ವಿಷಯಕ್ಕೆ ಹೋಗು

ನಾ. ಡಿಸೋಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾ. ಡಿಸೋಜ
ಜನನಜೂನ್ ೬, ೧೯೩೭
ಸಾಗರ, ಶಿವಮೊಗ್ಗ ಜಿಲ್ಲೆ
ಮರಣ5 January 2025(2025-01-05) (aged 87)
ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ.
ವೃತ್ತಿಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಬಾಳ ಸಂಗಾತಿಫಿಲೋಮಿನ ಡಿಸೋಜ
ಮಕ್ಕಳು
  • ಶೋಭಾ
  • ನವೀನ
  • ಸಂತೋಷ
ತಂದೆಫಿಲಿಪ್ ಡಿಸೋಜ
ತಾಯಿರೂಪೀನಾ ಡಿಸೋಜ

ನಾ. ಡಿಸೋಜ (೬ನೇ ಜೂನ್ ೧೯೩೭ - ೫ನೇ ಜನವರಿ ೨೦೨೫) ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ, ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ.[][]

ನಾ. ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ರಂದು ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ಡಿಸೋಜ ಅವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೇಟ್ ಕಾಲೇಜು (ಈಗಿನ ಸಹ್ಯಾದ್ರಿ ಕಾಲೇಜು) ಸೇರಿದರಾದರೂ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು.ಡಿಸೋಜ ಅವರು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು ಅವರ ವೃತ್ತಿ ಬದುಕಿಗೊಂದು ಆಸರೆಯಾಯಿತು. ನಾ. ಡಿಸೋಜರವರು ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ ೧೯೯೫ರಲ್ಲಿ ನಿವೃತ್ತಿಹೊಂದಿದರು.[] []

ಕಥಾ ಲೋಕದಲ್ಲಿ

[ಬದಲಾಯಿಸಿ]

ನಾ. ಡಿಸೋಜ ಮೊದಲಿಗೆ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯತೊಡಗಿದರು. ನಂತರ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟವಾಗತೊಡಗಿದವು.ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು ೧೯೬೪ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು ೪೦. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ.ಇವರು ಪತ್ರಿಕೆಗಳಿಗೆ ಬರೆದ ಸಣ್ಣ ಕಥೆಗಳ ೯ ಸಂಕಲನಗಳಲ್ಲಿ ಸಂಕಲಿತಗೊಂಡಿದ್ದು, ಸಮಗ್ರ ಕಥೆಗಳು ೨ ಸಂಪುಟಗಳಲ್ಲಿ ಪ್ರಕಟವಾಗಿವೆ.[]

ಪ್ರಸಿದ್ಧ ಚಲನಚಿತ್ರಗಳಾದ ಕಥೆಗಳು

[ಬದಲಾಯಿಸಿ]

ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವನ್ನಾಗಿ ಉಳ್ಳ ‘ಮುಳುಗಡೆ’ ಕಾದಂಬರಿಯು ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ, ಸುರೇಶ್ ಹೆಬ್ಲೀಕರ್‌ರವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ (ಚಲನಚಿತ್ರ)’, ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮತ್ತು ಮನುರವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆಯನ್ನು ಪಡೆದಿವೆ. ಇವುಗಳಲ್ಲಿ 'ಕಾಡಿನ ಬೆಂಕಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ , 'ದ್ವೀಪ' ಚಿತ್ರ 'ಸ್ವರ್ಣ ಕಮಲ' ಪ್ರಶಸ್ತಿಯನ್ನೂ ಗಳಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ.ದೂರದರ್ಶನ ಮಾಧ್ಯಮದಲ್ಲಿ ಸಹ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ.

ಪಠ್ಯಪುಸ್ತಕಗಳಲ್ಲಿ

[ಬದಲಾಯಿಸಿ]

‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗದ ಬಿ.ಎಸ್ಸಿ., ಬಿ.ಕಾಂ., ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ತರಗತಿಗಳಿಗೆ, ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ತರಗತಿಗಳಿಗೆ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವೂ ಸೇರಿದಂತೆ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.

ಮಕ್ಕಳ ಸಾಹಿತ್ಯದಲ್ಲಿ

[ಬದಲಾಯಿಸಿ]

ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿರುವ ನಾ.ಡಿಸೋಜ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ ೧೨ ಕೃತಿಗಳನ್ನು ಪ್ರಕಟಿಸಿದ್ದಾರೆ. []

ಇತರ ಭಾಷೆಗಳಲ್ಲಿ

[ಬದಲಾಯಿಸಿ]

ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ತುಂಜಾಲು ಕಾದಂಬರಿಯು ತೆಲುಗು ಭಾಷೆಗೆ, ಪ್ರೀತಿಯೊಂದೇ ಸಾಲದೆ, ಜಲಪಾತದ ಸುತ್ತ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕಾಡಿನ ಬೆಂಕಿ, ತಿರುವು ಮುಂತಾದ ಕಾದಂಬರಿಗಳು ಕೊಂಕಣಿಗೆ, ಇಗರ್ಜಿ ಕಾದಂಬರಿ, ದ್ವೀಪ, ಬಾಲಗಂಧರ್ವ ಮತ್ತು ಏಸುಕ್ರಿಸ್ತ ಕೃತಿಗಳು ಇಂಗ್ಲಿಷ್‌ಗೂ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಕೃತಿಯು ಹಿಂದಿ ಭಾಷೆಗೂ ಅನುವಾದಗೊಂಡಿದೆ.

ಗೌರವಾನ್ವಿತ ಅಧ್ಯಯನಗಳು

[ಬದಲಾಯಿಸಿ]

ನಾ.ಡಿಸೋಜರವರ ಸಾಹಿತ್ಯ ಕುರಿತು ಮದರಾಸು ವಿಶ್ವವಿದ್ಯಾಲಯದ ಶ್ರೀ ಪ್ರಕಾಶ್ ಸೈಮನ್‌ರವರು ‘ನಾ. ಡಿಸೋಜರವರ ೨೫ ಕಥೆಗಳು ಒಂದು ಅಧ್ಯಯನ’ ಕುರಿತು ಎಂ.ಫಿಲ್. ಪದವಿ (೧೯೯೫), ಮಧುರೆ ಕಾಮರಾಜ ವಿಶ್ವವಿದ್ಯಾಲಯದ ಎಂ.ಎಂ. ಮಂಜುನಾಥರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮಸ್ಯೆ – ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಎಂ.ಫಿಲ್. ಪದವಿ (೧೯೯೮), ಕುವೆಂಪು ವಿಶ್ವವಿದ್ಯಾಯದ ಟಿ.ಎಸ್. ಶೈಲಾರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಸ್ಥಿತ್ಯಂತರಗಳು’ ಮಹಾ ಪ್ರಬಂಧಕ್ಕೆ ಎಂ.ಫಿಲ್ ಪದವಿ (೨೦೦೧) ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಂಗಾ ಮೂಲಿಮನಿಯವರು ‘ನಾ. ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ (೨೦೦೧) ಪಡೆದಿದ್ದಾರೆ.

ಕ್ರಿಯಾಶೀಲ ಕೊಡುಗೆಗಳು

[ಬದಲಾಯಿಸಿ]

ನಾ. ಡಿಸೋಜ ಅವರು ಕರ್ನಾಟಕ ಸಾಹಿತ್ಯ ಅಕಾಡಮಿ, ಕೊಂಕಣಿ ಸಾಹಿತ್ಯ ಅಕಾಡಮಿ, ಪುಸ್ತಕ ಪ್ರಾಧಿಕಾರ, ಕುವೆಂಪು ವಿಶ್ವವಿದ್ಯಾಲಯದ ಸೆನೆಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್, ಕುವೆಂಪು ರಂಗ ಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

ಪ್ರಶಸ್ತಿ ಹಾಗು ಪುರಸ್ಕಾರಗಳು:

[ಬದಲಾಯಿಸಿ]
ಪ್ರಶಸ್ತಿ ವರ್ಷ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೮, ೧೯೯೩
ಗುಲ್ವಾಡಿ ವೆಂಕಟರಾವ ಪ್ರಶಸ್ತಿ ೧೯೮೮
ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೯೭
ಸಂದೇಶ್ ಸಾಹಿತ್ಯ ಪ್ರಶಸ್ತಿ ೧೯೯೮
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೯೮
ಮಂಗಳೂರು ಸಂದೇಶ ಪ್ರಶಸ್ತಿ ೧೯೯೮
ನವದೆಹಲಿ ಕಳಾ ಪ್ರಶಸ್ತಿ ೧೯೯೮
ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ ೨೦೦೩
ಆಳ್ವಾಸ್ ನುಡಿಸಿರಿ ಪ್ರಶಸ್ತಿ ೨೦೦೬
ಭಟ್ಕಳ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ೨೦೦೬
ವರ್ಧಮಾನ ಪ್ರಶಸ್ತಿ ೨೦೦೬
ಮುಂಬಯಿಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ೨೦೦೬
ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ೨೦೦೭
ಚಿತ್ರದುರ್ಗದ ಬೃಹನ್ಮಠದ ಡಾ. ಶಿವಮೂರ್ತಿ ಮುರುಘ ಶರಣ ಪ್ರಶಸ್ತಿ ೨೦೧೧
ಮಾಸ್ತಿ ಪ್ರಶಸ್ತಿ ೨೦೧೨
ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ ೨೦೧೧
೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು-ಕೊಡಗು ೨೦೧೪
ಪಂಪ ಪ್ರಶಸ್ತಿ[] ೨೦೨೩-೨೪

ಸದಸ್ಯತ್ವಗಳು

[ಬದಲಾಯಿಸಿ]
  • ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಿನೇಟ ಸದಸ್ಯ (೧೯೯೩-೯೫ ; ೧೯೯೬-೯೮)
  • ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ (೧೯೯೫)
  • ಪುಸ್ತಕ ಪ್ರಾಧಿಕಾರ ಸದಸ್ಯ (೧೯೯೫)
  • ಕುವೆಂಪು ವಿಶ್ವವಿದ್ಯಾಲಯ ಸಿನೇಟ್ ಸದಸ್ಯ (೧೯೯೬-೯೮)
  • ಶಿವಮೊಗ್ಗಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್ ಸದಸ್ಯ (೧೯೯೬-೯೯)

ನಾ ಡಿಸೋಜ ರಚಿಸಿರುವ ಕೃತಿಗಳು

[ಬದಲಾಯಿಸಿ]
ಕೃತಿ ಪ್ರಕಾರ
ಅಜ್ಞಾತ ಕಾದಂಬರಿ
ಆಸರೆ ಕಾದಂಬರಿ
ಇಂಜಿನಿಯರ್ ಆತ್ಮಕಥೆಯ ಮೊದಲ ಪುಟಗಳು ಕಾದಂಬರಿ
ಇಗರ್ಜಿಯ ಸುತ್ತಲಿನ ಮನೆಗಳು ಕಾದಂಬರಿ
ಈ ನೆಲ ಈ ಜಲ ಕಾದಂಬರಿ
ಒಂದು ಜಲಪಾತದ ಸುತ್ತ ಕಾದಂಬರಿ
ಒಡ್ಡು ಕಾದಂಬರಿ
ಕಾಡಿನ ಬೆಂಕಿ ಕಾದಂಬರಿ
ಕುಂಜಾಲು ಕಣಿವೆಯ ಕೆಂಪು ಹೂವು ಕಾದಂಬರಿ
ಕೆಂಪು ತ್ರಿಕೋನ ಕಾದಂಬರಿ
ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ ಕಾದಂಬರಿ
ಕ್ರಯ ವಿಕ್ರಯ ಕಾದಂಬರಿ
ಗಾಂಧಿ ಬಂದರು ಕಾದಂಬರಿ
ಜೀವ ಕಳೆಯ ಮಹಾಸತಿ ಕಾದಂಬರಿ
ಜೀವಕಳೆ ಕಾದಂಬರಿ
ದುರ್ಗವೆಂಬ ವ್ಯೂಹ ಕಾದಂಬರಿ
ದ್ವೀಪ ಕಾದಂಬರಿ
ನಡುವೆ ನಿಂತ ಜನ ಕಾದಂಬರಿ
ನೀರಮ್ಮ ವ್ಯಾಧಿ ಪುರಾಣ ಕಾದಂಬರಿ
ನೆಲೆ ಕಾದಂಬರಿ
ಪ್ರಜ್ಞಾಬಲಿ ಕಾದಂಬರಿ
ಪ್ರೀತಿಯೆಂಬ ಚುಂಬಕ ಕಾದಂಬರಿ
ಪ್ರೀತಿಯೊಂದೇ ಸಾಲದೇ? ಕಾದಂಬರಿ
ಬಂಜೆ ಬೆಂಕಿ ಕಾದಂಬರಿ
ಮಂಜಿನ ಕಾನು ಕಾದಂಬರಿ
ಮಾನವ ಕಾದಂಬರಿ
ಮುಳುಗಡೆ ಕಾದಂಬರಿ
ವಿಷವರ್ತುಲ ಕಾದಂಬರಿ
ವಿಷಾನಿಲ ಕಾದಂಬರಿ
ವೀರಭದ್ರ ನಾಯಕ ಕಾದಂಬರಿ
ಶಿವನ ಡಂಗುರ ಕಾದಂಬರಿ
ಸುವಾಸಿನಿ ಕಾದಂಬರಿ
ಕೊಳಗ ಕಾದಂಬರಿ
ಇಕ್ಕೇರಿಯಲ್ಲಿ ಕ್ರಾಂತಿ ಐತಿಹಾಸಿಕ ಕಾದಂಬರಿ
ಚೆನ್ನಿ ಚೆನ್ನಮ್ಮ ಚೆನ್ನಮ್ಮಾಜಿ ಐತಿಹಾಸಿಕ ಕಾದಂಬರಿ
ರಾಗ ವಿರಾಗ ಐತಿಹಾಸಿಕ ಕಾದಂಬರಿ
ಶೃಂಗೇರಿಯಲ್ಲಿ ಶಾಂತಿ ಐತಿಹಾಸಿಕ ಕಾದಂಬರಿ
ಇಪ್ಪತ್ತೈದು ಕಥೆಗಳು ಕಥಾಸಂಕಲನ
ಗಿಳಿಯೇ ಓ ಗಿಳಿಯೇ ಕಥಾಸಂಕಲನ
ನಿನ್ನುದ್ಧಾರವೆಷ್ಟಾಯ್ತು ಕಥಾಸಂಕಲನ
ಪ್ರಜ್ಞಾ ಎಂಬ ನದಿ ಕಥಾಸಂಕಲನ
ಸಣ್ಣಕಥೆ ಕಥಾಸಂಕಲನ
ಸ್ವರ್ಗದ ಬಾಗಿಲಲ್ಲೂ ನರಕ ಕಥಾಸಂಕಲನ
ಚಿತ್ತಾರ ಜಾನಪದ
ಹೂವ ಚೆಲ್ಲುತ ಬಾ ಜಾನಪದ
ತಬ್ಬಲಿ ನಾಟಕ
ದೇವರಿಗೇ ದಿಕ್ಕು ನಾಟಕ
ದ್ವೀಪ ನಾಟಕ
ಬೆತ್ತಲೆ ಸೇವೆ ನಾಟಕ
ಭೂತದ ಎದುರು ಬೇತಾಳ ನಾಟಕ
ಭೂತ (ನಾಟಕ) ಮಕ್ಕಳ ಸಾಹಿತ್ಯ
ಮುಂದೇನು? (ನಾಟಕ) ಮಕ್ಕಳ ಸಾಹಿತ್ಯ
ಗೇರಸೊಪ್ಪೆ ಮಕ್ಕಳ ಸಾಹಿತ್ಯ
ಕದಂಬ ಮಯೂರಶರ್ಮ ಮಕ್ಕಳ ಸಾಹಿತ್ಯ
ಬಾಲಗಂಧರ್ವ ಮಕ್ಕಳ ಸಾಹಿತ್ಯ
ಪುಲಿನ ಬಿಹಾರಿದಾಸ್ ಮಕ್ಕಳ ಸಾಹಿತ್ಯ
ಸದಾಶಿವ ಬ್ರಹ್ಮೇಂದ್ರ ಮಕ್ಕಳ ಸಾಹಿತ್ಯ
ಶರಾವತಿ ಮಕ್ಕಳ ಸಾಹಿತ್ಯ
ಸಂಗೀತಪುರ ಮಕ್ಕಳ ಸಾಹಿತ್ಯ
ಸೊರಬ ಮಕ್ಕಳ ಸಾಹಿತ್ಯ
ಬೆಳಕಿನೊಡನೆ ಬಂತು ನೆನಪು ಮಕ್ಕಳ ಸಾಹಿತ್ಯ
ಹಕ್ಕಿಗಳಿಗೆ ಬಂತು ಬಣ್ಣ ಮಕ್ಕಳ ಸಾಹಿತ್ಯ
ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಮಕ್ಕಳ ಸಾಹಿತ್ಯ
ದಂತ ಮತ್ತು ಗಂಧ ಮಕ್ಕಳ ಸಾಹಿತ್ಯ
ಆನೆ ಬಂತೊಂದಾನೆ ಮಕ್ಕಳ ಸಾಹಿತ್ಯ
ಆನೆ ಹುಡುಗ ಅಬ್ದುಲ್ಲಾ ಮಕ್ಕಳ ಸಾಹಿತ್ಯ
ಗೋಡೆ ಬೇಡ ಮಕ್ಕಳ ಸಾಹಿತ್ಯ
ಕಾಡಾನೆಯ ಕೊಲೆ ಮಕ್ಕಳ ಸಾಹಿತ್ಯ
ಗೋಪಿಯ ಗೊಂಬೆ ಮಕ್ಕಳ ಸಾಹಿತ್ಯ
ಕೋಳಿ ಅನಂತ ಮಕ್ಕಳ ಸಾಹಿತ್ಯ
ಮಕ್ಕಳಿಗಾಗಿ ಮತ್ತೆ ಹೇಳಿದ ಅಜ್ಜಿ ಕಥೆಗಳು ಮಕ್ಕಳ ಸಾಹಿತ್ಯ
ಪುಟ್ಟಜ್ಜಿ ಪುಟ್ಟಜ್ಜಿ, ಕಥೆ ಹೇಳು ಮಕ್ಕಳ ಸಾಹಿತ್ಯ
ಹಾರುವ ಹಕ್ಕಿಗೆ ಚಿಗುರೆಲೆ ತೋರಣ ಮಕ್ಕಳ ಸಾಹಿತ್ಯ
ಮಕ್ಕಳಿಗಾಗಿ ಮತ್ತೆ ಹೇಳಿದ ಅಜ್ಜಿ ಕಥೆಗಳು ಮಕ್ಕಳ ಸಾಹಿತ್ಯ
ಮೀನುಗಾರ ದೊರೆ ಮಕ್ಕಳ ಸಾಹಿತ್ಯ
ಭುವಿಗೆ ಬಂದ ಬೆಳಕು ರೇಡಿಯೋ ನಾಟಕಗಳು
ರೂಪದರ್ಶಿ ರೇಡಿಯೋ ನಾಟಕಗಳು
ಹಿಪ್ಪಿ ಮತ್ತು ಅಜ್ಜಿ ರೇಡಿಯೋ ನಾಟಕಗಳು
ಮಲೆನಾಡಿನ ಮದಕರಿ ರೇಡಿಯೋ ನಾಟಕಗಳು
ಊರಾಳು ಅರಮನೆಗೆ ಜನ ಬಂದರು ರೇಡಿಯೋ ನಾಟಕಗಳು
ಬೆಳಗಾಗಿ ನಾನೆದ್ದು ರೇಡಿಯೋ ನಾಟಕಗಳು
ಹಳೆಯ ಬಳಗಕ್ಕೆ ಜೈ (ಮಕ್ಕಳ ನಾಟಕ) ರೇಡಿಯೋ ನಾಟಕಗಳು
ತಿರುಗೋಡಿನ ರೈತ ಮಕ್ಕಳು ಕಿರುಕಾದಂಬರಿ
ಗುಡಿಗಾರರು ಕಿರುಕಾದಂಬರಿ
ತಿರುವುಗಳು ಕಿರುಕಾದಂಬರಿ
ಹಕ್ಕಿ ಹಾರಿತು ಕಿರುಕಾದಂಬರಿ
ನಾಯಕ ಕಿರುಕಾದಂಬರಿ
ಜಾತ್ರೆಯಲ್ಲಿ ಕಂಡವಳು ಕಿರುಕಾದಂಬರಿ
ಸುರಂಗ ಕಿರುಕಾದಂಬರಿ
ಶರಾವತಿ ಎಂಬ ಮಾನಿನಿ ಕಿರುಕಾದಂಬರಿ
ಮಹಾಸತಿ ಕಿರುಕಾದಂಬರಿ
ಇತಿಹಾಸದ ಕಪ್ಪು ಚುಕ್ಕೆ ಕಿರುಕಾದಂಬರಿ
ಎರಡು ರಾತ್ರಿ ಒಂದು ಹಗಲು ಕಿರುಕಾದಂಬರಿ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Na D'Souza to chair Kannada literary fest".
  2. "Mr Na D'Souza Chosen as the President of the 80th Kannada Sahitya Sammelana". Archived from the original on 2017-06-24. Retrieved 2017-06-09.
  3. "Na. D'Souza to chair 80th Kannada literary meet".
  4. "Dweepa - Island". Oxford University Press.
  5. http://www.prajavani.net/news/article/2013/12/05/211205.html
  6. "ಹಿರಿಯ ಸಾಹಿತಿ ನಾ.ಡಿಸೋಜಾಗೆ ಪಂಪ ಪ್ರಶಸ್ತಿ". Archived from the original on 2024-01-25. Retrieved 2024-01-25.