ವಿಷಯಕ್ಕೆ ಹೋಗು

ಮರುಳ ಮುನಿಯನ ಕಗ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರುಳ ಮುನಿಯನ ಕಗ್ಗ
ಲೇಖಕರುಡಿ.ವಿ.ಗುಂಡಪ್ಪ
ಮೂಲ ಹೆಸರುಮಂಕುತಿಮ್ಮನ ಕಗ್ಗ ಭಾಗ ೨
ದೇಶಭಾರತ
ಭಾಷೆಕನ್ನಡ
ಸರಣಿಮಂಕುತಿಮ್ಮನ ಕಗ್ಗ
ಪ್ರಕಾಶಕರುಕಾವ್ಯಾಲಯ, ಮೈಸೂರು
ಪ್ರಕಟವಾದ ದಿನಾಂಕ
1984
ಮಾಧ್ಯಮ ಪ್ರಕಾರಪೇಪರ್ ಬ್ಯಾಕ್
ಪುಟಗಳು೨೧೭

ಮರುಳ ಮುನಿಯನ ಕಗ್ಗ[] ಮಂಕುತಿಮ್ಮನ ಕಗ್ಗದ ಮುಂದುವರಿದ ಭಾಗವೇ ಆಗಿದೆ. ಇದು ಡಿವಿಜಿಯವರ ಮರಣಾನಂತರ ಆಯ್ದು ಪ್ರಕಟಿಸಿರುವ ಕವಿತೆಗಳ ಗೊಂಚಲು. ಪರಮಾತ್ಮನ ಸಾಕ್ಷಾತ್ಕಾರದ ಕುರಿತು ಅತೀವ ಆಸಕ್ತಿ ವಹಿಸಿದ್ದ ವ್ಯಕ್ತಿಯೊಬ್ಬನ ಭಾವಾಭಿವ್ಯಕ್ತಿಯ ಸಾಧನವಾಗಿ ಇದನ್ನು ಕಾಣಬಹುದು. ಮರುಳನೊಬ್ಬ ಬರೆದಿರುವಂತೆ ತೋರ್ಪಡಿಸಿಕೊಂಡರೂ ಪ್ರಬುದ್ಧ ವ್ಯಕ್ತಿಯ ಜ್ಞಾನಶ್ರೇಷ್ಠತೆಯನ್ನು ಒಂದೊಂದು ಕವಿತೆಯಲ್ಲಿಯೂ ಕಾಣಬಹುದು. "ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ" ಎಂದಿದ್ದರೂ ಮರುಳ ಮುನಿಯ ಅಭಿವ್ಯಕ್ತಿಯಲ್ಲಿ ಮಂಕುತಿಮ್ಮನಿಗಿಂತಲೂ ಮಾಗಿದ್ದಾನೆ, ಹೆಚ್ಚು ಅನುಭವ ಪಡೆದಿದ್ದಾನೆ ಎನ್ನಬಹುದು. ಇದರ ಒಂದೊಂದು ಸಾಲನ್ನೂ ಡಿ.ವಿ.ಜಿ. ಅನುಭವಿಸಿ ಬರೆದರು.

ಡಿವಿಜಿ ಕಾಲಾಕಾಲಕ್ಕೆ ಬರೆದಿರುವ ಕವಿತೆಗಳನ್ನು ಸಂಗ್ರಹಿಸಿ ಇಲ್ಲಿ ಒಟ್ಟುಗೂಡಿಸಲಾಗಿದೆ. ಯಾವಾಗ ಪ್ರಕಟಗೊಳ್ಳಲಿವೆಯೆಂದು ಪ್ರಾಯಶಃ ಅವರಿಗೂ ಗೊತ್ತಿರಲಿಲ್ಲ. ಗೋಖಲೆ ಸಾರ್ವಜನಿಕ ಸಂಸ್ಥೆಯೊಂದಿಗೆ ಡಿವಿಜಿ ಅವರಿಗೆ ಸುದೀರ್ಘ ಕಾಲದ ಒಡನಾಟವಿದ್ದುದರಿಂದ ಅವರ ಸೊಸೆ ವಸಂತಮ್ಮ (ಬಿಜಿಎಲ್ ಸ್ವಾಮಿಯವರ ಧರ್ಮಪತ್ನಿ) ಕವಿತೆಗಳನ್ನು ಪ್ರಕಟಿಸುವ ಹಕ್ಕನ್ನು ಸಂಸ್ಥೆಗೆ ಬಿಟ್ಟುಕೊಟ್ಟರು. ಸಂಸ್ಥೆ ಇದಕ್ಕಾಗಿ ಸಮಿತಿಯೊಂದನ್ನು ರಚಿಸಿ ನಿಟ್ಟೂರು ಶ್ರೀನಿವಾಸ ರಾಯರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಆ ಸಮಿತಿ ಡಿವಿಜಿಯವರ ಸಮಾನಮನಸ್ಕರೂ ಆಪ್ತರೂ ಆದಂಥ ಎನ್. ರಂಗನಾಥ ಶರ್ಮಾರವರಿಗೆ ಕವಿತೆಗಳ ಕರಡು ತಿದ್ದಲು ಅನುವು ಮಾಡಿಕೊಟ್ಟಿತು. ಎನ್. ರಂಗನಾಥ ಶರ್ಮಾರವರು ಕರಡು ತಿದ್ದುವ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೆಲವೆಡೆ ಅಕ್ಷರಗಳು ಸ್ಪಷ್ಟವಿರಲಿಲ್ಲ, ಇನ್ನು ಕೆಲವೆಡೆ ಪದಗಳು ಬಿಟ್ಟುಹೋಗಿದ್ದುವು. ಈ ಎಲ್ಲಾ ಲೋಪಗಳನ್ನು ಛಂದಸ್ಸಿಗೂ ಅರ್ಥಕ್ಕೂ ಚ್ಯುತಿಯಾಗದಂತೆ ರಂಗನಾಥ ಶರ್ಮಾರವರು ನಿವಾರಿಸಿದರು. ರಂಗನಾಥ ಶರ್ಮಾರವರು ಸೇರಿಸಿದ ಪದಗಳನ್ನೂ ಸಾಲುಗಳನ್ನೂ ಒಳಗೊಂಡ ಕವಿತೆಗಳನ್ನು ಅನುಬಂಧವಾಗಿ ಸೇರಿಸಿದ್ದಾರೆ. ಈ ವಿವರಗಳನ್ನು ಮರುಳ ಮುನಿಯನ ಕಗ್ಗದ ಮುನ್ನುಡಿಯಲ್ಲಿ ಓದಬಹುದು.[][][]

ಕವಿತೆಗಳು

[ಬದಲಾಯಿಸಿ]

ಬೆಟ್ಟತಿಟ್ಟುಗಳಿಂದೆ ವಾಯುರಭಸಕೆ ತಡೆಯೆ? |
ತಿಟ್ಟುತಗ್ಗುಗಳಿಂದೆ ಹೊಳೆ (ಹರಿಯದಿಹುದೆ)? ||
ರಟ್ಟೆಬೆಟ್ಟುಗಳು ಬಾಗದೆ (ನೆಟ್ಟಗಿರಬಹುದೆ)? |
ಸೊಟ್ಟಿಗುಂ ಬೆಲೆಯುಂಟು - ಮರುಳ ಮುನಿಯ || (೫೯೨)

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ |
ಸಂಧಾನಗಳನೆಲ್ಲ ಮೀರ‍್ದುದಾ ಲೀಲೆ ||
ಅಂದಂದಿಗಂದಂದು ಬಂದಿಹುದು ಕರ್ತವ್ಯ |
ಸಂದುದನು ನಿರ್ವಹಿಸು - ಮರುಳ ಮುನಿಯ || (೫೯೩)

ಮರುಳ ಮುನಿಯನ ಕಗ್ಗದಲ್ಲಿ ಒಟ್ಟು ೮೨೫ ಕವಿತೆಗಳಿವೆ. ಮಂಕುತಿಮ್ಮನ ಕಗ್ಗಕ್ಕೆ ಹೋಲಿಸಿದರೆ ಸಂಖ್ಯೆಯಲ್ಲಿ ಅದಕ್ಕಿಂತ ೧೨೦ ಕಡಿಮೆ.[] ಆದರೆ ಒಟ್ಟಂದದಲ್ಲಿ ಮಂಕುತಿಮ್ಮನ ಕಗ್ಗಕ್ಕಿಂತಲೂ ಮರುಳ ಮುನಿಯನ ಕಗ್ಗ ಮಿಗಿಲೆಂದು ಬಲ್ಲವರು ಹೇಳುತ್ತಾರೆ.[]

ಹೆಚ್ಚಿಗೆ ಓದಲು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಮರುಳ ಮುನಿಯನ ಕಗ್ಗ".
  2. ೨.೦ ೨.೧ ಎನ್. ರಂಗನಾಥ ಶರ್ಮಾ (1984). ಮರುಳ ಮುನಿಯನ ಕಗ್ಗಕ್ಕೆ ಮುನ್ನುಡಿ. ಕಾವ್ಯಾಲಯ ಪ್ರಕಾಶನ, ಮೈಸೂರು ಗೋಖಲೆ ಸಾರ್ವಜನಿಕ ಸಂಸ್ಥೆ.
  3. ರವೀಂದ್ರ ಭಟ್ಟ (ಜನವರಿ 26, 2014). "ಮಂಕುತಿಮ್ಮನ ತಮ್ಮ ರಂಗನಾಥ ಶರ್ಮಾ". ಬೆಂಗಳೂರು: ಪ್ರಜಾವಾಣಿ. Retrieved ಏಪ್ರಿಲ್ 07, 2014. {{cite news}}: Check date values in: |accessdate= (help)
  4. ರವೀಂದ್ರ ಭಟ್ಟ (ಜುಲಾಯಿ 15, 2012). "ಮಂಕುತಿಮ್ಮನ ಒಡನಾಡಿ ರಂಗನಾಥ ಶರ್ಮಾ". ಬೆಂಗಳೂರು: ಪ್ರಜಾವಾಣಿ. Archived from the original on 2016-03-04. Retrieved ಏಪ್ರಿಲ್ 07, 2014. {{cite news}}: Check date values in: |accessdate= and |date= (help)
  5. ಜಿ ವೆಂಕಟಸುಬ್ಬಯ್ಯ (ಸೆಪ್ಟೆಂಬರ್ 10, 1995). ಡಿ.ವಿ. ಗುಂಡಪ್ಪ. ಸಾಹಿತ್ಯ ಅಕಾದೆಮಿ. ISBN 81-260-1386-9.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]