ವಿಷಯಕ್ಕೆ ಹೋಗು

ಪ್ರವೃತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಯಿಯು ಒದ್ದೆಯಾದ ತುಪ್ಪಳದಿಂದ ನೀರನ್ನು ಅಲುಗಾಡಿಸಿ ತೆಗೆಯುವುದು ಒಂದು ಸಹಜ ಪ್ರವೃತ್ತಿ

ಪ್ರವೃತ್ತಿ ಎಂದರೆ ಪ್ರಾಣಿಗಳು ಪರಿಸರಾತ್ಮಕ ಪ್ರಚೋದನೆಗಳಿಗೆ ವ್ಯಕ್ತಪಡಿಸುವ ಜಟಿಲ ಹಾಗೂ ನಿರ್ದಿಷ್ಟ ಪ್ರತಿಕ್ರಿಯೆ (ಇನ್‍ಸ್ಟಿಂಕ್ಟ್). ಪ್ರಧಾನವಾಗಿ ಅನುವಂಶಿಕವಾಗಿ ಸಾಗಿಬರುವ ಈ ವರ್ತನೆ ಯಾವ ಪೂರ್ವಾಭ್ಯಾಸವೂ ಇಲ್ಲದೆ ನಡೆಯುತ್ತದಲ್ಲದೆ, ಸಾಮಾನ್ಯವಾಗಿ ವ್ಯತ್ಯಸ್ತವಾಗದು; ಅಂತೆಯೇ ವಿವೇಚನೆಯನ್ನು ಒಳಗೊಳ್ಳದು. ದೈಹಿಕ ಉದ್ವೇಗಗಳನ್ನು ನಿವಾರಿಸಿಕೊಳ್ಳುವುದೇ ಇದರ ಮುಖ್ಯ ಗುರಿ. ಇದನ್ನು ಪ್ರಾಣಿಗಳ ಸಹಜ ಒಲವು, ಹಠಾತ್‍ಪ್ರೇರಣೆ, ಅಥವಾ ಸಾಮರ್ಥ್ಯ ಎಂದು ವಿವರಿಸಬಹುದು. ಪಾಶ್ಚಾತ್ಯ ತತ್ತ್ವಶಾಸ್ತ್ರಜ್ಞರಲ್ಲಿ ಪ್ರಾಣಿಗಳು ಪ್ರವೃತಿಯ ಆಧಾರದ ಮೇಲೂ ಮನುಷ್ಯ ಬುದ್ಧಿಶಕ್ತಿಯ ಆಧಾರದ ಮೇಲೂ ತಂತಮ್ಮ ಜೀವನವನ್ನು ನಡೆದುಕೊಂಡು ಹೋಗುವುದೆಂಬ ಅಭಿಪ್ರಾಯವಿತ್ತು. ತತ್ತ್ವಜ್ಞಾನಿ ಡೇಕಾರ್ಟ್ ಪ್ರಾಣಿವರ್ಗದ ವರ್ತನೆ ಕೇವಲ ನರಮಂಡಲ ಮತ್ತು ಸ್ನಾಯುಗಳ ಆಧಾರದ ಮೇಲೆ ನಡೆಯುವುದೆಂದೂ ಮನುಷ್ಯರ ವರ್ತನೆಯಲ್ಲಿ ವಿವೇಚನಾಶಕ್ತಿ ಇರುವುದೆಂದೂ ಅಭಿಪ್ರಾಯಪಟ್ಟ. ಆದರೆ 19ನೆಯ ಶತಮಾನದ ಮಧ್ಯಭಾಗದಲ್ಲಿ ಡಾರ್ವಿನ್ ಮಹಾಶಯ ತನ್ನ ಪರಿಣಾಮವಾದದಲ್ಲಿ ಪ್ರಾಣಿವರ್ಗಕ್ಕೂ ಮನುಷ್ಯರಿಗೂ ಅಷ್ಟೇನು ಅಂತರವಿಲ್ಲವೆಂಬ ಅಭಿಪ್ರಾಯ ಹೊರಗೆಡಹಿದ.

ಕ್ರಿಮಿಕೀಟಗಳು ಯಾವ ಕಲಿಕೆಯೂ ಇಲ್ಲದೆ ಸ್ವಭಾವ ಸಿದ್ಧವಾದ ಪ್ರವೃತಿಯ ಆಧಾರದ ಮೇಲೆಯೇ ಅತಿ ತೊಡಕಿನ ಕೆಲಸ ಕಾರ್ಯಗಳನ್ನೂ ನಿರ್ವಹಿಸುವುವು. ತಾಯಿ ಕಣಜ ಗೂಡನ್ನು ಕಟ್ಟಿ ಮೊಟ್ಟೆಯನ್ನು ಇಡುವುದಲ್ಲದೆ ಮುಂದೆ ಬರುವ ಮರಿಗೆ ಅಗತ್ಯವಾದ ಆಹಾರವನ್ನು ಸಹ ಗೂಡಿನೊಳಗೆ ಒದಗಿಸಿಕೊಟ್ಟು ಹೊರಟು ಹೋಗುವುದು. ಮೊಟ್ಟೆ ಕಾಲಕ್ರಮೇಣ ಒಡೆದು ಮರಿಯಾದಾಗ ತಾಯಿ ಒದಗಿಸಿ ಇಟ್ಟ ಆಹಾರವನ್ನು ಸ್ವೀಕರಿಸಿ ಗೂಡಿನಿಂದ ಹೊರಗೆ ಬರುವುದು. ಮುಂದೆ ಅದೂ ಸಹ ತನ್ನ ತಾಯಿಯ ಹಾಗೆ ಮುಂದಿನ ಪೀಳಿಗೆಯ ಅನುಕೂಲಕ್ಕಾಗಿ ಗೂಡನ್ನು ಕಟ್ಟುವುದು. ಜೇಡ ತನ್ನಷ್ಟಕ್ಕೆ ತಾನೇ ಗೂಡನ್ನು ಕಟ್ಟಿ ಆಹಾರವನ್ನು ಶೇಖರಿಸುವುದು. ಇದೇ ವಿಧವಾಗಿ ಬೇರೆ ಬೇರೆ ಜಾತಿಯ ಪಕ್ಷಿಗಳು ತಮಗೆ ಸಹಜವಾದ ನಿರ್ದಿಷ್ಟ ವಿಧದಲ್ಲಿ ತಮ್ಮ ಗೂಡುಗಳನ್ನು ನಿರ್ಮಿಸುವುವು. ಕ್ರಿಮಿಕೀಟಗಳಲ್ಲಿ, ಪಕ್ಷಿಗಳಲ್ಲಿ ಇಂಥ ವರ್ತನೆ ಸ್ವಭಾವ ಸಿದ್ಧವಾದದ್ದು. ಇದು ಕಲಿಕೆಯಿಂದ ಉಂಟಾಗುವಂಥದಲ್ಲ. ಇದೇ ರೀತಿ ಮನುಷ್ಯರಲ್ಲೂ ಸಹ ಸ್ವಭಾವಸಿದ್ಧವಾದ ವರ್ತನೆ ಇದೆ ಎಂದು ಕಳೆದ ಶತಮಾನದ ಅಂತ್ಯದ ಹಾಗೂ ಈ ಶತಮಾನದ ಆರಂಭದಲ್ಲಿ ಮನಶ್ಯಾಸ್ತ್ರಜ್ಞರು ನಂಬಿದ್ದರು.

ಹುಟ್ಟಿದ ಮಗು ತನ್ನ ಕೈಗೆ ಒಂದು ಸಣ್ಣ ಕೋಲು ತಾಕಿದರೆ ಅದನ್ನು ಹಿಡಿದುಕೊಳ್ಳುವುದು; ಅದರ ಬಾಯಲ್ಲಿ ತಾಯಿಯ ಮೊಲೆಯನ್ನೇ ಆಗಲಿ ಅಥವಾ ಬೆರಳನ್ನೇ ಆಗಲಿ ಇಟ್ಟರೆ ಅದನ್ನು ಹೀರುವುದು. ಆದರೆ ಈ ತೆರನ ವರ್ತನೆಗಳು ಪರಾವರ್ತನೆಗಳು (ರಿಫ್ಲೆಕ್ಸ್ ಆ್ಯಕ್‍ಷನ್). ಇವು ದೇಹದ ಒಂದು ಭಾಗವನ್ನು ಒಳಗೊಂಡಿದ್ದು ಪ್ರಚೋದನೆಯಾದ ತತ್‍ಕ್ಷಣವೇ ಉಂಟಾಗುವುದಲ್ಲದೆ ಯಾವಾಗಲೂ ಒಂದೇ ತೆರನಾಗಿರುವುದು. ಪ್ರಚೋದನೆಯ ಪ್ರಮಾಣವನ್ನನುಸರಿಸಿ ಇವುಗಳ ಪ್ರಮಾಣವೂ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ವ್ಯಾಟ್‍ಸನ್ ಮುಂತಾದ ವರ್ತನಾವಾದಿಗಳು (ಬಿಹೇವಿಯರಿಸ್ಟ್ಸ್) ಪ್ರಾಣಿವರ್ಗದಲ್ಲಿಯೂ, ಮಾನವನಲ್ಲಿಯೂ ಸ್ವಭಾವಸಿದ್ದ ಅಂಶಗಳು ಕೇವಲ ಈ ಪರಾವರ್ತನೆಗಳೇ ಎಂದು ವಾದಿಸಿದರು. ಅನೇಕ ಪರಾವರ್ತನೆಗಳು ಜೊತೆಗೂಡಿದರೆ ಪ್ರಾಣಿವರ್ಗದ ಮತ್ತು ಮನುಷ್ಯರ ತೊಡಕಾದ ಆದರೆ ಕ್ರಮಬದ್ಧವಾದ ವರ್ತನೆ ಉಂಟಾಗುವುದೆಂದು ವಾದಿಸಿದರು.

ಆದರೆ ಮ್ಯಾಕ್‍ಡೂಗಲ್ ಮುಂತಾದವರು ಪ್ರಾಣಿವರ್ಗದಲ್ಲಿಯೂ, ಮನುಷ್ಯರಲ್ಲಿಯೂ ಕೆಲವು ಖಚಿತ ಪ್ರವೃತ್ತಿಗಳಿರುವುದೆಂದು ವಾದಿಸಿದರು. ದಾಹ, ಹಸಿವು, ಕಾಮೋದ್ರೇಕ ಮುಂತಾದ ನೈಸರ್ಗಿಕ ವರ್ತನೆಗಳೂ; ಗುಂಪಿನಲ್ಲಿ ವಾಸಮಾಡುವುದು, ಆತ್ಮಪ್ರತಿಷ್ಠೆ, ವಿಧೇಯತೆ, ಪ್ರಾರ್ಥನಾವರ್ತನೆ ಮುಂತಾದ ಸಾಮಾಜಿಕ ವರ್ತನೆಗಳೂ ಎಲ್ಲ ಪ್ರಾಣಿಗಳಲ್ಲಿಯೂ ಮಾನವರಲ್ಲಿಯೂ ಸ್ವಭಾವತಃ ಇವೆಯೆಂಬುದು ಇವರ ವಾದ. ಅಲ್ಲದೆ ಮಾನವನ ಪ್ರತಿಯೊಂದು ಮನೋವ್ಯಾಪಾರವೂ ವರ್ತನೆಯೂ ಪ್ರವೃತ್ತಿಯನ್ನು ಅವಲಂಬಿಸಿವೆ ಎಂದು ಅಭಿಪ್ರಾಯಪಟ್ಟರು.

ಈ ಅಭಿಪ್ರಾಯಗಳಿಗೆ ವಿರುದ್ಧವಾಗಿ ಬರ್ನಾರ್ಡ್ ಮುಂತಾದ ಸಮಾಜಶಾಸ್ತ್ರಜ್ಞರೂ, ಮನಶ್ಯಾಸ್ತ್ರಜ್ಞರೂ, ಮಾನವ ವರ್ತನೆ ಸ್ವಭಾವಸಿದ್ಧವಾದ ವರ್ತನೆಯಲ್ಲ. ಬರಿಯ ಅಭ್ಯಸ್ಥವರ್ತನೆ ಎಂದು ವಾದಿಸಿದರು. ಮನುಷ್ಯನ ವರ್ತನೆ ಅವನು ಯಾವ ಗುಂಪಿಗೆ ಸೇರಿರುವನೋ ಆ ಗುಂಪಿನ ಕಟ್ಟುನಿಟ್ಟುಗಳ ಪ್ರಕಾರ ಉಂಟಾಗುವುವೆಂಬುದು ಇವರ ಅಭಿಪ್ರಾಯ; ಕೇವಲ ಪರಾರ್ತನೆಗಳು ಮಾತ್ರ ಸ್ವಭಾವಸಿದ್ಧವೆಂದೂ ಮಾನವನ ತೊಡಕಾದ ವರ್ತನೆ ಕಲಿಕೆಯನ್ನು ಆಧರಿಸಿದೆಯೆಂದೂ ಇವರು ವಾದಿಸಿದ್ದರು.

ಮೇಲಿನ ಮೂರು ವಾದಗಳಲ್ಲೂ ಕೊಂಚ ಸತ್ಯಾಂಶ ಇದೆ. ಆದರೆ ಮನುಷ್ಯ ವರ್ತನೆಯಲ್ಲಿ ಯಾವ ಅಂಶ ಕಲಿಕೆಯಿಂದ ಬಂದುದು ಯಾವುದು ಅಲ್ಲ ಎಂಬುದನ್ನು ನಿರ್ಣಯಿಸುವುದು ಬಹಳ ಕಷ್ಟ. ಉದಾಹರಣೆಗೆ ಮಗು ನಡೆಯುವುದು. ನಡೆಯುವ ವರ್ತನೆ ಸಹಜ ವರ್ತನೆಯೇ? ಈ ಪ್ರಶ್ನೆಗೆ ಉತ್ತರ ಕೊಡುವುದು ಅಸಾಧ್ಯ ಏಕೆಂದರೆ ನಡೆಯಲಾರಂಭಿಸಿದ ಮಗುವಿನ ವರ್ತನೆಯನ್ನು ಪರೀಕ್ಷಿಸಿದರೆ ಅದು ಎಷ್ಟೋ ಸಲ ಎದ್ದು ಬಿದ್ದು ನಡೆಯುವುದನ್ನು ಕಲಿಯುವುದು ಎಂಬ ವಿಚಾರ ವಿಶದವಾಗುವುದು. ಅಲ್ಲದೆ ತಾಯಿತಂದೆಗಳು ಅದಕ್ಕೆ ನಡಿಗೆಯನ್ನು ಕಲಿಸಿಕೊಡುವರು. ತಾಯಿ ಒಂದು ಕಡೆ ಕೂತು ಚಪ್ಪಾಳೆ ಹಾಕಿ ಮಗು ತನ್ನ ಹತ್ತಿರಕ್ಕೆ ನಡೆದು ಬರುವ ಹಾಗೆ ಪ್ರೋತ್ಸಾಹಿಸುವಳು. ಇದೇ ರೀತಿ ಊಟ ಮಾಡುವುದನ್ನು ಕಲಿಯುವುದರಲ್ಲಿ ಸ್ವಾಭಾವಿಕ ಅಂಶ ಮತ್ತು ಅಭ್ಯಸ್ಥ ಅಂಶಗಳೆರಡೂ ಉಂಟು. ಇದರಿಂದಾಗಿ ಮಾನವನ ಸಹಜ ಗುಣಗಳಾವುವು ಎಂಬುದನ್ನು ಹೇಳುವುದು ಅಸಾಧ್ಯ. ಬಹುಶಃ ಇದಕ್ಕೆ ಕಾರಣ ಮಾನವನ ದೀರ್ಘ ಬಾಲ್ಯಾವಸ್ಥೆ. ಬೆಳೆಯುತ್ತ ಬೆಳೆಯುತ್ತ ಮಗು ತನ್ನ ಸಹಜ ವರ್ತನೆಯನ್ನು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಬದಲಾಯಿಸುವುದು. ಅಲ್ಲದೆ ಕುಟುಂಬ ಮತ್ತು ಸಮಾಜಗಳು ಕೂಡ ಮಗುವಿನ ವರ್ತನೆಗೆ ಕ್ರಮಬದ್ಧತೆಯನ್ನು ಕೊಡುವುದು.

ಮಾನವ ವರ್ತನೆ ಪ್ರೇರಣೆಯನ್ನು (ಮೋಟಿವ್ಸ್) ಒಳಗೊಂಡಿದೆಯೆಂದು ಅನೇಕ ಮನಶ್ಶಾಸ್ತ್ರಜ್ಞರ ಇತ್ತೀಚಿನ ಅಭಿಪ್ರಾಯ.

ಒಂದು ಪ್ರಾಣಿಯ ಅಥವಾ ಮನುಷ್ಯನ ವರ್ತನೆಯನ್ನು ಅವಲೋಕಿಸಿದರೆ ವರ್ತನೆಯಲ್ಲಿ ಒಂದು ತೆರನ ಕ್ರಮಬದ್ದತೆ ಇರುವುದೆಂಬುದು ವ್ಯಕ್ತವಾಗುತ್ತದೆ. ವರ್ತನೆಗೆ ಒಂದು ಆರಂಭ ಮತ್ತು ಒಂದು ಗುರಿ ಇರುವುದು. ತನ್ನ ವರ್ತನೆಯ ಮೂಲಕ ಗುರಿಯನ್ನು ಸಾಧಿಸುವುದೆಂಬುದನ್ನು ನಾವು ಕಾಣಬಹುದು. ಈ ಆಧಾರದ ಮೇಲೆ ಒಂದು ವರ್ತನೆಯ ಗುರಿ ಯಾವುದು ಎಂಬುದನ್ನು ಊಹಿಸಬಹುದು.

ಪ್ರೇರಣೆ ಪ್ರತ್ಯಕ್ಷ ಅಂಶವಲ್ಲ. ವರ್ತನೆ ಮಾತ್ರ ಪ್ರತ್ಯಕ್ಷ ಅಂಶ. ಒಂದು ಪ್ರಾಣಿಯ ಈ ವಿಧವಾದ ಪ್ರವೃತ್ತಿ ಇರಬಹುದೆಂದು ಅದರ ವರ್ತನೆಯನ್ನು ಪರೀಕ್ಷಿಸಿ ಅದರ ಆಧಾರದ ಮೇಲೆ ಊಹಿಸಬಹುದು. ಪ್ರತ್ಯಕ್ಷವಾಗಿ ಗೋಚರಿಸುವುದು ಅನೇಕ ಅಂಶಗಳನ್ನು ಒಳಗೊಂಡ ಒಂದು ಕ್ರಮಬದ್ಧವರ್ತನೆ. ಈ ವರ್ತನೆ ನಿರ್ದಿಷ್ಟ ಗುರಿಯನ್ನು ಸಾಧಿಸುವವರೆಗೂ ಮುಂದುವರಿಯುವುದು. ಪ್ರಾಣಿಯೇ ಆಗಲಿ. ಮನುಷ್ಯನೇ ಆಗಲಿ ಆ ಗುರಿಯನ್ನು ಸಾಧಿಸುವವರೆಗೂ ಮುಂದುವರಿಯುವುದು. ಪ್ರಾಣಿಯೇ ಆಗಲಿ. ಮನುಷ್ಯನೇ ಆಗಲಿ ಆ ಗುರಿಯನ್ನು ಸಾಧಿಸುವುದಕ್ಕೆ ಆಗದೆ ಹೋದರೆ ವರ್ತನೆ ಬದಲುಗೊಳ್ಳುತ್ತದೆ. ಆದ್ದರಿಂದ ವರ್ತನೆಯಲ್ಲಿ ಈ ಎರಡು ಅಂಶಗಳನ್ನು ಪ್ರತ್ಯಕ್ಷವಾಗಿ ಕಾಣಬಹುದು. ಮೊದಲನೆಯದು ಕ್ರಮಬದ್ಧ ಚಲನೆ, ಎರಡನೆಯದು ಗುರಿ. ಗುರಿ ಸಾಧನೆಯಾದ ಅನಂತರ ಪ್ರಾಣಿ ಅಥವಾ ಮನುಷ್ಯನಲ್ಲಿ ಚಲನೆ ನಿಲ್ಲುತ್ತದೆ. ಅಂದರೆ ಗುರಿ ಪ್ರಾಣಿಯ ಚಲನೆಗೆ ಒಂದು ನಿರ್ದೇಶವನ್ನು ಕೊಡುವುದು. ಉದಾಹರಣೆಗೆ ಮಗುವಿಗೆ ಹಸಿವಾದರೆ ಅಥವಾ ನೋವು ಉಂಟಾದರೆ ಅದು ತನ್ನ ಕೈಕಾಲುಗಳನ್ನಾಡಿಸುವುದು ಇಲ್ಲವೆ ಅಳುವುದು. ತಾಯಿ ಬಂದು ಆಹಾರವನ್ನೊದಗಿಸಿದರೆ ಅಥವಾ ಹಾಸಿಗೆಯನ್ನು ಸರಿಪಡಿಸಿದರೆ ಅಥವಾ ಹೊಟ್ಟೆಯನ್ನು ನೀವಿದರೆ ಮಗು ಸುಮ್ಮನಿರುವುದು ಅಥವಾ ಮಲಗುವುದು. ಇದೇ ರೀತಿ ಕ್ರಿಮಿಕೀಟಗಳೂ ಇಲಿ, ಬೆಕ್ಕು, ನಾಯಿ ಮುಂತಾದ ಪ್ರಾಣಿಗಳೂ ವರ್ತಿಸುವುವು.

ಪ್ರವೃತ್ತಿ ನಮ್ಮ ಪ್ರತ್ಯಕ್ಷಾನುಭವಕ್ಕೆ ನಿಲುಕುವ ಪದಾರ್ಥವಲ್ಲ. ವರ್ತನೆಯ ವೀಕ್ಷಣೆಯ ಆಧಾರದ ಮೇಲೆ ಒಂದು ಜೀವಿ ಯಾವ ಪ್ರೇರಣೆಗೆ ಒಳಪಟ್ಟಿರುವುದೆಂದು ನಾವು ಊಹಿಸಬಹುದು. ಪ್ರೇರಣೆ ಜೀವಿಗೆ ಒಂದು ಶಕ್ತಿಯನ್ನು ಕೊಡುವುದು.

ಮನುಷ್ಯರಲ್ಲಿ ಪ್ರವೃತ್ತಿ ಕೇವಲ ಸ್ವಾಭಾವಿಕ ರೂಪವನ್ನು ತಾಳುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿ ಒಂದು ಗುಂಪಿನಲ್ಲಿ (ಸಾಮಾಜಿಕ ಚೌಕಟ್ಟಿನಲ್ಲಿ) ಬೆಳೆದಿರುವ ಕಾರಣ ಗುರಿಯನ್ನು ಸಾಧಿಸುವ ವರ್ತನೆ ಆ ಸಮಾಜದ ಕಟ್ಟುನಿಟ್ಟುಗಳನ್ನು ಒಳಗೊಂಡಿರುವುದು. ಆತ್ಮಪ್ರತಿಷ್ಠೆಯನ್ನು ಸಾಧಿಸಲು ಒಂದೊಂದು ಸಮಾಜದಲ್ಲಿ ಒಂದೊಂದು ಮಾರ್ಗವನ್ನು ಹಿಡಿಯುವರು. ಇಲ್ಲಿ ಮುಖ್ಯವಾಗಿ ತಿಳಿಯಬೇಕಾದ ಅಂಶವೆಂದರೆ ಪ್ರವೃತ್ತಿ ವರ್ತನೆಯ ಮೂಲಾಧಾರ ಎಂಬುದು.[][] []

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Laplanche, Jean; Pontalis, Jean-Bertrand (1973). "Instinct (or Drive) (pp. 214-7)". The Language of Psycho-analysis. London: Karnac Books. ISBN 978-0-946-43949-2. {{cite book}}: Unknown parameter |chapterurl= ignored (help)

ಉಲ್ಲೇಖ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರವೃತ್ತಿ
  2. McDougall, W. (1928). An Introduction to Social Psychology, 21st edition, Methuen & Co. Ltd, London,
  3. Mandal, F. B. (2010). Textbook of Animal Behaviour. PHI Learning.