ವಿಷಯಕ್ಕೆ ಹೋಗು

ಮಹಾಬಲಿಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಸ್ಥಾನಗಳ ಪರಿದೃಶ್ಯಕ ನೋಟ

ಮಹಾಬಲಿಪುರ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ, ಬಂಗಾಲಕೊಲ್ಲಿಯ ತೀರದಲ್ಲಿರುವ ಐತಿಹಾಸಿಕ ಸ್ಥಳ. ಮದರಾಸಿನ ದಕ್ಪಿಣಕ್ಕೆ 58 ಕಿ.ಮೀ. ದೂರದಲ್ಲಿದೆ. ಪಲ್ಲವ ಶೈಲಿಯ ವಾಸ್ತುಶಿಲ್ಪ ಸಂಪತ್ತು ಸೌಂದರ್ಯಗಳಿಗೆ ಈ ಸ್ಥಳ ಪ್ರಸಿದ್ಧವಾಗಿದೆ. ಇದಕ್ಕೆ ಮಲ್ಪಪುರಮ್, ಮಾಮಲ್ಲಪುರಮ್, ತಿರಕ್ಕಡಮಲೈ ಇತ್ಯಾದಿ ಹೆಸರುಗಳಿವೆ. ಪ್ರಾಚೀನ ಕಾಲದಲ್ಲಿ ಇದನ್ನು ಬಾನಪುರವೆಂದು ಕರೆಯುತ್ತಿದ್ದರಂತೆ. ಜನಸಂಖ್ಯೆಯ ಸುಮಾರು 5000.

ಇತಿಹಾಸ

[ಬದಲಾಯಿಸಿ]

ಆಗ್ನೇಯ ಏಷ್ಯ ಹಾಗೂ ಮೆಡಿಟರೇನಿಯನ್ ದೇಶಗಳೊಡನೆ ಕಡಲ ವ್ಯಾಪಾರ ಸಂಬಂಧ ಹೊಂದಿದ್ದ ಈ ಊರು ಪ್ರಾಚೀನದಲ್ಲಿ ಪ್ರಧಾನ ರೇವು ಪಟ್ಟಣಗಳಲ್ಲೊಂದೆನಿಸಿತ್ತು. ಸಂಗಮ್ ಕಾಲದ ತಮಿಳು ಸಾಹಿತ್ಯದಲ್ಲಿಯ ಉಲ್ಲೀಖಗಳಿಂದ ಮತ್ತು ಈ ಪ್ರದೇಶದಲ್ಲಿ ಅನ್ವೇಷಿತವಾದ ರೋಮನ್, ನಾಣ್ಯಗಳಿಂದ ಇದಕ್ಕೆ ಪುಷ್ಟಿ ದೊರೆತಿವೆ. ಬೃಹದ್ಭಾರತದ ಪ್ರದೇಶಗಳಲ್ಲಿ ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಬಿತ್ತಿದ ದಕ್ಷಿಣ ಭಾರತದ ವಲಸೆಗಾರರು ಹೊರಟ ರೇವುಪಟ್ಟಣಗಳಲ್ಲಿ ಮಹಾಬಲಿಪುರವೂ ಸೇರಿದೆ. ಜಾವಾ ಹಾಗೂ ಕಾಂಬೋಡಿಯಾಗಳಲ್ಲಿಯ ವಾಸ್ತುರಚನೆಗಳಲ್ಲಿ ಇಲ್ಲಿಯ ವಾಸ್ತುಶೈಲಿಯ ಗಣನೀಯ ಪ್ರಭಾವ ಪ್ರೇರಣೆ ಕಂಡುಬರುತ್ತದೆ.

ದೇಗುಲಗಳು ಮತ್ತು ಗುಹೆಗಳು

[ಬದಲಾಯಿಸಿ]

ದೇಗುಲ ನಿರ್ಮಾಣದ ಇತಿಹಾಸದಲ್ಲಿ ಮಹಾಬಲಿಪುರದ ಏಕಶಿಲಾದೇವಾಲಯಗಳಿಗೆ ಪ್ರಮುಖ ಸ್ಥಾನವಿದೆ. ಈ ರಚನೆಗಳನ್ನು ಪಗೋಡ ರಥಗಳೆಂದು ಕರೆಯಲಾಗಿದೆ. ಬಹುಶಃ ಈ ರಥಗಳ ನಿರ್ಮಾಣಕ್ಕೆ ಪಶ್ಛಿಮ ಭಾರತದ ಗುಹಾವಿಹಾರಗಳು ಪ್ರೇರಕ. ಇಲ್ಲಿ ಇಂಥ ಒಂಬತ್ತು ಏಕಶಿಲಾ ರಚನೆಗಳಿವೆ- ದಕ್ಷಿಣದ ಸಮುದ್ರತೀರಿದಲ್ಲಿ ಐದು, ಊರಿನ ಮಧ್ಯದ ಗುಡ್ಡದಲ್ಲಿ ಒಂದು ಹಾಗೂ ಗುಡ್ಡದ ಪಶ್ಚಿಮ ಭಾಗದಲ್ಲಿ ಮೂರು.

ಸಮುದ್ರ ದಂಡೆಯಲ್ಲಿ ದಕ್ಷಿಣೋತ್ತರವಾಗಿರುವ ದೊಡ್ಡ ಬಂಡೆಯಲ್ಲಿ ದ್ರೌಪದಿ, ಅರ್ಜುನ, ಭೀಮ ಹಾಗೂ ಧರ್ಮರಾಜ ರಥಗಳನ್ನೂ ಇನ್ನೊಂದು ಸಣ್ಣ ಬಂಡೆಯಲ್ಲಿ ನಕುಲ ಸಹದೇವ ರಥವನ್ನೂ ಕಡೆಯಲಾಗಿದೆ. ಈ ದೇವಾಲಯಗಳಿಗೆ ಪಂಚಪಾಂಡವರ ಹೆಸರು ಬರಲು ಕಾರಣ ತಿಳಿಯದು, ನಾಲ್ಕು ರಥಗಳು ಒಂದೇ ಸಾಲಿನಲ್ಲಿದ್ದರೆ ಐದನೆಯ ಅರ್ಜುನನ ರಥ ಆವುಗಳ ಎದುರಿನಲ್ಲಿದೆ. ಪಶ್ಚಿಮಾಭಿಮುಖವಾಗಿರುವ ದ್ರೌಪದಿ ರಥ ಗುಡಿಸಿಲ ಮಾದರಿಯಲ್ಲಿರುವ ಸರಳ ಸುಂದರ ರಚನೆ. ಗುಡಿಯ ಎರಡೂ ಪಾರ್ಶ್ವಗಳಲ್ಲಿ ಧನುರ್ಧಾರಿ ಮತ್ತು ಖಡ್ಗಧಾರಿ ಸ್ತ್ರೀದ್ವಾರಪಾಲ ಮೂರ್ತಿಗಳಿವೆ. ಪೂರ್ವ ಗೋಡೆಯ ಮೇಲಿನ ಚತುರ್ಭುಗ ದುರ್ಗೆಯ ಉಬ್ಬುಗೆತ್ತನೆ ಗಮನಾರ್ಹ. ಗುಡಿಯ ಮುಂದೆ ದೇವಿಯ ವಾಹನವಾದ ಸಿಂಹಶಿಲ್ಪವಿದೆ.

ಪಶ್ಚಿಮಾಭಿಮುಖವಾಗಿರುವ, ಎರಡಂತಸ್ತಿನಿಂದ ಕೂಡಿದ ಅರ್ಜುನನ ರಥ್ಯಮುಖ ಮಂಟಪ ಸಹಿತವಾಗಿದೆ. ಗುಡಿಯೊಳಗೆ ಶಿಲ್ಪಗಳಿಲ್ಲ, ಹೊರಗಣ ಗೋಡೆಗಳ ಮೇಲೆ ದೇವ ಮಾನವರ ಕಮನೀಯ ಶಿಲ್ಪಗಳಿವೆ. ದ್ವಾರಪಾಲಕರು, ಗರುಡ ಸಮೇತವಾದ ವಿಷ್ಣು, ಆನೆಯನ್ನೇರಿದ ಇಂದ್ರ. ನಂದಿಯನ್ನೊರಗಿ ನಿಂತ ಶಿವ ಮುಂತಾದ ಶಿಲ್ಪಗಳು ಗಮನ ಸೆಳೆಯುತ್ತವೆ. ಗುಡಿಯ ಎದುರಿನಲ್ಲಿ ದೊಡ್ಡ ನಂದಿ ಮೂರ್ತಿ ಇದೆ. ಅಪೂರ್ಣ ರಚನೆಯಾದರೂ ಇದೊಂದು ಉತ್ಕೃಷ್ಟ ಶಿಲ್ಪ. ಸಹದೇವ ರಥ ದಕ್ಷಿಣಾಭಿಮುಖವಾಗಿದೆ. ಮುಖಮಂಟಪದ ಕಂಬಗಳನ್ನು ಮಲಗಿರುವ ಆನೆಗಳ ಮೇಲಿರುವಂತೆ ಕಡೆಯಲಾಗಿದೆ. ಇಲ್ಲಿ ಆನೆಯೇ ದ್ವಾರಪಾಲ ಶಿಲ್ಪ. ಈ ಗುಡಿಯ ಪೂರ್ವಕ್ಕೆ ಒಂದೇ ಕಲ್ಲಿನಲ್ಲಿ ಕಡೆದ ಬೃಹತ್ ಗಜಶಿಲ್ಪವಿದೆ. ಬಹುಶಃ ಈ ಗುಡಿ ಇಂದ್ರನಿಗಾಗಿ ನಿರ್ಮಿತವಾದದ್ದಿರಬೇಕು.

ರಥಸಾಲಿನಲ್ಲಿ ಮೂರನೆಯದಾದ ಭೀಮರಥ ಪಶ್ಚಿಮಭಿಮುಖವಾಗಿರುವ ಎರಡಂತಸ್ತಿನ ದೊಡ್ಡ ಕಟ್ಟಡ. ಇದರ ಉದ್ದ 12.8 ಮೀ, ಅಗಲ 7,6ಮೀ, ಎತ್ತರ 7.6ಮೀ, ಸಿಂಹಪೀಠವಿರುವ ಸ್ತಂಭಗಳಿಂದ ಕೂಡಿದ ಈ ರಥಕ್ಕೆ ಗರ್ಭಗುಡಿಯಿಲ್ಲ; ಶಿಲ್ಪಗಳೂ ಇಲ್ಲ. ಪಲ್ಲವರ ಕೆಲವು ಅಪೂರ್ಣ ನಿರ್ಮಾಣಗಳಲ್ಲಿ ಇದೂ ಒಂದು.

ಮೂರಂತಸ್ತಿನ ಧರ್ಮರಾಜ ರಥ ಆತಿ ದೊಡ್ಡದು ಹಾಗೂ ಅತ್ಯುತ್ತಮವಾದದು. ಶೈಲಿಯಲ್ಲಿ ಅರ್ಜುನರಥವನ್ನು ಹೋಲುತ್ತದೆ. ಇದೊಂದು ಕಲಾಪ್ರದರ್ಶನ ಮಂದಿರ. ತರುವಾಯದ ದಕ್ಪಿಣ ಭಾರತೀಯ ದೇವಾಲಯಗಳಿಗೆ ಇದು ಮಾದರಿಯಾಯಿತೆಂದು ವಾಸ್ತುಶಿಲ್ಪತಜ್ಞರು ಭಾವಿಸುತ್ತಾರೆ. ಈ ಗುಡಿಯಲ್ಲಿಯ ಶಾಸನಗಳಿಂದ ಇದು ಶಿವನಿಗೆ ಅರ್ಪಿತವಾದುದೆಂದು ತಿಳಿದುಬರುತ್ತದೆ.

ಎತ್ತರದ ಅಧಿಷ್ಠಾನದ ಮೇಲೆ ನಿಂತಿರುವ ಹಾಗೂ ಚಾಚಿದ ಮುಖಮಂಟಪದಿಂದ ಕೂಡಿರುವ ಈ ರಥದ ಕೆಳಗಣ ಅಂತಸ್ತು ಪೂರ್ಣಗೊಂಡಿಲ್ಲ : ಇಲ್ಲಿಯ ಅಂಕಣಗಳಲ್ಲಿಯ ಶಿಲ್ಪಗಳು ವಿಶೇಷವಾಗಿ ಶಿವಪ್ರಧಾನವಾದವು. ಪೂರ್ವ ಗೋಡೆಯ ಮೇಲಿನ ಅರ್ಧನಾರೀಶ್ವರ ಪುರುಷತ್ವ ಮತ್ತು ಸ್ತ್ರೀತ್ವಗಳನ್ನು ಸ್ಪುಟವಾಗಿ ತೋರುವ ಮನೋಹರ ಶಿಲ್ಪ. ಮೊದಲ ಅಂತಸ್ತಿಗೆ ಮೆಟ್ಟಿಲುಗಳಿಲ್ಲ. ಇಲ್ಲಿಯ ಇಪ್ಪತ್ತೆರಡು ಶಿಲ್ಪಗಳಲ್ಲಿ ಶಿವರೂಪಗಳೇ ಪ್ರಧಾನ-ಹರಿಹರ, ಭಿಕ್ಷಾಟನಮೂರ್ತಿ ಇತ್ಯಾದಿ. ಇತರ ಶಿಲ್ಪಗಳಲ್ಲಿ ಕಾಳಿಂಗ ಮರ್ದನ ಕೃಷ್ಣ ಹಾಗೂ ಗಂಭೀರಭಾವದ ವಿಷ್ಣು ಶಿಲ್ಪಗಳು ಎದ್ದುಕಾಣುತ್ತವೆ. ಎರಡನೆಯ ಅಂತಸ್ತಿಗೆ ಮೆಟ್ಟಿಲುಗಳಿವೆ. ಇಲ್ಲಿ ದಕ್ಪಿಣಾಮೂರ್ತಿ, ಸೋಮಸ್ಕಂದ ಇತ್ಯಾದಿ ಶಿಲ್ಪಗಳಿವೆ.

ಊರಿನ ಮಧ್ಯೆ ಗುಡ್ಡದ ಮೇಲಿರುವ ಗಣೇಶ ದೇವಾಲಯ ಭೀಮರಥವನ್ನು ಹೋಲುವ, ಎರಡಂತಸ್ತಿನ, ದೀರ್ಘಚತುರಸ್ರಾಕಾರದ ರಚನೆ, ಪೂರ್ಣವಾಗಿ ನಿರ್ಮಿಸಲಾದರ ರಥ ಇದೊಂದೇ, ಇದು ಶಿವನಿಗೆ ಅರ್ಪಿತವಾದ ಆಲಯವೆಂಬುದು ಇಲ್ಲಿಯ ಶಾಸನಗಳಿಂದ ವಿದಿತವಾಗುತ್ತದೆ. ಆದರೆ ಮೂಲತಃ ಪ್ರತಿಷ್ಠಾಪಿತವಾಗಿದ್ದ ಶಿವಲಿಂಗದ ಬದಲು ಈಗ ಗಣೇಶ ಮೂರ್ತಿ ಇರುವುದರಿಂದ ಗಣೇಶ ರಥವೆಂಬ ಹೆಸರು ಬಂದಿದೆ. ಮಹಾಬಲಿಪುರದ ಹೊರಗೆ ತಿರುಕ್ಕಲುಕುನ್‍ರಮ್‍ಗೆ ಹೋಗುವ ಮಾರ್ಗಮಧ್ಯೆ ಎರಡು ಪಿಡಾರಿ ರಥಗಳಿವೆ. ಇವುಗಳ ದಕ್ಪಿಣಕ್ಕೆ ವಳ್ಳೈಯನ್ ಕುಟ್ಟೈ ರಥ ಹಾಗೂ ಅದರ ಎದುರು ಮಹಿಷಾಸುರಮರ್ದಿನಿ ಮಂಟಪಗಳನ್ನು ನೋಡಬಹುದು.

ಕೃಷ್ಣಮಂಟಪದಲ್ಲಿ ಕೃಷ್ಣನ ಬಾಲ್ಯಜೀವನದ ಘಟನೆಗಳನ್ನು ಶಿಲ್ಪಿಸಲಾಗಿದೆ. ಗೋವರ್ಧನ ಗಿರಿಧಾರಿ ಒಂದು ಸೊಗಸಾದ ಶಿಲ್ಪ. ಗೋಪಾಲಕ ಹಾಲು ಕರೆಯುವಾಗ ತನ್ನ ಕರುವನ್ನು ಮಮತೆಯಿರುವ ನೆಕ್ಕುತ್ತಿರುವ ಹಸು, ಮಗುವನ್ನು ಹೆಗಲಮೇಲೆ ಕೂರಿಸಿಕೊಂಡು ಸಾಗುತ್ತಿರುವ ರೈತ, ಮೊಸರು ಗಡಿಗೆಯೊಡನೆ ನಡೆಯುತ್ತಿರುವ ಮಹಿಳೆ, ಗಂಭೀರವಾಗಿ ಮುನ್ನಡೆಯುತ್ತಿರುವ ಗೂಳಿ, ಗೋಪಾಲಕನೊಬ್ಬನ ವೇಣುಗಾನವನ್ನು ಮೈಮರೆತು ಕೇಳುತ್ತಿರುವ ಗೋಸಮುದಾಯ, ತಾಯಿ ಮತ್ತು ಮಗು ಮುಂತಾದ ಗ್ರಾಮೀಣ ಸೊಬಗಿನ ದೃಶ್ಯಗಳು ಮನಸೆಳೆಯುತ್ತವೆ.

ಅರ್ಜುನ ತಪಸ್ಸು ಎಂದು ಕರೆಯಲಾಗುವ ಶಿಲ್ಪವೈಭವ ಇಲ್ಲಿಯ ನೋಡಲೇ ಬೇಕಾದ ತಾಣಗಳಲ್ಲೊಂದು. ಹೆಬ್ಬಂಡೆಯೊಂದು ಮೂಲೋಕದ ಚಿತ್ರಣಕ್ಕೆ ಯುಕ್ತ ವೇದಿಕೆಯಾಗಿದೆ. ಬಂಡೆಯಲ್ಲಿಯ ಒಂದು ಸೀಳು ಅದನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಎರಡೂ ಪಾಶ್ರ್ವಗಳಲ್ಲಿ ಕಡೆದ ಶಿಲ್ಪಗಳು ಘಟಿಸಿದ ಅಥವಾ ಘಟಿಸಲಿರುವ ಪವಾಡವೊಂದನ್ನು ಕಾಣಲೆಂಬಂತೆ ಆ ಸೀಳಿನ ಕಡೆ ಧಾವಿಸುತ್ತಿರುವಂತೆ ಚಿತ್ರಿತವಾಗಿವೆ. ಪ್ರತಿಯೊಂದು ಶಿಲ್ಪವೂ ತಕ್ಕ ಸ್ಥಾನದಲ್ಲಿದೆ. ಶಿಲ್ಪಗಳ ಮುಖಭಾವ ವೈವಿಧ್ಯಮಯವಾಗಿದೆ. ಸೂರ್ಯಚಂದ್ರರು, ಯುಕ್ಪ ಗಂಧರ್ವರು, ಸಿದ್ಧಚಾರಣರು, ವಿದ್ಯಾಧರರು, ಕಿನ್ನರ ಕಿಂಪುರುಷರು, ದೇವತಾ ಪರಿವಾರದ ಕಲಾಕಾರರು, ಅರೆಮಾನವ, ಅರೆಪಕ್ಷಿಶರೀರದ ಶಿಲ್ಪಗಳು ಮುಂತಾದವನ್ನು ಇಲ್ಲಿ ಬಿಡಿಸಿದೆ. ದಕ್ಪಿಣ ಪಾಶ್ರ್ವದಲ್ಲಿ ಅರಣ್ಯಜೀವನದ ಚಿತ್ರಣವಿದೆ. ನಾನಾ ಬಗೆಯ ಮರಗಳು, ಕಾಡು ಮೃಗಗಳು, ಕಾಡುಜನರು ಇತ್ಯಾದಿಗಳ ಚಿತ್ರಣ ಜೀವಂತವೆನಿಸುವಷ್ಟು ಚೇತೋಹಾರಿಯಾಗಿದೆ. ಹಕ್ಕಿಯೊಂದು ಮರದ ಮೇಲೆ ಕುಳಿತಿದೆ; ಉಡವೊಂದು ಮರವೇರುತ್ತಿದೆ; ಕೋತಿಯೊಂದು ನೋಡುಗರತ್ತ ನೋಡುತ್ತಿದೆ; ಧನುರ್ಧಾರಿ ಬೇಡರು ಅಂದಿನ ಬೇಟೆಯೊಡನೆ ಸಾಗುತ್ತಿದ್ದಾರೆ ಮೊಲ, ಜಿಂಕೆ, ಹುಲಿ, ಆನೆ ಮುಂತಾದ ಪ್ರಾಣಿಗಳಿವೆ. ಬಂಡೆಯಲ್ಲಿಯ ಸೀಳಿನ ಬಳಿ ಇರುವ, ಒಂಟಿಕಾಲಲ್ಲಿ ನಿಂತು ಕಣ್ಮುಚ್ಚಿ ತಲೆಯ ಮೇಲೆ ಕೈಜೋಡಿಸಿರುವ ತಪಸ್ವಿಯ ಶಿಲ್ಪ ಸುಂದರವಾಗಿದೆ. ಅತನ ಮುಖದಲ್ಲಿ ನಿಮಗ್ನತೆ ಹಾಗೂ ಪೂರ್ಣ ಶರಣಾಗತಿಯ ಭಾವ ಬಿಂಬಿತವಾಗಿದೆ. ಇದರ ಪಕ್ಕದಲ್ಲಿ ಶಿವಶಿಲ್ಪವಿದೆ. ಸ್ವಲ್ಪ ಕೆಳಭಾಗದಲ್ಲಿ ಬಿಡಿಸಿದ ಗೂಡಿನಲ್ಲಿ ವಿಷ್ಣುಶಿಲ್ಪವಿದೆ. ಇಲ್ಲಿ ನದೀ ತೀರದ ಜೀವನದ ಪರಿಚಿತ ದೃಶ್ಯಗಳನ್ನು ಚಿತ್ರಿಸಲಾಗಿದೆ. ಪೌರಾಣಿಕ ನಾಯಕನೊಬ್ಬನ ತಪಸ್ಸನ್ನು ಚಿತ್ರಿಸುವ ಈ ಬಂಡೆಯ ಮೇಲಿನ ಉಬ್ಬುಗೆತ್ತನೆ ಒಂದು ಪುಟ್ಟ ವಿಶ್ವವನ್ನೆ ನಮ್ಮೆದುರು ನಿಲ್ಲಿಸುತ್ತದೆ. ಸೃಷ್ಟಿಯ ಎಲ್ಲ ತೆರನ ಚರಾಚರ ಜೀವಿಗಳು ಇಲ್ಲಿ ಪ್ರತಿನಿಧಿತವಾಗಿವೆ. ಅಂತರಿಕ್ಷದ ಜೀವಿಗಳಿಗೆ ಮಾನವ ಆಕಾರವನ್ನೆ ಮಾದರಿಯನ್ನಾಗಿ ಇರಿಸಿಕೊಳ್ಳಲಾಗಿದೆ. ಆದರೆ ಆವು ಅಭೌತಿಕ ಸಾಮಗ್ರಿಯಿಂದ ನಿರ್ಮಿತವಾದವೇನೋ ಎಂಬ ಭಾವ ನೋಡುಗರಲ್ಲಿ ಉಂಟಾಗುವಂತೆ ಮಾಡುವಲ್ಲಿ ಪಲ್ಲವ ಶಿಲ್ಪಿಗಳು ಯಶಸ್ವಿಯಾಗಿದ್ದಾರೆ. ಮುಖ ಭಾವದಲ್ಲಿ ದೈವಿಕ ಆನಂದ, ದೇವರೇಖೆ ಮತ್ತು ಬಾಹುಗಳಲ್ಲಿ ಕಮನೀಯತೆ ಎದ್ದು ಕಾಣುತ್ತದೆ. ಪ್ರಾಣಿಪಕ್ಪಿಗಳ ಭಾವಭಂಗಿಗಳು ನೈಜವಾಗಿವೆ. ವಿಶೇಷವಾಗಿ ಚಿತ್ರಿತವಾಗಿರಬಹುದು ಮುನ್ನಡೆಯುತ್ತಿರುವ ಗಜಸಮೂಹ. ಮರಿಗಳನ್ನು ವಾತ್ಸಲ್ಯದಿಂದ ನೆಕ್ಕುತ್ತಿರುವ ಹುಲಿ, ನಾನಾಭಂಗಿಯ ಸಿಂಹಗಳು, ಕಾಲಿನಿಂದ ಮೂಗುಜ್ಜಿ ಕೊಳ್ಳತ್ತಿರುವ ಜಿಂಕೆ ಮುಂತಾದವು ವಾಸ್ತವಿಕವಾಗಿ ಶಿಲ್ಪಿತವಾಗಿವೆ. ತಪಸ್ವಿಯನ್ನು ಅನುಕರಿಸುತ್ತಿರುವ ಮಾರ್ಜಾಲ ಶಿಲ್ಪ ಕುತೂಹಲಕಾರಿಯಾಗಿದೆ. ಒಟ್ಟಂದದಲ್ಲಿ ಭಾರತೀಯ ಕಲೆಯ ವೈಭವದ ದೃಶ್ಯಗಳಲ್ಲಿ ಇದೂ ಒಂದೆಂದು ಪರಿಗಣಿಸಲ್ಪಟ್ಟಿದೆ. ಆದರೆ ಈ ಮಹತ್ತ್ವದ ಘಟನೆಗೆ ಕಾರಣನಾದ ಪುರಾಣ ಪುರುಷ ಯಾರೆಂಬ ವಿಷಯದಲ್ಲಿ ವಿದ್ವಾಂಸರಲ್ಲಿ ಅಭಿಪ್ರಾಯಭೇದಗಳಿವೆ. ಈ ತಪಸ್ವಿ ಗಂಗಾವತರಣಕ್ಕೆ ಕಾರಣನಾದ ಭಗೀರಥನೆಂದು ಕೆಲವರೂ ಶಿವನಿಂದ ಪಾಶುಪತಾಸ್ತ್ರ ಪಡೆಯಲು ತಪಾಸನ್ನಾಚರಿಸಿದ ಅರ್ಜುನನೆಂದು ಮತ್ತೆ ಕೆಲವರು ಆಭಿಪ್ರಾಯಪಟ್ಟಿದ್ದಾರೆ.

ವರಾಹ ಗವಿ, ಬಂಡೆಯಲ್ಲಿ ಕಡೆದ ಪುಟ್ಟ ಮಂಟಪ. ಪೂರ್ಣಗೊಂಡಿರುವ ಈ ರಚನೆ ಪಲ್ಲವರ ಅತ್ಯತ್ತಮ ನಿರ್ಮಾಣಗಳಲ್ಲೊಂದೆನಿಸಿದೆ. ದ್ವಾರಪಾಲಕ ಉಬ್ಬುಶಿಲ್ಪಗಳಿಂದ ಕೂಡಿದ ಈ ಗವಿಯ ಮುಂದೆ ಸೋಪಾನಸಹಿತವಾದ ಕೊಳವಿದೆ ಉತ್ತರ ಗೋಡೆಯ ಮೇಲಿನ ವರಾಹ, ದಕ್ಪಿಣಗೋಡೆಯ ಬಲಿ ವಾಮನ ಪ್ರಸಂಗ, ಪೂರ್ವಗೋಡೆಯ ಕಮಲಾಸೀನ ಲಕ್ಪ್ಮಿ ಹಾಗೂ ದುರ್ಗಾ ಇಲ್ಲಿಯ ಮನೋಜ್ಞ ಶಿಲ್ಪಗಳು.

ಮಹಿಷಾಸುರಮರ್ಧಿನಿ ಗುಹೆ ಮೂರು ಪುಟ್ಟ ಗುಡಿಗಳಿಂದ ಕೂಡಿದ ಮಂಟಪ. ಮಧ್ಯದಗುಡಿಯ ಹಿಂದಣ ಗೋಡೆಯಲ್ಲಿ ಸೋಮಸ್ಕಂದ, ದಕ್ಪಿಣ ಗೋಡೆಯ ಮೇಲೆ ಯೋಗಬಂಗಿಯಲ್ಲಿರುವ ವಿಷ್ಣು, ಉತ್ತರಗೋಡೆಯ ಮೇಲೆ ದಾನವರೊಡನೆ ಹೋರಾಡುತ್ತಿರುವ ದುರ್ಗೆಯ ಉಬ್ಬುಶಿಲ್ಪಗಳಿವೆ. ದಕ್ಪಿಣ ಗೋಡೆಯ ಮೇಲಿನ ಮಧುಕೈಟಭ ಸಂಹಾರಿಣಿ ದೇವಿಯ ಶಿಲ್ಪ, ಅನಂತಶಾಯಿ ವಿಷ್ಣು, ಪಳಯನಮಾಡುತ್ತಿರುವ ಯೋಗಮಾಯೆ ಶಿಲ್ಪಗಳು ಸೊಗಸಾಗಿವೆ. ದಾನವದಮನಕ್ಕೆ ಮತ್ತು ಸ್ವಾಮಿ ಸೇವೆಗೆ ಸನ್ನದ್ಧವಾಗಿರುವಂತೆ ವಿಷ್ಣುವಿನ ಚಕ್ರ ಮಾನವರೂಪದಲ್ಲಿ ಪ್ರತಿನಿಧಿತವಾಗಿರುವುದು ಗಮನಾರ್ಹ. ದೈತ್ಯ ಉಪಟಳವನ್ನು ಕೊನೆಗಾಣಿಸಲು ಬರುತ್ತಿರುವ ದುರ್ಗೆಯ ಶಿಲ್ಪ ಉತ್ತರ ಗೋಡೆಯ ಮೇಲಿದೆ. ಇಲ್ಲಿಯ ರಣರಂಗ ದೃಶ್ಯ ಬೆರಗುಗೊಳಿಸುವಂಥದು, ಈ ಶಿಲ್ಪ ಕಲಾವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ.

ಪಲ್ಲವ ಶಿಲ್ಪಿಗಳು ಕಟ್ಟಡಗಳನ್ನೂ ಕಟ್ಟಿದರೆಂಬುದಕ್ಕೆ ಉತ್ತಮ ನಿದರ್ಶನವಾಗಿ ಇಲ್ಲಿಯ ಕಡಲತೀರದ ದೇವಾಲಯ ನಿಂತಿದೆ. ಕಾಲದ ಪರಿಣಾಮಕ್ಕೆ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾಗಿಯೂ ಈ ದೇವಾಲಯ ಉಳಿದು ಬಂದಿರುವುದು ವಿಶೇಷ. ಈ ದೇವಾಲಯ ಮೂರು ಗುಡಿಗಳ ಒಂದು ಸಮುಚ್ಚಯ. ಪೂರ್ವದಲ್ಲಿ ಸಮುದ್ರಾಭಿಮುಖವಾಗಿ ಕ್ಪತ್ರಿಯ ಸಿಂಹೇಶ್ವರ, ಪಶ್ಚಿಮದಲ್ಲಿ ರಾಜಸಿಂಹೇಶ್ವರ ಹಾಗೂ ಇವೆರಡರ ನಡುವೆ ಅನಂತಶಾಯಿ ವಿಷ್ಣು ಗುಡಿಗಳಿವೆ. ಶಿವಾಲಯಗಳೆರಡರ ಗೋಪುರಗಳು ಉಳಿದಿವೆ. ವಿಷ್ಣುಗುಡಿಯ ಗೋಪುರ ನಷ್ಟವಾಗಿದೆ. ಎದ್ದುಕಾಣುವ ಗೋಪುರ ಸಹಿತವಾದ ಕ್ಪತ್ರಿಯ ಸಿಂಹೇಶ್ವರ ಗುಡಿಯ ಪ್ರವೇಶದ್ವಾರದಲ್ಲಿ ದ್ವಾರಪಾಲಕ ಶಿಲ್ಪಗಳಿವೆ. ಗರ್ಭಗುಡಿಯ ಎಡಬಲಗಳಲ್ಲಿ ಪತ್ನೀಸಮೇತರಾದ ಬ್ರಹ್ಮವಿಷ್ಣು ಶಿಲ್ಪಗಳಿವೆ. ಗರ್ಭಗುಡಿಯ ಹಿಂದಣ ಗೋಡೆಯ ಮೇಲೆ ಸೋಮಸ್ಕಂದ, ಉತ್ತರದ ಕಡೆ ಶಿವ ದುರ್ಗಾ, ನರಸಿಂಹ ಶಿಲ್ಪಗಳಿವೆ. ಗರ್ಭಗುಡಿಯಲ್ಲಿಯ ಶಿವಲಿಂಗ ಭಿನ್ನವಾಗಿದೆ. ವಿಷ್ಣುಗುಡಿ ಆಯಾಕಾರದ್ದಾಗಿದ್ದು ಸುಂದರ ವಿಷ್ಣುಮೂರ್ತಿಂಯಿಂದ ಕೂಡಿದೆ. ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಎರಡು ಪ್ರಸಂಗಳನ್ನು ಉತ್ತರದ ಗೋಡೆಯ ಮೇಲೆ ಶಿಲ್ಪಿಸಿದೆ. ರಾಜಸಿಂಹೇಶ್ವರ ಗುಡಿಯ ಮುಂದೆ ಗೋಪುರವಿರುವ ಮಂಟಪಗಳಿವೆ. ಇವೆಲ್ಲವನ್ನು ಬಳಸಿ ಪ್ರಾಕಾರವಿದೆ. ಹೀಗಿರುವುದರಿಂದ ಒಂದು ಕಾಲದಲ್ಲಿ ಈ ದೇವಾಲಯದ ಸೌಂದರ್ಯ ಇನ್ನಷ್ಟು ಹೆಚ್ಚಿತ್ತೆಂದು ತಿಳಿಯಬಹುದು. ಇಲ್ಲಿರುವ ಶಾಸನಗಳಿಂದ ಈ ದೇವಾಲಯವನ್ನು ಪಲ್ಲವರಸ ಎರಡನೆಯ ನರಸಿಂಹವರ್ಮ ರಾಜಸಿಂಹ (691-728) ಕಟ್ಟಿಸಿದನೆಂಬುದು ವೇದ್ಯವಾಗುತ್ತದೆ. ವಿಷ್ಣುಗುಡಿಯನ್ನು ಕಟ್ಟಿಸಿದವನ ಬಗ್ಗೆ ಭಿನ್ನಾಭಿಪ್ರಾಯವಿದೆ. ಅದರೆ ಇದು ಪ್ರಾಚೀನತಮಗುಡಿ ಎಂಬ ಬಗ್ಗೆ ಭಿನ್ನಾಭಿಪ್ರಾಯವಿಲ್ಲ.

ಈ ದೇವಾಲಯದ ದಕ್ಪಿಣಕ್ಕೆ ಬಂಡೆಯಲ್ಲಿ ಕಡೆದ ಗಂಭೀರ ಸಿಂಹಶಿಲ್ಪವಿದೆ; ಇದರಲ್ಲಿ ಕೊರೆದ ಪುಟ್ಟ ಗೂಡಿನಲ್ಲಿ ದುರ್ಗಾಶಿಲ್ಪವಿದೆ. ದೇವಾಲಯದ ಉತ್ತರಕ್ಕೆ, ಕಡಲ ಆಲೆಗಳು ಅಪ್ಪಳಿಸುವ ಹೆಬ್ಬಂಡೆಯೊಂದರ ಪೂರ್ವಭಾಗದಲ್ಲಿ ಕೊರೆದ ಗುಹೆಯಲ್ಲಿಯ ದುರ್ಗಾಶಿಲ್ಪ ಸುಂದರವಾಗಿದೆ; ಇದೇ ಬಂಡೆಯ ಉತ್ತರ ಭಾಗದಲ್ಲಿ ಓಡುತ್ತಿರುವ ಮಹಿಷಾಸುರ ದೊಡ್ಡ ಕೆತ್ತನೆಯನ್ನು ಕಾಬಹುದಾಗಿದೆ.

ಮಹಾಬಲಿಪುರಕ್ಕೆ ಉತ್ತರದಲ್ಲಿರುವ ತ್ರಿಮೂರ್ತಿಗುಹೆ ಉತ್ಕೃಷ್ಟ ಶಿಲ್ಪಗಳಿಂದ ಕೂಡಿದ ಸರಳ ರಚನೆ. ಈ ಗುಹೆಯಿಂದ ಪೂರ್ವಾಭಿಮುಖವಾಗಿ ಸಾಗುವ ಮಾರ್ಗದಲ್ಲಿ ಬಂಡೆಯಮೇಲೆ ಶಿಲ್ಪಿಸಿದ ಪುಟ್ಟ ಮೃಗಾಲಯವನ್ನು ನೋಡಬಹುದು. ಕೊಡೈಕ್ಕಲ್‍ಮಂಟಪ ಇನ್ನೊಂದು ಗಮನಾರ್ಹ ರಚನೆಯಾಗಿದ್ದು ತ್ರಿಮೂರ್ತಿ ಗುಹೆಗೆ ಪಶ್ಚಿಮದಲ್ಲಿದೆ. ಇಲ್ಲಿಯ ಸ್ತ್ರೀದ್ವಾರಪಾಲ ಮೂರ್ತಿಗಳಿಂದ ಇದೊಂದು ದುರ್ಗಾಲಯವಾಗಿತ್ತೆಂದು ಸ್ಪಷ್ಟಪಡುತ್ತದೆ. ಆದರೆ ಗರ್ಭಗೃಹದಲ್ಲಿ ಈಗ ಯಾವ ವಿಗ್ರಹವೂ ಇಲ್ಲ. ಬಂಡೆಯಲ್ಲಿ ಕಡೆದ ಅರ್ಜುನ ತಪಸ್ಸು ಶಿಲ್ಪವನ್ನು ಕೃಷ್ಣಮಂಟಪದ ದಕ್ಪಿಣದಲ್ಲಿ ಕಾಣಬಹುದು. ದುರದೃಷ್ಟವಶಾತ್ ಶಿಲ್ಪಕಾರ್ಯ ಪೂರ್ಣಗೊಂಡಿಲ್ಲ. ಇದರ ದಕ್ಪಿಣದಲ್ಲಿರುವ ಆಯಾಕಾರದ ಮೂರು ಕೋಣೆಯಿಂದ ಕೂಡಿದ ಧರ್ಮರಾಜ ಮಂಟಪ ಅನೇಕ ಶಾಸನಗಳಿಂದ ಕೂಡಿದೆ. ಮಹಿಷಮರ್ದಿನಿ ಮಂಟಪದಿಂದ ಲೈಟ್‍ಹೌಸಿಗೆ ಹೋಗುವ ಕಿರುದಾರಿಯಲ್ಲಿರುವ ಮೂರು ಕೋಣೆಯ ರಾಮಾನುಜಮಂಟಪ ಗಮನಾರ್ಹ. ಇಲ್ಲಿಯ ಶಿಲ್ಪಗಳನ್ನು ಕೆತ್ತಿ ಕಿತ್ತುಹಾಕಲಾಗಿದೆ. ಮೂಲತಃ ಇದೊಂದು ಶಿವಗುಡಿಯಾಗಿತ್ತು. ಮಹಿಷಮರ್ದಿನಿ ಮಂಟಪಕ್ಕೆ ನೈರುತ್ಯದಲ್ಲಿರುವ ಆದಿವರಾಹದೇವಾಲಯ ಐತಿಹಾಸಿಕವಾಗಿಯೂ ಕಲಾತ್ಮಕ ದೃಷ್ಟಿಯಿಂದಲೂ ಗಮನಾರ್ಹವಾದುದು. ವಿಷ್ಣುವಿನ ವರಾಹಾವತಾರ ಈ ಗುಡಿತ ಪ್ರಧಾನ ಶಿಲ್ಪ. ಇದು ತುಂಬ ವಿóಶಿಷ್ಟ ಲಕ್ಪಣಗಳಿಂದ ಕೂಡಿದೆ. ಮಹಾಬಲಿಪುರದ ದೇವಾಲಯಗಳಲ್ಲೆಲ್ಲ ಸಾಂಪ್ರದಾಯಿಕ ಪೂಜೆ ನಡೆಯುತ್ತಿರುವುದು ಇಲ್ಲಿ ಮಾತ್ರವೇ. ಇಲ್ಲಿಯ ಶಾಸನದಲ್ಲಿ ಬುದ್ಧನನ್ನು ವಿಷ್ಣುವಿನ ಒಂಬತ್ತನೆಯ ಅವತಾರವಾಗಿ ಉಲ್ಲೇಖಿಸಿದೆ. ದೇವದೇವತೆಗಳು ಹಾಗೂ ಪಲ್ಲವರಸ ಅರಸಿಯರ ಶಿಲ್ಪಗಳು ಸೊಗಸಾಗಿವೆ. ಪಶ್ಚಿಮಾಭಿಮುಖವಾಗಿರುವ ಇನ್ನೊಂದು ಮಂಟಪ ಪಲ್ಲವರ ಇತರ ರಚನೆಗಳಿಂದ ಭಿನ್ನವೇನಲ್ಲ. ಜಟಾಧಾರಿ ಗಂಗಾಧರ, ಪತ್ನಿಸಹಿತನಾದ ಪಲ್ಲವ ದೊರೆ ಸಿಂಹ ವಿಷ್ಣು, ಮಹೇಂದ್ರವರ್ಮ ಮುಂತಾದ ಶಿಲ್ಪಗಳು ಗಮನಾರ್ಹ.

ಮಹಾಬಲಿಪುರ ಮಧ್ಯೆ ಸ್ಥಳಶಯನಪೆರುಮಾಳ್ ದೇವಾಲಯವಿದೆ. ಊರಿಗೆ ಪಶ್ಚಿಮಕ್ಕಿರುವ ಕೊನೇರಿ ಎಂಬ ಕೊಳವೆ ಎದುರಿನ ಪುಟ್ಟಗುಡ್ಡದಲ್ಲಿ ಬಂಡೆಯಲ್ಲಿ ಕಡೆದ ರಚನೆಗಳಿವೆ. ಅಪೂರ್ಣ ಮಂಟಪಗಳೂ ಇಲ್ಲಿವೆ. ಪಂಚಪಾಂಡವ ಮಂಟಪ ಇವುಗಳಲ್ಲಿ ದೊಡ್ಡದು. ಮಹಾಬಲಿಪುರಕ್ಕೆ ಸು. 5, ಕಿ.ಮೀ. ದೂರದಲ್ಲಿರುವ ವ್ಯಾಘ್ರಗವಿ ಇನ್ನೊಂದು ಪ್ರೇಕ್ಪಣೀಯ ಸ್ಥಳ.

ನಿರ್ಮಾತೃರು

[ಬದಲಾಯಿಸಿ]

ಮಹಾಬಲಿಪುರದ ಶಿಲ್ಪಜಗತ್ತು ಒಬ್ಬ ಅರಸನ ಸೃಷ್ಟಿಯೆ ಅಥವಾ ಹಲವು ಅರಸರದೆ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಇಲ್ಲಿಯ ವಾಸ್ತುರಚನೆಗಳ ಶೈಲಿಯ ಆಧಾರದ ಮೇಲೆ ಇಲ್ಲಿ ಮಹೇಂದ್ರವರ್ಮ (600-30), ಒಂದನೆಯ ನರಸಿಂಹವರ್ಮ (630-68),ಇಮ್ಮಡಿ ನಾರಸಿಂಹ ರಾಜಸಿಂಹ (700-28) ಇದರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣ ಕಾರ್ಯ ನಡೆಯಿತೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇಲ್ಲಿಯ ರಚನೆಗಳನ್ನು ಮಹೇಂದ್ರಶೈಲಿಯವು, ಮಾಮಲ್ಲಶೈಲಿಯವು ಹಾಗೂ ರಾಜಸಿಂಹಶೈಲಿಯವೆಂದು ವರ್ಗೀಕರಿಸಿದ್ದಾರೆ. ಆದರೆ ತರುವಾಯ ಅನ್ವೇಷಿಸಿದ ಶಾಸನಗಳ ಅಧ್ಯಯನದಿಂದ ಇನ್ನೊಂದು ಅಭಿಪ್ರಾಯ ರೂಪುಗೊಂಡಿದೆ. ಯುದ್ಧ ಆಕ್ರಮಣಗಳ ಭೀತಿ ಇಲ್ಲದೆ ಕಾಲು ಶತಮಾನ ಸುಗಮವಾಗಿ ಸಾಮ್ರಾಜ್ಯವಾಳಿದ ಪಲ್ಲವರಸ ರಾಜಸಿಂಹನ ಕಾಲದಲ್ಲಿ ಇಲ್ಲಿಯ ಎಲ್ಲ ರಚನೆಗಳು ನಿರ್ಮಿತವಾದುವೆಂದೂ ಮಹಾಬಲಿಪುರದ ಹಾಗೂ ಕಾಂಚೀಪುರ ಶಾಸನಗಳಲ್ಲಿ ಉಕ್ತನಾದ ಅತ್ಯಂತಕಾಮನೇ ಪಲ್ಲವ ರಾಜಸಿಂಹ ಎಂದೂ ಈ ವಿದ್ವಾಸಂರೂ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ಆದಿವರಾಹ ಗವಿಯ ಉಬ್ಬುಗೆತ್ತನೆಯಲ್ಲಿ ಪ್ರತಿನಿಧಿತನಾಗಿರುವ ಅರಸರ ಮಹೇಂದ್ರವರ್ಮನೆಂದು ಕೆಲವರು ರಾಜಸಿಂಹನೆಂದು ಮತ್ತೆ ಕೆಲವರೂ ಅಭಿಪ್ರಾಯಪಟ್ಟಿದ್ಧಾರೆ.

ಮಹಾಬಲಿಪುರ ಪ್ರವಾಸಿಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. ಗೋಡಂಬಿ ಮರಗಳ ಗುಂಪುಗಳಿಂದ ಆವೃತವಾದ ಇಲ್ಲಿಯ ಸುಂದರ ಕಡಲದಂತೆ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  • Lukas Hartmann: Mahabalipuram oder Als Schweizer in Indien. Ein Reisetagebuch. Arche, Zürich, ISBN 978-3-716-01764-7.
  • C., Sivaramamurthi (2004). Mahabalipuram. New Delhi: The Archaeological Survey of India, Government of India. p. 3.
  • Ayyar, P. V. Jagadisa (1991), South Indian shrines: illustrated, New Delhi: Asian Educational Services, ISBN 81-206-0151-3.
  • The Story of Ancient Sculptures in Mahabalipuram Archived 2021-04-12 ವೇಬ್ಯಾಕ್ ಮೆಷಿನ್ ನಲ್ಲಿ.
  • Bradnock, Roma; Bradnock, Robert (2009), Footprint India, USA: Patrick Dawson, ISBN 978-1-904777-00-7.
  • Frommer's India. Frommer's. 2010. p. 350. ISBN 978-0-470-55610-8. {{cite book}}: Unknown parameter |authors= ignored (help)
  • Hurd, James (2010), Temples of Tamilnad, USA: Xilbris Corporation, ISBN 978-1-4134-3843-7.
  • Singh, Sarina (2009), South India (Lonely Planet Regional Guide) (5th ed.), Lonely Planet, ISBN 978-1-74179-155-6
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: