೇಲೆ ಪಾತವಾದಾಗ ಸೂಕ್ಷ್ಮ ವಿದ್ಯುತ್ಪ್ರವಾಹ ಉತ್ಪಾದನೆಯಾಗುತ್ತದೆ. ಇದರ ಮೊತ್ತವನ್ನು ಫೋಟೋಮೀಟರ್ ಅಳತೆ ಮಾಡಬಲ್ಲದು. ತನ್ಮೂಲಕ ಪಾತವಾದ ಬೆಳಕಿನ ತೀವ್ರತೆಯನ್ನು ಗಣಿಸಬಹುದು. ಟೆಲಿಸ್ಕೋಪಿಗೆ ರೋಹಿತಲೇಖಿ (ಸ್ಪೆಕ್ಟ್ರೊಗ್ರಾಫ್) ಎಂಬ ಇನ್ನೊಂದು ಉಪಕರಣವನ್ನು ಲಗತ್ತಿಸಿ ಒಂದು ನಕ್ಷತ್ರ ರೋಹಿತದ (ಸ್ಪೆಕ್ಟ್ರಂ) ಫೋಟೋಗ್ರಾಫನ್ನು ಪಡೆಯಬಹುದು. ರೋಹಿತದ ಅಭ್ಯಾಸ ನಕ್ಷತ್ರದ ವಿಚಾರದಲ್ಲಿ ವಿಶೇಷ ಹಾಗೂ ಅಪೂರ್ವ ಮಾಹಿತಿಗಳನ್ನು ಒದಗಿಸಬಲ್ಲದು.

ಉಲ್ಲೇಖಗಳು

[ಬದಲಾಯಿಸಿ]
  1. Albert Van Helden, Sven Dupré, Rob van Gent, The Origins of the Telescope, Amsterdam University Press, 2010, pages 3-4, 15
  2. Albert Van Helden, Sven Dupré, Rob van Gent, The Origins of the Telescope, Amsterdam University Press, 2010, page 183
  3. See his books Astronomiae Pars Optica and Dioptrice
  4. A. Rupert Hall (1996). Isaac Newton: Adventurer in Thought. Cambridge University Press. p. 67. ISBN 978-0-521-56669-8.

ಹೊರಗಿನ ಕೊಂಡಿಗಳು

[ಬದಲಾಯಿಸಿ]