ನೂತನ್
ನೂತನ್ | |
---|---|
Born | ನೂತನ್ ಸಮರ್ಥ್ ಜೂನ್ ೪, ೧೯೩೬ ಮುಂಬಯಿ |
Died | ಫೆಬ್ರುವರಿ ೨೧, ೧೯೯೧ ಭಾರತ |
Years active | ೧೯೫೦–೧೯೯೧ |
Spouse | ರಜನೀಶ್ ಬೆಹ್ಲ್ |
Children | ಮೊಹನೀಶ್ ಬೆಹ್ಲ್ |
ನೂತನ್ (ಜೂನ್ ೪, ೧೯೩೬ - ಫೆಬ್ರುವರಿ ೨೧. ೧೯೯೧) ಹಿಂದಿ ಚಿತ್ರರಂಗ ಕಂಡ ಸುಂದರ ಮತ್ತು ಮಹಾನ್ ಪ್ರತಿಭಾವಂತ ಅಭಿನೇತ್ರಿಯರಲ್ಲಿ ಒಬ್ಬರು. ಅವರ ಹೆಸರು ನೂತನ್ ಬೆಹ್ಲ್ ಎಂದಾದರೂ ಅವರು ನೂತನ್ ಎಂದೇ ಪ್ರಖ್ಯಾತರು.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಜೀವನ
[ಬದಲಾಯಿಸಿ]ನೂತನ್ ಅವರು ಜನಿಸಿದ್ದು ಜೂನ್ ೪, ೧೯೩೬ರಲ್ಲಿ. ತಂದೆ ಕುಮಾರ್ ಸೇನ್ ಸಮರ್ಥರು ಕವಿ ಮತ್ತು ಚಲನಚಿತ್ರ ನಿರ್ದೇಶಕರು. ಅವರ ತಾಯಿ ಶೋಭನಾ ಸಮರ್ಥ್ ಪ್ರಖ್ಯಾತ ಅಭಿನೇತ್ರಿ.
ಚಿತ್ರ ಜೀವನ
[ಬದಲಾಯಿಸಿ]ತಮ್ಮ ತಾಯಿ ಶೋಭನ ಸಮರ್ಥ ಅವರು ೧೯೫೦ರ ವರ್ಷದಲ್ಲಿ ನಿರ್ದೇಶಿಸಿದ ‘ಹಮಾರಿ ಭೇಟಿ’ ನೂತನ್ ನಟಿಸಿದ ಮೊದಲ ಚಿತ್ರ. ಆಗ ಅವರ ವಯಸ್ಸು ಹದಿನಾಲ್ಕು.
೧೯೫೧ರ ವರ್ಷದಲ್ಲಿ ನೂತನ್ ಅವರು ನಗೀನಾ, ಹಮ್ ಲೋಗ್ ಚಿತ್ರಗಳಲ್ಲಿ ನಟಿಸಿದರು. ೧೯೫೨ರ ವರ್ಷದಲ್ಲಿ ಅವರು ‘ಭಾರತ ಸುಂದರಿ’ ಗೌರವ ಗಳಿಸಿದರು. ೧೯೫೫ರಲ್ಲಿ ತೆರೆಕಂಡ ‘ಸೀಮಾ’ ಚಿತ್ರ ಅವರಿಗೆ ಅತ್ಯುತ್ತಮ ಅಭಿನೇತ್ರಿ ಎಂಬ ಫಿಲಂ ಫೇರ್ ಪ್ರಶಸ್ತಿ ತಂದುಕೊಟ್ಟಿತು. ಮುಂದೆ ೧೯೬೦ ಮತ್ತು ೭೦ರ ದಶಕದವರೆಗೆ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ ಅವರು ೧೯೫೯ರ ‘ಸುಜಾತ’, ೧೯೬೩ರ ‘ಬಂಧಿನಿ’, ೧೯೬೭ರ ‘ಮಿಲನ್’ ಮತ್ತು ೧೯೭೮ರ ವರ್ಷದ ‘ಮೇ ತುಳಸಿ ತೇರೇ ಆಂಗನ್ ಕಿ’ - ಈ ನಾಲ್ಕು ಚಿತ್ರಗಳಲ್ಲಿ ಆ ಶ್ರೇಷ್ಠ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಕಾಲದಲ್ಲಿ ಮೂಡಿ ಬಂದ ಅವರ ಇತರ ಪ್ರಖ್ಯಾತ ಚಿತ್ರಗಳಲ್ಲಿ ‘ಸೋನೆ ಕಿ ಚಿಡಿಯಾ’ (೧೯೫೮), ‘ಅನಾರಿ’ (೧೯೫೯), ‘ಚಾಲಿಯಾ’ (೧೯೬೦), ‘ತೇರೇ ಘರ್ ಕಿ ಸಾಮನೇ’ (೧೯೬೩), ‘ಸರಸ್ವತಿ ಚಂದ್ರ (೧೯೬೮), ‘ಅನುರಾಗ್’ (೧೯೭೨) ಮತ್ತು ‘ಸೌಧಾಗರ್’ (೧೯೭೩) ಸೇರಿವೆ. ತಮ್ಮ ಕಾಲದ ಪ್ರಸಿದ್ಧ ನಟರಾದ ದೇವಾನಂದ್, ದಿಲೀಪ್ ಕುಮಾರ್, ರಾಜ್ ಕಫೂರ್ ಹಾಗೂ ನಂತರದ ತಲೆಮಾರಿನ ಅಮಿತಾಬ್, ಧರ್ಮೇಂದ್ರ ಮುಂತಾದ ಪಖ್ಯಾತರೊಡನೆ ಅವರು ನಟಿಸಿದ್ದರು.
೧೯೮೦ರ ದಶಕದಿಂದ ಪ್ರಾರಂಭಗೊಂಡಂತೆ ಈ ಮಹಾನ್ ನಟಿ ತಮ್ಮ ಕೊನೆಯ ದಿನಗಳವರೆಗೆ ಪೋಷಕ ಪಾತ್ರಗಳಲ್ಲಿ ತಮ್ಮ ಅಭಿನಯವನ್ನು ಮುಂದುವರೆಸಿದರು. ಇವುಗಳಲ್ಲಿ ಸಾಜನ್ ಕಿ ಸಹೇಲಿ (೧೯೮೧), ಮೇರಿ ಜುಂಗ್ (೧೯೮೫), ನಾಮ್ (೧೯೮೬) ಮುಂತಾದ ಚಿತ್ರಗಳಲ್ಲಿ ನಟಿಸಿದಂತೆ ತಾಯಿ ಪಾತ್ರಗಳೇ ಹೆಚ್ಚು.
ನೂತನ್ ಅವರು ಮುಜಿರಿಮ್ ಹಾಜಿರ್ ಎಂಬ ದೂರದರ್ಶನ ಧಾರವಾಹಿಯಲ್ಲೂ ಮನೋಜ್ಞವಾಗಿ ಅಭಿನಯಿಸಿದ್ದರು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]೧೯೫೯ರ ‘ಸುಜಾತ’, ೧೯೬೩ರ ‘ಬಂಧಿನಿ’, ೧೯೬೭ರ ‘ಮಿಲನ್’ ಮತ್ತು ೧೯೭೮ರ ವರ್ಷದ ‘ಮೇ ತುಳಸಿ ತೇರೇ ಆಂಗನ್ ಕಿ’ - ಈ ನಾಲ್ಕು ಚಿತ್ರಗಳಲ್ಲಿ ಆ ಶ್ರೇಷ್ಠ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದ ನೂತನ್. ‘ಮೇರಿ ಜುಂಗ್’ ಚಿತ್ರದ ಅಭಿನಯಕ್ಕೆ ತಮ್ಮ ಐದನೆಯ ಫಿಲಂ ಫೇರ್ ಪ್ರಶಸ್ತಿ ಗಳಿಸಿದರು. ಆ ದಾಖಲೆಯನ್ನು ಅವರ ತಂಗಿ ತನುಜಾ ಅವರ ಮಗಳಾದ ಕಾಜೋಲ್ ಮೂರು ದಶಕಗಳ ನಂತರದಲ್ಲಿ ೨೦೧೧ರ ವರ್ಷದಲ್ಲಿ ಸರಿಗಟ್ಟಿದರು. ಒಟ್ಟಾರೆ ಆರು ಫಿಲಂ ಫೇರ್ ಪ್ರಶಸ್ತಿ ಗಳಿಸಿದ ನಟಿಯರಲ್ಲಿ ನೂತನ್ ಮತ್ತು ಜಯಾ ಬಚ್ಚನ್ ಸರಿ ಸಮಾನರಾಗಿದ್ದಾರೆ. ೧೯೭೪ರ ವರ್ಷದಲ್ಲಿ ನೂತನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿತು.
ಕೌಟುಂಬಿಕ ಜೀವನ
[ಬದಲಾಯಿಸಿ]೧೯೫೯ರಲ್ಲಿ ನೂತನ್ ರಜನೀಶ್ ಬೆಹ್ಲ್ ಅವರನ್ನು ವಿವಾಹವಾದರು. ಅವರ ಮಗ ಮೊಹನೀಶ್ ಬೆಹ್ಲ್ ಅವರು ಹಿಂದಿ ಚಲನಚಿತ್ರ ಮತ್ತು ಕಿರುತೆರೆಯ ನಟರಾಗಿದ್ದಾರೆ.
ವಿದಾಯ
[ಬದಲಾಯಿಸಿ]ಈ ಮಹಾನ್ ನಟಿ ನೂತನ್ ಫೆಬ್ರುವರಿ ೨೧, ೧೯೯೧ರಂದು ಕೇವಲ ತಮ್ಮ ೫೪ನೆಯ ವಯಸ್ಸಿನಲ್ಲಿ ಕ್ಯಾನ್ಸರಿನಿಂದಾಗಿ , ತಮ್ಮ ಇಹಲೋಕದ ಜೀವನದಿಂದ ಮುಕ್ತಿ ಪಡೆದರು.
ನೂತನ್ ತಮ್ಮ ಸೌಂಧರ್ಯ, ಅಭಿನಯಗಳಿಗೆ ಪ್ರಸಿದ್ಧಿ ಪಡೆದಷ್ಟೇ ಚಿತ್ರರಂಗದಲ್ಲಿಯೇ ಅಪೂರ್ವವೆನಿಸುವಂತೆ ತಮ್ಮ ಸರಳ, ಸಜ್ಜನಿಕೆ, ಸೌಮ್ಯ ಗುಣಗಳಿಗೂ ಹೆಸರಾಗಿದ್ದರು. ಅವರ ಜೀವನ ಚರಿತ್ರೆ ‘ಅಸೇನ್ ಮಿ ನಸೇನ್ ಮಿ’ ಯನ್ನು ಮರಾಠಿಯ ಪ್ರಸಿದ್ಧ ಬರಹಗಾರ್ತಿ ಲಲಿತಾ ತಮ್ಹಾನೆ ಅವರು ದಾಖಲಿಸಿದ್ದಾರೆ.[೧]
ಉಲ್ಲೇಖಗಳು
[ಬದಲಾಯಿಸಿ]