ವಿಷಯಕ್ಕೆ ಹೋಗು

ಬೆನಗಲ್ ರಾಮರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನಗಲ್ ರಾಮರಾವ್
ಜನನಏಪ್ರಿಲ್ ೩. ೧೮೭೬
ಮಂಗಳೂರು
ಮರಣಮೇ ೮, ೧೯೪೩
ವೃತ್ತಿಅಧ್ಯಾಪಕರು, ಭಾಷಾಂತಕಾರರು, ಸಾಹಿತಿಗಳು
ವಿಷಯಕನ್ನಡ ಸಾಹಿತ್ಯ

ಬೆನಗಲ್ ರಾಮರಾವ್ (ಏಪ್ರಿಲ್ ೩, ೧೮೭೬ಮೇ ೮, ೧೯೪೩) ಕನ್ನಡ ಸಾಹಿತ್ಯ ಸೇವೆ ಮಾಡಿದ ಶ್ರೇಷ್ಠರಲ್ಲಿ ಒಬ್ಬರೆನಿಸಿದ್ದಾರೆ.

ಬಹುಭಾಷಾ ಕಲಾವಿದರಾಗಿದ್ದ ಬೆನಗಲ್ ರಾಮರಾಯರು ಏಪ್ರಿಲ್ ೩, ೧೮೭೬ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ವಕೀಲಿ ವೃತ್ತಿ ಮಾಡುತ್ತಿದ್ದ ಮಂಜುನಾಥಯ್ಯನವರು. ರಾಮರಾಯರ ಪ್ರಾಥಮಿಕ ಶಿಕ್ಷಣ ಮೂಲ್ಕಿ, ಮಂಗಳೂರು ಮತ್ತು ಪುತ್ತೂರಿನಲ್ಲಿ ನೆರವೇರಿತು. ಮಂಗಳೂರಿನ ಸರ್ಕಾರಿ ಕಾಲೇಜು ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೮೯೬ರಲ್ಲಿ ಬಿ.ಎ. ಪದವಿ ಗಳಿಸಿದರು. ಕನ್ನಡದ ಬಗ್ಗೆ ಅವರಿಗೆ ಅಪಾರ ಒಲವು. ಪದವಿ ಗಳಿಸಿದ ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ೧೮೯೭ರಿಂದ ೧೯೦೦ರವರೆಗೆ ಕಾರ್ಯನಿರ್ವಹಿಸಿದರು. ಮದರಾಸಿನಲ್ಲಿದ್ದಾಗಲೇ ತೆಲುಗು ಮತ್ತು ಕನ್ನಡವನ್ನು ಪ್ರಮುಖ ವಿಷಯವನ್ನಾಗಿ ಆರಿಸಿಕೊಂಡು ಮದರಾಸು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ನಂತರ ಮೈಸೂರಿನ ನಾರ್ಮಲ್ ಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಎರಡು ವರ್ಷ ಕೆಲಸ ಮಾಡಿ ೧೯೦೨ರಿಂದ ಎಂಟು ವರ್ಷಕಾಲ ಮುಂಬಯಿ ಸರಕಾರದ ಭಾಷಾಂತರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು.

ಬಹು ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ

[ಬದಲಾಯಿಸಿ]

ಬೆನಗಲ್ ರಾಮರಾಯರದು ಬಹುಮುಖ ಪ್ರತಿಭೆ. ಅವರಿಗೆ ಹಲವಾರು ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ತೆಲುಗು, ಸಂಸ್ಕೃತ, ಬಂಗಾಳಿ, ಮರಾಠಿ ಭಾಷೆಗಳಲ್ಲಿ ತಮಗಿದ್ದ ಪ್ರಾವೀಣ್ಯತೆಯಿಂಡ ಆ ಭಾಷೆಗಳಿಂದ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ತೆಲುಗಿನಿಂದ ‘ಕಲಹ ಪ್ರಿಯ’ ಎಂಬ ನಾಟಕ, ಸತ್ಯರಾಜನ ಪೂರ್ವದೇಶದ ಯಾತ್ರೆಗಳು ಎಂಬ ಕಾದಂಬರಿ, ಮರಾಠಿಯಿಂದ ‘ರಮಾ ಮಾಧವ’ ಎಂಬ ಕಾದಂಬರಿ, ಸಂಸ್ಕೃತದಿಂದ ‘ದೂತಾಂಗ’ ಎಂಬ ನಾಟಕ, ಬಂಗಾಳಿಯಿಂದ ‘ಕೃಷ್ಣಕುಮಾರಿ’ ಎಂಬ ಕಾದಂಬರಿ ಮುಂತಾದುವುಗಳು ಅವರ ಭಾಷಾಂತರದ ಪ್ರಮುಖ ಕೃತಿಗಳು.

ಸ್ವತಂತ್ರ ಕೃತಿಗಳು

[ಬದಲಾಯಿಸಿ]

ರಾಮರಾಯರ ಸ್ವತಂತ್ರ ಕೃತಿಗಳಲ್ಲಿ ಇರಾವತಿ, ಚಿಕ್ಕ ಕಥೆಗಳು, ಮಹನೀಯರ ಚರಿತ್ರೆಮಾಲೆ ಮುಂತಾದವು ಪ್ರಮುಖವಾದವು.

ಕೈಫಿಯತ್ತುಗಳಿಗೆ ಪ್ರಸಿದ್ಧರು

[ಬದಲಾಯಿಸಿ]

ಇತಿಹಾಸದ ಬಗ್ಗೆಯೂ ರಾಯರಿಗೆ ಅಪಾರ ಒಲವು. ತಂಜಾವೂರು ಮನೆತನದ ಕೈಫಿಯತ್ತು, ಹಳೇಬೀಡು ಕೈಫಿಯತ್ತು, ಹೊಳೆ ಹೊನ್ನೂರು ಕೈಫಿಯತ್ತು ಮುಂತಾದ ಅನೇಕ ಕೈಫಿಯತ್ತುಗಳ ರಚನೆ ಅವರಿಂದ ಮೂಡಿಬಂತು. ಹೀಗಾಗಿ ಅವರು ಕೈಫಿಯತ್ತುಗಳ ರಾಮರಾಯರೆಂದೇ ಪ್ರಸಿದ್ಧಿ ಪಡೆದವರು.

ಸಂಪಾದನೆಗಳು

[ಬದಲಾಯಿಸಿ]

ರಾಮರಾಯರು ಇತರರೊಡನೆ ಸೇರಿ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಪಾನ್ಯಂ ಸುಂದರ ಶಾಸ್ತ್ರಿಯವರೊಡಗೂಡಿ ಸಿದ್ಧಪಡಿಸಿದ ‘ಪುರಾಣನಾಮ ಚೂಡಾಮಣಿ’ ಒಂದು ಉತ್ಕೃಷ್ಟ ಆಕರ ಗ್ರಂಥ.

ಸಾಹಿತ್ಯ ಸಮ್ಮೇಳನಾಧ್ಯಕ್ಷತೆ

[ಬದಲಾಯಿಸಿ]

ರಾಮರಾಯರನ್ನು ಬೆಳಗಾವಿಯಲ್ಲಿ ೧೯೨೫ರಲ್ಲಿ ನಡೆದ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಕನ್ನಡದ ಜನತೆ ಗೌರವ ತೋರಿತು.

ವಿದಾಯ

[ಬದಲಾಯಿಸಿ]

ಈ ಮಹನೀಯರು ಮೇ ೮, ೧೯೪೩ರಲ್ಲಿ ಈ ಲೋಕವನ್ನಗಲಿದರು.

ಉ‌ಲ್ಲೇಖಗಳು

[ಬದಲಾಯಿಸಿ]

ಕಣಜ Archived 2016-06-10 ವೇಬ್ಯಾಕ್ ಮೆಷಿನ್ ನಲ್ಲಿ..