ವಿಷಯಕ್ಕೆ ಹೋಗು

ಮಾರ್ಕ್ಸ್‌ವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರ್ಕ್ಸ್ ವಾದ ಒಂದು ಸಮಗ್ರ ವಿಶ್ವದೃಷ್ಟಿ. 19 ನೇಯ ಶತಮಾನದ ಮೂರು ಪ್ರಧಾನ ಸೈದ್ಧಾಂತಿಕ ವಿಚಾರಧಾರೆಗಳಾದ ಜರ್ಮನಿತತ್ವಶಾಸ್ತ್ರ ಇಂಗ್ಲೆಂಡಿನ ರಾಜಕೀಯ ಅರ್ಥಶಾಸ್ತ್ರ ಮತ್ತು ಫ್ರಾನ್ಸಿನ ಸಮಾಜವಾದಿ ಚಿಂತನೆ ಇವನ್ನು ಮಾರ್ಕ್ಸ್ ಗಾಢವಾಗಿ ಅಭ್ಯಾಸ ಮಾಡಿ ಮತ್ತು ವಿಮರ್ಶಿಸಿ ಇವುಗಳ ಆಧಾರದ ಮೇಲೆ ತನ್ನ ಸಿದ್ಧಾಂತವನ್ನು ರಚಿಸಿದರು. ವರ್ಗ ಹೋರಾಟದ ಅನುಭವವನ್ನೆಲ್ಲ ಒಂದುಗೂಡಿಸಿ ಅದರ ಆಧಾರದ ಮೇಲೆ ಹೊಸ ಸಮಾಜದ ರೂಪುರೇಷೆಗಳನ್ನು ನಿರೂಪಿಸಿದರು. ಮಾರ್ಕ್ಸ್ ವಾದದ ತಿರುಳು ತತ್ವಶಾಸ್ತ್ರ. ಇದು ದೈವ, ಆತ್ಮ ಮುಂತಾದ ಅಲೌಕಿಕ ವಿಷಯಗಳನ್ನು ಪರಿಶೀಲಿಸುತ್ತದೆ ಎಂಬುದು ಸಾಮಾನ್ಯ ಭಾವನೆ. ಆದರೆ ತತ್ವಶಾಸ್ತ್ರ ಕೇವಲ ಆಧ್ಯಾತ್ಮಿಕ ವಿಷಯಗಳನ್ನು ಕುರಿತ ಶಾಸ್ತ್ರವಲ್ಲ, ಬದಲು ಇದು ಪ್ರಕೃತಿ, ಸಮಾಜ ಮತ್ತು ಮಾನವನ ಬುದ್ಧಿ ಪ್ರಪಂಚ ಇವನ್ನು ಅರ್ಥ ಮಾಡಿಕೊಳ್ಳುವ ಮತ್ತು ಬದಲಾಯಿಸುವ ರೀತಿಯನ್ನೂ ಇವನ್ನು ಪ್ರಭಾವಿಸುವ ಸಾಮಾನ್ಯ ನಿಯಮಗಳನ್ನೂ ಪರಿಶೀಲಿಸುತ್ತದೆ.[]

ವಾಸ್ತವವಾಗಿ ತತ್ವಶಾಸ್ತ್ರ ಅತಿ ಪ್ರಾಚೀನ ಶಾಸ್ತ್ರ. ಅತ್ಯಂತ ಹಿಂದಿನ ಕಾಲದಿಂದಲೂ ಸಮಾಜದ ವಿವಿಧ ವರ್ಗಗಳು ಮತ್ತು ಗುಂಪುಗಳು ಹಲವು ರೀತಿಯ ತಾತ್ವಿಕ ಪಂಥಗಳನ್ನು ನಿರ್ಮಿಸಿವೆ. ಈ ಪೈಕಿ ಯಾವುದು ವೈಜ್ಞಾನಿಕವಾದುದು, ತಾತ್ವಿಕ ಚರಿತ್ರೆಯಲ್ಲಿ ಅದರ ಸ್ಥಾನವೇನು ಎಂದು ಪತ್ತೆ ಹಚ್ಚುವುದು ಹೇಗೆ? ಇದನ್ನು ತಿಳಿಯಲು ವಿವಿಧ ತಾತ್ವಿಕ ಪಂಥಗಳು ತತ್ವಶಾಸ್ತ್ರದ ಮೂಲ ಪ್ರಶ್ನೆಯನ್ನು ಯಾವ ರೀತಿಯಲ್ಲಿ ಪರಿಭಾವಿಸುತ್ತವೆ ಎಂಬುದನ್ನು ಗ್ರಹಿಸಬೇಕು.

ಮಾರ್ಕ್ಸ್‌ವಾದೀ ಸಿದ್ಧಾಂತ

[ಬದಲಾಯಿಸಿ]

ನಮ್ಮ ಸುತ್ತಣ ಪ್ರಪಂಚವನ್ನು ಜಾಗರೂಕತೆಯಿಂದ ಪರಿಶೀಲಿಸಿದರೆ ಅದರಲ್ಲಿ ಅಡಕವಾಗಿರುವ ಎಲ್ಲಾ ವಸ್ತುಗಳೂ ಅದರಲ್ಲಿ ಸಂಭವಿಸುವ ಎಲ್ಲ ಇಂದ್ರೀಯ ಗೋಚರ ಘಟನೆಗಳೂ ಭೌತಿಕವಾದವು ಅಥವಾ ಮಾನಸಿಕವಾದವು ಎಂದು ತಿಳಿದುಬರುತ್ತದೆ. ಭೌತವಸ್ತುಗಳು ಮತ್ತು ಇಂದ್ರಿಯ ಗೋಚರ ವಿಷಯಗಳು ವ್ಯಕ್ತಿಯ ಹೊರಗೆ ಇರುತ್ತವೆ. ಅಂದರೆ ಮನುಷ್ಯನ ಪ್ರಜ್ಞೆಯಿಂದ ಸ್ವತಂತ್ರವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಮಾನವನ ಮನಸ್ಸಿನೊಳಗಿರುವ ಎಲ್ಲ ವಿಷಯಗಳೂ ಅಂದರೆ ಆಲೋಚನೆಗಳು, ಭಾವನೆಗಳು ಮುಂತಾದವು ಅವನ ಮಾನಸಿಕ ಕ್ಷೇತ್ರಕ್ಕೆ ಒಳಪಟ್ಟಿರುತ್ತವೆ. ಇವು ಕೇವಲ ಭಾವನಾತ್ಮಕವಾದವು ಮತ್ತು ಅಮೂರ್ತವಾದವು.

ಭೌತವಸ್ತುಗಳಿಗೂ ಮಾನಸಿಕ ಕ್ರಿಯೆಗಳಿಗೂ ನಡುವೆ ಇರುವ ಸಂಬಂಧವೇನು? ಭಾವನಾತ್ಮಕ ವಿಷಯಗಳು ಭೌತ ವಸ್ತುಗಳಿಂದ ಉಂಟಾಗಿವೆಯೇ ಅಥವಾ ಭೌತ ವಸ್ತುಗಳು ಭಾವನಾತ್ಮಕ ವಿಷಯಗಳಿಂದ ರೂಪಿತವಾಗಿವೆಯೆ? ಇವುಗಳ ನಡುವಿನ, ಹಾಗೆಯೇ, ಚಿಂತನೆ ಹಾಗೂ ಅಸ್ತಿತ್ವದ ನಡುವಿನ ಸಂಬಂಧಗಳು ಹಾಗೂ ಲಕ್ಷಣಗಳು ಯಾವ ರೀತಿಯವು? ಇವು ತತ್ವಶಾಸ್ತ್ರದ ಮೂಲ ಪ್ರಶ್ನೆಗಳು. ಸೂತ್ರ ರೂಪದಲ್ಲಿ ಅಸ್ತಿತ್ವ ಮತ್ತು ಅರಿವು ಇವೆರಡರ ಸಂಬಂಧ ಕುರಿತಾದವು. ಈ ಪ್ರಶ್ನೆಗೆ ಕೊಡುವ ಉತ್ತರದ ಮೇಲೆ ತತ್ವಶಾಸ್ತ್ರದ ಮೂಲ ಪ್ರಶ್ನೆಯ ಪರಿಹಾರ ನಿಂತಿದೆ. ಇದಲ್ಲದೆ ವಿಶ್ವದ ಏಕತೆ, ಅದರ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸಾಮಾನ್ಯ ನಿಯಮಗಳು, ಜ್ಞಾನದ ಸತ್ವ ಮತ್ತು ಜಗತ್ತನ್ನು ಅರಿಯುವ ರೀತಿ ಇವನ್ನು ಕುರಿತ ಸಮಸ್ಯೆಗಳ ಪರಿಹಾರವೂ ಈ ಉತ್ತರವನ್ನೇ ಅವಲಂಬಿಸಿದೆ. ಈ ಜಗತ್ತಿನಲ್ಲಿ ಭೌತವಸ್ತುಗಳು ಮತ್ತು ಭಾವನಾತ್ಮಕ ವಿಷಯಗಳನ್ನು ಬಿಟ್ಟು ಬೇರೆ ಯಾವುವೂ ಇಲ್ಲದೆ ಇರುವುದರಿಂದ ಮೇಲೆ ಹೇಳಿದ ಪ್ರಶ್ನೆಯನ್ನು ಬಗೆಹರಿಸದೆ, ಒಂದು ತಾತ್ವಿಕ ಸಿದ್ಧಾಂತವನ್ನಾಗಲೀ, ಜಗತ್ತಿನ ನೈಜ ಚಿತ್ರವನ್ನಾಗಲೀ ರಚಿಸಲು ಸಾಧ್ಯವಿಲ್ಲ.

ಈ ಪ್ರಶ್ನೆಗೆ ಎರಡು ಮುಖಗಳಿವೆ. ಮೊದಲನೆಯದು ಪ್ರಜ್ಞೆ ಮತ್ತು ಭೌತವಸ್ತುಗಳಲ್ಲಿ ಯಾವುದು ಪೂರ್ವಭಾವಿಯಾದುದು, ಚೇತನ ಮೊದಲೋ ಭೌತವಸ್ತು ಮೊದಲೋ ಎಂಬುದನ್ನು ನಿರ್ಧರಿಸುವುದು. ಎರಡನೇಯದು ಈ ಜಗತ್ತನ್ನು ನಾವು ಅರಿಯಬಲ್ಲವೇ, ಮಾನವನ ಬುದ್ಧಿಶಕ್ತಿ ಪ್ರಕೃತಿಯ ಗುಟ್ಟುಗಳ ಹೊಳಹೊಕ್ಕು ಅದರ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ನಿಯಮಗಳನ್ನು ಹೊರಗೆಡಹಬಲ್ಲುದೇ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸುತ್ತದೆ.

ಈ ಮೂಲ ಪ್ರಶ್ನೆಯನ್ನು ಬಿಡಿಸಲು ಸಾಕಷ್ಟು ಚಿಂತಿಸಿದರೆ ಭೌತವಸ್ತುವೇ ಮೊದಲಿದ್ದು ಭಾವನಾಮಯ ವಿಷಯಗಳು ಆಮೇಲೆ ಹುಟ್ಟಿದವು ಅಥವಾ ಭಾವನಾಮಯ ವಿಷಯಗಳೇ ಮೊದಲಿನದ್ದು ಭೌತವಸ್ತು ಕುರಿತ ಭಾವನೆ ಆಮೇಲೆ ಬಂದಿತು ಎಂಬ ಎರಡು ವಿರುದ್ಧ ಮಾರ್ಗಗಳಲ್ಲದೆ ಬೇರಾವ ಮಾರ್ಗವೂ ಇಲ್ಲವೆಂದೂ ಮನಗಾಣುತ್ತೇವೆ. ಆದ್ದರಿಂದಲೇ ತತ್ವಶಾಸ್ತ್ರದಲ್ಲಿ ಭೌತವಾದ, ಭಾವವಾದ ಎಂಬ ಎರಡು ಮೂಲ ಪ್ರವೃತ್ತಿಗಳು ಬಲು ಹಿಂದೆಯೇ ಹುಟ್ಟಿಕೊಂಡವು.

ಭೌತವಸ್ತುವೇ ಮೊದಲಿನದ್ದು, ಅದು ಮಾನವನ ಪ್ರಜ್ಞೆಯಿಂದಾಗಿ ಮಾತ್ರವೇ ಅಸ್ತಿತ್ವವನ್ನು ಹೊಂದಿಲ್ಲ ಎಂದು ಪ್ರತಿಪಾದಿಸುವ ತಾತ್ವಿಕರು ಭೌತವಾದಿಗಳು, ಭೌತವಸ್ತು ಅನಂತವಾದದ್ದು, ಇದನ್ನು ಯಾರೂ ಸೃಷ್ಟಿಸಲಿಲ್ಲ, ಈ ಜಗತ್ತಿಗೆ ಅಮಾನುಷ ಶಕ್ತಿಗಳಿಲ್ಲೆಂಬುದು ಇವರ ದೃಷ್ಟಿ. ಪ್ರಜ್ಞೆಯಾದರೋ ಭೌತವಸ್ತು ಚಾರಿತ್ರಿಕವಾಗಿ ಬೆಳೆದುದರ ಪರಿಣಾಮ, ಅತ್ಯಂತ ಸಂಕೀರ್ಣತೆಯಿಂದ ಕೂಡಿದ ಭೌತವಸ್ತುವಾದ ಮಿದುಳಿನ ಒಂದು ಗುಣ.

ಭಾವನಾವಾದ

[ಬದಲಾಯಿಸಿ]

ಮಾನಸಿಕ ಕ್ರಿಯೆಗಳಲ್ಲಿ ಒಂದಾದ ಪ್ರಜ್ಞೆಯು ಮೂಲತಃ ಪೂರ್ವಭಾವಿಯಾದುದು ಮತ್ತು ವಸ್ತುಗಳು ಆ ಪ್ರಜ್ಞೆಯ ಸೃಷ್ಟಿ ಎಂದು ಪರಿಗಣಿಸುವವರು ಭಾವನಾವಾದಿಗಳು. ಇವರ ದೃಷ್ಟಿಯಲ್ಲಿ ಪ್ರಜ್ಞೆ ಭೌತವಸ್ತುವಿಗಿಂತ ಮುಂಚಿನದು, ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳಿಗೂ ಆಧಾರವಾದುದು. ಯಾವ ರೀತಿಯಲ್ಲಿ ಪ್ರಜ್ಞೆಯು ಜಗತ್ತನ್ನು ಸೃಷ್ಟಿಸಿತು ಎಂಬುದನ್ನು ಕುರಿತು ಭಾವನಾವಾದಿಗಳಲ್ಲಿ ಒಮ್ಮತವಿಲ್ಲ. ವ್ಯಕ್ತಿಗತ ಭಾವನಾವಾದಿಗಳು (ಸಬ್ಜಕ್ಟೀವ್ ಐಡಿಯಲಿಸ್ಟ್ಸ್) ವ್ಯಕ್ತಿಯ ಪ್ರಜ್ಞೆಯಿಂದ ಜಗತ್ತು ಸೃಷ್ಟಿಯಾಯಿತು ಎಂದು ವಾದಿಸಿದರೆ ಮತ್ತೊಂದು ಗುಂಪಿನ ಭಾವನಾವಾದಿಗಳು ಈ ಜಗತ್ತು ಮನಸ್ಸಿನ ಹೊರಗಿನ ಚೈತನ್ಯದಿಂದ ಸೃಷ್ಟಿಯಾಗಿದೆ ಎಂದು ವಾದಿಸುತ್ತಾರೆ. ಇವರಿಗೆ ವಾಸ್ತವವಾದಿ ಭಾವನಾವಾದಿಗಳು (ಆಬ್ಜಕ್ಟಿವ್ ಐಡಿಯಲಿಸ್ಟ್ಸ್) ಎಂದು ಹೆಸರು. ಇವರು ಈ ಹೊರಗಿರುವ ಚೈತನ್ಯವನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಕೆಲವರು ಇದನ್ನು ಪರಮಪ್ರಜ್ಞೆ (ಅಬ್ಸೊಲ್ಯೂಟ್ ಸ್ಪಿರಿಟ್) ಎಂದೂ, ಮತ್ತೆ ಕೆಲವರು ಸಾರ್ವತ್ರಿಕ ಶಕ್ತಿ (ಯೂನಿವರ್ಸಲ್ ಫೋರ್ಸ್) ಎಂದೂ ಭಾವಿಸುತ್ತಾರೆ. ಇವರ ವಿವರಣೆಗಳು ಏನೇ ಇರಲಿ ಇವುಗಳಲ್ಲಿ ದೈವತ್ವ ಮತ್ತು ದೇವರು ಅಡಗಿರುವದನ್ನು ಸುಲಭವಾಗಿ ಗ್ರಹಿಸಬಹುದು.

ಮಾನವನ ಕುತೂಹಲವೇ ಅವನನ್ನು ಜ್ಞಾನಾರ್ಜನೆಗೆ ಪ್ರೇರಿಸಿದ್ದು. ತಾನು ಜೀವಿಸುತ್ತಿದ್ದ ವಿಶ್ವ ಹೇಗೆ ಹುಟ್ಟಿತು, ಅದು ಎತ್ತ ಸಾಗುತ್ತಿದೆ ಮುಂತಾದ ಪ್ರಶ್ನೆಗಳಿಗೆ ಉತ್ತರ ಕೊಡಲು ಅವನು ತನ್ನ ಸುತ್ತಣ ಜಗತ್ತನ್ನು ಜಾಗರೂಕತೆಯಿಂದ ನೋಡಲು ಯತ್ನಿಸಿದ. ಮಾನವನ ಶೈಶವಾವಸ್ಥೆಯಲ್ಲಿ ಪ್ರಕೃತಿಯ ಬಗೆಗಿನ ಅವನ ತಿಳಿವು ಅಸ್ಪಷ್ಟವಾಗಿತ್ತು. ತನ್ನ ಜೀವನ ಸಾಗಿಸಲು ಅವನು ಕೈಗೊಂಡ ಪ್ರಾಯೋಗಿಕ ಚಟುವಟಿಕೆಗಳೇ ಜ್ಞಾನಾರ್ಜನೆ ಮಾಡಲು ಸಹಾಯಕವಾದವು. ಅವನ ಮುಖ್ಯ ಗುರಿ ಜಗತ್ತನ್ನು ಅರಿಯುವುದೇ ಆಗಿದ್ದರಿಂದ ಅದನ್ನು ಸಾಧಿಸಲು ನಿರ್ದಿಷ್ಟ ಗುರಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಯಿತು. ಕೇವಲ ಗುರಿ ಇಟ್ಟುಕೊಂಡ ಮಾತ್ರಕ್ಕೆ ಅವನು ಕೈಗೊಂಡ ಕಾರ್ಯದಲ್ಲಿ ಸಫಲತೆ ಹೊಂದುತ್ತಾನೆ ಎಂದು ಹೇಳಲಾಗುವುದಿಲ್ಲ. ಈ ಗುರಿ ಮುಟ್ಟಲು ಅವನು ಸರಿಯಾದ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. ಅವನು ಅಧ್ಯಯನ ಮಾಡಲು ಯಾವ ವಿಷಯವನ್ನು ಮುಂದಿಟ್ಟುಕೊಳ್ಳುತ್ತಾನೋ ಅದರ ಗುಣ ಮತ್ತು ಅದರ ಮೇಲೆ ಪ್ರಭಾವ ಬೀರುವ ಸಾಮಾನ್ಯ ನಿಯಮಗಳು ಅವನು ಅನುಸರಿಸಬೇಕಾದ ಮಾರ್ಗವನ್ನು ನಿರ್ಧರಿಸುತ್ತವೆ.

ವೈಜ್ಞಾನಿಕ ತತ್ವಶಾಸ್ತ್ರವು ವಿವಿಧ ಶಾಸ್ತ್ರಗಳು ತಮ್ಮ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಸಾಧಿಸಿರುವ ಜ್ಞಾನವನ್ನು ಒಂದುಗೂಡಿಸಿ ತನ್ನದೇ ಆದ ಗ್ರಹಣ ವಿಧಾನವನ್ನು ಅಂದರೆ ದ್ವಂದ್ವಹೇತುಕ ಭೌತವಾದವನ್ನು (ಡಯಲೆಕ್ಟಿಕ್ ಮೆಟೀರಿಯಲಿಸಮ್) ಸೃಷ್ಟಿಸಿಕೊಂಡಿತು. ಇದರ ವಿಧಾನ ಇತರ ಶಾಸ್ತ್ರಗಳಿಗಿಂತ ಭಿನ್ನವಾದುದು. ಇದು ವಸ್ತು ಜಗತ್ತಿನ ಬೇರೆ ಬೇರೆ ಕ್ಷೇತ್ರಗಳ ತಿಳಿವಿಗೆ ಕೀಲಿಕೈ ಆಗಿರುವುದಲ್ಲದೇ ಪ್ರಕೃತಿ, ಸಮಾಜ, ಆಲೋಚನೆ ಮುಂತಾದ ವಿಷಯಗಳನ್ನೂ ತಿಳಿಯಲು ಸಾಧನವಾಗುತ್ತದೆ. ಇದು ಜಗತ್ತನ್ನು ಪೂರ್ಣವಾಗಿ ಅರಿಯಲು ಕೂಡ ಕೀಲಿಕೈ.

ಡಯಲೆಕ್ಟಿಕ್ಸ್ (ಗತಿತಾರ್ಕಿಕತೆ)

[ಬದಲಾಯಿಸಿ]

ಡಯಲೆಕ್ಟಿಕ್ಸ್ ಎಂಬ ಪದ ಪುರಾತನ ಗ್ರೀಸ್‍ನಿಂದ ಬಂದುದು. ಅಲ್ಲಿಯ ತಾತ್ವಿಕರು ವಸ್ತುವಿನಲ್ಲಿ ಅಥವಾ ಚಿಂತನೆಯಲ್ಲಿ ಅಡಗಿರುವ ವಿರೋಧಾಭಾಸಗಳನ್ನು ವಾದದ ಮೂಲಕ ಹೊರಗೆಡಹಿ ಸತ್ಯವನ್ನು ಸ್ಥಾಪಿಸಲು ಉಪಯೋಗಿಸುತ್ತಿದ್ದ ವಿಧಾನವಿದು. ಹೆಗಲ್ ಭಾವನಾವಾದಿಯಾಗಿದ್ದರೂ ಈ ವಿಧಾನವನ್ನು ಜಗತ್ತಿನ ಸೃಷ್ಟಿ ಮತ್ತು ಬೆಳವಣಿಗೆಯನ್ನು ವಿವರಿಸಲು ಉಪಯೋಗಿಸಿದರು. ಈ ಜಗತ್ತು ನಿರಂತರವಾಗಿ ಬದಲಾವಣೆ ಹೊಂದುತ್ತಿರುತ್ತದೆ. ಹಳೆಯದು ನಾಶವಾಗಿ ಹೊಸದು ಸೃಷ್ಟಿಯಾಗುತ್ತದೆ. ಜಗತ್ತು ತಳಮಟ್ಟದಿಂದ ಕ್ರಮೇಣ ಮೇಲ್ಮಟ್ಟಕ್ಕೆ ಬೆಳೆಯುತ್ತಾಹೋಗುತ್ತದೆ. ಸತತವಾದ ಈ ಬದಲಾವಣೆಗೆ ವಸ್ತುವಿನಲ್ಲಿರುವ ವೈರುಧ್ಯಗಳೇ ಕಾರಣ. ಈ ವೈರುಧ್ಯ ಸಂಘರ್ಷಣೆಯೇ ಜಗತ್ತಿನ ಚಲನೆಗೆ ಮೂಲವಾಗಿರುವುದು ಎಂದು ಹೆಗಲ್ ಪ್ರತಿಪಾದಿಸಿದರು. ವಸ್ತುವಿನಲ್ಲಿರುವ ದ್ವಂದ್ವಗಳನ್ನು ಗುರುತಿಸಿದರೂ ಇದನ್ನು ವಸ್ತುವಿನ ಅಸ್ತಿತ್ವದಿಂದ ಕಂಡುಕೊಳ್ಳದೇ ಇವು ಕೇವಲ ಪ್ರಜ್ಞೆಯಿಂದ ಅಥವಾ ವಿಶ್ವಚೇತನದಿಂದ ಉಂಟಾಗುತ್ತದೆ ಎಂದು ಭಾವಿಸಿದರು.

ಹೆಗಲ್ ರ ತತ್ತ್ವಶಾಸ್ತ್ರದ ಕೊರೆಯನ್ನು ಫೋಯರ್‍ಬಾಹ್ ಎತ್ತಿ ತೋರಿಸಿದ. ಇವರು ಹೆಗಲ್ ರ ಭಾವನಾವಾದಿ ಕಲ್ಪನೆಗಳನ್ನು ಅಲ್ಲಗೆಳೆದು ಮನಸ್ಸು ಭೌತವಸ್ತುವಿನ ಅತ್ಯುನ್ನತ ಉತ್ಪನ್ನವೇ ಹೊರತು ಮನಸ್ಸಿನಿಂದ ಭೌತವಸ್ತು ಹುಟ್ಟಲಿಲ್ಲ ಎಂದು ವಾದಿಸಿದರು. ಇದರಿಂದ ಅವರು ಹೆಗಲ್ ರ ವಿಧಾನದ ನ್ಯೂನ್ಯತೆಗಳನ್ನು ಎತ್ತಿತೋರಿಸಿ ಹೊಸ ತತ್ವವನ್ನು ರೂಪಿಸಲು ಯತ್ನಿಸಿದರು. ಘೋಯರ್‍ಬಾಹ್ ಹೆಗಲ್ ರ ಗತಿ ತಾರ್ಕಿಕತೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ಆದ್ದರಿಂದ ಅವರ ಭೌತವಾದವು ಚಿಂತನೆಯ ಹಂತವನ್ನು ದಾಟಿ ಮುಂದೆಹೋಗಲಿಲ್ಲ.

ಈ ಬಿಕ್ಕಟ್ಟನ್ನು ಮಾರ್ಕ್ಸ್ ಮತ್ತು ಎಂಗೆಲ್ಸ್ ಬಗೆಹರಿಸಿದರು. ದ್ವಂದ್ವ ಹೇತುಕ ತರ್ಕ ಮನಸ್ಸಿಗಷ್ಟೇ ಸೀಮಿತವಾಗಿಲ್ಲ, ಅದು ಪ್ರಪಂಚದ ಎಲ್ಲಾ ಮುಖಗಳಿಗೂ ಅಂದರೆ ಭೌತಜಗತ್ತು, ಮಾನಸಿಕ ಕ್ರಿಯೆ ಎಲ್ಲಕ್ಕೂ ಅನ್ವಯಿಸುತ್ತದೆ. ವಸ್ತುವಿನಲ್ಲಿ ಅಡಗಿರುವ ವಿರೋದಾಭಾಸಗಳನ್ನು ನಮ್ಮ ಬುದ್ಧಿಯು ಗ್ರಹಿಸಬಲ್ಲುದು. ಜಗತ್ತಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸಾಮಾನ್ಯ ನಿಯಮಗಳನ್ನು ಇವುಗಳ ಸ್ಪಷ್ಟ ತಿಳುವಳಿಕೆಯಿಂದ ಅರಿಯಬಹುದೆಂದು ಪ್ರಕಟಪಡಿಸಿದರು.

ಇದಿಷ್ಟನ್ನು ಹಿನ್ನೆಲೆಯಾಗಿಟ್ಟುಕೊಂಡು ತತ್ವಶಾಸ್ತ್ರವನ್ನು ಪರಿಚಯ ಮಾಡಿಕೊಳ್ಳಬಹುದು. ಇದನ್ನು ವಿವರಿಸುವ ಮೊದಲು ಈ ಶಾಸ್ತ್ರ ಪರೀಕ್ಷಿಸುವ ಪ್ರಶ್ನೆಗಳ ಹರವು ಮತ್ತು ಇದು ಚರ್ಚಿಸುವ ವಿಷಯಗಳ ತಿಳುವಳಿಕೆ ಅಗತ್ಯ.

ತತ್ತ್ವಶಾಸ್ತ್ರದ ವಿಷಯಗಳು ಶತಮಾನಗಳಿಂದಲೂ ಬೆಳೆದು ಬರುತ್ತ ಸತತ ಬದಲಾವಣೆಗಳಿಗೆ ಒಳಗಾಗಿವೆ. ಮೊದಲು ತತ್ವಶಾಸ್ತ್ರ ಮಾನವನ ಅಂದಿನ ಕಾಲದಲ್ಲಿ ಶೇಖರಿಸಿದ್ದ ಸಮಸ್ತ ಜ್ಞಾನವನ್ನೂ ಆವರಿಸಿತ್ತು. ಉತ್ಪಾದನೆಯೂ ವೈಜ್ಞಾನಿಕ ಜ್ಞಾನವೂ ಬೆಳೆದಂತೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಭೂಗರ್ಭ ವಿಜ್ಞಾನ, ಇತಿಹಾಸ ಮುಂತಾದ ವಿಶಿಷ್ಟ ಜ್ಞಾನ ಶಾಖೆಗಳು ಹುಟ್ಟಿಕೊಂಡವು. ಇವು ವಸ್ತುವಿನ ಬೇರೆ-ಬೇರೆ ಕ್ಷೇತ್ರಗಳನ್ನು ಅಭ್ಯಾಸ ಮಾಡುತ್ತವೆ.

ಮಾರ್ಕ್ಸ್‌ವಾದದ ತತ್ವವಾದರೋ ತತ್ವಶಾಸ್ತ್ರ ಎತ್ತಿದ ಮೂಲ ಪ್ರಶ್ನೆಯನ್ನು ಬಗೆಹರಿಸಲು ಪ್ರಯತ್ನಿಸುತ್ತದೆ. ಚೇತನ ಮತ್ತು ಇರವಿನ ನಡುವಣ ಸಂಬಂಧವನ್ನು ಅದು ತನ್ನ ಅಧ್ಯಯನದ ವಿಷಯವಾಗಿ ಇಟ್ಟುಕೊಂಡಿದೆ. ಈ ಪ್ರಶ್ನೆಯನ್ನು ಎಲ್ಲಾ ತತ್ವಶಾಸ್ತ್ರಗಳೂ ಉತ್ತರಿಸಲೇಬೇಕು. ಮಾಕ್ರ್ಸವಾದಿ ತತ್ವಶಾಸ್ತ್ರ ಒಂದೇ ಈ ಪ್ರಶ್ನೆಗೆ ಸರಿಯಾದ ಮತ್ತು ಸಮಂಜಸವಾದ ಉತ್ತರ ಒದಗಿಸಲು ಸಮರ್ಥವಾಗಿದೆ. ಮಾಕ್ರ್ಸ್‍ವಾದಿ ತತ್ವಶಾಸ್ತ್ರವನ್ನು ದ್ವಂದ್ವ ಹೇತುಕ ಭೌತವಾದವೆಂದು ಕರೆಯಲಾಗಿದೆ. ತತ್ವಶಾಸ್ತ್ರದ ಮೂಲಪ್ರಶ್ನೆಗೆ ಉತ್ತರವೀಯಲು ವಸ್ತು ಮತ್ತು ಇರವು ಪೂರ್ವಭಾವಿಯಾದವು, ಮನಸ್ಸು ಕೇವಲ ಗೌಣವಾದುದು ಎಂಬುದನ್ನು ವಿಶದಪಡಿಸುವುದರ ಮೂಲಕ ಅದು ಭೌತವಾಗಿ ತತ್ವಶಾಸ್ತ್ರವಾಗುತ್ತದೆ. ಈ ಜಗತ್ತು ತಿಳಿಯಲು ಸಾಧ್ಯವಾದಂತಹದ್ದು. ವಸ್ತು ಜಗತ್ತಿನ ಸತತ ಬದಲಾವಣೆ, ಬೆಳವಣಿಗೆ ಮತ್ತು ಮರುಹುಟ್ಟನ್ನು ವಿವೇಚಿಸುವುದರಿಂದ ಇದು ದ್ವಂದ್ವ ಹೇತುಕ ತರ್ಕವಾಗುತ್ತದೆ.

ತತ್ತ್ವಶಾಸ್ತ್ರದ ಮೂಲಪ್ರಶ್ನೆಯ ಸರಿಯಾದ ಉತ್ತರವನ್ನು ದ್ವಂದ್ವಹೇತುಕ ತರ್ಕವನ್ನು ಆಧಾರವಾಗಿ ಇಟ್ಟುಕೊಂಡು ಭೌತಪ್ರಪಂಚದ ಬೆಳವಣಿಗೆಯ ಸಾಮಾನ್ಯ ನಿಯಮಗಳನ್ನು ಹೊರಗೆಡಹುತ್ತದೆ. ಇತರ ಶಾಸ್ತ್ರಗಳು ಸಹ ಭೌತಪ್ರಪಂಚದ ಬೆಳವಣಿಗೆಯನ್ನು ಪರಿಶೀಲಿಸುತ್ತದೆ. ಆದರೆ ಅವು ಆಯಾ ಶಾಸ್ತ್ರಗಳ ಕ್ಷೇತ್ರಗಳಿಗೆ ಸೀಮಿತವಾಗಿವೆ. ಮಾರ್ಕ್ಸ್‌ವಾದದ ತತ್ವವಾದರೋ ಜಗತ್ತಿನ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯನ್ನು ಪ್ರಭಾವಿಸುವ ಸಾಮಾನ್ಯ ನಿಯಮಗಳನ್ನು ಅಭ್ಯಾಸ ಮಾಡುತ್ತದೆ.

ಮಾರ್ಕ್ಸ್‌ವಾದವು ಅರಿವಿನ ವಿಧಾನವನ್ನು ಪ್ರಭಾವಿಸುವ ನಿಯಮಗಳನ್ನು ಸಹ ಪರಿಶೀಲಿಸುತ್ತದೆ. ಇವು ಬಾಹ್ಯ ಜಗತ್ತಿನ ಬೆಳವಣಿಗೆಯನ್ನು ಪ್ರಭಾವಿಸುವ ನಿಯಮಗಳ ಪ್ರತಿಬಿಂಬವೇ ಆಗಿದೆ. ದ್ವಂದ್ವ ಹೇತುಕ ಭೌತವಾದವು ಜನರಲ್ಲಿ ಈ ನಿಯಮಗಳ ಜ್ಞಾನವನ್ನು ಉಂಟುಮಾಡುವುದಲ್ಲದೆ ಈ ಜಗತ್ತನ್ನು ಕ್ರಾಂತಿಕಾರಕವಾಗಿ ಯಾವ ರೀತಿ ಬದಲಾಯಿಸಬಹುದು ಎಂಬುದನ್ನೂ ತಿಳಿಸುತ್ತದೆ. ಆದ್ದರಿಂದಲೇ ಮಾರ್ಕ್ಸ್‌, 'ಎಲ್ಲಾ ತಾತ್ವಿಕರೂ ಜಗತ್ತನ್ನು ವಿವರಿಸಿದ್ದಾರೆ. ಆದರೆ ಅದನ್ನು ಬದಲಾಯಿಸುವುದೇ ಮುಖ್ಯವಾದುದು' ಎಂದು ಹೇಳಿದ್ದಾರೆ.

ಮಾರ್ಕ್ಸ್‌ ಮತ್ತು ಎಂಗೆಲ್ಸ್ ಶ್ರಮಜೀವಗಳ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದ ಈ ನಿಯಮಗಳನ್ನು ಹೊರಗೆಡಹಲು ಮತ್ತು ದ್ವಂದ್ವ ಹೇತುಕ ತತ್ವದ ಮೂಲಕ ವಸ್ತು ಸ್ಥಿತಿಯ ಸತ್ವವನ್ನು ಕಂಡುಹಿಡಿಯಲು ಸಾಧ್ಯವಾಯಿತು.

ಚಾರಿತ್ರಿಕ ಭೌತವಾದ

[ಬದಲಾಯಿಸಿ]

ಮಾರ್ಕ್ಸ್‌ವಾದದ ಮತ್ತೊಂದು ಅಂಗ ಚಾರಿತ್ರಿಕ ಭೌತವಾದ. ದ್ವಂದ್ವಹೇತುಕ ಭೌತವಾದದ ಆಧಾರದ ಮೇಲೆ ಸಮಾಜ ಜೀವನದ ಬೆಳವಣಿಗೆಯ ಸಾಮಾನ್ಯ ನಿಯಮಗಳನ್ನು ಪರಿಶೀಲಿಸುವುದೇ ಚಾರಿತ್ರಿಕ ಭೌತವಾದದ ವಸ್ತು. ಸಾಮಾಜಿಕ ಜೀವನವನ್ನು ಅರಿಯಲು ಭೌತವಾದಿ ಮಾರ್ಗವನ್ನೇ ಅನುಸರಿಸಿದ. ಪ್ರಕೃತಿಯಲ್ಲಿ ಕುರುಡು ಶಕ್ತಿಗಳು ಬಾಹ್ಯ ಕಾರಣವಿಲ್ಲದೇ ಪ್ರವೃತ್ತವಾಗಿರುತ್ತವೆ. ಇಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ತನ್ನಷ್ಟಕ್ಕೆ ತಾನೇ ಅನೈಚ್ಫಿಕವಾಗಿ ನಡೆಯುತ್ತದೆ. ಆದರೆ ಸಮಾಜ ಜೀವನದಲ್ಲಿ ವಿವೇಕದಿಂದ ಕೂಡಿದ ಜನರು ಉದಾತ್ತ ಧ್ಯೇಯಗಳಿಗೆ ಅನುಸಾರವಾಗಿ ಪ್ರಜ್ಞಾಪೂರ್ವಕವಾಗಿ ತಾವು ಮುಂದಿಟ್ಟುಕೊಂಡಿರುವz ಗುರಿಗಳನ್ನು ಸಾಧಿಸಲು ನಿರತರಾಗುತ್ತಾರೆ. ಕ್ರಮೇಣ ಇದರ ಚಟುವಟಿಕೆಗಳು ಒಂದು ಗುಂಪಿನ ಅಥವಾ ಒಂದು ವರ್ಗದ ಚಟುವಟಿಕೆಗಳಾಗಿ ಮಾರ್ಪಡುತ್ತವೆ. ಇವು ಅಂದಿನ ತಾತ್ವಿಕರು ಸಮಾಜ ಜೀವನದ ಬಗ್ಗೆ ಹೊಂದಿದ್ದ ಭಾವನೆಗಳು. ಮಾನವನ ಭಾವನೆಗಳೇ ಸಮಾಜದ ಬೆಳವಣಿಗೆಗೆ ಕಾರಣವೆಂದು ತಿಳಿದದ್ದರಿಂದ ಅವರದು ಕೇವಲ ಭಾವನಾಮಯ ದೃಷ್ಟಿಯಾಗಿತ್ತು.

ಸಾಮಾಜಿಕ ಜೀವನದಲ್ಲಿ ಪ್ರಗತಿಪರ ಮತ್ತು ಪ್ರತಿಗಾಮಿ ಶಕ್ತಿಗಳು ಒಂದನ್ನೊಂದು ಸಂಘರ್ಷಿಸುತ್ತಲೇ ಇರುತ್ತವೆ. ವಿವಿಧ ವರ್ಗಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಕ್ತಿಗಳು ಒಂದನ್ನೊಂದು ಎದುರಿಸುತ್ತವೆ. ಸಮಾಜದಲ್ಲಿಯ ಈ ಚಟುವಟಿಕೆಗಳು ಯಾವ ವ್ಯವಸ್ಥೆಗೂ ಒಳಪಡದೇ ನಡೆಯುತ್ತವೆಯೋ ಅಥವಾ ನಿಯಮಬದ್ಧವಾಗಿ ನಡೆಯುತ್ತವೆಯೋ ಎಂಬುದನ್ನು ಪರಿಶೀಲಿಸಿದರೆ ಅದರಲ್ಲಿ ಒಂದು ನಿಯಮವಿದೆ ಎಂದು ಕಂಡುಬರುತ್ತದೆ.

ಸಮಾಜವಾದ

[ಬದಲಾಯಿಸಿ]

ಮಾನವಸಮಾಜ ಎಂದರೇನು, ಯಾವ ರೀತಿಯ ನಿಯಮಗಳು ಅದರ ಪ್ರಗತಿಯನ್ನು ರೂಪಿಸುತ್ತವೆ, ಇವು ಯಾವುವು ಎಂದು ತಿಳಿದು ಇವನ್ನು ತನ್ನ ಚಟುವಟಿಕೆಗಳಲ್ಲಿ ಹೇಗೆ ಉಪಯೋಗಿಸಬಹುದು ಮುಂತಾದ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಮಾಕ್ರ್ಸ್‍ವಾದಿ ತತ್ವಶಾಸ್ತ್ರದ ಅಂಗ 'ಚಾರಿತ್ರಿಕ ಭೌತವಾದ. ಇದರ ಬೆಳವಣಿಗೆ ಸಾಮಾಜಿಕ ಚಿಂತನೆಯಲ್ಲಿ ಕ್ರಾಂತಿ ಉಂಟುಮಾಡಿತು. ಪ್ರಕೃತಿ ಮತ್ತು ಸಮಾಜ ಎರಡನ್ನೂ ಒಳಗೊಂಡ ಜಗತ್ತಿನ ಬಗೆಗೆ ಸಮಂಜಸವಾದ ಭೌತವಾದಿ ದೃಷ್ಟಿಯನ್ನು ರೂಪಿಸಲು ಇದರಿಂದ ಸಾಧ್ಯವಾಯಿತು. ಸಮಾಜ ಜೀವನದ ಭೌತವಾದಿ ಜೀವನವನ್ನು ಹೊರಗೆಡಹಿ ಅದರ ಬೆಳವಣಿಗೆಯನ್ನು ಪ್ರಭಾವಿಸುವ ನಿಯಮಗಳನ್ನು ತಿಳಿಯಪಡಿಸಿತು. ಸಮಾಜದ ಆರ್ಥಿಕ ಕ್ಷೇತ್ರವನ್ನು ಅದರ ಇತರ ಕ್ಷೇತ್ರಗಳಿಂದ ಪ್ರತ್ಯೇಕಿಸಿ ಮಾಕ್ರ್ಸ್ ಸಮಾಜದ ಬೆಳವಣಿಗೆಯ ಚಾರಿತ್ರಿಕ ರೂಪವನ್ನು ವಿಶದಪಡಿಸಿದ.

ಪ್ರಕೃತಿಯನ್ನು ವಿವಿಧ ಶಾಸ್ತ್ರಗಳು ವಿವೇಚಿಸುವಂತೆ ಸಮಾಜ ಜೀವನವನ್ನೂ ಬೇರೆ-ಬೇರೆ ಸಮಾಜ ಶಾಸ್ತ್ರಗಳು ತಮ್ಮ ವಿಶಿಷ್ಟ ದೃಷ್ಟಿಯಿಂದ ಪರಿಶೀಲಿಸುತ್ತವೆ. ಅರ್ಥಶಾಸ್ತ್ರ ಮಾನವನ ಉತ್ಪಾದನಾ ಶಕ್ತಿಗಳನ್ನೂ ಉತ್ಪಾದನಾ ಸಂಬಂಧಗಳನ್ನೂ ಪರಿಶೀಲಿಸುತ್ತದೆ. ಇತಿಹಾಸ ಮಾನವ ಸಮಾಜ ಬೇರೆ-ಬೇರೆ ಕಾಲಗಳಲ್ಲಿ ಬೇರೆ-ಬೇರೆ ದೇಶಗಳಲ್ಲಿ ಹೇಗೆ ಬೆಳೆಯಿತು ಎಂಬುದನ್ನು ತನ್ನ ವಿಷಯವಾಗಿ ಇಟ್ಟುಕೊಂಡಿವೆ. ಸೌಂದರ್ಯ ಮೀಮಾಂಸೆ ಮಾನವನ ಬೆಳವಣಿಗೆಯನ್ನು ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಿಗೆ ಸೀಮಿತಗೊಳಿಸುತ್ತದೆ. ಹೀಗೆ ವಿವಿಧ ಸಮಾಜಶಾಸ್ತ್ರಗಳು ವಿವೇಚಿಸಿದ ವಿಷಯಗಳನ್ನು ಒಂದುಗೂಡಿಸಿದ ಮಾತ್ರಕ್ಕೇ ನಮಗೆ ಸಮಾಜದ ಪೂರ್ಣ ಅರಿವು ಉಂಟಾಗುವುದಿಲ್ಲ. ಸಮಾಜದ ಬೆಳವಣಿಗೆಯ ಸಾಮಾನ್ಯ ನಿಯಮಗಳು ಯಾವ ರೀತಿ ಸಮಾಜ ಜೀವನವನ್ನು ಪ್ರಭಾವಿಸುತ್ತವೆ ಎನ್ನುವುದನ್ನು ಯಾವ ಒಂದು ಸಮಾಜ ಶಾಸ್ತ್ರವೂ ವಿವೇಚಿಸುವುದಿಲ್ಲ. ಈ ನಿಯಮಗಳ ಪರಿಚಯವಿಲ್ಲದೇ ಸಮಾಜದ ಎಲ್ಲಾ ಅಂಗಗಳನ್ನು ಒಂದುಗೂಡಿಸಿ ಅದಕ್ಕೆ ಒಂದು ಜೀವಂತ ಅಸ್ತಿತ್ವವಿದೆ ಎಂದು ತೋರಿಸಲು ಸಾಧ್ಯವಿಲ್ಲ.

ಮಾರ್ಕ್ಸ್‌ವಾದ ಎಲ್ಲ ರೀತಿಯ ಸಮಾಜಗಳ ಮೂಲಾಧಾರವಾದ ಅಂದರೆ ಜನರು ತಮ್ಮ ಜೀವನ ಸಾಗಿಸಲು ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಪರಿಶೀಲಿಸಿ ಅದರ ಮೂಲಕ ಮಾನವ ಉತ್ಪಾದನಾ ವಿಧಿಯಲ್ಲಿ ಇತರರೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತಾನೆ ಎಂಬುದನ್ನು ಪರಿಶೀಲಿಸುತ್ತದೆ. ಈ ಉತ್ಪಾದನಾ ಸಂಬಂಧಗಳೇ ಪ್ರತಿಯೊಂದು ಸಮಾಜದ ಮೂಲಾಧಾರ. ಇವೇ ಅದರ ಆರ್ಥಿಕ ವ್ಯವಸ್ಥೆಯನ್ನು ರೂಪಿಸಿದವು. ಈ ಉತ್ಪಾದನಾ ಸಂಬಂಧಗಳ ಮೇಲೆಯೇ ಸಮಾಜದ ರಾಜಕೀಯ, ನ್ಯಾಯ, ಕಲೆ ಮುಂತಾದವು ರೂಪಿತವಾಗಿರುವುದಾಗಿದೆ.

ಉತ್ಪಾದನಾ ಶಕ್ತಿಗಳ ಬೆಳವಣಿಗೆಯ ಮೇಲೆ ಉತ್ಪಾದನಾ ಸಂಬಂಧಗಳು ಉಂಟಾಗುತ್ತವೆ ಮತ್ತು ತದನುಗುಣವಾಗಿಯೇ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುತ್ತದೆ. ಎಲ್ಲಾ ಸಾಮಾಜಿಕ ಆರ್ಥಿಕ ರಚನೆಗಳಿಗೂ ಸಾಮಾನ್ಯವಾದ ನಿಯಮಗಳು ಪ್ರತಿಯೊಂದು ಹಂತದ ಸಾಮಾಜಿಕ ವ್ಯವಸ್ಥೆಯನ್ನು ಪ್ರಭಾವಿಸುತ್ತವೆ. ಇವಲ್ಲದೆ ಸಾಮಾಜಿಕ ರಚನೆಗೆ ವಿಶಿಷ್ಟವಾದ ನಿಯಮಗಳಿಗೂ ಆಯಾ ಸಮಾಜ ಅಧೀನವಾಗಿರುತ್ತದೆ. ಈ ವಿಶಿಷ್ಟ ನಿಯಮಗಳು ಆ ಸಮಾಜ ಹೇಗೆ ಹುಟ್ಟಿತು, ಹೇಗೆ ಬೆಳೆಯಿತು ಮತ್ತು ಅದಕ್ಕಿಂತ ಉತ್ತಮಮಟ್ಟಕ್ಕೆ ಯಾವ ರೀತಿ ಬದಲಾಗುತ್ತದೆ ಎನ್ನುವುದನ್ನು ತಿಳಿಸುತ್ತವೆ.

ಇತಿಹಾಸದಲ್ಲಿ ಇಲ್ಲಿಯ ತನಕ ರೂಪುಗೊಂಡ ಸಾಮಾಜಿಕ ಆರ್ಥಿಕ ರಚನೆಗಳಿವು: ಆದಿಕಾಲದ ಸಮತಾವಾದ ಸಮಾಜ, ಸಾಮಂತಶಾಹಿ ಸಮಾಜ ಮತ್ತು ಬಂಡವಾಳಶಾಹಿ ಸಮಾಜ. ಈ ಎಲ್ಲ ರಚನೆಗಳಲ್ಲೂ ಜನರು ಕೈಗೊಂಡ ಚಟುವಟಿಕೆಗಳು ಮೇಲ್ನೋಟಕ್ಕೆ ಯಾವ ರೀತಿಯ ವ್ಯವಸ್ಥೆಗೂ ಅಧೀನವಾಗಿಲ್ಲವೆಂದು ಕಂಡುಬಂದರೂ ಇವರ ಚಟುವಟಿಕೆಗಳು ಒಂದು ವರ್ಗದ ಅಥವಾ ಗುಂಪಿನ ಚಟುವಟಿಕೆಗಳಾಗಿ ಪರಿಣಮಿಸಿ ಸಮಾಜದ ಸತತ ಬದಲಾವಣೆಗೆ ಕಾರಣವಾದುದೆಂದು ಕಂಡುಬರುವುದು. ಇವೇ ಸಮಾಜದಲ್ಲಿ ನಡೆಯುವ ವರ್ಗ ಹೋರಾಟದ ಚಿಹ್ನೆಗಳು.

ಚಾರಿತ್ರಿಕ ವಾದ

[ಬದಲಾಯಿಸಿ]

ಚಾರಿತ್ರಿಕ ಭೌತವಾದವು ಮಾರ್ಕ್ಸ್‌ಪೂರ್ವ ಸಮಾಜಶಾಸ್ತ್ರದ ಎರಡು ಮುಖ್ಯ ಕೊರತೆಗಳನ್ನು ತೊಡೆದುಹಾಕಿತು. ವ್ಯಕ್ತಿಗಳ ಭಾವನಾತ್ಮಕ ಚಟುವಟಿಕೆಗಳನ್ನೇ ಹೆಚ್ಚಾಗಿ ಪರಿಶೀಲಿಸಿ ಇವೇ ಸಮಾಜದ ಬೆಳವಣಿಗೆಗೆ ಕಾರಣವೆಂದು ಪರಿಗಣಿಸಿ ಭೌತಾತ್ಮಕ ಚಟುವಟಿಕೆಗಳನ್ನು ಪರಿಶೀಲಿಸದಿದ್ದುದು ಮೊದಲನೆಯ ಕೊರತೆ. ಇತಿಹಾಸ ನಿರ್ಮಾಪಕರಾದ ಜನರ ಚಟುವಟಿಕೆಗಳನ್ನು ಗಮನಿಸದೇ ಕೇವಲ ವೀರರು, ರಾಜರು ಮುಂತಾದ ಪ್ರಮುಖ ವ್ಯಕ್ತಿಗಳ ಚಟುವಟಿಕೆಗಳನ್ನು ಮಾತ್ರ ಗಮನಿಸಿದ್ದು ಎರಡನೆಯ ಕೊರತೆ.

ಸಾಮಾಜಿಕ-ಐತಿಹಾಸಿಕ ಕಾರ್ಯಗತಿ ಭೌತಾತ್ಮಕ ಸಾಧನಗಳಿಂದ ಆಗಿದೆಯೆಂದು ಐತಿಹಾಸಿಕ ಭೌತವಾದ ಪ್ರದರ್ಶಿಸಿತು. ಮಾನವನೇ ಇತಿಹಾಸದ ನಿರ್ಮಾಪಕ ಆದರೆ ಮಾನವ ಸಮುದಾಯವು ಇತಿಹಾಸವನ್ನು ಸ್ವಂತೇಚ್ಛಾನುಸಾರ ರೂಪಿಸಲಾರದು. ಪ್ರತಿಯೊಂದು ತಲೆಮಾರಿನವರು ಅವರಿಗೆ ಹಿಂದೆ ಇದ್ದ ನಿರ್ದಿಷ್ಟವಾದ ಬಾಹ್ಯ ಪರಿಸ್ಥಿತಿಗೆ ಅನುಸಾರವಾಗಿ ಕೆಲಸ ಮಾಡುತ್ತಾರೆ. ಈ ಬಾಹ್ಯ ಪರಿಸ್ಥಿತಿ ಮತ್ತು ಅದಕ್ಕೆ ಅನುಗುಣವಾದ ನಿಯಮಗಳ ಕಾರ್ಯಾಚರಣೆ ಜನರ ಚಟುವಟಿಕೆಗಳಿಗೆ ಅನೇಕ ಸಾಧ್ಯತೆಗಳನ್ನು ಒದಗಿಸುತ್ತವೆ. ಇವನ್ನು ಉಪಯೋಗಿಸಿಕೊಂಡು ಪ್ರಗತಿಪರ ಸಂಘಟನೆ ರಚಿಸುವುದು ಇತಿಹಾಸದ ನೈಜ ಮುನ್ನಡೆಗೆ ಕಾರಣವಾಗುತ್ತವೆ. ಈ ವರ್ಗಗಳೇ ಸಮಾಜದಲ್ಲಿ ಕುರುಡಾಗಿ ಭಾಗವಹಿಸುವುದಿಲ್ಲ. ಬದಲಾಗಿ ಪ್ರಜ್ಞಾಪೂರ್ವಕವಾಗಿಯೂ ಒಗ್ಗಟ್ಟಾಗಿಯೂ ಸಾಮಾಜಿಕ ಬೆಳವಣಿಗೆಯ ನಿಯಮಗಳಿಗನುಸಾರವಾಗಿಯೂ ವರ್ತಿಸುತ್ತವೆ.

ಆದ್ದರಿಂದ ಈ ತನಕದ ಸಮಾಜೇತಿಹಾಸ ಅದರ ಕೇವಲ ಪೀಠಿಕೆ ಆಗಿದೆ. ಸಮಾಜವಾದ ರೂಪುಗೊಂಡ ಬಳಿಕ ಅದರ ಇತಿಹಾಸ ಪ್ರಾರಂಭವಾಗುತ್ತದೆ.

ಕಾರ್ಲ್‌ಮಾರ್ಕ್ಸ್

[ಬದಲಾಯಿಸಿ]

ಮಾರ್ಕ್ಸ್, ಕಾರ್ಲ್ 1818-83 ವೈಜ್ಞಾನಿಕ ಸಮಾಜವಾದದ ಪ್ರವರ್ತಕ. ಜರ್ಮನಿಯ ರೈನ್ ಪ್ರದೇಶದ ಟ್ರಿಯರ್ ನಗರದಲ್ಲಿ 5 ಮೇ 1818 ರಂದು ಜನನ, ಈತನ ತಂದೆ ಒಬ್ಬ ಯಶಸ್ವೀ ವಕೀಲನಾಗಿದ್ದರು. ಜನ್ಮತಃ ಯೆಹೂದ್ಯ ಆದರೆ ಕಾರ್ಲ್ ಹುಟ್ಟಿದ 6 ವರ್ಷಗಳ ಅನಂತರ ಪ್ರಾಟೆಂಸ್ಟೆಂಟ್ ಮತದ ಅನುಯಾಯಿಯಾದರು (1824). ಇವರದು ನೆಮ್ಮದಿಯ ಕುಟುಂಬ, ಕಾರ್ಲ್ ಮಾರ್ಕ್ಸ್ ನ ಆರಂಭದ ಶಿಕ್ಷಣ ಟ್ರಿಯರ್ ಪಟ್ಟಣದ ಮೇಲು ದರ್ಜೆಯ ವಿದ್ಯಾಲಯದಲ್ಲಿ. (ಜಿಮ್ನಾಸಿಯಮ್) ನಡೆಯಿತು. ಮುಂದೆ ಬಾನ್‍ನಲ್ಲೂ ಬರ್ಲಿನ್ನಿನಲ್ಲೂ ವಿದ್ಯಾಭ್ಯಾಸ ಮುಂದುವರಿಸಿ ನ್ಯಾಯಶಾಸ್ತ್ರ. ಇತಿಹಾಸ ಮತ್ತು ತತ್ತ್ವಶಾಸ್ತ್ರ ಕಲಿತರು. ಮಾರ್ಕ್ಸ್ ತನ್ನ ಶಾಲಾಭ್ಯಾಸವನ್ನು ಕಡೆಗಣಿಸದಿದ್ದರೂ ಅಂದಿನ ಪದ್ಧತಿಯ ಪ್ರಕಾರ ವಿದ್ಯಾರ್ಥಿಗಳು ಬಾಯಿಪಾಠಮಾಡಬೇಕಾಗಿದ್ದ ಧಾರ್ಮಿಕ ಗ್ರಂಥಗಳ ಬಗೆಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ಡೆಮೋಕ್ರಿಟಸ್ ಮತ್ತು ಎಪಿಕ್ಯೂರಸ್ಸರ ತತ್ತ್ವಶಾಸ್ತ್ರದ ಮೇಲೆ ಪ್ರಬಂಧ ರಚಿಸಿ ಯೇನಾ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪದವಿ ಪಡೆದರು(1841). ಈ ಪ್ರಬಂಧದ ಪ್ರಕಾರ ಮಾರ್ಕ್ಸ್ ಹೆಗಲ್ ರ ಭಾವನಾವಾದೀ ಅನುಯಾಯಿಯಾಗಿದ್ದಿರಬಹುದೆಂದು ಅನ್ನಿಸಿದರೂ ಹೆಗಲ್ಲನ ವಿಚಾರಧಾರೆ ಮಾಕ್ರ್ಸ್‍ನ ಪೂರ್ಣ ಒಪ್ಪಿಗೆ ಪಡೆದಿರಲಿಲ್ಲವೆಂದು ವೇದ್ಯವಾಗುತ್ತದೆ. ಬರ್ಲಿನ್‍ನಲ್ಲಿ ಮಾಕ್ರ್ಸ ಯುವ ಹೆಗಲಿಯನ್ನರ (ವಾಮ ಹೆಗಲಿಯನ್ನರ) ಜೊತೆ ಕೂಡಿ ಅನೇಕ ಕೆಲಸ ಮಾಡಿದ ಈ ವೇಳೆಗೆ ಆತ ಇನ್ನೂ ಭೌತವಾದೀ ಮನೋಧರ್ಮವನ್ನು ಅಂಗೀಕರಿಸಿರಲಿಲ್ಲ.

ವಿಶ್ವವಿದ್ಯಾಲಯದ ಪದವಿ ಪಡೆದ ಬಳಿಕ ಮಾಕ್ರ್ಸ್ ಪ್ರಾಧ್ಯಾಪಕ ವೃತ್ತಿ ಅವಲಂಬಿಸಲು ಬಯಸಿದ. ಆದರೆ ಅಂದಿನ ಪರಿಸ್ಥಿತಿಯಲ್ಲಿ ಜರ್ಮನಿಯು ಪ್ರತಿಗಾಮೀ, ನೀತಿ ತಳೆದಿದ್ದುದರಿಂದ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಈತ ಪತ್ರಿಕೋದ್ಯಮವನ್ನು ಅವಲಂಬಿಸಬೇಕಾಯಿತು. 1842ರಲ್ಲಿ ರೈನ್ ಪತ್ರಿಕೆಯ ರೈನಿಷ್ ತ್ಸೈತೂಂಗ್ ಸಂಪಾದಕನಾಗಿ ಕೆಲಸ ಆರಂಭಿಸಿದ, ಇದರಲ್ಲಿ ಪ್ರಕಟವಾದ ಕ್ರಾಂತಿಕಾರಿ ಮತ್ತು ಪ್ರಜಾಸತ್ತಾತ್ಮಕ ಲೇಖನಗಳಿಂದ ಕೆರಳಿದ ಸರ್ಕಾರ 1843 ಜನವರಿಯಲ್ಲಿ ಈ ಪತ್ರಿಕೆಯನ್ನು ನಿಷೇಧಿಸಿತು. ಮಾಕ್ರ್ಸ್ ಸಂಪಾದಕನ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ಪತ್ರಿಕೋದ್ಯಮದಲ್ಲಿ ತೊಡಗಿದ್ದಾಗ ಮಾಕ್ರ್ಸ್ ತನಗೆ ರಾಜ್ಯಶಾಸ್ತ್ರ ಮತ್ತು ರಾಜಕೀಯ ಅರ್ಥಶಾಸ್ತ್ರದಲ್ಲಿ ಸಾಕಷ್ಟು ಪರಿಣತಿ ಇಲ್ಲವೆಂದು ಮನಗಂಡು ಅವನ್ನು ಗಾಢವಾಗಿ ಅಭ್ಯಸಿಸತೊಡಗಿದ.

1843ರಲ್ಲಿ ಮಾಕ್ರ್ಸ್ ತನ್ನ ಬಾಳಗೆಳತಿಯಾದ ಜೆನ್ನಿಯನ್ನು ಮದುವೆಯಾದ. ಇವರದೊಂದು ತುಂಬಾ ಅನ್ಯೋನ್ಯ ದಾಂಪತ್ಯ ಮಾಕ್ರ್ಸ್ ದಂಪತಿಗಳು ವಾಮ ಹೆಗಲಿಯನ್ ಆಗಿದ್ದ ಆರ್ನಾಲ್ಡ್ ರೂಬ್ ಜೊತೆಗೂಡಿ ಪ್ಯಾರಿಸ್ಸಿನಲ್ಲಿ ತಮ್ಮ ಮುಂದಿನ ಚಟುವಟಿಕೆಗಳನ್ನು ಆರಂಭಿಸಿದರು. ಇಲ್ಲಿ ಜರ್ಮನ್-ಫ್ರೆಂಚ್ ವಾರ್ಷಿಕ ಎಂಬ ನಿಯತಕಾಲಿಕೆಯನ್ನು ಪ್ರಕಟಿಸತೊಡಗಿದರು. ಇದನ್ನು ಜರ್ಮನಿಯಲ್ಲಿ ರಹಸ್ಯವಾಗಿ ಹಂಚಲು ಕಷ್ಟಸಾಧ್ಯವಾದ್ದರಿಂದ ಮೊದಲ ಸಂಚಿಕೆ ಪ್ರಕಟವಾದ ಕೆಲವೇ ದಿನಗಳಲ್ಲಿ ನಿಲ್ಲಿಸಬೇಕಾಯಿತು.

ಅಂದಿನ ದಿನಗಳಲ್ಲಿ ಫ್ರಾನ್ಸ್ ಬೂಜ್ರ್ವಾ ಪದ್ಧತಿಯ ಸಮಾನತೆ ಸ್ವಾತಂತ್ರ್ಯ ಹಾಗೂ ಭ್ರಾತೃತ್ವಗಳ ಉನ್ನತ ಧ್ಯೇಯಗಳನ್ನು ಮರೆತು ಸ್ವಾರ್ಥ ಸಂಪತ್ಸಂಗ್ರಹಣೆಯಲ್ಲಿ ಆಸಕ್ತಿ ವಹಿಸಿತ್ತು. ಇಂಥ ಬೂಜ್ರ್ವಾ ಸಮಾಜವನ್ನು ಯುರೋಪಿನ ಇತರ ರಾಷ್ಟ್ರಗಳಿಂದ ಹೆಚ್ಚಾಗಿ ಇಲ್ಲಿ ಟೀಕೆಗೊಳಪಡಿಸಲಾಗಿತ್ತು. ಸಮಾಜವಾದೀ ಚಿಂತನೆಗಳು ಪ್ರಥಮವಾಗಿ ಇಲ್ಲೇ ಕಾಣಿಸಿಕೊಂಡಿತು. ಮಾಕ್ರ್ಸ್ ಕೂಡ ಇಲ್ಲೇ ವೈಜ್ಞಾನಿಕ ಸಮಾಜವಾದವನ್ನು ರೂಪಿಸಿಕೊಂಡ.

ಸಿದ್ಧಾಂತವನ್ನು ವಸ್ತುಸ್ಥಿತಿಯೊಂದಿಗೆ ಕೂಡಿಸಲು ಮಾಕ್ರ್ಸ್ ಜರ್ಮನಿಯ ಕೈ ಕಸುಬುದಾರರ ಮತ್ತು ಫ್ರೆಂಚ್ ಕಾರ್ಮಿಕರ ಜೊತೆಗೂಡಿ ಕೆಲಸ ಮಾಡಲು ಉಪಕ್ರಮಿಸಿದ. ಕ್ರಾಂತಿಕಾರಿ ಕಾರ್ಮಿಕರೊಡನೆ ಕೆಲಸಮಾಡಲು ನಿರತನಾದಾಗ ಶ್ರಮಜೀವಿಗಳಲ್ಲಿದ್ದ ನೈತಿಕ ಶಕ್ತಿ ಜ್ಞಾನದಾಹ ಮತ್ತು ಉದಾತ್ತ ಮಾನವೀಯತೆಗಳಿಂದ ಪ್ರಭಾವಿತನಾದ. ಫ್ರೆಡರಿಕ್ ಎಂಗೆಲ್ಸ್‍ನ ಪರಿಚಯವಾದದ್ದು ಇಲ್ಲಿಯೇ. ಇವರಿಬ್ಬರೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲುಗೊಂಡದ್ದರಿಂದ ಇವರನ್ನು ಫ್ರಾನ್ಸ್‍ನಿಂದ ಹೊರದೂಡಲಾಯಿತು. ಇಬ್ಬರೂ ಬ್ರುಸ್ಸೆಲ್ಸ್ ಪಟ್ಟಣಕ್ಕೆ ತೆರಳಿದರು. ಅಲ್ಲಿ ಕಮ್ಯುನಿಸ್ಟ್ ಲೀಗ್ ಎಂಬ ರಹಸ್ಯ ಸಂಸ್ಥೆ ಸೇರಿ ಅದರ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು. ಈ ಸಂಸ್ಥೆಯ ಕೋರಿಕೆಯಂತೆ ಇವರು ಹೊಸ ಜಾಗತಿಕ ಮನೋಧರ್ಮದಿಂದ ಕೂಡಿರುವ ಮತ್ತು ವಿಶ್ವ ಶ್ರಮಜೀವಿಗಳ ಕ್ರಾಂತಿಕಾರಿ ಪಾತ್ರ ನಿರೂಪಿಸುವ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ರಚಿಸಿದರು. ಈ ವೇಳೆಗೆ ಮಾಕ್ರ್ಸ್ ಪೂರ್ಣವಾಗಿ ಭೌತವಾದಿತತ್ತ್ವದ ಅನುಯಾಯಿಯಾಗಿದ್ದ.

ಈ ವೇಳೆಯಲ್ಲಿ ಬ್ರುಸ್ಸೆಲ್ಸ್ ನಗರದಲ್ಲಿದ್ದ ಜರ್ಮನ್ ವಲಸೆಗಾರರನ್ನು ಬೆಲ್ಜಿಯಮ್ಮಿನ ಸರ್ಕಾರ ತೀವ್ರ ಪ್ರತಿಬಂಧಕಗಳಿಗೆ ಒಳಪಡಿಸಿತ್ತು. ಇವನ್ನು ಪ್ರತಿಭಟಿಸಲು ಜರ್ಮನ್ ಕ್ರಾಂತಿಕಾರರು ಸಿದ್ಧರಾದರು. 1848 ರ ಫೆಬ್ರುವರಿ ಕ್ರಾಂತಿ ಆರಂಭವಾದಾಗ ಮಾಕ್ರ್ಸ್‍ನನ್ನು ಬೆಲ್ಜಿಯಮ್ಮಿನಿಂದ ಹೊರದೂಡಲಾಯಿತು. ಮುಂದೆ ಈತ ಕೊಲೋನ್ ಪಟ್ಟಣ ಸೇರಿ `ಹೊಸ ರೈನ್ ಪತ್ರಿಕೆ ಯ ಸಂಪಾದಕನಾದ. ಈ ಪತ್ರಿಕೆಯ ಮೂಲಕ ಈತ ಕ್ರಾಂತಿಕಾರಿ ಚಟುವಟಿಕೆಗಳಿಗೆ ಇತ್ತ ಬೆಂಬಲದ ಕಾರಣವಾಗಿ ಇವನನ್ನು ಜರ್ಮನಿಯಿಂದಲೂ ಗಡಿಪಾರು ಮಾಡಲಾಯಿತು. ಮತ್ತೆ ಪ್ಯಾರಿಸ್ಸಿಗೆ ತೆರಳಿದ. ಅಲ್ಲಿಯೂ ಅಂದಿನ ಸರ್ಕಾರ ಇವನನ್ನು ಉಳಿಯ ಬಿಡಲಿಲ್ಲ. ದೇಶಭ್ರಷ್ಟ ಮಾಕ್ರ್ಸ್ ಮುಂದೆ ಲಂಡನ್ ತಲುಪಿ ಜೀವನದ ಕೊನೆಯ ತನಕವೂ ಅಲ್ಲಿಯೇ ಇದ್ದ. ರಾಜಕೀಯ ದೇಶಭ್ರಷ್ಟ ಮಾಕ್ರ್ಸನ ಜೀವನ ಅಸಂಖ್ಯ ಸಂಕಷ್ಟಗಳಿಂದ ಕೂಡಿದ್ದಿತು ಮತ್ತು ಎಂಗೆಲ್ಸ್‍ನ ನೆರವಿನಿಂದ ಲಂಡನ್ನಿನಲ್ಲಿ ತನ್ನ ಬದುಕು ಸಾಗಿಸಿದ. ಇಲ್ಲಿಯೇ ಈತನ ಮೇರುಕೃತಿಯಾದ 'ಬಂಡವಾಳ (ದಾಸ್ ಕ್ಯಾಪಿಟಲ್) ರಚನೆ ಆದದ್ದು.

1860 ಮತ್ತು 1870 ರ ನಡುವೆ ನಡೆಯುತ್ತಿದ್ದ ಪ್ರಜಾಸತ್ತಾತ್ಮಕ ಚಟುವಟಿಕೆಗಳಲ್ಲಿ ಮಾಕ್ರ್ಸ ನವಚೈತನ್ಯದಿಂದ ಪಾಲುಗೊಂಡ. 1864ರಲ್ಲಿ ಸ್ಥಾಪಿತವಾದ ಪ್ರಥಮ ಇಂಟರ್‍ನ್ಯಾಷನಲ್‍ನಲ್ಲಿ ಕಾರ್ಮಿಕ ವರ್ಗದ ಮುನ್ನಡೆಗೆ ಶ್ರಮವಹಿಸಿ ಉತ್ಸಾಹದಿಂದ ದುಡಿದ. ಈ ಸಂಸ್ಥೆಯಲ್ಲಿ ವಹಿಸಿದ ಶ್ರಮದ ಕಾರಣವಾಗಿ ಆರೋಗ್ಯ ಹದಗೆಟ್ಟಿತು. ಇಂಥ ದುರ್ಭರ ಪರಿಸ್ಥಿತಿಯಲ್ಲೂ ಈತ `ಬಂಡವಾಳದ ರಚನೆಯನ್ನು ಮುಂದುವರಿಸಿದ. ಆದರೆ ಈತನನ್ನು ತೀವ್ರವಾಗಿ ಬಾಧಿಸುತ್ತಿದ್ದ ಅನಾರೋಗ್ಯ ಈ ಕೃತಿಯ ಮೊದಲ ಸಂಪುಟದ ವಿನಾ ಇತರ ಎರಡು ಸಂಪುಟಗಳನ್ನು ಪೂರೈಸಲು ಅವಕಾಶ ಕೊಡಲಿಲ್ಲ. ಮಾಕ್ರ್ಸ್ 1883 ಮಾರ್ಚ್ 14 ರಂದು ಲಂಡನ್ನಿನಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದಂತೆಯೇ ತನ್ನ ಕೊನೆಯುಸಿರೆಳೆದ.


ಮಾರ್ಕ್ಸ್‌ನ ಕೃತಿಗಳು

[ಬದಲಾಯಿಸಿ]

ಮಾಕ್ರ್ಸ್‍ನ ಬರವಣಿಗೆ ಅಗಾಧವಾದುದು. ಜಗತ್ಪ್ರಸಿದ್ಧವಾದ `ಕಮ್ಯೂನಿಸ್ಟ್ ಪ್ರಣಾಳಿಕೆ (ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ) ಮತ್ತು ಅವನ ಮೇರುಕೃತಿಯಾದ `ಬಂಡವಾಳ(ಕ್ಯಾಪಿಟಲ್) ಇವೆರಡರ ಪರಿಚಯವನ್ನು ಮಾತ್ರ ಇಲ್ಲಿ ತಿಳಿಸಲಾಗುತ್ತದೆ.

ಕಮ್ಯೂನಿಸ್ಟ್ ಪ್ರಣಾಳಿಕೆ ಚಿಕ್ಕ ಕೃತಿಯಾದರೂ ಜಗತ್ತಿನ ಮೇಲೆ ಮಹತ್ತರವಾದ ಪ್ರಭಾವ ಬೀರಿರುವ ಕೃತಿ. ಇದು ಒಬ್ಬ ಪ್ರತಿಭಾವಂತ ವ್ಯಕ್ತಿಯ ರಚನೆಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಬಹುಶಃ ರೂಸೋವಿನ ಸೋಪಿಯಲ್ ಕಾಂಟ್ರಾಕ್ಟ್ ಬಿಟ್ಟರೆ ಇದರ ಜೊತೆ ವಾದದಲ್ಲಾಗಲೀ ವಾಗ್ವೈಖರಿಯಲ್ಲಾಗಲೀ ಸರಿದೂಗುವ ಕೃತಿ ಬೇರೊಂದಿಲ್ಲ. ಈ ಕೃತಿ ಹೊರಬೀಳುವ ಮುನ್ನ ಸಮಾಜವಾದದ ಪರಿಕಲ್ಪನೆ ಅಸ್ಪಷ್ಟವಾಗಿತ್ತು. ಭಾವನಾವಾದಿಗಳು ಸಮಾಜವಾದವನ್ನು ಸೈದ್ಧಾಂತಿಕವಾಗಿ ಸ್ಪಷ್ಟಪಡಿಸಲು ಅಸಮರ್ಥರಾಗಿದ್ದರು. ಕಮ್ಯೂನಿಸ್ಟ್ ಪ್ರಣಾಳಿಕೆ ಮೊತ್ತಮೊದಲ ಬಾರಿಗೆ ಸಮಾಜವಾದವನ್ನು ಸ್ಪಷ್ಟವಾಗಿಯೂ, ಸೈದ್ಧಾಂತಿಕವಾಗಿಯೂ ಶ್ರಮಜೀವಿಗಳ ಮುಂದಿಟ್ಟಿತು.

ಅದರ ವಾಗ್‌ವೈಖರಿಯನ್ನೂ ವಾದಸಾಮಥ್ರ್ಯವನ್ನೂ ದುರ್ಬಲಗೊಳಿಸದೇ ಅದನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಕೇವಲ 40 ಪುಟಗಳಲ್ಲಿ ಅಗಾಧವಾದ ವಿಷಯಗಳನ್ನು ಅದರಲ್ಲಿ ತಿಳಿಯಾಗಿ ನಿರೂಪಿಸಲಾಗಿದೆ. ಆದರೂ ಅದರ ಪ್ರಧಾನ ವಿಷಯವನ್ನು ತಿಳಿಸುವುದು ಅಗತ್ಯ. ಮಾಕ್ರ್ಸ್‍ನ ಹಿಂದಿನ ಸಮಾಜವಾದಿ ತತ್ವಗಳೆಲ್ಲ ನಶಿಸಿಹೋಗಿವೆ. ಮಾಕ್ರ್ಸ್‍ವಾದಿ ಸಮಾಜವಾದವನ್ನು ಬಿಟ್ಟರೆ ಬೇರೆ ಯಾವ ಸಮಾಜವಾದಿ ಆಲೋಚನೆಗಳೂ ಇಂದು ಪ್ರಚಲಿತವಾಗಿಲ್ಲ. ಬೇರೆ ಯಾವ ವಿಧವಾದ ಸಮಾಜವಾದವೂ ಇದರಷ್ಟು ವಿಸ್ತಾರವಾಗಿ ಹರಡಿಯೂ ಇಲ್ಲ. ಇದೊಂದೇ ಜಗತ್ತನ್ನೆಲ್ಲ ಆವರಿಸಿರುವ ಸಮಾಜವಾದಿ ಕಾರ್ಯ ಪರಂಪರೆ.

ಬೂರ್ಷ್ವಾಗಳು ಮತ್ತು ಶ್ರಮಜೀವಿಗಳು

[ಬದಲಾಯಿಸಿ]

ಕಮ್ಯೂನಿಸ್ಟ್ ಪ್ರಣಾಳಿಕೆಯ `ಬೂಷ್ರ್ವಾಗಳು ಮತ್ತು ಶ್ರಮಜೀವಿಗಳು ಎನ್ನುವ ಮೊದಲ ಭಾಗ ಅದರ ತಿರುಳು (ಬಂಡವಾಳ ಸಮಾಜದ ಪ್ರಬಲ ವರ್ಗವೇ ಬೂಷ್ರ್ವಾಸಿ. ಉತ್ಪಾದನಾ ಬಲಗಳಾದ ಭೂಮಿ, ಖನಿಜ ಸಂಪತ್ತು, ಸಾರಿಗೆ ಸಂಪರ್ಕ ಮುಂತಾದವೆಲ್ಲವೂ ಇದರ ವಶದಲ್ಲಿರುತ್ತವೆ. ಶ್ರಮ ಜೀವಿ ವರ್ಗವನ್ನು ಶೋಷಿಸಿ ಪಡೆದ ಲಾಭದಿಂದ ಇದು ಜೀವಿಸುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಇದು ಪ್ರಗತಿ ವಿರೋಧಿ ನೀತಿಗಳಿಗೆಲ್ಲ ಬೆಂಬಲ ನೀಡುವುದಲ್ಲದೇ ಸಾಮ್ರಾಜ್ಯಶಾಹಿ ವಿರುದ್ಧ ನೀತಿಗಳನ್ನು ಪ್ರಗತಿಪರ ಸಾಮಾಜಿಕ ಬದಲಾವಣೆಗಳನ್ನೂ ವಿರೋಧಿಸುತ್ತದೆ). ಊಳಿಗ ಮಾನ್ಯ ಪದ್ಧತಿಯನ್ನು ನಿರ್ಮೂಲ ಮಾಡಿದ ಬಳಿಕ ಬಂಡವಾಳ ಸಮಾಜ ಹೇಗೆ ಉತ್ಪನ್ನವಾಯಿತು ಮತ್ತು ಅದು ಬೂಷ್ರ್ವಾಗಳನ್ನು ಆಳುವ ವರ್ಗವಾಗಿ ಪ್ರತಿಷ್ಠಾಪಿಸಿ ಮಾನವನ ಉತ್ಪಾದನಾ ಶಕ್ತಿಯನ್ನು ಹಿಂದೆದೂ ಕಾಣದಷ್ಟು ಎತ್ತರಕ್ಕೆ ಯಾವ ರೀತಿ ಬೆಳೆಸಿತು ಎಂಬುದನ್ನು ಈ ಭಾಗ ತಿಳಿಸುತ್ತದೆ. ಬಂಡವಾಳ ಸಮಾಜದ ಸಾಧನೆಗಳನ್ನು ಸ್ಪಷ್ಟವಾಗಿ ತೋರ್ಪಡಿಸಿ ಅದು ಹಿಂದಿನ ಯಾವ ತಲೆಮಾರಿನಲ್ಲೂ ನಿರ್ಮಿಸದಷ್ಟು ಉತ್ಪಾದನಾ ಶಕ್ತಿಗಳನ್ನು ಉಂಟುಮಾಡಿದೆ: ಅದೇ ಕಾಲದಲ್ಲಿ ಅದು ತನ್ನ ಹಿಂದಿನ ಸಮಾಜದ ವ್ಯವಸ್ಥೆಯನ್ನು ಬದಲಾಯಿಸಿ ಕೈಗಾರಿಕಾ -ಸಾಮಾಜಿಕ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಬೇಕಾದ ಕೂಲಿ, ಶ್ರಮ, ಆಸ್ತಿ ಮತ್ತು ಇದಕ್ಕೆ ಅನುಗುಣವಾದ ಆರ್ಥಿಕ ನಿಯಮಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನೂ ನಿರ್ಮಿಸಿದೆ.

ಇವು ಬಂಡವಾಳ ಸಮಾಜದ ಸಾಧನೆಗಳು. ಆದರೆ ಅದು ತನ್ನ ಎಲ್ಲ ಸಾಧನೆಗಳ ಬಗೆಗೆ ಹೆಮ್ಮೆ ಪಟ್ಟುಕೊಂಡರೂ ಬಡತನದ ನಿರ್ಮೂಲನ ಮಾತ್ರ ಅದಕ್ಕೆ ಸಾಧ್ಯವಾಗಲಿಲ್ಲ. ಅದು ಬೆಳೆದಂತೆ ಉತ್ಪಾದನೆಯಲ್ಲಿ ಅನಾಯಕತ್ವವನ್ನು ರೂಢಿಸಿ ಸಮಾಜ ಪದೇ-ಪದೇ ಆರ್ಥಿಕ ಮುಗ್ಗಟ್ಟು ಅನುಭವಿಸುವಂತೆ ಮಾಡಿತು. ಶೋಷಣೆಯನ್ನು ನಿರ್ಮೂಲಿಸಲಿಲ್ಲ. ಶ್ರಮಜೀವಿ ತನಗೆ ಕೊಡುವ ಕೂಲಿ ಸಾಲದೆಂದು ಒಪ್ಪದಿರಲು `ಸ್ವತಂತ್ರನಾದರೂ ಅವನ ಶೋಷಣೆ ಮಾರ್ಮಿಕವಾಗಿ ಮುಂದುವರೆಯಿತು. ಒಂದು ಕಡೆ ಅಗಾಧ ಉತ್ಪಾದನಾ ಶಕ್ತಿಯನ್ನು ನಿರ್ಮಿಸಿತು. ಮತ್ತೊಂದು ಕಡೆ ಅದು ಶೋಷಣೆಗೆ ಗುರಿಯಾದ ಶ್ರಮಜೀವಿಗಳ ಬಡತನದ ಕಾರಣ ಈ ಉತ್ಪಾದನೆಯನ್ನು ಬಳಸಲು ಬೇಕಾದ ಶಕ್ತಿಯನ್ನು ಅವರಲ್ಲಿ ಕಡಿಮೆ ಮಾಡಿತು. ಈ ವಿರೋಧವೇ ಬಂಡವಾಳ ಸಮಾಜದಲ್ಲಿ ಆರ್ಥಿಕ ಮುಗ್ಗಟ್ಟು ಪದೇ ಪದೇ ತಲೆದೋರಲು ಮುಖ್ಯ ಕಾರಣ. ಆದ್ದರಿಂದ ಬೂಷ್ರ್ವಾಸಿ ತಾನು ನಿರ್ಮಿಸಿದ ಉತ್ಪಾದನಾ ಶಕ್ತಿಗಳು `ತನಗೇ ಸಾವು ತರುವಂಥ ಆಯುಧಗಳನ್ನು ನಿರ್ಮಿಸಿತು.

ಬಂಡವಾಳ ಸಮಾಜಕ್ಕೆ ಭಿನ್ನವಾಗಿ ಉದಾತ್ತ ಧ್ಯೇಯಗಳಿಂದ ಕೂಡಿದ ಬೇರೊಂದು ಸಮಾಜದ ಚಿತ್ರವನ್ನು ಪ್ರಣಾಲಿಕೆಯು ಶ್ರಮಜೀವಿಗಳ ಮುಂದಿಡಲಿಲ್ಲ. ಈ ಸಮಾಜ ಪ್ರಗತಿಪರ ಶಕ್ತಿಗಳ ಕ್ರಿಯಾತ್ಮಕ ಚಟುವಟಿಕೆಗಳಿಂದ ಯಾವ ರೀತಿ ನಶಿಸಿ ಹೋಗುತ್ತದೆ ಎಂಬುದನ್ನು ಮಾತ್ರ ತಿಳಿಸುತ್ತದೆ. ತಾನು ಹೊಂದಿರುವ ಉತ್ಪಾದನಾ ಶಕ್ತಿಗಳನ್ನು ಉಪಯೋಗಿಸಿ ತಯಾರು ಮಾಡಿದ ಸರಕನ್ನು ಅದಕ್ಕೆ ಲಾಭದಾಯಕವಾಗಿ ಹಂಚಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಉತ್ಪಾದನಾ ಶಕ್ತಿಗಳ ಖಾಸಗಿ ಒಡೆತನ. ಬಂಡವಾಳ ಸಮಾಜ ಉಂಟುಮಾಡಿರುವ ಉತ್ಪಾದನಾ ಶಕ್ತಿಗಳು ಪೂರ್ಣವಾಗಿ ಉಪಯೋಗವಾಗಬೇಕಾದರೆ ಆ ಸಮಾಜವನ್ನು ಪುನಾರಚಿಸದೆ ಸಾಧ್ಯವಿಲ್ಲ. ಅದು ಹಳತಾಗಿ ಹೋಗಿರುವುದರಿಂದ ಅದರ ಪುನಾರಚನೆ ಅನಿವಾರ್ಯ. ಬಂಡವಾಳ ಸಮಾಜ ಸೃಷ್ಟಿಸಿರುವ ಉತ್ಪಾದನಾ ಶಕ್ತಿಗಳು ಸಮೃದ್ಧಿಯಿಂದ ಕೂಡಿದ ಸಮಾಜವನ್ನು ನಿರ್ಮಿಸಬಲ್ಲವೆಂದು ಜನರ ಮನಸ್ಸಿನಲ್ಲಿ ಹುಟ್ಟಿಸಿದ ಆಸೆ-ಆಕಾಂಕ್ಷೆಗಳು ಸಿದ್ಧಿಸಬೇಕಾದರೆ ಬಂಡವಾಳ ಸಮಾಜವನ್ನು ಮೀರಿದ ಸಮಾಜ ಸೃಷ್ಟಿಯಾಗಲೇಬೇಕು.

ಮಾಕ್ರ್ಸ್ ಅಂದಿನ ಪರಿಸ್ಥಿತಿಯನ್ನು ಐತಿಹಾಸಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಗಣಿಸುತ್ತಾನೆ. ಇದು ಬಂಡವಾಳ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟನ್ನು ಬಯಲುಮಾಡುತ್ತದೆ. ಇತಿಹಾಸದ ಬೆಳವಣಿಗೆಯಲ್ಲಿ ಒಂದಾದ ಮೇಲೊಂದು ಉತ್ಪಾದನಾ ಪದ್ಧತಿಗಳು ಆಚರಣೆಗೆ ಬಂದುದು ಕಂಡುಬರುತ್ತದೆ. ಪ್ರತಿಯೊಂದು ಬದಲಾವಣೆಯೂ ಹೊಸ ಆರ್ಥಿಕ ಜೀವನ ಕ್ರಮವನ್ನುಂಟುಮಾಡುತ್ತದೆ. ಇದು ಹೊಸದಾಗಿ ಹುಟ್ಟಿಕೊಂಡ ಆರ್ಥಿಕ ವರ್ಗದ ಅಧೀನವಾಗಿರುತ್ತದೆ ಮತ್ತು ಇದರಿಂದ ಹೊಸ ರೀತಿಯ ಆರ್ಥಿಕ ಸಂಬಂಧಗಳು ಉತ್ಪನ್ನವಾಗುತ್ತವೆ. ಬಂಡವಾಳ ಸಮಾಜದ ಉತ್ಪಾದನಾ ರೀತಿಗೆ ಅನುಸಾರವಾದ ಉತ್ಪಾದನಾ ಶಕ್ತಿಗಳನ್ನು ಹೊಂದದ ಶ್ರಮಜೀವಿಗಳು ತಮ್ಮ ಶ್ರಮವನ್ನು ಸರಕಾಗಿಸಿ ಮಾರಿಕೊಂಡು ಜೀವನ ಹೊರೆಯಬೇಕು. ಪ್ರತಿಯೊಂದು ಸಾಮಾಜಿಕ ಪದ್ಧತಿಯ ಬದಲಾವಣೆಯೂ ಅಂದಿನ ಆಳುವ ವರ್ಗಕ್ಕೂ ಹೊಸತಾಗಿ ಹುಟ್ಟಿಕೊಂಡ ವರ್ಗಕ್ಕೂ ನಡುವೆ ತಲೆದೋರುವ ಘರ್ಷಣೆಯಿಂದ ಉಂಟಾಗುತ್ತದೆ. ಬಂಡವಾಳ ಸಮಾಜದ ಉತ್ಪಾದನಾ ಸಂಬಂಧಗಳು ಅದರ ಉತ್ಪಾದನೆ ಮುನ್ನಡೆಯಲು ಪ್ರತಿಬಂಧಕಗಳಾಗುತ್ತವೆ. ಬಂಡವಾಳ ಸಮಾಜವನ್ನೂ ಮೀರಿದ ಸಮಾಜ ರಚನೆಯ ಹೊಣೆಯನ್ನು ಬೂಷ್ರ್ವಾಸಿಗೆ ಬಿಟ್ಟರೆ ಅದು ಎಂದೂ ಕಾರ್ಯಗತವಾಗುವುದಿಲ್ಲ. ಏಕೆಂದರೆ ಇದು ಬಂಡವಾಳಗಾರನ ಆಶೋತ್ತರಗಳಿಗೆ ವಿರುದ್ಧವಾಗಿದೆ.

ಸಮಾಜವಾದಿ ಸಮಾಜವನ್ನು ರಚಿಸಲು ಇತಿಹಾಸದಿಂದಲೇ ಪ್ರೇರಣೆ ಪಡೆದಿರುವ ವರ್ಗ ಬಂಡವಾಳ ಸಮಾಜ ಪದ್ಧತಿಯಲ್ಲೇ ಉದ್ಭವವಾಗುತ್ತದೆ. ಬಂಡವಾಳ ಪದ್ಧತಿ ಬೆಳೆದಂತೆ ಶ್ರಮಜೀವಿಗಳ ವರ್ಗವೂ ಬೆಳೆಯಬೇಕು. ಶ್ರಮಜೀವಿಗಳ ಜೀವನ ಪರಿಸ್ಥಿತಿ ಅವರನ್ನು ಒಂದುಗೂಡಿಸಿ ತಮ್ಮ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರೇರೇಪಿಸುತ್ತದೆ. ಇದು ಅದರ ಐತಿಹಾಸಿಕ ಕರ್ತವ್ಯ.

ಶ್ರಮಜೀವಿಗಳು ಮತ್ತು ಕಮ್ಯೂನಿಸ್ಟರು ಎಂಬ ಎರಡನೆಯ ಅಧ್ಯಾಯದಲ್ಲಿ ಕಮ್ಯೂನಿಸ್ಟ್ ಪಕ್ಷ ಶ್ರಮ ಜೀವಿಗಳ ಹೋರಾಟದ ಮುಂಚೂಣಿಯಲ್ಲಿರುತ್ತದೆ ಎಂಬುದನ್ನು ತಿಳಿಸುವುದರ ಮೂಲಕ ಅದರ ಐತಿಹಾಸಿಕ ಪಾತ್ರವನ್ನು ಎತ್ತಿ ತೋರಿಸಲಾಗಿದೆ. ಕಮ್ಯೂನಿಸ್ಟರ ಮುಖ್ಯಗುರಿ ಶ್ರಮಜೀವಿಗಳನ್ನು ಒಂದು ವರ್ಗವಾಗಿ ಒಂದುಗೂಡಿಸಿ ಬಂಡವಾಳಗಾರರಿಂದ ರಾಜಕೀಯ ಶಕ್ತಿಯನ್ನು ಕಿತ್ತುಕೊಳ್ಳುವುದು. ಈ ಅಧ್ಯಾಯದಲ್ಲಿ ಮಾಕ್ರ್ಸ್ `ಶ್ರಮಜೀವಿಗಳ ಸರ್ವಾಧಿಕಾರ ಎಂಬ ಭಾವನೆಯನ್ನು ಜನತೆಯ ಮುಂದಿಡುತ್ತಾರೆ. ಕಮ್ಯೂನಿಸ್ಟರು ಕುಟುಂಬ, ಆಸ್ತಿ, ಮಾತೃಭೂಮಿ ಮುಂತಾದವುಗಳೊಡನೆ ಯಾವ ರೀತಿಯ ಸಂಬಂಧವನ್ನು ಹೊಂದಿರಬೇಕು ಅವರು ಆಳುವ ಶಕ್ತಿ ಪಡೆದ ಬಳಿಕ ಯಾವ ರೀತಿಯ ಆರ್ಥಿಕ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂಬುದರ ಸ್ಥೂಲ ವಿವರಣೆಯನ್ನು ಈ ಅಧ್ಯಾಯದಲ್ಲಿ ಕೊಡಲಾಗಿದೆ.

`ಸಮಾಜವಾದಿ ಮತ್ತು ಸಮತಾವಾದಿ ಸಾಹಿತ್ಯ ಎನ್ನುವ ಮೂರನೆಯ ಅಧ್ಯಾಯದಲ್ಲಿ ಸಮಾಜವಾದಿಗಳೆಂದು ಹೇಳಿಕೊಳ್ಳುವ ಬೂಷ್ರ್ವಾ ಮತ್ತು ಪೆಟ್ಟಿ ಬೂಷ್ರ್ವಾ ವರ್ಗಗಳ ಪ್ರವೃತ್ತಿಯನ್ನು ಟೀಕಿಸಿ ಕಾಲ್ಪನಿಕ ಸಮಾಜವಾದ ಮತ್ತು ಸಮತಾವಾದದ ಬಗೆಗೆ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾನೆ. ಪ್ರಚಲಿತ ವಿರೋಧ ಪಕ್ಷಗಳಿಗೂ ಕಮ್ಯುನಿಸ್ಟರಿಗೂ ನಡುವಣ ಸಂಬಂಧವನ್ನು ನಾಲ್ಕನೆಯ ಅಧ್ಯಾಯದಲ್ಲಿ -

`ಅಸ್ತಿತ್ವದಲ್ಲಿರುವ ನಾನಾ ವಿರೋಧ ಪಕ್ಷಗಳಿಗೆ ಸಂಬಂಧಿಸಿ ಕಮ್ಯೂನಿಸ್ಟರ ನಿಲುವು ವಿಶದೀಕರಿಸಿದೆ. ಕಮ್ಯೂನಿಸ್ಟರು ಕೈಗೊಳ್ಳಬೇಕಾದ ಕಾರ್ಯ ಸಾಧನೋಪಾಯವನ್ನು ಇದರಲ್ಲಿ ತಿಳಿಸಲಾಗಿದೆ. ಕಮ್ಯೂನಿಸ್ಟ್ ಪ್ರಣಾಳಿಕೆ `ಎಲ್ಲಾ ದೇಶದ ಕಾರ್ಮಿಕರೇ ಒಂದುಗೂಡಿ ಎನ್ನುವ ಬೀಜಮಂತ್ರದೊಡನೆ ಮುಕ್ತಾಯಗೊಳ್ಳುತ್ತದೆ. ಇದರ ಐತಿಹಾಸಿಕ ಮಹತ್ವವನ್ನು ಲೆನಿನ್ ಈ ರೀತಿ ಹೇಳಿದ್ದಾನೆ. "ಈ ಕಿರು ಹೊತ್ತಿಗೆ ಅನೇಕ ಸಂಪುಟಗಳನ್ನೊಳಗೊಂಡ ಗ್ರಂಥಕ್ಕೆ ಸಮಾನವಾದುದು. ಇಂದು ಕೂಡಾ ಇದರ ನುಡಿಗಳು ಶ್ರಮಜೀವಿಗಳ ಹೋರಾಟಕ್ಕೆ ದಾರೀದೀಪ." ಜೋಸೆಫ್ ಎ. ಷುಂಪೀಟರ್ ಇದನ್ನು `ಇಂದಿಗೂ ಇದು ಒಬ್ಬ ವ್ಯಕ್ತಿ ಸಮಾಜ ಶಾಸ್ತ್ರದಲ್ಲಿ ಸಾಧಿಸಿದ ಅತ್ಯದ್ಭುತ ಸಾಧನೆ ಎಂದು ಹೇಳಿದ್ದಾನೆ. ವೈಜ್ಞಾನಿಕ ಸಮಾಜವಾದದ ಕಾರ್ಯಕ್ರಮವನ್ನು ವಿಶದೀಕರಿಸುವ ಮೊದಲ ಕೃತಿಯಾದ ಕಮ್ಯೂನಿಸ್ಟ್ ಪ್ರಣಾಳಿಕೆ ಮಾಕ್ರ್ಸ್‍ವಾದದ ತಾತ್ವಿಕ ಸಿದ್ಧಾಂತವಾದ ದ್ವಂದ್ವಹೇತುಕ ಭೌತವಾದವನ್ನೂ ಐತಿಹಾಸಿಕ ಭೌತವಾದವನ್ನೂ ಒಳಗೊಂಡಿದೆ.

ಮಾರ್ಕ್ಸ್‌ನ 'ದಾಸ್ ಕೆಪಿಟಲ್'

[ಬದಲಾಯಿಸಿ]

ಮಾರ್ಕ್ಸ್‌ನ `ದಾಸ್ ಕೆಪಿಟಲ್; (`ಬಂಡವಾಳ) ಅನ್ನು ಮಾಕ್ರ್ಸ್ ಅರ್ಥಶಾಸ್ತ್ರದ ಪ್ರಕರಣ ಗ್ರಂಥವೆಂದು ಬರೆಯಲಿಲ್ಲ. ಅದು ಅಂದಿನ ಎಲ್ಲಾ ಆರ್ಥಿಕ ಪದ್ಧತಿಗಳ ವಿಮರ್ಶೆ. ಪ್ರತಿಯೊಂದು ಆರ್ಥಿಕ ಪದ್ಧತಿಯೂ ಒಪ್ಪುವ ತತ್ವವನ್ನು ತಿಳಿಸುವುದಕ್ಕಾಗಲೀ ಬಂಡವಾಳ ಪದ್ಧತಿಯ ಕಾರ್ಯವಿಧಾನ ನಿಯಮಗಳನ್ನು ವಿವರಿಸುವುದಕ್ಕಾಗಲೀ ಇದರಲ್ಲಿ ಪ್ರಯತ್ನಿಸಲಿಲ್ಲ. ಬಂಡವಾಳ ಪದ್ಧತಿಯಲ್ಲಿ ಅಡಗಿರುವ ವೈರುಧ್ಯಗಳೇ ಆ ಪದ್ಧತಿಯನ್ನು ನಿರ್ಮೂಲ ಮಾಡಿ ಸಮಾಜವಾದ ಮುಂದೆ ಬರಲು ಹೇಗೆ ಕಾರಣವಾಗುತ್ತವೆ ಎಂಬುದನ್ನು ತಿಳಿಸುವುದೇ ಬಂಡವಾಳದ ಮುಖ್ಯ ಉದ್ದೇಶ. ಮುಖ್ಯವಾಗಿ ಇದು ಮಾನವ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದರ ಬೆಳವಣಿಗೆಯ ನಿಯಮಗಳನ್ನು ವಿಶದಪಡಿಸಲು ರಚಿಸಿದ ಗ್ರಂಥ. ಇದರಲ್ಲಿ ಪರಿಶೀಲಿಸಲಾಗಿರುವ ವಿಷಯ ಆರ್ಥಿಕ ಪ್ರಕರಣ ಗ್ರಂಥಕ್ಕೂ ಹೆಚ್ಚು ವ್ಯಾಪಕವಾದುದು. ಇದು ಇತಿಹಾಸವನ್ನು ಅರ್ಥಶಾಸ್ತ್ರ ದೃಷ್ಟಿಯಿಂದಲೂ ಅರ್ಥಶಾಸ್ತ್ರವನ್ನು ಇತಿಹಾಸದ ದೃಷ್ಟಿಯಿಂದಲೂ ವಿವೇಚಿಸುತ್ತದೆ. ಬಂಡವಾಳ ಪದ್ಧತಿಯ ಉತ್ಪಾದನಾ ವ್ಯವಸ್ಥೆಯನ್ನು ವಿವೇಚಿಸುವಾಗ ಈ ಕೃತಿ ಸಮಾಜವಾದ ಪದ್ಧತಿಯನ್ನು ನಿರ್ಮಾಣ ಮಾಡಲು ಬೇಕಾದ ವೈಜ್ಞಾನಿಕ ಆಧಾರವನ್ನೂ ಹೊರಗೆಡಹುತ್ತದೆ. ಇದು ರಾಜಕೀಯ ಅರ್ಥಶಾಸ್ತ್ರದ ಸಂಪ್ರದಾಯಗಳು ಒಂದಾದ ಮೇಲೆ ಮತ್ತೊಂದು ಒಂದು ಅರ್ಥಶಾಸ್ತ್ರದ ನಿರ್ದಿಷ್ಟ ಪ್ರಶ್ನೆಗಳನ್ನು ಹೇಗೆ ಉತ್ತರಿಸುತ್ತವೆ ಎಂಬುದರ ಅನ್ವೇಷಣೆ. ಅಂದಂದಿನ ಐತಿಹಾಸಿಕ ಮತ್ತು ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಕಾಲದಿಂದ ಕಾಲಕ್ಕೆ ಈ ಪ್ರಶ್ನೆಗಳು ಸಹ ಬೇರೆ-ಬೇರೆ ರೂಪ ತಾಳುತ್ತವೆ. ಇದು ಕೇವಲ ಇತಿಹಾಸಕ್ಕೆ ಸಂಬಂಧಪಟ್ಟ ವಿಷಯ. ಇದನ್ನು ಐತಿಹಾಸಿಕ ವಿಧಾನಗಳಿಂದಲೇ ನಿರ್ಧರಿಸಬೇಕು. ಏಕೆಂದರೆ ಈ ಸಮಸ್ಯೆಗಳೂ ಇವನ್ನು ಪರಿಹರಿಸುವ ಬಗೆಯೂ ಆಯಾಕಾಲದ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿರುತ್ತದೆ.

ಪ್ರತಿಯೊಂದು ಕಾಲದಲ್ಲೂ ಅಂದಂದು ಉದ್ಭವಿಸಿದ ಹೊಸವರ್ಗಗಳೇ ಈ ಪ್ರಶ್ನೆಗಳನ್ನು ಎತ್ತಿವೆ. ಮರ್ಕೆಂಟಲಿಸ್ಟರು ಅಂದರೆ ವ್ಯಾಪಾರ ಪ್ರವೃತ್ತಿ ಉಳ್ಳವರು ವಿದೇಶೀ ವ್ಯಾಪಾರ ಬೆಳೆದಾಗ ಮುಂದೆ ಬಂದರು. ಅವರು ತಮ್ಮ ಪರಿಸ್ಥಿತಿಗೆ ಅನುಗುಣವಾದ ಪ್ರಶ್ನೆಗಳನ್ನು ಎತ್ತಿದರು. ಫಿಸಿಯೋಕ್ರಾಟರು ಅಂದರೆ ಪ್ರಕೃತಿಸಂಪತ್ತೇ ಆರ್ಥಿಕ ವ್ಯವಸ್ಥೆಗೆ ಆಧಾರವಾಗಿರಬೇಕು ಎನ್ನುವವರು ಬಂಡವಾಳಶಾಹಿ ವ್ಯವಸಾಯ ಪದ್ಧತಿ ಬೆಳೆದಾಗ ಮುಂದೆ ಬಂದರು. ಇವರು ತಮ್ಮ ಪ್ರಶ್ನೆಗಳನ್ನೂ ಇವಕ್ಕೆ ಉತ್ತರಗಳನ್ನೂ ಅಂದಿನ ವ್ಯವಸಾಯದ ಪರಿಸ್ಥಿತಿಗೆ ಅನುಗುಣವಾಗಿ ರೂಪಿಸಿದರು.

`ಬಂಡವಾಳವನ್ನು ಶ್ರಮಧಾರಿತ ಮೌಲ್ಯವನ್ನು ಪ್ರಕಟಪಡಿಸುವುದಕ್ಕಾಗಲೀ ಲಾಭದ ದರ ಸದಾ ಕಡಿಮೆಯಾಗುತ್ತ ಹೋಗಿ ವ್ಯಕ್ತಿಗಳ ಸಂಕಷ್ಟಗಳು ಏರುತ್ತ ಹೋಗುತ್ತವೆ ಎಂದು ಹೇಳುವುದಕ್ಕಾಗಲೀ ರಚಿಸಲಿಲ್ಲ. ಮಾಕ್ರ್ಸ್ ಅಗಾಧವಾಗಿ ಸಂಗ್ರಹಿಸಿದ ವಿಷಯಗಳನ್ನು ಕ್ರೋಡೀಕರಿಸಿ `ಬಂಡವಾಳವನ್ನು 40 ವರ್ಷಗಳ ದೀರ್ಘಾವಧಿಯಲ್ಲಿ ರಚಿಸತೊಡಗಿದ. ಆದರೆ ತನ್ನ ಜೀವಿತ ಕಾಲದಲ್ಲಿ ಅದರ ಮೊದಲ ಸಂಪುಟವನ್ನು ಮಾತ್ರ ಪೂರ್ಣಗೊಳಿಸಲು ಅವನಿಂದ ಸಾಧ್ಯವಾಯಿತು.

ಮಾಕ್ರ್ಸ್ ತಯಾರಿಸಿದ ಕರಡು ಪ್ರತಿಗಳ ಸಮೂಹದಲ್ಲಿ 1865 ರಲ್ಲೆ ಅವನು ಬರೆದಿದ್ದ `ಬಂಡವಾಳದ 3ನೆಯ ಸಂಪುಟದ ಕರಡು ಸಿಕ್ಕಿತು. `ಬಂಡವಾಳದ ಮೊದಲನೇಯ ಸಂಪುಟ ಪ್ರಕಟವಾಗುವುದಕ್ಕೆ ಮುಂಚೆಯೇ ಇದನ್ನು ರಚಿಸಲಾಗಿತ್ತು ಎಂಬುದೊಂದು ಮುಖ್ಯವಾದ ವಿಷಯ. ಏಕೆಂದರೆ ಮೊದಲನೇಯ ಸಂಪುಟದಲ್ಲಿ ಅವನು ಪ್ರತಿಪಾದಿಸಿದ ಮೌಲ್ಯ ತತ್ವದಲ್ಲಿ ಬೆಲೆಗಳ ಏರಿಳಿತವನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ ಎನ್ನುವ ಆರೋಪವಿತ್ತು. ಇದನ್ನು ಸರಿಪಡಿಸಲು ಮಾಕ್ರ್ಸ್ ಮತ್ತೊಂದು ಸಂಪುಟವನ್ನೇ ರಚಿಸಿದ. ಆದರೂ ಅವನಿಗೆ ತಾನೇನು ಮಾಡುತ್ತಿದ್ದೇನೆ ಎಂಬುದರ ಅರಿವು ಸ್ಪಷ್ಟವಾಗಿತ್ತು. ಮೊದಲ ಸಂಪುಟದಲ್ಲಿ ಬಂಡವಾಳ ಸಮಾಜದ ಮೂಲ ಪ್ರಶ್ನೆಗಳನ್ನು ಯಾವ ರೀತಿಯ ಗೊಂದಲಕ್ಕೂ ಒಳಪಡಿಸದೆ ತಿಳಿಸಿ ಅನಂತರ ನಮಗೆ ಪರಿಚಿತವಾಗಿರುವ ಬಂಡವಾಳ ಪದ್ಧತಿ ಯಾವ ರೀತಿ ಕಾರ್ಯ ನಿರತವಾಗಿದೆ ಎಂಬುದನ್ನು ವಿವರಿಸಿದ. ಬಂಡವಾಳ ಸಮಾಜದ ಮೂಲರೂಪದ ನಿಯಮಗಳನ್ನು ತಿಳಿಸದೇ ಅದನ್ನು ಬದಲಾಯಿಸಿದಾಗ ಅದು ಯಾವ ರೂಪ ತಾಳುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಮೊದಲನೆಯ ಸಂಪುಟದಲ್ಲಿ ಮೌಲ್ಯವನ್ನು ಹಣದ ರೂಪದಲ್ಲಿ ವಿವರಿಸಿ 3 ನೇಯ ಸಂಪುಟದಲ್ಲಿ ಕೆಲವು ನಿಯಮಗಳ ಪ್ರಕಾರ ಮೌಲ್ಯಗಳಿಂದ ಸಿದ್ಧಿಸುವ ಉತ್ಪಾದನಾ ಬೆಲೆಯ ವಿವಿಧ ಕಲ್ಪನೆಯನ್ನು ತಿಳಿಸುತ್ತಾನೆ. ಇದು ಮೌಲ್ಯ ತತ್ವವನ್ನು ವಿರೋಧಿಸುವುದಿಲ್ಲ. ಈ ತತ್ವ ಮೌಲ್ಯ ತತ್ವದ ಆಧಾರದ ಮೇಲೆಯೇ ರಚಿತವಾಗಿದೆ.

ವ್ಯಾಪಾರದ ಪದ್ಧತಿಯನ್ನು ಅವಲಂಬಿಸಿರುವ ಅರ್ಥಶಾಸ್ತ್ರಜ್ಞರು ಮಾಕ್ರ್ಸ ಮೌಲ್ಯ ತತ್ವಕ್ಕೆ ಒತ್ತುಕೊಡುವುದನ್ನು ಒಪ್ಪದಿರುವುದು ಸ್ವಾಭಾವಿಕ. ಇವನ ಪದ್ಧತಿ ಮತ್ತು ಇವನ ಸಮಕಾಲೀನ ಅರ್ಥಶಾಸ್ತ್ರಜ್ಞರ ಪದ್ಧತಿ ಮೂಲದಲ್ಲಿ ಭಿನ್ನವಾಗಿವೆ. `ಬಂಡವಾಳ ಮೂಲತಃ ವಿನಿಮಯ ತತ್ವ ಮತ್ತು ಲಾಭವನ್ನು ಮುಂದೆ ಕೂಡಲು ಬೇಕಾಗುವ ಬಂಡವಾಳವಾಗಿ ಪರಿವರ್ತಿಸುವ ರೀತಿಯನ್ನು ಪರಿಶೀಲಿಸುತ್ತದೆ. ಮಾಕ್ರ್ಸ್ ಉತ್ಪಾದನೆಯ ತತ್ವವನ್ನು ಅವಲಂಬಿಸಿರುತ್ತಾನೆ. ಇತಿಹಾಸದ ಮುನ್ನಡೆಯನ್ನು ಅರ್ಥಮಾಡಿಕೊಳ್ಳಲು ಶ್ರಮಮೌಲ್ಯದ ತತ್ವ ಉಪಯೋಗವಾದರೆ ಮಾರುಕಟ್ಟೆಯಲ್ಲಿ ತಿಳಿಸಲು ಮತ್ತು ಹಣಗಳಿಸಲು ಬೆಲೆಯ ತತ್ವ ಉಪಯೋಗವಾಗುತ್ತದೆ. ಉಪಯೋಗ ಮೌಲ್ಯಗಳನ್ನು (ಯುಸ್ ವಾಲ್ಯುಸ್) ಲಾಭ ರೂಪದಲ್ಲಿ ವಿನಿಮಯ ಮೌಲ್ಯಗಳಾಗಿ ಪರಿವರ್ತಿಸಿ ಆ ಲಾಭವನ್ನು ಶೇಖರಿಸುವ ಪದ್ಧತಿಗೂ ಉಪಯೋಗ ಮೌಲ್ಯವನ್ನು ಕೇವಲ ಉಪಯೋಗಕ್ಕಾಗಿಯೇ ಸೃಷ್ಟಿಸುವ ಪದ್ಧತಿಗೂ ನಡುವೆ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ.

ಮಾಕ್ರ್ಸ್ ಮೌಲ್ಯತತ್ವವನ್ನು ವಿವರಿಸಿ ಹೆಚ್ಚುವರಿ ಮೌಲ್ಯವನ್ನು (ಶ್ರಮಜೀವಿ ತನ್ನ ಕೆಲಸದ ವೇಳೆಯ ಒಂದು ಭಾಗವನ್ನು ತನ್ನ ಅವಶ್ಯಕತೆಗಳನ್ನು ಪೂರೈಸಲು ಉಪಯೋಗಿಸುತ್ತಾನೆ. ಕೆಲಸದ ವೇಳೆಯ ಈ ಭಾಗಕ್ಕೆ ಅವನಿಗೆ ಕೂಲಿ ನೀಡಲಾಗುತ್ತದೆ. ಕೆಲಸದ ದಿನದ ಉಳಿದ ಭಾಗ ಅವನು ಬಂಡವಳಿಗನಿಗೋಸ್ಕರ ಉಚಿತವಾಗಿ ಕೆಲಸ ಮಾಡುತ್ತಾನೆ. ಈ ಕಾಲದಲ್ಲಿ ಉತ್ಪಾದಿಸಿದ ಮೌಲ್ಯವೇ ಹೆಚ್ಚುವರಿ ಮೌಲ್ಯ -(ಸಪ್ರ್ಲಸ್ ವ್ಯಾಲ್ಯೂ) ಯಾವ ಉದ್ದೇಶಕ್ಕಾಗಿ ಪಡೆಯಲಾಗುತ್ತದೆ ಎಂದು ತಿಳಿಸುವುದರ ಮೂಲಕ ಬಂಡವಾಳ ಪದ್ಧತಿಯ `ಮುನ್ನಡೆಯ ನಿಯಮಗಳನ್ನು ಶೋಧಿಸಿದ. ಬಂಡವಾಳ ಪದ್ಧತಿಯ ಲಾಭವನ್ನು ಶೇಖರಿಸುವ ಉದ್ದೇಶದಿಂದ ಕೂಡಿರುತ್ತದೆ. ಆದ್ದರಿಂದ ಲಾಭವನ್ನು ಶೇಖರಿಸುವ ಪರಿಸ್ಥಿತಿಯನ್ನು ಅದು ಕಾಪಾಡಿಕೊಂಡೇ ಮುನ್ನಡೆಯಬೇಕು. ಇದು ಆ ಪದ್ಧತಿ ಅಸ್ತಿತ್ವದಲ್ಲಿರಲು ಮೂಲಾಧಾರ.ಬಂಡವಾಳ ಪದ್ಧತಿಯಲ್ಲಿ ವಸ್ತುಗಳ ತಯಾರಿಕೆಗೆ ಹಿಡಿಸುವ ಶ್ರಮದ ಕಾಲ ಆಧರಿಸಿ ಅವುಗಳ ನಿಜ ಮೌಲ್ಯದ ನಿರ್ಧರಣೆಯಾಗಿ ಅವು ವಿನಿಮಯವಾಗುವುದಿಲ್ಲ. ವಸ್ತುಗಳ ಬೆಲೆ ಅವುಗಳ ನಿಜ ಮೌಲ್ಯದಿಂದ ಹೆಚ್ಚು ಹೆಚ್ಚಾಗಿ ದೂರ ಸರಿಯುತ್ತ ಹೊಗುತ್ತದೆ. ಬಂಡವಾಳ ಪದ್ಧತಿಯ ಅಸಂಬದ್ಧತೆ ಹುಟ್ಟುವುದೇ ಇವೆರಡರಲ್ಲಿ ಹೊಂದಾಣಿಕೆ ಇಲ್ಲದಿರುವುದರಿಂದ. ಈ ಪರಿಸ್ಥಿತಿಯ ಅನ್ಯಾಯ, ವ್ಯರ್ಥ ಚಟುವಟಿಕೆಗಳು ಮತ್ತು ಇದು ಬೆಳೆದಂತೆ ಬಂಡವಾಳ ಪದ್ಧತಿ ಅನೇಕ ಸಂಕಷ್ಟಗಳಿಗೆ ಗುರಿಯಾಗುವುದು ಇವೆಲ್ಲವನ್ನೂ ಮಾಕ್ರ್ಸ್ `ಬಂಡವಾಳದಲ್ಲಿ ವಿಶದವಾಗಿ ತಿಳಿಸುತ್ತಾನೆ. ಶ್ರಮಜೀವಿಗಳ ಜೀವನಾಧಾರಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ನಿಗದಿಪಡಿಸುವುದು ಕೈಗಾರಿಕಾಕರಣವನ್ನು ಶೀಘ್ರಗೊಳಿಸಲು ಒಂದು ನಿರ್ದಿಷ್ಟ ಕಾಲದ ತನಕ ಅಗತ್ಯವಾಗಿತ್ತು ಎಂದು ಮಾಕ್ರ್ಸ್ ಶ್ರಮಾಧಾರಿತ ಮೌಲ್ಯ ತತ್ವದ ಮೂಲಕ ಕಂಡುಕೊಂಡ. ಆದರೆ ಇದು ಕೈಗಾರಿಕೀಕರಣ ಪೂರ್ಣಗೊಂಡಂತೆ ಉತ್ಪಾದನಾ ವೆಚ್ಚವನ್ನು ಕಡಿಮೆಮಾಡಿ (ಅಂದರೆ ಕೂಲಿಯನ್ನು ಕಡಿಮೆ ಮಾಡಿ) ಮತ್ತಷ್ಟು ಬಂಡವಾಳ ಹೂಡಲು ಅಧಿಕ ಲಾಭ ಪಡೆದು ಉತ್ಪಾದನೆಯನ್ನು ವಿಸ್ತøತಗೊಳಿಸಲು ತಡೆಯಾಯಿತು. ಇವೆಲ್ಲವೂ ವಿಶದವಾದುದು ಶ್ರಮಧಾರಿತ ಮೌಲ್ಯ ತತ್ವಗಳನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದರಿಂದ. ಇವು ಬಂಡವಾಳ ಪದ್ಧತಿಯ ಕೇಂದ್ರ ವಿರೋಧಾಭಾಸಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಮಾಕ್ರ್ಸ್ ಇದನ್ನು ಎರಡನೇಯ ಸಂಪುಟದಲ್ಲಿ ನಿರೂಪಿಸಿ ಮೂರನೆಯ ಸಂಪುಟದಲ್ಲಿ ದೀರ್ಘವಾಗಿ ಚರ್ಚೆ ನಡೆಸುತ್ತಾನೆ.

ಮೊದಲನೆಯ ಸಂಪುಟ 1817, ಸಪ್ಟೆಂಬರ್‍ನಲ್ಲಿ ಹೊರಬಿತ್ತು. ಇಂಗ್ಲೆಂಡಿನ ಪತ್ರಿಕೆಗಳಲ್ಲಿ ಇದನ್ನು ಕುರಿತು ಮೆಚ್ಚಿಗೆ ವಿಮರ್ಶೆಗಳು ಪ್ರಕಟವಾದವು. `ಸ್ಯಾಟರ್ಡೆ ರೆವ್ಯೂಎನ್ನುವ ಪತ್ರಿಕೆ ಮಾಕ್ರ್ಸ್ ಅತಿ ಶುಷ್ಕ ವಿಷಯಗಳನ್ನೂ ಆಕರ್ಷಣೀಯವಾಗಿ ತೋರಿಸಬಲ್ಲನೆಂದು ಬರೆಯಿತು. `ಬಂಡವಾಳದ ಮುಖ್ಯೋದ್ದೇಶವನ್ನು ಸಾರ್ವಜನಿಕರಿಗೆ ಪರಿಚಯಿಸಲು ಎಂಗೆಲ್ಸ್ ಇದನ್ನು ಕುರಿತು ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದ.

1875ರಲ್ಲಿ `ಬಂಡವಾಳದ ಫ್ರೆಂಚ್ ಆವೃತ್ತಿ ಹೊರಬಂತು. 1872ರಲ್ಲಿ ರಷ್ಯನ್ ಆವೃತ್ತಿ ಪ್ರಕಟವಾಯಿತು. 1886ರಲ್ಲಿ ಅಂದರೆ ಮಾಕ್ರ್ಸ್ ಗತಿಸಿದ ಮೂರು ವರ್ಷಗಳ ತರುವಾಯ ಅದರ ಇಂಗ್ಲಿಷ್ ಆವೃತ್ತಿ ಪ್ರಕಟವಾಯಿತು.

ಮಾಕ್ರ್ಸ್ ಎರಡನೆಯ ಮತ್ತು ಮೂರನೆಯ ಸಂಪುಟಗಳಿಗೂ ಅಗಾಧವಾದ ವಿಷಯಗಳನ್ನು ಸಂಗ್ರಹಿಸಿದ್ದ. ಹೆಚ್ಚುವರಿ ಮೌಲ್ಯದ ಬಗೆಗೂ ಹೆಚ್ಚು ಸಂಗತಿಗಳನ್ನು ಶೇಖರಿಸಿದ್ದ. ಆದರೆ ಈ ಸಂಪುಟಗಳನ್ನು ಸರಿಯಾದ ರೂಪಕ್ಕೆ ತರಲು ಅವನ ಆರೋಗ್ಯ ತಡೆಮಾಡಿತು. ಈ ಕೆಲಸವನ್ನು ಎಂಗೆಲ್ಸ್ ಪೂರೈಸಿದ. ಹೆಚ್ಚುವರಿ ಮೌಲ್ಯದ ತತ್ವವನ್ನು 1905ರಲ್ಲಿ ಸ್ಟುಟ್‍ಗಾರ್ಟ್‍ನಲ್ಲಿ ಕಾರ್ಲ್ ಕೌಟಸ್ಕಿ ಎಂಬಾತ ಪ್ರಕಟಿಸಿದ. ಈ ಪ್ರಕಟಣೆಗೆ ಈತ ವಿಷಯ ಸಂಗ್ರಹಿಸಿದ ರೀತಿ ಸಮರ್ಪಕವಾಗಿರಲಿಲ್ಲ. ರಷ್ಯದಲ್ಲಿ ಇದನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ 1951ರಲ್ಲಿ ಪ್ರಕಟಿಸಲಾಯಿತು.

ಮೊದಲನೆಯ ಸಂಪುಟ (ರಾಜಕೀಯ ಅರ್ಥಶಾಸ್ತ್ರ ವಿಮರ್ಶೆ) ಬಂಡವಾಳ ಸಮಾಜ ಅಗಾಧವಾಗಿ ವಸ್ತುಗಳನ್ನು ಶೇಖರಿಸಿ ಅವನ್ನು ಮಾರಿ ತನ್ನ ಸಂಪತ್ತನ್ನು ಸೃಷ್ಟಿಸಿಕೊಳ್ಳುತ್ತದೆ ಎಂದು ತಿಳಿಸಿ ವಸ್ತುಗಳ ಎಲ್ಲಾ ಮುಖಗಳನ್ನು ಪರಿಶೀಲಿಸುವುದರ ಮೂಲಕ ಪ್ರಾರಂಭವಾಗುತ್ತದೆ. ಅನಂತರ ವ್ಯಾಪಾರ-ವಿನಿಮಯದಲ್ಲಿ ವಸ್ತುಗಳ ನಡುವಣ ಸಂಬಂಧವನ್ನು ವಿವೇಚಿಸುತ್ತದೆ. ಬಂಡವಾಳ ಸಮಾಜದಲ್ಲಿ ಶ್ರಮವು ಒಂದು ವಿಧವಾದ ವಸ್ತುವೇ ಆಗಿದೆ ಎಂಬುದನ್ನು ವಿಶದಪಡಿಸಿ ಹೆಚ್ಚುವರಿ ಮೌಲ್ಯದ ರೂಪದಲ್ಲಿ ವಸ್ತು ಹಣದ ರೂಪ ತಾಳಿ (ಇದು ಕೂಡಾ ಒಂದು ವಸ್ತು) ಲಾಭಗಳಿಸಿ ಮುಂದೆ ಹೂಡಿಕೆಗೆ ಬೇಕಾಗುವ ಬಂಡವಾಳವನ್ನು ಒದಗಿಸುತ್ತದೆ.

ಆದ್ದರಿಂದ ಬಂಡವಾಳ ಪದ್ಧತಿ ಶ್ರಮದ ಕಾರ್ಯವಿಧಾನವನ್ನು ಪರಿಶೀಲಿಸುವ ಆಸಕ್ತಿಯನ್ನಷ್ಟೇ ಹೊಂದಿಲ್ಲ. ಅದು ಶ್ರಮ ಹೆಚ್ಚುವರಿ ಮೌಲ್ಯವನ್ನು ಯಾವ ರೀತಿ ಸೃಷ್ಟಿಸುತ್ತದೆ ಎಂಬುದರ ಮೇಲೆಯೇ ಹೆಚ್ಚು ಆಸಕ್ತಿ ತೋರಿಸುತ್ತದೆ. ಅಧಿಕ ಲಾಭ ಗಳಿಸಲು ಪ್ರಯತ್ನಿಸುವುದೇ ಅದರ ಕೊನೆಯಿಲ್ಲದ ಕಾರ್ಯವಿಧಾನ. ಬಂಡವಾಳ ಮೊದಲು ಹಣವನ್ನು ವಸ್ತುವಾಗಿ ಮಾರ್ಪಡಿಸುತ್ತದೆ. ತಾನು ತಯಾರಿಸಿದ ವಸ್ತುಗಳನ್ನು ತನ್ನ ಮುಂದಿನ ತಯಾರಿಕಾ ವಿಧಾನದಲ್ಲಿ ಉತ್ಪತ್ತಿಯ ಸಾಧನವಾಗಿ ಉಪಯೋಗಿಸಿಕೊಳ್ಳುತ್ತದೆ. ಜೀವಂತ ಶ್ರಮಜೀವಿಗಳನ್ನು ಈ ವಸ್ತುಗಳೊಡನೆ ಜೊತೆಗೂಡಿಸಿ ಮೌಲ್ಯವನ್ನು ಮತ್ತೆ ಬಂಡವಾಳವಾಗಿ ಪರಿವರ್ತಿಸುತ್ತದೆ. ಇದು ಅದರ ನಿರಂತರ ಕಾರ್ಯವಿಧಾನ ಹೀಗೆ ಅದು ಸಾಮಾಜಿಕ ಶ್ರಮದ ಉಪಯೋಗದಿಂದ ಬೃಹದುತ್ಪಾದನಾ ಶಕ್ತಿಗಳನ್ನು ಸೃಷ್ಟಿಸುತ್ತದೆ. ಈ ಅರ್ಥ ವ್ಯವಸ್ಥೆಯನ್ನು ನಿರಂತರವಾಗಿ ಉತ್ಪಾದನೆಯಲ್ಲಿ ತೊಡಗಿಸುವ ಕೌಶಲ ಯಾವುದು? ಇದು ಶೋಷಣೆಯ ಮಾರ್ಗದಿಂದಲೇ ನಡೆಯುವುದಿಲ್ಲ. ತನ್ನ ಸಂತೋಷಕ್ಕಾಗಿ ಲಾಭಗಳಿಸುವ ಮಾರ್ಗದಿಂದಲೂ ಅಲ್ಲ. ಬಂಡವಾಳ ವರ್ಗ ಕೂಲಿಯ ಪದ್ಧತಿಯಿಂದ ಒಳಪಡಿಸಿಕೊಳ್ಳುವ ಹೆಚ್ಚುವರಿ ಮೌಲ್ಯವನ್ನು ಮತ್ತೆ ಹೂಡಿಕೆಯ ಬಂಡವಾಳವಾಗಿ ಪರಿವರ್ತಿಸುವುದರಿಂದ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಳ್ಳುತ್ತದೆ. ಹೆಚ್ಚುವರಿ ಮೌಲ್ಯವನ್ನು ಇನ್ನು ಅಧಿಕಹೆಚ್ಚುವರಿ ಮೌಲ್ಯವಾಗಿ ಪರಿವರ್ತಿಸುವ ಮತ್ತು ಅದನ್ನು ಪುನಃ ಬಂಡವಾಳವಾಗಿ ಉಪಯೋಗಿಸುವ ಯಂತ್ರ ಬಂಡವಾಳ ಪದ್ಧತಿ. ಇದೇ ಅದರ ನಿರಂತರ ಚಟುವಟಿಕೆ. ಇದೇ ರಾಜಕೀಯ ಅರ್ಥಶಾಸ್ತ್ರಜ್ಞರು ಬೂಷ್ರ್ವಾ ಕಾಲದ ಚಾರಿತ್ರಿಕ ಕಾರ್ಯಕ್ರಮವನ್ನು ನಿರೂಪಿಸುವ ರೀತಿ.

ಅಂದಿನ ಅನೇಕ ಸಮಾಜವಾದಿಗಳು ನಂಬಿದ್ದಂತೆ ಹೆಚ್ಚುವರಿ ಮೌಲ್ಯ ತಾವು ವಸ್ತುಗಳನ್ನು ಪಡೆದ ಬೆಲೆಗಿಂತ ಅಥವಾ ತಾವು ತಯಾರಿಸಿದ ಸಾಮಾನಿನ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಬೆಲೆಗೆ ಮಾರುವುದರಿಂದ ಉಂಟಾಗುವುದಿಲ್ಲ; ಜನರನ್ನು ಮೋಸಗೊಳಿಸಿ ಹೆಚ್ಚುವರಿ ಮೌಲ್ಯ ಪಡೆಯುವುದು ಸಾಧ್ಯವಿಲ್ಲ.

`ಹಣವನ್ನು ಬಂಡವಾಳವಾಗಿ ಪರಿವರ್ತಿಸುವುದನ್ನು ವಸ್ತುಗಳ ವಿನಿಮಯದಲ್ಲಿ ನೆಲೆಸಿರುವ ನಿಯಮಗಳಿಂದಲೇ ವಿವರಿಸಬೇಕು. ಇದನ್ನು ಸರಿಸಮಾನ ಮೌಲ್ಯವನ್ನು ಪಡೆದಿರುವ ವಸ್ತುಗಳಿಂದ ಪ್ರಾರಂಭಿಸಬೇಕು. ಬಂಡವಾಳಗಾರ ತನಗೆ ಬೇಕಾದ ವಸ್ತುಗಳನ್ನು ಅವುಗಳ ಮೌಲ್ಯಕ್ಕೆ ಅನುಸಾರವಾಗಿ ಮಾರಬೇಕು. ಹೀಗೆ ಮಾಡಿದಾಗಲೂ ತಾನು ಮೊದಲು ಆ ವಸ್ತುವಿನಲ್ಲಿ ಹಾಕಿದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯ ಸೆಳೆಯಬೇಕು.(ಮಾಕ್ರ್ಸ್ ಬಂಡವಾಳ ಸಂಪುಟ 1-606)

ಶೋಷಣೆಯ ವಿಧಾನ ಮೇಲ್ನೋಟಕ್ಕೆ ನಿಷ್ಪಕ್ಷಪಾತವಾದುದೆಂದು ಕಂಡುಬರುತ್ತದೆ. ಶ್ರಮದ ಶಕ್ತಿಯನ್ನು ಮಾರುವವನೂ ಕೊಳ್ಳುವವನೂ ಸ್ವಂತೇಚ್ಛೆಯಿಂದಲೇ ಈ ವ್ಯವಹಾರದಲ್ಲಿ ತೊಡಗುವುದಾಗಿದೆ. ಇಬ್ಬರ ನಡುವಣ ಸಂಬಂಧ ವಸ್ತುಗಳ ಮಾಲೀಕರ ನಡುವೆ ಇರುವಂಥಾದ್ದು. ಇಬ್ಬರನ್ನೂ ಒಟ್ಟಿಗೆ ತರುವುದು ಅವರಲ್ಲಿರುವ ಸ್ವಾರ್ಥ. ತಮ್ಮ ಅನುಕೂಲಕ್ಕಾಗಿ ಅವರು ಈ ವ್ಯವಹಾರದಲ್ಲಿ ತೊಡಗುತ್ತಾರೆ. ಹೀಗಿರುವಾಗ ಶೋಷಣೆಗೆ ಎಡೆಯೇ ಇಲ್ಲ. ಇದು ಬಂಡವಾಳಗಾರರ ವಾದ.

ಬಂಡವಾಳಗಾರ ಹೆಚ್ಚುವರಿ ಮೌಲ್ಯವನ್ನು ಬಂಡವಾಳ ಪದ್ಧತಿಯಲ್ಲಿ ಯಾವ ರೀತಿ ಹೆಚ್ಚಿಸುತ್ತಾನೆ ಎಂಬುದನ್ನು ತೋರಿಸುವುದರ ಮೂಲಕ ಮಾಕ್ರ್ಸ್ ಈ ವಾದಕ್ಕೆ ಉತ್ತರ ಕೊಡುತ್ತಾನೆ. ಮೊದಲು ಶ್ರಮಜೀವಿಗಳ ಕೆಲಸದ ಕಾಲವನ್ನು ಹೆಚ್ಚಿಸಿ ಅವರ ಶೋಷಣೆಯನ್ನು ಉಲ್ಬಣಗೊಳಿಸುತ್ತಾನೆ. ಆದರೆ ಈ ಹೆಚ್ಚಳಕ್ಕೂ ಒಂದು ಮಿತಿ ಉಂಟು. ಕೆಲಸದ ಕಾಲ ಹೆಚ್ಚಿಸಿದಂತೆ ಶ್ರಮಜೀವಿಯ ಉತ್ಪಾದನಾ ಶಕ್ತಿ ಕಡಿಮೆ ಆಗುತ್ತದೆ. ಇದೂ ಅಲ್ಲದೇ ಕೆಲಸದ ವೇಳೆಯನ್ನು ಕಡಿಮೆ ಮಾಡಲು ಶ್ರಮಜೀವಿಗಳ ಹೋರಾಟವೂ ಪ್ರಾರಂಭವಾಗುತ್ತದೆ. ಆದ್ದರಿಂದ ತಯಾರಿಕೆಯ ತಂತ್ರವನ್ನು ಉತ್ತಮಗೊಳಿಸುವ ಮಾರ್ಗ ಅನುಸರಿಸಿ ಶ್ರಮದ ಉತ್ಪಾದನೆಯನ್ನು ಹೆಚ್ಚಿಸುತ್ತಾನೆ. ಈ ವಿಧಾನ ಕೂಡ ಶೋಷಣೆಯನ್ನು ತೀವ್ರಗೊಳಿಸುವುದೇ ಆಗಿದೆ.

ಬಂಡವಾಳ ಪದ್ಧತಿಯಲ್ಲಿ ಯಂತ್ರಗಳು ಶ್ರಮ ಜೀವಿಯ ಕೆಲಸವನ್ನು ಸುಲಭಗೊಳಿಸುವುದಿಲ್ಲ. ಕಾರ್ಮಿಕ ಆರ್ಥಿಕವಾಗಿ ಕಾರ್ಖಾನೆಯ ಮಾಲೀಕನನ್ನು ಅವಲಂಬಿಸುತ್ತಾನೆ. ಆದರೆ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಯಂತ್ರ ವಿಧಿಸಿದ ಕಾರ್ಯಾಚರಣೆಯ ಲಯ, ವೇಗ ಮುಂತಾದವುಗಳಿಗೆ ಅಧೀನನಾಗುತ್ತಾನೆ. ಮಾಕ್ರ್ಸ್ ಇದನ್ನು ತಾಂತ್ರಿಕ ದಾಸ್ಯ ಎಂದು ಕರೆದಿದ್ದಾನೆ.

ಮಾಕ್ರ್ಸ್ ಬಂಡವಾಳಶಾಹಿಗಳು ಶೋಷಣೆಯನ್ನು ಹೆಚ್ಚಿಸುವ ರೀತಿಯನ್ನು ಅಂದಿನ ಕಾರ್ಖಾನೆಯ ವರದಿಗಳ ಆಧಾರದ ಮೇಲೆ ವಿಶದಪಡಿಸುತ್ತಾನೆ, ಬಂಡವಾಳದ ಈ ಸಂಪುಟವನ್ನು ಒದಿದ ಮೆಲೆ ಅಭಿಜಾತ ಅರ್ಥಶಾಸ್ತ್ರ ಗ್ರಂಥಗಳು (ಕ್ಲಾಸಿಕಲ್ ಎಕನಾಮಿಕ್ಸ್ ವಕ್ರ್ಸ್) ಮರೆಮಾಡುವ ವಿಷಯಗಳು ಬಯಲಾಗುತ್ತವೆ.

ತತ್ವವನ್ನು ಅವನು ವಾಸ್ತವ ಸಂಗತಿಗಳ ಆಧಾರದ ಮೇಲೆ ನಿಲ್ಲಿಸಿ ಆಧುನಿಕ ಕೈಗಾರಿಕೀಕರಣದ ಚಿತ್ರವನ್ನು ಕೊಡುತ್ತಾನೆ, ಬಂಡವಾಳ ನಮ್ಮ ನಾಗರಿಕತೆಯ ನೈಜ ಚಿತ್ರವನ್ನು ಒದಗಿಸುತ್ತದೆ. ರೈತರಿಂದ ಅವರ ಜಮೀನನ್ನು ಕಿತ್ತುಕೊಂಡ ರೀತಿ, ಕಾರ್ಮಿಕ ಮತ್ತು ಯಂತ್ರಗಳ ನಡುವಣ ಹೋರಾಟ, ಕೆಲಸದ ವೇಳೆಯನ್ನು ಹಿಗ್ಗಿಸುವಿಕೆ ಮುಂತಾದವನ್ನು ಕುರಿತು ಅಧ್ಯಾಯಗಳು ಅದ್ಭುತವಾಗಿ ಬಂದಿವೆ, ಇವು ನಮ್ಮ ನಾಗರಿಕತೆಯ ನೈಜ ಚಿತ್ರವನ್ನು ಒದಗಿಸುವುದಲ್ಲದೇ ಈ ಸಮಾಜ ಶ್ರಮಜೀವಿಗಳನ್ನು ಎಷ್ಟು ಕೀಳುಮಟ್ಟಕ್ಕೆ ಒಯ್ಯುತ್ತದೆ ಎಂಬುದನ್ನು ತಿಳಿಸುತ್ತದೆ.

ಕೈಗಾರಿಕೆಯಲ್ಲಿ ಹೆಚ್ಚು ಹೆಚ್ಚಾಗಿ ಯಂತ್ರಗಳು ಉಪಯೋಗಕ್ಕೆ ಬಂದಂತೆ ಶ್ರಮಜೀವಿಯ ಮನುಷ್ಯತ್ವ ಮೊಟಕಾಗುತ್ತ ಹೋಗುತ್ತದೆ. ಅವನು ಯಂತ್ರದ ಬಿಂದುವಾಗುತ್ತಾನೆ. ಶ್ರಮದ ಕಾರ್ಯವಿಧಾನವನ್ನು ಬೌದ್ಧಿಕವಾಗಿ ಅರಿಯಲು ಅವನಿಗೆ ಆಗುವುದಿಲ್ಲ. ಅವನು ಯಂತ್ರವನ್ನು ಉಪಯೋಗಿಸುವುದರ ಬದಲು ಯಂತ್ರ ಕಾರ್ಮಿಕನನ್ನು ಉಪಯೋಗಿಸುತ್ತದೆ. ಇದು ಬಂಡವಾಳದ ಸರ್ವಾಧಿಕಾರವಲ್ಲದೆ ಮತ್ತೇನು?

ಬಂಡವಾಳ ಸಮಾಜ ಉತ್ಪಾದನಾ ಶಕ್ತಿಗಳನ್ನು ಹೆಚ್ಚಿಸುವುದರಿಂದ ಅದು ನಿರಂತರವಾಗಿ ವಿಸ್ತಾರಗೊಳ್ಳಲು ಪ್ರಯತ್ನಿಸುತ್ತದೆ. ಇದು ಕೇವಲ ಒಂದು ದೇಶದಲ್ಲಿ ನಡೆಯುವ ಕ್ರಿಯೆಯಲ್ಲ. ಬಂಡವಾಳಪದ್ಧತಿ ಆಚರಣೆಯಲ್ಲಿರುವ ಪ್ರತಿಯೊಂದು ದೇಶದಲ್ಲೂ ನಡೆಯುವ ಕಾರ್ಯವಿಧಾನ, ಮಾಕ್ರ್ಸ ಇದನ್ನು ವಿಶದಗೊಳಿಸಲು ಘೋಯರ್‍ಬಾಹ್ ಹೇಳಿರುವುದನ್ನು ನೆನಪಿಸುತ್ತಾನೆ, ಮತ ಧರ್ಮದ ಕ್ಷೇತ್ರದಲ್ಲಿ ವ್ಯಕ್ತಿ ತನ್ನ ಬುದ್ಧಿಯಿಂದ ನಿರ್ಮಿಸಿದ ದೇವರ ಅಧಿಪತ್ಯಕ್ಕೆ ಒಳಗಾಗುವಂತೆ ಸಮಾಜದ ಉತ್ಪಾದನಾ ಕ್ಷೇತ್ರದಲ್ಲಿ ತನ್ನ ಕೈಯಿಂದ ನಿರ್ಮಿಸಿದ ವಸ್ತುಗಳಿಗೆ ತಾನು ಅಡಿಯಾಳಾಗುತ್ತಾನೆ.

ಬಂಡವಾಳದ ಮೊದಲನೇ ಸಂಪುಟ ಕೇವಲ ಕಾಲ್ಪನಿಕ ವಿಷಯಗಳನ್ನು ನಿರೂಪಿಸುವುದಿಲ್ಲ. ಅದು ಬಂಡವಾಳ ಸಮಾಜದ ಹುಟ್ಟು ಮತ್ತು ಬೆಳವಣಿಗೆ ಕುರಿತು ಉದ್ಗ್ರಂಥ, ಸಾಮಂತಶಾಹಿ ಸಮಾಜವನ್ನೂ ಅದರ ಉತ್ಪಾದನಾ ಸಂಬಂಧಗಳನ್ನು ನಿರ್ಮೂಲನ ಮಾಡಿ ಬಂಡವಾಳ ಪದ್ಧತಿಯಲ್ಲಿ ವ್ಯಕ್ತಿಗಳ ನಡುವಣ ಸಂಬಂಧ ಕೇವಲ ಸ್ವಾರ್ಥದಿಂದ ಮತ್ತು ನಿರ್ದಯದಿಂದ ಕೂಡಿದ 'ನಗದು ಸಲ್ಲಿಕೆಯ ಸಂಬಂಧವಾಗಿ ಪರಿವರ್ತಿಸುತ್ತದೆ ಎಂದು ತಿಳಿಸುತ್ತದೆ.

ಬಂಡವಾಳ ಸಮಾಜ ಪದ್ಧತಿಯನ್ನು ವಿವರಿಸುವಾಗ ಮಾಕ್ರ್ಸ್ ಅದನ್ನು ಹೊಗಳುವುದೂ ಇಲ್ಲ, ತೆಗಳುವುದೂ ಇಲ್ಲ ಎಂಬುದನ್ನು ಗಮನಿಸಬೇಕು. ಬಂಡವಾಳ ಸಮಾಜದ ದುಷ್ಪರಿಣಾಮಗಳು ಅದು ಬೆಳೆದಂತೆ ಆಗುವ ಪರಿವರ್ತನೆ ಇದು ಬಂಡವಾಳಗಾರರ ಕೇಡಿಗತನದಿಂದ ಮಾತ್ರ ಉಂಟಾಗುವುದಿಲ್ಲ. ಹೀಗಲ್ಲದಿದ್ದರೂ ಬಂಡವಾಳಗಾರರು ಸ್ವಲ್ಪ ದಯೆ ತೋರುವುದರ ಮೂಲಕ ಈ ದುಷ್ಪರಿಣಾಮಗಳನ್ನು ಸರಿಪಡಿಸಬಹುದಾಗಿತ್ತು.

ಮೊದಲನೆಯ ಸಂಪುಟಕ್ಕೆ ಮಾಕ್ರ್ಸ್ ಬರೆದ ಮುನ್ನುಡಿಯಲ್ಲಿ ತಾನು ಸಮಾಜವನ್ನು ವಿವರಿಸುವಾಗ ವ್ಯಕ್ತಿಗಳನ್ನೂ ತರುವುದು ಬಂಡವಾಳ ಪದ್ಧತಿಯ ಆರ್ಥಿಕ ವರ್ಗದ ನಿದರ್ಶನವಾಗಿ, ವರ್ಗಗಳ ಸಂಬಂಧವನ್ನು ವರ್ಗಗಳ ಆಸಕ್ತಿಯನ್ನು ವಿವರಿಸುವುದಕ್ಕಾಗಿ ಎಂದು ಹೇಳಿದ್ದಾನೆ, ಅಭಿಜಾತ ರಾಜಕೀಯ ಅರ್ಥಶಾಸ್ತ್ರವೇ ಸರಬರಾಜು ಮತ್ತು ಬೇಡಿಕೆ, ಉತ್ಪಾದನಾ ವೆಚ್ಚಗಳು, ಲಾಭಗಳು, ಲಾಭಪಡೆಯುವಿಕೆ, ವಿದೇಶಿ ಮಾರುಕಟ್ಟೆ ಮುಂತಾದವುಗಳ ಮೂಲಕ ಬಂಡವಾಳ ಪದ್ಧತಿ ಎಷ್ಟು ಅಸಂಗತವಾಗಿದೆ ಮತ್ತು ಯಂತ್ರಪ್ರಾಯವಾಗಿದೆ ಎಂಬುದನ್ನು ತಿಳಿಸುತ್ತದೆ, ಅಭಿಜಾತ ಅರ್ಥಶಾಸ್ತ್ರಜ್ಞರ ದೃಷ್ಟಿಯಲ್ಲಿ ಹೆಚ್ಚುವರಿ ಮೌಲ್ಯವನ್ನು ಪಡೆಯಲು ಶ್ರಮಜೀವಿಯನ್ನು ಕೇವಲ ಯಂತ್ರದಂತೆ ಬಳಸಿದರೆ ಶ್ರಮಜೀವಿಗಳ ದೃಷ್ಟಿಯಲ್ಲಿ ಬಂಡವಾಳಿಗ ಹೆಚ್ಚುವರಿ ಮೌಲ್ಯವನ್ನು ಬಂಡವಾಳವಾಗಿ ಪರಿವರ್ತಿಸುವ ಯಂತ್ರದಂತೆ ಕಾಣುತ್ತಾನೆ, (ಬಂಡವಾಳ ಸಂಪುಟ |-600)

ಬಂಡವಾಳಶಾಹಿ ಸಮಾಜ ಒಂದು ಘಟ್ಟದ ತನಕ ಪ್ರಗತಿಪರ ಸಮಾಜವೇ ಆಗಿತ್ತು, ಅದರ ಹಿಂದಿನ ಸಾಮಂತಶಾಹಿ ಸಮಾಜವನ್ನು ಕೊನೆಗಾಣಿಸಿ ಅದು ಉತ್ಪಾದನಾ ಶಕ್ತಿಯನ್ನು ಬೆಳೆಸಿತು. ಉತ್ಪಾದನಾ ಶಕ್ತಿಗಳ ಬೆಳವಣಿಗೆ ಇಲ್ಲದೇ ಮುಂದೆ ಸಮಾಜವಾದ ಬರುವ ಸಾಧ್ಯತೆ ಇರಲಿಲ್ಲ. ಸಮಾಜವಾದಕ್ಕೆ ಹೋಲಿಸಿದಾಗ ಇದು ಎಷ್ಟು ದುಷ್ಟ ಸಮಾಜವೆಂದು ಕಂಡರೂ ಪುರಾತನ ಅನಾಗರಿಕ ಸಮಾಜ, ಊಳಿಗಮಾನ್ಯ ಪದ್ಧತಿ ಮುಂತಾದವುಗಳಿಗಿಂತ ಉತ್ತಮವಾದದ್ದು. ಇದೂ ಅಲ್ಲದೇ ಸಮಾಜವಾದಕ್ಕೆ ಆವಶ್ಯಕವಾದ ಉತ್ಪಾದನೆಯ ಸಮಾಜೀಕರಣ ಆರಂಭವಾಗುವುದೇ ಇಲ್ಲಿ. ಕೈಗಾರಿಕೆಯ ಸಮಾಜದಿಂದಲ್ಲದೇ ಇದನ್ನು ಬೇರೆ ಯಾವುದರಿಂದಲೂ ಉಂಟುಮಾಡಲು ಸಾಧ್ಯವಿರಲಿಲ್ಲ, ಅದು ಬೆಳೆದಂತೆ ಅದರ ದುಷ್ಪರಿಣಾಮಗಳು ಹೆಚ್ಚುತ್ತ ಹೋಗಿ ಶ್ರಮಜೀವಿಗಳ ಶೋಷಣೆಯನ್ನು ಉಲ್ಬಣಗೊಳಿಸಿ ವ್ಯಕ್ತಿಯ ಮಾನವಿಯತೆಯನ್ನು ಮೊಟಕು ಮಾಡಿತು. ಬಂಡವಾಳದ ರಚನೆಯಲ್ಲಿ ಮಾಕ್ರ್ಸ್ ವಸ್ತುಸ್ಥಿತಿಯನ್ನು ಮರೆಮಾಚಲು ವಿವಾದಾತ್ಮಕವಾಗಿ ಬರೆಯಲಿಲ್ಲ. ಇದಕ್ಕೆ ವಿರುದ್ಧವಾಗಿ ವಸ್ತುಸ್ಥಿತಿಯಲ್ಲಿ ಅಡಗಿರುವ ವೈರುಧ್ಯಗಳನ್ನು ಸ್ಪಷ್ಟವಾಗಿ ತಿಳಿಸಿದಾಗ ಇದು ವಿವಾದಾತ್ಮಕ ರೂಪ ತಾಳಿತು. 'ಬಂಡವಾ¼ವನ್ನು ಮಾಕ್ರ್ಸ್ ಬಂಡವಾಳ ಪದ್ಧತಿಯನ್ನು ಸ್ಥಾನಪಲ್ಲಟಗೊಳಿಸಿ ಸಮಾಜವಾದವನ್ನು ತರಲು ಉತ್ಸುಕರಾಗಿರುವ ಶ್ರಮಜೀವಿ ವರ್ಗದ ಪ್ರತಿನಿಧಿಯಾಗಿ ಬರೆಯುತ್ತಾನೆ.

ಸಮಾಜವಾದ ಮಾಕ್ರ್ಸ್‍ನ ಕಾಲದ ತನಕ ಕೇವಲ ಕಾಲ್ಪನಿಕವಾಗಿತ್ತು. ಬಂಡವಾಳದಲ್ಲಿ ಇವನು ಅದನ್ನು ವೈಜ್ಞಾನಿಕ ತಳಹದಿಯ ಮೇಲೆ ನಿಲ್ಲಿಸುತ್ತಾನೆ. ಹೀಗೆ ಮಾಡಲು ಇತಿಹಾಸದ ಹೊಸ ಪರಿಕಲ್ಪನೆಯ ಅಗತ್ಯವಾಯಿತು. ಅಂದರೆ ಅವೈಚಾರಿಕತೆ ಮತ್ತು ಅವ್ಯವಸ್ಥೆಗಳು ವೈಜ್ಞಾನಿಕ ತತ್ವಕ್ಕೆ ಜಾಗಬಿಟ್ಟು ಕೊಡಬೇಕಾಯಿತು. ಇತಿಹಾಸವೆಂಬುದು ವೀರರ ಮತ್ತು ಆಕಸ್ಮಿಕ ಘಟನೆಗಳ ಗಾಥಾ ಅಲ್ಲ. ಅದರ ಬೆಳವಣಿಗೆಯ ನಿಯಮಗಳನ್ನು ಹೊರಗೆಡಹುವ ತನಕ ವ್ಯಕ್ತಿ ಅಸಹಾಯಕನಾಗಿದ್ದ ಮತ್ತು ಪರಿಸ್ಥಿತಿಯ ಹಿಡಿತದಲ್ಲಿ ಸಿಕ್ಕಿಕೊಂಡಿದ್ದ, ಈ ನಿಯಮಗಳು ಪ್ರಕೃತಿಯ ಬೆಳವಣಿಗೆಯ ನಿಯಮಗಳಂತೆ ಜನತೆಯ ಚಟುವಟಿಕೆಗಳು ಮತ್ತು ಉದ್ದೇಶಗಳಿಗೆ ಹೊರತಾಗಿ ನಡೆಸುವುದಿಲ್ಲ. ಇವು ಜನರ ತಿಳುವಳಿಕೆ ದೃಢ ಸಂಕಲ್ಪ, ಜನ ಸಮೂಹಗಳಿಗನುಗುಣವಾಗಿ ಆ ಪರಿಸ್ಥಿತಿಗಳಿಂದ ಉಂಟಾಗಬಹುದಾದ ಕಷ್ಟಕಾರ್ಪಣ್ಯಗಳನ್ನು ಅರಿತುಕೊಂಡು ತಮ್ಮ ಇತಿಹಾಸವನ್ನು ತಾವೇ ನಿರ್ಮಿಸಿಕೊಳ್ಳುತ್ತಾರೆ.

ಹೀಗೆ ಮಾಕ್ರ್ಸ್ ಬಂಡವಾಳ ಸಮಾಜದ ಆರ್ಥಿಕ ಪದ್ಧತಿಯನ್ನು ಇತಿಹಾಸದ ಬೆಳವಣಿಗೆ ದೃಷ್ಟಿಯಿಂದ ಪರಿಶೀಲಿಸಿದ. ಸಾಮಾಜಿಕ ಉತ್ಪಾದನೆಯನ್ನು ಬೂಷ್ರ್ವಾ ಉತ್ಪಾದನೆಯ ಸಂಬಂಧಗಳು ವಿರೋಧಾಭಾಸಗಳಿಂದ ಕೂಡಿದ ಕಟ್ಟ ಕಡೆಯ ರೂಪವೆಂದು ಅದರ ಗರ್ಭದಲ್ಲೆ ಈ ವಿರೋಧಾಭಾಸಗಳನ್ನು ಬಗೆಹರಿಸುವ ಶಕ್ತಿ ಅಡಗಿದೆ ಎಂದು ನಿರೂಪಿಸುತ್ತಾನೆ. ಆದ್ದರಿಂದ ಈ ಸಾಮಾಜಿಕ ರಚನೆ ಮಾನವ ಪೂರ್ವೇತಿಹಾಸದ ಕಡೆಯ ಅಧ್ಯಾಯವೆಂದು ಸಾರಿದ.

ಶ್ರಮಜೀವಿವರ್ಗ ಬಂಡವಾಳ ಪದ್ಧತಿಯ ದುಷ್ಪರಿಣಾಮಗಳನ್ನು ಬಗೆಹರಿಸಲು ಮಾಕ್ರ್ಸನ `ದಾಸ್ ಕ್ಯಾಪಿಟಲ್ ಒಂದು ಪ್ರಭಾವಯುತ ಅಸ್ತ್ರವಾಗಿ ಪರಿಣಮಿಸಿದೆ. ಮಾಕ್ರ್ಸ್‍ನ ಇತರ ಗ್ರಂಥಗಳು; ಮಾಕ್ರ್ಸ್‍ನ ಇತರ ಕೃತಿಗಳು ಸಹ ದ್ವಂದ್ವಹೇತುಕ ಭೌತವಾದ, ಐತಿಹಾಸಿಕ ಭೌತವಾದ, ಅಂದಿನ ಪ್ರಚಲಿತ ಇತಿಹಾಸ, ಯುರೋಪ್ ಮತ್ತು ಏಷ್ಯಾದಲ್ಲಿ ಬಂಡವಾಳ ಸಮಾಜದ ಹಿಂದಿನ ಸಮಾಜ ವ್ಯವಸ್ಥೆಗಳು, ಯುರೋಪಿನಲ್ಲಿ ಸಾಮಂತಶಾಹಿ ಸಮಾಜ ಬಂಡವಾಳ ಸಮಾಜಕ್ಕೆ ಬದಲಾವಣೆ ಹೊಂದಿದ ರೀತಿ, ಬಂಡವಾಳಶಾಹಿ ಸಮಾಜ, ಅದರ ವಿರೋಧಾಭಾಸಗಳು ಮತ್ತು ಅದನ್ನು ಮುನ್ನಡೆಸುವ ಶಕ್ತಿ, ಸಮಾಜವಾದಿ ಸಮಾಜಕ್ಕೆ ಬದಲಾವಣೆ ಹೊಂದಲು ನಡೆಯಬೇಕಾದ ಕ್ರಾಂತಿಯ ಸಮಸ್ಯೆಗಳು ಮುಂತಾದ ವಿಷಯಗಳನ್ನು ಒಳಗೊಂಡಿವೆ.

ಮಾರ್ಕ್ಸ್‌ನ ಕೃತಿಗಳು

[ಬದಲಾಯಿಸಿ]

ಇಲ್ಲಿ ಎಂಗೆಲ್ಸ್‍ನ ಜೊತೆ ಅವನು ಬರೆದ ಕೃತಿಗಳು ಬೇರೆ ಇವೆ

  1. ಕ್ರಿಟೀಕ್ ಆಫ್ ಹೆಗಲ್ಸ್ ಡಾಕ್ಟ್ರೀನ್ ಆಫ್ ದಿ ಸ್ಟೇಟ್ (1843)
  2. ಆನ್ ದಿ ಜ್ಯೂಯಿಷ್ ಕ್ವೆಶ್ಚನ್ (1843)
  3. ಎ ಕಂಟ್ರಿಬ್ಯೂಷನ್ ಟು ದಿ ಕ್ರಿಟಿಕ್ ಆಫ್ ಹೆಗಲ್ಸ್ ಫಿಲಾಸಫಿ ಆಫ್ ರೈಟ್: ಇಂಟ್ರಡಕ್ಷನ್ (1843-44)
  4. ಎಕ್ಸ್‍ಪರ್ಟ್ಸ್ ಫ್ರಮ್ ಜೇಮ್ಸ್ ಮಿಲ್ಸ್ ಎಲಿಮೆಂಟ್ಸ್ ಆಫ್ ಪೊಲಿಟಿಕಲ್ ಎಕಾನಮಿ (1844)
  5. ಎಕಾನಮಿ ಎಂಡ್ ಫಿಲಾಸಫಿಕಲ್ ಮಾನ್ಯೂಸ್ಕ್ರಿಪ್ಟ್ಸ್ (1844)
  6. ಕ್ರೆಟಿಕಲ್ ನೋಟ್ಸ್ ಆನ್ ದಿ ಆರ್ಟಿಕಲ್ ದಿ ಕಿಂಗ್ ಆಫ್ ಫ್ರೆಶ್ ಎಂಡ್ ಸೋಶಿಯಲ್ ರಿಫಾರ್ಮ (1844)
  7. ದಿ ಸೀಸ್ ಆಫ್ ಪೊಯರ್‍ಬಾಹ್ (1845), ದಿ ಪಾವರ್ಟಿ ಆಫ್ ಫಿಲಾಸಫಿ(1846-47), ವೆಜ್ ಲೇಬರ್ ಎಂಡ್ ಕ್ಯಾಪಿಟಲ್ (1847), ಮ್ಯಾನಿಫೆಸ್ಟೋ ಆಫ್ ಕಮ್ಯೂನಿಸ್ಟ್ ಪಾರ್ಟಿ(ಎಂಗಲ್ಸ್ ಜೊತೆ 244-45)
  8. ದಿ ಕ್ಲಾಸ್ ಸ್ಟ್ರಗಲ್ ಇನ್ ಫ್ರಾನ್ಸ್ (1350), ಬ್ರೂಮೆನ್ಸ್ ಆಫ್ ಪಿಪಲ್ಸ್ ಪೇಪರ್ (1856)
  9. ಗ್ರೆಂಡಿಸ್ಸೆ (1857-58)
  10. ಎ ಕಂಟ್ರಿಬ್ಯೂಷನ್ ಟು ದಿ ಕ್ರಿಟಿಕ್ ಆಫ್ ಪೊಲಿಟಿಕಲ್ ಎಕಾನಮಿ (1859)
  11. ಆರ್ಟಿಕಲ್ಸ್ ಇನ್ ಡೈ ಪ್ರೆಸ್ ಆನ್ ದಿ ಸಿವಿಲ್ ವಾರಿನ್ ಯುನೈಟೈಡ್ ಸ್ಟೇಟ್ಸ್ (1861)
  12. ಥಿಯರಿಸ್ ಸಪ್ಲರ್ಸ ವ್ಯಾಲ್ಯೂ ಸಂಪುಟ 1,2,3(1861-63)
  13. ಪ್ರಾಕ್ಲ್ ಮೆಷನ್ ಆನ್ ಪೋಲೆಂಡ್ (1863)
  14. ಇನಾಗ್ಯೂರಲ್ ಅಡ್ರೆಸ್ ಆಫ್ ದಿ ರೂಲ್ಸ್ ಆಫ್ ದಿ ಇಂಟರ್ ನ್ಯಾಷನಲ್ ವರ್ಕಿಂಗ್ ಮೇನ್ಸ್ ಅಸೋಸಿಯೇಷನ್ (1864)
  15. ವೇಜಸ್ ಫ್ರಾಯ್ಸ್ ಎಂಡ್ ಪ್ರಾಫಿಟ್ (1865)
  16. ಕ್ಯಾಪಿಟಲ್ (ಸಂಪುಟ | 1867)
  17. ಇನ್‍ಸ್ಟ್ರಕ್ಷನ್ ಫಾರ್ ದಿ ಡೆಲಿಕೆಟ್ಸ್ ಟು ದಿ ಜಿನಿವಾ ಕಾಂಗ್ರೆಸ್ (1867)
  18. ರಿಪೋಟ ದಿ ಬ್ರಸೆಲ್ಸ್ ಕಾಂಗ್ರೆಸ್ (186)
  19. ರಿಪೋರ್ಟ್ ಟು ದಿ ಬಾಸಲ್ ಕಾಂಗ್ರೆಸ್ (1869)
  20. ದಿ ಜನರಲ್ ಕೌನ್ಸಿಲ್ ಟು ದಿ ಫೆಡ್ರಲ್ ಕೌನ್ಸಿಲ್ ಆಫ್ ಫ್ರೆಂಚ್ ಸ್ವಿಸರ್ ಲೆಂಡ್(ಎ ಸಕ್ರ್ಯೂಲರ್ ಲೆಟರ್ (1870)
  21. ಫಸ್ಟ್ ಎಡ್ರಸ್ ಆಫ್ ದಿ ಜನರಲ್ ಕೌನ್ಸಿಲ್ ಆನ್ ಫ್ರೆಂಕೋ- ಪ್ಯೂಷನ್ ವಾರ್ (1870)
  22. ಸೆಕೆಂಡ್ ಅಡ್ರೆಸ್ ಆಫ್ ದಿ ಜನರಲ್ ಕೌನ್ಸಿಲ್ ಆನ್ ದಿ ಫ್ರೆಂಕೋ ಫ್ರೆಷನ್ (1870)
  23. ದಿ ಸಿವಿಲ್ ವಾರ್ ಇನ್ ಫ್ರಾನ್ಸ್ (1871)
  24. ರಿಪೋರ್ಟ ದಿ ಹೇಗ್ ಕಾಂಗ್ರೆಸ್ (1872)
  25. ಪೋಲಿಟಿಕಲ್ ಇಂಡಿಫರೆಂಟಿಸಮ್ (1874)
  26. ಕಾನ್ ಪ್ರೆಕ್ಟಿಸ್ ಆಫ್ ಬಾಕುನಿನ್ಸ್ ಬುಕ್ ಸ್ಟಾಟಿಸಮ್ ಅಂಡ್ ಅಥಾರಿಟಿ (1874-75)
  27. ಎ ಕ್ರೆಟಿಕ್ ಆಫ್ ದಿ ಗೋಥಾ ಪ್ರೋಗ್ರಾಮ್ (1875) (ಕ್ಯಾಪಿಟಲ್ ಸಂಪುಟ || 1885) ಕ್ಯಾಪಿಟಲ್ (ಸಂಪುಟ ||| 1894).

ವಾರ್ಕ್ಸ್‌ವಾದದ ಪ್ರಭಾವ

[ಬದಲಾಯಿಸಿ]

ಇಂದಿನ ಸಮಾಜದ ಮೇಲೆ ಮಾಕ್ರ್ಸ್ ಸಿದ್ಧಾಂತ ಪ್ರಭಾವ; ಕಮ್ಯೂನಿಸ್ಟ್ ಪ್ರಣಾಳಿಕೆ ಪ್ರಕಟವಾದಾಗ (1847-48)ಮಾಕ್ರ್ಸ್ ಸಿದ್ಧಾಂತ ಹುಟ್ಟಿತೆನ್ನಬಹುದು ಅದು ಪ್ರಕಟವಾಗಿ ಇಂದಿಗೆ (2005) 153 ವರ್ಷಗಳಾಗುತ್ತ ಬರುತ್ತಿವೆ. ಅಂದಿನಿಂದ ಇಂದಿನ ತನಕ ಅದರ ಧ್ಯೇಯಗಳು ಅದರಿಂದ ಪ್ರೇರಿತವಾದ ಚಳುವಳಿಗಳು ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ. ತತ್ವ ಜನತೆಯ ಮನಸ್ಸನ್ನು ಸೆರೆ ಹಿಡಿದಾಗ ಅದು ವಸ್ತು ಶಕ್ತಿಯಾಗಿ ಪರಿಣಮಿಸುತ್ತದೆ ಎಂದು ಮಾಕ್ರ್ಸ್ ಹೇಳಿದ. ಈಗ ಮಾಕ್ರ್ಸ್‍ನ ತತ್ವಗಳು ಪ್ರಪಂಚದ ಜನಸ್ತೋಮದ ಬಲುಭಾಗದ ಮನಸ್ಸನ್ನು ತನ್ನ ಕಡೆಗೆ ಸೆಳೆದಿದೆ. ಸಮಾಜವನ್ನು ಬದಲಾವಣೆ ಮಾಡಲು ಅವನ ಸಿದ್ಧಾಂತ ಒಂದು ಪ್ರಬಲ ಅಸ್ತ್ರವಾಗಿದೆ.

ಮಾರ್ಕ್ಸ್‌ನ ಅನುಯಾಯಿಗಳಲ್ಲಿ ಬಹಳ ಪ್ರತಿಭಾವಂತನಾದವ, ವ್ಲದೀಮಿರ್ ಇಲ್ಯಿಚ್ ಲೆನಿನ್, ಈತ ಮಾಕ್ರ್ಸ್‍ನ ಸಿದ್ಧಾಂತವನ್ನು ಸಾಮ್ರಾಜ್ಯವಾದದ ಯುಗದಲ್ಲಿ ಮತ್ತೂ ಹೆಚ್ಚು ಎತ್ತರಕ್ಕೆ ವಿಕಾಸಗೊಳಿಸಿದ. ಆದ್ದರಿಂದಲೇ ಇಂದು ಮಾಕ್ರ್ಸ್ ಸಿದ್ಧಾಂತವನ್ನು ಮಾಕ್ರ್ಸ್-ಲೆನಿನ್ ಸಿದ್ಧಾಂತವೆಂದು ಕರೆಯುವುದಾಗಿದೆ.

ಬಂಡವಾಳಶಾಹಿ ದೇಶಗಳಲ್ಲಿ ಮಾರ್ಕ್ಸ್‌ ಲೆನಿನ್‍ವಾದ ಬೂಷ್ರ್ವಾಸಿಯ ವಿರುದ್ಧ ಮತ್ತು ಶ್ರಮಜೀವಿಗಳ ಶೋಷಣೆಯ ವಿರುದ್ಧ ಹೋರಾಟ ನಡೆಸಲು ಸಹಾಯಮಾಡುತ್ತಿದೆ. ಅಭಿವೃದ್ಧ ಹೊಂದುತ್ತಿರುವ ರಾಷ್ಟ್ರಗಳ ಜನತೆ ಇದನ್ನು ತಮ್ಮ ಬಡತನ ನಿರ್ಮೂಲಿಸಲು ಮತ್ತು ತಮ್ಮ ರಾಷ್ಟ್ರಗಳನ್ನು ಪ್ರಗತಿಪರ ದಾರಿಯಲ್ಲಿ ಒಯ್ಯಲು ಉಪಯೋಗಿಸುತ್ತಿದ್ದಾರೆ.

ಸಮಾಜಶಾಸ್ತ್ರದಲ್ಲಿ, ಮಾನವಿಕ ಶಾಸ್ತ್ರಗಳಲ್ಲಿ ರಾಜಕೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಮಾಕ್ರ್ಸ್ ವಾದ ಒಂದು ಅದ್ಭುತಶಕ್ತಿ. ಇಂದು ಸಮಾಜಶಾಸ್ತ್ರ, ಇತಿಹಾಸ, ಮಾನವಿಕ ಶಾಸ್ತ್ರ ಮುಂತಾದ ಶಾಸ್ತ್ರಗಳ ಮೂಲ ತತ್ವವನ್ನು ವಿವೇಚಿಸುವ ಪ್ರತಿಯೊಬ್ಬ ಶಾಸ್ತ್ರಜ್ಞನೂ ಇದರಿಂದ ಪ್ರಭಾವಿತನಾಗಿದ್ದಾನೆ. ಕಳೆದ ನೂರು ವರ್ಷಗಳಿಂದ ಸಮಾಜಶಾಸ್ತ್ರ ಒಂದಲ್ಲ ಒಂದು ರೀತಿಯಲ್ಲಿ ಮಾಕ್ರ್ಸ್ ಸಿದ್ಧಾಂತದ ಚರ್ಚೆಯೇ ಆಗಿದೆ.

ಹತ್ತೊಂಬತ್ತನೆಯ ಶತಮಾನದ ಮಾರ್ಕ್ಸ್‌ನ ಭಾವನೆಗಳು ಮತ್ತು ಧ್ಯೇಯಗಳು ಇಂದಿನ ತಾತ್ವಿಕರು ಎದುರಿಸಲಾರದಂಥ ತತ್ವವಾಗಿ ಪರಿಣಮಿಸಿದೆ. ಬಂಡವಾಳ ಸಮಾಜ ಹಳತಾಗಿದೆ. ಅದು ತನ್ನ ಅವಸಾನ ಕಾಲವನ್ನು ತಲುಪಿದೆ. ಅದನ್ನು ಸ್ಥಾನಪಲ್ಲಟಗೊಳಿಸಿ ಹೊಸ ಸಮಾಜವನ್ನು ರಚಿಸುವ ಕಾಲ ಬಂದಿದೆ, ಎಂಬ ಮಾಕ್ರ್ಸ್ ಮಾತು ಸರಿಯಲ್ಲವೆಂದು ತೋರಿಸುವುದಕ್ಕೆ ಬಂಡವಾಳ ಪದ್ಧತಿಯನ್ನು ನಂಬಿರುವ ಶಾಸ್ತ್ರಜ್ಞರಿಂದ ಈವರೆಗೂ ಸಾಧ್ಯವಾಗಿಲ್ಲ.

ಮಾರ್ಕ್ಸ್‌ವಾದ ಈಗ ಪ್ರಪಂಚದ ಮೂರನೆಯ ಒಂದು ಭಾಗದ ಜನರು ಒಪ್ಪಿರುವ ತತ್ವ. ಅದು ಸೋವಿಯತ್ ದೇಶ, ಪೂರ್ವ ಯುರೋಪಿನ ರಾಷ್ಟ್ರಗಳಾದ ಜರ್ಮನ್, ಹೆಮೊಕ್ರಾಟಿಕ್ ರಿಪಬ್ಲಿಕ್ ರುಮೋನಿಯ, ಆಲ್ಬೇನಿಯ, ಬಲ್ಗೇರಿಯ, ಚೆಕೊಸ್ಲೊವಾಕಿಯ, ಯೂಗೊಸ್ಲಾವಿಯ, ಏಷ್ಯದ ರಾಷ್ಟ್ರಗಳಾದ ಉತ್ತರ ಕೋರಿಯ, ಚೀನಾ ವಿಯಟ್‍ನಾಮ್ ಮತ್ತು ಕ್ಯೂಬದಲ್ಲಿ ಆಳುವ ವರ್ಗದ ಸಿದ್ಧಾಂತವಾಗಿದ್ದಿತು.

ಮಾರ್ಕ್ಸ್‌ ಸಮಾಜವಾದಿ ರಾಷ್ಟ್ರದ `ನೀಲಿ ನಕ್ಷೆಯನ್ನೇನೂ ತಯಾರಿಸಲಿಲ್ಲ. ಭವಿಷ್ಯತ್ತಿನಲ್ಲಿ ಏಳಬಹುದಾದ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನೂ ಕೊಡಲಿಲ್ಲ. ಹೀಗೆ ಮಾಡುವುದು ಆತನ ಸಿದ್ಧಾಂತಕ್ಕೆ ವಿರುದ್ಧವಾದುದು. ಹಿಂದೆ ಹೇಳಿದ ಪ್ರತಿಯೊಂದು ರಾಷ್ಟ್ರವೂ ಮಾಕ್ರ್ಸ್‍ನ ಸಿದ್ಧಾಂತವನ್ನು ಒಪ್ಪಿಕೊಂಡಿದ್ದರೂ ಒಂದೊಂದು ತನ್ನ ಸಮಸ್ಯೆಗಳನ್ನು ಬಗೆಹರಿಸುವ ರೀತಿಯಲ್ಲಿ ವ್ಯತ್ಯಾಸ ಉಂಟು. ಸಮಸ್ಯೆಗಳನ್ನು ಅವು ಬಗೆಹರಿಸುವ ರೀತಿಯಲ್ಲಿ ನ್ಯೂನತೆಗಳಿವೆ ಎಂದು ಮಾಕ್ರ್ಸ್‍ವಾದಿ ವಿರೋಧಿಗಳು ಈ ಸಣ್ಣ ಪುಟ್ಟ ವ್ಯತ್ಯಾಸಗಳನ್ನೇ ದೊಡ್ಡದು ಮಾಡಿ ಹೇಳುತ್ತಾರೆ. ಮಾಕ್ರ್ಸ್ ಸಿದ್ಧಾಂತದ ಪ್ರಕಾರ ಪ್ರತಿಯೊಂದು ಸಮಸ್ಯೆಯನ್ನು ವಸ್ತುಸ್ಥಿತಿಗೆ ಅನುಗುಣವಾಗಿ ನಿವಾರಿಸಬೇಕು. ವಿವಿಧ ರಾಷ್ಟ್ರಗಳ ವಸ್ತುಸ್ಥಿತಿಯಲ್ಲಿರುವ ವ್ಯತ್ಯಾಸಗಳೇ ಅವು ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ರೀತಿಯಲ್ಲಿ ಭಿನ್ನತೆಗಳು ಕಂಡುಬರಲು ಕಾರಣ.

ಇಲ್ಲಿ ಸಮಾಜವಾದ ಇದು ಆಚರಿಸಬಲ್ಲ ಆರ್ಥಿಕ ವ್ಯವಸ್ಥೆಯಾಗಿದೆ ಎನ್ನುವುದನ್ನು ನಾವು ಮುಖ್ಯವಾಗಿ ಗಮನಿಸಬೇಕು. ಸೋವಿಯತ್‍ನಲ್ಲಿ ಸಮಾಜವಾದವನ್ನು ಸ್ಥಾಪಿಸಿ ಆರು ದಶಕಗಳಿಗೂ ಹೆಚ್ಚು ಕಾಲ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಆಧುನಿಕ ಕಾಲದ ಹಲವು ಅತ್ಯದ್ಭುತಸಾಧನೆಗಳನ್ನು ಈ ರಾಷ್ಟ್ರಗಳು ಮಾಡಿವೆ. ಈ ಸಿದ್ಧಾಂತವನ್ನು ಆಚರಿಸುತ್ತಿರುವ ರಾಷ್ಟ್ರಗಳ ಕೋಟ್ಯಂತರ ಜನಗಳು ಅದಕ್ಕೆ ಬೆಂಬಲ ಕೊಡುತ್ತಿದ್ದಾರೆ. ಬಂಡವಾಳ ರಾಷ್ಟ್ರಗಳಲ್ಲಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಾಕ್ರ್ಸ್‍ವಾದವನ್ನು ಒಪ್ಪಿರುವವರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿವೆ. ಫ್ರಾನ್ಸ್ ಮತ್ತು ಇಟಲಿಗಳಲ್ಲಿ ಕಮ್ಯೂನಿಸ್ಟ್ ಪಾರ್ಟಿಯು ಬಲು ದೊಡ್ಡ ರಾಜಕೀಯ ಪಕ್ಷ.

ಮಾಕ್ರ್ಸ್‍ವಾದ ಮಾನವ ಸಂಪ್ರದಾಯದಲ್ಲಿಯ ಎಲ್ಲಾ ಪ್ರಗತಿಪರ ಭಾವನೆಗಳು ಮುಂದುವರಿಕೆ. ಹಿಂದೆಯೇ ಹೇಳಿದಂತೆ ಇದರ ಮೂಲಗಳು ಹೆಗಲ್‍ನಲ್ಲಿ ಕೊನೆಗೊಂಡ ತತ್ತ್ವಶಾಸ್ತ್ರದಲ್ಲಿಯೂ ಫ್ರಾನ್ಸಿನ ಮಹಾಕ್ರಾಂತಿಯಲ್ಲಿ ಕೊನೆಗೊಂಡ ಎನ್‍ಲೈಟನ್‍ಮೆಂಟನ (ಅಸ್ತಿತ್ವದಲ್ಲಿರುವ ಸಮಾಜದ ಕೊರತೆಗಳನ್ನು ಒಳ್ಳೆಯದು, ನ್ಯಾಯವಾದದ್ದು, ವೈಜ್ಞಾನಿಕ ಜ್ಞಾನ ಮುಂತಾದ ಭಾವನೆಗಳ ಮೂಲಕ ತೊಡೆದುಹಾಕಲು ಪ್ರಯತ್ನಿಸಿದ ಸಾಮಾಜಿಕ ರಾಜಕೀಯ ಗುಂಪು) ಪ್ರಜಾಸತ್ತಾತ್ಮಕ ಭಾವನೆಗಳಲ್ಲಿಯೂ ಇಂಗ್ಲೆಂಡಿನ ರಾಜಕೀಯ ಅರ್ಥಶಾಸ್ತ್ರದಲ್ಲಿಯೂ ಇವೆ. ಮಾಕ್ರ್ಸ್ ಈ ಮೂರನ್ನು ವೈಜ್ಞಾನಿಕವಾಗಿ ಮುಂದುವರಿಸಿ ತನ್ನ ಸಿದ್ಧಾಂತವನ್ನು ಸ್ಥಾಪಿಸಿದುದು ಬಹಳ ಮುಖ್ಯವಾದುದು. ಇದನ್ನು ಮುಂದುವರೆಸಿದ ರೀತಿಯನ್ನು ತಿಳಿದುಕೊಳ್ಳದೆ ಅವನನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಲೀ ಇಂದಿನ ಸಮಾಜ ಶಾಸ್ತ್ರದ ಬೆಳವಣಿಗೆಯ ದಿಕ್ಕನ್ನಾಗಲೀ ಅರಿಯಲು ಸಾಧ್ಯವಿಲ್ಲ. ಸಿ. ರೈಟ್ ಮಿಲ್ಸ್ ಹೇಳಿರುವಂತೆ ಮಾಕ್ರ್ಸ್‍ವಾದವನ್ನು ಅಲ್ಲಗಳೆಯುವವರು ತಮ್ಮ ಶಾಸ್ತ್ರಗಳ ಅಭಿಜಾತ ತತ್ವಗಳನ್ನು ಅಲ್ಲಗಳೆಯುತ್ತಾರೆ. ಇದು ಮಾಕ್ರ್ಸವಾದವನ್ನು ಗಣನೆಗೆ ತೆಗೆದುಕೊಳ್ಳದೆ ಅಲ್ಲಗಳೆದರೆ ಅದು ಕೇವಲ ಅಂಧಾಭಿಮಾನ.

ಒಂದು ಶತಮಾನಕ್ಕೂ ಹೆಚ್ಚು ಕಾಲ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವವರಿಗೆ ಮಾಕ್ರ್ಸ್‍ವಾದ ಒಂದು ಶಕ್ತಿಯುತವಾದ ಅಸ್ತ್ರವಾಗಿದೆ. ಇಂದಿನ ಪ್ರಪಂಚದಲ್ಲಿ ಅರ್ಥವತ್ತಾದ ಬದಲಾವಣೆಯನ್ನು ಉಂಟುಮಾಡಿದ ಚಳುವಳಿಯ ನಾಯಕರು ಮಾಕ್ರ್ಸ್‍ವಾದದಿಂದ ಪ್ರಭಾವಯುತರಾದವರು. ಇದಕ್ಕೆ ವಿರುದ್ಧವಾಗಿ ಎಲ್ಲೆಲ್ಲಿ ರಾಜಕೀಯ ಚಳುವಳಿ ಮುಗ್ಗರಿಸಿದೆಯೋ ಅಲ್ಲೆಲ್ಲ ಸರಿಯಾದ ತತ್ವದ ಅಭಾವವೇ ಅದಕ್ಕೆ ಕಾರಣ. ಹೋವಾರ್ಡ್ ಸೆಲ್ಸಾಮ್ ಹೇಳಿರುವಂತೆ ಸಾಕ್ರೆಟಿಸ್ ನಿನ್ನನ್ನು ನೀನು ತಿಳಿ, ಎಂದು ಹೇಳಿ ಪ್ರಸಿದ್ಧನಾದ. ಮಾಕ್ರ್ಸ್ `ನಿನ್ನ ಸಮಾಜವನ್ನು ನೀನು ತಿಳಿ ಎಂದು ಹೇಳಿ ಪ್ರಸಿದ್ಧನಾಗಿದ್ದಾನೆ.

ಉಲ್ಲೇಖ

[ಬದಲಾಯಿಸಿ]
  1. Wolff and Resnick, Richard and Stephen (August 1987). Economics: Marxian versus Neoclassical. The Johns Hopkins University Press. p. 130. ISBN 978-0-8018-3480-6. "The German Marxists extended the theory to groups and issues Marx had barely touched. Marxian analyses of the legal system, of the social role of women, of foreign trade, of international rivalries among capitalist nations, and the role of parliamentary democracy in the transition to socialism drew animated debates ... Marxian theory (singular) gave way to Marxian theories (plural)."
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: