ಖಂಡ
ಖಂಡಗಳು ಎಂದರೆ ಪ್ರಪಂಚದಲ್ಲಿನ ಎಲ್ಲಾ ದೇಶಗಳನ್ನು ಪ್ರಾಂತೀಯವಾಗಿ ವಿಂಗಡಿಸಿರುವ ಭಾಗಗಳು. ಭೂಗೋಳದ ಹೊರಚಿಪ್ಪಿನ ಉಬ್ಬಾದ ಭಾಗವೇ ಭೂಖಂಡ (ಕಾಂಟಿನೆಂಟ್). ಲ್ಯಾಟಿನ್ ಭಾಷೆಯ 'ಕಾಂಟಿನಿಯರ್'(ಎಲ್ಲವನ್ನು ಒಟ್ಟಿಗೆ ಹಿಡಿದಿಡು) (continere) ಪದದಿಂದ ಆಂಗ್ಲದ 'ಕಾಂಟಿನೆಂಟ್'(continent) ಪದವು ರೂಪಗೊಂಡಿದ್ದು ಒಂದು ವಿಶಾಲ ಭೂಮಿ ಪ್ರದೇಶದ ಅರ್ಥ ಕೊಡುತ್ತದೆ.
ಭೂಖಂಡವು ಸಹಸ್ರಾರು ಮಿಲಿಯನ್ ಚದರ ಕಿಲೋಮೀಟರುಗಳಷ್ಟು ವಿಶಾಲವಾಗಿದ್ದು ತೀರದ ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರವನ್ನೂ ಮುಟ್ಟಿರುತ್ತದೆ. ಸಮೀಪದಲ್ಲಿರುವ ದ್ವೀಪಗಳನ್ನೂ ಖಂಡದ ಭಾಗಗಳೆಂದೇ ಪರಿಗಣಿಸಬೇಕು. ಉದಾಹರಣೆಗೆ ಶ್ರೀಲಂಕಾ. ಗ್ರೀನ್‍ಲೆಂಡ್ ಮತ್ತು ಬ್ರಿಟಿಷ್ ದ್ವೀಪಗಳು ಅವುಗಳಿಗೆ ಸಮೀಪದಲ್ಲಿರುವ ಖಂಡಗಳಿಗೆ ಸೇರಿದ ಪ್ರದೇಶಗಳು. ಭೂವಿಜ್ಞಾನದ ದೃಷ್ಟಿಯಲ್ಲಿ ಹೇಳುವುದಾದರೆ ಆರು ಪ್ರಮುಖ ಭೂಖಂಡಗಳಿವೆ. ಯೂರೇಷಿಯ, ಆಫ್ರಿಕಾ, ಉತ್ತರ ಅಮೇರಿಕ, ದಕ್ಷಿಣ ಅಮೇರಿಕ, ಆಸ್ಟ್ರಲೇಷಿಯ ಮತ್ತು ಅಂಟಾರ್ಕ್ಟಿಕ.[೧][೨] ಭಾರತ ಯೂರೇಷಿಯ ಖಂಡದ ಒಂದು ಭಾಗ. ಭೂಖಂಡ ಮತ್ತು ಅದರ ಪಕ್ಕದಲ್ಲಿರುವ ಸಾಗರ ಇವುಗಳ ಗಡಿರೇಖೆ ಖಂಡದ ತೀರದಿಂದ ಸಮುದ್ರದತ್ತ ಬಹುದೂರದವರೆಗೆ ಒಮ್ಮೊಮ್ಮೆ ನೂರಾರು ಮೈಲಿಗಳ ದೂರದಲ್ಲಿರುತ್ತವೆ. ಸಮುದ್ರದಲ್ಲಿ ವ್ಯಾಪಿಸಿರುವ ಖಂಡದ ಇಳಿಜಾರಾದ ಚಾಚುಪ್ರದೇಶ ಹಠಾತ್ತನೆ ಬಹು ಆಳಕ್ಕೆ ಸರಿಯುವ ಪ್ರದೇಶವೇ ಗಡಿರೇಖೆ. ಈ ಆಳ ಒಂದೇ ಸಮವಾಗಿರದೆ ಕೆಲವು ಕಡೆ ಹತ್ತಾರು ಫ್ಯಾದಂಗಳಷ್ಟು (1 ಫ್ಯಾದಂ-20') ಮತ್ತೆ ಹಲವೆಡೆ ನೂರಾರು ಫ್ಯಾದಂಗಳಷ್ಟಿರುವುದು ಕಂಡುಬಂದಿವೆ.
ವಿವಿಧ ಖಂಡ ವ್ಯವಸ್ಥೆಗಳು
[ಬದಲಾಯಿಸಿ]- ೭ ಖಂಡಗಳು
- ಏಷ್ಯಾ - ಆಫ್ರಿಕ - ಆಸ್ಟ್ರೇಲಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
- ಏಷ್ಯಾ - ಆಫ್ರಿಕ - ಓಶನಿಯಾ - ಅಂಟಾರ್ಟಿಕಾ - ಯುರೋಪ್ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
- ೬ ಖಂಡಗಳು
- ಆಫ್ರಿಕ - ಅಂಟಾರ್ಟಿಕಾ - ಓಶನಿಯಾ - ಯುರೇಶಿಯಾ - ಉತ್ತರ ಅಮೆರಿಕ - ದಕ್ಷಿಣ ಅಮೆರಿಕ
- ಆಫ್ರಿಕ - ಅಮೆರಿಕ - ಅಂಟಾರ್ಟಿಕಾ - ಏಷ್ಯಾ - ಓಶನಿಯಾ - ಯುರೋಪ್
- ೫ ಖಂಡಗಳು
- ೪ ಖಂಡಗಳು
- ಅಮೆರಿಕ - ಓಶನಿಯಾ - ಅಂಟಾರ್ಟಿಕಾ - ಯುರಾಫ್ರಿಶಿಯಾ
ಖಂಡಗಳ ಪದರಗಳು
[ಬದಲಾಯಿಸಿ]ಎಲ್ಲ ಭೂಖಂಡಗಳಲ್ಲೂ ಸರಿಸುಮಾರಾಗಿ ಒಂದೇ ಬಗೆಯ ವಿನ್ಯಾಸವನ್ನು ಗುರುತಿಸಲು ಸಾಧ್ಯವೆನಿಸಿದ್ದರೂ ಅವುಗಳ ಲಕ್ಷಣಗಳಲ್ಲಿ ಹಲವಾರು ವೈವಿಧ್ಯಗಳನ್ನು ಕಾಣಬಹುದು. ಪ್ರತಿ ಖಂಡಭಾಗದಲ್ಲೂ ಪ್ರೀ ಕೇಂಬ್ರಿಯನ್ ಶಿಲೆಗಳಿಂದಾದ ಅಡಿಪಾಯ ಉಂಟು. ಈ ಅಡಿಪಾಯದ ಶಿಲಾಸಮೂಹದಲ್ಲಿ ರೂಪಾಂತರ ಹೊಂದಿದ ಜಲಜ ಹಾಗೂ ಜ್ವಾಲಾಮುಖಿಜ ಶಿಲೆಗಳು ಪ್ರಧಾನವೆನಿಸಿದ್ದರೂ ಹಲವಾರು ಅಗ್ನಿಶಿಲೆಗಳನ್ನು, ಅದರಲ್ಲೂ ಮುಖ್ಯವಾಗಿ ಗ್ರ್ಯಾನೈಟನ್ನು, ಗುರುತಿಸಬಹುದು.[೩] ಮೊದಲಿಗೆ ಈ ಅಂತಸ್ಥ ಶಿಲೆಗಳು ನೆಲಮಟ್ಟದಿಂದ ಆಳದಲ್ಲಿ ರೂಪುಗೊಂಡಿದ್ದು ಕ್ರಮೇಣ ಅವನ್ನು ಮುಚ್ಚಿ ಮರೆಮಾಡಿದ್ದ ಭೂಕವಚದ ಸವೆತದಿಂದ ನಮಗೀಗ ಗೋಚರವಾಗಿವೆ. ತದನಂತರ ಹಲವಾರು ಪ್ರದೇಶಗಳಲ್ಲಿ ಇವುಗಳ ಮೇಲೆ, ಒಮ್ಮೊಮ್ಮೆ, ಸವೆದ ಗ್ರ್ಯಾನೈಟುಗಳ ಮೇಲೆ, ಪೇಲಿಯೋಜ಼ೋಯಿಕ್ ಮತ್ತು ಮೀಸೋಜ಼ೋಯಿಕ್ ಯುಗಗಳ ಸಮುದ್ರೀಯ ಸುಣ್ಣಶಿಲೆ, ಜೇಡುಶಿಲೆ ಹಾಗೂ ಮರುಳುಶಿಲೆಗಳ ಸ್ತರ ಶ್ರೇಣಿಗಳು ನಿಕ್ಷೇಪಗೊಂಡವು. ಹೀಗಿದ್ದೂ ಪ್ರತಿ ಭೂಖಂಡದಲ್ಲೂ ಯಾವುದಾದರೊಂದು ಪ್ರದೇಶದಲ್ಲಿ ಅಡಿಪಾಯದ ಶಿಲೆಗಳನ್ನು ವೀಕ್ಷಿಸಲು ಸಾಧ್ಯವಾಗಿದೆ. ಭಾರತದ ಅದರಲ್ಲೂ ಕರ್ನಾಟಕ ರಾಜ್ಯದ ಆರ್ಕೀಯನ್ ಶಿಲಾಸ್ತೋಮ[೪] ಮತ್ತು ಉತ್ತರ ಅಮೆರಿಕದ ಕೆನೆಡಿಯನ್ ಶಾಶ್ವತ ಭೂಖಂಡಕ್ಕೆ ಸೇರಿದ ಆರ್ಕೀಯನ್ ಶಿಲಾಸ್ತೋಮಗಳು[೫] ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ಕೆಲವು ಪ್ರದೇಶಗಳಲ್ಲಿ ಈ ಹಿಂದೆ ತಿಳಿಸಿರುವಂತೆ ಜಲಜಶಿಲೆಗಳ ಪ್ರಸ್ತರಗಳಿಂದಾದ ಪ್ರಸ್ಥಭೂಮಿಗಳಿಂದ ಇವು ಮುಚ್ಚಿಹೋಗಿವೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಿಸಿಸಿಪಿ ನದಿ ಹರಿಯುವ ವಿಶಾಲ ತಗ್ಗುಪ್ರದೇಶ ಈ ಬಗೆಯದು. ಅನೇಕ ಭೂಖಂಡಗಳಲ್ಲಿ ಮಟ್ಟಸವಾದ ಜಲಜಶಿಲಾಸ್ತರಗಳು ಭೂಚಟುವಟಿಕೆಗಳಿಗೆ ಒಳಗಾಗಿ ವಿಪರೀತವಾಗಿ ಮಡಿಕೆಬಿದ್ದು ಬೃಹತ್ ಪರ್ವತ ಸ್ತೋಮಗಳಿಗೆ ಕಾರಣವೆನಿಸಿವೆ. ಈ ಪರ್ವತಶ್ರೇಣಿಗಳಲ್ಲಿ ಹಲವಾರು ಕಡೆ ಸ್ತರಭಂಗಗಳನ್ನು ಗುರುತಿಸಲಾಗಿದ್ದು ಅಲ್ಲೆಲ್ಲ ಶಿಲಾಸ್ತರಗಳು ಮೇಲಕ್ಕೂ ಕೆಳಕ್ಕೂ ಜಾರಿವೆ.
ಪ್ರತಿ ಖಂಡದ ಅಡಿಯಲ್ಲೂ ಕಡಿಮೆ ಸಾಂದ್ರತೆಯ ಗ್ರ್ಯಾನೈಟುಗಳೇ ಅಧಿಕವಾಗಿರುವುದನ್ನು ಭೂಕಂಪನಗಳ ಪ್ರಸಾರದಿಂದ ಗುರುತಿಸಲಾಗಿದೆ. ಸಾಗರ ಭಾಗಗಳಲ್ಲಿ ಈ ಕಂಪನಗಳ ಪ್ರಸಾರ ಹೆಚ್ಚು ವೇಗವಾಗಿರುವ ಕಾರಣ ಅವುಗಳ ಅಡಿಯಲ್ಲಿ ಹೆಚ್ಚು ಸಾಂದ್ರತೆಯಿಂದ ಕೂಡಿದ ಬಸಾಲ್ಟ್ ಶಿಲೆ ಇರುವುದೆಂದು ಭಾವಿಸಲಾಗಿದೆ. ಅಲ್ಲದೆ ಖಂಡಭಾಗದ ಗ್ರ್ಯಾನೈಟ್ ಹೊರಚಿಪ್ಪು ಸಾಗರಭಾಗದ ಹೊರಚಿಪ್ಪಿಗಿಂತ ಹೆಚ್ಚು ದಪ್ಪವಾಗಿದೆಯೆಂದೂ ನಿರ್ಧರಿಸಲಾಗಿದೆ.
ಖಂಡಗಳು ಭೂಗೋಳದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು ಮೂರರಲ್ಲಿ ಒಂದರಷ್ಟು ಮತ್ತು ಒಟ್ಟು ದ್ರವ್ಯರಾಶಿಯಲ್ಲಿ 0.3 ಕ್ಕಿಂತ ಕಡಿಮೆಯಷ್ಟು ಎಂದು ನಿರ್ಧರಿಸಲಾಗಿದೆ. ಕೆಲವು ಭೂಶಕ್ತಿಗಳ ಪ್ರಭಾವದಿಂದ ಹಲವೆಡೆ ಮಟ್ಟಸವಾಗಿ ಹರಡಿದ್ದ ಜಲಜಶಿಲಾಸ್ತರಗಳು ಸವೆದು ಅಡಿಯಲ್ಲಿದ್ದ ಶಿಲೆ ಗೋಚರವಾಗಿದೆ. ಹೀಗೆ ಹೊರಗೆ ಕಂಡಿರುವ ಶಿಲೆಯಲ್ಲಿ ಬಹುಭಾಗ ಅಂದರೆ ನೂರಕ್ಕೆ 30 ರಿಂದ 90 ರಷ್ಟು ಗ್ರ್ಯಾನಿಟಿಕ್ ಸಂಯೋಜನೆಯನ್ನು ತಳೆದಿರುತ್ತದೆ. ಈ ಸಂಯೋಜನೆಯನ್ನೇ ಕಡೆಯ ಪಕ್ಷ 12 ರಿಂದ 15 ಕಿಮೀ. ಆಳದವರೆಗೂ ಗುರುತಿಸಲು ಸಾಧ್ಯವಾಗಿದೆ. ಆದರೂ ಅನೇಕ ಭೂಖಂಡಗಳು ಕಾಲುಭಾಗದಿಂದ ಅರ್ಧಭಾಗದವರೆಗೆ ವಿವಿಧ ಜಲಜಶಿಲೆಗಳು ಹಾಗೂ ಮಣ್ಣಿನ ಹೊರಗವಚದಿಂದ ಕೂಡಿರುತ್ತವೆ. ಹಲವು ಪ್ರದೇಶಗಳಲ್ಲಿ ಹೀಗಿರದೆ ಸುಮಾರು 2 x 105 ಚದರ ಕಿಮೀ. ಗಾತ್ರದ ಬೃಹತ್ ಭೂಭಾಗಗಳು ಕ್ವಾರ್ಟ್ಸೈಟ್, ಬೆಸಾಲ್ಟ್, ಕಾರ್ಬೋನೇಟ್ ಶಿಲೆ, ಅನಾರ್ಥಸೈಟ್ ಹೀಗೆ ನಾನಾ ರೀತಿಯ ಶಿಲೆಗಳಿಂದ ಕೂಡಿದ್ದು ಅವುಗಳ ಪರಸ್ಪರ ಸಂಬಂಧಗಳನ್ನು ವಿವರಿಸುವುದಂತೂ ಬಹು ಕ್ಲಿಷ್ಟ.
ಖಂಡಗಳ 12-15 ಕಿಮೀ. ಆಳದ ಭಾಗಗಳಲ್ಲಿ ಮಧ್ಯವರ್ತಿ (intermediate) ಹಾಗೂ ಬೆಸಾಲ್ಟಿಕ್ ಸಂಯೋಜನೆಯ ವಿವಿಧ ಶಿಲೆಗಳಿದ್ದು ಅವುಗಳ ಸಾಂದ್ರತೆ ಗ್ರ್ಯಾನೈಟಿಗಿಂತ ಅಧಿಕವಾಗಿದೆ ಎಂದು ಊಹೆ. ಭೂಕಂಪನಗಳ ಪ್ರಸಾರ ಹಾಗೂ ಶಿಲೆಗಳ ಪುಟಿತತೆಯ ಗುಣಗಳನ್ನು ಕುರಿತ ಪ್ರಯೋಗಗಳೇ ಇದಕ್ಕೆ ಆಧಾರ. ಭೂಭಾಗದಲ್ಲಿರುವ ವಿವಿಧ ಶಿಲೆಗಳನ್ನೂ ಅವು ಹರಡಿರುವ ರೀತಿಯನ್ನೂ ಹೀಗೆ ಕಲ್ಪಿಸಿಕೊಂಡಿದ್ದಾರೆ. ಭೂಖಂಡಗಳ ಹೊರ ಚಿಪ್ಪಿನ ತಳ ಬಹುಮಟ್ಟಿಗೆ ರೂಪಾಂತರಿತ ಬೆಸಾಲ್ಟ್‌ನಿದಾದುದೆಂದು ಊಹಿಸಿದ್ದರೂ ಅದರೊಡನೆ ಅಗ್ನಿಶಿಲೆಗಳೂ ಇತರ ರೂಪಾಂತರಿತ ಶಿಲೆಗಳೂ ಇರಲು ಸಾಧ್ಯ.
ಖಂಡಗಳು ರೂಪಗೊಂಡ ಬಗೆ
[ಬದಲಾಯಿಸಿ]ಸುಮಾರು 4,000,000,000 ವರ್ಷಗಳ ಹಿಂದೆ ಜನಿಸಿರಬಹುದಾದ ಭೂಗ್ರಹ ಹಲವಾರು ಭೌತ ಹಾಗೂ ರಾಸಾಯನಿಕ ಕ್ರಿಯೆಗಳಿಗೆ ಒಳಗಾಗುವುದರ ಮೂಲಕ ತಿರುಳು, ಹೊದಿಕೆ, ಚಿಪ್ಪು, ಜಲ ಹಾಗೂ ವಾಯುಮಂಡಲಗಳಾಗಿ ರೂಪುಗೊಂಡ ಕಾಲದಲ್ಲೇ ಭೂಖಂಡಗಳು ನಿರ್ದಿಷ್ಟ ರೂಪವನ್ನು ತಳೆದವು. ಆಗ ತಳೆದ ರೂಪ ಭೂಕಾಲಮಾನದುದ್ದಕ್ಕೂ ಏಕರೀತಿಯಾಗಿರಲಿಲ್ಲ. ಈ ಖಂಡರೂಪಣೆ ಕೆಲವು ಭೂಯುಗಗಳಲ್ಲಿ ತೀವ್ರಗತಿಯಲ್ಲೂ ಮತ್ತೆ ಕೆಲವು ವೇಳೆ ಬಹು ಮಂದಗತಿಯಲ್ಲೂ ಉಂಟಾದ ದಾಖಲೆಗಳಿವೆ. ಪ್ರಸಕ್ತ ದೊರೆತಿರುವ ದಾಖಲೆಗಳ ಆಧಾರದ ಮೇಲೆ ಸುಮಾರು 2,700,000,000 ವರ್ಷಗಳ ಹಿಂದೆಯೇ ಖಂಡಗಳು ಸಾಕಷ್ಟು ದೊಡ್ಡವಾಗಿದ್ದವು. ಇವುಗಳ ರೂಪಣೆಗೆ ಸಂಬಂಧಿಸಿದಂತೆ ಸುಮಾರು ಆರು ಪ್ರಧಾನ ಘಟ್ಟಗಳನ್ನು ಊಹಿಸಲಾಗಿದೆ. ಇವುಗಳಿಗೆಲ್ಲ ವಿಕರಣಪಟುತ್ವದಿಂದ (ರೇಡಿಯೊ ಆಕ್ಟಿವಿಟಿ) ಉಂಟಾಗುವ ಉಷ್ಣದ ಶೇಖರಣೆ, ಆ ಮೂಲಕ ಉಂಟಾಗುವ ಪೂರ್ಣವಾದ ಅಥವಾ ಭಾಗಶಃ ತಲೆದೋರುವ ಭೂತಿರುಳು ಹಾಗೂ ಹೊದಿಕೆಯ ದ್ರವೀಕರಣ ಇವೇ ಮೂಲ. ಆಳದಲ್ಲಿ ಹೀಗೆ ಜನಿಸಿದ ಮ್ಯಾಗ್ಮ ಅಥವಾ ಮಾತೃಶಿಲಾದ್ರವ ಮೇಲ್ಭಾಗಕ್ಕೆ ಪ್ರವಹಿಸುವುದು ಸ್ವಾಭಾವಿಕ. ಪ್ರವಹಿಸುವಾಗ ಅದರಲ್ಲಿ ಉಂಟಾಗುವ ಭೌತ ಹಾಗೂ ರಾಸಾಯನಿಕ ಬದಲಾವಣೆಗಳ ಕಾರಣ ಸಂಯೋಜನೆಯಲ್ಲೂ ಸಾಕಷ್ಟು ಬದಲಾವಣೆಗಳುಂಟಾಗಿ ವಿವಿಧ ಶಿಲೆಗಳ ಉತ್ಪತ್ತಿಯನ್ನು ಕಾಣಬಹುದು. ಒಮ್ಮೊಮ್ಮೆ ಸಾಕಷ್ಟು ಒತ್ತಡವಿದ್ದು ಅನುಕೂಲಕರವಾದ ಸನ್ನಿವೇಶದಲ್ಲಿ ಮ್ಯಾಗ್ಮ ಹೊರಚಿಪ್ಪಿನ ದ್ವಾರಗಳ ಮೂಲಕ ಹೊರಚಿಮ್ಮಿ ಪ್ರವಹಿಸುತ್ತದೆ. ಆಳದಿಂದ ಮೇಲುಮೇಲಕ್ಕೆ ಏರುತ್ತಿರುವಾಗ ಮ್ಯಾಗ್ಮ ಹಾಗೂ ಅದರ ಅಕ್ಕಪಕ್ಕದಲ್ಲಿರುವ ಮತ್ತು ಅದರ ಉಷ್ಣದಿಂದಲೇ ಕರಗಿ ಮೆತ್ತಗಾದ ಭೂಭಾಗಗಳು, ಮುಖ್ಯವಾಗಿ ಶಿಲೆಗಳು, ಕೋಶ ಸ್ವರೂಪಗಳನ್ನು ತಳೆದು ನೆಲಮಟ್ಟವನ್ನು ಮುಟ್ಟಿ ಅಲ್ಲಿದ್ದ ಖಂಡಭಾಗಗಳನ್ನೂ, ಸಾಗರ ಭಾಗಗಳನ್ನೂ ತಮ್ಮೊಡನೆ ಬೇರೆಡೆಗೆ ಒಯ್ಯುತ್ತವೆ. ಗ್ರಾನಿಟಿಕ್ ಸಂಯೋಜನೆಯಿಂದ ಕೂಡಿದ ಮ್ಯಾಗ್ಮಗಳು ಹೊರಬರುವ ಭೂಭಾಗಗಳು ಅಂಕುಡೊಂಕಾಗಿರುವುವಲ್ಲದೆ ದಪ್ಪವಾದ ಜಲಜಶಿಲಾಶ್ರೇಣಿಗಳಿಂದಾದ ಅಸ್ಥಿರ ಪ್ರದೇಶಗಳಾಗಿವೆ. ಇವೇ ಭೂ ಅಭಿನತಿಗಳು (ಜಿಯೋಸಿಂಕ್ಲೈನ್ಸ್).[೬][೭] ಭೂಖಂಡಗಳಲ್ಲಿ ಈ ಬಗೆಯ ಹಲವಾರು ಬೃಹತ್ ಇಳುಕಲುಗಳಿದ್ದು ಅವನ್ನು ಅಗ್ನಿಶಿಲೆಗಳೂ ಅವುಗಳಿಗೆ ಸಂಬಂಧಿಸಿದ ರೂಪಾಂತರ ಕ್ರಿಯೆಗಳೂ ಬೆಸೆದಿರುವುದುಂಟು. ಇದೇ ರೀತಿ ಸಾಗರ ತಳದಲ್ಲಿರುವ ಏಣುಗಳು (ರಿಡ್ಜಸ್) ಮತ್ತು ದಿಬ್ಬಗಳ (ರೈಸಸ್) ಮೂಲಕ ಬೆಸಾಲ್ಟಿಕ್ ಮ್ಯಾಗ್ಮ ಹೊರಬಂದು ಎರಡೂ ಕಡೆಯೂ ಹರಡುತ್ತ ಹೋಗುತ್ತದೆ. ಅಲ್ಲದೆ ಈ ಬೆಸಾಲ್ಟಿಕ್ ಶಿಲಾಪ್ರವಾಹ ಭೂಖಂಡಗಳ ಹೊರ ಅಂಚುಗಳಲ್ಲಿ ಮತ್ತು ದ್ವೀಪಸ್ತೋಮಗಳ ಇಳುಕಲುಗಳಲ್ಲಿ ಕುಸಿಯುತ್ತದೆ. ಹೀಗಾಗುವುದರಿಂದ ಖಂಡಗಳ ಬೆಳೆವಣಿಗೆ ಹಾಗೂ ಅಲೆತಗಳುಂಟಾಗುತ್ತವೆ.
ಹೊರಚಾಚಿರುವ ಖಂಡಗಳೂ, 2,000 ಮೀಟರುಗಳಿಗಿಂತ ಕಡಿಮೆ ಆಳದ ಜಲಭಾಗದಿಂದ ಆವೃತವಾಗಿರುವ ಭೂಚಿಪ್ಪಿನ ದಪ್ಪವೂ ಏಕರೀತಿಯಾಗಿರದೆ 20-60 ಕಿಮೀ.ಗಳ ವರೆಗಿರುವುದಾದರೂ ಅದರ ಸರಾಸರಿ ದಪ್ಪ ಸುಮಾರು 35ಕಿ.ಮೀ.ಗಳೆಂದು ಧಾರಾಳವಾಗಿ ಹೇಳಬಹುದು. ಈ ದಪ್ಪ ಸಹಜವಾಗಿ ಆ ಭೂಪ್ರದೇಶದ ಮೇಲ್ಮೈ ಲಕ್ಷಣದಲ್ಲಿ ಪ್ರತಿಬಿಂಬಿತವಾಗಿರುವುದನ್ನು ಕಾಣಲು ಸಾಧ್ಯ. ಖಂಡಪ್ರದೇಶಗಳ ಭೂಅಭಿನತಿಗಳ ಹಾಗೂ ಭೂಮಧ್ಯ ಸಮುದ್ರಗಳ ಚಿಪ್ಪು ಸಾಮಾನ್ಯವಾಗಿ ತೆಳುವಾಗಿರುತ್ತದೆ. ಅಲ್ಲದೆ ವಯಸ್ಸಿನಲ್ಲಿ ಕಿರಿಯವೆನಿಸಿದ ಪರ್ವತಶ್ರೇಣಿಗಳಾದ ಹಿಮಾಲಯ, ಸಿಯೆರ ನೆವ್ಯಾಡ ಮತ್ತು ಆಂಡೀಸ್ ಮುಂತಾದವು ತಮ್ಮ ತಳಗಳನ್ನು (ಬೇರುಗಳನ್ನು) ಭೂಗೋಳದ ಬಹು ಆಳದವರೆಗೆ ಅಂದರೆ ಹೊದಿಕೆಯ (ಮ್ಯಾಂಟಲ್) ತನಕವೂ ಮುಟ್ಟಿಸಿವೆ.
ಭೂಮಿಯ ಆಳದಲ್ಲಿ ಪುಟಿತತ್ವ ತರಂಗಗಳ ಪ್ರವಾಹವೇಗ ಹಠಾತ್ತನೆ ಏರುಪೇರುಗಳನ್ನು ತೋರುತ್ತದೆ. ಈ ಆಧಾರದ ಮೇಲೆ ಚಿಪ್ಪಿನ (ಕ್ರಸ್ಟ್) ತಳವನ್ನು ಗುರುತಿಸಬಹುದು. ಇದನ್ನು ಮೊತ್ತಮೊದಲು ಖ್ಯಾತ ಭೂಭೌತವಿಜ್ಞಾನಿ ಮೋಹೋರೊವಿಜ಼ಿಕ್ ಗುರುತಿಸಿದ. ಹೀಗಾಗಿ ಈ ಸೀಮಾರೇಖೆಯನ್ನು ಮೋಹೋವಿಚ್ಛಿನ್ನತೆ ಅಥವಾ ಮೋಹೋರೇಖೆ ಅಥವಾ ಮೋಹೋ ಎಂದು ಹೆಸರಿಸಿದ್ದಾರೆ.[೮] ಈ ರೇಖೆಯ ಮೇಲ್ಭಾಗದಲ್ಲಿ (ಅಂದರೆ ಚಿಪ್ಪಿನ ವಲಯದಲ್ಲಿ) Vt ರೇಖಾಂಶದ ಮತ್ತು Vs ತುಯ್ತದ ತರಂಗ ಪ್ರವಾಹವೇಗ ಅನುಕ್ರಮವಾಗಿ ಪ್ರತಿ ಸೆಕೆಂಡಿಗೆ 7 ಮತ್ತು 3.5 ಕಿಮೀ. ಗಳಿದ್ದು, ತಳಭಾಗದಲ್ಲಿ ಅಂದರೆ ಹೊದಿಕೆಯ ಪ್ರದೇಶದಲ್ಲಿ 8 ಮತ್ತು 4.5 ಕಿಮೀ.ಗಳಷ್ಟಿರುತ್ತದೆ.[೯] ಹೀಗೆ ಪ್ರವಾಹವೇಗ ಹಠಾತ್ತನೆ ಹೆಚ್ಚುವುದರ ಆಧಾರದ ಮೇಲೆ ಹೊದಿಕೆಯ ವಲಯದ ವಸ್ತು ಹೆಚ್ಚು ಭಾರವಾಗಿದ್ದು ಅಲ್ಲಿ ಮೆಗ್ನೀಷಿಯಂ ಸಿಲಿಕೇಟುಗಳಿಂದಾದ ಶಿಲೆಗಳಿವೆ ಎಂದು ಊಹಿಸಿದ್ದಾರೆ. ಈ ಬಗೆಯ ಅತಿಮ್ಯಾಫಿಕ್ (ಅಲ್‌ಟ್ರಾಮ್ಯಾಫಿಕ್) ಶಿಲೆಗಳಲ್ಲಿ ಪೆರಿಡೊಟೈಟುಗಳು ಹೇರಳವಾಗಿದ್ದು ಆ ವಲಯದ ಬಹು ಭಾಗವನ್ನು ಆವರಿಸಿವೆ.[೧೦]
ಭೂಖಂಡಗಳ ಮತ್ತು ಸಾಗರಭಾಗಗಳ ಹೊರ ಚಿಪ್ಪುಗಳ ಹಾಗೂ ಅವುಗಳ ತಳದ ಹೊದಿಕೆಯ ನಡುವಣ ಗಡಿಪ್ರದೇಶ ಕೇವಲ ಭೂಕಂಪವಿಚ್ಛಿನ್ನ ಜಾಡಾಗಿರದೆ ಸಮತೋಲದ ಮಟ್ಟವೂ (ಲೆವೆಲ್ ಆಫ್ ಕಾಂಪೆನ್ಸೇಷನ್) ಆಗಿದೆ. ಹೊದಿಕೆಯ ಮೇಲೆ ಚಿಪ್ಪು ಒಂದು ತೆರನಾದ ಸಮತೋಲ ಸ್ಥಿತಿಯಲ್ಲಿದ್ದು ತೇಲುತ್ತಿರುವ ಹಾಗೆ ಭಾವಿಸಲಾಗಿದೆ-ನೀರಿನಲ್ಲಿ ನೀರ್ಗಲ್ಲಿನ ಛಿಧ್ರಗಳು ತೇಲುವಂತೆ. ಚಿಪ್ಪು ದಪ್ಪವಾಗಿರುವೆಡೆ ಅಂದರೆ ಖಂಡಭಾಗಗಳು ಕಡಿಮೆ ಸಾಂದ್ರತೆಯನ್ನುಳ್ಳಲ್ಲಿ (ಸುಮಾರು 2.65) ಅದು ಗ್ರ್ಯಾನೈಟ್ ಮತ್ತು ಜಲಜಶಿಲಾಸ್ತರಗಳಿಂದ ಕೂಡಿವೆ. ಅಲ್ಲದೆ ಹೆಚ್ಚಿನ ಸವೆತಕ್ಕೂ ಒಳಗಾಗಿದೆ. ಆದರೆ ಸಾಗರಭಾಗಗಳ ಚಿಪ್ಪು ತೆಳುವಾಗಿದ್ದು ಅಧಿಕಸಾಂದ್ರತೆಯ[೧೧][೧೨] (ಸುಮಾರು 2.90) ಬೆಸಾಲ್ಟ್ ಮೊದಲಾದ ಶಿಲೆಗಳಿಂದಾಗಿದೆ.[೧೩] ಈ ಬಗೆಯ ಏರು ತಗ್ಗುಗಳು ಸಮತೋಲವನ್ನು ಪರಸ್ಪರ ಏರ್ಪಡಿಸಿಕೊಂಡಿವೆ ಎನ್ನಲೂ ಬಹುದು. ಈ ಸಮತೋಲ ಆಗಾಗ ಏರು ಪೇರಾಗುವುದುಂಟು. ಇದರ ನಿಮಿತ್ತ ತೀವ್ರ ಭೂಚಟುವಟಿಕೆಗಳೂ ತಲೆದೋರಬಹುದು. ಹೀಗಾದ ಸಮಯದಲ್ಲಿ ಅಲ್ಲಿದ್ದ ಪರ್ವತಗಳು ಹಾಗೂ ಪ್ರಸ್ಥಭೂಮಿಗಳು ಮೇಲುಮೇಲಕ್ಕೆ ಏರುವುದರ ಮೂಲಕ ಸಮತೋಲದ ಏರುಪೇರು ಸರಿದೂಗುತ್ತದೆ. ಕೆಲವೆಡೆ ಖಂಡಭಾಗಗಳು 8 ಕಿ.ಮೀ. ಎತ್ತರವನ್ನು ಮುಟ್ಟಿರುವುದನ್ನೂ ಕಾಣಲು ಸಾಧ್ಯ. ಈ ಕ್ರಿಯೆಗಳಿಂದ ಖಂಡಗಳು ತಮ್ಮ ಅಡಿಭಾಗಗಳಲ್ಲಿ ಹಾಗೂ ಅಕ್ಕಪಕ್ಕಗಳಲ್ಲಿ ಹೆಚ್ಚು ಹೆಚ್ಚು ಶಿಲಾವಸ್ತುವನ್ನು ಪಡೆಯುವುದರ ಮೂಲಕ ಬೆಳೆಯುತ್ತಿವೆ ಎನ್ನಲಾಗಿದೆ. ಭಾರತದ ಹಿಮಾಲಯ ಶ್ರೇಣಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಇದರ ಬೆಳೆವಣಿಗೆಯಿಂದಾಗಿ ಸಮೀಪದ ಗಂಗಾಬಯಲು ಪ್ರದೇಶ (gangetic plain) ಹಾಗೂ ಅಸ್ಸಾಂ, ಕಾಶ್ಮೀರ ಮುಂತಾದೆಡೆಗಳಲ್ಲಿ ಭೂಕಂಪಗಳು ಆಗಾಗ ತಲೆದೋರುತ್ತಿವೆ.
ಭೂಖಂಡಗಳು ಕಡೆಯಪಕ್ಷ 3.5 ಇಯಾನುಗಳ (1 ಇಯಾನ್-109 ವರ್ಷಗಳು) ಹಿಂದೆ ರೂಪುಗೊಂಡುವೆಂದು ಭಾವಿಸಲಾಗಿದೆ. ಆ ವೇಳೆಯಲ್ಲಿ ಬಲುಮಟ್ಟಿಗೆ ಇಂದಿನ ಭೂಸ್ವರೂಪ (ನೆಲಜಲಹಂಚಿಕೆ ಇತ್ಯಾದಿ) ಉಂಟಾಯಿತು; ದ್ವೀಪಸ್ತೋಮ ಚಾಪಗಳು, ಸಮುದ್ರ ಇಳುಕಲುಗಳು, ಸಾಗರೀಯ ಚಿಪ್ಪು, ಉಬ್ಬುಗಳು ಹಾಗೂ ಏಣುಗಳೂ ರೂಪುಗೊಂಡವು. ಖಂಡರೂಪಣೆಯಲ್ಲಿ ಇವು ವಿಶಿಷ್ಟ ಪಾತ್ರವನ್ನು ವಹಿಸುವ ಕಾರಣ ಇವನ್ನು ಸ್ಥೂಲವಾಗಿ ವಿವರಿಸಲಾಗಿದೆ.
ಸಾಗರೀಯ ಚಿಪ್ಪು
[ಬದಲಾಯಿಸಿ]ಭೂಗೋಳದ ಅರ್ಧಭಾಗವನ್ನೂ ಮೀರಿಸಿ ವ್ಯಾಪಿಸಿರುವ ಈ ಹೊರಚಿಪ್ಪು ಕೇವಲ 5-7 ಕಿಮೀ. ಮಂದವಾಗಿದ್ದು 4,000 ಮೀಟರುಗಳನ್ನು ಮೀರಿದ ನೀರಿನ ಆಳದಲ್ಲಿದೆ. ಇದು ಬಲುಮಟ್ಟಿಗೆ ವಿವಿಧ ರೂಪಾಂತರಗಳಿಗೆ ಒಳಗಾಗಿರುವ ಬೆಸಾಲ್ಟ್ ಮತ್ತು ಕೊಂಚಮಟ್ಟಿಗೆ ಜಲೀಕರಣಗೊಂಡ ಪೆರಿಡೊಟೈಟಿನಿಂದ (ಸರ್ಪೆಂಟೀಸ್) ಆದುದು. ಬೆಸಾಲ್ಟ್ ಮೇಲೆ ಇದಕ್ಕಿಂತ ಕಿರಿಯ ವಯಸ್ಸಿನ ರಾಡಿ ಹಾಗೂ ಸುಣ್ಣಯುಕ್ತ ನುಸಿಮಣ್ಣು (ಕೆಲ್ಕೇರಿಯಸ್ ಊಜ಼ಸ್) ತೆಳುವಾಗಿ ಹರಡಿದೆ. ಈ ಹೊದಿಕೆಯ ದಪ್ಪ ಸುಮಾರು 1 ಕಿಮೀ. ಹಲವೆಡೆ ಸಮುದ್ರಾಂತರ್ಗತ ಲಾವಾಗಳು ಮತ್ತು ಭಗ್ನಾವಶೇಷಪ್ರವಾಹಗಳು ಹೆಣೆದುಕೊಂಡಿರುವುದನ್ನು ಗುರುತಿಸಲಾಗಿದೆ.
ಏಣುಗಳು ಮತ್ತು ಉಬ್ಬುಗಳು
[ಬದಲಾಯಿಸಿ]ಇವು ಬಲು ವಿಶಾಲವಾದ ಸಮುದ್ರಾಂತರ್ಗತ ಪರ್ವತಶ್ರೇಣಿಗಳು. ಇವುಗಳಲ್ಲಿ ಅಲ್ಲಲ್ಲೇ ಅಸಂಖ್ಯಾತ ಜ್ವಾಲಾಮುಖಿಗಳಿವೆ. ಭೂಗೋಳವನ್ನೇ ಸುತ್ತುವರಿದಿರುವ ಈ ಶ್ರೇಣಿ ಬಹುಮಟ್ಟಿಗೆ ಸಾಗರಗಳ ಮಧ್ಯಭಾಗದಲ್ಲಿದ್ದು ಸುಮಾರು 60,000 ಕಿಮೀ. ದೂರದ ತನಕ ವ್ಯಾಪಿಸಿದೆ. ಈ ವರ್ಗದ ಪೆಸಿಫಿಕ್ ಸಾಗರದ ಪೂರ್ವಪೆಸಿಫಿಕ್ ಉಬ್ಬು ಕೇಂದ್ರ ಮತ್ತು ಉತ್ತರ ಅಮೆರಿಕದ ಪಶ್ಚಿಮ ಏಣಿನೊಡನೆ ಸೇರಿಕೊಳ್ಳುತ್ತದೆ. ಇದೇ ರೀತಿ ಉತ್ತರ ಅಮೆರಿಕದ ಪಶ್ಚಿಮ ಭಾಗದ ಬೇಸಿನ್ ಮತ್ತು ರೇಂಜ್ ಪ್ರದೇಶಗಳು ಬಹುಶಃ ಖಂಡದ ತಳಭಾಗದಲ್ಲಿ ಉತ್ತರದತ್ತ ವ್ಯಾಪಿಸಿರುವ ಉಬ್ಬಿನೊಡನೆ ನಿಕಟಸಂಬಂಧವನ್ನು ತಳೆದಿವೆ.
ದ್ವೀಪಸ್ತೋಮ ಚಾಪಗಳು
[ಬದಲಾಯಿಸಿ]ಇವು ಹಾಗೂ ಕೆಲವು ಭೂಖಂಡ ತೀರಪ್ರದೇಶಗಳು ಸಾಗರಗಳ ಹಾಗೂ ಖಂಡಗಳ ಹೊರಚಿಪ್ಪುಗಳ ಮಧ್ಯವರ್ತಿ ಲಕ್ಷಣಗಳನ್ನು ತಳೆದಿವೆ. ಜಪಾನಿನ ಉತ್ತರಕ್ಕಿರುವ ಕ್ಯುರೈಲ್ ದ್ವೀಪಸ್ತೋಮ ಹಾಗೂ ಅಲಾಸ್ಕಾದ ನೈಋತ್ಯಕ್ಕಿರುವ ಅಲ್ಯೂಷಿಯನ್ ದ್ವೀಪಸ್ತೋಮಗಳನ್ನು ವಿಶಿಷ್ಟ ರೀತಿಯಲ್ಲಿ ಮಂದಗಟ್ಟಿರುವ ಸಾಗರೀಯ ಚಿಪ್ಪಿನ ಬಿರಿತಗಳಲ್ಲಿರುವ ಜ್ವಾಲಾಮುಖಿ ಸ್ತೋಮಗಳೆಂದು ಪರಿಗಣಿಸಲಾಗಿದೆ.[೧೪] ಇವುಗಳ ಜಾಡು ಕ್ರಮೇಣ ಭಾಗಶಃ ಅಥವಾ ಪೂರ್ಣ ವಿಕಾಸಗೊಂಡ ದ್ವೀಪಸ್ತೋಮ ಚಾಪಗಳಾದ (island arcs) ಕಾಮಚಾಟ್ಕಾ ಹಾಗೂ ನೈಋತ್ಯ ಅಲಾಸ್ಕದ ಪೂರ್ವ ಅಲ್ಯೂಷಿಯನ್ನ ಜಾಡುಗಳೊಡನೆ ವಿಲೀನಗೊಳ್ಳುತ್ತದೆ. ಇವು ಹಾಗೂ ಇನ್ನಿತರ ಅರ್ಧಚಂದ್ರಾಕೃತಿಯ ಜ್ವಾಲಾಮುಖಿ ಜಾಡುಗಳು ಭೂಖಂಡಗಳೊಳಗೆ ಅಥವಾ ಅವುಗಳ ಹೊರ ಅಂಚುಗಳಲ್ಲಿರುವ ಕಿರಿಯ ಪರ್ವತಶ್ರೇಣಿಗಳೊಡನೆ ಐಕ್ಯ ಹೊಂದುತ್ತವೆ. ಕೆನಡದ ಕೋಸ್ಟ್ ರೇಂಜ್, ದಕ್ಷಿಣ ಅಮೆರಿಕದ ಆಂಡಿಸ್, ಅಂಟಾರ್ಕ್ಟಿಕ, ನ್ಯೂಜ಼ೀಲೆಂಡ್, ಆಸ್ಟ್ರೇಲಿಯ, ಇಂಡೋನೇಷ್ಯಗಳ ಪರ್ವತಮಯ ತೀರಪ್ರದೇಶಗಳು ಹಾಗೂ ಭಾರತದ ಹಿಮಾಲಯ ಪರ್ವತಶ್ರೇಣಿಗಳು ಇದಕ್ಕೆ ಉತ್ತಮ ಉದಾಹರಣೆಗಳು.
ಖಂಡಗಳ ಬೆಳೆವಣಿಗೆಯ ದೃಷ್ಟಿಯಿಂದ ವೀಕ್ಷಿಸುವುದಾದರೆ ದ್ವೀಪಸ್ತೋಮ ಚಾಪಗಳು ವಿಶಿಷ್ಟ ಪ್ರಾಮುಖ್ಯ ಪಡೆದಿದ್ದು ಅವುಗಳ ಬೆಳೆವಣಿಗೆಯಲ್ಲಿ ಒಂದು ವಿಶಿಷ್ಟ ಹಂತವನ್ನೂ ಸೂಚಿಸುತ್ತವೆ.[೧೫] ಭೂಚಿಪ್ಪಿನೊಡನೆ ಹೋಲಿಸಿದಲ್ಲಿ ಇವು ದಪ್ಪ ಹಾಗೂ ವಯಸ್ಸಿನಲ್ಲಿ ಮಧ್ಯವರ್ತಿ ಲಕ್ಷಣಗಳನ್ನು ಪಡೆದಿರುವುದೇ ಅಲ್ಲದೆ ಸಾಗರೀಯ ಹಾಗೂ ಭೂಖಂಡಭಾಗಗಳ ಚಿಪ್ಪುಗಳಲ್ಲಿರುವ ಶಿಲೆಗಳಿಂದಲೂ ಕೂಡಿವೆ. ಉದಾಹರಣೆಗೆ ಇವುಗಳಲ್ಲಿರುವ ಆಂಡಿಸೈಟ್ ಹಾಗೂ ಗ್ರೇವಾಕ್ ಮರಳುಶಿಲೆಗಳನ್ನು ಸಾಗರೀಯ ಅಥವಾ ಖಂಡಪ್ರದೇಶಗಳ ವಿಶಿಷ್ಟ ಲಕ್ಷಣಗಳೆನ್ನಲಾಗುವುದಿಲ್ಲ.[೧೬][೧೭]
ಅನೇಕ ದ್ವೀಪಸ್ತೋಮ ಚಾಪಗಳಲ್ಲಿ ಮತ್ತು ಪೆಸಿಫಿಕ್ ಸಾಗರವನ್ನು ಸುತ್ತುವರಿದಿರುವ ಭೂತೀರ ಪ್ರದೇಶಗಳಲ್ಲಿ ಇದೇ ರೀತಿಯ ಮಧ್ಯವರ್ತಿ ಲಕ್ಷಣಗಳನ್ನು ಗುರುತಿಸಲಾಗಿದೆ. ಬಹುಶಃ ಇವು ಭೂಖಂಡಗಳ ಸಾಗರೀಕರಣವನ್ನೋ, ಸಾಗರ ಭಾಗಗಳ ಖಂಡೀಕರಣವನ್ನೋ ಸೂಚಿಸುತ್ತವೆ. ಒಟ್ಟಿನಲ್ಲಿ ಈ ಎರಡೂ ಕ್ರಿಯೆಗಳು ಭೂಚಿಪ್ಪಿನ ರೂಪಣೆಯಲ್ಲಿ ಅರ್ಥಾತ್ ಖಂಡರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಖಂಡಪ್ರದೇಶಗಳಲ್ಲಿ ಅಂತರ್ಗತವಾಗಿರುವ ಸಾಗರೀಯ ಚಿಪ್ಪಿನ ಛಿದ್ರಭಾಗಗಳ ಹಾಗೂ ದ್ವೀಪಸ್ತೋಮ ಚಾಪಗಳ ಆಧಾರದ ಮೇಲೆ ಸಾಗರ ಭಾಗಗಳನ್ನು ಉಪಯೋಗಿಸಿಕೊಂಡೇ ಭೂಖಂಡಗಳು ಬೆಳೆಯುತ್ತಿವೆ ಎಂದು ಧಾರಾಳವಾಗಿ ಹೇಳಬಹುದು. ಇವೆಲ್ಲಕ್ಕೂ ಸದಾ ವಿಕಾಸಗೊಳ್ಳುತ್ತಿರುವ ಭೂಮಿಯ ಹೊದಿಕೆಯೇ ಮೂಲ.
ಸಮುದ್ರತಳದ ಹರಡುವಿಕೆ
[ಬದಲಾಯಿಸಿ]ಸಮುದ್ರತಳದ ಹರಡುವಿಕೆಯೂ ಈ ದಿಸೆಯಲ್ಲಿ ಒಂದು ಮುಖ್ಯ ಕ್ರಿಯೆ. ಸಾಗರತಳಗಳಲ್ಲಿ ಜಲಜಶಿಲಾ ನಿಕ್ಷೇಪಗಳ ಕೊರತೆ ಹಾಗೂ ಹಳೆಯ ಅಂದರೆ 150,000,000 ವರ್ಷಗಳಿಗಿಂತ ಹೆಚ್ಚು ವಯಸ್ಸಾದ ಸಾಗರೀಯ ಶಿಲೆಗಳು ಇಲ್ಲದಿರುವಿಕೆ, ಇವು ಪ್ರಸಕ್ತ ಸಾಗರಭಾಗಗಳ ಹೊರಚಿಪ್ಪು ಭೂ ಚರಿತ್ರೆಯ ಇತ್ತೀಚಿನ ಯುಗಗಳಲ್ಲಿ ರೂಪುಗೊಂಡಿತೆಂದು ಸೂಚಿಸುತ್ತವೆ. ಸಾಗರತಳದ ಕಾಂತ ಅಸಾಂಗತ್ಯಗಳು (ಮ್ಯಾಗ್ನೆಟಿಕ್ ಅನಾಮಲೀಸ್) ನಿರ್ದಿಷ್ಟ ಜಾಡುಗಳಿಗೆ ಸೀಮಿತವಾಗಿದ್ದು ಸಾಗರ ಮಧ್ಯದ ಬೃಹತ್ ಏಣುಗಳಿಗೆ ಸಮಾಂತರವಾಗಿವೆ. ಇವುಗಳಲ್ಲಿರುವ ಬಿರುಕುಗಳ ಮೂಲಕ ಬೆಸಾಲ್ಟ್ ಮಹಾಪ್ರವಾಹಗಳು ಹೊರ ಹೊಮ್ಮುತ್ತಿರುವುದನ್ನೂ ಗುರುತಿಸಿದ್ದಾರೆ. ಸುಮಾರು ಪ್ರತಿ 500,000 ರಿಂದ 2,000,000 ವರ್ಷಗಳಿಗೊಮ್ಮೆ ಭೂಗ್ರಹದ ಕಾಂತದ್ವಿಧ್ರುವ (ಮ್ಯಾಗ್ನೆಟಿಕ್ ಡೈಪೋಲ್) ತಿರುವುಮುರುವಾಗುತ್ತದೆ. ಹೀಗಾದುದನ್ನು ಒಂದು ರೀತಿಯಲ್ಲಿ ಹೊರಹೊಮ್ಮುತ್ತಿರುವ ಬೆಸಾಲ್ಟುಗಳ ಕಾಂತ ಲಕ್ಷಣಗಳು ವ್ಯಕ್ತಪಡಿಸುತ್ತದೆ. ಏಣುಗಳ ಎರಡು ಕಡೆಯೂ ಕಾಂತ ಮಾದರಿಗಳು ಏಕರೀತಿಯಾಗಿದ್ದು ಬೃಹತ್ ಜಾಡುಗಳಲ್ಲಿವೆ. ಏಣಿನಿಂದ ದೂರ ಸರಿದಂತೆ ಬೆಸಾಲ್ಟುಗಳು ವಯಸ್ಸಿನಲ್ಲೂ ಹೆಚ್ಚುವ ಕಾರಣ ಸಮುದ್ರತಳಗಳು ಏಣಿನ ಎರಡೂ ದಿಕ್ಕುಗಳಲ್ಲಿ ಹರಡುತ್ತಿವೆ ಎಂದು ಭಾವಿಸಲಾಗಿದೆ. ಹೀಗೆ ಇವು ಭೂಖಂಡಗಳತ್ತ ಸರಿಯಲು ಭೂಹೊದಿಕೆಯಲ್ಲಿರುವ ನಯನಕೋಶಗಳು (ಕನ್ವೆಕ್ಟಿವ್ ಸೆಲ್ಸ್) ಸಹಾಯಕವಾಗಿವೆ. ಇಂದಿಗೂ ಹೀಗೆ ಖಂಡಭಾಗಗಳನ್ನು ಸೇರಿದ ಸಾಗರಜನ್ಯ ಬೆಸಾಲ್ಟುಗಳನ್ನು ಗುರುತಿಸಬಹುದು. ಇವುಗಳ ಸರಿತದ ವೇಗ ವರ್ಷವೊಂದಕ್ಕೆ 0.2 ರಿಂದ 10 ಸೆಂಮೀ.ಗಳು. ಖಂಡಗಳ ಅಲೆತ ಇದಕ್ಕೆ ಪೂರಕವಾದ ಕ್ರಿಯೆಯಾಗಿದೆ.
ಪರ್ವತಗಳು ರೂಪಗೊಳ್ಳುವ ಬಗೆ
[ಬದಲಾಯಿಸಿ]ಅಸ್ಥಿರ ಭೂಪ್ರದೇಶಗಳಲ್ಲಿ ಕಂಡುಬರುವ ಮಡಿಕೆಬಿದ್ದ ಶಿಲಾಶ್ರೇಣಿಗಳು ಭೂಕಂಪಗಳು, ತೀವ್ರಸವೆತ, ತರ ನಿಕ್ಷೇಪಣೆ ಹಾಗೂ ಜ್ವಾಲಾಮುಖಿಗಳು ಅಲ್ಲಿ ಭೂ ಅಭಿನತಿಗಳ ಇರುವಿಕೆಯನ್ನು ಸಾರಿಹೇಳುತ್ತವೆ. ಈ ಇಳುಕಲುಗಳಲ್ಲಿ ಶೇಖರವಾದ ಜಲಜಶಿಲಾಸ್ತರಗಳೊಳಕ್ಕೆ ಅಡಿಯಿಂದ ಗ್ರ್ಯಾನಿಟಿಕ್ ಬ್ಯಾತೊಲಿತುಗಳು ನುಗ್ಗಿ ಅವನ್ನು ವಿವಿಧ ರೀತಿಯಲ್ಲಿ ಮಡಿಸಿ ಪರ್ವತಪಂಕ್ತಿಗಳೋಪಾದಿಯಲ್ಲಿ ಮೇಲಕ್ಕೆ ಎಸೆಯುತ್ತವೆ.[೧೮] ಇದೇ ಪರ್ವತಜನ್ಯಕ್ರಿಯೆ. ಪರ್ವತಗಳು ಖಂಡಭಾಗಗಳಲ್ಲಿ ಎದ್ದುಕಾಣುದ ಸ್ಟರೂಪಗಳು. ಈ ಪರ್ವತಜನ್ಯಕ್ರಿಯೆಗೂ ಭೂ ಅಭಿನತಿಗೂ ನಿಕಟ ಸಂಬಂಧವಿದ್ದು ಇವೆರಡೂ ಖಂಡರೂಪಣೆಯಲ್ಲಿ ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸಿವೆ. ಭೂಗೋಳದ ಹಲವಾರು ಕಡೆ ಇವುಗಳ ಕ್ರಿಯೆ ನಿರ್ದಿಷ್ಟ ಕಾಲಗಳಲ್ಲಿ ನಡೆದಿರುವುದು ಗೋಚರವಾಗಿದೆ. ಕ್ರಿಯೆ ನಡೆದ ಕಾಲವನ್ನು ಆ ಪ್ರದೇಶದ ಮಡಿಕೆ ಬಿದ್ದಿರುವ ಶಿಲೆಗಳಲ್ಲಿ ಹುದುಗಿರುವ ಗ್ರ್ಯಾನೈಟ್‌ನ ಖನಿಜಗಳ ವಯಸ್ಸನ್ನು ಅಳತೆ ಮಾಡುವುದರ ಮೂಲಕ ನಿರ್ಧರಿಸಬಹುದು. ಈ ಬೃಹತ್ ಚಟುವಟಿಕೆಗಳು ಭೂಖಂಡಗಳ ಬೆಳೆವಣಿಗೆಗೆ ಅತ್ಯಂತ ಸಹಾಯವೆಂಬುದನ್ನು ಒತ್ತಿ ಹೇಳಬಹುದು. ಅಲ್ಲದೆ ಕ್ರಿಯೆ ನಡೆಯುವಾಗ ಆ ಪ್ರದೇಶದ ಅಕ್ಕಪಕ್ಕದ ಸಾಗರ ಹಾಗೂ ಖಂಡಭಾಗಗಳಲ್ಲಿರುವ ಶಿಲೆಗಳು ತೀವ್ರ ದರ್ಜೆಯ ಬೃಹತ್ ರೂಪಾಂತರಣಕ್ಕೆ ಒಳಗಾಗುತ್ತವೆ. ಒಮ್ಮೊಮ್ಮೆ ಪುನರ್ದ್ರವೀಕರಣಕ್ಕೂ ಒಳಗಾಗಬಹುದು. ಹೀಗಾಗಿ ಹೊದಿಕೆಯ ವಲಯದಿಂದ ಹೊರಬರುತ್ತಿರುವ ವಸ್ತುವಿನೊಡನೆ ಬೆರೆತು ಹೋಗಿ ಭೂಭಾಗಗಳು, ಖಂಡ ತೀರಪ್ರದೇಶಗಳ ಹಾಗೂ ಖಂಡಗಳಿಗೆ ಮೆತ್ತಿಕೊಂಡಂತಿರುವ ದ್ವೀಪಸ್ತೋಮ ಚಾಪಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಖಂಡಭಾಗಗಳ ಮೂಲದ್ರವ್ಯ: ಪ್ರಸಕ್ತ ಖಂಡಭಾಗಗಳ ಮೂಲದ್ರವ್ಯ ಅಂದರೆ ನ್ಯೂಕ್ಲಿಯಸುಗಳನ್ನು ಗುರುತಿಸಲಾಗಿದೆ. ಸುಮಾರು 2.5-3.5 ಇಯಾನ್ ವರ್ಷಗಳಷ್ಟು ಹಳೆಯದಾದ ಈ ನ್ಯೂಕ್ಲಿಯಸುಗಳನ್ನು ಸಾಗರೀಯ ಚಿಪ್ಪಿನ ವಲಯ ಹಾಗೂ ದ್ವೀಪಸ್ತೊಮಚಾಪಗಳಲ್ಲಿ ಕಾಣಬಹುದು. ಖಂಡಗಳು ಈ ನ್ಯೂಕ್ಲಿಯಸಿನಿಂದ ಪ್ರಾರಂಭಗೊಂಡ ವಿವಿಧ ಭೂಚಟುವಟಿಕೆಗಳ ಕಾರಣ ಬೆಳೆದು ವಿಸ್ತರಿಸಿ ಪ್ರಸಕ್ತ ಸ್ವರೂಪವನ್ನು ತಳೆದಿವೆ. ಈಗ ಕಾಣುತ್ತಿರುವ ಅಲ್ಯೂಷಿಯನ್ ಪರ್ವತಶ್ರೇಣಿಗಳು ಹಾಗೂ ಆಗ್ನೇಯ ಅಲಾಸ್ಕದ ಭೂಭಾಗಗಳು ಅವುಗಳ ನೈಋತ್ಯದಿಕ್ಕಿನಲ್ಲಿ ಪೆಸಿಫಿಕ್ ಸಾಗರದಲ್ಲಿರುವ ಅಲ್ಯೂಷಿಯನ್ ಜ್ವಾಲಾಮುಖಿಗಳಿಂದ ವಿಕಾಸಗೊಂಡುವೆಂದು ಊಹಿಸಿಲಾಗಿದೆ. ಹೀಗೆಯೇ ಇಂದಿನ ಭೂಖಂಡಗಳು ಬೆಸಾಲ್ಟಿಕ್ ಹಾಗೂ ಅತಿಮ್ಯಾಫಿಕ್ ಸಾಗರೀಯ ಚಿಪ್ಪು ಮತ್ತು ಪೆರಿಡೊಟಿಟಿಕ್ ಹೊದಿಕೆಯ ವಲಯದಿಂದ ಬೆಳೆದು ಬಂದುವೆಂದು ಅಭಿಪ್ರಾಯ.
ಉತ್ತರ ಅಮೆರಿಕ, ಆಸ್ಟ್ರೇಲಿಯ ಮತ್ತು ಅಂಟಾರ್ಕ್ಟಿಕ ಖಂಡಗಳ ವಿವಿಧ ಶಿಲೆಗಳ ಹರವನ್ನು ಸೂಚಿಸುವ ನಕ್ಷೆಗಳನ್ನು ತಯಾರಿಸಿದ್ದಾರೆ. ಇವು ಖಂಡಗಳ ಬೆಳೆವಣಿಗೆಯನ್ನು ಅರಿಯಲು ಬಲು ಸಹಾಯಕವಾಗಿವೆ. ಉತ್ತರ ಅಮೆರಿಕದ ಶಿಲಾಹರವಿನ ನಕ್ಷೆಯನ್ನು ವೀಕ್ಷಿಸಿದಲ್ಲಿ ವಿವಿಧ ಶಿಲೆಗಳು ತಮ್ಮ ವಯೋಗತಿಗನುಗುಣವಾಗಿ ಒಂದು ನಿರ್ದಿಷ್ಟಕ್ರಮದಲ್ಲಿ ಹಾಗೂ ದಿಕ್ಕಿನಲ್ಲಿ ವ್ಯತ್ಯಾಸಗೊಳ್ಳುವುದು ಸ್ಪಷ್ಟವಾಗಿ ಕಾಣುತ್ತದೆ. ಅತ್ಯಂತ ಹಳೆಯ ಶಿಲೆಗಳು ಕೇಂದ್ರ ಭಾಗದಲ್ಲಿದ್ದು ಆ ಭಾಗವನ್ನು ಖಂಡದ ಮೂಲದ್ರವ್ಯ ಅಥವಾ ನ್ಯೂಕ್ಲಿಯಸ್ ಎನ್ನಬಹುದು. ಉತ್ತರ ಅಮೆರಿಕದ ಕೇಂದ್ರ ಭಾಗದ ಶಿಲೆಗಳು ಆ ಭಾಗದ ಅಂಚಿನಲ್ಲಿರುವ ಶಿಲೆಗಳಿಗಿಂತ ವಯಸ್ಸಿನಲ್ಲಿ ಐದರಷ್ಟೂ, ಪೆಸಿಫಿಕ್ ತೀರದ ಶಿಲೆಗಳಿಗಿಂತ ಹತ್ತರಷ್ಟೂ ಹಳೆಯವೆನಿಸಿವೆ. ಇದೇ ರೀತಿ ಕೇಂದ್ರ ಏಷ್ಯ, ಪಶ್ಚಿಮ ಆಸ್ಟ್ರೇಲಿಯ, ಅಂಟಾರ್ಕ್ಟಿಕದ ತಳಭಾಗಗಳೂ ಆಯಾ ಭೂಖಂಡಗಳ ನ್ಯೂಕ್ಲಿಯಸುಗಳೆನಿಸಿವೆ.
ಖಂಡಗಳ ಕೇಂದ್ರ ಭಾಗಗಳಲ್ಲಿರುವ ಶಿಲೆಗಳು ಅತ್ಯಂತ ಹಳೆಯವೆನಿಸಿದ್ದು ಸಾಗರತಳಗಳು, ದ್ವೀಪಸ್ತೋಮ ಚಾಪಗಳು ಮತ್ತು ಖಂಡದ ತೀರಪ್ರದೇಶದ ಶಿಲೆಗಳನ್ನೇ ಹೋಲುತ್ತವೆ. ರೂಪುಗೊಂಡು ನೂರಾರು ಮಿಲಿಯನ್ ವರ್ಷಗಳಾದ ಮೇಲೆ ಇವನ್ನೂ ಭೇದಿಸಿ ನುಗ್ಗಿದ ಗ್ರ್ಯಾನಿಟಿಕ್ ಅಂತಸ್ಸರಣ ಸಮುದಾಯಗಳಲ್ಲಿ ಇವು ಸಿಕ್ಕಿಬಿದ್ದು ಪ್ರಸಕ್ತ ಭೂಖಂಡಗಳ ನ್ಯೂಕ್ಲಿಯಸುಗಳೆನಿಸಿವೆ. ಕಾಲಕ್ರಮೇಣ ಇವುಗಳ ಸುತ್ತ ಇತರ ಶಿಲೆಗಳು ಸೇರುತ್ತ ಖಂಡ ವಿಸ್ತಾರಗೊಳ್ಳುತ್ತ ಹೋಯಿತು. ಹೀಗೆ ಸೇರಿದ ಜಲಜಶಿಲಾಸ್ತರಗಳನ್ನೂ ಶಿಥಿಲಗೊಂಡ ಗ್ರ್ಯಾನೈಟುಗಳನ್ನೂ ಇಂದಿಗೂ ಗುರುತಿಸಬಹುದು.
ಪ್ರಮುಖವಾದ ಭೂ ಅಭಿನತಿ
[ಬದಲಾಯಿಸಿ]ಪರ್ವತಜನ್ಯ ಚಕ್ರಗಳು (ಸೈಕಲ್ಸ್) ಹಲವಾರಿದ್ದು ಅವನ್ನು ವಿವಿಧ ಭೂಯುಗಗಳಲ್ಲಿ ಗುರುತಿಸಲಾಗಿದೆ. ಇವು ಅನೇಕ ವೇಳೆ ಹಲವಾರು ಜಲಜಶಿಲಾ-ಜ್ವಾಲಾಮುಖೀಯ ಉಪಚಕ್ರಗಳಿಂದ ಕೂಡಿರುವುದುಂಟು. ಪ್ರತಿ ಚಕ್ರದ ಶಿಲಾಶ್ರೇಣಿಗಳು ಆ ಕಾಲದ ಹೊರಚಿಪ್ಪಿನ ಸ್ವರೂಪ ಹಾಗೂ ಸ್ಥಿರತೆಯನ್ನೂ ಅಡಿಯಲ್ಲಿದ್ದ ಹೊದಿಕೆಯ ಸ್ವರೂಪವನ್ನೂ ಒಂದು ರೀತಿಯಲ್ಲಿ ಪ್ರತಿಬಿಂಬಿಸುತ್ತವೆನ್ನಬಹುದು.
ಬಾರ್ಬರ್ಟನ್ ಪರ್ವತ: ಭೂಮಿಯ ಹೊರಚಿಪ್ಪಿನ ಶಿಲೆಗಳಲ್ಲಿ ಅತ್ಯಂತ ಪುರಾತನವೆನಿಸಿದ್ದು ಉತ್ತಮ ರೀತಿಯಲ್ಲಿ ಕಾಪಾಡಲಾಗಿರುವ ಭೂ ಇತಿಹಾಸದ ಅದರಲ್ಲೂ ಖಂಡರೂಪಣೆಗೆ ಸಂಬಂಧಿಸಿದ ದಾಖಲೆಯನ್ನು ರೋಡೀಷಿಯ-ದಕ್ಷಿಣಾಫ್ರಿಕ ಶಾಶ್ವತಖಂಡದ (ಶೀಲ್ಡ್) ಪೂರ್ವ ಟ್ರಾನ್ಸ್‌ವಾಲಿನಲ್ಲಿ ಗುರುತಿಸಿದ್ದಾರೆ. ಈ ಪ್ರದೇಶವನ್ನು ಬಾರ್ಬರ್ಟನ್ ಪರ್ವತವೆಂದು ಹೆಸರಿಸಲಾಗಿದೆ. ಇಲ್ಲಿನ ಶಿಲೆಗಳಲ್ಲಿ ಅತ್ಯಂತ ಪುರಾತನವಾದುದು ಸುಮಾರು 3.2 ಇಯಾನ್ ವರ್ಷ ವಯಸ್ಸಿನ ಬೆಸಾಲ್ಟ್ ಹಾಗೂ ಪೆರಿಡೊಟೈಟ್ ಲಾವಾಗಳು ಹಾಗೂ ಸಿಲ್‌ಗಳು.[೧೯] ಇವೆರಡೂ ಸ್ವಾಸಿಲ್ಯಾಂಡ್ ಶ್ರೇಣಿಯ ತಳಪಾಯದ ಜ್ಜಾಲಾಮುಖಿಯ ಹಾಗೂ ಜಲಜಶಿಲಾ ಶ್ರೇಣಿಯ ಅಡಿಯಲ್ಲಿರುವ ಶಿಲೆಗಳಾಗಿದ್ದು ಇಡೀ ಶ್ರೇಣಿ ಗ್ರ್ಯಾನಿಟಿಕ್ ಅಂತಸ್ಸರಣಗಳ ನಡುವೆ ಸಿಕ್ಕಿಬಿದ್ದಿದೆ. ಲಾವಸ್ತರಗಳಲ್ಲಿ ಜಲಾವರಣ ಸನ್ನಿವೇಶದಲ್ಲಿ ರೂಪುಗೊಳ್ಳುವ ದಿಂಬು ಲಾವಾ (ಪಿಲ್ಲೋ ಲಾವಾ) ಮುಂತಾದ ಕೆಲವು ವಿಶಿಷ್ಟ ರಚನೆಗಳಿವೆ. ಇಲ್ಲಿನ ಬೆಸಾಲ್ಟಿಕ್ ಲಾವಾಗಳ ಸಂಯೋಜನೆ ಪ್ರಸಕ್ತ ಸಾಗರತಳಗಳಿಂದ ಹೊರಹೊಮ್ಮುತ್ತಿರುವ ಲಾವಾಗಳಂತಿದೆ. ಈ ಲಾವಾಗಳ ಮೇಲೆ ಆಂಡಿಸಿಟಿಕ್ ಮತ್ತು ಡೇಸಿಟಿಕ್ ಟಫ್‌ಗಳ ಛಿದ್ರಕಣಗಳಿಂದಾದ ಹಾಗೂ ಜ್ವಾಲಾಮುಖಿ ಸ್ಫೋಟಕ ವಸ್ತುಕಣಗಳ ಸಂಗ್ರಹಣೆಯಿಂದಾದ ಶಿಲಾಸ್ತರಗಳಿವೆ. ಅನಂತರ ಇವುಗಳ ಮೇಲೆ ಅನುಕ್ರಮವಾಗಿ ಇದೇ ಬಗೆಯ ಹಲವಾರು ಶಿಲಾಶ್ರೇಣಿಗಳಿದ್ದು ಅವುಗಳ ನಡುವೆ ಟಫ್, ಚೆರ್ಟ್ ಹಾಗೂ ಕಾರ್ಬೊನೇಟ್ ಶಿಲೆಗಳ ತೆಳುವಾದ ಸ್ತರಗಳನ್ನು ಅಲ್ಲಲ್ಲೆ ಕಾಣಬಹುದು. ಶ್ರೇಣಿಯ ಮೇಲ್ಭಾಗಗಳಿಗೆ ಹೋದಂತೆ ಪೆರಿಡೋಟೈಟ್ ಮೊತ್ತ ಒಮ್ಮೆಗೇ ಕಡಿಮೆಯಾಗುತ್ತ ಕಡೆಕಡೆಗೆ ಇಲ್ಲವೆನಿಸುತ್ತದೆ. ಇದರ ಬದಲು ಆಂಡಿಸಿಟಿಕ್ ಮತ್ತು ಡೇಸಿಟಿಕ್ ಲಾವಾಗಳ ಮೊತ್ತ ಹೆಚ್ಚುತ್ತ ಹೋಗುತ್ತದೆ. ಅಲ್ಲದೆ ಇದರ ಜತೆಗೆ ಟಫ್ ಹಾಗೂ ಇಂಗಾಲಯುಕ್ತ (ಕಾರ್ಬೊನೇಷನ್) ಜೇಡುಶಿಲಾಚೆರ್ಟ್, ಸುಣ್ಣಶಿಲೆ, ಡಾಲೊಮೈಟ್ ಮತ್ತು ಜ್ವಾಲಾಮುಖಿಜ ಅಗ್ಲಾಮರೇಟುಗಳ ಮೊತ್ತವೂ ಅಧಿಕಗೊಳ್ಳುತ್ತದೆ. ಅಲ್ಲದೆ ಬೆಸಾಲ್ಟ್ ಹಾಗೂ ಗ್ರ್ಯಾನೈಟುಗಳ ಮಧ್ಯವರ್ತಿ ಎನಿಸಿದ ಗ್ರ್ಯಾನೊಡಯೊರೈಟಿನ ಸಿಲ್, ಡೈಕ್ ಹಾಗೂ ಗುಮ್ಮಟಾಕಾರದ ಅಂತಸ್ಸರಣಗಳೂ ಇವೆ. ಪುರಾತನ ಶಾಶ್ವತಖಂಡಗಳಲ್ಲಿ ಹೇರಳವಾಗಿ ಕಂಡುಬರುವ ಗ್ರ್ಯಾನಿಟಿಕ್ ವರ್ಗದ ಶಿಲೆ ಗ್ರ್ಯಾನೊಡಯರೈಟ್ ಎಂಬುದನ್ನು ಇಲ್ಲಿ ಜ್ಞಾಪಿಸಿಕೊಳ್ಳುವುದು ಸೂಕ್ತ.
ಶ್ರೇಣಿಯ ಶಿಲಾಸ್ತರಗಳ ವಯಸ್ಸು ಕಡಿಮೆಯಾದಂತೆ ಅವುಗಳ ಫೆಲ್ಸಿಕ್ ಸಂಯೋಜನೆ ಹೆಚ್ಚುತ್ತ ಹೋಗುವುದನ್ನು ಗುರುತಿಸಬಹುದು. ಅಂದರೆ ಶಿಲಾ ಶ್ರೇಣಿಗಳು ಹಾಗೂ ಭೂಚಕ್ರಗಳಲ್ಲುಂಟಾಗುವ ಈ ಬಗೆಯ ಬದಲಾವಣೆಗಳು ಸಾಗರೀಯ ಹೊರಚಿಪ್ಪು ಅನುಕ್ರಮವಾಗಿ ವಿಕಾಸಗೊಂಡ ದ್ವೀಪಸ್ತೋಮ ಚಾಪವಾಗಿ ಕಟ್ಟಕಡೆಗೆ ಖಂಡಗಳ ಹೊರಚಿಪ್ಪಾಗಿ ಮಾರ್ಪಟ್ಟ ರೀತಿಯನ್ನು ಸೂಚಿಸುತ್ತವೆ.
ಸ್ವಾಸಿಲ್ಯಾಂಡ್ ಶ್ರೇಣಿಯ ಮೇಲ್ಭಾಗದಲ್ಲಿ ಕಾಣುವ ಶಿಥಿಲೀಕರಣ, ಸವೆತ ಹಾಗೂ ತರನಿಕ್ಷೇಪಣ ಕಾರ್ಯಗಳ ಅನುಕ್ರಮ ಚಕ್ರಗಳು ಅಡಿಯ ಶಿಲೆಗಳನ್ನು ಮೀರಿದ ರೀತಿಯಲ್ಲಿ ವ್ಯತ್ಯಾಸಗೊಂಡ ತರಗಳ ಸಾರೀಕರಣದಿಂದಾದುವೆಂದು ಭಾವಿಸಲಾಗಿದೆ. ಅಂದರೆ ಭೂಸವೆತ ಸಾಕಷ್ಟು ದೀರ್ಘಕಾಲ ನಡೆದು ತರಗಳ ವಿಂಗಡಣೆ ಉತ್ತಮ ರೀತಿಯಲ್ಲಿ ಆಯಿತೆಂದು ತಿಳಿಯಬಹುದು. ಈ ಕಾರಣದಿಂದಲೇ ಜೇಡುಶಿಲೆಗಳು ಹಾಗೂ ಜೇಡು ಮಿಶ್ರಿತ ಮರಳು ಶಿಲಾಸ್ತರಗಳ ಮೇಲೆ ಕ್ವಾರ್ಟ್ಸೈಟ್ ಶಿಲೆಗಳು ನಿಕ್ಷೇಪಗೊಂಡಿವೆ. ಇವುಗಳ ಬೆಳೆವಣಿಗೆಗೆ ಅಗತ್ಯವಾದ ತರಗಳು ದೀರ್ಘಕಾಲ ನಡೆದ ಶಿಥಿಲೀಕರಣದಿಂದಲೂ ಸ್ಥಿರಭೂಖಂಡಗಳ ಗ್ರ್ಯಾನಿಟಿಕ್ ಶಿಲೆಗಳ ಸವೆತದಿಂದಲೂ ಉತ್ಪನ್ನವಾದವು. ಈ ತರಗಳು ಭೂಖಂಡಗಳ ಅಂಚುಗಳು, ಸಾಕಷ್ಟು ಹಳೆಯದಾದ ಚಾಪಾಕಾರದ ಪ್ರದೇಶಗಳು, ಅಲ್ಲಿದ್ದ ಇಳುಕಲುಗಳು ಹಾಗೂ ಜಲಾಶಯಗಳಲ್ಲಿ ಸಂಚಿತಗೊಂಡು ಶಿಲಾಸ್ತರಗಳಾಗಿ ಕ್ರಮೇಣ ಮಾರ್ಪಟ್ಟವು. ಇವನ್ನು ಆವರಿಸಿರುವ ಗ್ರ್ಯಾನಿಟಿಕ್ ಅಂತಸ್ಸರಣಗಳು ಸುಮಾರು 3.1-3.2 ಇಯಾನ್ ವರ್ಷಗಳ ಹಿಂದೆ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದ್ದವು. ಬಹುಶಃ ಈ ಸಮಯದಲ್ಲಿ ಸ್ವಾಸಿಲ್ಯಾಂಡ್ ಶ್ರೇಣಿ ಹಲವಾರು ಕಡೆ ಮಡಿಕೆ ಬಿದ್ದು, ಸ್ತರಭಂಗಗಳಿಗೂ ಒಳಗಾಗಿ ಇಂದಿನ ನಿಡಿದಾದ ಹಾಗೂ ಮಡಿಕೆ ಬಿದ್ದಿರುವ ಸ್ವರೂಪವನ್ನು ಪಡೆಯಿತು. ಈ ಸಮಯದಲ್ಲಿ ಪರ್ವತಜನ್ಯೋತ್ತರಕಾಲದ ಮತ್ತು ಕ್ವಾರ್ಟ್ಸ್ ಹಾಗೂ ಕೆ-ಫೆಲ್ಡ್‌ಸ್ಪಾರುಗಳಿಂದ ಕೂಡಿರುವ ಗ್ರ್ಯಾನೈಟುಗಳು ಸತತವಾಗಿ ಹೊರಬರುತ್ತಲೇ ಇದ್ದು ಆ ವೇಳೆಗಾಗಲೇ ನಿರ್ಮಾಣವಾಗಿದ್ದ ಗ್ರ್ಯಾನಿಟಿಕ್ ಚಿಪ್ಪಿನ ಮಂದವನ್ನು ಹೆಚ್ಚಿಸಿದುವು. ಈ ರೀತಿಯಲ್ಲೂ ಖಂಡ ಬೆಳೆವಣೆಗೆಯಾಯಿತು. ಇದು ಸುಮಾರು 2.5 ಇಯಾನ್ ವರ್ಷಗಳ ಹಿಂದೆಯೂ ನಡೆದ ದಾಖಲೆಗಳಿವೆ.
ಸ್ವಾಸಿಲ್ಯಾಂಡ್ ಶ್ರೇಣಿಯ ಉತ್ತರ-ದಕ್ಷಿಣಗಳತ್ತ ಇದೇ ಬಗೆಯ ಹಲವಾರು ಸಾಗರೀಯ ಹಾಗೂ ದ್ವೀಪಸ್ತೋಮಚಾಪಗಳ ಶಿಲಾಶ್ರೇಣಿಗಳಿದ್ದು ಅವನ್ನು ಗ್ರೀನ್‍ಸ್ಟೋನ್ ವಲಯಗಳೆನ್ನಲಾಗಿದೆ. ಇವು ಸ್ವಾಸಿಲ್ಯಾಂಡ್ ಶ್ರೇಣಿಗೆ ಸಮಾಂತರವಾಗಿದ್ದು ಬಹುಶಃ ಅದರೊಡನೆ ಸಾಕಷ್ಟು ಒಂದುಗೂಡಲೂಬಹುದು. ಈ ಶಿಲೆಗಳು ಕೂಡ ಆಳದಿಂದ ಮೇಲಕ್ಕೆ ಬರುತ್ತಿದ್ದ ಗ್ರ್ಯಾನೈಟ್ ಅಂತಸ್ಸರಣಗಳಿಂದ ಆವೃತವಾಗಿವೆ. ಕ್ರಮೇಣ ಇವು ಸವೆತಕ್ಕೆ ಒಳಗಾದ ಕಾರಣ ಹಲವಾರು ಕಿ.ಮೀ. ಮಂದದ ಭೂಚಿಪ್ಪು ಈಗ ಇಲ್ಲವಾಗಿದೆ. ಖಂಡಭಾಗಗಳಲ್ಲಿ ಸ್ವಾಸಿಲ್ಯಾಂಡ್ ಶ್ರೇಣಿಯ ಹಾಗೂ ಇತರ ಆಫ್ರಿಕನ್ ಗ್ರೀನ್‍ಸ್ಟೋನ್ ವಲಯಗಳ ಕ್ಲಿಷ್ಟವಾದ ಅಭಿನತಿ (ಸಿಂಕ್ಲೈನ್) ಮಡಿಕೆಗಳ ಕೆಳಚಾಚುಗಳನ್ನು ಗ್ರ್ಯಾನೈಟ್ ಶಿಲಾಸಮೂಹಗಳ ನಡುವೆ ಇಂದಿಗೂ ಗುರುತಿಸಬಹುದು. ಒಟ್ಟಿನಲ್ಲಿ ಇದು ಅತ್ಯಂತ ಪುರಾತನ ಭೂಖಂಡಗಳು ರಚಿತವಾದ ರೀತಿಯನ್ನು ಸೂಚಿಸುವ ಉತ್ತಮ ಉದಾಹರಣೆಯಾಗಿದೆ.
ಇದನ್ನೇ ಹೋಲುವ ಖಂಡಪ್ರದೇಶಗಳು ಉತ್ತರ ಅಮೆರಿಕ, ಆಸ್ಟ್ರೇಲಿಯ ಮತ್ತು ಭಾರತ ದೇಶಗಳಲ್ಲೂ ಇವೆ. ಈ ದೇಶಗಳ ಗ್ರೀನ್‌ಸ್ಟೋನ್-ಗ್ರ್ಯಾನೈಟ್ ಪ್ರಾಂತಗಳಲ್ಲಿ ಸ್ತರಭಂಗಕ್ಕೊಳಗಾಗಿರುವ ಬಹು ಅವನತಿ ಮಡಿಕೆಗಳ (ಸಿಂಕ್ಲಿನೋರಿಯ) ಸಮೂಹಗಳಿದ್ದು ಅವನ್ನೇ ಬೃಹದಾಕಾರದ ಗ್ರ್ಯಾನೈಟ್ ಮತ್ತು ಗ್ರ್ಯಾನಿಟಿಕ್ ನೈಸ್‌ಗಳು ಆವರಿಸಿವೆ. ಇಲ್ಲಿಯ ಭೂಖಂಡ ನ್ಯೂಕ್ಲಿಯಸುಗಳಲ್ಲಿ ಗ್ರೀನ್‌ಸ್ಟೋನ್ ಜಾಡುಗಳು ಪರಸ್ಪರ ಸಮಾಂತರವಾಗಿದ್ದು ಗ್ರ್ಯಾನೈಟುಗಳೊಡನೆ ಸರಿಸುಮಾರು 1:4 ಪ್ರಮಾಣದಲ್ಲಿವೆ. ಈ ಖಂಡಪ್ರದೇಶಗಳಲ್ಲೂ ಸ್ವಾಸಿಲ್ಯಾಂಡಿನಲ್ಲಿರುವಂತ ಭೂಖಂಡಗಳ ಬೆಳೆವಣಿಗೆಯ ವಿವಿಧ ಘಟ್ಟಗಳನ್ನು ಹಾಗೂ ಪುನರಾವರ್ತನೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಇವು ಸಹ ಸುಮಾರು 2.5 ಇಯಾನ್ ವರ್ಷಗಳಷ್ಟು ಹಿಂದಿನವು. ಅಂದರೆ ಈ ಖಂಡಗಳ ರೂಪಣೆಯೂ ಅಷ್ಟೇ ಪುರಾತನವಾದುದು.
ಇವುಗಳನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Continent". The Columbia Encyclopedia. New York: Columbia University Press. 2001. Archived from the original on 2 February 2007 – via Bartleby.
- ↑ "Continent Archived 19 June 2019 ವೇಬ್ಯಾಕ್ ಮೆಷಿನ್ ನಲ್ಲಿ.". Encyclopædia Britannica. 2006. Chicago: Encyclopædia Britannica, Inc.
- ↑ "Bedrock | Encyclopedia.com". www.encyclopedia.com. Retrieved 2019-04-09.
- ↑ Naha, K.; Srinivasan, R.; Jayaram, S. (1990). "Structural evolution of the Peninsular Gneiss — an early Precambrian migmatitic complex from South India". Geologische Rundschau (in ಇಂಗ್ಲಿಷ್). 79 (1): 99–109. Bibcode:1990GeoRu..79...99N. doi:10.1007/BF01830449. ISSN 0016-7835. S2CID 140553127. Archived from the original on 15 January 2023. Retrieved 22 December 2021.
- ↑ "Regional Metallogeny Large Igneous Provinces in Canada Through Time and Their Metallogenic Potential". Mineral Deposits of Canada. Geological Survey of Canada. September 25, 2008. Archived from the original on April 20, 2010. Retrieved January 19, 2009.
- ↑ Şengör (1982), p. 11
- ↑ Selley, Richard C., Applied Sedimentology, Academic Press, 2nd edition, 2000, p. 486 ISBN 978-0-12-636375-3
- ↑ Rudnick, R. L.; Gao, S. (2003), "3.01 – Composition of the Continental Crust", in Holland, Heinrich D.; Turekian, Karl K. (eds.), Treatise on Geochemistry, vol. 3, Pergamon, p. 659, Bibcode:2003TrGeo...3....1R, doi:10.1016/b0-08-043751-6/03016-4, ISBN 978-0-08-043751-4, retrieved 2019-11-21
- ↑ RB Cathcart & MM Ćirković (2006). Viorel Badescu; Richard Brook Cathcart & Roelof D Schuiling (eds.). Macro-engineering: a challenge for the future. Springer. p. 169. ISBN 978-1-4020-3739-9.
- ↑ Langmuir, Charles H.; Broecker, Wally (2012-07-22). How to Build a Habitable Planet: The Story of Earth from the Big Bang to Humankind. pp. 179–183. ISBN 9780691140063.
- ↑ Fairbridge, Rhodes W., ed. (1967). The Encyclopedia of Atmospheric Sciences and Astrogeology. New York: Reinhold Publishing. p. 323. OCLC 430153.
- ↑ Davis, George H.; Reynolds, Stephen J.; Kluth, Charles F. (2012). "Nature of Structural Geology". Structural Geology of Rocks and Regions (3rd ed.). John Wiley & Sons. p. 18. ISBN 978-0-471-15231-6.
- ↑ Yildirim Dilek (1 January 2000). Ophiolites and Oceanic Crust: New Insights from Field Studies and the Ocean Drilling Program. Geological Society of America. pp. 506–. ISBN 978-0-8137-2349-5.
- ↑ "Kuril Islands". Britannica.com. 14 April 2023. Archived from the original on 17 May 2020. Retrieved 3 August 2017.
- ↑ Taylor, S. R. (1967). "The origin and growth of continents". Tectonophysics. 4 (1): 17–34. Bibcode:1967Tectp...4...17T. doi:10.1016/0040-1951(67)90056-x. ISSN 0040-1951.
- ↑ Gill, J.B. (1982). "Andesites: Orogenic andesites and related rocks". Geochimica et Cosmochimica Acta. 46 (12): 2688. doi:10.1016/0016-7037(82)90392-1. ISSN 0016-7037.
- ↑ Hall, A. (1982). "R. S. Thorpe, Editor. Andesites: Orogenic Andesites and Related Rocks. Chichester, New York, Brisbane, Toronto, and Singapore (John Wiley and Sons), 1982. xiii+724 pp., 277 figs. Price £59·50". Mineralogical Magazine. 46 (341): 532–533. doi:10.1180/minmag.1982.046.341.31. ISSN 0026-461X. S2CID 129767570.
- ↑ Levin, Harold L. (2010). The earth through time (9th ed.). Hoboken, N.J.: J. Wiley. p. 83. ISBN 978-0470387740.
- ↑ "The Barberton Mountain Land, Barberton Greenstone Belt or Makhonjwa Mountains". UNESCO. Retrieved 10 December 2014.
ಗ್ರಂಥಸೂಚಿ
[ಬದಲಾಯಿಸಿ]- Şengör, Celâl (1982). "Classical theories of orogenesis". In Miyashiro, Akiho; Aki, Keiiti; Şengör, Celâl (eds.). Orogeny. John Wiley & Sons. ISBN 0-471-103764.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಲಿವಿಯೋ ಕ್ಯಟುಲ್ಲೋ ಸ್ಟೆಕ್ಕೋನಿಯವರ "ಭೂಮಿಯ ನಕ್ಷೆ" (Internet Archive)
- Continent at Encyclopædia Britannica
- . Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - "What Are Continents?" on YouTube by CGP Grey
- Lost continent revealed in new reconstruction of geologic history