ವಿಷಯಕ್ಕೆ ಹೋಗು

ಧಮನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವನ ರಕ್ತಪರಿಚಲನಾ ವ್ಯವಸ್ಥೆಯ ಸರಳ ರೇಖಾಕೃತಿ

ಧಮನಿ ಎಂದರೆ ರಕ್ತಪ್ರವಹಿಸುವ ನಾಳ. ಪರ್ಯಾಯನಾಮ ರಕ್ತನಾಳ (ಬ್ಲಡ್ ವೆಸಲ್). ಹೃದಯದಿಂದ ತಳ್ಳಲ್ಪಟ್ಟ ರಕ್ತವನ್ನು ದೇಹದ ಎಲ್ಲ ಭಾಗಗಳಿಗೂ ಒಯ್ದು ಅಲ್ಲೆಲ್ಲ ರಕ್ತದ ವೈಶಿಷ್ಟ್ಯಕ್ರಿಯೆಯಾದ ವಸ್ತುವಿನಿಮಯ ಜರಗುವಂತೆ ಅನುಕೂಲ ಮಾಡಿಕೊಟ್ಟು ಪುನಃ ರಕ್ತವನ್ನು ಹೃದಯಗೆ ವಾಪಸು ಒಯ್ಯುವುದು ಧಮನಿಗಳ ಕಾರ್ಯ. ಹೃದಯದಿಂದ ರಭಸವಾಗಿ ಹೊರಬರುವ ರಕ್ತವನ್ನು ಒಯ್ದು ದೇಹದ ಎಲ್ಲ ಭಾಗಗಳಿಗೂ ಹಂಚುವ ರಕ್ತನಾಳಗಳಿಗೆ ಅಪಧಮನಿಗಳೆಂದೂ (ಆರ್ಟರಿ) ರಕ್ತದ ವಿನಿಮಯ ಕ್ರಿಯೆಗೆ ಅನುಕೂಲತೆ ಮಾಡಿಕೊಡುವ ನಾಳಗಳಿಗೆ ಲೋಮನಾಳಗಳೆಂದೂ (ಕ್ಯಾಪಿಲ್ಲರಿ) ರಕ್ತವನ್ನು ಹೃದಯಕ್ಕೆ ವಾಪಸು ಒಯ್ಯುವ ನಾಳಗಳಿಗೆ ಅಭಿಧಮನಿಗಳೆಂದೂ (ವೆಯ್ನ್) ಹೆಸರು. ಈ ಕ್ರಿಯೆಗಳಿಗೆ ತಕ್ಕಂತೆ ನಾಳಗಳ ರಚನೆಯಲ್ಲಿ ವ್ಯತ್ಯಾಸ ಉಂಟು. ಮರಣಾನಂತರ ದೇಹರಕ್ತವೆಲ್ಲ ಹೃದಯ ಹಾಗೂ ಅಭಿಧಮನಿಗಳಲ್ಲಿ ಅಡಕವಾಗಿರುತ್ತದೆ.

ಹಿನ್ನೆಲೆ

[ಬದಲಾಯಿಸಿ]

ಅಪಧಮನಿಗಳಲ್ಲಿ ರಕ್ತ ಇರುವುದಿಲ್ಲ. ಕ್ರಿಸ್ತಪೂರ್ವದ ಪಾಶ್ಚಾತ್ಯ ವೈದ್ಯರು ಜೀವಂತ ಸ್ಥಿತಿಯಲ್ಲೂ ಇವು ಖಾಲಿಯಾಗಿ ಇದ್ದು ಅನಿಲವನ್ನು ಒಯ್ಯುವುದೆಂದು ಭಾವಿಸಿದ್ದರಿಂದ ಇವುಗಳಿಗೆ ಆರ್ಟರಿ (= ಅನಿಲವನ್ನು ಒಯ್ಯುವ ನಾಳ) ಎಂದು ಹೆಸರಿಟ್ಟಿದ್ದರು. ಮರಣಾನಂತರ ಪರೀಕ್ಷೆಯಲ್ಲಿ ಕಾಣಬರುವಂತೆ ರಕ್ತ ಭರ್ತಿ ಆಗಿರುವ ನಾಳಗಳನ್ನೆಲ್ಲ ವೆಯ್ನ್‍ಗಳೆಂದು ಕರೆಯಲಾಗುತ್ತಿತ್ತು. 1 ನೆಯ ಶತಮಾನದ ಕೊನೆಯಲ್ಲಿ ರೋಮಿನಲ್ಲಿದ್ದ ಗ್ಯಾಲೆನ್ ಎಂಬ ವೈದ್ಯ ಪ್ರಾಣಿಗಳು ಜೀವಂತವಾಗಿದ್ದಾಗ ಅಪಧಮನಿಗಳಲ್ಲಿಯೂ ರಕ್ತ ಇರುವುದೆಂದು ತೋರಿಸಿದ್ದ, ನಿಜ. ಆದರೆ ಆಗ ರಕ್ತನಾಳಗಳ ವಿಷಯದಲ್ಲಿ ಸರಿಯಾದ ತಿಳಿವಳಿಕೆ ಇರಲಿಲ್ಲ. ವಾಸ್ತವವಾಗಿ 1928ರಲ್ಲಿ ವಿಲಿಯಮ್ ಹಾರ್ವೆ ಎಂಬ ಇಂಗ್ಲಿಷ್ ವೈದ್ಯ ರಕ್ತಪರಿಚಲನಾ ಸಿದ್ಧಾಂತವನ್ನು ಮಂಡಿಸುವವರೆಗೂ ಅಪಧಮನಿಗಳೂ ಅಭಿಧಮನಿಗಳಿಗೂ ವ್ಯತ್ಯಾಸ ಖಚಿತವಾಗಿ ಗೊತ್ತಿರಲಿಲ್ಲ. ವಿವಿಧ ಪ್ರಾಣಿಗಳ ಮೇಲೆ ಅವು ಜೀವಂತವಾಗಿರುವಾಗಲೇ ಅನೇಕ ಪ್ರಯೋಗಗಳನ್ನು ಮಾಡಿ ಪ್ರತ್ಯಕ್ಷ ಅವಲೋಕನದಿಂದ ಹಾರ್ವೆ ಕಂಡುಕೊಂಡ ವಿಷಯಗಳಲ್ಲಿ ಕೆಲವು ಇವು: ಅಪಧಮನಿಗಳಲ್ಲಿ ರಕ್ತ ರಭಸವಾಗಿ ಹೃದಯದಿಂದÀ ದೂರ ದೂರಕ್ಕೆ ಒಯ್ಯಲ್ಪಡುತ್ತವೆ. ಯಾವುದಾದರೂ ಅಪಧಮನಿಯನ್ನು ಕೊಯ್ದರೆ ಅದರಿಂದ ಉಜ್ಜ್ವಲ ಕೆಂಬಣ್ಣದ ನೆತ್ತರು ಹೃದಯದ ಪ್ರತಿಮಿಡಿತದ ಅನಂತರವೂ ಚಿಮ್ಮುತ್ತದೆ. ಅಭಿಧಮನಿಗಳಲ್ಲಿ ರಕ್ತ ಚಲನೆ ಮಂದ ಮತ್ತು ಸದಾ ಹೃದಯದ ಎಡೆಗೆ. ಅದರಲ್ಲಿರುವ ನೆತ್ತರಿನ ಬಣ್ಣ ಮಸಕು ಕೆಂಪು ಅಭಿಧಮನಿಗಳಲ್ಲಿ ಅಲ್ಲಲ್ಲೆ ಇರುವ ಹಾಗೂ ಹೃದಯದ ಕಡೆಗೆ ಮಾತ್ರ ತೆರೆದುಕೊಳ್ಳುವ ಕವಾಟಗಳಿಂದಾಗಿ ರಕ್ತ ಹಿಮ್ಮೊಗವಾಗಿ ಚಲಿಸದೆ ಹೃದಯದ ಕಡೆಗೆ ಪ್ರವಹಿಸುವುದು ಸಾಧ್ಯವಾಗಿದೆ. ಪಲ್ಮನರಿ ಆರ್ಟರಿ ಮತ್ತು ಪಲ್ಮನರಿವೆಯ್ನ್‍ಗಳಲ್ಲಿ ಮಾತ್ರ ರಕ್ತದವರ್ಣ ಮೇಲೆ ಹೇಳಿರುವುದಕ್ಕೆ ವಿರುದ್ಧವಾಗಿ ಆರ್ಟರಿಯಲ್ಲಿ ಮಸಕು ಕೆಂಪು ರಕ್ತವೂ ವೆಯ್ನ್‍ಗಳಲ್ಲಿ ಉಜ್ಜ್ವಲ ಕೆಂಪು ರಕ್ತವೂ ಇರುತ್ತದೆ. ಆರೋಗ್ಯಸ್ಥಿತಿಯಲ್ಲಿ ರಕ್ತ ಯಾವಾಗಲೂ ಹೊರಗೆ ಬರದೆ ಹೃದಯ ಮತ್ತು ಧಮನಿಗಳಲ್ಲಿ ಮಾತ್ರ ಅಡಕವಾಗಿದ್ದು ಪ್ರವಹಿಸುತ್ತಿರುತ್ತದೆ. ಅಪಧಮನಿಗಳಿಂದ ದೇಹದ ನಾನಾ ಭಾಗಗಳಿಗೆ ಒಯ್ಯಲ್ಪಟ್ಟ ರಕ್ತ ಅಭಿಧಮನಿಗಳಿಗೆ ಬಂದು ಸೇರಬೇಕಾದರೆ ಅವೆರಡರ ನಡುವೆ ಸಂಪರ್ಕನಾಳಗಳು ಇದ್ದೇ ಇರಬೇಕು - ಇತ್ಯಾದಿಯಾಗಿ ಭಾವಿಸಲಾಗಿಯತ್ತು. ಹಾರ್ವೆ ಕಾಲವಾದ ಸುಮಾರು 70 ವರ್ಷಗಳ ತರುವಾಯ ಈ ಸಂಪರ್ಕನಾಳಗಳ ಅಸ್ತಿತ್ವವನ್ನು ಮಾಲ್ಫಿಜಿ ಎಂಬ ಇಟಲಿಯ ವಿಜ್ಞಾನಿ ತೋರಿಸಿದ. ಕೂದಲಿಗಿಂತಲೂ ಬಹು ತೆಳ್ಳಗಿದ್ದು ಬರೀ ಕಣ್ಣಿಗೆ ಗೋಚರವಾಗದಿರುವ ಈ ನಾಳಗಳಿಗೆ ಲೋಮನಾಳಗಳು ಎಂದು ಹೆಸರಿಡಲಾಯಿತು.

ಧಮನಿಗಳ ಸಾಮಾನ್ಯ ವಿನ್ಯಾಸ

[ಬದಲಾಯಿಸಿ]

ಎಡಹೃತ್ಕುಕ್ಷಿಯಿಂದ ರಕ್ತವನ್ನು ಹೊರ ಒಯ್ಯುವ ಅಪಧಮನಿಗೆ ಅಯೋರ್ಟ ಎಂದು ಹೆಸರು. ಇದು ಒಂದು ಮಹಾಪಧಮನಿ (ಲಾರ್ಜ್ ಆರ್ಟರಿ). ಇದರ ಕವಲುಗಳು ರುಂಡ, ಮುಂಡ ಕೈಕಾಲುಗಳುಎಲ್ಲೆಡೆಯೂ ಸಾಗುತ್ತವೆ. ಆಯೊರ್ಟದ ಆರಂಭ ಕವಲುಗಳೂ ಮಧ್ಯಾಂತರ ಅಪಧಮನಿಗಳು (ಮೀಡಿಯಮ್ ಆರ್ಟರೀಸ್). ಇವುಗಳಿಗೆಲ್ಲ ವಿಶಿಷ್ಟ ಹೆಸರುಗಳನ್ನು ಇಡಲಾಗಿದೆ. ಇವು ರುಂಡ ಮುಂಡ ಕೈಕಾಲುಗಳಲ್ಲಿ ಪುನಃ ಪುನಃ ಹೆಸರುಗಳನ್ನು ಇಡಲಾಗಿದೆ. ಇವು ರುಂಡ ಮುಂಡ ಕೈಕಾಲುಗಳಲ್ಲಿ ಪುನಃ ಪುನಃ ಕವಲಾಗುತ್ತ ಹೆಸರಿರದ ಕಿರಿ ಅಪಧಮನಿಗಳಾಗುವುವು (ಸ್ಮಾಲ್ ಆರ್ಟರಿ, ಆರ್ಟಿರಿಯೋಲ್). ಪ್ರತಿಯೊಂದು ಕಿರಿ ಅಪಧಮನಿಯೂ ಅಗಾಧವಾಗಿ ಕವಲೊಡೆದು ಲೋಮನಾಳಗಳಾಗುತ್ತವೆ. ಇವು ಒಂದರೊಡನೊಂದು ಜಂಟಿಸಿ ಪುನಃ ಪ್ರತ್ಯೇಕವಾಗುತ್ತ ಬಲೆಯಂತೆ ಹರಡಿಕೊಂಡಿರುವುವಲ್ಲದೆ ಪುನಃ ಅದೇ ಸ್ಥಳದ ಲೋಮನಾಳಗಳೆಲ್ಲವೂ ಸೇರಿಕೊಂಡು ಅನುಗುಣವಾದ ಕಿರಿ ಅಪಧಮನಿ (ವೆನ್ಯೂಲ್) ಆಗುತ್ತವೆ. ಅನೇಕ ಕಿರಿ ಅಭಿಧಮನಿಗಳುಸೇರಿ ಮಧ್ಯಾಂತರ ಅಭಿಧಮನಿಗಳು ಆಗುವುವು ಎಂಬುದನ್ನೂ ಅನೇಕ ಮಧ್ಯಾಂತರ ಅಭಿಧಮನಿಗಳು ಸೇರಿ ಮಹಾಭಿಧಮನಿಗಳಾಗುವುವು ಎಂಬುದನ್ನು ಇವು ಗುಂಡಿಗೆಯನ್ನು ಸೇರಿ ಅದರ ಬಲ ಹೃತ್ಕರ್ಣ ಭಾಗಕ್ಕೆ ತಾವು ಸಂಗ್ರಹಿಸಿ ಒಯ್ಯುತ್ತಿರುವ ರಕ್ತವನ್ನೆಲ್ಲ (ಅಂದರೆ ಫುಪ್ಪುಸಗಳನ್ನು ಬಿಟ್ಟು ದೇಹದ ಎಲ್ಲ ಭಾಗಗಳಿಂದಲೂ ವಾಪಸಾಗುವ ರಕ್ತ) ಸುರಿಯುವುವು ಎಂಬುದನ್ನೂ ಗ್ರಹಿಸಲು ಕಷ್ಟವಿಲ್ಲ. ಹೃದಯಕ್ಕಿಂತ ಉನ್ನತದೇಹಭಾಗಗಳಿಂದ ರಕ್ತವನ್ನು ಒಯ್ಯುವ ಮಹಾಭಿಧಮನಿಗೆ ಉನ್ನತಮಹಾಭಿಧಮನಿ ಎಂದೂ (ಸುಪೀರಿಯರ್ ವೀನಾ ಕೇವ) ಕೆಳ ಭಾಗಗಳಿಂದ ರಕ್ತವನ್ನು ಒಯ್ಯುವ ನಾಳಕ್ಕೆ ಅವನತ ಮಹಾಭಿಧಮನಿ ಎಂದೂ (ಇನ್‍ಫೀರಿಯರ್ ವೀನಾ ಕೇವ) ಹೆಸರು. ಬಲಹೃತ್ಕರ್ಣಕ್ಕೆ ದೇಹದ ಎಲ್ಲೆಡೆಯಿಂದಲೂ ವಾಪಸಾಗಿ ಬಂದ ರಕ್ತ ಬಲ ಹೃತ್ಕುಕ್ಷಿಗೆ ಹರಿದುಬರುವುದು ಸಹಜ, ಬಲಹೃತ್ಕುಕ್ಷಿಯಿಂದ ಹೊರಡುವ ಪಲ್ಮನರಿ ಆರ್ಟರಿ ಎಡಬಲಭಾಗಗಳಾಗಿ ಆಯಾ ಕಡೆಯ ಫುಪ್ಪುಸಗಳನ್ನು ಸೇರುತ್ತದೆ. ಅಲ್ಲಿ ಕವಲಾಗಿ ನೂರಾರು ಮಧ್ಯಾಂತರ ಹಾಗೂ ಕಿರಿ ಅಪಧಮನಿಗಳು ಕಂಡುಬರುತ್ತವೆ. ಇವುಗಳ ಲೋಮನಾಳಗಳು ಫುಪ್ಪುಸದ ಎಲ್ಲೆಡೆಯೂ ರಕ್ತವನ್ನು ಸಾಗಿಸುತ್ತ ಪುನಃ ಎಲ್ಲವೂ ಕ್ರಮವಾಗಿ ಸೇರಿ ಎಡ ಹಾಗೂ ಬಲ ಪಲ್ಮನರಿ ವೆಯ್ನ್‍ಗಳೆಂಬ ಮಹಾಭಿಧಮನಿಗಳಾಗಿ ಫುಪ್ಪುಸಗಳಿಂದ ಹೊರಬರುತ್ತವೆ. ಅನಂತರ ಇವು ಹೃದಯದ ಎಡಹೃತ್ಕರ್ಣ ಭಾಗವನ್ನು ಸೇರಿ ಅಲ್ಲಿ ಫುಪ್ಪುಸಗಳಿಂದ ಹೊರಬರುತ್ತವೆ. ಬಳಿಕ ಇವು ಹೃದಯದ ಎಡಹೃತ್ಕರ್ಣ ಭಾಗವನ್ನು ಸೇರಿ ಅಲ್ಲಿ ಫುಪ್ಪುಸಗಳಿಂದ ವಾಪಸಾಗುವ ಎಲ್ಲ ರಕ್ತವನ್ನು ಸುರಿಯುತ್ತವೆ. ಮುಂದೆ ಈ ರಕ್ತ ಎಡಹೃತ್ಕುಕ್ಷಿಗೆ ಹರಿದು ಬಂದು ಅದರಿಂದ ರೇಚಿತವಾಗಿ ಪುನಃ ತನ್ನ ಸಂಚಾರವನ್ನು ಪ್ರಾರಂಭಿಸುತ್ತದೆ. ಇದೇ ದೇಹದಲ್ಲಿನ ಧಮನಿಗಳ ವ್ಯೂಹ (ಬ್ಲಡ್ ವ್ಯಾಸ್ಕ್ಯುಲರ್ ಸಿಸ್ಟಮ್) ಹಾಗೂ ರಕ್ತ ಪರಿಚಲನಾ ಕ್ರಮ.

ಧಮನಿಗಳ ರಚನಾವೈವಿಧ್ಯ

[ಬದಲಾಯಿಸಿ]

ಅಪಧಮನಿಗಳಲ್ಲಿ ವೇಗವಾಗಿ ಹರಿದು ಬಂದು ಒಂದು ಸ್ಥಳಕ್ಕೆ ಪೂರೈಕೆ ಆಗುವ ರಕ್ತದ ಪ್ರಮಾಣ ಆ ಸ್ಥಳದ ಪ್ರಾಮುಖ್ಯ ಮತ್ತು ಚಟುವಟಿಕೆಗಳಿಗೆ ಅನುಗುಣವಾಗಿದೆ. ಆ ಸ್ಥಳದಿಂದ ಅಭಿಧಮನಿಗಳ ಮೂಲಕ ಇಷ್ಟು ರಕ್ತವೂ ವಾಪಸಾಗುವಾಗ ಮಂದಗತಿಯಿಂದ ಚಲಿಸುವುದರಿಂದ ಅಭಿಧಮನಿಗಳು ಅದಕ್ಕೆ ಸಂವಾದೀ (ಕರೆಸ್‍ಪಾಂಡಿಂಗ್) ಅಪಧಮನಿಗಳಿಗಿಂತ ಹೆಚ್ಚು ಸ್ಥಳಾವಕಾಶವುಳ್ಳ ನಾಳಗಳಾಗಿರುತ್ತದೆ. ಸಾಮಾನ್ಯವಾಗಿ ಅಪಧಮನಿಗಳು ಚರ್ಮದ ಮೇಲ್ಮೈಯಿಂದ ಆಳವಾಗಿ ಹುದುಗಿರುತ್ತವೆ. ಅಭಿಧಮನಿಗಳು ವಿಶೇಷವಾಗಿ ಚರ್ಮದ ಆಡಿಯಲ್ಲೇ ಇರುವುವು. ಆಳದಲ್ಲಿರುವ ಅಪಧಮನಿಗಳಿಗಿಂತ ಮೇಲೆ ಮೇಲೆ ಇರುವ ಅಭಿಧಮನಿಗಳಿಗೆ ಘಾತವಾಗುವ ಸಂದರ್ಭಗಳು ಹೆಚ್ಚು. ಆದ್ದರಿಂದ ಇವು ಸುಲಭವಾಗಿ ಛಿದ್ರಿಸದಂತೆ, ಹರಿಯದಂತೆ ಇವುಗಳ ಭಿತ್ತಿಯಲ್ಲಿ ಅಧಿಕವಾಗಿ ಬಿಳಿ ನಾರೆಲೆಗಳು ಇವೆ. ಅಭಿಧಮನಿಯಲ್ಲಿ ರಕ್ತ ಮಂದಗತಿಯಿಂದ ಪ್ರವಹಿಸುವುದರಿಂದಲೂ ಸಂವಾದೀ ಅಪಧಮನಿಗಿಂತ ಇದು ಹೆಚ್ಚು ಸ್ಥಳಾವಕಾಶ ಹೊಂದಿರುವುದರಿಂದಲೂ ಈ ರಕ್ತದಿಂದ ಧಮನಿಯ ಭಿತ್ತಿಯ ಮೇಲೆ ಪ್ರಯುಕ್ತವಾಗುವ ಒತ್ತಡ ಕಡಿಮೆ (ಸುಮಾರು 20 ಮಿಮೀ ಪಾದರಸ ಅಥವಾ ಇನ್ನೂ ಕಡಿಮೆ.). ಆದ್ದರಿಂದ ಅಭಿಧಮನಿಯ ಭಿತ್ತಿ ತೆಳುವಾಗಿಯೇ ಇರುವುದು. ಆದರೆ ಅದಕ್ಕೆ ಸಂವಾದಿಯಾದ ಅಪಧಮನಿಯಲ್ಲಿ ಪ್ರವಹಿಸುವ ರಕ್ತ ಭಿತ್ತಿಯ ಮೇಲೆ ಉಂಟುಮಾಡುವ ಒತ್ತಡ ಹೆಚ್ಚು (ಸುಮಾರು 100 ಮಿಮೀ ಪಾದರಸ ಅಥವಾ ಇನ್ನೂ ಹೆಚ್ಚು ). ಆದ್ದರಿಂದ ಅಪಧಮನಿ ಇಷ್ಟು ಅಗಾಧವಾದ ಒಳಒತ್ತಡವನ್ನು ತೆಗೆದುಕೊಳ್ಳಲು ಶಕ್ತವಾಗಿರುವಂತೆ ಅದರ ಭಿತ್ತಿ ಸಂವಾದೀ ಅಭಿಧಮನಿಯ ಭಿತ್ತಿಗಿಂತ ದಪ್ಪವಾಗಿರುವುದಲ್ಲದೆ ಭಿತ್ತಿಯಲ್ಲಿ ಪುಟಿತ ಹಳದಿ ನಾರೆಳೆಗಳು ಅಧಿಕವಾಗಿವೆ ಕೂಡ. ಅಗತ್ಯವಾದಾಗ ಹಿಗ್ಗಿ ಪೂರ್ವಸ್ಥಿತಿಗೆ ವಾಪಸಾಗಬಲ್ಲ ಅಪಧಮನಿಯ ಭಿತ್ತಿ ಹೃದಯದ ಪ್ರತಿಮಿಡಿತದಲ್ಲೂ ಹೆಚ್ಚು ಕಡಿಮೆ ಆಗುತ್ತ ಇರುವ ರಕ್ತದ ಒತ್ತಡವನ್ನು ಈ ರೀತಿ ಭರಿಸಬಲ್ಲದು. ಹೃದಯದ ಪ್ರತಿಮಿಡಿತಕ್ಕೂ ತಾಳೆ ಆಗುವ ಅಪಧಮನಿ ಭಿತ್ತಿಯ ಹಿಗ್ಗುವಿಕೆ ಮತ್ತು ಪೂರ್ವಸ್ಥಿತಿಗೆ ವಾಪಸಾಗುವಿಕೆಗಳೇ ನಾಡಿಮಿಡಿತ (ಪಲ್ಸ್). ಹಳದಿನಾರೆಳೆ ಅಧಿಕವಾಗಿರುವ ರಕ್ತನಾಳಗಳಾದ ಅಪಧಮನಿಗಳಲ್ಲಿ ಮಾತ್ರ ನಾಡಿ ಮಿಡಿತ ಏಕೆ ಇರುವುದೆಂಬುದು ವ್ಯಕ್ತ. ನಾಡಿ ಮಿಡಿತದಿಂದ ಅಪಧಮನಿಗಳಲ್ಲಿ ರಕ್ತ ಹೃದಯದ ಮಿಡಿತಕ್ಕೆ ಅನುಗುಣವಾಗಿ ಬಿಟ್ಟು ಬಿಟ್ಟು ಹರಿಯದೆ (ಡಿಸ್‍ಕನ್‍ಟಿನ್ಯೂಯಸ್ ಫ್ಲೊ) ಸಮಪ್ರಮಾಣದ ಪ್ರವಾಹವಲ್ಲದಿದ್ದರೂ (ಯೂನಿಫಾರಮ್ ಫ್ಲೊ) ಏಕಧಾರೆಯಾಗಿ (ಕನ್‍ಟಿನ್ಯೂಯಸ್ ಫ್ಲೊ) ಹರಿಯುವುದು ಸಾಧ್ಯವಾಗಿದೆ. ಅಪಧಮನಿಗಳ ಪುಟಿತತೆ ಕಾರಣಾಂತರದಿಂದ ಕುಂದಿದರೆ ಅವುಗಳ ಭಿತ್ತಿ ಹೃದಯದ ಪ್ರತಿ ಮಿಡಿತ ಕಾಲದಲ್ಲೂ ರಕ್ತದ ಒತ್ತಡದ ಆಧಿಕ್ಯದಿಂದ ಘಾತಗೊಂಡಂತೆ ಆಗುವ ಪ್ರಮೇಯ ಉಂಟು. ಇದರಿಂದ ಅಪಧಮನಿಯ ಭಿತ್ತಿ ಕ್ರಮೇಣ ಶಿಥಿಲಗೊಳ್ಳುತ್ತ ಯಾವುದಾದರೂ ದುರ್ಬಲ ಜಾಗದಲ್ಲಿ ಹೊರಚ್ಚಾಗಿ ಉಬ್ಬಿಕೊಳ್ಳಬಹುದು (ಇದಕ್ಕೆ ಅನ್ಯೂರಿಸಮ್ ಎಂದು ಹೆಸರು). ಇಲ್ಲದಿದ್ದರೆ ಅಂಥ ಸ್ಥಳದಲ್ಲಿ ಅಪಧಮನಿಯ ಭಿತ್ತಿ ಹರಿದೇ ಹೋಗಬಹುದು. (ಮಿದುಳಿನ ಅಪಧಮನಿಗಳುಹೀಗೆ ಹರಿಯುವುದರಿಂದ ಹಠಾತ್ ಪಕ್ಷಘಾತ, ಮರಣ ಸಂಭವಿಸುವುದು ಅಪರೂಪವಲ್ಲ.) ಅಪಧಮನಿ ಪೆಡಸಣೆ ರೋಗ (ಅಥಿರೊ ಸ್ಕ್ಲೀರೋಸಿಸ್) ಎಂಬ ಸ್ಥಿತಿಯಲ್ಲೂ ಅಪಧಮನಿಯ ಪುಟಿತತೆ ನಾಶವಾಗಿ ರಕ್ತೊತ್ತಡದ ಅಧಿಕ್ಯ ಮುಂತಾದ ವಿವಿಧ ಘಾತಕ ಪರಿಣಾಮಗಳಿಗೆ ಕಾರಣವಾಗಿರುತ್ತದೆ.

ಧಮನಿಯ ಭಿತ್ತಿಯ ಒಳಮೈ-ಅದು ಅಪಧಮನಿಯೇ ಆಗಿರಲಿ, ಅಭಿಧಮನಿಯೇ ಆಗಿರಲಿ, ಲೋಮನಾಳವೇ ಆಗಿರಲಿ-ಬಲು ನುಣುಪಾಗಿರುವುದು. ರಕ್ತ ಅದನ್ನು ತೋಯಿಸಬಾರದು. ಹೃದಯದ ಒಳಮೈಯೂ ಅಷ್ಟೆ. ಇಂಥ ಒಳಮೈ ಇರುವುದರಿಂದಲೇ ಹೃದಯದಲ್ಲಿ ಮತ್ತು ರಕ್ತನಾಳಗಳಲ್ಲಿ ರಕ್ತ ಗರಣೆ ಕಟ್ಟಿಕೊಳ್ಳುವುದಿಲ್ಲ. ಅಭಿಧಮನಿಯ ಉರಿಯೂತ ಸ್ಥಿತಿಯಲ್ಲಿ (ಫ್ಲೆಬೈಟಿಸ್) ಇಲ್ಲವೇ ಅಪಧಮನಿಯ ಪೆಡಸಣೆ ಸ್ಥಿತಿಯಲ್ಲಿ ಅಯಾ ರಕ್ತನಾಳದ ಒಳಮೈ ಒರಟಾಗಿರುವುದು. ಅಲ್ಲದೆ ರಕ್ತ ಅದನ್ನು ತೋಯಿಸಬಲ್ಲದು. ಇಂಥ ಪರಿಸ್ಥಿತಿಗಳಲ್ಲಿ ರಕ್ತ ಆಯಾ ಸ್ಥಳಗಳಲ್ಲಿ ಗರಣೆ ಕಟ್ಟಿಕೊಂಡು ನಾನಾ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು.

ಅಯೋರ್ಟ

[ಬದಲಾಯಿಸಿ]

ತನ್ನ ಶಾಖೋಪಶಾಖೆಗಳಿಂದ ದೇಹಾದ್ಯಂತ ಆಕ್ಸಿಜನ್‍ಯುಕ್ತ ರಕ್ತವನ್ನು ಪೂರೈಕೆ ಮಾಡುವ ಮಹಾಪಧಮನಿ. ದೇಹದಲ್ಲಿ ಅತಿ ದೊಡ್ಡ ರಕ್ತನಾಳ. ಹೃದಯದ ಎಡಹೃತ್ಕುಕ್ಷಿಯಿಂದ ಹೊರಡುತ್ತದೆ. ಆ ಸ್ಥಳದಲ್ಲಿ ಹೃದಯಕ್ಕೂ ಇದಕ್ಕೂ ನಡುವೆ ಎಡ ಅರ್ಧ ಚಂದ್ರಾಕಾರ ಕವಾಟ (ಲೆಫ್ಟ್ ಸೆಮಿಲ್ಯೂನಾರ್ ವಾಲ್ವ್) ಎಂಬ ತ್ರಿದಳಕವಾಟ ಉಂಟು. ಇದಕ್ಕೆ ಯೊರ್ಟದ ಕವಾಟವೆಂದೂ ಹೆಸರು. ಇದು ಹೃದಯಯಿಂದ ಅಯೊರ್ಟಕ್ಕೆ ರಕ್ತಪ್ರವಹಿಸುವುದಕ್ಕೆ ಅಡಚಣೆ ಮಾಡಿದಾದರೂ ಹೃದಯ ಮಿಡಿತಗಳ ನಡುಗಾಲಗಳಲ್ಲಿ ರಕ್ತ ಅರ್ಯೊರ್ಟದಿಂದ ವಾಪಸು ಎಡಹೃತ್ಕುಕ್ಷಿಗೆ ಬರುವುದಕ್ಕೆ ಆಸ್ಪದ ಕೊಡದು. ವರ್ಣನೆಗಾಗಿ ಮಾತ್ರ ಅಯೋರ್ಟವನ್ನು ಏರುಭಾಗ (ಅಸೆಂಡಿಂಗ್ ಪಾರ್ಟ್), ಕಮಾನುಭಾಗ (ಅಯೊರ್ಟಿಕ್ ಆರ್ಚ್), ಎದೆಯಲ್ಲಿರುವ ಇಳಿಭಾಗ (ಡಿಸೆಂಡಿಂಗ್ ಥೊರಾಸಿಕ್ ಅಯೋರ್ಟ), ಉದರಭಾಗ (ಅಬ್ಡಾಮಿನಲ್ ಅಯೋರ್ಟ) ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದೆ. ವಾಸ್ತವವಾಗಿ ಈ ಭಾಗಗಳಲ್ಲಿ ಯಾವ ರಚನಾ ವ್ಯತ್ಯಾಸವೂ ಇಲ್ಲ. ಹೆಸರೇ ಹೇಳುವಂತೆ ಏರುಭಾಗ ಎಡ ಹೃತ್ಕುಕ್ಷಿಯಿಂದ ಏರಿ ಶಿರದ ದಿಕ್ಕಿನಲ್ಲಿ ದೇಹದ ಮಧ್ಯರೇಖೆಯಿಂದ ಸ್ವಲ್ಪ ಬಲಕ್ಕೆ ಮುಂದುವರಿಯುತ್ತದೆ. ಈ ಭಾಗ ಪಲ್ಮನರಿ ಅಪಧಮನಿಯ ಹಿಂದಿದೆ. ಅಯೊರ್ಟಿಕ್ ಕವಾಟದ ಕದಗಳಿಂದ ಮುಂದಕ್ಕೆ ಈ ಭಾಗದ ಎಡ ಬಲಗಳಿಂದ ಎರಡು ಕಾರೊನರಿ ಅಪಧಮನಿಗಳು ಹೊರಡುತ್ತವೆ. ಸ್ವತಃ ಹೃದಯದ ಪೂರೈಕೆಗೆಂದೇ ಮೀಸಲಾದ ಈ ಅಪಧಮನಿಗಳು ಅಯೋರ್ಟದ ಮೊತ್ತಮೊದಲ ಕವಲುಗಳು. ಅಯೋರ್ಟದ ಕಮಾನುಭಾಗ ಎದೆಯ ಮೂಳೆಯ ಮೇಲ್ಭಾಗದ ಹಿಂದುಗಡೆ ಬಲದಿಂದ ಎಡಕ್ಕೆ ಕಮಾನಾಗಿ ಬಾಗಿ ಮುಂದುವರಿದಿದೆ. ಕಮಾನು ಎಡ ಫುಪ್ಪುಸದ ಬುಡವನ್ನು ಭಾಗಶಃ ಸುತ್ತಿಕೊಂಡಿದೆ. ಅಯೊರ್ಟದ ಕಮಾನಿನಿಂದ ಮೂರು ದೊಡ್ಡ ಕವಲುಗಳು ಹೊರಟು ತಲೆ, ಕುತ್ತಿಗೆ ಹಾಗೂ ಎಡ ಮತ್ತು ಬಲಗೈಗಳಿಗೆ ರಕ್ತಪೂರೈಕೆ ಮಾಡುತ್ತವೆ. ಎದೆಯಲ್ಲಿ ಇರುವ ಅಯೋರ್ಟದ ಇಳಿಭಾಗ ಕಮಾನಿನ ಮುಂದುವರಿದ ಭಾಗವಾಗಿ ಎದೆಭಾಗದ 4 ನೆಯ ಬೆನ್ನುಮೂಳೆಯ ಮಟ್ಟದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿಂದ ಎದೆಭಾಗದ 12 ನೆಯ ಬೆನ್ನು ಮೂಳೆಯವರೆಗೂ ಕೆಳಮುಖವಾಗಿ ಬೆನ್ನು ಮೂಳೆಯ ಮುಂದೆ ಸ್ವಲ್ಪ ಎಡಗಡೆ ಮುಂದುವರಿಯುತ್ತ ಕೊನೆಗೆ ದೇಹದ ಮಧ್ಯದ ರೇಖೆಯಲ್ಲಿ ವಪೆಯನ್ನು ತೂರಿ ಉದರ ಭಾಗವಾಗುತ್ತದೆ. ಈ ಭಾಗದಿಂದ ಹೊರಡುವ ಕವಲುಗಳು ಎದೆಗೂಡಿನ ಭಿತ್ತಿ, ಅನ್ನನಾಳ, ಶ್ವಾಸನಾಳಕವಲುಗಳು ಮುಂತಾದ ನೆಲೆ ಪ್ರಾಂತ್ಯಗಳಿಗೆ ಪೂರೈಕೆ ಆಗುತ್ತವೆ. ಉದರಭಾಗ ದೇಹ ಮಧ್ಯದಲ್ಲಿ ಬೆನ್ನೆಲುಬಿನ ಮುಂದುಗಡೆ ಉದರದ 4 ನೆಯ ಬೆನ್ನೆಲುಬಿನ ಮಟ್ಟದ ತನಕ ಇಳಿದು ಅಲ್ಲಿ ಎರಡು ಅಂತ್ಯಕವಲಾಗಿ ಕೊನೆಗೊಳ್ಳುತ್ತದೆ. ಉದರಭಾಗದ ಕವಲುಗಳು ಉದರ ಭಿತ್ತಿ, ಜೀರ್ಣಾಂಗಗಳು, ಮೂತ್ರಜನಕಾಂಗಗಳು ಹಾಗೂ ಪ್ರಜನನಾಂಗಗಳಿಗೂ ಅಂತ್ಯ ಕವಲುಗಳು ಕಿಬ್ಬೊಟ್ಟೆ ಮತ್ತು ಕಾಲುಗಳಿಗೂ ಪೂರೈಕೆ ಆಗುತ್ತವೆ.

ಅಯೋರ್ಟ ಅತ್ಯಂತ ದೊಡ್ಡ ಅಪಧಮನಿ ಮಾತ್ರವಲ್ಲ ; ಅತ್ಯಂತ ಹೆಚ್ಚು ಪುಟಿತತೆ ಇರುವ ಧಮನಿ ಕೂಡ. ದೇಹದ ಎಲ್ಲ ಧಮನಿಗಳಿಗಿಂತಲೂ ರಕ್ತದ ಒತ್ತಡ ಅಯೋರ್ಟದಲ್ಲಿ ಅಧಿಕವಾಗಿರುವುದರಿಂದ ಅಷ್ಟು ಒತ್ತಡವನ್ನು ತಡೆದುಕೊಳ್ಳಲು ಅಯೋರ್ಟದ ಭಿತ್ತಿ ಬಹು ದಪ್ಪವಾಗಿದೆ. ಇಷ್ಟು ದಪ್ಪವಾದ ಭಿತ್ತಿಯ ಪೂರೈಕೆಗೆಂದೇ ಅನೇಕ ಸಣ್ಣ ಅಪಧಮನಿಗಳು ಅಯೋರ್ಟದ ಉದ್ದಕ್ಕೂ ಇವೆ. ಅನೇಕ ನರಗಳೂ ಅಯೋರ್ಟದ ಭಿತ್ತಿಗೆ ಪೂರೈಕೆ ಆಗುತ್ತವೆ. ಇವುಗಳಲ್ಲಿ ಕಮಾನಿನ ಭಾಗದ ನರಗಳು ಬಹು ಮುಖ್ಯ.

ಮೀನು, ದ್ವಿಚರಿ, ಸರೀಸೃಪಗಳಲ್ಲಿ ಅಯೋರ್ಟ ಎಡ ಹೃತ್ಕುಕ್ಷಿಯಿಂದ ಹೊರಟ ಮೇಲೆ ಎಡ ಬಲಕಮಾನುಗಳಾಗಿ ಕವಲಾಗುತ್ತವೆ. ಪಕ್ಷಿಗಳಲ್ಲಿ ಸಸ್ತನಿಗಳಂತೆಯೇ ಅಯೋರ್ಟದ ಕಮಾನು ಒಂದೇ ಆಗಿದ್ದರೂ ಬಾಗಿರುವ ಕಮಾನು.

ಅಪ ಮತ್ತು ಅಭಿ-ಧಮನಿಗಳ ಭಿತ್ತಿ ರಚನೆ

[ಬದಲಾಯಿಸಿ]

ಈ ಒಳಮೈ ಅಪಧಮನಿ ಅಭಿಧಮನಿಗಳಲ್ಲಿ ವಾಸ್ತವವಾಗಿ ಅವುಗಳ ಭಿತ್ತಿಯ ಒಳಭಾಗದ ಒಳಕವಚದ (ಟ್ಯೂನಿಕ ಇನ್‍ಟರ್ನ, ಟ್ಯೂನಿಕ ಇನ್‍ಟಿಮ) ಮೇಲ್ಮೈ. ಎಂಡೊಥೀಲಿಯಮ್ ಎಂಬ ನುಣುಪಾದ ಕೋಶಗಳ ಒಂದೇ ವರಸೆಯಿಂದ ರಚಿತವಾದುದು. ಇದರ ಅಡಿಯಲ್ಲಿ ಹಳದಿ ನಾರೆಳೆಗಳಿಂದ ಆದ ರಂಧ್ರಯುಕ್ತ ಪೊರೆ ರಕ್ತನಾಳದ ಒಳಕವಚವನ್ನು ನಡುಕವಚದಿಂದ (ಟ್ಯೂ. ಮೀಡಿಯ) ಬೇರ್ಪಡಿಸುತ್ತದೆ. ಮಧ್ಯಾಂತರ ಅಪಧಮನಿಗಳ ಅತಿ ತೆಳುವಾದ ಅಡ್ಡಕೊಯ್ತ ಬಿಲ್ಲೆಗಳ (ಥಿನ್ ಕ್ರಾಸ್ ಸೆಕ್ಷನ್) ಸೂಕ್ಷ್ಮದರ್ಶಕ ವೀಕ್ಷಣೆ ಮಾಡಿದಾಗ ಈ ಪೊರೆಯನ್ನು ಬಹುಸ್ಪಷ್ಟವಾಗಿ ಗುರುತಿಸಬಹುದು. ಅಭಿಧಮನಿ ಅಪಧಮನಿಗಳ ಭಿತ್ತಿಯ ಇನ್ನೆರಡು ಕವಚಗಳೆಂದರೆ ನಡುಕವಚ ಮತ್ತು ಹೊರಕವಚ (ಟ್ಯೂ. ಎಕ್ಸ್‍ಟರ್ನ, ಟ್ಯೂ, ಅಡ್‍ವೆನ್‍ಟಿಷಿಯ). ಸುಮಾರು ಒಂದೆರಡು ಮಿಮೀ ವ್ಯಾಸವಿರುವ ಮಧ್ಯಾಂತರ ಅಪಧಮನಿಗಳಲ್ಲಿ ಇವು ಮೂರು ಕವಚಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಅಲ್ಲದೆ ಅವು ಹೆಚ್ಚು ಕಡಿಮೆ ಒಂದೇ ಗಾತ್ರದವಾಗಿರುತ್ತವೆ.

ಧಮನಿಯ ನಡುಕವಚ

[ಬದಲಾಯಿಸಿ]

ಉಂಗುರಗಳಂತೆ ಅಥವಾ ಸುತ್ತುಬಳ್ಳಿಯಂತೆ ಜೋಡಿಸಲ್ಪಟ್ಟಿರುವ ಅನೈಚ್ಛಿಕ ಸ್ನಾಯುಗಳು ಮತ್ತು ಹಳದಿ ನಾರೆಲೆಗಳಿಂದ ಇದರ ರಚನೆ ಆಗಿದೆ. ಹೆಚ್ಚು ಗಾತ್ರದ ಮಧ್ಯಾಂತರ ಅಪಧಮನಿಗಳಲ್ಲಿ ಹಳದಿ ನಾರೆಳೆ ಅಂಶ ಹೆಚ್ಚು. ಕಡಿಮೆ ಗಾತ್ರದ ಮಧ್ಯಾಂತರ ಅಪಧಮನಿಯಲ್ಲಿ ಅನೈಚ್ಛಿಕ ಸ್ನಾಯುವಿನ ಅಂಶ ಹೆಚ್ಚು. ಕಿರಿ ಅಪಧಮನಿಯಲ್ಲಿ ಸ್ನಾಯುವಿನ ಅಂಶವೇ ಪ್ರಧಾನ. ಮಹಾಪಧಮನಿಗಳಲ್ಲಿ ಹಳದಿನಾರೆಳೆಯ ಅಂಶ ಪ್ರಧಾನ ಅಲ್ಲದೆ ನಡುಕವಚವೇ ಭಿತ್ತಿಯ ಪ್ರಧಾನ ಭಾಗ. ಅಭಿಧಮನಿಗಳಲ್ಲಿ ಸ್ನಾಯುವಿನ ಅಂಶ ಮತ್ತು ಹಳದಿ ನಾರೆಳೆ ಎರಡೂ ಅತ್ಯಲ್ಪ. ನಡುಕವಚದ ಹಳದಿ ನಾರೆಳೆಗಳು ಅದರ ಹೊರಭಾಗದಲ್ಲಿ ಒಂದಕ್ಕೊಂದು ಹೆಣೆದುಕೊಂಡು ಒಂದು ಪೊರೆಯಂತಾಗಿ ಅದನ್ನು ರಕ್ತನಾಳದ ಹೊರಕವಚದಿಂದ ಬೇರ್ಪಡಿಸಿರುವಂತೆ ಕಾಣಬಹುದು. ಸಣ್ಣ ಮಧ್ಯಾಂತರ ಅಪಧಮನಿಗಳಲ್ಲಿ ಈ ಸ್ಥಿತಿ ಚೆನ್ನಾಗಿ ವ್ಯಕ್ತವಾಗುತ್ತದೆ. ಅಪಧಮನಿಗಳ ನಡುಕವಚದ ಅನೈಚ್ಛಿಕ ಸ್ನಾಯುಗಳಿಗೆ ಅನುವೇದಕ (ಸಿಂಪಥೆಟಿಕ್) ಎಂಬ ನರವ್ಯೂಹದಿಂದ ನರಪೂರೈಕೆ ಆಗುತ್ತದೆ. ಈ ನರಗಳು ಒಯ್ಯುವ ಪ್ರಚೋದನೆಯಿಂದ ಅ ಸ್ನಾಯುಗಳು ಸಂಕುಚಿಸುತ್ತವೆ. ತತ್ಫಲವಾಗಿ ಅಪಧಮನಿಯ ವ್ಯಾಸ ಕುಗ್ಗುತ್ತದೆ. ನರಗಳ ಮೂಲಕ ನಿರಂತರವಾಗಿ ಅಲ್ಪಪ್ರಚೋದನೆ ಒಯ್ಯಲ್ಪಡುತ್ತಲೇ ಇರುವುದರಿಂದ ಅಪಧಮನಿ ಸ್ವಲ್ಪಮಟ್ಟಿಗೆ ಸಂಕುಚಿಸಿದಂತೆಯೇ ಇರುತ್ತದೆ. ಪ್ರಚೋದನೆ ಹೆಚ್ಚಾದರೆ ಅಪಧಮನಿ ಇನ್ನೂ ಸಂಕುಚಿಸಿ ಕಿರಿದಾಗುತ್ತದೆ. ಪ್ರಚೋದನ ಕಡಿಮೆ ಆದರೆ ಅಪಧಮನಿ ಹಿಗ್ಗಿ ದಪ್ಪ ನಾಳವಾಗುತ್ತದೆ. ಅಪಧಮನಿ ಹಿಗ್ಗಿದಾಗ ಅದು ಒಯ್ಯುವ ರಕ್ತಪ್ರಮಾಣ ಹೆಚ್ಚೆನ್ನುವುದು ವ್ಯಕ್ತ. ಒಂದು ಅಂಗಕ್ಕೆ ಅಥವಾ ದೇಹಭಾಗಕ್ಕೆ ಹೆಚ್ಚುರಕ್ತದ ಅಗತ್ಯ ಉಂಟಾದಾಗ ಆ ಸ್ಥಳಕ್ಕೆ ಪೂರೈಕೆ ಆಗುವ ಅಪಧಮನಿ ಅನೈಚ್ಛಿಕವಾಗಿ ನಿಯಂತ್ರಿತವಾದ ನರ ಪ್ರಚೋದನೆಯಿಂದ ಹಿಗ್ಗಿ ಅಗತ್ಯಕ್ಕೆ ತಕ್ಕಷ್ಟು ಹೆಚ್ಚು ರಕ್ತ ಒದಗುವಂತಿದೆ. ಇಂಥ ಹೆಚ್ಚುವರಿ ರಕ್ತÀ ದೇಹದಲ್ಲಿ ರಕ್ತದ ಅಗತ್ಯ ಕಡಿಮೆ ಇರುವ ಸ್ಥಳಗಳಾದ ಚರ್ಮ, ಉದರ ಮುಂತಾದ ಸ್ಥಳಗಳಿಂದ ಒದಗುತ್ತದೆ. ಈ ಸ್ಥಳಗಳಲ್ಲಿ ಮೇಲಿನ ರೀತಿಯ ಅನೈಚ್ಛಿಕ ನರನಿಯಂತ್ರಣದಿಂದಲೇ ಅಪಧಮನಿಗಳು ಕುಗ್ಗಿ ಅಲ್ಲೆಲ್ಲ ಪ್ರವಹಿಸುವ ರಕ್ತ್ತಪ್ರಮಾಣ ಕಡಿಮೆ ಆಗುತ್ತದೆ. ಇದರಿಂದ ಉಳಿಕೆ ಆಗುವ ರಕ್ತ ಅಗತ್ಯವಾದ ಕಡೆಗೆ ದೊರೆಯುವಂತೆ ಆಗುತ್ತದೆ. ಈ ರೀತಿ ನಿಯಂತ್ರಿತವಾದ ರಕ್ತಹಂಚಿಕೆಗೆ ಒಂದು ಉದಾಹರಣೆಯನ್ನು ಕೊಡಬಹುದು. ಊಟವಾದ ಬಳಿಕ ಸ್ವಲ್ಪ ಹೊತ್ತು ಚಳಿಯಾಗುವುದು ಅನೇಕರ ಅನುಭವ. ಇದಕ್ಕೆ ರಕ್ತದ ನಿಯಂತ್ರಿತ ಹಂಚಿಕೆಯೇ. ಊಟವಾದ ಮೇಲೆ ಜಠರದಲ್ಲಿ ಪಚನಕ್ರಿಯೆ ಆರಂಭವಾಗುತ್ತದೆ. ಜಠರದ ಚಟುವಟಿಕೆ ಹೆಚ್ಚಿ ಅದಕ್ಕೆ ರಕ್ತಪೂರೈಕೆ ಅಧಿಕವಾಗಬೇಕಾದ ಅಗತ್ಯ ಕಂಡುಬರುತ್ತದೆ. ಆದ್ದರಿಂದ ಅಲ್ಲಿ ಅಪಧಮನಿಗಳು ಹಿಗ್ಗುತ್ತವೆ. ಜಠರಕ್ಕೆ ಹೆಚ್ಚು ರಕ್ತ ಒದಗಿಸಲು ಚರ್ಮದ ಅಡಿಯ ಅಪಧಮನಿಗಳು ಕುಗ್ಗುತ್ತವೆ. ಇದರಿಂದ ಚರ್ಮದಲ್ಲಿ ಪ್ರವಹಿಸುವ ರಕ್ತದ ಪ್ರಮಾಣ ಕಡಿಮೆ ಆಗಿ ಸಾಕಷ್ಟು ಬಿಸಿ ದೊರೆಯದೆ ಚಳಿ ಎನ್ನಿಸುತ್ತದೆ. ಮುಖ ಕೆಂಪೇರುವುದಕ್ಕೂ ಇಂಥ ಅನೈಚ್ಛಿಕ ನರನಿಯಂತ್ರಣವೇ ಕಾರಣ. ಈ ಸಂದರ್ಭದಲ್ಲಿ ಮುಖದ ಅಪಧಮನಿಗಳು ಹಿಗ್ಗಿ ಅಲ್ಲಿ ಪ್ರವಹಿಸುವ ರಕ್ತದ ಪ್ರಮಾಣ ಹೆಚ್ಚಿ ಮುಖ ಕೆಂಪಡರುತ್ತದೆ. ಅತಿಯಾದ ಭೀತಿ ಮುಂತಾದ ಇನ್ನಿತರ ಭಾವಾಧಿಕ್ಯ ಸಂದರ್ಭಗಳಲ್ಲಿ ಮುಖ ಬಿಳಿಚಿಕೊಳ್ಳುವುದು ಅಲ್ಲಿನ ಅಪಧಮನಿಗಳು ಅನೈಚ್ಛಿಕ ನರನಿಯಂತ್ರಣದಿಂದ ಕುಗ್ಗಿ ಪ್ರವಹಿಸುವ ರಕ್ತದ ಪ್ರಮಾಣ ಕಡಿಮೆ ಆಗುವುದರಿಂದಲೇ. ಅಪಧಮನಿಗಳ ಅನೈಚ್ಛಿಕ ಸ್ನಾಯುಗಳು ದೇಹದಲ್ಲಿ ವ್ಯಾಪಕವಾಗಿ ಏಕಕಾಲಿಕವಾಗಿ ಸಂಕುಚಿಸುವುದರಿಂದ ರಕ್ತದ ಒತ್ತಡ ಹೆಚ್ಚುತ್ತದೆ. ಕೆಲವು ಸಂದರ್ಭಗಳಲ್ಲಿ ರಕ್ತ ಒತ್ತಡದ ಅಧಿಕ್ಯ ರೋಗಕ್ಕೆ ಇದೇ ಕಾರಣ. ಸ್ನಾಯು ಅಂಶ ಅಧಿಕವಾಗಿರುವುದರಿಂದಲೇ ಅಪಧಮನಿಗಳು ಘಾತದಿಂದ ಹರಿದಾಗ ಅಥವಾ ಅವನ್ನು ಕೊಯ್ದಾಗ ಗಾಯರಂಧ್ರ ತಾನಾಗಿಯೇ ಶೀಘ್ರದಲ್ಲಿ ಕಿರಿದಾಗಿ ರಕ್ತಸ್ರಾವ ಕಡಿಮೆ ಆಗುತ್ತದೆ. ಇದಕ್ಕೆ ಕಾರಣ ಸ್ನಾಯುಗಳು ತಾವಾಗಿಯೇ ಸಂಕುಚಿಸಿ ಆ ಸ್ಥಳದಲ್ಲಿ ಅಪಧಮನಿಯನ್ನು ಕಿರಿದಾಗಿಸಿ ರಂಧ್ರವೂ ಕಿರಿದಾಗುವಂತೆ ಮಾಡುವುದು. ರಕ್ತಸ್ರಾವ ಕಡಿಮೆ ಅದ ಮೇಲೆ ಆ ಸ್ಥಳದಲ್ಲಿ ರಕ್ತ ಗರಣೆ ಕಟ್ಟಿಕೊಂಡು ಆದ ಗಾಯ ಮುಚ್ಚಿಕೊಂಡು ರಕ್ತಸ್ರಾವ ಪೂರ್ಣವಾಗಿ ನಿಂತುಕೊಳ್ಳುತ್ತದೆ. ಸ್ನಾಯುವಿನ ಅಂಶ ಅತ್ಯಲ್ಪವಾಗಿರುವ ನಾಳಗಳಾದ ಅಭಿಧಮನಿಗಳಲ್ಲಿ ಹೀಗಾಗುವುದಿಲ್ಲ. ಗಾಯದಿಂದ ಅವು ಹರಿದಾಗ ಆ ರಂಧ್ರ ತೆರೆದೇ ಇರುವುದರಿಂದ ರಕ್ತಸ್ರಾವ ಬಹುಕಾಲ ಮತ್ತು ಅಗಾಧವಾಗಿ ಆಗುವುದು.

ಧಮನಿಯ ಹೊರಕವಚ

[ಬದಲಾಯಿಸಿ]

ಅಪಧಮನಿ ಅಭಿಧಮನಿಗಳ ಭಿತ್ತಿಯ ಹೊರ ಭಾಗ ಹೊರಕವಚ. ಇದು ಬಿಳಿ ನಾರೆಳೆಗಳಿಂದಾದುದು. ದಪ್ಪ ರಕ್ತನಾಳಗಳ ಭಿತ್ತಿಗೆಂದೇ ಪೂರೈಕೆ ಆಗುವ ಅತಿ ಸಣ್ಣ ರಕ್ತನಾಳಗಳೂ ನರಗಳು ಈ ಕವಚದಲ್ಲಿ ಹುದುಗಿರುತ್ತವೆ. ಪೆಟ್ಟು, ಹಿಗ್ಗಿಸುವಿಕೆ (ಸ್ಟ್ರೆಚಿಂಗ್)-ಗಳಿಂದ ರಕ್ತನಾಳ ಹರಿದುಹೋಗದಂತೆ ರಕ್ಷಣೆ ಒದಗಿಸುವುದೇ ಅಲ್ಲದೆ ಈ ಕವಚ ರಕ್ತನಾಳವನ್ನು ನೆರೆಯ ಊತಕಕ್ಕೆ ಬಂಧಿಸಿ ನಾಳದ ಸ್ಥಾನಪಲ್ಲಟವಾಗದಂತೆ ನೋಡಿಕೊಳ್ಳುತ್ತದೆ. ಅಪಧಮನಿಗಿಂತಲೂ ಅದಕ್ಕೆ ಸಂವಾದಿಯಾದ ಅಭಿಧಮನಿಯಲ್ಲಿ ಹೊರಕವಚ ಹೆಚ್ಚು ಗಾತ್ರವಾಗಿರುತ್ತದೆ. ಮಹಾಪಧಮನಿಗಳಲ್ಲೂ ಮಹಾಭಿಧಮನಿಗಳಲ್ಲೂ ಹೊರಕವಚದ ಗಾತ್ರ ಹೆಚ್ಚು. ಅಲ್ಲದೆ ಅದರಲ್ಲಿ ಅನೈಚ್ಛಿಕ ಸ್ನಾಯುಗಳೂ ಇರಬಹುದು. ಅವನತ ಮಹಾಭಿಧಮನಿಯಲ್ಲಿ ಇದು ಒಂದು ವಿಶಿಷ್ಟ ಲಕ್ಷಣ.

ಅಪಧಮನಿಗಳೂ ಅಭಿಧಮನಿಗಳೂ ಅನುಕ್ರಮವಾಗಿ ತಮ್ಮ ನೆರೆಯ ಅಪಧಮನಿಗಳೊಡನೆ ಅಥವಾ ಅಭಿಧಮನಿಗಳೊಡನೆ ಕವಲುಗಳ ಮೂಲಕ ಸಂಪರ್ಕ ಹೊಂದಿರುವುದು ಸಾಮಾನ್ಯ. ಇಂಥ ಸಂಪರ್ಕಗಳು ಅಭಿಧಮನಿಗಳಲ್ಲಿ ಹೆಚ್ಚು. ಈಗ ಯಾವುದೇ ಕಾರಣದಿಂದ ಒಂದು ಅಪಧಮನಿಯಲ್ಲೊ ಅಭಿಧಮನಿಯಲ್ಲೊ ರಕ್ತಪ್ರವಾಹಕ್ಕೆ ಅಡಚಣೆ ಉಂಟಾದಾಗ ಸಾಮಾನ್ಯವಾಗಿ ಯಾವ ತೊಂದರೆಯೂ ಉದ್ಭವಿಸದು. ಏಕೆಂದರೆ ಅಡಚಣೆ ಉಂಟಾದರೂ ಆ ಭಾಗಕ್ಕೆ ರಕ್ತಪೂರೈಕೆ ಅಥವಾ ಅಲ್ಲಿಂದ ರಕ್ತದ ವಾಪಸಾತಿ ಸಂಪರ್ಕ ರಕ್ತ ನಾಳಗಳಿಂದ ಸಾಧ್ಯ. ಆದರೆ ಕೆಲವು ಸ್ಥಳಗಳಲ್ಲಿ-ಉದಾಹರಣೆಗೆ ಫುಪ್ಪುಸ, ಗುಲ್ಮ, ಮಿದುಳು, ಹೃದಯ-ಕಿರಿ ಅಪಧಮನಿಗಳು ತಮ್ಮ ನೆರೆಯ ಕಿರಿ ಅಪಧಮನಿಗಳೊಡನೆ ಸಂಪರ್ಕವಾಗುವುದು ಅಷ್ಟಷ್ಟೇ. ಇಂಥ ಅಪಧಮನಿಗಳಿಗೆ ಅಂತ್ಯಾಪಧಮನಿಗಳೆಂದು (ಎಂಡ್ ಆರ್ಟರಿ) ಹೆಸರು. ಈ ಅಪಧಮನಿ ಒಂದರಲ್ಲಿ ರಕ್ತಪ್ರವಾಹಕ್ಕೆ ಅಡಚಣೆ ಉಂಟಾದರೆ ಅದು ಪೂರೈಸುವ ಅಂಗ ಭಾಗಕ್ಕೆ ರಕ್ತದ ಕೊರತೆ ಸಹಜ. ಆ ಭಾಗದ ಕೋಶಗಳು ವಾಸ್ತವವಾಗಿ ಸತ್ತೇಹೋಗಬಹುದು. ಇದರಿಂದ ಆ ಅಂಗದ ಕ್ರಿಯೆಗೆ ಧಕ್ಕೆ ಆಗಬಹುದು. ಇಂಥ ಸತ್ತ ಸ್ಥಳಗಳಿಗೆ ಇನ್‍ಫಾರ್‍ಕ್ಟ್ ಎಂದು ಹೆಸರು.

ಲೋಮನಾಳಗಳು

[ಬದಲಾಯಿಸಿ]

ಇವು ಕೂದಲಿಗಿಂತ ಸಪುರ ನಾಳಗಳು. ಕೆಲವಂತೂ 6 - 8 ( (( = 0.001 ಮಿಮೀ) ವ್ಯಾಸದ್ದಾಗಿದ್ದು ಅವುಗಳ ಮೂಲ ರಕ್ತದ ಕೆಂಪು ಕಣಗಳು ಸಾಲುಹಿಡಿದು ಒಂದರ ಹಿಂದೆ ಒಂದು ಸಾಗಬೇಕಾಗುತ್ತದೆ. ಹಾಗೆ ಸಾಗುವಾಗಲೂ ಸುಲಭವಾಗಿ ಸಾಗಲಾರದೆ ಚಪ್ಪಟೆಯಾಗಿ ನುಸುಳಿಕೊಂಡು ಹೋಗಬೇಕಾದ ಸಂದರ್ಭಗಳೂ ಉಂಟು. ಅಗತ್ಯಕ್ಕೆ ತಕ್ಕಂತೆ ಸಂಕುಚಿಸಿಕೊಂಡಿರುವ ಸಾಮಥ್ರ್ಯ ಲೋಮನಾಳಗಳಿಗೆ ನೈಸರ್ಗಿಕವಾಗಿ ಲಭಿಸಿದೆ. ಕೆಲವು ವೇಳೆ ಕೆಲವು ಲೋಮನಾಳಗಳು ಸಂಕುಚಿಸಿಕೊಂಡಿದ್ದು ಕೆಲಕಾಲದಮೇಲೆ ಹಿಗ್ಗಿ ರಕ್ತ ಪ್ರವಾಹಕ್ಕೆ ಅವಕಾಶ ಮಾಡಿಕೊಡಬಹುದು. ಇಂಥ ಕಾಲದಲ್ಲಿ ಮೊದಲು ರಕ್ತ ಪ್ರವಹಿಸುತ್ತಿದ್ದ ಲೋಮನಾಳಗಳು ತಾವಾಗಿಯೇ ಸಂಕುಚಿಸಿಕೊಂಡು ತಮ್ಮಲ್ಲಿ ರಕ್ತಪ್ರವಾಹವನ್ನು ನಿರ್ಬಂಧಿಸುತ್ತವೆ. ಈ ರೀತಿ ಒಂದು ಭಾಗದ ಲೋಮನಾಳಗಳು ಟಪ್ಪೆಯಾಗಿ (ರಿಲೇ) ಕಾರ್ಯನಿರ್ವಹಣೆ ಮಾಡುವುದು ಸಾಮಾನ್ಯ. ಸ್ಥಳೀಯ ಸನ್ನಿವೇಶಗಳು - ಉದಾಹರಣೆಗೆ ಸ್ಥಳೀಯವಾಗಿ ಉಷ್ಣತಾಧಿಕ್ಯ. ಇಂಗಾಲದ ಡೈಆಕ್ಸೈಡ್ ಅಧಿಕ್ಯ. ಕೆಲವು ವಿಶಿಷ್ಟ ರಾಸಾಯನಿಕಗಳು ಸ್ಥಳೀಯವಾಗಿ ಬಿಡುಗಡೆ ಆಗುವಿಕೆ ಇತ್ಯಾದಿ - ಲೋಮನಾಳಗಳ ಸಂಕೋಚನ ಸಾಮಥ್ರ್ಯದ ಮೇಲೆ ಪ್ರಭಾವ ಬೀರುತ್ತವೆ. ಲೋಮನಾಳಗಳು ಕವಲುಗಳಾಗಿ ಅದೆ ಕವಲುಗಳು ಪುನಃ ಸೇರಿಕೊಳ್ಳುವುದು ಅವುಗಳ ಒಂದು ವಿಶಿಷ್ಟ ಲಕ್ಷಣ. ಎಲ್ಲೆಲ್ಲೂ ಲೋಮನಾಳಗಳ ಜಾಲವೇ ಉಂಟು. ಒಂಟಿ ಲೋಮನಾಳ ಇರುವ ಸ್ಥಳವೇ ಇಲ್ಲವೆನ್ನಬಹುದು. ಅಪಧಮನಿ ಅಭಿಧಮನಿಗಳಲ್ಲಿ ಕವಲುಗಳು ತಾಯಿನಾಳಕ್ಕಿಂತ ಯಾವಾಗಲೂ ಕಿರಿದಾಗಿಯೇ ಇರುತ್ತವೆ., ಲೋಮನಾಳದ ಕವಲುಗಳು ತಾಯಿನಾಳದಷ್ಟೇ ವ್ಯಾಸವುಳ್ಳವು. ಲೋಮನಾಳದ ಭಿತ್ತಿ ಬಲು ತೆಳು. ವಾಸ್ತವವಾಗಿ ಒಂದೇ ವರಸೆ ಎಂಡೊಥೀಲಿಯಮ್ ಕೋಶಗಳಿಂದ ರಚಿಸಲ್ಪಟ್ಟಿದೆ. ಕೋಶಗಳ ನಡುವೆ ಅಲ್ಲಲ್ಲಿ ಅತಿ ಸಣ್ಣ ರಂಧ್ರಗಳೂ (ಬಹುಶಃ ಹತ್ತರಲ್ಲಿ ಒಂದು ( ಗಿಂತ ಸಣ್ಣವು) ಇರುವುದುಂಟು. ಲೋಮನಾಳಗಳ ಭಿತ್ತಿ ಹೀಗೆ ಅತಿ ತೆಳುವಾಗಿ ರಂಧ್ರಯುಕ್ತವಾಗಿರುವುದರಿಂದ ಒಳಗೆ ಪ್ರವಹಿಸುವ ರಕ್ತದ ದ್ರವಭಾಗ ಜರಡಿಯಿಂದ ಶೋಧಿಸಲ್ಪಟ್ಟು ಹೊರಗೆ ಬರುವಂತೆ ಭಿತ್ತಿಯ ಹೊರಗೆ ಊರುತ್ತಲೇ ಇರುತ್ತವೆ. ರಕ್ತದಲ್ಲಿ ಕರಗಿರುವ ಪೂರ್ಣ ಲೀನಕಾರಿ ವಸ್ತುಗಳೆಲ್ಲ (ಕ್ರಿಸ್ಟಲಾಯ್ಡ್) ಅದೇ ಪ್ರಮಾಣದಲ್ಲಿ ಈ ದ್ರವದಲ್ಲೂ ಇರುತ್ತವೆ. ಈ ದ್ರವಕ್ಕೆ ಕೋಶಾವರಣ ದ್ರವವೆಂದು (ಇನ್‍ಟರ್‍ಸೆಲ್ಯೂಲರ್ ಫ್ಲೂಯಿಡ್) ಹೆಸರು. ಲೋಮನಾಳಗಳ ಸುತ್ತಮುತ್ತ ಇರುವ ಕೋಶಗಳ ಮೈಮೇಲೆಲ್ಲ ಇದು ಪಸರಿಸುವುದರಿಂದ ಇದರೊಡನೆ ಕೋಶಗಳು ವಸ್ತುವಿನಿಮಯ ಮಾಡಿಕೊಳ್ಳುತ್ತವೆ. ಹೀಗಾಗಿ ಪೌಷ್ಟಿಕ ಮತ್ತು ಇತರ ಉಪಯುಕ್ತ ವಸ್ತುಗಳು ಕೋಶಗಳಿಗೆ, ಅವು ದೇಹದ ಯಾವ ಸಂದಿಮೂಲೆಯಲ್ಲಿದ್ದರೂ ದೊರೆಯುತ್ತವೆ. ಅಂತೆಯೇ ಕೋಶಗಳಿಂದ ವಿಸರ್ಜಿತ ವಸ್ತುಗಳು ಕೋಶಗಳು ಉತ್ಪಾದಿಸಿ ದೇಹದ ಬೇರೆಡೆಯಲ್ಲಿ ಉಪಯುಕ್ತವಾಗಬಹುದಾದ ವಸ್ತುಗಳೂ ಕೋಶದಿಂದ ಹೊರ ಬಂದು ಈ ದ್ರವದಲ್ಲಿ ಲೀನವಾಗುತ್ತವೆ. ಕೋಶಕ್ಕೆ ಅಗತ್ಯವಾದ ಆಕ್ಸಿಜನ್ ಪೂರೈಕೆಯೂ ಕೋಶಕ್ರಿಯೆಗಳಿಂದ ಉದ್ಭವಿಸಿದ ಇಂಗಾಲದ ಡೈಆಕ್ಸೈಡಿನ ವಿಸರ್ಜನೆಯೂ ಇದೇ ರೀತಿ ಜರುಗುತ್ತವೆ. ಹೀಗೆ ಕೋಶಾವರಣದ್ರವ ಕೋಶಗಳಿಗೂ ಲೋಮನಾಳಗೊಳಗಿನ ರಕ್ತಕ್ಕೂ ಸಂಬಂಧ ಕಲ್ಪಸುವ ಒಂದು ಅತ್ಯಗತ್ಯ ವಸ್ತುವಾಗಿ ಪರಿಣಮಿಸಿದೆ. ಲೋಮನಾಳಗಳ ಒಂದು ಕಿರಿ ಅಪಧಮನಿಯ ಕೊನೆಯಿಂದ ಉಗಮಿಸಿ ಜಾಲದಂತೆ ವಿನ್ಯಾಸಗೊಂಡು ಪುನಃ ಎಲ್ಲ ಸೇರಿ ಅನುಗುಣವಾದ ಕಿರಿ ಅಭಿಧಮನಿಯಾಗುವುದಷ್ಟೆ. ಈ ಅಂತರದಲ್ಲಿ ಲೋಮನಾಳದ ಪೂರ್ವಾರ್ಧದಲ್ಲಿ ಕೋಶಾವರಣ ದ್ರವ ಭಿತ್ತಿಯ ಮೂಲಕ ಶೋಧಿಸಲ್ಪಟ್ಟು ಹೊರಬರುತ್ತದೆ. ಲೋಮನಾಳದ ಅಂತ್ಯಾರ್ಧದಲ್ಲಿ ಇದು ಪುನಃ ಒಳಕ್ಕೆ ಹಿರಲ್ಪಡುತ್ತದೆ. ಉಳಿಕೆ ದ್ರವ ಏನಾದರೂ ಇದ್ದರೆ ಅದು ದುಗ್ಧರಸನಾಳದೊಳಹೊಕ್ಕು ದುಗ್ಧರಸ ಎನ್ನಿಸಿಕೊಂಡು ಅದರೊಳಗೇ ಪ್ರವಹಿಸುತ್ತ ಅಂತಿಮವಾಗಿ ಅದೂ ರಕ್ತವನ್ನು ಸೇರುತ್ತದೆ. ಲೋಮನಾಳದ ಪೂರ್ವಾರ್ಧ ಭಾಗದಲ್ಲಿ ಕೋಶಾವರಣ ದ್ರವ ಹೊರಬರುವುದಕ್ಕೂ ಅಂತ್ಯಾರ್ಧಭಾಗದಲ್ಲಿ ಒಳಕ್ಕೆ ಹಿರಲ್ಪಡುವುದಕ್ಕೂ ಕಾರಣವಿಷ್ಟೆ. ಲೋಮನಾಳದೊಳಗೆ ಪ್ರವಹಿಸುತ್ತಿರುವ ರಕ್ತ ತಕ್ಕಷ್ಟು ಒತ್ತಡಕಾರಕ. ಈ ಒತ್ತಡದ ಪರಿಣಾಮವಾಗಿ ಬಹು ತೆಳುವಾದ ಲೋಮನಾಳ ಭಿತ್ತಿಯನ್ನು ತೂರಿ ನೀರು ಅದರೊಳಗೆ ಪೂರ್ಣವಾಗಿ ಕರಗಿರುವ ವಸ್ತುಗಳೂ ಹೊರಬರುತ್ತವೆ. ಅದ್ದರಿಂದ ಈ ಒತ್ತಡಕ್ಕೆ ಶೋಧನ ಒತ್ತಡ (ಫಿಲ್ಟ್ರೇಷನ್ ಪ್ರೇಷರ್) ಎಂಬ ಹೆಸರಿದೆ. ಶೋಷಿತವಾಗಿ ಕೋಶಾವರಣ ದ್ರವ ಹೊರಬರುವ ಪ್ರವೃತ್ತಿಗೆ ವ್ಯತಿರಿಕ್ತವಾದದ್ದು ನೀರು (ಆದ್ದರಿಂದ ಅದರಲ್ಲಿ ಕರಗಿರುವ ವಸ್ತುಗಳು). ಇದು ಲೋಮನಾಳದ ಭಿತ್ತಿಯ ಮೂಲಕ ಹೊರಗಿನಿಂದ ಒಳಸೇರುವುದು. ನೀರನ್ನು ಹೀಗೆ ಒಳಕ್ಕೆ ಆಕರ್ಷಿಸುವುದು ರಕ್ತದ್ರವದಲ್ಲಿರುವ ಪ್ರೋಟೀನ್ ಅಂಶ. ಪ್ರೋಟೀನುಗಳು ಪೂರ್ಣವಾಗಿ ಲೀನವಾಗದೆ ರಕ್ತ ದ್ರವದಲ್ಲಿ ತೇಲುತ್ತಿರುವ (ಸಸ್‍ಪೆಂಡೆಡ್) ವಸ್ತುಗಳು. ಇವು ಲೋಮನಾಳ ಭಿತ್ತಿಯಲ್ಲಿ ತೂರಲಾರದಷ್ಟು ಗಾತ್ರದ ಬೃಹದಣುಗಳಿಂದಾದವು. ಕೋಶಾವರಣ ದ್ರವ ಲೋಮನಾಳದಿಂದ ಹೊರಬರುವಾಗ ಇವು ಲೋಮನಾಳದೊಳಗೇ ಉಳಿದುಕೊಳ್ಳುತ್ತದೆ ಮತ್ತು ತಮ್ಮ ಪ್ರಮಾಣಕ್ಕೆ ಅನುಸಾರವಾಗಿರುವಷ್ಟು ಒತ್ತಡದಿಂದ ನೀರನ್ನು ಆಕರ್ಷಿಸುತ್ತದೆ. ಮಾನವರ ಲೋಮನಾಳಗಳಲ್ಲಿ ಈ ಆಕರ್ಷಣೆ ಸುಮಾರು 30 ಮಿಮೀ ಪಾದರಸದಷ್ಟು ಉಂಟು. ಲೋಮನಾಳಗಳ ಪೂರ್ವಾರ್ಧದಲ್ಲಿ ಶೋಧನ ಒತ್ತÀಡ ಸುಮಾರು 40 ಮಿಮೀ ಪಾದರಸದಷ್ಟು ಇದೆ. ಅಂದರೆ ಪ್ರೋಟೀನ್ ಬೃಹದಣುಗಳ ಆಕರ್ಷಕ ಒತ್ತಡಕ್ಕಿಂತ ಹೆಚ್ಚು. ಆದ್ದರಿಂದ ಈ ಸ್ಥಳದಲ್ಲಿ ಶೋಧನೆಯೇ ಪ್ರಧಾನವಾಗಿ ಕೋಶಾವರಣ ದ್ರವ ಹೊರಬರುತ್ತವೆ. ಲೋಮನಾಳಗಳ ಅಂತ್ಯಾರ್ಧದಲ್ಲಿ ಶೋಧನ ಒತ್ತಡ ಸುಮಾರು 10 ಮಿಮೀ ಪಾದರಸದಷ್ಟು ಉಂಟು. ಆದ್ದರಿಂದ ಈ ಸ್ಥಳದಲ್ಲಿ ಪ್ರೋಟೀನ್ ಬೃಹದಣುಗಳು ನೀರನ್ನು ಆಕರ್ಷಿಸುವ ಒತ್ತಡವೇ ಹೆಚ್ಚು ಮತ್ತು ನೀರಿನ ಆಕರ್ಷಣೆಯೇ ಪ್ರಧಾನಕ್ರಿಯೆ. ಹೀಗಾಗಿ ಈ ಸ್ಥಳದಲ್ಲಿ ಕೋಶಾವರಣದ್ರವ ಪುನಃ ಲೋಮನಾಳದ ಒಳಹೋಗುತ್ತದೆ. ದ್ರವ ಹೊರಬರುವ ಮತ್ತು ಒಳಹೋಗುವ ಕ್ರಿಯೆಗಳಲ್ಲಿ ವ್ಯತ್ಯಾಸವಾದರೆ ಈ ದ್ರವದ ಪ್ರಮಾಣ ಹಚ್ಚುಕಡಿಮೆ ಆಗುತ್ತದೆ. ಹೆಚ್ಚಾದರೆ ಅದೇ ಊತಪರಿಸ್ಥಿತಿ (ಇಡೀಮ). ಕಡಿಮೆ ಆದರೆ ಕೋಶಗಳಿಗೆ ಅಗತ್ಯವಸ್ತುಗಳ ಖೋತ ಆಗಿ ಕೋಶನಾಶವಾಗುವ ಪ್ರಮೇಯ ಉಂಟು. ಆಘಾತಕ್ಕೆ (ಷಾಕ್) ಸಂದರ್ಭಗಳಲ್ಲಿ ಲೋಮನಾಳಗಳ ಗಾತ್ರದ ಸ್ವನಿಯಂತ್ರಣ ನಾಶವಾಗಿ ದೇಹದಲ್ಲಿ ಲೋಮನಾಶಗಳು ವ್ಯಾಪಕವಾಗಿ ಹಿಗ್ಗುವುದರಿಂದ ದೇಹರಕ್ತದ ಬಹುಪಾಲು ಅಲ್ಲೆ ಶೇಖರವಾಗಿ ಹೃದಯಕ್ಕೆ ರೇಚಿಸಲು ತಕ್ಕಷ್ಟು ರಕ್ತವಿಲ್ಲದೆ ರಕ್ತದ ಒತ್ತಡ ಅಗಾಧವಾಗಿ ಕುಸಿದು ಮರಣವೇ ಸಂಭವಿಸಬಹುದು. ಆದ್ದರಿಂದ ಇದನ್ನು ಯಾವಾಗಲೂ ತುರ್ತುಪರಿಸ್ಥಿತಿಯಾಗಿ ಗಣಿಸಿ ತಕ್ಕ ಚಿಕಿತ್ಸೆಯನ್ನು ಕೂಡಲೇ ಕೈಗೊಳ್ಳಬೇಕಾಗುತ್ತದೆ.

ಧಮನಿಗಳ ವಿಶೇಷ ವಿನ್ಯಾಸಗಳು

[ಬದಲಾಯಿಸಿ]

ಅಪಧಮನಿಗೂ ಅಭಿಧಮನಿಗೂ ನಡುವೆ ಲೋಮನಾಳ ಜಾಲದ ಸಂಪರ್ಕವಿರುವುದೇ ದೇಹದಲ್ಲಿರುವ ಸರ್ವ ಸಾಧಾರಣ ಏರ್ಪಾಡು. ಕೆಲವು ಕಡೆ ಈ ಜಾಲದ ಜೊತೆಗೆ ಅಪಧಮನಿಯನ್ನು ನೇರವಾಗಿ ಅಭಿಧಮನಿಗೆ ಸಂಪರ್ಕಿಸುವ ಒಂದು ಧಮನಿ ಇರುತ್ತದೆ. ಇದರ ಭಿತ್ತಿಯ ರಚನೆ ಅಪಧಮನಿಗೂ ಲೋಮನಾಳಕ್ಕೂ ಮಧ್ಯಸ್ಥವಾಗಿರುವುದು. ಈ ಧಮನಿ ಸಂಕುಚಿಸಿಕೊಂಡು ರಕ್ತ ಲೋಮನಾಳಜಾಲದ ಮೂಲಕವೇ ಪ್ರವಹಿಸುವಂತೆ ಮಾಡಬಲ್ಲದು. ಇಲ್ಲವೇ ಹಿಗ್ಗಿದ ಸ್ಥಿತಿಯಲ್ಲಿದ್ದು, ರಕ್ತ ಲೋಮನಾಳಜಾಲದಲ್ಲಿ ಪ್ರವಹಿಸುವುದನ್ನು ಪೂರ್ಣವಾಗಿ ತಪ್ಪಿಸಿ ಅದು ಅಪಧಮನಿಯಿಂದ ನೇರವಾಗಿ ಅಭಿಧಮನಿಯನ್ನು ಸೇರುವಂತೆ ಮಾಡಬಲ್ಲದು. ಇಂಥ ಏರ್ಪಾಡಿನಿಂದ ಹಲವು ಅನುಕೂಲತೆಗಳುಂಟು. ಅಪರೂಪವಾಗಿ ಒಂದೊಂದು ಕಡೆ ಲೋಮನಾಳ ಜಾಲ ಪೂರ್ಣವಾಗಿ ಲೋಪವಾಗಿ ಇಂಥ ಸಂಪರ್ಕನಾಳ ಮಾತ್ರ ಇರುವುದುಂಟು.

ದೇಹದ ಕೆಲವು ಅಂಗಗಳೊಳಗೆ ಲೋಮನಾಳದಂತಿರುವ ಧಮನಿ ಉದ್ದಕ್ಕೂ ಒಂದೇ ಸಮನಾದ ವ್ಯಾಸವುಳ್ಳ ನಾಳವಾಗಿರುವುದಿಲ್ಲ. ಭಿತ್ತಿಯ ರಚನೆ ಹೆಚ್ಚು ಕಡಿಮೆ ಲೋಮನಾಳದಂತಿದ್ದರೂ ಕಂಡಿಯ ವ್ಯಾಸ ಕೆಲವು ಕಡೆ ಹೆಚ್ಚು, ಕೆಲವು ಕಡಿಮೆ ಆಗಿದ್ದು ಅಡ್ಡಾದಿಡ್ಡಿ ಆಗಿರುತ್ತದೆ. ಇಂಥ ಧಮನಿಗಳಿಗಿ ಸೈನ್ಯುಸಾಯ್ಡಗಳೆಂದು ಹೆಸರು. ಯಕೃತ್ತು ಗುಲ್ಮ ಅಡ್ರಿನಲ್, ಮತ್ತು ಪಿಟ್ಯುಯಿಟರಿ ಗ್ರಂಥಿಗಳು, ಮಜ್ಜೆ ಇತ್ಯಾದಿ ಸ್ಥಳಗಳಲ್ಲಿ ಸೈನ್ಯುಸಾಯ್ಡಗಳು ಕಂಡುಬರುತ್ತದೆ. ಸ್ವಲ್ಪವೇ ವ್ಯತ್ಯಾಸವಾದ ಇಂಥದೇ ವಿನ್ಯಾಸ ದೇಹದ ನಿಮಿರಬಲ್ಲ ಅಂಗಗಳಲ್ಲಿ (ಇರೆಕ್ಟೈಲ್ ಆರ್ಗನ್ಸ್) ಇದೆ. ಇವೆಲ್ಲ ಆಯಾ ಅಂಗಗಳ ವಿಶೇಷ ಕ್ರಿಯೆಗಳಿಗೆ ಅನುಕೂಲವಾಗಲೆಂದೇ ಲೋಮನಾಳಜಾಲಗಳ ಬದಲು ಸೈನ್ಯುಸಾಯ್ಡಗಳಿರುವುದು.

ಇನ್ನು ಕೆಲವು ಕಡೆ ಅಪಧಮನಿ ಒಂದು ಸಲ ಲೋಮನಾಳಜಾಲವಾಗಿ ವಿನ್ಯಾಸಗೊಂಡು ಅನಂತರ ಎಲ್ಲ ಸೇರಿ ಆದ ಧಮನಿ ಪುನಃ ಇನ್ನೊಂದು ಅಂಗದಲ್ಲಿ ಎರಡನೇಯ ಸಲ ಲೋಮನಾಳ ಜಾಲವಾಗುತ್ತದೆ. ಮೊದಲನೆಯ ಲೋಮನಾಳ ಜಾಲವಿರುವ ಸ್ಥಳದಲ್ಲಿ ಕೋಶಾವರಣ ದ್ರವದ ಮೂಲಕ ರಕ್ತಗತವಾಗುವ ವಸ್ತುಗಳನ್ನು ಎರಡನೆಯ ಲೋಮನಾಳಜಾಲವಿರುವ ಸ್ಥಳದಲ್ಲಿ ಒದಗಿಸಿ ಅಲ್ಲಿ ಸೂಕ್ತ ಪರಿಣಾಮ ಉಂಟಾಗುವಂತೆ ಅನುಕೂಲ ಮಾಡಿಕೊಡಲು ಆದ ಸೈಸರ್ಗಿಕ ಏರ್ಪಾಡು ಇದು. ಲೋಮನಾಳದಿಂದ ಉದ್ಭವಿಸಿ ಇನ್ನೊಂದು ಲೋಮನಾಳಜಾಲದಲ್ಲಿ ಕೊನೆಗೊಳ್ಳುವ ಈ ವಿನ್ಯಾಸಕ್ಕೆ ಪೋರ್ಟಲ್ ವ್ಯವಸ್ಥೆ (ಸಿಸ್ಟಮ್) ಎಂದು ಹೆಸರು. ಜಠರ, ಕರುಳು, ಗುಲ್ಮ ಇಲ್ಲಿರುವ ಲೋಮನಾಳಜಾಲಗಳಿಂದ ಉದ್ಭವಿಸಿದ ಧಮನಿಗಳು ಸೇರಿ ಒಂದು ದೊಡ್ಡ ಧಮನಿಯಾಗಿ (ಇದನ್ನು ಪೋರ್ಟಲ್ ಅಭಿಧಮನಿ ಎಂದೇ ಕರೆಯಲಾಗಿದೆ) ಯಕೃತ್ತನ್ನು ಸೇರಿ ಅಲ್ಲಿ ಕವಲೊಡೆದು ಧಮನಿಜಾಲವಾಗುತ್ತದೆ. ಇದರಿಂದ ಜೀರ್ಣಾಂಗಗಳಿಂದ ಆಹಾರ ಜೀರ್ಣಿಸಲ್ಪಟ್ಟು ರಕ್ತಗತವಾದ ಪೌಷ್ಠಿಕ ವಸ್ತುಗಳು ಯಕೃತ್ತಿನ ಕೋಶಗಳಿಗೆ ದೊರಕಿ ಅಲ್ಲಿ ತಕ್ಕ ಪರಿಣಾಮ ಉಂಟಾಗುತ್ತದೆ. ಇದೇ ರೀತಿ ಹೈಪೊಥೆಲಮಸ್ ಎಂಬ ಮಿದುಳಿನ ಭಾಗದ ಲೋಮನಾಳಜಾಲಗಳು ಸೇರಿ ಒಂದು ಧಮನಿಯಾಗಿ ಅದು ನೆರೆಯಲ್ಲಿರುವ ಪಿಟ್ಯುಯಿಟರಿ ಗ್ರಂಥಿಯನ್ನು ಹೊಕ್ಕು ಅಲ್ಲಿ ಲೋಮನಾಳಜಾಲವಾಗಿ ವಿನ್ಯಾಸಗೊಳ್ಳುತ್ತದೆ. ಈ ಏರ್ಪಾಡಿನಿಂದ ಹೈಪೊಥೆಲಮಸ್ಸಿನಲ್ಲಿ ಉತ್ಪತ್ತಿಯಾದ ರಾಸಾಯನಿಕಗಳು ಪಿಟ್ಯುಯಿಟರಿ ಗ್ರಂಥಿಗೆ ಒಯ್ಯಲ್ಪಟ್ಟು ಅಲ್ಲಿ ನಿರ್ದಿಷ್ಟ ಪರಿಣಾಮಗಳು ಫಲಿಸುವುದು ಸಾಧ್ಯವಾಗಿದೆ. ಮೂತ್ರಜನಕಾಂಗದ ಎರಡುತುದಿಗಳಲ್ಲೂ ಲೋಮನಾಳಗಳಲ್ಲಿರುವ ಧಮನಿಗಳು ಲಕ್ಷಾಂತರ ಇವೆ. ಇಂಥ ವಿನ್ಯಾಸದಿಂದ ಮೂತ್ರಜನಕಾಂಗದಲ್ಲಿ ಅಗತ್ಯವಾದ ರೀತಿಯಲ್ಲಿ ಮೂತ್ರೋತ್ಪತ್ತಿ ಆಗಲು ಸಾಧ್ಯವಾಗಿದೆ.

ಧಮನಿಗಳ ರೋಗಗಳು

[ಬದಲಾಯಿಸಿ]

1 ಅನ್ಯೂರಿಸಮ್: ಅಪಧಮನಿಯ ಒಂದು ರೋಗಸ್ಥಿತಿ. ಈ ಸ್ಥಿತಿಯಲ್ಲಿ ಅಪಧಮನಿ ಸಾಮಾನ್ಯವಾಗಿ ಸ್ಥಳೀಯವಾಗಿ ಉಬ್ಬಿಕೊಂಡಿರುತ್ತದೆ. ಉಬ್ಬರ ಅಪರೂಪವಾಗಿ ಅಪಧಮನಿಯ ಉದ್ದಕ್ಕೂ ಸ್ವಲ್ಪದೂರ ಕಂಡುಬರಬಹುದು. ಅಪಧಮನಿಯ ಮೈ ಸುತ್ತಲೂ ಒಂದೇ ಸಮನಾಗಿ ಉಬ್ಬಿರಬಹುದು ಇಲ್ಲವೇ ಒಂದು ಪಕ್ಕದಲ್ಲಿ ಮಾತ್ರ ಉಬ್ಬಿಕೊಂಡಿರಬಹುದು. ಅಪಧಮನಿಯ ಪೆಡಸುರೋಗ (ಆರ್ಟೀರಿಯೋಸ್ಕ್ಲೀರೋಸಿನ್, ಅಥಿರೋಮ), ಸಿಫಿಲಿಸ್, ಮತ್ತು ಇನ್ನು ಕೆಲವು ವೈರಾಣು ಸೋಂಕುಗಳು ಇಂಥ ಸ್ಥಿತಿಗಳಲ್ಲಿ ಅಪಧಮನಿಯ ಭಿತ್ತಿ ಶಿಥಿಲಗೊಂಡಿರುವಾಗ ಆ ಸ್ಥಳದಲ್ಲಿ ನಾಡಿಮಿಡಿತ ಉಂಟಾದ ಪ್ರತಿಸಲವೂ ಅದು ಕೊಂಚಕೊಂಚ ಹಿಗ್ಗಿಸಲ್ಪಡುತ್ತ ಅಪಧಮನಿಯ ಉಬ್ಬರ ಉಂಟಾಗುತ್ತದೆ. ಇದು ಅಪಧಮನಿಯ ನಿಜವಾದ ಉಬ್ಬರ (ಟ್ರೂ ಅನ್ಯೂರಿಸಮ್) ವಿಶೇಷವಾಗಿ ಎದೆ ಅಥವಾ ಉದರದಲ್ಲಿ ಅಯೋರ್ಟ ಎಂಬ ಮಹಾಪಧಮನಿಯ ಇಳಿಭಾಗದಲ್ಲಿ ಸ್ಥಳೀಯವಾಗಿ ಕಂಡುಬರುತ್ತದೆ. ಅಪರೂಪವಾಗಿ ಭಿತ್ತಿಸೀಳಿ ಎರಡು ಪದರವಾಗಿ ರಕ್ತ ಈ ಎರಡು ಪದರಗಳ ನಡುವೆಯೂ ಪ್ರವಹಿಸುತ್ತ ಉಬ್ಬರವನ್ನು ಉಂಟುಮಾಡಬಹುದು. ಇದಕ್ಕೆ ಸೀಳು ಉಬ್ಬರ (ಡಿಸೆಕ್ಟಿಂಗ್ ಅನ್ಯೂರಿಸಮ್) ಎಂದು ಹೆಸರು. ರಕ್ತ ಒತ್ತಡದ ಅಧಿಕ್ಯ ರೋಗದಲ್ಲಿ (ಹೈಪರ್‍ಟೆನ್‍ಷನ್, ಹೈಬ್ಲಡ್‍ಪ್ರೆಶರ್) ಇಂಥ ಉಬ್ಬರ ಕಂಡುಬರುವ ಸಾಧ್ಯತೆ ಹೆಚ್ಚು, ಬಂದೂಕಿನೇಟು, ಚೂರಿ ತಿವಿತ ಮುಂತಾದ ನೇರ ಘಾತಗಳಿಂದ ಅಪಧಮನಿಯ ನೆರೆಯಲ್ಲಿ ಡೊಗರುಂಟಾಗಿ ಅದು ಅಪಧಮನಿಯ ಭಿತ್ತಿಯ ಹರಕಿನ ಮೂಲಕ ಅಪಧಮನಿಯೊಡನೆ ಏಕವಾಗಿರುತ್ತದೆ ಮತ್ತು ಸಹಜವಾಗಿಯೇ ರಕ್ತ ಇಲ್ಲದೆ ರಕ್ತದ ಹೆಪ್ಪಿನಿಂದ ತುಂಬಿಕೊಂಡಿರುತ್ತದೆ. ಇದಕ್ಕೆ ನಕಲಿ ಉಬ್ಬರ (ಫಾಲ್ಸ್ ಅನ್ಯೂರಿಸಮ್) ಎಂದು ಹೆಸರು. ಒಂದೊಂದು ಹೃದಯ ಮಿಡಿತದಲ್ಲೂ ಅನ್ಯೂರಿಸಮ್ ಇರುವ ಸ್ಥಳ ಕೂಡ ನಾಡಿಮಿಡಿತವನ್ನು ತೋರುವುದರಿಂದ ಮುಂಚೆಯೇ ಶಿಥಿಲವಾಗಿರುವ ಭಿತ್ತಿ ಬರಬರುತ್ತ ಹಿಗ್ಗುತ್ತಲೇ ಹೋಗಿ ತೆಳ್ಳಗಾಗಿ ಕೊನೆಗೆ ಎಂದೋ ಹರಿದುಹೋಗಬಹುದು. ಪರಿಣಾಮ ಅಗಾಧ ಆಂತರಿಕ ರಕ್ತಸ್ರಾವ ಮತ್ತು ಮರಣ. ಮಿದುಳಿನಲ್ಲಿ ಇಂಥ ಸಣ್ಣ ಉಬ್ಬರಗಳು ಒಡೆದು ರಕ್ತಸ್ರಾವವಾಗುವುದರಿಂದ ಜ್ಞಾನ ತಪ್ಪುವಿಕೆ. ಪಕ್ಷಾಘಾತ ಮುಂತಾದವು ಉಂಟಾಗುತ್ತವೆ. ಇವೂ ಸಾಮಾನ್ಯವಾಗಿ ಮಾರಕಸ್ಥಿತಿಗಳು, ಉಬ್ಬರಗಳು ನೆರೆ ಅಂಗಗಳ ಮೇಲೆ ಒತ್ತುತ್ತ ನೋವು ಉಂಟುಮಾಡುವುವಲ್ಲದೆ ಒಂದೊಂದು ಮಿಡಿತದಲ್ಲೂ ಆ ಸ್ಥಳದಲ್ಲಿ ಘರ್ಷಣೆ ಆಗುವುದರಿಂದ ಊತಕ ನಾಶವಾಗಬಹುದು. ಮಾಂಸಖಂಡ ಮುಂತಾದ ಮೃದುಭಾಗಗಳಲ್ಲದೆ ಎದೆ ಮೂಳೆ ಬೆನ್ನುಮೂಳೆಗಳೂ ಇಂಥ ನಿರಂತರ ಘರ್ಷಣೆಯಿಂದ ಸವೆದುಹೋಗಬಹುದು. ಅಯೋರ್ಟದ ಉಬ್ಬರ ಶ್ವಾಸನಾಳದ ಮೇಲೆ ಒತ್ತುತ್ತಿರುವಾಗ ಉಸಿರಾಡುವುದು ಕಷ್ಟವೆನಿಸಬಹುದು. ಸ್ವರನರಗಳ ಮೇಲಣ ಒತ್ತುವಿಕೆಯಿಂದ ಧ್ವನಿ ಅಡಗಿ ಪಿಸುಮಾತಾಗಬಹುದು. ದೇಹದ ಹೊರಗೇ ವ್ಯಕ್ತವಾಗುವ ಲಕ್ಷ್ಪಣಗಳಿಂದ ಉಬ್ಬರದ ಪತ್ತೆ ಆಗಬಹುದು. ಸ್ಟೆಥಸ್ಕೋಪಿನ (ಎದೆಯಾಲಿಕೆ) ಮೂಲಕ ಆಲಿಸಿದರೆ ಸುರ್ ಸುರ್ ಎಂಬ ಶಬ್ದ ಒಂದೊಂದು ಹೃದಯ ಮಿಡಿತದ ವೇಳೆಯಲ್ಲೂ ಕೇಳಿಬರುವುದು ಅಪಧಮನಿ ಉಬ್ಬರದ ವಿಶೇಷ ಲಕ್ಷಣ. ಶಸ್ತ್ರಕ್ರಿಯೆಯಿಂದ ಉಬ್ಬರವನ್ನು ಕೊಯ್ದ ಅಪಧಮನಿಯ ಕೊಯ್ದು ಎರಡು ತುದಿಗಳನ್ನೂ ಸೇರಿಸಿ ಸೂಕ್ಷ್ಮ ಅಚ್ಚುಕಟ್ಟು ಹಾಗೂ ಪರಿಣಾಮಕಾರಿಯಾಗುವ ಹೊಲಿಗೆ ಹಾಕುವುದು ರೂಢಿಯಾದ ಚಿಕಿತ್ಸೆ. ಈಚೆಗೆ ಉಬ್ಬರ ಸ್ಥಳವನ್ನು ತೆಗೆದು ಆ ಸ್ಥಳದಲ್ಲಿ ಕೃತಕ ಅಪಧಮನಿಯನ್ನು ಅಳವಡಿಸಿ ಇಲ್ಲವೇ ಬೇರೆ ಬೇರೆ ಜೀವಂತ ಅಪಧಮನಿಯನ್ನು ನಾಟಿ ಹಾಕಿ ಚಿಕಿತ್ಸೆ ನಡೆಸಲಾಗುತ್ತಿದೆ.

2 ಅಪಧಮನಿಯ ಪೆಡಸಣೆ : ಅಪಧಮನಿಯ ಭಿತ್ತಿ ಗಡಸಾಗುವ ಒಂದು ರೋಗ ಸ್ಥಿತಿ (ಆರ್ಟೀರಿಯೊ ಸ್ಕ್ಲೀರೋಸಿಸ್) ಮಾನವರಲ್ಲಿ ಅಪಧಮನಿ ಪೆಡಸುಗೊಳ್ಳುವಿಕೆ ತೀರ ಸಾಮಾನ್ಯವಾಗಿ ಗೋಚರಿಸುವ ವ್ಯತ್ಯಯವಾಗಿವೆ. ಅದು ನಾಗರಿಕತೆಯ ಫಲವೆಂದು ಅನೇಕ ವಿಜ್ಞಾನಿಗಳ ಅಭಿಪ್ರಾಯ. ಪ್ರಾಚೀನ ಕಾಲದಲ್ಲಿ ಸಹ ಅದನ್ನು ಗುರುತಿಸಿದ ಬಗ್ಗೆ ಪುರಾವೆಗಳುಂಟು. ತೆಳ್ಳಗೂ ನಯವಾಗಿಯೂ ಇರುವ ಅಪಧಮನಿಯ ಒಳಪದರ ರಕ್ತಪ್ರವಾಹದೊಂದಿಗೆ ನಿರಂತರವಾಗಿ ಘರ್ಷಿಸುವುದರಿಂದ ಅಲ್ಲಿ ಪೆಡಸುತನ ಬಲು ಸಾಮಾನ್ಯವಾಗಿ ಗೋಚರಿಸುತ್ತದೆ. ಮಹಾಪಧಮನಿ (ಅಯೋರ್ಟ) ಹೃದಯ ಮತ್ತು ಮಿದುಳಿಗೆ ರಕ್ತ ಪೂರೈಸುವ ಕಾರೋನರಿ ಮತ್ತು ಕಿಲೋಟೆಡ್ ಅಪಧಮನಿಗಳು ಹಾಗೂ ವಿಲ್ಲಿಸ್‍ನ ವೃತ್ತದ ಅಪಧಮನಿಗಳು ಈ ವ್ಯತ್ಯಯವನ್ನು ತೋರ್ಪಡಿಸುತ್ತದೆ. ಅವು ಅಂತ್ಯಾಪಧಮನಿಗಳಾದುದರಿಂದ (ಎಂಡ್ ಆರ್ಟರಿ) ಜೀವನಾಳ ಅಂಗಭಾಗಗಳ ರಕ್ತ ಪೂರೈಕೆಗೆ ಅಡ್ಡಿಯನ್ನು ಉಂಟುಮಾಡಿ ಹೃದಯಾಘಾತ ಮಿದುಳ ರಕ್ತಸ್ರಾವ ಮತ್ತು ಕೂಡ್ಗರಣೆಗೆ ಅವಕಾಶ ಮಾಡಿಕೊಟ್ಟು ಮರಣಕ್ಕೆ ಆಹ್ವಾನವನ್ನು ನೀಡುತ್ತದೆ. ಪ್ರಾರಂಭದಲ್ಲಿ ಮೇದಸ್ಸಿನ ಅಂಶಗಳು ಮತ್ತು ಕೊಲೆಸ್ಟಿರಾಲ್ ಅಪಧಮನಿ ಭಿತ್ತಿಯ ಒಳಪದರದೊಳಗೆ ಮತ್ತು ಅದರಡಿಯಲ್ಲಿ ಸಂಗ್ರಹಣೆಗೊಂಡು ಅಲ್ಲಲ್ಲಿ ಗೀರೆÀಳೆ ಇಲ್ಲವೆ ಚಕ್ಕೆಯಂತೆ ಉಬ್ಬುಗಳೂ ಏಳುತ್ತವೆ. ಅನಂತರ ಅವು ಮೃದುವಾಗಿ ಅಂಬಲಿಯಂಥ ವಸ್ತುವನ್ನು ಒಸರಿ ವ್ರಣವನ್ನು ಉಂಟುಮಾಡಿ ಅಲ್ಲಿ ರಕ್ತದಿಂದ ಬಂದ ಕಿರುಫಲಕಗಳು ಮತ್ತು ಕಂತುಕದ ಕೂಡ್ಗರಣೆಗೆ ಸಹಾಯಕವಾಗುವುವು. ಅಪಧಮನಿಯ ಭಿತ್ತಿ ಅಂಬಲಿಯಂಥ ವಸ್ತು ಶೇಖರಣೆಯಿಂದಾಗಿ ಒರಟಾಗುವ ಈ ಕ್ರಿಯೆಗೆ ಅಂಬಲಿ ಪೆಡಸಣೆ ಎಂಬ ಹೆಸರಿದೆ. ಕೂಡ್ಗರಣೆಯಿಂದಾಗಿ ಅಪಧಮನಿ ಗಾತ್ರ ಕಿರಿದಾಗಿ ರಕ್ತಪೂರೈಕೆ ಕಡಿಮೆ ಆಗಬಹುದು. ಇಲ್ಲವೆ ಸಂಪೂರ್ಣ ನಿಲುಗಡೆ ಆಗಬಹುದು. ಇಲ್ಲವೆ ಕೂಡ್ಗರಣೆಯ ಚೂರುಗಳು ಕಳಚಿ ರಕ್ತಪ್ರವಾಹದೊಂದಿಗೆ ಕೊಂಡೊಯ್ಯಲ್ಪಡಬಹುದು. ರಕ್ತದಲ್ಲಿನ ಮೇದಸ್ಸಿನ ಅಂಶಗಳಾದ ಲಿಪಿಡುಗಳು ಮತ್ತು ಕೊಲೆಸ್ಟರಾಲ್ ಪ್ರಾಣೀಜನ್ಯ ಸಂತೃಪ್ತಿ ಮೇದೋಆಮ್ಲಗಳು ಮತ್ತು ಲೈಂಗಿಕ ಹಾರ್ಮೊನುಗಳು ಅಪಧಮನಿ ಭಿತ್ತಿಯ ತಳಪಾಯದಲ್ಲಿನ ಲೋಳೆಸಕ್ಕರೆಯ ಮಾರ್ಪಾಡಿನಿಂದ ಪೆಡಸಣಿಗೆ ಪ್ರಚೋದನೆ ನೀಡುತ್ತವೆಂದು ಭಾವಿಸಲಾಗಿದೆ.

ಮಾಂಕೆಬರ್ಗನ ಪಡೆಸಣೆ ಮತ್ತೊಂದು ಬಗೆಯದಾಗಿದ್ದು ಅಲ್ಲಿ ಮಾಧ್ಯಮ ಗಾತ್ರದ ಅಪಧಮನಿಗಳ ಮಧ್ಯ ಸ್ನಾಯುಪದರಲ್ಲಿ ಕ್ಯಾಲ್ಸಿಯಮ್ ಲವಣಗಳು ಸಂಗ್ರಹಗೊಂಡು ಅಪಧಮನಿಯನ್ನು ಎರಕದ ಕೊಳವೆಯಂತೆ ಮಾರ್ಪಡಿಸಿ ಕಾಲು, ತೋಳೂ, ಮತ್ತು ಕಫೋಲದಲ್ಲಿ ಅಪಧಮನಿಗಳು ಎದ್ದು ತೊರುವಂತೆ ಮಾಡುತ್ತದೆ. ವೃದ್ಧರಲ್ಲಿ ಕಾಣಿಸಿಕ್ಕುವÀ ಈ ವ್ಯತ್ಯಯದಲ್ಲಿ ರಕ್ತಪ್ರವಾಹಕ್ಕೆ ಅಡ್ಡಿಇಲ್ಲದಿರುವುದರಿಂದ ಮೇಲೆ ಹೇಳಿರುವ ಅಥಿರೋಮರಲ್ಲಿ ಉಂಟಾಗುವ ದುಷ್ಪರಿಣಾಮವಿಲ್ಲ. ಆದರೆ ರಕ್ತದ ಒತ್ತಡ ಹೆಚ್ಚಿ ರಕ್ತಸ್ರಾವವಾಗುವುದೂ ಹೃದಯ ಸೋಲುವುದೂ ಕಂಡುಬರುವುದು.

3 ಅಪಧಮನಿಗಳ ರೋಗಗಳು : ಧಮನಿ ರೋಗಗಳಲ್ಲಿ ಅಪಧಮನಿ ರೋಗಗಳು ಮುಖ್ಯ. ಅವುಗಳಲ್ಲಿಯೂ ಅಂಬಲಿ ಪೆಡಸಣಿಯೇ (ಅಥಿರೋಸ್ಕ್ಲೀರೋಸಿಸ್) ತೀರ ಸಾಮಾನ್ಯ ರೋಗ, ಇದರಲ್ಲಿ ಎಂದಿನಂತೆ ಮೆತ್ತಗಿರುವ ಅಪಧಮನಿಗಳು ಗಡಸಾಗಿ ಇರುತ್ತದೆ. ಅಪಧಮನಿಗಳ ಒಳಮೈ ತಳದಲ್ಲಿ ಮೊದಲು ಕೊಬ್ಬಿನಂಥ ವಸ್ತು ಸೇರಿರುತ್ತವೆ. ಬರಬರುತ್ತ ಸುಣ್ಣಾಂಶವು ಇದಕ್ಕೆ ಸೇರಿ ಅಪಧಮನಿಗಳು ಗಡಸಾಗಿ ಬೇಕಾದಾಗ ಹಿಗ್ಗಿ ಕುಗ್ಗಿದಂತಾಗುತ್ತದೆ. ಯಾವ ಅಪಧಮನಿಯಲ್ಲಿ ಎಷ್ಟುಮಟ್ಟಿಗೆ ಹೀಗಾಗಿದೆ ಎನ್ನುವುದಕ್ಕೆ ತಕ್ಕಂತೆ ರೋಗಿಯ ಆರೋಗ್ಯ ಕೆಡುವುದು. ಹೃದಯದ ಸ್ನಾಯುವಿಗೇ ರಕ್ತವನ್ನು ಒದಗಿಸುವ ಕಾರೊನರಿ ಅಪಧಮನಿಗಳಲ್ಲಿ ಒಂದೊ ಅಥವಾ ಹೆಚ್ಚಿಗೊ ಈ ರೋಗಕ್ಕೆ ಈಡಾಗಿದ್ದರೆ ಹೃದಯದ ರಕ್ತಪೊರೈಕೆಗೆ ಅಡ್ಡಿಯಾಗಿ ಹೃದಯಕ್ಕೆ ರಕ್ತದ ಕೊರೆ ಆಗಬಹುದು. ಆಗ ಮುಖ್ಯವಾಗಿ ಎದೆಶೂಲೆ ಬಂದು ತೋಳಿನುದ್ದಕ್ಕೂ ಅಥವಾ ಕೊರಳಿಗೋ ಹೋಗುತ್ತದೆ. ಮಿದುಳಿನ ಅಪಧಮನಿಗಳಲ್ಲಿ ಈ ರೋಗ ತಲೆ ದೋರಿದರೆ ಹಾಗೆ ದುರ್ಬಲವಾದ ಅಪಧಮನಿ ಒಡೆದುಕೊಂಡು ಮಿದುಳೊಳಕ್ಕೆ ರಕ್ತ ಸುರಿಯಬಹುದು. ಒರಟಾಗಿರುವ ಅಪಧಮನಿಯ ಒಳಮೈಮೇಲೆ ರಕ್ತ ಹೆಪ್ಪುಗಟ್ಟಿ, ರಕ್ತ ಪೂರೈಕೆಗೆ ಅಡ್ಡಿ ಆಗಬಹುದು. ಇವುಗಳ ಫಲವಾಗಿ ಇಡೀ ಮೈಯ ಒಂದು ಪಕ್ಕದಲ್ಲೂ ಇಲ್ಲವೇ ಒಂದು ಭಾಗದಲ್ಲೊ ಲಕ್ವ (ಅರನಾರಿ) ಹೊಡೆಯುತ್ತದೆ. ಅಪರೂಪವಾಗಿ ಮೂತ್ರಪಿಂಡಗಳಿಗೆ ರಕ್ತಪೂರೈಕೆ ಸಾಲದಾಗಿ ಮೈಯಲ್ಲಿನ ವಿಸರ್ಜನ ವಸ್ತುಗಳು ಹೊರಬೀಳದೆ ಒಳಗೆ ಉಳಿದುಬಿಡುತ್ತವೆ. ಅವಯವಗಳಲ್ಲಿ ಅದರಲ್ಲೂ ಕಾಲುಗಳ ಅಪಧಮನಿಗಳಲ್ಲಿ ಹೀಗಾದಾಗ ಭಾಗ ನಡೆದಾಗ ನೋವಾಗಿ ಕುಂಟುವಂತಾಗುವುದು. ಇಲ್ಲವೇ ರಕ್ತವಿಲ್ಲವಾದ ಭಾಗ ಸತ್ತು ಹೋಗುವುದರಿಂದ ಅದನ್ನು ಕತ್ತರಿಸಿ ಹಾಕಬೇಕಾಗುತ್ತದೆ. ತಪ್ಪಿಸಲಾರದಂಥ ಕೇವಲ ವಯಸ್ಸಿನ ಪ್ರಭಾವ ಈ ರೋಗವಲ್ಲವೆಂದು ಪ್ರಯೋಗಾಲಯಗಳ ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಗಳಿಂದ ಗೊತ್ತಾಗಿವೆ. ಈ ರೋಗವನ್ನು ಆದರೆ ಎಳಸಿನಲ್ಲೇ ಮುಂಗಾಣಬಹುದಲ್ಲದೇ ಬಾರದಂತೆ ತಡೆಯುವುದೂ ಸಾಧ್ಯ. ಇದನ್ನು ಕೆಲವು ಸಂದರ್ಭಗಳಲ್ಲಿ ಹೋಗಲಾಡಿಸಬಹುದೆನಿಸಿದೆ. ಶೋಧನೆಗಳಲ್ಲಿ ಮುಖ್ಯವಾದವು ಆಹಾರಕ್ಕೆ ಅದರಲ್ಲೂ ಹೆಚ್ಚಿನದಾಗಿ ಕೊಬ್ಬುಗಳಿಗೆ ಸಂಬಂಧಿಸಿವೆ. ಈ ರೋಗ ಬೆಳೆಯುವುದರಲ್ಲಿ ಬಗೆಬಗೆಯ ಹಾರ್ಮೋನುಗಳ ಪಾತ್ರ, ಈಗಿನ ಕಾಲದ ಒತ್ತಡ ಒಡಿಕಟ್ಟುಗಳು ಮುಂತಾದ ಎಷ್ಟೊ ಅಂಶಗಳನ್ನು ಪರಿಶೀಲಿಸಿದ್ದಾಗಿದೆ.

ರಕ್ತ ಒತ್ತಡದ ಅಧಿಕ್ಯದ ರೋಗದಿಂದ ಕೊನೆಗೆ ಸಣ್ಣ ಅಪಧಮನಿಗಳ ಗೋಡೆಗಳಲ್ಲಿ ಬದಲಾವಣೆಗಳಾಗುತ್ತವೆ. ಇದರಿಂದಲೂ ಹೃದಯದ ಮಿದುಳಿನ ಮತ್ತು ಮೂತ್ರಪಿಂಡಗಳ ರಕ್ತಪೂರೈಕೆಗೆ ಅಡ್ಡಿ ಆಗಬಹುದು. ಬಲುಮಟ್ಟಿಗೆ ರೋಗದ ನಿಕಟ ಕಾರಣ ಗೊತ್ತಿಲ್ಲ. ಯಾವುದೇ ತೆರನ ರೋಗ ಲಕ್ಷಣಗಳೂ ಇದೇ ವಯಸ್ಸಿನ ತನಕ ಕಾಣಿಸಿಕೊಳ್ಳದೆಯೇ ರೋಗಿಗಳು ಬಹು ಕಾಲ ಬದುಕಿ ಬಾಳಬಹುದು. ಉದಾಹರಣೆಗೆ ಮೂತ್ರಪಿಂಡದ ಉರಿಯೂತದಲ್ಲಿ (ನೆಫ್ರೈಟಿಸ್) ಅಲ್ಲಿನ ಸಣ್ಣ ಅಪಧಮನಿಗಳ ಸ್ಥಿತಿ. ಆದರೆ ಅದರ ಒಂದು ಬಗೆಯಲ್ಲಿ ಮಾತ್ರ ರೋಗ ಬಲುಬೇಗನೆ ಉಲ್ಭಣಿಸಿ ರೋಗಿಯನ್ನು ಶೀಘ್ರವಾಗಿ ಬಲಿ ತೆಗೆದುಕೊಳ್ಳುತ್ತದೆ.

ಇನ್ನೊಂದು ಅಪಧಮನಿಯ ರೋಗವೆಂದರೆ ಮಹಾಪಧಮನಿಯ ಉಪದಂಶ. ಪೆನಿಸಿಲಿನ್‍ಪೂರ್ವ ಯುಗದಲ್ಲಿ ಮುಖ್ಯವಾಗಿದ್ದರೂ ಈಗೀಗ ಈ ರೋಗ ಅಪರೂಪವಾಗುತ್ತಿದೆ. ಮಹಾಪಧಮನಿ ಉಪದಂಶದಿಂದ ಮೂರು ರೀತಿಗಳಲ್ಲಿ ಕೆಡಬಹುದು: ಅಪಧಮನಿಯ ಗೋಡೆ ದುರ್ಬಲಗೊಳ್ಳುವುದರಿಂದ ಅದು ಹಿಗ್ಗಿ ಬುಡ್ಡೆಯ ಹಾಗೆ ಅಗಲುಬ್ಬು (ಅನ್ಯೂರಿಸಮ್) ಆಗಬಹುದು; ಮಹಾಪಧಮನಿಯ ಕವಾಟಗಳನ್ನು ಹಾಳುಮಾಡಬಹುದು; ಕಾರೊನರಿ ಅಪಧಮನಿಗಳ ಬಾಯಿಗಳ ಬಳಿಯಲ್ಲಿ ಉರಿತ ಕಂಡುಬಂದು ಹೃದಯದ ರಕ್ತಪೂರೈಕೆಗೇ ಅಡ್ಡಿಪಡಿಸಬಹುದು. ಉಪದಂಶ ರೋಗ ಆರಂಭವಾದಾಗಲೇ ಒಡನೆ ಪರಿಣಾಮಕಾರೀ ಚಿಕಿತ್ಸೆ ಕೈಗೊಂಡರೆ ಈ ಹಾನಿಗಳನ್ನು ತಪ್ಪಿಸಬಹುದು. ಆ ಮೇಲೂ ಸರಿಯಾದ ಚಿಕಿತ್ಸೆಯಿಂದ ರೋಗವನ್ನು ಯಾವ ಹಂತದಲ್ಲಾದರೂ ತಡೆಗಟ್ಟಬಹುದು. ಮೈಯಲ್ಲಿ ಎಲ್ಲಾದರೂ ಒಂದೆಡೆಯಲ್ಲಿ ರಕ್ತಗರಣೆಗಟ್ಟಿ ಆದರೂ ಚೂರು ಅಲ್ಲಿಂದ ಕಿತ್ತುಕೊಂಡು ಬೇರೊಂದೆಡೆಗೆ ರಕ್ತನಾಳದ ಮೂಲಕ ಹೋಗುವುದಕ್ಕೆ ಅಡಚು (ಎಂಬೊಲಸ್) ಎಂದು ಹೆಸರಿದೆ. ರಕ್ತಗರಣೆ ಮೊದಲು ಮೈಯಲ್ಲಿನ ಅಭಿಧಮನಿಗಳಲ್ಲೊ ಹೃದಯಯ ಬಲಭಾಗದಲ್ಲೊ ಕಂಡುಬಂದು ಅದರ ಚೂರು ಪುಪ್ಪುಸದ ಅಪಧಮನಿಗಳ ಒಂದು ಕವಲಿಗೆ ಸಾಗಬಹುದು. ಫÀುಪ್ಪುಸದ ಅಪಧಮನಿಗೆ ಹೋದಾಗ ರಕ್ತದ ಹರಿವಿಗೆ ಅಡಚಣೆಯಾಗಿ ಆ ಭಾಗದ ಪುಪ್ಪುಸವನ್ನು ಸಾಯಿಸುವುದರಿಂದ ಇದ್ದಕ್ಕಿದ್ದ ಹಾಗೆ ಎದೆ ನೋವು, ಕೆಮ್ಮು, ರಕ್ತದ ಉಗುಳು ಕಾಣಿಸಿಕೊಳ್ಳುತ್ತವೆ.

ಹೇಗೊ ಪುಪ್ಪುಸವನ್ನು ಬಿಟ್ಟು ಮೈಯಲ್ಲಿನ ಇತರ ಅಪಧಮನಿಗಳಲ್ಲಿ ರಕ್ತದ ಗರಣೆ ಹೊಕ್ಕಾಗ ಅದು ಹೊಗುವ ಭಾಗಕ್ಕೆ ತಕ್ಕಂತೆ ರೋಗಲಕ್ಷಣಗಳೂ ಬೇರೆ ಬೇರೆಯಾಗಿರುತ್ತವೆ. ಇದು ಮಿದುಳನ್ನು ಹೊಕ್ಕರೆ ಲಕ್ವ ಹೊಡೆಯುತ್ತದೆ. ಮೂತ್ರಪಿಂಡವನ್ನು ಹೊಕ್ಕರೆ, ಪಕ್ಕೆ ಬೆನ್ನು ನೋವಾಗಿ ಮೂತ್ರದಲ್ಲಿ ರಕ್ತ ಹೋಗುವುದು. ಅದು ಗುಲ್ಮವನ್ನು ಹೊಕ್ಕರೆ ಹೊಟ್ಟೆಯ ಎಡಪಕ್ಕದ ಮೇಲ್ಗಡೆ ನೋವು ತೋರುತ್ತದೆ. ಕೈಕಾಲುಗಳನ್ನು ಸೇರಿದರೆ ಆ ಅವಯವ ತಣ್ಣಗಾಗಿ ನಾಡಿ ಇಲ್ಲವಾಗಿ ಸರಿಯಾಗಿ ಚಿಕಿತ್ಸೆ ಮಾಡದೆ ಹೋದರೆ ಕೊಳೆತೇ ಹೊಗಬಹುದು. ಮಾಡಬಹುದಾದ ಜಾಗಗಳಲ್ಲಿ ತಡಮಾಡದೆ ನಡೆಸಿದ ಶಸ್ತ್ರ ವೈದ್ಯದಿಂದ ಹೊಸದಾಗಿ ಬಂದು ಸೇರಿದ ರಕ್ತಗರಣೆಯನ್ನು ತೆಗೆದುಹಾಕಿದರೆ ಗುಣ ಕಾಣುತ್ತದೆ.

ಇನ್ನೂ ಕೆಲವು ಅಪರೂಪದ ಧಮನಿ ಬೇನೆಗಳಿವೆ: ಧಮನಿ ಗೋಡೆಗಳ ಉರಿತ; ಧಮನಿ ಭಿತ್ತಿಗೇ ರಕ್ತವನ್ನು ಪೂರೈಸುವ ಪುಟಾಣಿ ರಕ್ತ ನಾಳಗಳು ಒಡೆದುಕೊಂಡು ಧಮನಿ ಗೋಡೆಯೊಳಕ್ಕೆ ರಕ್ತಸುರಿತ; ಅಪಧಮನಿ ಸುತ್ತುವರಿದ ಗಂಟು ಕಟ್ಟುವಿಕೆ (ಪೆರಿಯಾರ್ಟರೈಟಿಸ್ ನೋಡೋಸ) ವಿಶಿಷ್ಟ ರೋಗ; ಮುಖ್ಯವಾಗಿ ಪುಪ್ಪುಸದ ಅಪಧಮನಿಗೆ ಹತ್ತು ಧಮನಿ ಪೆಡಸಣೆ (ಅಯುರ್ಜನ ರೋಗ).

ಸಾಮಾನ್ಯವಾಗಿ ವೈದ್ಯರು ಗುರುತಿಸುವುದಕ್ಕಿಂತಲೂ ಹೆಚ್ಚು ಬಾರಿ ಕೀಲುವಾತ ಜ್ವರ (ರುಮ್ಯಾಟಿಕ್ ಫೀವರ್) ಅಪಧಮನಿಗಳಿಗೂ ಹತ್ತುತ್ತದೆ. ಆದರೆ ಅದರ ದಾಳಿಯಿಂದಾದ ಫಲಗಳು ಹೃದಯದಲ್ಲೇ ಎದ್ದು ತೋರುವುದರಿಂದ ಅಪಧಮನಿಗಳಲ್ಲಿ ವ್ಯತ್ಯಾಸಗಳನ್ನು ಅಷ್ಟು ಮುಖ್ಯವೆಂದು ಗಣಿಸುವುದಿಲ್ಲ. ಪ್ರಾಥಮಿಕ ಹಿಟ್ಟನುವಳಿಕೆ (ಪ್ರೈಮರಿ ಅಮೈಲಾಯ್ಡೋಸಿಸ್), ಹರಡಿದ ಕೆಂಗಂದು ಚರ್ಮವೆ (ಡಿಸ್ಸೆಮಿನೇಟೆಡ್ ಲೂಪಸ್ ಎರಿತೆಮೆಟೋಸಿಸ್), ಪೆಡಸ್ಟರ್ಮ, ಚರ್ಮ ಸ್ನಾಯುರಿತ (ಡರ್ಮೆಟೊಮಯೊಸೈಟಿಸ್) ಇವು ಇನ್ನೂ ಕೆಲವು ಧಮನಿಗಳ ಅಪರೂಪದ ರೋಗಗಳು.

ಶ್ರವಣಾತೀತ ತರಂಗದ ಶಬ್ದಗಳಿಂದ ಉತ್ಪತ್ತಿಯಾಗುವ ಚಿತ್ರ ಧಮನಿಗಳ ರಚನೆ, ಧವನಿಗಳ ರೋಗಗಳನ್ನು ಅಭ್ಯಸಿಸಲು, ತಿಳಿದುಕೊಳ್ಳಲು ಬಹಳ ಸಹಕಾರಿಯಾಗಿದೆ. ಇದಕ್ಕೆ ಕಲರ್ ಡಾಪ್ಲರ್ ಎಂದು ಕರೆಯುತ್ತಾರೆ. ಧಮನಿಯ ಒಳ ಆಳ ಕಡಿಮೆಗೊಂಡಿದ್ದು, ರಕ್ತಕರಣೆಗೊಂಡಿದ್ದು ಇದರಿಂದ ತಿಳಿಯಬಹುದು ಹಾಗೂ ಇದು ಚಿಕಿತ್ಸೆ ನೀಡುವ ವೈದ್ಯನಿಗೆ ಅತ್ಯಂತ ಉಪಯುಕ್ತವಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಧಮನಿ&oldid=1161388" ಇಂದ ಪಡೆಯಲ್ಪಟ್ಟಿದೆ