ಪಟ್ಟೋಲೆ ಪಳಮೆ
”’ಪಟ್ಟೋಲೆ ಪಳಮೆ”’ಯು ೧೯೨೪ರಲ್ಲಿ ಪ್ರಕಟವಾದ ಜಾನಪದ ಸಂಗ್ರಹಗ್ರಂಥವಾಗಿದ್ದು ಶ್ರೀ ನಡಿಕೇರಿಯಂಡ ಚಿಣ್ಣಪ್ಪನವರು ಇದನ್ನು ೧೯೨೪ರಲ್ಲಿ ಪ್ರಕಟಿಸಿದರು.
ಜಾನಪದ ಜೀವನದ ಎಲ್ಲಾ ಸ್ತರಗಳನ್ನೊಳಗೊಳ್ಳುವ ಪರಿಶೋಧನೆ ಮತ್ತು ಸಂರಕ್ಷಣೆಗಳಿಗೆ ಪ್ರಪ್ರಥಮವಾಗಿ ಮೈಸೂರು ವಿಶ್ವವಿದ್ಯಾಲಯವು ಭದ್ರ ಬುನಾದಿಯನ್ನು ಕಳೆದ ಎಪ್ಪತ್ತರ ದಶಕದ ಆದಿಯಲ್ಲಿ ಹಾಕಿದೆಯಾದರೂ ಅದಕ್ಕಿಂತ ನಾಲ್ಕು ದಶಕಗಳಿಗಿಂತ ಹಿಂದೆಯೇ ಕೊಡಗಿನ ಗಣ್ಯರಾದ ಶ್ರೀ ನಡಿಕೇರಿಯಂಡ ಚಿಣ್ಣಪ್ಪನವರು ೧೯೨೪ರಲ್ಲಿ ಪ್ರಕಟಿಸಿದರು.
ಪುಸ್ತಕದ ಪ್ರಥಮ ಪ್ರಕಾಶನದ ಪ್ರತಿಗಳು ದುರ್ಲಭವಾಗಿದ್ದು, ಬೇಡಿಕೆಯಿದ್ದುದರಿಂದ ಕಳೆದ ೭೦ರ ದಶಕದಲ್ಲಿ ಚಿಣ್ಣಪ್ಪನವರ ಪುತ್ರ ಶ್ರೀ ಸುಬ್ಬಯ್ಯನವರು ಎರಡನೆಯ ಪರಿಷ್ಕೃತ ಆವೃತ್ತಿಯನ್ನು ಪ್ರಕಟಿಸುವ ಪ್ರಯತ್ನದಲ್ಲಿದ್ದದ್ದು ಕನ್ನಡ ಅಧ್ಯಯನ ಸಂಸ್ಥೆಯ ಗಮನಕ್ಕೆ ಬಂದು, ಅದರ ‘ಜಾನಪದ ಮಾಲೆ’ಯ ಅಂಗವಾಗಿ ಪ್ರಕಟಿಸುವ ಹೊಣೆಯನ್ನು ಹೊತ್ತಿತು.
ಗ್ರಂಥದ ಮಹತ್ವ
[ಬದಲಾಯಿಸಿ]ಶ್ರೀ ಜೀ ಶಂ ಪರಮಶಿವಯ್ಯನವರು ೧೯೭೫ರಲ್ಲಿ ಪ್ರಕಟವಾದ ಪುಸ್ತಕದಲ್ಲಿ, ‘ಪಟ್ಟೋಲೆ ಪಳಮೆ’ಯು ಕನ್ನಡ ಜಾನಪದ ಸಂಗ್ರಹಗಳ ಆಚಾರ್ಯ ಕೃತಿಯೆಂದು ಸಾರಿದ್ದಾರೆ. ಕೊಡಗಿನ ಜಾನಪದ ಕ್ಷೇತ್ರದಲ್ಲಿ ಸಂಗ್ರಹಕಾರ್ಯವನ್ನು ನಡೆಸಿದವರಲ್ಲಿ ಹಲವರಿದ್ದರೂ ಕಾಲದೃಷ್ಟಿಯಿಂದ, ವಿಷಯದೃಷ್ಟಿಯಿಂದ ಹಾಗೂ ಕ್ರಮಬದ್ಧವಾದ ಜಾನಪದ ಅಧ್ಯಯನ ದೃಷ್ಟಿಯಿಂದ ಈ ಗ್ರಂಥವು ಮಹತ್ವದ ಕೃತಿಯಾಗಿ ನಿಂತಿದೆಯೆಂದೂ ಶ್ಲಾಘಿಸಿದ್ದಾರೆ.
ಈ ಮಹದ್ಗ್ರಂಥ ಕೊಡವ ಸಂಸ್ಕೃತಿಯ ಒಂದು ಪ್ರಾತಿನಿಧಿಕ ಕೃತಿಯಷ್ಟೇ ಅಲ್ಲ ವೇದ ಸಮಾನವೆಂದರೂ ಅತಿಶಯೋಕ್ತಿಯಲ್ಲ.
ಗ್ರಂಥದ ಕುರಿತು
[ಬದಲಾಯಿಸಿ]‘ಪಟ್ಟೋಲೆ ಪಳಮೆ’ಯು ಬಾಯಿಂದ ಬಾಯಿಗೆ ಹರಿದು ಬಂದ ಹಾಡುಗಬ್ಬಗಳ, ಮಾತುಕತೆಗಳ ಕೃತಿ. ಇದರಲ್ಲಿ ಆರು ಅಧ್ಯಾಯಗಳಿದ್ದು, ಮೊದಲನೆಯದು ಕೊಡಗಿನ ಭೌಗೋಳಿಕ ಮತ್ತು ಐತಿಹಾಸಿಕ ವಿವರಗಳ ಪರಿಚಯವನ್ನು ಮಾಡಿಕೊಡುತ್ತದೆ. ಎರಡನೆಯ ಅಧ್ಯಾಯವು ಕೊಡವರ ಪದ್ಧತಿಗಳನ್ನು ವಿವರಿಸುತ್ತದೆ. ಇವು ಜಾನಪದ ಸಂಗ್ರಹವಾಗಿದ್ದು ಇಲ್ಲಿ ಜನನ, ಬಾಲ್ಯಲೀಲೆ, ಮದುವೆ, ಮರಣಗಳ ಸಂಪ್ರದಾಯಗಳನ್ನು ವಿಶದವಾಗಿ ವರ್ಣಿಸಿದೆಯಲ್ಲದೆ ಗೀತಸಾಹಿತ್ಯವನ್ನೂ ಕೊಡಲಾಗಿದೆ.
ಮೂರನೆಯ ಅಧ್ಯಾಯದಲ್ಲಿ ಹಬ್ಬಗಳ ಬಗ್ಗೆ ಅವು ಆಚರಿಸಲ್ಪಡುವ ಕಾಲಾನುಕ್ರಮದಲ್ಲಿ ಬಣ್ಣಿಸಿದ್ದಾರೆ. ಪುತ್ತರಿ ಅಥವಾ ಹುತ್ತರಿ ಹಬ್ಬಕ್ಕೆ ಸಂಬಂಧಿಸಿದ ವಿವಿಧ ಹಾಡುಗಳ ಸಾಹಿತ್ಯವನ್ನು ಒದಗಿಸಲಾಗಿದೆ. ನಾಲ್ಕನೆಯ ಅಧ್ಯಾಯದಲ್ಲಿ ದೇವತೆಗಳ ವರ್ಣನೆಯ ಹಾಡುಗಳಿದ್ದರೆ ಐದನೆಯದರಲ್ಲಿ ಕೊಡಗಿನ ಇತಿಹಾಸದಲ್ಲಿ ಕೀರ್ತಿಶೇಷರಾದವರನ್ನು ಕುರಿತಿರುವ ಜಾನಪದ ಹಾಡುಗಳ ಸಂಗ್ರಹವಿದೆ.
ಆರನೆಯ ಅಧ್ಯಾಯದಲ್ಲಿ ನಾಣ್ನುಡಿಗಳು, ಜಾಣ್ನುಡಿಗಳು, ಒಗಟುಗಳು, ಜಾತಿ ಪದ್ಧತಿಗಳು, ಕಟ್ಟು-ಕಟ್ಟಳೆಗಳು, ಹೀಗೆ ನಾನಾ ತರದ ವಿಷಯಗಳ ಬಗ್ಗೆ ಸಂಗ್ರಹಿಸಿಡಲಾಗಿದೆ.
ನಾಲ್ಕನೇ ಮುದ್ರಣದವರೆಗೆ ಈ ಗ್ರಂಥದಲ್ಲಿ ನಿರೂಪಣೆಯ ಭಾಗವು ಕನ್ನಡದಲ್ಲಿದ್ದು ಹಾಡುಗಳು, ಗಾದೆಗಳು, ಒಗಟುಗಳು, ಮೊದಲಾದ ಜಾನಪದ ಪ್ರಕಾರಗಳು ಕನ್ನಡ ಲಿಪಿಯಲ್ಲಿ ಕೊಡವ ತಕ್ಕ್‌ನಲ್ಲಿದೆ. ಐದನೇ ಆವೃತ್ತಿ ಇಂಗ್ಲಿಶಿನಲ್ಲಿದೆ. ಇದನ್ನು ಅನುವಾದಿಸಿ ಪ್ರಕಟಿಸಿದವರು ಚಿಣ್ಣಪ್ಪನವರ ಮೊಮ್ಮಕ್ಕಳಾದ ಡಾ ನಂಜಮ್ಮ ಚಿಣ್ಣಪ್ಪ ಮತ್ತು ಅವರ ಪತಿ ಬೊವ್ವೇರಿಯಂಡ ಎಮ್ ಚಿಣ್ಣಪ್ಪವರು.
ಆರನೆಯ ಆವೃತ್ತಿಯನ್ನು ಅಜ್ಜಿನಿಕಂಡ ಮಹೇಶ್ ನಾಚಯ್ಯ ಮತ್ತವರ ಪತ್ನಿ ಪ್ರಮೀಳಾ ರವರಿಂದ ಸಂಪೂರ್ಣವಾಗಿ ಕೊಡವ ತಕ್ಕ್‌ಗೆ ಭಾಷಾಂತರಗೊಂಡು, ಮಹೇಶ್ ಅವರ ಅಧ್ಯಕ್ಷತೆಯಲ್ಲಿ ‘ಕೊಡವ ತಕ್ಕ್ ಪರಿಷತ್ನ ಮೂಲಕ ಪ್ರಕಟಗೊಂಡಿದೆ.
ಈ ಪುಸ್ತಕಗಳನ್ನು ಪಡೆಯಬಹುದಾದ ಸ್ಥಳಗಳು
[ಬದಲಾಯಿಸಿ]೧. ಕರ್ನಾಟಕ ಕೊಡವ ಸಾಹಿತ್ಯ ಆಕದೆಮಿ, ಸ್ಕೌಟ್ಸ್ ಮತ್ತು ಗೈಡ್ಸ್ ಕಟ್ಟಡ, ಮಾನ್ಸ್ ಕಾಂಪೌಂಡ್ ಬಳಿ, ಮಡಿಕೇರಿ ೫೭೧೨೦೧, ಕೊಡಗು ಜಿಲ್ಲೆ.
೨. 'ಪೂಮಾಲೆ' ಪತ್ರಿಕೆಯ ಕಚೇರಿ, ಫೀ ಮಾ ಕಾರ್ಯಪ್ಪ ರಸ್ತೆ, ವಿರಾಜಪೇಟೆ ೫೭೧೨೧೮, ಕೊಡಗು ಜಿಲ್ಲೆ.
ಆಧಾರ
[ಬದಲಾಯಿಸಿ]- ಪಟ್ಟೋಲೆ ಪಳಮೆ, ನಡಿಕೇರಿಯಂಡ ಚಿಣ್ಣಪ್ಪ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ೧೯೭೫
- ಪಟ್ಟೋಲೆ ಪಳಮೆ, (ಕೊಡವ ಅನು.)ಕೊಡವ ತಕ್ಕ್ ಪರಿಷತ್, ೨೦೦೬