ಮನಗೂಳಿ
ಮನಗೂಳಿ
ಮನಗೂಳಿ | |
---|---|
village |
ಮನಗೂಳಿ ಪಟ್ಟಣವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿದೆ. ಮನಗೂಳಿ ಪಟ್ಟಣವು ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿ-61 ಮತ್ತು ರಾಷ್ಟ್ರೀಯ ಹೆದ್ದಾರಿ-50ರಲ್ಲಿದೆ . ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 22 ಕಿ.ಮಿ. ದೂರವಿದೆ.
ಚರಿತ್ರೆ
[ಬದಲಾಯಿಸಿ]ಮನಗೂಳಿಯಲ್ಲಿ ಒಳ್ಳೆಯ ಶಿಕ್ಷಣ, ವ್ಯಾಪಾರ, ಹಣಕಾಸು, ನೆಮ್ಮದಿ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.
ಮನಗೂಳಿಯು ವಿಜಾಪುರದಿಂದ ಪೂರ್ವಕ್ಕೆ ೨೫ ಕಿ.ಮೀ. ದೂರದಲ್ಲಿದೆ. ಮನಗೂಳಿಯು ಶಾಸನಗಳ ಪ್ರಕಾರ ಮಾಣಿಕ್ಯವಳ್ಳಿ ಮನಿಂಗವಳ್ಳಿ ಎಂದು ಪ್ರಸಿದ್ಧವಾಗಿತ್ತು. ಮನಗೂಳಿಯು ಬಾಗೇವಾಡಿ ಅಗ್ರಹಾರದ ಆಡಳಿತಕ್ಕೆ ಒಳಪಟ್ಟ ಗ್ರಾಮವಾಗಿತ್ತು ಇಲ್ಲಿನ ರಾಮೇಶ್ವರ ದೇವಾಲಯವು ಕಲ್ಯಾಣದ ಚಾಳುಕ್ಯರ ಕಾಲದ ರಚನೆಯಾಗಿದೆ.
ಇದಲ್ಲದೇ ಮನಗೂಳಿಯಲ್ಲಿ ಹನುಮಂತ, ಸೋಮೇಶ್ವರ ದೇವಾಲಯಗಳು ಹಾಗೂ ವಿಠೋಬ, ರಾಘವೇಂದ್ರ ಸ್ವಾಮಿಗಳ ಮಠವು ಸುಪ್ರಸಿದ್ಧವಾಗಿವೆ.
ಭೌಗೋಳಿಕ
[ಬದಲಾಯಿಸಿ]ಗ್ರಾಮವು ಭೌಗೋಳಿಕವಾಗಿ ೧೬* ೩೨ ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧ ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
[ಬದಲಾಯಿಸಿ]- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ
[ಬದಲಾಯಿಸಿ]ಗ್ರಾಮದಲ್ಲಿ ಜನಸಂಖ್ಯೆ(2011ರಂತೆ) ಸುಮಾರು 14,306 ಇದೆ. ಅದರಲ್ಲಿ 7,618 ಪುರುಷರು ಮತ್ತು 7,491 ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕ
[ಬದಲಾಯಿಸಿ]ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ
[ಬದಲಾಯಿಸಿ]ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮ
[ಬದಲಾಯಿಸಿ]ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
ಭಾಷೆ
[ಬದಲಾಯಿಸಿ]ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯ
[ಬದಲಾಯಿಸಿ]- ಶ್ರೀ ಗಣೇಶ ದೇವಸ್ಥಾನ
- ಶ್ರೀ ರಾಮೇಶ್ವರ ದೇವಾಲಯ
- ಶ್ರೀ ಸೋಮೇಶ್ವರ ದೇವಾಲಯ
- ಶ್ರೀ ಗ್ರಾಮದೇವಿ ದೇವಾಲಯ
- ಶ್ರೀ ರೇವಣಸಿದ್ದೇಶ್ವರ ದೇವಾಲಯ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಬಸವೇಶ್ವರ ದೇವಾಲಯ
- ಶ್ರೀ ವೆಂಕಟೇಶ್ವರ ದೇವಾಲಯ
- ಶ್ರೀ ಪಾಂಡುರಂಗ ದೇವಾಲಯ
- ಶ್ರೀ ಹಣಮಾನ್ (ಆಂಜನೇಯ) ದೇವಾಲಯ
- ಶ್ರೀ ಮಾಳಿಂಗರಾಯ ದೇವಾಲಯ
- ಶ್ರೀ ಬೀರಲಿಂಗೇಶ್ವರ ದೇವಾಲಯ
ಮಸೀದಿ
[ಬದಲಾಯಿಸಿ]ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
[ಬದಲಾಯಿಸಿ]ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ತೊಗರಿ , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆ
[ಬದಲಾಯಿಸಿ]ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಕೃಷಿ ಮತ್ತು ತೋಟಗಾರಿಕೆ
[ಬದಲಾಯಿಸಿ]ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆ
[ಬದಲಾಯಿಸಿ]ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗ
[ಬದಲಾಯಿಸಿ]ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ,ಕುರಿಸಾಕಾಣಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆ
[ಬದಲಾಯಿಸಿ]ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯ
[ಬದಲಾಯಿಸಿ]ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿ
[ಬದಲಾಯಿಸಿ]ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಹಬ್ಬ
[ಬದಲಾಯಿಸಿ]ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
[ಬದಲಾಯಿಸಿ]- ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಮನಗೂಳಿ
- ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಮನಗೂಳಿ
- ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಮನಗೂಳಿ
- ಶ್ರೀ ಗುರು ಸಂಗನಬಸವ ಶಿವಾಚಾರ್ಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆ, ಮನಗೂಳಿ
- ಗುರುಬಸವ ಕಿರಿಯ ಪ್ರಾಥಮಿಕ ಶಾಲೆ, ಮನಗೂಳಿ
- ಸ್ವಾಮಿ ವಿವೇಕಾನಂದ ಪ್ರೌಡ ಶಾಲೆ, ಮನಗೂಳಿ
- ಬಿ.ಎಸ್.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯ, ಮನಗೂಳಿ
- ಬಿ.ಎಸ್. ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮನಗೂಳಿ
- ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಮನಗೂಳಿ
- ಜನತಾ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಮನಗೂಳಿ
ಸಾಕ್ಷರತೆ
[ಬದಲಾಯಿಸಿ]ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ರಾಜಕೀಯ
[ಬದಲಾಯಿಸಿ]ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರ ಮತ್ತು ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ದಿ||ಶ್ರೀ ಬಿ.ಎಸ್.ಪಾಟೀಲರು ಮನಗೂಳಿ ಗ್ರಾಮದವರು.
ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.
ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಆಲಮಟ್ಟಿ ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.
ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು ಬಿಜೆಪಿ ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್ ಪೈಪೋಟಿ ನಡೆಸಿದೆ.
ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ.
ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲ. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ ಅವರು ಐದು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ.ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ ಬಿ.ಎಸ್.ಪಾಟೀಲ(ಮನಗೂಳಿ) ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು.
ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ ಬಿಜೆಪಿ ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ ಬಿಜೆಪಿ ಖಾತೆ ತೆರೆದ ಎಸ್.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004 ಹಾಗೂ 2013ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.
13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್.ಕೆ.ಬೆಳ್ಳುಬ್ಬಿ ಅವರ ಮೂಲಕ ಬಿಜೆಪಿ ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ.
ಕ್ಷೇತ್ರದ ವಿಶೇಷತೆ
- ಕಾಂಗ್ರೇಸಿನ ಬಿ.ಎಸ್.ಪಾಟೀಲ(ಮನಗೂಳಿ)ರು 6 ಸಲ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದರು.
- ಕ್ಷೇತ್ರದಿಂದ 1957 ಮತ್ತು 1962ರಲ್ಲಿ ಕಾಂಗ್ರೇಸಿನಿಂದ ಸುಶಿಲಾಬಾಯಿ ಶಹಾ ಅವರನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು.
- ಬಿಜೆಪಿಯಿಂದ ಎಸ್.ಕೆ.ಬೆಳ್ಳುಬ್ಬಿಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು.
- ಕ್ಷೇತ್ರದಿಂದ ಕಾಂಗ್ರೇಸಿನ ಶಿವಾನಂದ ಪಾಟೀಲ ಮೂರು ಬಾರಿ ಆಯ್ಕೆಯಾಗಿ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.
ಜನಪ್ರತಿನಿಧಿಗಳ ವಿವರ
ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಶಿವಾನಂದ ಪಾಟೀಲ | ಕಾಂಗ್ರೇಸ್ | 58647 | ಅಪ್ಪು ಪಾಟೀಲ(ಮನಗೂಳಿ) | ಜೆಡಿಎಸ್ | 55461 |
2013 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಶಿವಾನಂದ ಪಾಟೀಲ | ಕಾಂಗ್ರೇಸ್ | 56329 | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 36653 |
2008 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 48481 | ಶಿವಾನಂದ ಪಾಟೀಲ | ಕಾಂಗ್ರೇಸ್ | 34594 |
2004 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಶಿವಾನಂದ ಪಾಟೀಲ | ಕಾಂಗ್ರೇಸ್ | 50238 | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 46933 |
1999 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಎಸ್.ಕೆ.ಬೆಳ್ಳುಬ್ಬಿ | ಬಿ.ಜೆ.ಪಿ | 50543 | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 40487 |
1994 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 27557 | ಕುಮಾರಗೌಡ ಪಾಟೀಲ | ಜೆ.ಡಿ | 19270 |
1989 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 37868 | ಕುಮಾರಗೌಡ ಪಾಟೀಲ | ಜೆ.ಡಿ | 25235 |
1985 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಕುಮಾರಗೌಡ ಪಾಟೀಲ | ಜೆ.ಎನ್.ಪಿ | 29320 | ಭೀಮನಗೌಡ ಪಾಟೀಲ | ಕಾಂಗ್ರೇಸ್ | 23744 |
1983 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 34386 | ರಾಜಶೇಖರ ಪಟ್ಟಣಶೆಟ್ಟಿ | ಬಿಜೆಪಿ | 15577 |
1978 | ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಜೆ.ಎನ್.ಪಿ | 27806 | ಬಸವಂತರಾಯ ಪಾಟೀಲ | ಕಾಂಗ್ರೇಸ್ | 16048 |
ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಎನ್.ಸಿ.ಓ | 23061 | ಜಿ.ವಿ.ಪಾಟೀಲ | ಕಾಂಗ್ರೇಸ್ | 16250 |
1967 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಿ.ಎಸ್.ಪಾಟೀಲ(ಮನಗೂಳಿ) | ಕಾಂಗ್ರೇಸ್ | 25173 | ಜಿ.ಬಿ.ಈರಯ್ಯ | ಸ್ವತಂತ್ರ | 2759 |
1962 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಸುಶಿಲಾಬಾಯಿ ಶಹಾ | ಕಾಂಗ್ರೇಸ್ | 12365 | ರಾಮನಗೌಡ ಪಾಟೀಲ | ಸ್ವತಂತ್ರ | 6113 |
1957 | ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಸುಶಿಲಾಬಾಯಿ ಶಹಾ | ಕಾಂಗ್ರೇಸ್ | 11941 | ರಾಮಣ್ಣ ಕಲ್ಲೂರ | ಸ್ವತಂತ್ರ | 4883 |
ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ | ಶಂಕರಗೌಡ ಪಾಟೀಲ | ಕಾಂಗ್ರೇಸ್ | 17752 | ಸಾವಳಗೆಪ್ಪ ನಂದಿ | ಕೆಎಂಪಿಪಿ | 5507 |
ಆರೋಗ್ಯ
[ಬದಲಾಯಿಸಿ]ಗ್ರಾಮದಲ್ಲಿ 24*7 ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.
ಆರಕ್ಷಕ (ಪೋಲಿಸ್) ಠಾಣೆ
[ಬದಲಾಯಿಸಿ]ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
ವಿದ್ಯುತ್ ಪರಿವರ್ತನಾ ಕೇಂದ್ರ
[ಬದಲಾಯಿಸಿ]೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.
ಮಳೆ ಮಾಪನ ಕೇಂದ್ರ
[ಬದಲಾಯಿಸಿ]ಗ್ರಾಮದಲ್ಲಿ ಮಳೆ ಮಾಪನ ಕೇಂದ್ರವಿದೆ.
ಬ್ಯಾಂಕ್
[ಬದಲಾಯಿಸಿ]ಗ್ರಾಮದಲ್ಲಿ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗಳು ಸ್ಥಾಪನೆಯಾಗಿದೆ.
ಅಂಚೆ ಕಚೇರಿ
[ಬದಲಾಯಿಸಿ]ಗ್ರಾಮದಲ್ಲಿ ಅಂಚೆ ಕಚೇರಿಯಿದೆ.
ಮನಗೂಳಿ - 586122 (ನಂದಿಹಾಳ, ಯರನಾಳ, ಹತ್ತರಕಿಹಾಳ, ಹಿಟ್ಟಿನಹಳ್ಳಿ, ಜುಮನಾಳ).
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
[ಬದಲಾಯಿಸಿ]ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿದೆ.
ಕೆರೆ
[ಬದಲಾಯಿಸಿ]ಗ್ರಾಮದ ಹತ್ತಿರ ಕೆರೆಯಿದೆ.
ಹಾಲು ಉತ್ಪಾದಕ ಸಹಕಾರಿ ಸಂಘ
[ಬದಲಾಯಿಸಿ]ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘಯಿದೆ.
ಪಶು ಆಸ್ಪತ್ರೆ
[ಬದಲಾಯಿಸಿ]ಗ್ರಾಮದಲ್ಲಿ ಪಶು ಆಸ್ಪತ್ರೆಯಿದೆ.
ಸರಕಾರಿ ವಾಹನ ನಿಲ್ದಾಣ
[ಬದಲಾಯಿಸಿ]ಗ್ರಾಮದಲ್ಲಿ ಸರಕಾರಿ ವಾಹನ ನಿಲ್ದಾಣವಿದೆ.
ಪಟ್ಟಣ ಪಂಚಾಯತಿ
[ಬದಲಾಯಿಸಿ]- ಪಟ್ಟಣ ಪಂಚಾಯತಿ ಕಾರ್ಯಾಲಯ, ಮನಗೂಳಿ
ಪಟ್ಟಣ ಪಂಚಾಯತಿ ಕಾರ್ಯಾಲಯ, ಮನಗೂಳಿಯ ಅಂತರಜಾಲ ತಾಣ Archived 2019-11-13 ವೇಬ್ಯಾಕ್ ಮೆಷಿನ್ ನಲ್ಲಿ.
- Short description is different from Wikidata
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಬಸವನ ಬಾಗೇವಾಡಿ ತಾಲ್ಲೂಕಿನ ಹಳ್ಳಿಗಳು
- ಬಿಜಾಪುರ ಜಿಲ್ಲೆ