ಭೀಮಕವಿ
ಭೀಮಕವಿ - ಸುಮಾರು 14ನೆಯ ಶತಮಾನದ ಉತ್ತರಾರ್ಧ. ವೀರಶೈವ ಕವಿ. ಬಸವಪುರಾಣ ಕಾವ್ಯದ ಕರ್ತೃ. ಇನ್ನೊಂದು ಕೃತಿ ಭೀಮಕವೀಶ್ವರ ರಗಳೆ. ಇವನು ಭೃಂಗಿದಂಡಕ ಎಂಬ ಗ್ರಂಥವನ್ನೂ ಬರೆದಿರುವುದಾಗಿ ಸಿದ್ಧನಂಜೇಶನ (ಸುಮಾರು 1650) ರಾಘವಾಂಕ ಚಾರಿತ್ರದಲ್ಲಿ ಉಕ್ತವಾಗಿದೆ. ಆದರೆ ಈ ಕೃತಿ ಉಪಲಬ್ಧವಿಲ್ಲ. ಪೂರ್ವಕವಿಗಳಲ್ಲಿ ಹರಿಹರ ರಾಘವಾಂಕರನ್ನು ಸ್ತುತಿಸಿದ್ದಾನೆ. ಇವನನ್ನು ಪದ್ಮಣಾಂಕ, ವಿರೂಪಾಕ್ಷಪಂಡಿತ, ಸಿದ್ಧನಂಜೇಶ, ಷಡಕ್ಷರದೇವ ಮೊದಲಾದ ವೀರಶೈವ ಕವಿಗಳು ತಮ್ಮ ಕಾವ್ಯದಲ್ಲಿ ಉಲ್ಲೇಖಿಸಿದ್ದಾರೆ. ಕವಿ ತಾನು ಉಭಯಕವಿತ್ವ ಸಮರ್ಥನೆಂದು ಹೇಳಿಕೊಂಡಿದ್ದಾನೆ.
ಗ್ರಂಥಗಳು
[ಬದಲಾಯಿಸಿ]ಬಸವಪುರಾಣ ಬಸವಣ್ಣನವರನ್ನು ಕುರಿತ ಪ್ರಪ್ರಥಮ ಪುರಾಣಕಾವ್ಯ. ಭಾಮಿನಿ ಷಟ್ಪದಿಯಲ್ಲಿ ಬರೆದ ಮೊತ್ತಮೊದಲ ಅತಿದೊಡ್ಡ ಗ್ರಂಥ. ಇದರಲ್ಲಿ 8 ಕಾಂಡಗಳೂ 63 ಸಂಧಿಗಳೂ 3,568 ಪದ್ಯಗಳೂ ಇವೆ. ಈತ ತನ್ನ ಗ್ರಂಥದಲ್ಲಿ ಕವಿಸೋಮನಾಥಂ ರಸಮೊಸರೆ ಮುನ್ನುಸಿರ್ದುದನೆ ಕನ್ನಡಿಸಿ ಪೇಳ್ವೆಂ ಎಂದು ಹೇಳಿಕೊಂಡಿರುವುದರಿಂದ ಇದು ಹದಿಮೂರನೆಯ ಶತಮಾನದ ಪ್ರಸಿದ್ಧ ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ಬಸವಪುರಾಣಮು ಎಂಬ ತೆಲುಗು ಗ್ರಂಥದ ಅನುವಾದವೆಂದು ತಿಳಿಯುತ್ತದೆ. ಕವಿ ತಾನೆಂತು ಬಸವರಾಜನ ಚರಿತ್ರೆಯನ್ನು ರಚಿಸಲಿ ಎಂದು ಶಿವಯೋಗನಿದ್ರಾಮುದ್ರಿತದೊಳಿರಲು ಕನಸಿನಲ್ಲಿ ಪಾಲ್ಕುರಿಕೆ ಸೋಮನಾಥ ಮತ್ತು ಅನಘದೇವಾರ್ಯರು ಬಂದು ನಿನ್ನಾತ್ಮದೊಳಗಲದಿರ್ದು ನಾವು ರಚಿಸುವೆವೆಸೆವ ಬಸವಕಥಾವಿಸರಮಂ ಬರೆದುಕೋ ಎಂದದ್ದರಿಂದ ಬರೆದೆನೆಂದು ಹೇಳಿಕೊಂಡಿದ್ದಾನೆ. ಅಲ್ಲದೆ ಕೊಂಡಗುಳಿ ಕೇಶಿರಾಜ, ಸಿರಿಪತಿಪಂಡಿತ, ಶಿವಲೆಂಕ ಮಂಚಣ್ಣಪಂಡಿತ, ಗುರು-ಮಲ್ಲಿಕಾರ್ಜುನಪಂಡಿತ__ಇವರ ಕೃಪೆಯೂ ಕೃತಿರಚನೆಗೆ ಕಾರಣವೆಂದಿದ್ದಾನೆ.
ಕೃತಿಗಳ ವಸ್ತು
[ಬದಲಾಯಿಸಿ]ಕಾವ್ಯದಲ್ಲಿ ಬಸವಣ್ಣನವರ ಚರಿತೆ ಹಾಗೂ ಅವರು ನಡೆಸಿದ ಪವಾಡಗಳಲ್ಲದೆ ಅನೇಕ ಶಿವಭಕ್ತರ ಕಥೆಗಳೂ ಸೇರಿಕೊಂಡಿವೆ. ಈ ಕಾರಣದಿಂದ ಗ್ರಂಥ ವಿಸ್ತಾರವಾಗಿ ಬೆಳೆದುಕೊಂಡಿದೆ. ಕವಿಪುರಾಣಕರ್ತನಾದುದರಿಂದ ಕಥೆಯ ಏಕಸೂತ್ರತೆಗಿಂತ ಶಿವಶರಣರ ಕಥೆಗಳಿಗೆ ಹೆಚ್ಚು ಅವಕಾಶ ಕಲ್ಪಿಸಿದ್ದಾನೆ. ಇದರಿಂದ ಬಸವಣ್ಣನವರ ವ್ಯಕ್ತಿಚಿತ್ರ ಸ್ಫುಟವಾಗದೆ, ಇತರ ಕಥೆಗಳೇ ಎದ್ದು ಕಾಣುತ್ತವೆ. ಇಲ್ಲಿ ಬಸವÀಣ್ಣನವರ ವ್ಯಕ್ತಿತ್ವದ ಚಿತ್ರಣಕ್ಕಿಂತ ಮುಖ್ಯವಾಗಿ ಅವರ ಪವಾಡ ಕಾರ್ಯಗಳು ವರ್ಣನಾಪ್ರಧಾನವಾಗಿವೆ. ಚಾರಿತ್ರಿಕ ಸಾಮಾಗ್ರಿ, ಕಥನಕ್ರಮ, ಪವಾಡಗಳ ವರ್ಣನೆ, ಭಕ್ತರ ಚರಿತ್ರೆ ಮೊದಲಾದವುಗಳಲ್ಲಿ ಈ ಕಾವ್ಯ ತೆಲುಗು ಬಸವ ಪುರಾಣಕ್ಕನುಗುಣವಾಗಿದ್ದರೂ ಸ್ವಶಕ್ತಿ ಕೂಡ ಸಾಕಷ್ಟು ಹೊಮ್ಮಿದೆ. ವರ್ಣನೆಗಳು ಹೃದಯಂಗಮವಾಗಿವೆ. ಕೃತಿ ಷಟ್ಪದಿಯಾದರೂ ಮಾರ್ಗೀಯ ಶೈಲಿಯ ಪ್ರಭಾವದಿಂದ ಮುಕ್ತವಾಗಿಲ್ಲ. ದೇಸಿಯಲ್ಲಿಯೂ ಮಾರ್ಗೀಯ ಲಕ್ಷಣವನ್ನು ಇರಿಸುವ ಸಂಪ್ರದಾಯಕ್ಕೆ ಈತ ಮೊದಲಿಗನಾಗಿದ್ದಾನೆ. ಬಸವಣ್ಣನವರನ್ನು ಕುರಿತು ಬರೆದವರಲ್ಲಿ ಹರಿಹರ ಮೊದಲಿಗ. ಜೊತೆಗೆ ಅವನದು ಬಸವಣ್ಣನವರಿಗೆ ಅತಿ ಸಮೀಪದ ಚಾರಿತ್ರಿಕ ಕೃತಿ. ಆದರೆ ಭೀಮಕವಿಯ ಈ ಕಾವ್ಯ ಬಸವಣ್ಣನವರಿಗೆ ಅತಿ ಸಮೀಪದ ಚಾರಿತ್ರಿಕ ಕೃತಿಯಾಗದೆ ಅವರನ್ನು ಅತಿಮಾನುಷತೆಗೆತ್ತುವ ಪುರಾಣಕಾವ್ಯವಾಯಿತು. ವಸ್ತುಕದ ಮುಂದೆ ವಿಳಾಸಮೇ ಸಾಮಾನ್ಯಮೀ ವರ್ಣಕವಿತೆಯೆಂದು ಓಸರಿಸದಿರಿ ಎಂಬ ಮಾತು ಮೇಲಿನ ಹೇಳಿಕೆಯನ್ನು ಸಮರ್ಥಿಸುತ್ತದೆ. ಈ ಕಾವ್ಯ ಮುಂದಿನ ವೀರಶೈವ ಪುರಾಣ ಕರ್ತೃಗಳಿಗೆ ಪ್ರಿಯವೂ ಆಕರವೂ ಆದ ಗ್ರಂಥವಾಯಿತು.
ಇತರ ವಿವರ
[ಬದಲಾಯಿಸಿ]ಭೀಮಕವೀಶ್ವರ ರಗಳೆ ನೂರೊಂದು ಚರಣಗಳುಳ್ಳ ಚಿಕ್ಕ ಸ್ತೋತ್ರಗ್ರಂಥ, ರಗಳೆ ಛಂದಸ್ಸಿನಲ್ಲಿ ರಚಿತವಾಗಿದೆ.