ವಿಷಯಕ್ಕೆ ಹೋಗು

ನಿರುಪಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ನಿರುಪಮಾ
ಜನನಪದ್ಮ ಆರ್. ರಾವ್
ಸೆಪ್ಟೆಂಬರ್ ೩೦, ೧೯೩೧
ತುಮಕೂರು ಜಿಲ್ಲೆಯ ಕೊರಟಗೆರೆ
ಮರಣಜುಲೈ ೧೧, ೨೦೧೩
ವೃತ್ತಿಕಾದಂಬರಿಗಾರ್ತಿ, ಕಥೆಗಾರ್ತಿ, ಬಹು ಭಾಷಾ ವಿದುಷಿ, ಸಂಶೋಧಕಿ, ಪ್ರಕಾಶಕಿ, ಹಲವಾರು ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ

ಡಾ. ನಿರುಪಮಾ (ಸೆಪ್ಟೆಂಬರ್ ೩೦, ೧೯೩೧ - ಜುಲೈ ೧೧, ೨೦೧೩) ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು.

ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಡಾ. ನಿರುಪಮಾ ಅವರು ಕನ್ನಡ ಭಾಷಿಕರಾಗಿದ್ದರೂ ತೆಲುಗು, ಬಂಗಾಳಿ, ಸಂಸ್ಕೃತ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ನಿಜ ನಾಮಧೇಯ ಪದ್ಮಾರಾವ್‌. ಅವರು ೧೯೩೧ರ ಸೆಪ್ಟೆಂಬರ್ ೩೦ರಂದು ಕೊರಟಗೆರೆಯಲ್ಲಿ ಜನಿಸಿದರು. ನಿರುಪಮಾ ಅವರ ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಆಂಧ್ರಪ್ರದೇಶದ ವಿವಿದೆಡೆಗಳಲ್ಲಿ ಶಾಲಾ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿರುಪಮಾ ಅವರ ತಾಯಿ ಸೀತಮ್ಮನವರು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು.

ತಂದೆ ತಾಯಿಯರ ಕುಟುಂಬದಲ್ಲೂ ವಿದ್ವತ್ಪೂರ್ಣ ವಾತಾವರಣ ನೆಲೆಗೊಂಡಿದ್ದು ನಿರಂತರವಾಗಿ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಾಗವತದಂತಹ ಪ್ರವಚನಗಳು ನಡೆಯುತ್ತಿದ್ದವು. ಹೀಗೆ ನಿರುಪಮಾ ಅವರು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದವರು.

ಇವರ ಮದುವೆ ೧೯೪೯ರಲ್ಲಿ ರಾಮಚಂದ್ರರಾವ್ ಇವರ ಜೊತೆಗೆ ನಡೆಯಿತು. ನಿರುಪಮಾ ಅವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು.

ಸಾಹಿತ್ಯ ಸೃಷ್ಟಿ

[ಬದಲಾಯಿಸಿ]

೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ.

ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ನಿರುಪಮಾ ಅವರು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ರಲ್ಲಿ ಪ್ರಕಟಗೊಂಡಿತು. ಮುಂದೆ ಬಂದ ಅವರ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದವು. ಇದಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳೂ ಪ್ರಕಟವಾದವು.

ನಿರುಪಮಾ ಅವರು ೧೯೭೨ರ ವರ್ಷದಲ್ಲಿ ಭಾರತದಾದ್ಯಂತ ಪ್ರವಾಸ ಕೈಗೊಂಡು ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ಅಂದಿನ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು.

೧೯೭೫ರಲ್ಲಿ ಅಖಿಲ ಭಾರತದ ಕನ್ನಡ ಲೇಖಕಿಯರು ಬರೆದ ಲೇಖನಗಳನ್ನು “ ಆರತಿ “ ಎನ್ನುವ ಗ್ರಂಥರೂಪದಲ್ಲಿ ಟಿ.ಸುನಂದಮ್ಮ, ಲೀಲಾದೇವಿ ಆರ್.ಪ್ರಸಾದ ಹಾಗು ಇತರರ ಜೊತೆಗೂಡಿ ಸಂಗ್ರಹಿಸಿದ್ದಾರೆ.

ಸಂಶೋಧನೆ

[ಬದಲಾಯಿಸಿ]

ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ತಳೆದ ನಿರುಪಮಾ ಅವರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’. ಅವರು ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಇದೂ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಮುಂದೆ ಅವರು ಇತಿಹಾಸ ಅಕಾಡೆಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ್ದನೆಂದು ಹೇಳಲಾದ ‘ಆಮುಕ್ತಮಾಲ್ಯದ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂಬ ಬೃಹದ್ಗಂಥವಾಗಿ ಕನ್ನಡಕ್ಕೆ ಅನುವಾದಿಸಿಕೊಟ್ಟರು. ಇವು ಇತಿಹಾಸಕ್ಕೆ ಸಂಬಂಧಿಸಿದಂತೆ ನಿರುಪಮಾ ಅವರ ಮೌಲಿಕ ಕೃತಿಗಳು.

ನಿರುಪಮಾ ಅವರು ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಅವರು ನೀಡಿರುವ ಬಹುದೊಡ್ಡ ಕೊಡುಗೆ ಎನಿಸಿದೆ

ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡ ನಿರುಪಮಾ ಅವರು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಗಳಿಸಿದರು.

ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ಅವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ ಮತ್ತು ವಿದ್ವಾಂಸರೊಡನೆ ನಡೆಸಿದ ಸಂವಾದಗಳ ಮೂಲಕ `Indian Women through the Ages’ ಎಂಬ ಮಹಾ ಪ್ರಬಂಧ ರಚಿಸಿದ್ದಾರೆ.

ಬಂಗಾಳಿ ಅನುವಾದಗಳು

[ಬದಲಾಯಿಸಿ]

ಡಾ. ನಿರುಪಮಾ ಅವರು ಬಂಗಾಲಿ ಕಲಿತದ್ದರ ಫಲವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಪುಷ್ಪ, ಶ್ರೀಶ್ರೀ ಗಣೇಶ ಮಹಿಮೆ, ಭುವನ್ ಶೋಮ್ - ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು

[ಬದಲಾಯಿಸಿ]

ಮಕ್ಕಳ ಸಾಹಿತ್ಯದ ಕುರಿತು ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂಬುದನ್ನು ಮನಗಂಡ ಡಾ. ನಿರುಪಮಾ ಅವರು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’ನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ೧೯೮೯ರ ವರ್ಷದಲ್ಲಿ ೫ ದಿವಸಗಳ ಕಾಲ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಿದರು. ಇದದಲ್ಲಿ ವಿವಿದ ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ ಪಡೆಯಿತು.

ಕರ್ನಾಟಕ ಲೇಖಕಿಯರ ಸಂಘ

[ಬದಲಾಯಿಸಿ]

ಡಾ. ನಿರುಪಮಾ ಅವರು ೧೯೭೯ರಲ್ಲಿ ಜಿ. ನಾರಾಯಣ ಅವರ ಬೆಂಬಲದೊಡನೆ ಚಿ.ನ.ಮಂಗಳಾ, ಎಚ್.ಎಸ್.ಪಾರ್ವತಿ, ನಾಗಮಣಿ, ಟಿ.ಸುನಂದಮ್ಮ ಹಾಗೂ ಇತರ ಕೆಲವು ಲೇಖಕಿಯರ ಜೊತೆಗೂಡಿ ಕರ್ನಾಟಕ ಲೇಖಕಿಯರ ಸಂಘವನ್ನು ಸ್ಥಾಪಿಸಿದರು.

ಹರಿದಾಸ ಪ್ರತಿಷ್ಠಾನ

[ಬದಲಾಯಿಸಿ]

ಮುಂದೆ ಡಾ. ನಿರುಪಮಾ ಅವರು ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಅವರು ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ನಾಲ್ಕು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ಐದು ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು.

ಪ್ರವಾಸ ಸಾಹಿತ್ಯ

[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ೧೯೮೨ರಲ್ಲಿ ಒರಿಸ್ಸಾರಾಜ್ಯ, ೧೯೮೭ರಲ್ಲಿ ಆಂಧ್ರ ಪ್ರದೇಶ, ೧೯೯೪ರಲ್ಲಿ ಮಧ್ಯಪ್ರದೇಶ, ೧೯೯೪ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದ ಡಾ.ನಿರುಪಮಾ ಅವರು ಹಲವಾರು ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದರು.

ಇತರ ಭಾಷೆಗಳಲ್ಲಿ

[ಬದಲಾಯಿಸಿ]

ಡಾ. ನಿರುಪಮಾ ಅವರು ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ಅವರು ಹಲವಾರು ತೆಲುಗು ಲೇಖಕಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು.

ಸಂಘ ಸಂಸ್ಥೆಗಳಲ್ಲಿ

[ಬದಲಾಯಿಸಿ]

ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ಗುರುತರ ಕಾರ್ಯಗಳನ್ನು ನಿರ್ವಹಿಸಿದ್ದ ನಿರುಪಮಾ ಅವರು ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ, ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಹಾ ಸೇವೆ ಸಲ್ಲಿಸಿದ್ದರು. ಅವರು ಭಾಷಾಂತರ ಅಧ್ಯಯನ ಸಂಸ್ಥೆಯ ಅಧ್ಯಕ್ಷಣಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವೈವಿಧ್ಯ ಪೂರ್ಣ ಬರಹಗಳು

[ಬದಲಾಯಿಸಿ]

ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣಿತರಾಗಿದ್ದ ಡಾ. ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ಅವರು ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು 32 ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಿಪ್ಪತ್ತಕ್ಕೂ ಹೆಚ್ಚು[]

ಪ್ರಕಾಶಕಿ

[ಬದಲಾಯಿಸಿ]

ಡಾ. ನಿರುಪಮಾ ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದವರು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ಅವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ, ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜಾದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ರ ವರ್ಷದಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’.

ವಿದಾಯ

[ಬದಲಾಯಿಸಿ]

ಈ ಮಹಾನ್ ಸಾಧಕಿ ಡಾ. ನಿರುಪಮಾ ಅವರು ಜುಲೈ ೧೧, ೨೦೧೩ರಂದು ಈ ಲೋಕವನ್ನಗಲಿದರು[].

ಮಾಹಿತಿ ಕೃಪೆ

[ಬದಲಾಯಿಸಿ]

ಕಣಜ ಮತ್ತು ವಿವಿಧ ಮಾಧ್ಯಮಗಳಲ್ಲಿ ಮೂಡಿಬಂದ ಅವರ ಕುರಿತಾದ ಲೇಖನಗಳು[]

ಉಲ್ಲೇಖಗಳು

[ಬದಲಾಯಿಸಿ]
  1. "ನಿರುಪಮಾ". sallapa.com. Retrieved 8-2-2014. {{cite web}}: Check date values in: |accessdate= (help)
  2. "ಹಿರಿಯ ಲೇಖಕಿ ಡಾ.ನಿರುಪಮಾ ನಿಧನ". vijaykarnataka.indiatimes.com. Retrieved 8-2-2014. {{cite web}}: Check date values in: |accessdate= (help)
  3. "ಡಾ. ನಿರುಪಮಾ. (ಪದ್ಮಾ ಆರ್. ರಾವ್)". kanaja.in/. Archived from the original on 2014-04-03. Retrieved 8-2-2014. {{cite web}}: Check date values in: |accessdate= (help)


"https://kn.wikipedia.org/w/index.php?title=ನಿರುಪಮಾ&oldid=1230273" ಇಂದ ಪಡೆಯಲ್ಪಟ್ಟಿದೆ