ನರಗಳ ಉರಿಯೂತ
ನರದ ಉರಿಯೂತ ದೊಡ್ಡ ನರಜಾಲಗಳು, ನರತಂತುಗಳು ಅಥವಾ ಅಂತ್ಯವಾಗಿ ದೇಹದ ವಿವಿಧ ಭಾಗಗಳಿಗೆ ಪೂರೈಕೆ ಆಗುವ ನರಗಳು ಕಾರಣಾಂತರದಿಂದ ಊತಗೊಂಡು ವ್ಯಕ್ತಿಗೆ ನೋವನ್ನು ಉಂಟುಮಾಡುವ ರೋಗಸ್ಥಿತಿ (ನ್ಯೂರೈಟಿಸ್). ವಾಸ್ತವವಾಗಿ, ನರತಂತುಗಳನ್ನು ಹಾಗೂ ಕಾಂಡಗಳನ್ನು ಸುತ್ತುವರಿದು ಒಟ್ಟಿಗೆ ಬಂಧಿಸಿರುವ ವಿಶಿಷ್ಟ ಊತಕದ ಉರಿಊತವಿದು.[೧]
ತೊಂದರೆ
[ಬದಲಾಯಿಸಿ]ನರದ ಉರಿಯೂತವು ಬಲು ನೋವು ನೀಡುವ ರೋಗ. ಇದರಿಂದ ಒಳಗಿನ ನರತಂತುಗಳು ಹಿಚುಕಲ್ಪಟ್ಟಂತಾಗಿ ಅವುಗಳ ಕ್ರಿಯೆಗೆ ಧಕ್ಕೆ ಒದಗಿ ರೋಗ ಉಂಟಾಗುತ್ತದೆ. ರೋಗ ಸಾಧಾರಣವಾಗಿ ಮಧ್ಯವಯಸ್ಸಿನ ವ್ಯಕ್ತಿಯಲ್ಲಿ ಕಂಡುಬರುತ್ತದೆ. ರೋಗದ ಅತ್ಯಂತ ಪ್ರಮುಖಲಕ್ಷಣ ನೋವು. ರೋಗಗ್ರಸ್ತ ನರ ಪಸರಿಸಿರುವ ಎಲ್ಲ ಕಡೆಯಲ್ಲೂ ನೋವು ಇರುತ್ತದೆ. ನಿರಂತರವಾಗಿ ತಗ್ಗಿನ ಮಟ್ಟದಲ್ಲಿ ಇರುವ ನೋವು ಆಗಿಂದಾಗ ತೀವ್ರವಾಗಿ ಕೆರಳುತ್ತದೆ. ಅದು ದೀರ್ಘಕಾಲಿಕವಾಗಿಯೂ ಇರಬಹುದು. [೨]ರೋಗಪರಿಸ್ಥಿತಿಯಿಂದ ಒಳಗಿನ ನರ ಒತ್ತಡ ಮುಂತಾದ ಅನುಭವಗಳಾಗುತ್ತವೆ. ರೋಗಗ್ರಸ್ತ ನರಗಳಿಂದ ಪೂರೈಕೆ ಆಗುವ ಸ್ನಾಯುಗಳಲ್ಲಿ ಸ್ಪಷ್ಟವಾಗಿ ನಿಶ್ಶಕ್ತಿ ಕಂಡುಬರುತ್ತದೆ. ಸಂಧಿವಾತರೋಗಗಳಲ್ಲಿ ಸ್ನಾಯುಗಳು ನಶಿಸುವಷ್ಟೇ ಈ ರೋಗದಲ್ಲೂ ನಶಿಸುತ್ತವೆ. ಸ್ನಾಯುಗಳು ತಂತುಗಳಾಗಿ ಸೀಳಿ ಸೆಡೆತುಕೊಳ್ಳುವುದು ಬಲು ಸಾಮಾನ್ಯ.
ಹೊರಚಾಚಿಕೊಂಡ ಕಶೇರುಕ ನಡುವಣ ಬಿಲ್ಲೆ (ಇಂಟರ್‍ವರ್ಟಿಬ್ರಲ್ ಡಿಸ್ಕ್), ಗಂತಿ ಮುಂತಾದವುಗಳಿಂದ ನರದ ಮೂಲ ಅಥವಾ ನರದಮೇಲೆ ಒತ್ತಡ ಉಂಟಾಗಿ ಪರಿಣಮಿಸುವ ಸ್ಥಿತಿಯ ಮೊದಲ ಹಂತದ ಚಿತ್ರವನ್ನು ನರದ ಉರಿಊತ ಬಲುವಾಗಿ ಹೋಲುತ್ತದೆ. ಆದರೂ ಆ ಸ್ಥಿತಿಗಳಲ್ಲಿ ಕಂಡುಬರುವಷ್ಟು ಶೀಘ್ರವಾಗಿ ಸ್ನಾಯು ಕ್ರಿಯಾನಾಶವಾಗಲಿ ಸಂವೇದನಾನಾಶವಾಗಲಿ ಕಂಡುಬರುವುದಿಲ್ಲ.
ಉರಿ ಊತದ ಬಗೆಗಳು
[ಬದಲಾಯಿಸಿ]
ಹಿಂದಲೆ ಮತ್ತು ಕತ್ತಿನ ನರಗಳ ಉರಿಊತ (ಸರ್ವೈಕೊಆಕ್ಸಿಪಿಟಲ್ ನ್ಯೂರೈಟಿಸ್)
[ಬದಲಾಯಿಸಿ]ಕುತ್ತಿಗೆಯ ಪಕ್ಕ ಹಾಗೂ ಮೇಲು ಭಾಗದಲ್ಲಿ ನೋವು ಇರುತ್ತದೆ. ಕುತ್ತಿಗೆ ತಿರುಗಿಸಿದಾಗಲೆಲ್ಲ ನೋವೂ ಬಿಗಿತವೂ ಅನುಭವಕ್ಕೆ ಬರುತ್ತವೆ. ಕುತ್ತಿಗೆಯ ನರಜಾಲದ ಉಚ್ಚರೆಂಬೆಗಳ ಕ್ಷೇತ್ರದಲ್ಲಿ ನೋವು ಪಸರಿಸುತ್ತದೆ.
ತೋಳು ನರಗಳ ಉರಿಊತ (ಬ್ರೇಕಿಯಲ್ ನ್ಯೂರೈಟಿಸ್)
[ಬದಲಾಯಿಸಿ]ತೋಳು ನರಗಳ ಉರಿಊತ, ಇದರಲ್ಲಿ ನಿಶ್ಚೇಷ್ಟತೆ (ಪೆರಾಲಿಟಿಕ್) ಇರುವ ಮತ್ತು ಇಲ್ಲದಿರುವ ಎರಡು ಬಗೆಗಳಿವೆ. ಮೊದಲಿನ ಬಗೆಯಲ್ಲಿ ಸ್ವಲ್ಪ ನೋವು ಮತ್ತು ಸಂವೇದನನಾಶ ಕಂಡುಬಂದರೂ ಸ್ನಾಯು ನಿಶ್ಚೇಷ್ಟತೆಯೇ ಪ್ರಧಾನ. ನೋವು ಮತ್ತು ಸಂವೇದನನಾಶ ಸ್ವಲ್ಪ ಕಾಲದಲ್ಲೇ ಮಾಯವಾಗುತ್ತದೆ. ಸ್ನಾಯುನಿಶ್ಚೇಷ್ಟತೆ ಪೂರ್ಣವಾಗಿ ಹೋಗುವುದೇ ಇಲ್ಲ; ಸ್ವಲ್ಪಮಟ್ಟಿಗೆ ಗುಣ ಕಾಣಬರುವುದಕ್ಕೂ ಕೆಲವು ತಿಂಗಳುಗಳೇ ಬೇಕಾದೀತು. ಎರಡನೆಯ ಬಗೆಯ ಉರಿಊತ ನರಕಾಂಡಗಳಲ್ಲಿ ಕಂಡುಬರುವಂಥದು (ಇನ್‍ಟರ್‍ಸ್ಪಿಷಿಯಲ್ ನ್ಯೂರೈಟಿಸ್). ಇದರಲ್ಲಿ ನೋವು, ಜೋಮು, ಬೆಂಡಾಗುವಿಕೆ ಇವು ಪ್ರಧಾನ ಲಕ್ಷಣಗಳಾಗಿದ್ದು ಪ್ರಾರಂಭದಲ್ಲಿ ಆಗಿಂದಾಗ ಅನುಭವಕ್ಕೆ ಬರುತ್ತಿದ್ದರೂ ಅನಂತರ ನಿರಂತರವಾಗಿರುತ್ತದೆ. ಬೆರಳುಗಳ ಮತ್ತು ಉಗುರುಗಳ ಪೌಷ್ಟಿಕಸ್ಥಿತಿಯಲ್ಲಿ ಏರುಪೇರುಗಳು ಕಂಡುಬರುತ್ತವೆ.
ಕಟಿನರಗಳ ಉರಿಊತ (ಸೈಯಾಟಿಕ):ಕಟಿನರ (ಸೈಯಾಟಿಕ್ ನರ್ವ್)
[ಬದಲಾಯಿಸಿ]ಕಟಿನರಗಳ ಉರಿಊತ (ಸೈಯಾಟಿಕ):ಕಟಿನರವು (ಸೈಯಾಟಿಕ್ ನರ್ವ್) ಹರಡಿರುವ ಕಡೆ ಅಂದರೆ ಪಿರ್ರೆ, ತೊಡೆಯ ಹಿಂಭಾಗ, ಕಾಲಿನ ಹಿಂದಿನ ಮತ್ತು ಹೊರಗಿನ ಭಾಗ ಮತ್ತು ಪಾದದ ಹೊರಂಚು ಇಲ್ಲೆಲ್ಲ ನೋವು ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಈ ರೋಗಕ್ಕೆ ಕಟಿನರಕಾಂಡದಲ್ಲಿ ಉರಿಊತ ಉಂಟಾಗುವದು ಕಾರಣವಾದರೂ ಸಾಮಾನ್ಯವಾಗಿ ಕಶೇರುಕ ನಡುವಣ ಬಿಲ್ಲೆಯ ಹೊರಚಾಚುವಿಕೆಯಿಂದ ಕಟಿನರದ ಒಂದು ಅಥವಾ ಹೆಚ್ಚು ಮೂಲಗಳ ಮೇಲೆ ಉಂಟಾಗುವ ಒತ್ತಡದ ಪರಿಣಾಮವಾಗಿ ಅವು ಉದ್ರೇಕಗೊಳ್ಳುವುದು ಕಾರಣ.[೩] ಕಟಿನರ ಪೂರೈಕೆ ಆಗುವ ಕೆಲವು ಸ್ಥಳಗಳಲ್ಲಿ ಅನುಸೂಚಿತ ನೋವು (ರೆಫರ್ಡ್ ಪೆಯ್ನ್) ಕಂಡುಬರಬಹುದು. ರೋಗಿಗೆ ಹೆಚ್ಚು ಸುಖವೆನ್ನಿಸುವ ಭಂಗಿಯಲ್ಲಿ ಆರು ವಾರಗಳ ಪರ್ಯಂತ ವಿಶ್ರಾಂತಿ ಕೊಡುವುದು ಈ ರೋಗಕ್ಕೆ ಚಿಕಿತ್ಸೆ. ಅಪರೂಪವಾಗಿ ಹೊರಚಾಚಿದ ಕಶೇರುಕ ಮಧ್ಯದ ಬಿಲ್ಲೆಯನ್ನು ಶಸ್ತ್ರಕ್ರಿಯೆಯಿಂದ ತೆಗೆಯಬೇಕಾಗಬಹುದು. [೪]
ಶ್ರವಣನಾಳದ ಉರಿಯೂತ
[ಬದಲಾಯಿಸಿ]ಶ್ರವಣನಾಳದ ಉರಿಯೂತವು ನಾಳ ಹಾಗೂ ಕಿವಿಯ ಒಳಪೊರೆ ಈ ಉರಿಯೂತಕ್ಕೊಳಗಾಗುತ್ತದೆ. ರೋಗ ಸೌಮ್ಯವಾಗಿ ಇರಬಹುದು ಅಥವಾ ಉಲ್ಬಣಿಸಬಹುದು. ಕಿವಿಯೊಳಗೆ ಕಡ್ಡಿ ಹಾಕುವುದು, ಬೆರಳುಗಳಲ್ಲಿ ಕೆರೆದುಕೊಳ್ಳುವುದು ಇತ್ಯಾದಿ ಚೇಷ್ಟೆಗಳಿಂದ ಗಾಯವಾದಾಗ ಗಾಯದ ಮೂಲಕ ಸೊಂಕು ಅಂಟುತ್ತದೆ. ಸ್ಟ್ರೆಪ್ಟೊಕಾಕೈ ಹೀಮೊಲೆಟಿಕಸ್, ಸ್ಟೆಫೆಲೋಕಾಕೈ ಅರಿಯಸ್ ಹಾಗೂ ಸ್ಯೂಡೋಮೋನಾಸ್ ಪಯೋಪಯನಿಯಸ್ ರೋಗಕಾರಕ ಏಕಾಣುಜೀವಿಗಳು ಈ ರೋಗಕ್ಕೆ ಕಾರಣ. ಕೆಲವೊಂದು ವಸ್ತುಗಳು ಒಗ್ಗದಿಕೆ ಹಾಗೂ ಮಾನಸಿಕ ಅಂಶಗಳೂ ಈ ರೋಗಗಳಿಗೆ ಕಾರಣವಾಗಬಹುದು. ಕರ್ಣಕುರುವಿನ ಚಿಕಿತ್ಸೆಯೇ ಈ ವ್ಯಾಧಿಗೂ ಅನ್ವಯಿಸುತ್ತದೆ.
ಚಿಹ್ನೆಗಳು
[ಬದಲಾಯಿಸಿ]ಸಂವೇದನಾನುಭವ ಮತ್ತು ಐಚ್ಛಿಕ ಹಾಗೂ ಅನೈಚ್ಛಿಕ ಕ್ರಿಯೆಗಳಲ್ಲಿ ಅಸ್ತವ್ಯಸ್ತತೆಗಳು ದೇಹದ ಎಡಬಲ ಎರಡು ಕಡೆಯೂ ಕಂಡುಬರುತ್ತವೆ ಪ್ರಾರಂಭದಲ್ಲಿ ಕೈಕಾಲುಗಳ ತುದಿಯಲ್ಲಿ ಈ ಲಕ್ಷಣಗಳು ಕಂಡುಬಂದು ಕ್ರಮೇಣ ದೇಹದ ಮಧ್ಯಭಾಗವನ್ನು ಆವರಿಸುತ್ತವೆ. ರೋಗದ ಉಗ್ರತೆ ವಿವಿಧ ಕಾರಣಗಳಿಂದ ಉಂಟಾದ ವಿವಿಧ ರೋಗಸ್ಥಿತಿಗಳಿಗೆ ಅನುಸಾರವಾಗಿರುತ್ತದೆ.
ಮಿದುಳುಬಳ್ಳಿಯ ಕೋಶಗಳ ರೋಗಗಳಲ್ಲಿ ಪರಿಣಮಿಸುವ ನಿಶ್ಚೇಷ್ಟತೆಯಂತೆಯೇ ಚಾಲಕ ತೊಂದರೆಯೂ ಉಂಟಾಗುವುದು ಈ ರೋಗದ ಒಂದು ವೈಶಿಷ್ಟ್ಯ. ಅಂದರೆ ನಿಶ್ಶಕ್ತಿ, ಅನೈಚ್ಛಿಕ ಪ್ರತಿಕ್ರಿಯಾಚಲನ (ರಿಫ್ಲೆಕ್ಸ್ ಮೂವ್‍ಮೆಂಟ್) ನಾಶ, ಸ್ನಾಯುಗಳ ನಶಿಸುವಿಕೆ, ಕಡೆಯಲ್ಲಿ ಸೆಟವು ಇವು ಕಂಡುಬರುತ್ತದೆ. ಎರಡೂ ಕಡೆಯ ಪಾದಗಳು ಅನೇಕ ರೋಗಿಗಳಲ್ಲಿ ಜೋತು ಬಿದ್ದಂತಾಗುತ್ತದೆ.
ಸಂವೇದನಾನುಭವದಲ್ಲೂ ಎಡಬಲ ಎರಡು ಕಡೆಯೂ ಏಕರೂಪವಾಗಿರುವ ಎಡವಟ್ಟುಗಳು ಕಂಡುಬರುತ್ತವೆ. ನೋವು, ಅಸಹಜ ಸಂವೇದನಾನುಭವ ಇಲ್ಲವೇ ಪೂರ್ಣವಾಗಿ ಸಂವೇದನಾನುಭವ ನಾಶ ಇವು ಸಾಮಾನ್ಯ ಲಕ್ಷಣಗಳು.
ಚರ್ಮ ಹಾಗೂ ಉಗುರುಗಳ ಪೌಷ್ಟಿಕ ಸ್ಥಿತಿ ಇಳಿಮುಖವಾಗಿರುವುದಲ್ಲದೆ ಬೆವರುವುದು, ಪುಲಕಗೊಳ್ಳುವುದು, ಆರಕ್ತತೆ ಉಂಟಾಗುವುದು ಮುಂತಾದ ಅನೈಚ್ಛಿಕ ವ್ಯಾಪಾರಗಳಲ್ಲೂ ತೊಡಕು ಉಂಟಾಗಿರುತ್ತದೆ.
ಚಿಕಿತ್ಸೆ
[ಬದಲಾಯಿಸಿ]ರೋಗದ ಕೂರುಗಂತದಲ್ಲಿ ರೋಗಿಗೂ ರೋಗಗ್ರಸ್ತ ಭಾಗಗಳಿಗೂ ಪೂರ್ಣವಿಶ್ರಾಂತಿ ಕೊಡಬೇಕು. ಅನಂತರ ಪ್ರೋಟೀನುಗಳು, ವೈಟಮಿನ್ನುಗಳು ಅದರಲ್ಲು ಬಿ ಗುಂಪಿನ ವೈಟಮಿನ್ನುಗಳು ಯಥೇಚ್ಛವಾಗಿರುವ ಸಂತುಲಿತ ಆಹಾರವನ್ನು ಕೊಡುವುದು ಅಗತ್ಯ. ನಿಶ್ಚೇಷ್ಟಿತ ಭಾಗಕ್ಕೆ ಅಗತ್ಯ ಆಧಾರ ನೀಡಬೇಕಾದುದು ವಿದಿತ. ರೋಗಿ ತಾನಾಗಿಯೇ ಅಲ್ಲದೆ ಇತರರ ಸಹಾಯದಿಂದಲೂ ಇವರ ರೋಗಗ್ರಸ್ತ ಭಾಗಗಳಿಗೆ ಸರಿಯಾಗಿ ಸಾಧನೆ ಕೊಡಬೇಕು. ನೋವನ್ನು ಶಮನಮಾಡುವ ಔಷಧಗಳೂ ಬೇಕಾಗುತ್ತವೆ. ನರದ ಉರಿಊತಕ್ಕೆ ಕಾರಣವಾದ ಮೂಲ ಅಂಶವನ್ನು ಪತ್ತೆ ಹಚ್ಚಿ ಸರಿಪಡಿಸಬೇಕು. [೫]ಅಗತ್ಯ ವ್ಯಾಯಾಮವು ನಿವಾರಣೆಯಲ್ಲಿ ಸಹಕಾರಿಯಾಗಬಲ್ಲದು.[೬]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2009-06-28. Retrieved 2009-06-28.
- ↑ http://emedicine.medscape.com/article/819426-overview
- ↑ https://www.nhs.uk/conditions/sciatica/
- ↑ https://www.webmd.com/back-pain/ss/slideshow-visual-guide-to-sciatica
- ↑ https://www.healthline.com/health/back-pain/sciatic-stretches
- ↑ https://www.healthline.com/health/sciatica