ನಾರ್ತ್ ಸಮುದ್ರ
North Sea | |
---|---|
![]() | |
ಸ್ಥಳ | Western Europe and Northern Europe |
ನಿರ್ದೇಶಾಂಕಗಳು | 56°N 3°E / 56°N 3°E |
Sea | |
ಒಳಹರಿವು | Baltic Sea, Elbe, Weser, Ems, Rhine/Waal, Meuse, Scheldt, Spey, Don, Dee, Tay, Forth, Tyne, Wear, Tees, Humber, Thames |
Basin countries | United Kingdom (specifically England and Scotland), Norway, Denmark, Germany (specifically Lower Saxony and Schleswig-Holstein), the Netherlands, Belgium, Luxembourg, France, Switzerland, Italy, Liechtenstein, Austria, Czech Republic |
ಗರಿಷ್ಠ ಉದ್ದ | 960 km (600 mi) |
ಗರಿಷ್ಠ ಅಗಲ | 580 km (360 mi) |
570,000 km2 (220,000 sq mi) | |
ಸರಾಸರಿ ಆಳ | 95 m (312 ft) |
ಗರಿಷ್ಠ ಆಳ | 700 m (2,300 ft) |
ನೀರಿನ ಪ್ರಮಾಣ | 54,000 km3 (4.4×1010 acre⋅ft) |
ಲವಣಾಂಶ | 3.4 to 3.5% |
ಗರಿಷ್ಠ ತಾಪಮಾನ | 18 °C (64 °F) |
ಕನಿಷ್ಠ ತಾಪಮಾನ | 6 °C (43 °F) |
ಉಲ್ಲೇಖಗಳು | Seatemperature.org and Royal Belgian Institute of Natural Sciences |
ಉತ್ತರ ಸಮುದ್ರ ಗ್ರೇಟ್ ಬ್ರಿಟನ್ನಿಗೂ ಯುರೋಪ್ ಖಂಡ ಪ್ರದೇಶಕ್ಕೂ ನಡುವೆ ಇರುವ ಒಂದು ತಟ್ಟೆ (ಷ್ಯಾಲೋ) ಕಡಲು (ನಾರ್ತ್ ಸೀ). ಷೆಟ್ಲೆಂಡ್ ದ್ವೀಪಗಳ ಉತ್ತರ ಅಂಚಿನಿಂದ (ಉ.ಅ. 61º) ಡೋವರ್ ಜಲಸಂಧಿಯವರೆಗೆ (ಉ.ಅ. 51º) ವ್ಯಾಪಿಸಿರುವ ಸಮುದ್ರದ ನೀರು ನಾರ್ವೆ, ಡೆನ್ಮಾರ್ಕ್. ಜರ್ಮನಿ, ಬೆಲ್ಜಿಯಂ, ನೆದರ್ಲೆಂಡ್ಸ್ ಮತ್ತು ಉತ್ತರ ಫ್ರಾನ್ಸ್ ತೀರಗಳನ್ನು ತೊಳೆಯುತ್ತದೆ. ವಿಸ್ತೀರ್ಣ 2,20,000 ಚ.ಕಿಮೀ. ದಕ್ಷಿಣದಿಂದ ಉತ್ತರದೆಡೆಗೆ ಸ್ವಲ್ಪ ಬಾಗಿದೆ. ಸ್ವಲ್ಪ ತ್ರಿಕೋನಾಕಾರವಾಗಿದ್ದು, 960 ಕಿ.ಮೀ. ಉದ್ದ ಮತ್ತು 640 ಕಿಮೀ. ಅಗಲವಾಗಿದೆ. ದಕ್ಷಿಣದ ಭಾಗ ಬಲು ಅಗಾಧ. ಸಮುದ್ರದ ಇಳಿತದ ಸಮಯದಲ್ಲಿ ಕೆಳಗಣ ಮರಳನ್ನು ನೀರು ಮುಚ್ಚಿಯೂ ಮುಚ್ಚದಂತಿರುತ್ತದೆ. ಈ ಸಮುದ್ರದ ದಕ್ಷಿಣಾರ್ಧದ ಆಳ 40 ಮೀಟರುಗಳಿಗಿಂತ ಕಡಿಮೆ. ಈ ಕಡಲ ನಡುವೆ ಇರುವ ತಿಟ್ಟುತಳದ ಹೆಸರು ಡಾಗರ್ ಬ್ಯಾಂಕ್. ತಿಟ್ಟುತಳದ ಉತ್ತರ ಅಂಚು ಕಡಿದು. ಈಶಾನ್ಯದಲ್ಲಿ ನಾರ್ವೇಬಳಿ ಕಡಲ ಆಳ ಹೆಚ್ಚು. ಇಲ್ಲಿನ ನೀರು ಕಿರಿದಾದ ಕಂದಕದಂತೆ ನಾರ್ವೇತೀರದ ಗುಂಟ ಆಗ್ನೇಯಾಭಿಮುಖವಾಗಿ ಸಾಗುತ್ತದೆ.
ತಳದ ಭೂರಚನೆಯ ಇತಿಹಾಸ
[ಬದಲಾಯಿಸಿ]
ಮೂರನೆಯ ಭೂಯುಗದಲ್ಲಿ ಯುರೋಪ್ ಖಂಡಭಾಗ ಕುಸಿದದ್ದರಿಂದ ಈ ಸಮುದ್ರ ರೂಪುಗೊಂಡಿತು. ತೃತೀಯ ಕಲ್ಪದ (ಪ್ಲಿಯೋಸೀನ್) ಅಂತ್ಯದಲ್ಲಿ ದಕ್ಷಿಣ ಇಂಗ್ಲೆಂಡು ಹಾಲೆಂಡ್ ಜರ್ಮನಿಗಳೊಂದಿಗೆ ಕೂಡಿಕೊಂಡಿತ್ತು. ದಟ್ಟ ಕಾಡಿದ್ದ ಈ ಜವುಗು ಮೈದಾನದಲ್ಲಿ ಥೇಮ್ಸ್-ರೈನ್ ನದೀ ವ್ಯವಸ್ಥೆಗಳ ಮುಖಜಭೂಮಿಗಳಿದ್ದುವು. ಬರಬರುತ್ತ ಶೈತ್ಯ ಹೆಚ್ಚಿ, ಚತುರ್ಥ (ಪ್ಲಿಸ್ಟೊಸೀನ್) ಯುಗದಲ್ಲಿ ಇದನ್ನು ಹಿಮಗಡ್ಡೆಯ ಪದರಗಳು ಮುಚ್ಚಿಕೊಂಡಿದ್ದುವು. ಹಾಲೆಂಡ್ ಮತ್ತು ಪೂರ್ವ ಆಂಗ್ಲಿಯವೂ ಹಿಮಾವೃತವಾಗಿ ದ್ದುವು. ಆಗ ಥೇಮ್ಸ್-ರೈನ್ ನದಿಗಳ ವ್ಯವಸ್ಥೆಗಳಿಗೆ ಉತ್ತರದ ಹಾದಿ ಮುಚ್ಚಿಹೋಗಿದ್ದಿರಬೇಕು. ಇವು ಈ ಹಿಮರಾಶಿಯ ದಕ್ಷಿಣಕ್ಕೆ (ಈಗಿನ ಉತ್ತರ ಸಮುದ್ರದ ದಕ್ಷಿಣದಲ್ಲಿ ಇದ್ದ ಹಿಮಾನಿ (ಗ್ಲೇಷಿಯಲ್) ಸರೋವರದಲ್ಲಿ ಐಕ್ಯವಾಗಲಾಗಿ ಈ ಸರೋವರದ ನೀರಿನ ಮಟ್ಟ ಹೆಚ್ಚಿ ಇದು ಚತುರ್ಥ ಯುಗದ ನದೀಕಣಿವೆಯೊಂದರ ಮೂಲಕ ಹರಿದು ಹೋಗಿರಬೇಕು. ಇದೇ ಮುಂದೆ ಅಗಲವಾಗಿ ಆಳವಾಗಿ ಡೋವರ್ ಜಲಸಂಧಿಯಾಯಿತು. ಹಿಮಯುಗದ ಅಂತ್ಯದಲ್ಲಿ ಡಾಗರ್ ತಿಟ್ಟುತಳದ ದಕ್ಷಿಣಭಾಗದಲ್ಲಿ ತಗ್ಗು ಮೈದಾನವಿತ್ತು. ಪ್ರ.ಶ.ಪು. 6000ದ ವೇಳೆಗೆ ಸಮುದ್ರದ ಮಟ್ಟ ಏರಿತು. ಉತ್ತರ ಸಮುದ್ರ ಸ್ಥೂಲವಾಗಿ ಈಗಿನ ಆಕಾರ ತಳೆದದ್ದು ಆಗ. ಉತ್ತರ ಸಮುದ್ರದ ಸುತ್ತಲೂ ಭೂಭಾಗ ಕುಸಿದು ಉಂಟಾದ ತೀರಭಾಗಗಳುಂಟು. ದಕ್ಷಿಣದ ತೀರಗಳು ಅತಿ ಕಿರಿದು. ಇಂಗ್ಲೆಂಡಿನ ತೀರದಲ್ಲಿ ಕಿರಿದಾದ ಕೋಡುಗಲ್ಲುಗಳೂ ಮರಳಿನಿಂದ ಕೂಡಿದ ದಂಡೆಗಳೂ ಕಂಡುಬರುತ್ತವೆ. ಯುರೋಪಿನ ತೀರದಲ್ಲಿ ಜೌಗು ಭಾಗಗಳೂ ಮರಳಿನ ದಿಣ್ಣೆಗಳೂ ಉಪ್ಪು ನೀರಿನ ಹರವು ಸುತ್ತು ಒಡ್ಡು ಗಳೂ (ಲಗೂನ್) ಉಂಟು. ಉತ್ತರದ ತೀರಗಳಲ್ಲಿ ಕಡಿದಾದ ಕೋಡುಗಲ್ಲುಗಳೂ ಕಿರಿ ಅಳಿವೆಯಂಥ ಕೊಲ್ಲಿಗಳೂ ಸ್ಕ್ಯಾಗರ್ಯಾಕ್ ಕೊಲ್ಲಿಯ ದಕ್ಷಿಣದಲ್ಲಿ ಮತ್ತು ಇಂಗ್ಲೆಂಡಿನ ವಾಯವ್ಯ ಭಾಗದಲ್ಲಿ ಮೃದುಶಿಲೆಗಳ ಕಿರಿದಾದ ಕೋಡುಗಲ್ಲುಗಳೂ ಕಂಡುಬರುತ್ತವೆ. ಅಟ್ಲಾಂಟಿಕ್ ಸಾಗರದಿಂದ 35% ಕ್ಕಿಂತ ಹೆಚ್ಚಿನ ಲವಣಯುಕ್ತ ನೀರು ಡೋವರ್ ಜಲಸಂಧಿಯ ಮೂಲಕವೂ ಷೆಟ್ಲೆಂಡ್ ನಾರ್ವೆಗಳ ಮೂಲಕವೂ ಇಲ್ಲಿಗೆ ಹರಿದು ಬರುತ್ತದೆ. ಈ ಎರಡು ಕವಲುಗಳೂ ವಾಷ್-ಸ್ಕ್ಯಾಗರ್ಯಾಕ್ಗಳ ನೆರೆಯಲ್ಲಿ ಸಂಧಿಸುವುದೇ ಇಲ್ಲಿ ತೊಡಕಿನ ಸುಳಿಗಳ ಉದ್ಭವಕ್ಕೆ ಕಾರಣ. ಡೋವರಿನ ಮೂಲಕ ಬರುವ ಪ್ರವಾಹದೊಂದಿಗೆ ಥೇಮ್ಸ್, ರೈನ್ ಮತ್ತು ಎಲ್ಬ್ ನದಿಯ ನೀರೂ ಸೇರುತ್ತದೆ. ಸ್ಕ್ಯಾಗರ್ಯಾಕ್ನಿಂದ ಉತ್ತರಾಭಿಮುಖ ವಾಗಿ ನಾರ್ವೇ ತೀರಗುಂಟ ಹರಿಯುವ ನೀರು 30% ರಷ್ಟು ಲವಣಯುಕ್ತವಾದದ್ದು. ಬಾಲ್ಟಿಕ್ನಿಂದ ಹರಿದು ಬರುವ ನೀರು ಇದರಲ್ಲಿ ಸೇರುವುದರಿಂದ ಇದರ ಲವಣಾಂಶ ಕಡಿಮೆ. ಸಮಕಾಲೀನ ಉಬ್ಬರ ರೇಖೆಗಳು ಈ ಸಮುದ್ರದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿವೆಯೆನ್ನಬಹುದು. ಆದ್ದರಿಂದ ಸ್ಕಾಟ್ಲೆಂಡ್ ಮತ್ತು ಥೇಮ್ಸ್ ಅಳಿವೆಯಲ್ಲಿ ಉಬ್ಬರಗಳು ಸಂಭವಿಸುವ ಕಾಲ ಒಂದೇ. ಉಬ್ಬರಗಳಿಂದ ಸ್ಕಾಟ್ಲೆಂಡಿನಲ್ಲಿ 4 ಮೀಟರುಗಳಷ್ಟೂ ಡಚ್ ಮತ್ತು ಜರ್ಮನ್ ತೀರಗಳಲ್ಲಿ 2 ರಿಂದ 3 ಮೀಟರುಗಳಷ್ಟೂ ನಾರ್ವೆ ತೀರದಲ್ಲಿ ಒಂದು ಮೀಟರಿನಷ್ಟೂ ಸಮುದ್ರಮಟ್ಟ ವ್ಯತ್ಯಾಸವಾಗುತ್ತದೆ. ಪೂರ್ವತೀರದಲ್ಲಿ ಉಬ್ಬರವಿಳಿತಗಳ ವ್ಯತ್ಯಾಸ ಹೆಚ್ಚು. ಬ್ರಿಟನ್, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ದೇಶಗಳ ತೀರ ಭಾಗಗಳಿಗೆ ಇಲ್ಲಿನ ವಿಷಮ ಉಬ್ಬರವಿಳಿತಗಳ ಸಂಭವಿಸುವ ಹಾನಿ ಅಧಿಕ. ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ಗಳ ತೀರಗಳಲ್ಲಿ ಕೃತಕ ದಿಣ್ಣೆಗಳನ್ನು ನಿರ್ಮಿಸಿ ಆಗುವ ಅನಾಹುತವನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಲಾಗಿದೆ. ಈ ಸಮುದ್ರದಲ್ಲಿ ಅನೇಕ ಪ್ರವಾಹಗಳೂ ಉಬ್ಬರವಿಳಿತಗಳೂ ಸುಳಿಗಳೂ ಕಂಡುಬರುವುದರಿಂದಲೂ ಅಟ್ಲಾಂಟಿಕ್ ಸಾಗರದ ಬೆಚ್ಚನೆಯ ನೀರಿಗೆ ಭೂಭಾಗದಿಂದ ಹರಿಯುವ ತಂಪಾದ ನೀರು ಸೇರುವುದರಿಂದಲೂ ವಿಪುಲವಾಗಿ ಪ್ಲಾಂಕ್ಟನ್ ಎಂಬ ಜೈವಿಕ ವಸ್ತು ಶೇಖರವಾಗಿರುತ್ತದೆ. ಅಲ್ಲದೆ ನೀರಿನ ಅಂಥ ಚಲನೆಗಳಿಂದ ಸಾಕಷ್ಟು ವಾಯುವಿನ ಅಂಶ ನೀರಿನಲ್ಲಿ ಸೇರಲೂ ಅವಕಾಶವಿದೆ. ಸಮುದ್ರ ಹೆಚ್ಚು ಆಳವಿಲ್ಲದಿರುವುದ ರಿಂದ ಬೆಳಕು ಸಾಕಷ್ಟು ಉಂಟು. ಇಂಥ ಆವರಣ ಮೀನುಗಳಿಗೆ ಆವಶ್ಯಕ. ಆದ್ದರಿಂದ ಉತ್ತರ ಸಮುದ್ರಕ್ಕೆ ಪ್ರಪಂಚದ ಮೀನುಗಾರಿಕೆ ಪ್ರದೇಶಗಳಲ್ಲಿ ಉನ್ನತ ಸ್ಥಾನ ಲಭ್ಯವಾಗಿದೆ. ಚಳಿಗಾಲದಲ್ಲಿ ಮೀನು ಹಿಡಿಯುವ ಚಟುವಟಿಕೆ ಹೆಚ್ಚು. ಜರಡಿ ಬಲೆಗಳಿಂದ ಈ ಭಾಗದಲ್ಲಿ ಹೇರಳವಾಗಿ ಮೀನು ಹಿಡಿಯುತ್ತಾರೆ. ಬೇಸಿಗೆಯಲ್ಲಿ ಪೂರ್ವಭಾಗದಲ್ಲಿ ಮೀನು ಹಿಡಿಯುವುದು ಹೆಚ್ಚು. ಆಳವಿಲ್ಲದ ಭಾಗಗಳಲ್ಲಿ ಚಪ್ಪಟೆ ಮೀನು ಉತ್ತರದ ಆಳವಾದ ಪ್ರದೇಶದಲ್ಲಿ ಕಾಡ್ ಮತ್ತು ಹ್ಯಾಡಕ್ ಮೀನೂ ಹೇರಳ. ಪಶ್ಚಿಮಭಾಗದಲ್ಲಿ ಜೂನ್ನಿಂದ ನವೆಂಬರ್ವರೆಗೆ ಹೆರಿಂಗ್ ಮೀನುಗಳೂ ಉಳಿದ ತಿಂಗಳುಗಳಲ್ಲಿ ಮೆಕರೆಲ್ ಮೀನುಗಳೂ ಸಿಗುತ್ತವೆ. ಡಾಗರ್ ಬ್ಯಾಂಕಿನ ಭಾಗದಲ್ಲಿ ಕಾಡ್ ಮೀನುಗಳು ಸಿಕ್ಕುತ್ತವೆ. ಡಚ್ ಭಾಷೆಯಲ್ಲಿ ಡಾಗರ್ ಎಂದರೆ ಕಾಡ್ ಮೀನು ಎಂದು ಅರ್ಥ. ಉತ್ತರದ ತಂಪು ನೀರಿನಲ್ಲೂ ಇವು ಸಿಕ್ಕುವುದುಂಟು. ಮಧ್ಯಭಾಗದಲ್ಲಿ ಮೀನುಗಳನ್ನು ಗಾಳಗಳಿಂದಲೇ ಹಿಡಿಯುತ್ತಾರೆ. 1899ಮತ್ತು 1927ರಲ್ಲಿ ಆದ ಅಂತಾರಾಷ್ಟ್ರೀಯ ಮೀನುಗಾರಿಕೆ ಒಪ್ಪಂದಗಳಿಂದ ಈ ಸಮುದ್ರದ ಮೀನುಗಾರಿಕೆಯಲ್ಲಿ ನಿರತವಾದ ವಿವಿಧ ರಾಷ್ಟ್ರಗಳು ನಿಯಂತ್ರಣಕ್ಕೊಳಪಟ್ಟಿವೆ. ಉತ್ತರ ಸಮುದ್ರವನ್ನು ಹಿಂದೆ ಜರ್ಮನ್ ಸಾಗರವೆಂದೂ ಕರೆಯಲಾಗುತ್ತಿತ್ತು. ಈ ಸಮುದ್ರದ ಮೂಲಕ ಸಾಗುವ ಸಾರಿಗೆ ಮಾರ್ಗಗಳು ಅನೇಕ. ಹಲ್, ಬರ್ಗೆನ್, ಸ್ಟಾಕ್ಹೋಂ ಮಾರ್ಗಗಳು ಮುಖ್ಯ. ಉತ್ತರ ಸಮುದ್ರವನ್ನು ಸೇರುವ ನದಿಗಳು ಈ ಮಾರ್ಗಗಳ ವಿಸ್ತರಣೆ ಗಳಂತಿರುವುದರಿಂದ ಉತ್ತರ ಸಮುದ್ರದ ಪ್ರಾಮುಖ್ಯ ಇನ್ನೂ ಅಧಿಕವಾಗಿದೆಯೆನ್ನಬಹುದು.
ಭೌಗೋಳಿಕ ಸ್ಥಾನ ಮತ್ತು ವಿಸ್ತೀರ್ಣ
[ಬದಲಾಯಿಸಿ]ನಾರ್ತ್ ಸಮುದ್ರವು ಯುರೋಪ್ ಖಂಡದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಇದರ ಪೂರ್ವದಲ್ಲಿ ಸ್ಕ್ಯಾಂಡಿನೇವಿಯನ್ ದೇಶಗಳಾದ ನಾರ್ವೆ ಮತ್ತು ಡೆನ್ಮಾರ್ಕ್, ಪಶ್ಚಿಮದಲ್ಲಿ ಯುನೈಟೆಡ್ ಕಿಂಗ್ಡಮ್, ದಕ್ಷಿಣದಲ್ಲಿ ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ ಮತ್ತು ಫ್ರಾನ್ಸ್ ದೇಶಗಳಿವೆ. ಇದರ ಉತ್ತರ ಭಾಗದಲ್ಲಿ ನಾರ್ವೇಜಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಮಹಾಸಾಗರವಿದೆ.
ನಾರ್ತ್ ಸಮುದ್ರದ ವಿಸ್ತೀರ್ಣ ಸುಮಾರು ೫,೭೫,೦೦೦ ಚದರ ಕಿಲೋಮೀಟರ್ ಆಗಿದೆ. ಇದರ ಸರಾಸರಿ ಆಳ ೯೫ ಮೀಟರ್ ಆಗಿದ್ದು, ಅತ್ಯಂತ ಆಳವಾದ ಭಾಗವಾದ ನಾರ್ವೇಜಿಯನ್ ತೊಟ್ಟಿಲು (Norwegian Trench) ೭೦೦ ಮೀಟರ್ ಆಳವನ್ನು ಹೊಂದಿದೆ.
ಪ್ರಮುಖ ನದಿಗಳು ಮತ್ತು ಜಲಸಂಧಿಗಳು
[ಬದಲಾಯಿಸಿ]ನಾರ್ತ್ ಸಮುದ್ರಕ್ಕೆ ಹಲವಾರು ಪ್ರಮುಖ ನದಿಗಳು ಹರಿದು ಬರುತ್ತವೆ. ಇವುಗಳಲ್ಲಿ:
- ರೈನ್ ನದಿ (ಜರ್ಮನಿ, ನೆದರ್ಲ್ಯಾಂಡ್ಸ್)
- ಎಲ್ಬ್ ನದಿ (ಜರ್ಮನಿ)
- ವೆಸರ್ ನದಿ (ಜರ್ಮನಿ)
- ಥೇಮ್ಸ್ ನದಿ (ಯುನೈಟೆಡ್ ಕಿಂಗ್ಡಮ್)
- ಸ್ಕೀಲ್ಡ್ ನದಿ (ಬೆಲ್ಜಿಯಂ, ನೆದರ್ಲ್ಯಾಂಡ್ಸ್)
ನಾರ್ತ್ ಸಮುದ್ರವು ಹಲವಾರು ಜಲಸಂಧಿಗಳ ಮೂಲಕ ಇತರ ಸಮುದ್ರಗಳೊಂದಿಗೆ ಸಂಪರ್ಕ ಹೊಂದಿದೆ:
- ಡೋವರ್ ಜಲಸಂಧಿ (ಇಂಗ್ಲಿಷ್ ಚಾನೆಲ್ ಮೂಲಕ ಅಟ್ಲಾಂಟಿಕ್ ಸಾಗರಕ್ಕೆ ಸಂಪರ್ಕ)
- ಸ್ಕಾಗರ್ರಕ್ ಜಲಸಂಧಿ (ಬಾಲ್ಟಿಕ್ ಸಮುದ್ರಕ್ಕೆ ಸಂಪರ್ಕ)
- ಕ್ಯಾಟೆಗಟ್ ಜಲಸಂಧಿ (ಡೆನ್ಮಾರ್ಕ್ ಮತ್ತು ಸ್ವೀಡನ್ ನಡುವೆ)
ಹವಾಮಾನ ಮತ್ತು ಸಾಗರಿಕ ಪರಿಸರ
[ಬದಲಾಯಿಸಿ]ನಾರ್ತ್ ಸಮುದ್ರದ ಹವಾಮಾನವು ಸಾಮಾನ್ಯವಾಗಿ ಸಮಶೀತೋಷ್ಣ ಸಾಗರಿಕ ಹವಾಮಾನವನ್ನು ಹೊಂದಿದೆ. ಇಲ್ಲಿ ಚಳಿಗಾಲದಲ್ಲಿ ತೀವ್ರ ಶೀತಲ ಹವೆ ಮತ್ತು ಬೇಸಿಗೆಯಲ್ಲಿ ಸೌಮ್ಯ ಉಷ್ಣಾಂಶ ಕಂಡುಬರುತ್ತದೆ. ಸಮುದ್ರದ ಮೇಲೆ ಬಿರುಸಿನ ಗಾಳಿಗಳು ಮತ್ತು ಚಂಡಮಾರುತಗಳು ಸಾಮಾನ್ಯ.
ಸಾಗರಿಕ ಜೀವವೈವಿಧ್ಯ
[ಬದಲಾಯಿಸಿ]ನಾರ್ತ್ ಸಮುದ್ರವು ಸಮೃದ್ಧ ಸಾಗರಿಕ ಜೀವವೈವಿಧ್ಯವನ್ನು ಹೊಂದಿದೆ. ಇಲ್ಲಿ ಅನೇಕ ಮೀನುಗಳು, ಸಾಗರಿಕ ಸಸ್ತನಿಗಳು ಮತ್ತು ಪಕ್ಷಿಗಳು ಕಂಡುಬರುತ್ತವೆ. ಕೆಲವು ಪ್ರಮುಖ ಜಾತಿಗಳು:
- ಮೀನುಗಳು: ಕಾಡ್ (Cod), ಹೆರಿಂಗ್ (Herring), ಹ್ಯಾಡ್ಕಾಕ್ (Haddock), ಪ್ಲೈಸ್ (Plaice)
- ಸಾಗರಿಕ ಸಸ್ತನಿಗಳು: ಗ್ರೇ ಸೀಲ್, ಹಾರ್ಬರ್ ಸೀಲ್, ವೇಲ್ಸ್ (ತಿಮಿಂಗಿಲಗಳು)
- ಪಕ್ಷಿಗಳು: ಗಲ್ಸ್ (ಕಡಲುಕಾಗೆಗಳು), ಪफಿನ್ಸ್, ಟರ್ನ್ಸ್
ಆರ್ಥಿಕ ಮಹತ್ವ
[ಬದಲಾಯಿಸಿ]ನಾರ್ತ್ ಸಮುದ್ರವು ಯುರೋಪಿನ ಆರ್ಥಿಕತೆಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ. ಇದು ವ್ಯಾಪಾರ, ಮೀನುಗಾರಿಕೆ, ತೈಲ ಮತ್ತು ಅನಿಲ ಉತ್ಪಾದನೆ, ಹಾಗೂ ನೌಕಾಯಾನಕ್ಕೆ ಪ್ರಮುಖ ಕೇಂದ್ರವಾಗಿದೆ.
ತೈಲ ಮತ್ತು ಅನಿಲ ಉತ್ಪಾದನೆ
[ಬದಲಾಯಿಸಿ]ನಾರ್ತ್ ಸಮುದ್ರವು ಪ್ರಪಂಚದ ಅತ್ಯಂತ ದೊಡ್ಡ ತೈಲ ಮತ್ತು ಪ್ರಾಕೃತಿಕ ಅನಿಲ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ೧೯೬೦ ಮತ್ತು ೧೯೭೦ರ ದಶಕಗಳಲ್ಲಿ ಇಲ್ಲಿ ದೊಡ್ಡ ಪ್ರಮಾಣದ ತೈಲ ಕ್ಷೇತ್ರಗಳು ಕಂಡುಬಂದವು. ಪ್ರಮುಖ ತೈಲ ಕ್ಷೇತ್ರಗಳು:
- ಎಕೊಫಿಸ್ಕ್ ತೈಲ ಕ್ಷೇತ್ರ (ಡೆನ್ಮಾರ್ಕ್)
- ಬ್ರೆಂಟ್ ತೈಲ ಕ್ಷೇತ್ರ (ಯುಕೆ)
- ಸ್ಟಾಟ್ಫಜಾರ್ಡ್ ತೈಲ ಕ್ಷೇತ್ರ (ನಾರ್ವೆ)
ಮೀನುಗಾರಿಕೆ
[ಬದಲಾಯಿಸಿ]ನಾರ್ತ್ ಸಮುದ್ರವು ಸಾಂಪ್ರದಾಯಿಕವಾಗಿ ಮೀನುಗಾರಿಕೆಗೆ ಪ್ರಸಿದ್ಧ. ಇಲ್ಲಿ ಹೆರಿಂಗ್, ಕಾಡ್, ಹ್ಯಾಡ್ಕಾಕ್ ಮುಂತಾದ ಮೀನುಗಳನ್ನು ಹೆಚ್ಚಾಗಿ ಹಿಡಿಯಲಾಗುತ್ತದೆ. ಆದರೆ, ಅತಿಯಾದ ಮೀನುಗಾರಿಕೆಯಿಂದಾಗಿ ಕೆಲವು ಮೀನು ಜಾತಿಗಳ ಸಂಖ್ಯೆ ಕಡಿಮೆಯಾಗಿದೆ.
ವ್ಯಾಪಾರ ಮತ್ತು ನೌಕಾಯಾನ
[ಬದಲಾಯಿಸಿ]ನಾರ್ತ್ ಸಮುದ್ರದ ತೀರದಲ್ಲಿ ಅನೇಕ ಪ್ರಮುಖ ಬಂದರುಗಳು ಇವೆ. ಇವುಗಳಲ್ಲಿ ಕೆಲವು:
- ರಾಟರ್ಡ್ಯಾಮ್ ಬಂದರು (ನೆದರ್ಲ್ಯಾಂಡ್ಸ್ - ಪ್ರಪಂಚದ ಅತಿದೊಡ್ಡ ಬಂದರು)
- ಹ್ಯಾಂಬರ್ಗ್ ಬಂದರು (ಜರ್ಮನಿ)
- ಆಂಟ್ವರ್ಪ್ ಬಂದರು (ಬೆಲ್ಜಿಯಂ)
- ಫೆಲ್ಕ್ಸ್ಟೋ ಬಂದರು (ಯುಕೆ)
ಈ ಬಂದರುಗಳ ಮೂಲಕ ಯುರೋಪ್ ಮತ್ತು ಇತರ ಖಂಡಗಳ ನಡುವೆ ವ್ಯಾಪಾರ ಸಾಗಣೆ ನಡೆಯುತ್ತದೆ.
ಇತಿಹಾಸ ಮತ್ತು ಸಾಂಸ್ಕೃತಿಕ ಪ್ರಾಮುಖ್ಯ
[ಬದಲಾಯಿಸಿ]ನಾರ್ತ್ ಸಮುದ್ರವು ಪ್ರಾಚೀನ ಕಾಲದಿಂದಲೂ ಮಾನವ ನಾಗರಿಕತೆಗೆ ಸಂಬಂಧಿಸಿದೆ. ವೈಕಿಂಗ್ ಯುಗದಲ್ಲಿ (೮೦೦-೧೦೫೦ CE) ಇದು ವ್ಯಾಪಾರ ಮತ್ತು ದಾಳಿಗಳಿಗೆ ಪ್ರಮುಖ ಮಾರ್ಗವಾಗಿತ್ತು.
ವೈಕಿಂಗ್ ಯುಗ
[ಬದಲಾಯಿಸಿ]ವೈಕಿಂಗ್ಗಳು ನಾರ್ತ್ ಸಮುದ್ರದ ಮೂಲಕ ಯುರೋಪ್ ಖಂಡದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಿದ್ದರು. ಅವರು ತಮ್ಮ ದಾಳಿಗಳು ಮತ್ತು ವ್ಯಾಪಾರದಿಂದ ಯುರೋಪಿಯನ್ ಇತಿಹಾಸದ ಮೇಲೆ ಗಮನಾರ್ಹ ಪ್ರಭಾವ ಬೀರಿದ್ದಾರೆ.
ಮಧ್ಯಯುಗ ಮತ್ತು ಹ್ಯಾನ್ಸಿಯಾಟಿಕ್ ಲೀಗ್
[ಬದಲಾಯಿಸಿ]ಮಧ್ಯಯುಗದಲ್ಲಿ, ಹ್ಯಾನ್ಸಿಯಾಟಿಕ್ ಲೀಗ್ (Hanseatic League) ಎಂಬ ವ್ಯಾಪಾರ ಸಂಘವು ನಾರ್ತ್ ಸಮುದ್ರದ ಸುತ್ತಲಿನ ನಗರಗಳ ನಡುವೆ ವ್ಯಾಪಾರವನ್ನು ಬೆಳೆಸಿತು.
- ಯುದ್ಧಗಳಲ್ಲಿ ನಾರ್ತ್ ಸಮುದ್ರದ ಪಾತ್ರ
- ಪ್ರಥಮ ವಿಶ್ವಯುದ್ಧ ಮತ್ತು ದ್ವಿತೀಯ ವಿಶ್ವಯುದ್ಧದಲ್ಲಿ ನಾರ್ತ್ ಸಮುದ್ರವು ನೌಕಾಪಡೆಗಳಿಗೆ ಪ್ರಮುಖ ಕಾಳಗದ ಸ್ಥಳವಾಗಿತ್ತು.
- ಕೋಲ್ಡ್ ವಾರ್ ಸಮಯದಲ್ಲಿ ಇದು ನಾಟೋ ಮತ್ತು ಸೋವಿಯತ್ ಒಕ್ಕೂಟದ ನಡುವೆ ತಂತ್ರಾತ್ಮಕ ಪ್ರಾಮುಖ್ಯತೆಯನ್ನು ಹೊಂದಿತ್ತು.
ಪರಿಸರ ಸವಾಲುಗಳು
[ಬದಲಾಯಿಸಿ]ನಾರ್ತ್ ಸಮುದ್ರವು ಹಲವಾರು ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳಲ್ಲಿ ಕೆಲವು:
- ಮಾಲಿನ್ಯ
- ತೈಲ ಹೊರಸೂಸುವಿಕೆ ಮತ್ತು ಕೈಗಾರಿಕಾ ತ್ಯಾಜ್ಯಗಳು ಸಮುದ್ರದ ನೀರನ್ನು ಮಾಲಿನ್ಯಗೊಳಿಸಿವೆ.
- -ಪ್ಲಾಸ್ಟಿಕ್ ಕಸವು ಸಾಗರಿಕ ಜೀವಿಗಳಿಗೆ ಹಾನಿಕಾರಕವಾಗಿದೆ.
- ಅತಿಯಾದ ಮೀನುಗಾರಿಕೆ
- ಅತಿಯಾದ ಮೀನುಗಾರಿಕೆಯಿಂದಾಗಿ ಕೆಲವು ಮೀನು ಜಾತಿಗಳು ಅಳಿವಿನಂಚಿನಲ್ಲಿವೆ.
ಹವಾಮಾನ ಬದಲಾವಣೆ
[ಬದಲಾಯಿಸಿ]ಸಾಗರದ ಮಟ್ಟ ಏರಿಕೆ ಮತ್ತು ತಾಪಮಾನದ ಬದಲಾವಣೆಯು ನಾರ್ತ್ ಸಮುದ್ರದ ಪರಿಸರ ವ್ಯವಸ್ಥೆಯನ್ನು ಬದಲಾಸ್ತಿದೆ. .
Gallery
[ಬದಲಾಯಿಸಿ]-
Satellite image of the North Sea
-
Map of the North Sea showing key features and surrounding regions
-
Ocean currents in the North Sea
-
Tidal patterns and coastal features of the North Sea
ಉಲ್ಲೇಖಗಳು
[ಬದಲಾಯಿಸಿ]