ಭೂತರಾಧನೆ-ವೇಷಭೂಷಣಗಳು
ಭೂತರಾಧನೆ-ವೇಷಭೂಷಣಗಳು
[ಬದಲಾಯಿಸಿ]ಭೂತಗಳ ಮುಖವರ್ಣಿಕೆಗಳಲ್ಲಿ ಇರುವಷ್ಟು ಪ್ರಭೇದಗಳು ಮತ್ತು ಪ್ರಾದೇಶಿಕ ಭಿನ್ನತೆಗಳು ವೇಷಭೂಷಣಗಳಲ್ಲಿ ಇಲ್ಲ. ಇದರಲ್ಲಿ ಲೋಹ, ಹಾಳೆ ಮರ ಮತ್ತು ಬಟ್ಟೆಯ ಅಲಂಕಾರ ಸಾಮಾಗ್ರಿಗಳು ಬಳಕೆಯಾಗುತ್ತದೆ. ಈ ಅಲಂಕಾರ ಸಾಮಾಗ್ರಿಗಳಲ್ಲಿ ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯವಾದವು ಆಡಳಿತವರ್ಗದವರ ವಶವಿರುತ್ತದೆ. ಬಟ್ಟೆ, ಮರ ಮತ್ತು ಹಾಳೆಯ ಸಾಮಾಗ್ರಿಗಳು ಕಲಾವಿದರ ವಶವಿರುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೊತ್ತು ಸಾಗಿಸಬೇಕಾದ ಕಷ್ಟವಿರುವುದರಿಂದ ಕಲಾವಿದರು ಕೆಲವು ನಿಶ್ಚಿತ ಬಗೆಯ ಅಲಂಕಾರ ಸಾಮಾಗ್ರಿಗಳನ್ನು ತಯಾರು ಮಾಡಿಕೊಂಡು ಭೂತಕಟ್ಟುವ ಸಂದರ್ಭದಲ್ಲಿ ಬಳಸುತ್ತಾರೆ. ಮುಖವಾಡ, ಆಯುಧ, ಆಭರಣ – ಇವುಗಳನ್ನು ಲೋಹದಿಂದ ತಯಾರಿಸುತ್ತಾರೆ. ಭೂತಗಳ ಅಂತಸ್ತುಗಳಿಗನುಸಾರವಾಗಿ ಚಿನ್ನ, ಬೆಳ್ಳಿಯ ವಸ್ತುಗಳನ್ನು ಬಳಸುತ್ತಾರೆ.
ವೇಷಭೂಷಣಗಳ ವರ್ಗೀಕರಣ
[ಬದಲಾಯಿಸಿ]ಆಭರಣಗಳು
[ಬದಲಾಯಿಸಿ] ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಸೊಂಟ, ಎದೆ, ಕೊರಳು, ತಲೆಗೆ ಸಂಬಂಧಪಟ್ಟ ಆಭರಣಗಳು ಬಳಕೆಯಾಗುತ್ತದೆ. ಡಾಬು, ಮುದ್ರೆ, ಚೂಡಮಣಿ, ಕೊಪ್ಪುಸರಪಳಿ, ಮುಂದಲೆಬೊಟ್ಟು, ಬಂದಿಪದಕ, ಮೊಲೆಕಟ್ಟು, ಗುಂಡಡ್ಡಿಗೆ, ಗುಂಡುಸರ, ಚಕ್ರಸರ, ಕೊತ್ತಂಬರಿಸರ ಪವನುಸರ,ಕುರ್ಜಾಪುಸರ, ಎದೆಹಾರ, ಎದೆಪದಕ, ಕಟ್ಟಾಣಿಸರ, ತಲೆಮಣಿ, ತಲೆಪಟ್ಟಿ, ಭುಜಕಿರೀಟ, ಭುಜಪತ್ತ್, ಕೇದಿಗೆ, ತಲೆಪಟ್ಟೊ, ದಂಡೆಕಾಜಿ, ತಲೆಪೂ, ಕೆಬಿನ, ಎದೆಹಾಳೆ, ನಾಗಾಭರಣ ಈ ಬಗೆಯ ಲೋಹದ ಆಭರಣಗಳು ಬಳಕೆಯಾಗುತ್ತದೆ. ಪ್ರಧಾನ ಭೂತಗಳಿಗೆ ಈ ಬಗೆಯ ಆಭರಣಗಳಲ್ಲಿ ಕೆಲವಾದರೂ ಸರ್ವಸಾಧಾರಣವಾಗಿ ಇರುತ್ತವೆ. ಒಂದರ ಅನಂತರ ಮತ್ತೊಂದು ಭೂತಕ್ಕೆ ಉತ್ಸವ ನಡೆಯುವುದರಿಂದ ಇದೇ ಆಭರಣಗಳನ್ನು ಬಳಸಿಕೊಳ್ಳುತ್ತಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪರವರು-ಪಂಬದರು ಕಟ್ಟುವ ಭೂತಗಳು ಮತ್ತು ನಲಿಕೆಯವರು ಕಟ್ಟುವ ಭೂತಗಳು - ಈ ವ್ಯತ್ಯಾಸದ ಹಿನ್ನೆಲೆಯಲ್ಲಿ ಆಭರಣಗಳ ವಿತರಣೆಯಲ್ಲಿ ವ್ಯತ್ಯಾಸವು ಕಂಡುಬರುತ್ತದೆ. ಭೂತಗಳ ಅಂತಸ್ತು, ಅಧಿಕಾರವನ್ನು ಪ್ರತ್ಯೇಕಿಸಿ ತೋರಿಸುವ ಉದ್ದೇಶ ಇಟ್ಟುಕೊಂಡಿರುವುದರಿಂದ ಪ್ರಧಾನ ಭೂತಗಳ ಆಭರಣಗಳನ್ನು ಸೇರಿಗೆಯ ಭೂತಗಳ ಬಳಕೆಗೆ ಕೊಡುವುದಿಲ್ಲ. ಆಭರಣಗಳ ಪ್ರತಿಗಳು ಆರಾಧನೆ ಪಡೆಯುವ ಭೂತಗಳ ಸಂಖ್ಯೆಯಷ್ಟು ಇರುವುದಿಲ್ಲ. ಒಂದು ಭೂತಕ್ಕೆ ಕನಿಷ್ಟ ಆಭರಣಗಳು ಇರಲೇಬೇಕಾಗುತ್ತದೆ. (ತಲೆಮಣಿ, ತಲೆಪಟ್ಟಿ, ತಲೆಪಟ್ಟೊ, ಭುಜದಂಡೆ, ಎದೆಪದಕ ಇತ್ಯಾದಿ). ಹೆಣ್ಣು ಗಂಡು ಎಂಬ ವ್ಯತ್ತಾಸ ಮಾಡದೆ ಎಲ್ಲಾ ಬಗೆಯ ಆಭರಣಗಳನ್ನು ಭೂತಗಳಿಗೆ ತೊಡಿಸಲಾಗುತ್ತದೆ. ಭಂಡಾರದಲ್ಲಿ ಎಷ್ಟೇ ಆಭರಣಗಳಿರಲಿ, ಕೆಲವು ಕಡೆಗಳಲ್ಲಿ ಭೂತದ ಕೋಲ, ನೇಮ ನಡೆಯುವ ಮನೆಯ ಒಡತಿ ತನ್ ಕೊರಳ ಸರವನ್ನು ತೆಗೆದು ಕಿನಿದಾರು, ಕಲ್ಲುರ್ಟಿ ಭೂತಕ್ಕೆ ಸ್ವತಃ ತೊಡಿಸುವ ಸಂಪ್ರದಾಯವಿದೆ.
ಮುಖವಾಡಗಳು
[ಬದಲಾಯಿಸಿ]ಭೂತವು ಮುಗ ಅಥವಾ ಮುಖವಾಡವನ್ನು ಧರಿಸುವ ಕ್ರಿಯೆಯು ಆರಾಧನೆಯಲ್ಲಿ ಬಹು ಮುಖ್ಯವಾದ ಒಂದು ಭಾಗವಾಗಿದೆ. ಭೂತಶಕ್ತಿಯ ಪ್ರತೀಕವೇ ಮುಖವಾಡ ಎಂಬ ನಂಬಿಕೆಯಿದೆ. ಈ ಮುಖವಾಡಗಳು ಆರಾಧನೆಯ ಸಂದರ್ಭದಲ್ಲಿ ಮಾತ್ರವಲ್ಲದೆ ಗುಂಡಿಯೊಳಗೂ ಪೂಜೆಯನ್ನು ಪಡೆಯುತ್ತವೆ. ಭೂತದ ಭಂಡಾರ ಎಂದರೆ ಮುಖ್ಯವಾಗಿ ಮುಖವಾಡ ಮತ್ತು ಆಯುಧಗಳು. ಭಂಡಾರವನ್ನು ಗುತ್ತಿನಮನೆ, ಭೂತದ ಗುಡಿಯಿಂದ ಮೆರವಣಿಗೆಯಲ್ಲಿ ಭೂತಾರಾಧನೆ ನಡೆಯುವ ಸ್ಥಳಕ್ಕೆ ತರುವಾಗ ಮುಖವಾಡವನ್ನು ಪ್ರತ್ಯೇಕವಾಗಿ ಹೆಗಲ ಮೇಲೆ ಹೊತ್ತು ತರುತ್ತಾರೆ. ಮುಖವಾಡವನ್ನು ಮೆರವಣಿಗೆಯಲ್ಲಿ ತಂದು ಭೂತದ ಮಾನಿಗೂ ಪಾತ್ರಿಗೂ ಒಪ್ಪಿಸುವ ಜವಾಬ್ದಾರಿ ಹೊತ್ತವನನ್ನು ‘ಮುಗೊತ್ತ ಮೂಲ್ಯ’ ಎಂದು ಕರೆಯುತ್ತಾರೆ. ಈ ವ್ಯಕ್ತಿಗೆ ಈ ಸೇವೆಗಾಗಿ ಸಂಭಾವನೆಯನ್ನು ನೀಡುತ್ತಾರೆ.
ಮುಖವಾಡದಲ್ಲಿ ಹಲವು ಮಾದರಿಗಳಿವೆ. ಈ ಮುಖವಡಗಳನ್ನು ಮರ, ಹಾಳೆ, ಲೋಹ ಈ ಮೂರು ಬಗೆಯ ವಸ್ತುಗಳಿಂದ ನಿರ್ಮಿಸುತ್ತಾರೆ. ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿಯಂತಹ ಭೂತಗಳಿಗೆ ಲೋಹದ ಮುಖವಾಡಗಳು ಇಲ್ಲದೇ ಹೋದಾಗ ಹಾಳೆಯ ಮುಖವಾಡಗಳನ್ನು ಬಳಸುತ್ತಾರೆ. ಉಳ್ಳಾಲ್ತಿ, ಕೊಡಮಣಿತ್ತಾಯ, ಮಲರಾಯಿ, ಜುಮಾದಿ, ರಕ್ತೇಶ್ವರಿ ಮುಂತಾದ ಪ್ರಧಾನ ಭೂತಗಳಿಗೆ ಲೋಹದ ಮುಖವಾಡಗಳು ಬಳಕೆಯಾಗುತ್ತವೆ. ಅನಂತಾಡಿಯ ಉಳ್ಳಾಲ್ಪಿಗೆ ಎರಡು ಬಗೆಯ ಮುಖವಾಡಗಳಿದ್ದು ಒಂದನ್ನು ‘ಚಂದನದ ಮುಗ'ಮತ್ತೊಂದನ್ನು ‘ಚಿನ್ನದ ನಾಲಗೆಯ ಬೆಳ್ಳಿಯ ಮುಗ' ಎಂಬ ಹೆಸರುಗಳಿಂದ ಕರೆಯುತ್ತಾರೆ. ಒಂದು ಭೂತದ ಮುಕವಾಡವನ್ನು ಮತ್ತೊಂದು ಭೂತಕ್ಕೆ ಉಪಯೋಗಿಸುವಂತಿಲ್ಲ. ಮುಖವಡ ಮತ್ತು ಆಯುಧಗಳನ್ನು ಒಂದು ಭೂತದ ಖಾಸಗಿ ಆಸ್ತಿಯಾಗಿ ಪರಿಗಣಿಸಲಾಗುತ್ತದೆ. ಬೇರೆ ಬೇರೆ ಕಡೆಯ ಪಂಜುರ್ಲಿ ಭೂತಗಳಿಗೆ ಹಂದಿಯ ಮುಖವನ್ನು ಹೋಲುವ ಒಂದೇ ವಿನ್ಯಾಸದ ಮುಖವಾಡಗಳಿವೆ. ಆದರೆ ಒಂದು ಕಡೆಯ ಮುಖವಾಡವನ್ನು ಮತ್ತೊಂದು ಕಡೆಗೆ ಸಾಗಿಸಿ ಆರಾಧನೆಯಲ್ಲಿ ಬಳಸುವಂತಿಲ್ಲ. ಆದರೆ ಒಂದೇ ಸೀಮೆಯೊಳಗೆ ಅಥವಾ ಗ್ರಾಮದೊಳಗೆ ಒಂದು ಭೂತ ಒಂದೇಅಥವಾ ಬೇರೆ ಬೇರೆ ಹೆಸರುಗಳಲ್ಲಿ ಆರಾಧನೆ ಪಡೆಯುತ್ತಿದ್ದು, ಭೂತದ ಭಂಡಾರ ಒಂದೇ ಆಗಿದ್ದರೆ ಆಗ ಆ ಮುಖವಾಡವನ್ನು ತರಬಹುದು. [೧]
ಮುಖವಾಡಗಳಲ್ಲಿ ಸಾಮಾನ್ಯವಾಗಿ ಎರಡು ವಿಧ
[ಬದಲಾಯಿಸಿ]- ಮನುಷ್ಯರ ಮುಖವನ್ನು ಹೋಲುವ ಮುಖವಾಡ
- ಪ್ರಾಣಿಗಳ ಮುಖವನ್ನು ಪ್ರತಿನಿಧಿಸುವ ಮುಖವಾಡ
ಮುಖವಾಡಗಳ ರಚನೆ ಮತ್ತು ಬಳಕೆ ಮುಖ್ಯವಾಗಿ ಭಯ, ಪೌರುಷ, ಕ್ರೌರ್ಯ, ಹಿಂಸೆ ಮೊದಲಾದ ಭಾವಗಳನ್ನು ಉದ್ದೀಪಿಸುವ ಉದ್ದೇಶ ಹೊಂದಿರುವುದರಿಂದ ಸಹಜವಾಗಿಯೇ ಅಗಲವಾಗಿ ತೆರೆದ ಬಾಯಿ, ಉದ್ದಕ್ಕೆ ಚಾಚಿಸುವ ನಾಲಗೆ, ಕೋರೆಹಲ್ಲುಗಳು, ದಿಟ್ಟಿಸುವ ಕಣ್ಣುಗಳು- ಈ ಬಗೆಯ ಲಕ್ಷಣಗಳನ್ನು ಮುಖವಾಡಗಳು ಹೊಂದಿದೆ. ಭಯದ ವಾತಾವರಣದ ನಿರ್ಮಾಣ ಮತ್ತು ಪೌರುಷದ ಅಭಿವ್ಯಕ್ತಿಯೇ ಮುಖ್ಯವಾಗಿರುವುದರಿಂದ ಮಿಸೆಯಿರುವ ಮುಖವಾಡವನ್ನು ಹೆಣ್ಣು ಜಾತಿಯ ಭೂತಗಳು ಧರಿಸಿದರೆ ಅದು ಅಭಾಸವಾಗುವುದಿಲ್ಲ. ಕೆಲಿಂಜ, ಕೇಪು, ಅನಂತಾಡಿ, ಮಾಣಿ ಮುಂತಾದ ಕಡೆಗಳ ಉಳ್ಳಲ್ತಿ ಹೆಣ್ಣು ಭೂತವು ಈ ಬಗೆಯ ಮುಖವಾಡವನ್ನು ಧರಿಸುತ್ತದೆ.
ಹಂದಿ, ಹುಲಿ ಮತ್ತು ಎತ್ತು- ಈ ಪ್ರಾಣಿಗಳ ಮುಖವನ್ನು ಹೋಲುವ ಮುಖವಾಡಗಳು ಕಂಡು ಬರುತ್ತದೆ. ಪ್ರಾಣೀ ಸಂಬಂಧಿಯಾಗಿ ಉಗಮ ಹೊಂದಿದ ಪಂಜುರ್ಲಿ, ಮಲರಾಯಿ,ಪಿಲಿ ಭೂತ, ಮೈಸಂದಾಯ- ಈ ಭೂತಗಳು ಅವುಗಳದೇ ಮುಖವನ್ನು ಹೋಲುವ ಉಗ್ರರೂಪದ ಮುಖವಾಡಗಳನ್ನು ಧರಿಸುತ್ತದೆ. ವೇಷಕಟ್ಟಿ ನಡೆಯುವ ಆರಾಧನೆಯ ಸಮಯದಲ್ಲಿ ಎರಡು ರೀತಿಯಲ್ಲಿ ಈ ಮುಖವಾಡಗಳು ಬಳಕೆಯಾಗುತ್ತವೆ. ಕಾರ್ಕಳ ಮತ್ತು ಮಂಗಳೂರು ತಾಲೂಕಿನ ಕೆಲವು ಕಡೆಗಳಲ್ಲಿ ಈ ಬಗೆಯ ಮುಖವಾಡಗಳನ್ನು ನೇರವಾಗಿ ಮುಖಕ್ಕೆ ಕಟ್ಟಿಕೊಳ್ಳದೆ ತಲೆಯ ಮೇಲೆ ಅಣಿಗೆ ತಾಗಿದಂತೆ ಕಟ್ಟಿಕೊಂಡು ನರ್ತಿಸುತ್ತಾರೆ. ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಮುಖವಾಡವನ್ನು ಮುಖದ ಮೇಲೆ ಕಟ್ಟಿಕೊಳ್ಳುವುದನ್ನು ಮಾತ್ರ ಕಾಣುತ್ತೇವೆ. ಇದನ್ನು ಪಂಬದ ಮತ್ತು ಪರವರ ನಡುವಿನ ವ್ಯತ್ಯಾಸ ಎಂದು ತೀರ್ಮಾನಿಸಬಹುದಾದರೂ ಇದಕ್ಕೆ ಅಪವಾದವು ಕಂಡು ಬರುತ್ತದೆ. ಬಂಟ್ವಾಳ ತಾಲೂಕಿನ ಪಂಜಿಕಲ್ಲು ರಾಯಿ ಎಂಬಲ್ಲಿ ಪರವನು ಕೊಡಮಣಿತ್ತಾಯ ಭೂತಕ್ಕೆ ವೇಷ ಕಟ್ಟುವ ಸಂದರ್ಭದಲ್ಲಿ ಮುಖವಡವನ್ನು ಮುಖಕ್ಕೆ ಕಟ್ಟಿಕೊಳ್ಳದೆ ತಲೆಯ ಮೇಲೆ ಅಣಿಯ ಭಾಗಕ್ಕೆ ಕಟ್ಟಿಕೊಂಡ ಉದಾಹರಣೆ ದೊರೆಯುತ್ತದೆ.
ಆಯುಧ
[ಬದಲಾಯಿಸಿ]ಆಯುಧಗಳು ಭೂತಗಳ ಅಲೌಕಿಕ ಮತ್ತು ಅತಿಮಾನುಷ ಮುಖವನ್ನು ಪ್ರತಿನಿಧಿಸುವಲ್ಲಿ ಸಹಕರಿಸುವ ಪರಿಕರಗಳಾಗಿವೆ. ಸುಳ್ಯ ಪರಿಸರದಲ್ಲಿ ಜರುಗುವ ಬೈನಾಟಿ ಉತ್ಸವದಲ್ಲಿ, ವಿಷ್ಣು ಮೂರ್ತಿ ಭೂತದ ಆರಾಧನೆಯಲ್ಲಿ ಅನೇಕ ಕತ್ತಿಗಳು, ಕಡ್ತಲೆಗಳು ಆಯುಧಗಳ ರೂಪದಲ್ಲಿ ಬಳಕೆಯಾಗುತ್ತವೆ. ಭೂತಗಳು ಹಿಡಿಯುವ ಉದ್ದನೆಯ ಕತ್ತಿಗಳನ್ನು 'ಕಡ್ತಲೆ'ಗಳೆಂದೇ ಕರೆಯುವ ವಾಡಿಕೆ. ಕಡಿ ತಲೆಯನ್ನು ಕಡಿಯಲು ಉಪಯೋಗಿಸಿದ ಕತ್ತಿ ಎಂಬರ್ಥ ಹೊರಡುತ್ತದೆ.[೨] ಕಡ್ತಲೆ, ಬಿಲ್ಲುಬಾಣ, ಅಡ್ಡಣ, ಬೆತ್ತ, ಬೆಂಕಿ, ಕೆಮಡದ ಪಾತ್ರೆ ಇವು ಭೂತಾರಾಧನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗಿ ಆಯುಧಗಳು. ಕಡ್ತಲೆಯ ಜೊತೆಗೆ ಹಿಡಿದುಕೊಳ್ಳುವ ಮಣಿ ಮತ್ತು ಬೆರಳಿಗೆ ಸಿಕ್ಕಿಸಿಕೊಳ್ಳುವ ಚವಳವನ್ನು ಆಯುಧಗಳ ಪಟ್ಟಿಯಲ್ಲಿ ಸೇರಿಸಬಹುದು. ಮುಖವಾಡದಂತೆ ಆಯುಧಗಳು ಕೂಡ ಭೂತಾರಾಧನೆಯ ಪೌರುಷದ ಚಿತ್ರವನ್ನು ಉಜ್ವಲಗೊಳಿಸುತ್ತವೆ. ಮುಖವಾಡ ಮತ್ತು ಅಣಿಯನ್ನು ಕಟ್ಟಿಕೊಂಡ ಭೂತದ ವೇಷಧಾರಿಯು ಕೈಯಲ್ಲಿಕಡ್ತಲೆ ಮತ್ತು ಅಡ್ಡನವನ್ನು ಹಿಡಿದುಕೊಮಡು ಮಾಡುವ ಉಗ್ರನರ್ತನವು ಯುದ್ಧದಲ್ಲಿ ನಡೆಯುವ ಹೋರಾಟದ ದೃಷ್ಯವನ್ನು ನೆನಪಿಗೆ ತರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]