ವಿಷಯಕ್ಕೆ ಹೋಗು

ಮಾರ್ಕಂಡೇಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರ್ಕಂಡೇಯ
ರಾಜಾ ರವಿ ವರ್ಮ ಅವರ ಚಿತ್ರಣದಲ್ಲಿ ಮಾರ್ಕಂಡೇಯನನ್ನು ಯಮನಿಂದ ರಕ್ಷಿಸುತ್ತಿರುವ ಶಿವ

ಭಾರ್ಗವ ಮಾರ್ಕಂಡೇಯ ನಮ್ಮ ಪುರಾಣಗಳಲ್ಲಿ ಬರುವ ಪ್ರಸಿದ್ಧ ಋಷಿಬಾಲಕ. ಪುರಾಣಗಳ ಪ್ರಕಾರ ಮಾರ್ಕಂಡೇಯನು ಮಹರ್ಷಿ ಭೃಗು ಮತ್ತು ಖ್ಯಾತಿ ದೇವಿ (ಧಕ್ಷ ಪ್ರಜಾಪತಿಯ ಮಗಳು) ಯರ ವಂಶದಲ್ಲಿ ಜನಿಸಿದವನು. ವಿವಿದ ಪುರಾಣಗಳಲ್ಲಿ ಸೂಚಿತವಾಗಿರುವಂತೆ ಈತ ಶಿವ ಮತ್ತು ವಿಷ್ಣುಭಕ್ತ. ಮಾರ್ಕಂಡೇಯ ಪುರಾಣವು ಮಾರ್ಕಂಡೇಯ ಮತ್ತು ಜೈಮಿನಿ ಎಂಬ ಮುನಿಯ ನಡುವೆ ನಡೆದ ಆಧ್ಯಾತ್ಮಿಕ ಸಂಭಾಷಣೆಗಳನ್ನು ಒಳಗೊಂಡಿದೆ. ಮಾರ್ಕಂಡೇಯನ ಹೆಸರು ಭಾಗವತ ಪುರಾಣದಲ್ಲಿ ವಿಶೇಷವಾಗಿ ಉಲ್ಲೇಖಿತಗೊಂಡಿದೆ. ಆತನ ಹೆಸರು ಮಹಾಭಾರತದಲ್ಲೂ ಕಂಡುಬರುತ್ತದೆ.

ಮಾರ್ಕಂಡೇಯ ಮುನಿಯು ಮಾರ್ಕಂಡೇಯ ಪುರಾಣವನ್ನು ರಚಿಸಿದ ಸ್ಥಳವೆಂದು ಪ್ರತೀತಿ ಹೊಂದಿರುವ ಮಾರ್ಕಂಡೇಯ ತೀರ್ಥವು ಉತ್ತರಕಾಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೋತ್ರಿಗೆ ಚಾರಣಿಗರು ಪಯಣಿಸುವ ಹಾದಿಯಲ್ಲಿದೆ.

ಅಲ್ಪಾಯುಷಿಯಾಗಿ ಹುಟ್ಟಿದ ಮಾರ್ಕಂಡೇಯ ಚಿರಂಜೀವಿಯಾದ ಕಥೆ

[ಬದಲಾಯಿಸಿ]

ಒಂದಾನೊಂದು ಕಾಲದಲ್ಲಿ ಮೃಕಂಡು ಎಂಬ ಮುನಿವರ್ಯನಿದ್ದ. ಆತನಿಗೆ ಮದುವೆಯಾಗಿ ಬಹಳ ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ. ಇದರಿಂದ ದುಃಖಗೊಂಡ ಮೃಕಂಡು ಪರಮೇಶ್ವರನನ್ನು ಕುರಿತು ಘೋರವಾದ ತಪಸ್ಸು ಮಾಡಿದ.

ಅವನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗಿ, “ಮೃಕಂಡು, ನಿನ್ನ ಭಕ್ತಿಗೆ ನಾನು ಒಲಿದಿದ್ದೇನೆ. ಹೇಳು, ನಿನಗೆ ಮಂದಬುದ್ಧಿಯ ನೂರು ವರ್ಷ ಬದುಕುವ ಮಗ ಬೇಕೋ? ಹದಿನಾರೇ ವರ್ಷಬಾಳುವ ಅಲ್ಪಾಯುವಾದ ಸುಜ್ಞಾನಿ ಮಗ ಬೇಕೋ?” ಎಂದು ಕೇಳಿದನು.

ಮೃಕಂಡುವು “ದೇವಾ, ಮೂರ್ಖನಾಗಿ ಬದುಕುವ ಸಂತಾನ ಬೇಡ? ಅಲ್ಪಾಯುವಾದರೂ ಸುಜ್ಞಾನಿಯಾಗಿ ಬಾಳುವ ಮಗನನ್ನೇ ನನಗೆ ಅನುಗ್ರಹಿಸು” ಎಂದು ಬೇಡಿಕೊಂಡ.

ಶಿವನ ವರಪ್ರಸಾದದಿಂದ ಮೃಕಂಡು ದಂಪತಿಗಳಿಗೆ ಮುದ್ದಾದ ಬಾಲಕ ಜನಿಸಿದ. ಅವನಿಗೆ ಮಾರ್ಕಂಡೇಯ ಎಂದು ಅವರು ನಾಮಕರಣ ಮಾಡಿದರು. ಮಾರ್ಕಂಡೇಯ ಅತ್ಯಂತ ತೇಜಸ್ವಿಯಾಗಿ ಬೆಳೆದ. ಚಿಕ್ಕಂದಿನಲ್ಲೇ ವೇದ ಶಾಸ್ತ್ರ ಪುರಾಣಗಳನ್ನೆಲ್ಲಾ ಅಧ್ಯಯನ ಮಾಡಿ ಬುದ್ಧಿವಂತ ಆದ. ಮಹಾ ಶಿವಭಕ್ತನಾದ. ಅದರೆ ಅವನ ಹದಿನಾರನೇ ಹುಟ್ಟುಹಬ್ಬ ಹತ್ತಿರ ಬಂದ ಹಾಗೆ ತಂದೆ ತಾಯಿ ಅಳತೊಡಗಿದರು.

“ಯಾಕೆ ಅಳುತ್ತೀರಿ?” ಎಂದು ಮಾರ್ಕಂಡೇಯ ಅವರನ್ನು ಆಶ್ಚರ್ಯದಿಂದ ಕೇಳಿದ. ಅವನು ಬಹಳ ಹೊತ್ತು ಪೀಡಿಸಿದ ಮೇಲೆ ಮೃಕಂಡು ನಿಜಸಂಗತಿಯನ್ನು ಅರುಹಿದ. ಅದನ್ನು ಕೇಳಿ ಮಾರ್ಕಂಡೇಯ ಹೆದರಲಿಲ್ಲ. ಅವನು ತಂದೆಯ ಪಾದಕ್ಕೆ ನಮಿಸಿ “ಅಪ್ಪಾ, ಈಶ್ವರನ ವರಪ್ರಸಾದದಿಂದ ನಾನು ಹುಟ್ಟಿದೆ. ಅದೇ ದೇವರ ಹರಕೆಯಿಂದ ನಾನು ಸಾವನ್ನೂ ಜಯಿಸಿ ಬರುತ್ತೇನೆ. ಅಪ್ಪಣೆ ಕೊಡು” ಎಂದು ಗೊಂಡಾರಣ್ಯದೊಳಗೆ ಹೊರಟು ಹೋದ.

ಪರ್ವತದ ತಪ್ಪಲೊಂದರಲ್ಲಿ ಮಾರ್ಕಂಡೇಯ ಕುಳಿತು ಶಿವಲಿಂಗದ ಮುಂದೆ ತಪಸ್ಸು ಮಾಡಲಾರಂಭಿಸಿದ. ಅವನ ತಪಸ್ಸಿನ ಮಹಿಮೆಗೆ ಭೂಮಿ ನಡುಗಲಾರಂಭಿಸಿತು. ಅದೇ ವೇಳೆಗೆ ಅವನ ಆಯುಷ್ಯ ತೀರಿದುದರಿಂದ ಯಮದೂತ ಅವನನ್ನು ಕೊಂಡೊಯ್ಯಲು ಬಂದ. ಅದರೆ ಅವನಿಗೆ ಮಾರ್ಕಂಡೇಯನ ಹತ್ತಿರ ಕೂಡ ಸುಳಿಯಲಾಗಲಿಲ್ಲ. ಅವನು ಯಮಧರ್ಮರಾಯನ ಬಳಿಗೆ ಹಿಂತಿರುಗಿ ಈ ಸಂಗತಿ ತಿಳಿಸಿದ. ಯಮಧರ್ಮನು ಸಿಟ್ಟಿನಿಂದ ತಾನೇ ಅಲ್ಲಿಗೆ ಬಂದ. ಆದರೆ ಶಿವಲಿಂಗ ಹಿಡಿದು ಕುಳಿತಿದ್ದ ಮಾರ್ಕಂಡೇಯನ ಬಳಿಗೆ ಹೋಗಲು ಅವನಿಗೂ ಸಾಧ್ಯ ಆಗಲಿಲ್ಲ.

“ಮಾರ್ಕಂಡೇಯ ಶಿವಲಿಂಗ ಬಿಟ್ಟು ಇತ್ತ ಬಾ. ನಿನ್ನ ಆಯುಷ್ಯ ತೀರಿತು” ಎಂದು ಅಬ್ಬರಿಸಿದ ಯಮರಾಯ.

“ನಾನು ನನ್ನ ದೇವರನ್ನು ಬಿಟ್ಟು ಬರಲೊಲ್ಲೆ” ಎಂದು ಹಟ ಹಿಡಿದ ಮಾರ್ಕಂಡೇಯ.

“ಅದು ಹೇಗೆ ಬರುವುದಿಲ್ಲವೋ ನೋಡ್ತೇನೆ” ಎಂದು ಯಮ ತನ್ನ ಪಾಶವನ್ನು ಬೀಸಿದ.

ಆ ಕ್ಷಣ ಈಶ್ವರ ಪ್ರತ್ಯಕ್ಷನಾಗಿ. “ನಿಲ್ಲು ಯಮಧರ್ಮ” ಎಂದು ಕೂಗಿದ. ಯಮನು ವಿಸ್ಮಯದಿಂದ ನಿಂತ. ಮಾರ್ಕಂಡೇಯ ದೇವರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡ.

ಈಶ್ವರ ಮಂದಸ್ಮಿತನಾಗಿ “ಮಾರ್ಕಂಡೇಯ, ನಿನ್ನ ತಪಸ್ಸಿಗೆ ನಾನು ಮೆಚ್ಚಿದೆ. ನೀನು ಚಿರಂಜೀವಿಯಾಗು” ಎಂದು ಆಶೀರ್ವದಿಸಿದ.

ಸಾವಿನಿಂದ ಗೆದ್ದ ಮಾರ್ಕಂಡೇಯ ತಂದೆತಾಯಿಗಳಲ್ಲಿಗೆ ಹಿಂತಿರುಗಿದ. ತೇಜೋವಂತನಾಗಿ ಬಾಳಿದ. [][][]

ಉಲ್ಲೇಖ

[ಬದಲಾಯಿಸಿ]
  1. ಡಾ. ಅನುಪಮಾ ನಿರಂಜನ ಅವರ 'ದಿನಕ್ಕೊಂದು ಕಥೆ' ಮಾಲಿಕೆ
  2. ಭಾಗವತ ಪುರಾಣ - ತ, ಸು. ಶಾಮರಾಯರ 'ವಚನ ಭಾಗವತ
  3. ಬನ್ನಂಜೆ ಗೋವಿಂದಾಚಾರ್ಯರ - ಸಂಗ್ರಹ ಭಾಗವತ


  • ಡಾ. ಅನುಪಮಾ ನಿರಂಜನ ಅವರ 'ದಿನಕ್ಕೊಂದು ಕಥೆ' ಮಾಲಿಕೆ
  • ಭಾಗವತ ಪುರಾಣ - ತ, ಸು. ಶಾಮರಾಯರ 'ವಚನ ಭಾಗವತ
  • ಬನ್ನಂಜೆ ಗೋವಿಂದಾಚಾರ್ಯರ - ಸಂಗ್ರಹ ಭಾಗವತ'
  • ಭಕ್ತ ಮಾರ್ಕಂಡೇಯ ಚಲನಚಿತ್ರ